ಜ್ಞಾನಶಾಖೆಯಾಗಿ ‘ಮದನ ತಿಲಕಂ’

ಕನ್ನಡದ ಚಂದ್ರರಾಜನ ‘ಮದನ ತಿಲಕ’ ಕೃತಿ ಸಂಸ್ಕøತ ಏಕಮೂಲ ಆಧರಿಸಿ ಹೊರಬಂದುದಲ್ಲ; ಶಾಸ್ತ್ರಕೃತಿಯಾದರೂ ನೀರಸವಾಗಿಲ್ಲ, ಕಠಿಣವಾಗಿಲ್ಲ, ಸರಸ ಪ್ರಸನ್ನವಾಗಿದೆ.

ಡಾ.ಗುರುಪಾದ ಮರಿಗುದ್ದಿ

ಪಂಪ ಮಹಾಕವಿಯ ‘ವಿಕ್ರಮಾರ್ಜುನ ವಿಜಯಂ’ ಕಾವ್ಯದಲ್ಲಿ ತರುಣರಾದ ಕೌರವಪಾಂಡವರು ಗುರುಗಳ ನಿರ್ದೇಶನದಲ್ಲಿ ಹಲವಾರು ವಿದ್ಯೆಗಳನ್ನು ಕಲಿಯುವ ಚಿತ್ರಣ ಬಂದಿದೆ. ಅವುಗಳಲ್ಲಿ ಪಂಚಾಂಗ ವ್ಯಾಕರಣಾದಿಗಳು, ನಾಲ್ಕು ವೇದಗಳು ಇತ್ಯಾದಿ ಹೇಳುತ್ತ ರತಿಶಾಸ್ತ್ರ ಕಲಿತುದನ್ನೂ ಹೇಳಲಾಗಿದೆ. ನೇಮಿಚಂದ್ರನ ‘ಲೀಲಾವತಿ ಪ್ರಬಂಧ’ದಲ್ಲಿ ಯುವರಾಜನಾದ ರೂಪಕಂದರ್ಪನು ಹಲವು ವಿದ್ಯೆಗಳನ್ನು ಕಲಿತುದಾಗಿ ವಿವರಿಸುವಾಗ ಮದನಶಾಸ್ತ್ರ ಸೂಚಕ ಕೆಲವು ವಿದ್ಯೆಗಳನ್ನು ಸೂಚಿಸಲಾಗಿದೆ. ಕವಿತಾ ಕೋವಿದನಾಗಿದ್ದಂತೆ ಅವನು ವಾತ್ಸ್ಯಾಯನಧವಳನಾಗಿದ್ದನಂತೆ.

ವಡ್ಡಾರಾಧನೆ, ಹರಿವಂಶಾಭ್ಯುದಯ, ಧರ್ಮನಾಥ ಪುರಾಣ, ಅನಂತನಾಥ ಪುರಾಣ, ಕುಸುಮಾವಳೀ ಕಾವ್ಯಗಳಲ್ಲಿ ರಾಜರಾಗತಕ್ಕವರು ಕಲಿಯಬೇಕಾದ ವಿದ್ಯೆಗಳಲ್ಲಿ, ಶಾಸ್ತ್ರಗಳಲ್ಲಿ ಮದನಶಾಸ್ತ್ರವೂ ಒಂದಾಗಿದೆ. ಪ್ರಾಚೀನ ಕಾಲದ ಪ್ರಸಿದ್ಧ ಅರವತ್ನಾಲ್ಕು ವಿದ್ಯೆಗಳಲ್ಲಿ ಅದು ಸೇರಿ ಹೋಗಿತ್ತು. ಬದುಕಿನ ನಾಲ್ಕು ಪುರುಷಾರ್ಥಗಳಲ್ಲಿ ‘ಕಾಮ’ ಮಹತ್ವದ್ದೆನಿಸಿತ್ತಾಗಿ, ಅದನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಹಿಂದೆ ಆಗಮಿಕ ಇಲ್ಲವೆ ಅಲೌಕಿಕ ವಿದ್ಯೆಗಳು, ಲೌಕಿಕ ವಿದ್ಯೆಗಳು ಎಂದು ಗ್ರಹಿಸುವಾಗ, ಕಾಮಶಾಸ್ತ್ರವನ್ನು ಲೌಕಿಕದಲ್ಲಿ ಗ್ರಹಿಸುತ್ತಿದ್ದರು. ಗಜಶಾಸ್ತ್ರ, ಹಯಶಾಸ್ತ್ರ, ಯೋಗಶಾಸ್ತ್ರ, ಸೂಪಶಾಸ್ತ್ರ, ಶಿಲ್ಪಶಾಸ್ತ್ರ, ಇತ್ಯಾದಿಗಳೊಂದಿಗೆ ಅದೊಂದು ಶಾಸ್ತ್ರವಾಗಿ ಮನ್ನಣೆ ಪಡೆದಿತ್ತು. ಹಿಂದಿನ ಕಾಲದಲ್ಲಿ ಗದ್ಯಕೃತಿಗಳು, ಪದ್ಯಕೃತಿಗಳು, ಮಿಶ್ರ ಕೃತಿಗಳು ‘ಕಾವ್ಯ’ ಎಂದು ಭಾವಿತವಾಗುತ್ತಿದ್ದಂತೆ, ಸರಸ ಸಾಹಿತ್ಯದಂತೆ ಪುರಾಣಗಳಂತೆ, ಶಾಸ್ತ್ರ ಕೃತಿಗಳೂ ಕಾವ್ಯವೆಂದೇ ಕರೆಯಲ್ಪಡುತ್ತಿದ್ದವು. ಅವುಗಳನ್ನು ಬರೆದವರನ್ನು ಕವಿಗಳೆಂದು ಕರೆಯಲಾಗುತ್ತಿತ್ತು.

ಹಳಗನ್ನಡ ಕಾವ್ಯಕೃತಿಗಳಲ್ಲಿ ಚಂದ್ರರಾಜ ಬರೆದ ‘ಮದನತಿಲಕಂ’ ಹಲವು ಅಂಶಗಳಲ್ಲಿ ಇಂದಿಗೂ ತನ್ನ ಮಹತ್ವ ಉಳಿಸಿಕೊಂಡಿರುವ ಕೃತಿಯಾಗಿದೆ. 1953ರಲ್ಲಿ ವಿದ್ವಾಂಸರಾದ ಆರ್.ಎಸ್. ಪಂಚಮುಖಿಯವರು ಸಂಪಾದಿಸಿ ಪ್ರಕಟಿಸಿರುವ ಮೊದಲ ಶುದ್ಧಪ್ರತಿಯನ್ನು ಅನುಲಕ್ಷಿಸಿ ಅದರ ಬಗೆಗೆ ಇಲ್ಲಿ ತಿಳಿಯಲು ಪ್ರಯತ್ನಿಸಲಾಗಿದೆ. ಚಂದ್ರರಾಜ ಕವಿ ಹನ್ನೊಂದನೆಯ ಶತಮಾನದಲ್ಲಿದ್ದು ಈ ಕೃತಿಯನ್ನು ರಚಿಸಿರುವುದಾಗಿ ಆರ್.ನರಸಿಂಹಾಚಾರ್, ರಂ.ಶ್ರೀ.ಮುಗಳಿ, ಆರ್.ಎಸ್.ಪಂಚಮುಖಿಯವರು ಒಂದೇ ತೆರನಲ್ಲಿ ಅಭಿಮತಪಡುವರು. ಕವಿ ತಾನು ಚಾಲುಕ್ಯ ಚಕ್ರವರ್ತಿ ಜಯಸಿಂಹನಲ್ಲಿ ಮಹಾಸಾಮಂತನಾಗಿದ್ದು ರೇಚನೃಪನ ಆಶ್ರಯದಲ್ಲಿದ್ದುದಾಗಿ ತಿಳಿಸಿರುವುದರಿಂದ ಅವರ ಅಭಿಮತ ಸಾಧಾರವಾಗಿದೆ. ಈ ಕೃತಿಯು ಸ್ವರೂಪದಲ್ಲಿ ಚಂಪೂ ಕಾವ್ಯದಂತಿದೆ. ಆದರೆ ರಂ.ಶ್ರೀ.ಮುಗಳಿ ಅವರು ಅದನ್ನು ಸಮ್ಮತಿಸುವುದಿಲ್ಲ. ಅದರಲ್ಲಿ ಕಂದವೃತ್ತಗಳಲ್ಲದೆ ಇತರ ಛಂದೋರೂಪಗಳಿವೆ ಎಂದೂ, ಅದು ಚಂಪೂ ಲಕ್ಷಣ ಹೊಂದಿಲ್ಲವೆಂದೂ ಹೇಳಿದ್ದಾರೆ. ಆದರೆ, ಸ್ಥೂಲವಾಗಿ ಅದು ಚಂಪೂ ಕೃತಿಯೇ ಆಗಿದ್ದು, ‘ಪಲವು ಛಂದದೊಳ್’ ಹೊರಬಂದಿದೆ.

ಮೂಲದಲ್ಲಿ ಕನ್ನಡ ಮದನತಿಲಕವು ಹದಿನೆಂಟು ಅಧಿಕರಣ ಮತ್ತು ಐನೂರು ಗದ್ಯ ಪದ್ಯಗಳಿಂದ ಇರುವುದಾಗಿ ತಿಳಿದರೂ, ಈಗ ಹನ್ನೊಂದು ಅಧಿಕಾರಗಳ 397 ಗದ್ಯ ಪದ್ಯಗಳ ಕೃತಿಯಾಗಿ ಉಪಲಬ್ಧವಾಗಿದೆ. ‘ಕೂಮ್ರ್ಮೆಯಿಲ್ಲದ ಪೆಂಡಿರಿಂ ಜಗದ ಕಮ್ರ್ಮಂಗಳುಂ ಕೆಟ್ಟಪ್ಪವು, ಧರ್ಮಕರ್ಮಗಳು ಸತಿಯರಿಂದಂ’ ಅದಕ್ಕಾಗಿ ಜಗತ್ತಿಗೆ ಸ್ಮರತತ್ವವನ್ನು ತಿಳಿಸು ಎಂದು ಸತಿಯು ವಿನಂತಿಸಲು ರೇಚನೃಪ ಈ ಕಾವ್ಯವನ್ನು ಹೇಳಿದನೆಂಬ ತಂತ್ರವಾಗಿ ಕೃತಿ ಬರುತ್ತದೆ. ಕವಿ, ಸಹೃದಯರ ಪ್ರತಿನಿಧಿ ಎಂಬಂತೆ, ಕಥನ ಹೇಳುವ ತಂತ್ರಗಾರಿಕೆ ಎಂಬಂತೆ ಇಲ್ಲಿ ಗಂಡ ಹೆಂಡಿರ ಸಂವಾದದಲ್ಲಿ ಆರಂಭವಾಗಿದೆ. ಇದು ಮುಂದೆ ಕನಕದಾಸ, ಮುದ್ದಣ್ಣರಲ್ಲಿ ಬಲವತ್ತರವಾಗುವುದು. ಚಂದ್ರರಾಜ ಕವಿ ಹೇಳುವ, ಕೇಳುವ ಈ ವಿಧಾನವನ್ನು ಜನಪದ ಕಥಾನಕಗಳಿಂದ ಇಲ್ಲವೆ ಪುರಾಣಗಳಿಂದ ಎತ್ತಿ ಪ್ರಯೋಗಿಸಿರಬಹುದು.

ಕಾಮ ಎಂಬುವುದು ಒಂದು ತತ್ವ. ಅದು ಬದುಕಿಗೆ ಅಗತ್ಯ ಎಂದು ಭಾವಿಸುವ ಕವಿ ಅದರ ಮಹತ್ವವನ್ನು ಆರಂಭದಲ್ಲಿ ಬಿಂಬಿಸುತ್ತಾನೆ. ಮನುಷ್ಯ ಬಾಲ್ಯದಲ್ಲಿ ವಿದ್ಯೆ ಸಂಪತ್ತು ಮಿತ್ರರನ್ನು ಗಳಿಸಬೇಕು, ಯೌವನದಲ್ಲಿ ಕಾಮ ಭೋಗಗಳನ್ನು ಅನುಭವಿಸಬೇಕು, ವಾರ್ಧಕ್ಯದಲ್ಲಿ ಧರ್ಮ ಮೋಕ್ಷಗಳನ್ನು ಹೊಂದಬೇಕು. ‘ಮನುಷ್ಯರ್ಪರಿಮಿತಾಮುಗಳಪ್ಪುದರಿಂದ ಧರ್ಮಾರ್ಥಕಾಮಂಗಳನೊಡನೊಡನೆ ದೇಶಕಾಲ ಬಲೋಪಾದುದಿಂ ಸೇವಿಸುಗೆ’ ಎಂಬ ಮಾತುಗಳನ್ನು ಪರಿಶೀಲಿಸಿದರೆ, ಅಲ್ಲಿರುವ ಅನುಭವ, ಜ್ಞಾನ, ಲೋಕನೀತಿಗಳು ಎದ್ದು ಕಾಣುತ್ತವೆ. ಮನುಷ್ಯನಿಗೆ ಆಯುಷ್ಯ ಮರ್ಮಾದಿತವಾಗಿದೆ(ಅಲ್ಪವಾಗಿದೆ): ಕಾಲ, ಸಂದರ್ಭಗಳನ್ನು ಸರಿಯಾಗಿ ಬಳಸಬೇಕು ಎಂಬುದು ಎಚ್ಚರಿಕೆಯ ಮಾರ್ಗದರ್ಶನವಾಗಿದೆ. ಧರ್ಮವನ್ನು ಧರ್ಮವಿದರು, ಅರ್ಥವನ್ನು ನೀತಿ ವ್ಯವಹಾರಗಳು ನಿರ್ದೇಶಿಸುವಂತೆ ಮಾಡಬೇಕು. ಪಂಚೇಂದ್ರಿಯಗಳ ಇಚ್ಛೆಯರಿತು ಕಾಮವನ್ನು ನಿರ್ವಹಿಸಬೇಕು. ಇಲ್ಲಿ ‘ಕಾಮ’ ಎಂದರೆ ಸ್ತ್ರೀಪುರುಷ ಸಂಬಂಧ ಮಾತ್ರವಲ್ಲದೆ, ಹಿರಿದಾದ ಅರ್ಥದಲ್ಲಿ ಬಯಕೆ, ಆಸೆ ಎಂದು ಭಾವಿಸಬೇಕು. ಪಂಚೇಂದ್ರಿಯ ಪದಬಳಕೆ ಅದನ್ನು ಸೂಚಿಸುವುದು.

ವಿಷಯ, ವಿಚಾರ ಬಿಂಬಿಸುವಲ್ಲಿ ವಿವೇಕÀ ಮತ್ತು ತಾರ್ಕಿಕತೆ ಇರುವುದು ಗಮನಾರ್ಹ. ಸ್ಪರ್ಶವಿಶೇಷವಾದ ಕಾಮವನ್ನು ಶಾಸ್ತ್ರಗಳಿಂದ ಹೆಚ್ಚಾಗಿ ‘ನಾಗರಿಕ ಜನದೊಳಂ ಕಲ್ತು ನೆಗಳ್ವುದು’ ಎಂದಿರುವುದು ಅದಕ್ಕೆ ನಿದರ್ಶನದಂತಿದೆ. ಎಂದರೆ ಸುರತಾದಿಗಳಿಗೆ ಪೂರ್ವಪರಂಪರೆಯ ಜ್ಞಾನದೊಂದಿಗೆ, ಹಿರಿಯರ ತಲೆಮಾರಿನ ಅನುಭವವೂ ಒದಗಬೇಕು ಎಂಬ ಆಶಯವಿದೆ. ಆದರೆ ಧರ್ಮಾರ್ಥಗಳಿಗೆ ಶಾಸ್ತ್ರಜ್ಞಾನ ಹೆಚ್ಚು ಆಧಾರವಾದಂತೆ, ಕಾಮಕ್ಕೆ ಪ್ರಯೋಜನವಾಗಲಾರದು ಎಂದು ಕವಿಯ ಅಭಿಪ್ರಾಯ. ವಿವಿಧ ಅಭಿಮತ, ದರ್ಶನಗಳ ಸೂಚನೆಗಳನ್ನು ಗಮನಕ್ಕೆ ತರುತ್ತಾ ಶಾಸ್ತ್ರಾದಿ ಧರ್ಮಮಾರ್ಗ, ಭೌತವಾದಿಗಳ ಮಾರ್ಗ, ಇತರರ ಮಾರ್ಗಗಳನ್ನು ತಿಳಿಸಲಾಗಿದೆ. ಕಾಮತತ್ವ ಮುಖ್ಯವಾಗಿದೆ ನಿಜ, ಆದರೆ ಅದೇ ಪ್ರಧಾನವಾಗಿ ಮೆರೆಯಕೂಡದು ಎಂಬ ಎಚ್ಚರಿಕೆಯನ್ನು ಕವಿ ನೀಡಲು ಮರೆತಿಲ್ಲ. ಧರ್ಮಾರ್ಥಗಳಿಗೆ ಅದು ವಿರೋಧವಾದರೆ ದೊಡ್ಡ ಪ್ರಮಾದವಾಗುವುದು. ಅಂತಹ ಧರ್ಮ, ನೀತಿಗಳಿಗೆ ವಿರೋಧವಾದ ‘ಕಾಮಂ ಸೇರ್ವಮಲ್ತು, ಆದೊಡಂ ದೋಷವಿರಹಿತ ಕಾಮಂ ಸೇವಿಸುಗೆ’ ಎಂದು ಸ್ಪಷ್ಟಪಡಿಸಲಾಗಿದೆ.

ಕವಿ ಧರ್ಮ, ಅರ್ಥ, ಕಾಮಗಳಲ್ಲಿ ಸಮಾನ ಗೌರವ, ಆದ್ಯತೆ ನೀಡಿದ್ದಾನೆ. ಋಷಿ ಮುನಿಗಳು ಧರ್ಮ, ಸಂಪದ(ದ್ರವ್ಯ)ಗಳಿಗೆ ಕಾಮವು ಕಾರಣವಾದುದರಿಂದ ಅದಕ್ಕೆ ಪ್ರಾಧಾನ್ಯ ನೀಡಿರುವುದನ್ನು ತಿಳಿಸಿದ್ದಾನೆ. ಶ್ಲೋಕವೊಂದನ್ನು ಉಲ್ಲೇಖಿಸಿ, ಕಾಮಾಂಧರು ಧರ್ಮ ಅರ್ಥ ನಿರ್ಲಕ್ಷಿಸಿ ಕಾಮವೊಂದು ಸುಖಸಾಧನ, ಅದು ಮಾತ್ರ ಇರಲಿ ಎಂದಿರುವುದನ್ನು ಗಮನಿಸುವನು. ಕಾಮುಕರು ಕಾಮ ಸುಖವೇ ಮೋಕ್ಷ ಸುಖ ಎಂದರೆ, ವರಾಹಮಿಹಿರನು ಇದಕ್ಕೆ ಭಿನ್ನವಾಗಿ ಹೇಳಿದುದುಂಟು. ಕಾಮಸಂಬಂಧದಲ್ಲಿ ಬಿರುಕಾಗಿ ಉಂಟಾದ ಕೆಲವು ಅನಾಹುತಗಳನ್ನು ಕವಿ ವಿವರಿಸಿದ್ದಾನೆ. ಬಹುತೇಕ ಅವುಗಳಿಗೆ ಹೆಣ್ಣೆ ಕಾರಣಳು ಎಂಬ ಸಾಂಪ್ರದಾಯಿಕ ಭಾವ ಅಲ್ಲಿರುವುದನ್ನು ಇಂದು ಒಪ್ಪಲಾಗದು. ಹೆಣ್ಣನ್ನು ಪ್ರೀತಿಯಿಂದ ಒಲಿಸಿಕೊಂಡು, ಆಕೆಗೆ ತಿರಸ್ಕಾರವಾಗದಂತೆ ಭೋಗಿಸುವುದು ಒಳಿತು ಎನ್ನಲಾಗಿದೆ.

ಏನಂ ಪೇಳ್ವುದೊ ಪಲವಂ

ಮಾನಿನಿಗೆ ವಿರಾಗಮಾಗದಂತನುಭವಿಸು

ತ್ತಾನಾರಿಯ ನೊಲಿದಾಲಿಸುಗೆ

ಮಾನ ಯಶೋಧರ್ಮ ವಂಶಮಂ ಬನಸುವವಂ

ಹೆಂಗಳೆಯರ ಜಾತಿವಿವರಣದಲ್ಲಿ ಹಿಂದಿನಿಂದಲೂ ಬಂದಿರುವ ಪದ್ಮಿನಿ, ಶಂಕಿನಿ, ಹಸ್ತಿನಿ, ಚಿತ್ತಿನಿ ಈ ನಾಲ್ಕು ವರ್ಗಗಳನ್ನು ತಿಳಿಸಿ, ಅಲ್ಲಿ ಒಂದೊಂದು ಜಾತಿಯ ಒಂದೊಂದು ಗುಣಗಳು ಭಿನ್ನ ಭಿನ್ನವಾಗಿ ಸೇರಿದರೆ ‘ಸಂಕೀರ್ಣ ಜಾತಿ’ ಎನಿಸುವುದೆಂದು ಹೊಸ ವಿಚಾರ ಹೇಳಲಾಗಿದೆ. ಅದರಂತೆ ಯಕ್ಷಾಂಶೆ, ಪಿಶಾಚಾಂಶೆ, ದಿವಿಜಾಂಶೆ ಎಂಬ ಐದು ಸ್ವಭಾವ ಗುಣ ಹೇಳುವಾಗ ಸಂಕೀರ್ಣಾಂಶೆ ಎಂದು ಕೊನೆಗೆ ತಿಳಿಸಲಾಗಿದೆ. ಪ್ರಾದೇಶಿಕ ಭಿನ್ನತೆಯೊಂದಿಗೆ ಹೆಣ್ಣನ್ನು ಗುರುತಿಸುವಾಗ ‘ಕಂನಡತಿ’ ಎಂದು ಕನ್ನಡ ನಾಡಿನ ಚೆಲುವೆಯರನ್ನು ಹೆಸರಿಸಿ ರೂಪಸಂಪದೆ ಕಡುಗಾಡಿಗಾರ್ತಿ ಎಂದೆಲ್ಲ ಒಳ್ಳೆಯ ಗುಣಸ್ವಭಾವ ತಿಳಿಸಲಾಗಿದೆ. ಪದ್ಯಭಾಗ ತ್ರುಟಿತವಾಗಿದ್ದು ಪೂರ್ತಿ ವಿವರಣೆ ಸ್ಪಷ್ಟವಾಗದು.

ಕಾವ್ಯದ ಮಧ್ಯಭಾಗದಲ್ಲಿ ರತೋತ್ಸವದ ವಿವರಗಳು ಬಂದಿದ್ದು, ಪ್ರತಿಯೊಂದು ವಿವರ ವಿವರವಾಗಿ ಬಣ್ಣಿತಗೊಂಡರೂ ಎಲ್ಲಿಯೂ ಎಲ್ಲೆ ಮೀರುವುದಿಲ್ಲ. ಆಭಾಸ ಅತಿರಂಜಿತವೆನಿಸದು. ಗಂಡು ಹೆಣ್ಣಿನ ಸಮಾಗಮದ ಕಾಲ, ದೇಶಾದಿ ವಿಚಾರಗಳನ್ನು ಬಿಂಬಿಸಲಾಗಿದೆ. ಅದಕ್ಕೆ ಪೂರಕವಾದ ವಿಚಾರಗಳನ್ನು ನೇರವಾಗಿ, ಸಹಜವಾಗಿ ಹೇಳುವ ಕಲೆ ಚೆನ್ನಾಗಿ ಬಂದಿದೆ.

ವಯಸ್ಸು, ಶರೀರ ಪಕ್ವಗೊಂಡು ಸ್ಮರಸುಖಕ್ಕೆ ಸಿದ್ಧರಾದ ಹೆಂಗಳೆಯರನ್ನು ಬಾಲೆ, ಯೌವನೆ, ಪ್ರೌಢೆ, ಲೌಲ್ಯೆ ಎಂದು ನಾಲ್ಕು ವಿಧ ಎಂದಿರುವ ಕವಿ ಅವರವರ ಸಂಭವನೀಯ ವಯಸ್ಸು ತಿಳಿಸಿದ್ದಾನೆ. ಮೊದಲಿನವಳು ಹದಿನಾಲ್ಕರ ಮೇಲಿನವಳು, ಎರಡನೆಯವಳು ಮೂವತ್ತರ ಮೇಲಿನವಳು, ಮೂರನೆಯವಳು ಅಂದಾಜು ನಲ್ವತ್ತೆರಡು, ಇದನ್ನೂ ಮೀರಿದ ವಯಸ್ಸಿನವಳು ಲೌಲ್ಯೆ ಎನ್ನಲಾಗಿದೆ. ಅವರನ್ನು ಒಲಿಸುವ, ರಮಿಸುವ ಭಿನ್ನ ಭಿನ್ನ ಮಾರ್ಗೋಪಾಯಗಳ ಉಲ್ಲೇಖವೂ ಕೂಡ ಕುತೂಹಲಕರವಾಗಿದೆ. ಬಾಲೆಗೆ ಹೂ ಹಣ್ಣುಗಳು ಇನಿವಾತು ಸೇರಿದರೆ, ವಸ್ತ್ರ ಒಡವೆಗಳು ಭೋಗಸುಖವು ಯುವತಿಗೆ ಪ್ರಿಯವಾದುದು. ಚತುರತೆ ರತಿಸುಖಕ್ಕೆ ಪ್ರೌಢೆ ಸಂತೋಷ ಪಟ್ಟರೆ, ಮನೆವಾರ್ತೆ ನಂಟರ ಮಾತು ಗೌರವಾದರಗಳಿಂದ ಲೌಲ್ಯೆ ಸುಖಿಸುವಳು. ಇದನ್ನು ವಿವಾಹಿತ ದಂಪತಿಗೆ ಮಾರ್ಗಸೂಚಿಯಂತೆ ಗುರುತಿಸಬಹುದಾಗಿದೆ. ಗಂಡನು ವಿವಾಹದ ನಂತರದಲ್ಲಿ ಸತಿಯ ವಯೋಕ್ರಮದಲ್ಲಿ ಹೇಗೆ ವರ್ತಿಸಬೇಕು ಎಂಬುದರ ಸೂಚನೆ ಇಲ್ಲಿದೆ ಎನಿಸುತ್ತದೆ. ಈ ವಿವರಗಳನ್ನು ಕೇವಲ ವಶೀಕರಣ, ಸುರತಭೋಗದ ಸಾಧ್ಯಾಸಾಧ್ಯತೆಗಳ ದೃಷ್ಟಿಯಿಂದ ನೋಡದೆ, ಸಫಲ ದಾಂಪತ್ಯದ ಸಂಹಿತೆಯ ದೃಷ್ಟಿಯಿಂದ ಕಾಣುವುದು ಒಳಿತು. ಹಾಗೆ ಮಾಡಿದರೆ ಅಲ್ಲಿ ಜ್ಞಾನ, ಅನುಭವ, ವಿವೇಕಗಳು ಮುಪ್ಪರಿಗೊಂಡಿರುವುದು ತಿಳಿಯುತ್ತದೆ.

ರತ್ನಾಕರವರ್ಣಿಯು ಭರತೇಶ ವೈಭವದಲ್ಲಿ ‘ಜಾಣೆ ಜಾಣನ ಕೂಡಲಹುದದು ತಂತಿಗೂಡಿದ ವೀಣೆಯ ನುಡಿಸಿದಂತಿಹುದು’ ಎಂದಿದ್ದಾನೆ. ದಾಂಪತ್ಯದಲ್ಲಿ ಗಂಡ ಹೆಂಡಿರ ಸಾಮರಸ್ಯ, ಸಹಬಾಳ್ವೆ, ಪರಸ್ಪರ ಪ್ರೀತಿ ವಿಶ್ವಾಸಗಳು ಅಮೂಲ್ಯವಾಗಿವೆ. ಅದನ್ನು ಚಂದ್ರರಾಜ ಕವಿ ತುಂಬ ಹಿಂದೆ ಹೇಳಿದ್ದಾನೆ.

ಸತಿ ಗುಣವತಿ ದೊರೆಕೊಂಡಡೆ

ಪತಿಗಾ ಸ್ತ್ರೀರತ್ನಮೆಂಬ ಪೆಸರುಂ ಪಡೆಗುಂ

ಸತಿ ದುರ್ಗುಣೆ ದೊರೆಕೊಂಡಡೆ

ಪತಿಗಾ ಸ್ತ್ರೀ ವ್ಯಾಧಿಯೆಂಬ ಪೆಸರುಂ ಪಡೆಗುಂ

ಸ್ತ್ರೀನೀತಿ, ಸ್ತ್ರೀವರ್ತನೆಗಳ ವಿಚಾರವನ್ನು ವಿವರಿಸುವ ಕವಿ ಕುಲವಧು, ಕುಲವನಿತೆಯರ ಮಹತ್ವ ತಿಳಿಸುವನು. ಸದಾಕಾಲ ಆರೋಪಿಸುವ, ನಿಂದಿಸುವ, ಜಗಳಾಡುವ, ಕುಹಕವಾಡುವ ಹೆಣ್ಣಿನಿಂದ ಪ್ರಯೋಜನವಿಲ್ಲ. ಕಳ್ಳೆ, ಮೂರ್ಖೆ, ಶಠೆ, ಪಾಪಿ, ಸಂಚಳೆ, ದುರ್ಮತಿಯಾದ ಹೆಂಡತಿಯಿಂದ ದಾಂಪತ್ಯವೆಂದಿಗೂ ಸುಖವಾಗದು. ತಂದೆ, ತಾಯಿ, ಗುರುಹಿರಿಯರ ಮತ್ತು ಅಗ್ನಿಯ ಸಾಕ್ಷಿಯಾಗಿ ವಿವಾಹವಾದವಳು ಅನ್ಯ ಪುರುಷ ಸಂಬಂಧ ಮಾಡಿದರೆ ಇಡೀ ಕುಲಕ್ಕೆ ಅಪಕೀರ್ತಿ ಬರುತ್ತದೆ. ಹೆಣ್ಣು ನಯ, ವಿನಯಗಳಿಂದ, ಪುರುಷಾನುಕೂಲೆಯಾಗಿ ವರ್ತಿಸಿದರೆ, ಪ್ರಿಯ ವಾಕ್ ವರ್ತನೆಗಳಿಂದ ಎಲ್ಲರನ್ನು ಸಂಪ್ರೀತಿಯಾಗಿಸಿದರೆ ಆಕೆ ಸಜ್ಜನಳು, ಸುದತಿ ಎನಿಸುವಳು.

ಇವೆಲ್ಲ ಪರಂಪರಾಗತ ಪುರುಷ ವ್ಯವಸ್ಥೆಯ ಕರಾರುಗಳು, ಹೆಣ್ಣಿನ ಕಷ್ಟ ಹೆಚ್ಚಿಸುವ, ಅಸಮಾನತೆ ಉಂಟು ಮಾಡುವ, ಲಿಂಗಭೇದ ವಿಷಮತೆಯ ವಿಚಾರಗಳು ಎಂದು ಇಂದು ಅನ್ನಿಸಬಹುದು. ಆದರೆ ವಾಸ್ತವದಲ್ಲಿ ಕವಿಗೆ ಅಂತಹ ಮೇಲು ಕೀಳಿನ, ಹೆಣ್ಣಿನ ಸ್ವಾತಂತ್ರ್ಯ ಭಾವನೆ ಹತ್ತಿಕ್ಕುವ ಉದ್ದೇಶವಿಲ್ಲ. ಹೆಣ್ಣಿಗೆ ವಿಧಿಸುವ ಬೇಕು, ಬೇಡಗಳಂತೆ ಕವಿ ಗಂಡಿಗೂ ನೀತಿಶಾಸ್ತ್ರ, ವರ್ತನಾ ಶಾಸ್ತ್ರ ಅನ್ವಯಿಸುವುದು ಗಮನಾರ್ಹ. ಪತಿಯು ಪತ್ನಿಗೆ ಒಳ್ಳೆಯ ಜನಸಂಪರ್ಕ ಸಹವಾಸ ಒದಗುವಂತೆ, ಧರ್ಮ ನೀತಿ ವಿಚಾರ ಕಿವಿಗೆ ಬೀಳುವಂತೆ ಮಾಡಬೇಕಾಗುತ್ತದೆ. ಜನ ಸೇರುವಲ್ಲಿ, ಪೂಜಾದಿಗಳಲ್ಲಿ ಸತಿಯನ್ನು ಕಳಿಸಬೇಕಾದರೆ ಉಚಿತಾನುಚಿತ ಯೋಚಿಸಬೇಕು. ಹೆಣ್ಣಿಗೆ ಕಾಪಿನಾಳು ಎಚ್ಚರಿಕೆಯಿಂದಿರಬೇಕು. ನಗೆ, ನೋಟ, ಹಿತವಾದ ಮಾತು, ಹರಟೆಗಳಿಂದ ಪುರುಷರು ಹೆಂಡತಿಯ ಮನಸ್ಸಿಗೆ ಸಂತೋಷಪಡಿಸಬೇಕು. ಗಂಡಿಗೆ ನೀತಿ, ನಯ ಹೇಳುವಾಗ ಕವಿ ತುಂಬ ಮಹತ್ವದ ಮಾತನ್ನು ಹೇಳಿರುವನು.

ಒಬ್ಬಳೆ ಸಾಗುತಲಿ ಸಜ್ಜನ

ಮಿಬ್ಬಿರದ್ಧಿಗಕ್ಕು ಮತ್ತಂ ಪೆ

ನ್ನಿಬ್ಬರುಮಂ ಕುಲವಧುವಂ

ನೂರ್ಬರುಮಂ ಪಡೆದೊಡೆ ಕರಂ ಸುಖಂ ಬಡೆದಪನೆ

ಒಬ್ಬ ಗಂಡಿಗೆ ಒಬ್ಬಳು ಹೆಂಡತಿ ಸಾಕು. ಇಬ್ಬರಾದರೆ ಬುದ್ಧಿ ದ್ವಂದ್ವವಾಗುವುದು. ನೂರು ಜನ ಹೆಂಗಳೆಯರನ್ನು ಪಡೆದರೆ ಸುಖಿಸಬಲ್ಲನೆ? ಏಕಪತಿವ್ರತನನ್ನ ಹೆಣ್ಣಿಗೆ ವಿಧಿಸಿ ಅದನ್ನೇ ಆದರ್ಶವೆಂದು ಸಾಗುತ್ತಿರುವಾಗ ಸಾರುತ್ತಿರುವಾಗ, ಅಂದು ಹಲವು ರಾಜ ಮಹಾರಾಜರು ಅಧಿಕಾರ, ಹಣವಂತರು ಬಹುಪತ್ನಿತ್ವದಲ್ಲಿ ಕಿಂಚಿÀತ್ತೂ ಅಳುಕಿಲ್ಲದೆ ನಂಬಿಕೆಯಿಟ್ಟ ದಿನಗಳಲ್ಲಿ ಕವಿಯು ಏಕಪತ್ನಿವ್ರತದ ಬಗ್ಗೆ ಸೂಚನೆ ನೀಡಿರುವುದು ಗಮನಾರ್ಹವಾಗಿದೆ. ಗಂಡು ಬೇಕಾದಷ್ಟು ವಿವಾಹವಾಗಬಹುದು, ಹೆಣ್ಣು ಆಗಬಾರದು ಎನ್ನುವ ಕಾಲದಲ್ಲಿ ಇದು ಹೇಳಲ್ಪಟ್ಟಿದೆ.

ರಾಜಕಾರ್ಯ ಸಂವರಣೆಗಾಗಿ ರಾಜನೇನಾದರೂ ಬಹುಪತ್ನಿಯರನ್ನು ವಿವಾಹವಾದರೆ ಇತರರು ಅದನ್ನು ಅನುಸರಿಸಬೇಕಿಲ್ಲ ಎಂದೂ ಹೇಳಲಾಗಿದೆ. ಕವಿ ಇನ್ನೂ ಮುಂದುವರೆದು ಒಬ್ಬಳು ಪತ್ನಿಯನ್ನು ಪತಿ ಸಲುಹಿ, ಸಂಗವಿದ್ದು ಸುಖ ಸಮಾಧಾನ ನೀಡುವುದಕ್ಕೆ ಸಾಮಥ್ರ್ಯವಿಲ್ಲದಿರುವಾಗ ಅನೇಕ ಸತಿಯರೊಂದಿಗೆ ಸುಖದಿಂದ ಹೇಗಿರಬಲ್ಲನು? ಇದು ಅಂದಿನ ಬಹುಪತ್ನಿತ್ವವನ್ನು ಪ್ರಶ್ನಿಸುವ ಜೊತೆಗೆ, ಹೆಣ್ಣಿನ ಶೋಷಣೆಯನ್ನು ತಡೆಯುವ ಉದ್ದೇಶ ಹೊಂದಿದೆ. ಗಂಡು ಹೆಣ್ಣಿನ ಸುಖ ಸಂತೋಷ, ಕುಟುಂಬ ಸೌಖ್ಯ, ಲಿಂಗಾನುಪಾತ, ನೈತಿಕತೆ, ಆರೋಗ್ಯಗಳೆಲ್ಲ ಹಿನ್ನೆಲೆಯಲ್ಲಿ ಕವಿಯ ಭಾವವನ್ನು

ಅರಿಯಬಹುದಾಗಿದೆ.

ಚಂದ್ರರಾಜ ಕವಿ ಹೆಣ್ಣಿಗಿಂತಲೂ ಗಂಡಿಗೆ ಹೆಚ್ಚು ವಿವೇಕ, ಎಚ್ಚರಿಕೆ ಹೇಳಿದ್ದಾನೆ. ಒಬ್ಬಳು ಸತಿಯೊಂದಿಗೆ ಚೆನ್ನಾಗಿ ಸಂಸಾರ ನಿರ್ವಹಿಸಲು ಸೂಚಿಸುವ ಆತ ದುರ್ಬಲರು, ಅಂಗವಿಕಲೆಯರು, ವ್ರತಸ್ಥಳು, ಅಲ್ಪವಯದ ಬಾಲೆಯನ್ನು, ವೃದ್ಧೆಯರನ್ನು ಭೋಗಿಸಬಾರದು ಎಂದಿರುವುದುಂಟು. ಇಲ್ಲಿ ಆತ ಹೇಳುವಾಗ:

ಮೊರೆಯಿಲ್ಲದಳಂಗುಲಿನಿಯ

ನರಿದುಂಬೆಯ ಹೊಕ್ಕದಿರ್ಬಳಂ ಯೋಗಿನಿಯಂ

ನೆರೆ ಮೀಹಂದಪ್ಪಿದಳಂ

ಪೆರತೇನೊ ವಯೋಧಿಕೆಯುಮಾಗದು ಕೂಡಲ್

ಇಂದು ಸುದ್ದಿ ಮಾಧ್ಯಮಗಳಲ್ಲಿ, ಇತರ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗುತ್ತಿರುವ ಬಹುತೇಕ ಬಲಾತ್ಕಾರ ಪ್ರಕರಣಗಳನ್ನು ಕಂಡರೆ ಕವಿ ನಿರ್ಬಂಧಿಸಿದ ವ್ಯಕ್ತಿಗಳ ಮೇಲೆಯೇ ಹೆಚ್ಚು ಅತ್ಯಾಚಾರ ಅನ್ಯಾಯವಾಗುತ್ತಿರುವುದನ್ನು ಕಾಣಬಹುದು. ಎಂದರೆ ಅಂದಿಗೂ ಇಂದಿಗೂ ದುರ್ಬಲ, ಅಸಹಾಯಕ ಸ್ತ್ರೀಯರು ಕಾಮುಕರಿಗೆ ಗುರಿಯಾಗುತ್ತಿದ್ದಾರೆ. ಹಾಗಾಗಿ ಕವಿಯ ಎಚ್ಚರಿಕೆಯ ಸಾಮಾಜಿಕ ಶಾಂತಿ, ಸಹಬಾಳ್ವೆಗೆ ಇಂದು ಪ್ರಸ್ತುತವಾಗುತ್ತದೆ. ಕುಲಟೆಯರೊಂದಿಗೆ ಬೆರೆತರೆ ಅದು ಇನ್ನೊಂದು ಬಗೆಯ ಅಪಾಯ ತಂದೊಡ್ಡುತ್ತದೆ. ಉನ್ನತಿ, ಒಳ್ಪು, ಶೇಚ, ಧರ್ಮ, ಛಲ ಇತ್ಯಾದಿ ಗುಣಗಳು ನಾಶವಾಗುವುದರಿಂದ ಹಾಗೆ ಮಾಡಲಾಗದು ಎನ್ನುವುದನ್ನು, ಆಧುನಿಕ ಕಾಲದ ಲೈಂಗಿಕ ರೋಗಗಳ ಹಿನ್ನೆಲೆಯಲ್ಲಿ ವಿಚಾರಿಸಬೇಕು. ಪತ್ನಿಯೊಂದಿಗಿನ ಸುರತದಲ್ಲಿ ಕೆಲ ಮಹತ್ವದ ಎಚ್ಚರಿಕೆ ಇಲ್ಲಿ ಬಂದಿವೆ.

ರಾಜನಾದವ ಸೂಳೆಗೇರಿಗೆ ಹೋಗಬೇಕಾದರೆ ನಾಗರಿಕ, ವಿಟ, ವಿದೂಷಕ, ಪೀಠವರ್ಧನ, ಪರಿವೃತ, ತ್ಯಾಗಿ ವಿವೇಕಿಗಳಿಂದ ಸುತ್ತಾವರೆದಿರಬೇಕು ಎಂಬುದರ ಹಿಂದೆ ಒಂದು ತತ್ವಜ್ಞಾನವಿದೆ. ಆದಿಪುರಾಣ, ಅಜಿತಪುರಾಣ, ಗಿರಿಜಾಕಲ್ಯಾಣ, ರಾಜಶೇಖರ ವಿಳಾಸ, ಧರ್ಮನಾಥ ಪುರಾಣಗಳಲ್ಲಿ ರಾಜನಾಗಲಿ, ಯುವರಾಜನಾಗಲಿ ಅವರೊಂದಿಗೆ ಹೋಗಿ ವಿಹರಿಸುವ ದೃಶ್ಯಗಳಿವೆ. ರಾಜನು ಮಾತ್ರವಲ್ಲದೆ ಸದಭಿರುಚಿಯ ಯಾರೇ ಆಗಲಿ ಮಾತು, ಹಾಸ್ಯ, ಕಲೆ, ವಿನೋದಗಳಲ್ಲಿ ಇನ್ನೊಬ್ಬರ (ಸತಿಯ) ಮನಸ್ಸರಿತು ಚತುರತೆಯಿಂದ ನಡೆಯಬೇಕು. ಸೂಪಶಾಸ್ತ್ರ, ಭೃಗು, ಚಿತ್ರ, ರಸಾಳಂಕಾರ, ಗಣಿತ, ಗಜ, ಹಯ, ವೈದ್ಯ, ಸ್ವರ, ಶಕುನ, ಕಾವ್ಯ, ನಾಟಕಗಳಲ್ಲಿ ರಸಿಕನಾದವನು (ವಿಟ) ಸಿದ್ಧಹಸ್ತನಾಗಿರಬೇಕು. ಚದುರನು ಚಿತ್ರಶಾಲೆ, ಶಯ್ಯಾಗೃಹಗಳನ್ನು ಹೇಗೆ ಅಲಂಕರಿಸಿ ಜಾಣ್ಮೆ ತೋರಬೇಕೆಂದು ಕವಿ ಹೇಳಿರುವಲ್ಲಿ ಅನೇಕ ಸೂಕ್ಷ್ಮಗಳಿವೆ. ಕೊನೆಕೊನೆಗೆ ಇಪ್ಪತ್ತು ಪದ್ಯಗಳಲ್ಲಿ ಜಾಣ ವಿಟನ ಗುಣಲಕ್ಷಣಗಳನ್ನು ತಿಳಿಸಲಾಗಿದೆ.

ಕವಿಗೆ ವ್ಯಾಪಕವಾದ ಓದು, ಪಾಂಡಿತ್ಯಗಳಿವೆ. ಸಂಸ್ಕøತದ ಅಪಾರ ಜ್ಞಾನವಿದೆ. ವರಹಾಮಿಹಿರನ ಬೃಹತ್ಸಂಹಿತಾ, ವಾತ್ಸಾಯನನ ಕಾಮಸೂತ್ರ, ಕೆಲವು ಸ್ಮøತಿಗಳು, ನೀತಿಶತಕ, ಮನುಸ್ಮøತಿಗಳನ್ನು ಇಲ್ಲಿ ಉಲ್ಲೇಖಿಸಿದ್ದಾನೆ. ಭಾರತೀಯರಿಗೆ ಕಾಮಶಾಸ್ತ್ರವೆಂದರೆ ವಾತ್ಸಾಯನ ನೆನಪಾಗುತ್ತಾನೆ. 1-6ನೇ ಶತಮಾನಗಳಲ್ಲಿದ್ದ ಆತ ಶಾಸ್ತ್ರೀಯವಾಗಿ ಕಾಮಸೂತ್ರ ರಚಿಸಿದ್ದಾನೆ. ಅವನಿಗಿಂತ ಹಿಂದೆ, ನಂತರದಲ್ಲಿ ಹಲವರು ಆ ವಿಷಯದಲ್ಲಿ ಕೃತಿ ರಚಿಸಿದ್ದಾರೆ. ರತಿರಹಸ್ಯ, ಸ್ಮರಪ್ರದೀಪ, ರತಿಮಂಜರಿ, ರಾಸಮಂಜರಿಹೀಗೆ ಕೆಲವು ಬಂದಿವೆ.

ಕನ್ನಡದ ಚಂದ್ರರಾಜನ ಮದನ ತಿಲಕದ ವಿಶೇಷತೆ ಎಂದರೆ, ಅದು ಕರ್ಣಾಟಕ ಪಂಚತಂತ್ರ, ಕರ್ಣಾಟಕ ಕಾದಂಬರಿಗಳಂತೆ ಸಂಸ್ಕøತ ಏಕಮೂಲ ಆಧರಿಸಿ ಹೊರಬಂದುದಲ್ಲ. ಅಲ್ಲಿ ಕೇವಲ ವಾತ್ಸಾಯನನನ್ನು ಅನುಸರಿಸಲಾಗಿಲ್ಲ. ಹಲವು ಮೂಲಗಳಿಂದ ವಸ್ತು ವಿಷಯದಲ್ಲಿ ಪ್ರಭಾವ ಪಡೆದರೂ, ಕವಿಯ ಸ್ವಂತಿಕೆ, ಪ್ರತಿಭೆಗಳು ಎದ್ದು ಕಾಣುತ್ತವೆ. ಹಾಗಾಗಿ ಶಾಸ್ತ್ರಕೃತಿಯಾದರೂ ನೀರಸವಾಗಿಲ್ಲ, ಕಠಿಣವಾಗಿಲ್ಲ. ಅದು ಸರಸ ಪ್ರಸನ್ನವಾಗಿದೆ. ಕನ್ನಡದಲ್ಲಿ ಮದನತಿಲಕದ ಮೂಲಕ ಒಳ್ಳೆಯ ಶಾಸ್ತ್ರಕೃತಿಯನ್ನು (ಅದರಲ್ಲಿಯೂ ಕಾಮಶಾಸ್ತ್ರದಲ್ಲಿ) ನೀಡಿ ಆ ದಿಸೆಯಲ್ಲಿಯ ಕೊರತೆಯನ್ನು ನೀಗಿಸಿದ್ದಾನೆ. ಅದೊಂದು ಜ್ಞಾನಶಾಖೆಯಲ್ಲಿ ಮಹತ್ವದ ಕೃತಿಯಾಗಿದೆ; ಇಂದಿಗೂ ಪ್ರಸ್ತುತವಾಗಿದೆ. ಇಂದಿನ ಆಧುನಿಕ ಕಾಲದ ಅನೇಕ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಅದು ಹಲವು ತೆರನ ಪರಿಹಾರ ಸೂಚಿಸಬಲ್ಲದು. ಕನ್ನಡ ಜಗತ್ತಿಗೆ ರೇಚನೃಪಾಲ, ಅವನ ಸತಿಯರ ಸಂವಾದ ರೂಪದಲ್ಲಿ ಸ್ಮರತತ್ತ್ವ ನೀಡಿದ ಕವಿ ಗೌರವಾದರಗಳಿಗೆ ಪಾತ್ರನಾಗುತ್ತಾನೆ. ಇದು ಅಗ್ಗಳಿಕೆಯಲ್ಲ; ನಿಜವೇ ಆಗಿದೆ.

*ಲೇಖಕರು ಬೆಳಗಾವಿ ಜಿಲ್ಲೆಯ ಬೆಳವಿ ಗ್ರಾಮದವರು; ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದು ಪಿ.ಎಚ್.ಡಿ. ಮಾಡಿದ್ದಾರೆ. ಹಲವಾರು ಸೃಜನಶೀಲ ಮತ್ತು ಸೃಜನೇತರ ಕೃತಿಗಳನ್ನು ಹೊರತಂದಿದ್ದಾರೆ. ನಿವೃತ್ತ ಕನ್ನಡ ಉಪನ್ಯಾಸಕರು, ಸಂಕೇಶ್ವರದಲ್ಲಿ ವಾಸ.

Leave a Reply

Your email address will not be published.