ತಿಳಿವಳಿಕೆ ಖಚಿತಪಡಿಸುವ-ವಿಸ್ತರಿಸುವ ಕೃತಿ ‘ಚಹರೆಗಳೆಂದರೆ ಗಾಯಗಳೂ ಹೌದು’

ಅಮೆರಿಕಾದ ಮೂಲನಿವಾಸಿಗಳಾದ ಇಂಡಿಯನ್ನರು ಬಿಳಿಯರಿಗಿಂತ ಕೀಳಾದ ಜನಾಂಗವೆಂಬ ಸಿದ್ಧಾಂತವನ್ನು ಒಪ್ಪಿಕೊಂಡಾಗಲೇ ಜನಾಂಗಹತ್ಯೆಯ ಬೀಜಗಳನ್ನು ಹುಟ್ಟಿಹಾಕಿದಂತಾಯಿತು. ದೇಶ ಮೂಡಿಬಂದಿದ್ದೇ ಅಂಥ ತಳಹದಿಯ ಮೇಲೆ. ವಸಾಹತಿನ ಒಡಲ ಮೇಲೆ ಜನಾಂಗದ್ವೇಷದ ಗಾಯಗಳು, ಕಲೆಗಳು ಇದ್ದವು. ಜನಾಂಗಿಕ ಶ್ರೇಷ್ಠತೆಯನ್ನು ಮೆರೆಯಲೆಂದು ನಡೆದ ಯುದ್ಧಗಳಲ್ಲಿ ರಕ್ತದ ಹೊಳೆ ಹರಿದಿತ್ತು. ಮೂಲನಿವಾಸಿಗಳನ್ನು ಸಂಪೂರ್ಣವಾಗಿ ನಾಶ ಮಾಡುವುದನ್ನು ರಾಷ್ಟ್ರೀಯ ನೀತಿಯಾಗಿ ರೂಪಿಸಿಕೊಂಡ ಒಂದೇ ಒಂದು ದೇಶ ಇಡೀ ಜಗತ್ತಿನಲ್ಲಿ ನಮ್ಮದು ಮಾತ್ರ ಇರಬೇಕು.

ಮಾರ್ಟಿನ್ ಲೂಥರ್ ಕಿಂಗ್

ಚಹರೆಗಳೆಂದರೆ ಗಾಯಗಳೂ ಹೌದು

ಸಮುದಾಯ ಅಧ್ಯಯನ ಕುರಿತ ಕಥನಗಳು

ಡಾ..ಎಸ್.ಪ್ರಭಾಕರ

ಪುಟ: 276 ಬೆಲೆ: ರೂ.250

ಪ್ರಥಮ ಮುದ್ರಣ: 2021

ಗೌರಿ ಮೀಡಿಯಾ, ಬೆಂಗಳೂರು

ಸಂಪರ್ಕ: 9353666821

ಕಳೆದ ಕೆಲವು ವರ್ಷಗಳಲ್ಲಿ ನಾನು ಓದಿದ ಅತ್ಯುತ್ತಮ ಪುಸ್ತಕಗಳ ಪಟ್ಟಿಗೆ ಸೇರುವ, `ಅಧ್ಯಯನ‘, `ಸಂಶೋಧನೆ‘, ಓದುಬರಹಗಳ ಸಾಮಾಜಿಕತೆ ಮುಂತಾದ ಮಾತುಗಳಿಗೆ, ಕನ್ನಡದ ಸಂದರ್ಭದಲ್ಲಿ ಹೊಸ ಅರ್ಥವನ್ನು ಕೊಡುವ ಈ ಕೃತಿಯನ್ನು ಕೊಟ್ಟಿರುವುದಕ್ಕಾಗಿ ಎ.ಎಸ್.ಪ್ರಭಾಕರ ಅವರಿಗೆ ಪ್ರೀತಿ ಮತ್ತು ವಂದನೆ. ಇದು ಹಲವು ವಿಷಯಗಳನ್ನು ಕುರಿತ ನನ್ನ ತಿಳಿವಳಿಕೆಯನ್ನು ಖಚಿತ ಪಡಿಸಿದೆ ಮತ್ತು ವಿಸ್ತರಿಸಿದೆ. ಇದನ್ನು ಪರಿಚಯಿಸುವುದು ಅಥವಾ ಸಂಗ್ರಹಿಸುವುದು ಸಾಧ್ಯವಿಲ್ಲ. ಮಾನವಿಕಗಳು, ಸಮಾಜಶಾಸ್ತ್ರಗಳು ಮತ್ತು ಸಂಸ್ಕೃತಿಯ ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಮಾತ್ರವಲ್ಲ ನಮ್ಮ ನಾಡಿನ ಗತ, ಪ್ರಸ್ತುತ ಮತ್ತು ಭವಿಷ್ಯಗಳಲ್ಲಿ ಆಸಕ್ತರಾದ ಪ್ರತಿಯೊಬ್ಬರೂ ಇದನ್ನು ಓದಬೇಕು. ನಾಗಾಲೋಟದಲ್ಲಿ ಅಲ್ಲ, ವಿದ್ಯಾರ್ಥಿಸಹಜವಾದ ಏಕಾಗ್ರ ಮನಸ್ಸಿನಿಂದ. ಈ ಪ್ರಮಾಣದ ಮೆಚ್ಚಿಗೆಯ ಮಾತುಗಳ ಮುಖ್ಯ ಕಾರಣಗಳನ್ನು ಸಂಗ್ರಹವಾಗಿ ತಿಳಿಸುವುದಷ್ಟೇ ಇಲ್ಲಿ ನನ್ನ ಉದ್ದೇಶ.

1. ಈ ಪುಸ್ತಕವು 2003 ರಿಂದ 2018 ರವರೆಗಿನ ಅವಧಿಯಲ್ಲಿ, ಬರೆದ ಹನ್ನೊಂದು ಬರೆಹಗಳ ಸಂಕಲನ. ಇವುಗಳಲ್ಲಿ ವಿಮರ್ಶಾತ್ಮಕವಾದ ಟಿಪ್ಪಣಿಗಳನ್ನು ಒಳಗೊಂಡ ಎರಡು ಅನುವಾದಗಳೂ ಸೇರಿವೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಹಾಶ್ವೇತಾದೇವಿಯವರ ಆದಿವಾಸಿಗಳನ್ನು ಕುರಿತ ವಿಚಾರಗಳನ್ನು ಗೌರವ ಮತ್ತು ವಿಮರ್ಶಕದೂರಗಳಿಂದ ಪರಿಶೀಲಿಸಿರುವ ಎರಡು ಲೇಖನಗಳಿವೆ. ಉಳಿದವು ಆದಿವಾಸಿಗಳ ಬದುಕು, ಅವರ ಅಧ್ಯಯನಗಳು ಹಾಗೂ ಅವರ ಪರವಾದ ಹೋರಾಟಗಳನ್ನು ಕೇಂದ್ರದಲ್ಲಿಟ್ಟುಕೊಂಡಿವೆ. `ಅಲೆಮಾರಿಗಳ ಶಾಪಗ್ರಸ್ತ ಪಯಣಎಂಬ ಲೇಖನವು, ಅಂಥ ಸಮುದಾಯಗಳ ಪಡಿಪಾಟಲುಗಳಿಗೆ ಕಾರಣವಾಗಿರುವ ನಾಗರಿಕ ಸಮಾಜಗಳ ಕ್ರೌರ್ಯಕ್ಕೆ ಕನ್ನಡಿ ಹಿಡಿಯುತ್ತದೆ.

2. ನಮ್ಮ ನಾಡಿನ ಬುಡಕಟ್ಟು ಜನಾಂಗಳ ಬದುಕಿನ ಬವಣೆಗಳನ್ನು, ಓದಿನ ಅನುಕೂಲಕ್ಕಾಗಿ ಕಟ್ಟಿಕೊಂಡಿರುವ ಗೋಡೆಗಳನ್ನು ಮೀರಿ ಹಲವು ನಿಟ್ಟಿನಿಂದ ನೋಡಲು ಇಲ್ಲಿ ಸಾಧ್ಯವಾಗಿದೆ. ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ, ರಾಜಕೀಯ, ಆರ್ಥಿಕತೆ, ಸಂಸ್ಕೃತಿಕಲೆ, ಚಲನಶೀಲವಾದ ಸಮಾಜ/ಜೀವನ ಇವೆಲ್ಲದರ ನಡುವೆ ಇರುವ ಸಂಕೀರ್ಣವಾದ ಪೂರಕ ಸಂಬಂಧಗಳನ್ನು ಅನುಭವದಿಂದ ಅರ್ಥ ಮಾಡಿಕೊಂಡು, ಒಗ್ಗೂಡಿಸಿದಾಗ ಮೂಡುವ ಸಮಗ್ರನೋಟವು ಈ ಅಧ್ಯಯನದ ಮೂಲನೆಲೆಯಾಗಿದೆ. ದೃಷ್ಟಿಕೋನದ ರೂಪಣ ಮತ್ತು ವಿವರಗಳ ಗ್ರಹಿಕೆಗಳೆಂಬ ಎರಡೂ ನೆಲೆಗಳಲ್ಲಿ ಇಂಥ ನೋಟವು ಸಾಧ್ಯವಾಗಿದೆ. ಆದ್ದರಿಂದಲೇ ಇದು ಇಂಥ ಅಧ್ಯಯನಗಳಿಗೆ ಮಾದರಿಯಾಗಬಲ್ಲುದು.

3. ಸಂಶೋಧನೆ ಎನ್ನುವುದು, `ವಸ್ತುನಿಷ್ಠವಾದ‘, `ರಾಜಕೀಯ ವಾದಸತ್ಯಶೋಧನೆಯೆಂಬ ಹುಸಿನಿಲುವನ್ನು ಇಲ್ಲಿ ಒಡೆಯಲಾಗಿದೆ. ಸಂಶೋಧನೆಯ ಸ್ವರೂಪ, ವಿಧಾನ ಮತ್ತು ಸಲಕರಣೆಗಳು, ಸಂಶೋಧಕನ ನೆಲೆಗಟ್ಟು ಇವೆಲ್ಲವೂ ವರ್ಗ, ವರ್ಣ, ಚಾರಿತ್ರಿಕ ಸಂದರ್ಭ, ಸಂಪನ್ಮೂಲಗಳ ಲಭ್ಯತೆ ಮುಂತಾದ ಚಾಲಕ ಶಕ್ತಿಗಳಿಂದ ನಿಯಂತ್ರಿತವಾಗಿರುವುದರಿಂದ, ಇಂಥ ಕಡೆ ಸಂಶೋಧಕನ ರಾಜಕೀಯ ನಿಲುವುಗಳು ನಿರ್ಣಾಯಕವಾಗುವುದನ್ನು ಬುಡಕಟ್ಟು ಅಧ್ಯಯನಗಳ ಸಂದರ್ಭದಲ್ಲಿ ಹಲವು ನಿದರ್ಶನಗಳ ಮೂಲಕ ತೋರಿಸಿಕೊಡಲಾಗಿದೆ. ಪ್ರಭಾಕರ ಅವರು ಹೊಂದಿರುವ ರಾಜಕೀಯ ಧೋರಣೆಗಳಿಗೂ ನನ್ನ ನಿಲುವುಗಳಿಗೂ ಸಹಮತವಿದೆಯೆಂದು ಹೇಳಲು ನನಗೆ ಯಾವ ಸಂಕೋಚವೂ ಇಲ್ಲ. ಅದು ನಿರ್ಲಕ್ಷಿತ, ಶೋಷಿತ ಜನರ ಪರವಾದ ರಾಜಕೀಯ.

4. ಬುಡಕಟ್ಟು ಜನಾಂಗಗಳ ಅಧ್ಯಯನದ ಭಿತ್ತಿಯಲ್ಲಿ, ಪಾಶ್ಚಾತ್ಯ (ಯೂರೋಪಿಯನ್ ಮತ್ತು ಅಮೆರಿಕನ್) ಮತ್ತು ಅಖಿಲ ಭಾರತೀಯ (ಬಂಡವಾಳಶಾಹೀ ಹಾಗೂ ಫ್ಯೂಡಲ್) ಹಿತಾಸಕ್ತಿಗಳೇ ಸಂಶೋಧನೆಯ ಸ್ವರೂಪವನ್ನು ನಿರ್ದೇಶಿಸಿರುವ ಬಗೆಯ ಐತಿಹಾಸಿಕ ನಿರೂಪಣೆ ಇಲ್ಲಿದೆ. ಆಳುವ ಪಕ್ಷ ಯಾವುದೇ ಇರಲಿ, ಈ ಉಡಹಿಡಿತದ ಪರಿಣಾಮವಾಗಿ, ಕಾನೂನುಗಳನ್ನು ಮೀರಿ, ನಮ್ಮ ಜೊತೆಜೀವಿಗಳಾದ ಗಿರಿಜನರಿಗೆ ಅನ್ಯಾಯ ಮಾಡಿರುವುದರ ಸೋದಾಹರಣವಾದ ಚಿತ್ರಣ ಮತ್ತು ಅಭಿವೃದ್ಧಿ, ನಾಗರಿಕತೆ, ನೈತಿಕತೆ ಮುಂತಾದ ನಮ್ಮ ಪರಿಕಲ್ಪನೆಗಳ ಟೊಳ್ಳುತನದ ಅನಾವರಣವೂ ಇಲ್ಲಿ ನಡೆದಿದೆ.

5. ಗಿರಿಜನರು ಎಂದಿನಿಂದಲೂ ದ್ವೀಪಸಮವಾದ, ಪ್ರಧಾನಧಾರೆಯಿಂದ ದೂರವಾದ, ಸ್ವಯಂಪೂರ್ಣವಾದ ಬದುಕನ್ನು ನಡೆಸುತ್ತಿದ್ದರೆಂಬ ರಮ್ಯಕಲ್ಪನೆಗಳನ್ನು ಸ್ಫೋಟಿಸಿ, ರಾಮಾಯಣಮಹಾಭಾರತಗಳ ಕಾಲದಿಂದ ಇಂದಿನವರೆಗೆ ಅವರು ಸತತವಾಗಿ ಶೋಷಕಶೋಷಿತ ಸಂಬಂಧಗಳ ತಲ್ಲಣಗಳನ್ನು ಅನುಭವಿಸಿರುವರೆಂದು ಈ ಬರೆಹ ತೋರಿಸುತ್ತದೆ. ಅದರ ಪರಿಣಾಮವಾಗಿಯೇ ಪ್ರಧಾನಧಾರೆಯ ಬಗ್ಗೆ ಮೂಲನಿವಾಸಿಗಳಿಗೆ ಸಂಶಯಗಳಿವೆ. ಅದೂ ಅಲ್ಲದೆ, ಆಧುನಿಕತೆಯು ಅವರಿಗೆ ಕೊಡಮಾಡುವ `ಸೌಕರ್ಯಮತ್ತು `ಸವಲತ್ತುಗಳು ಅವರ ಆಯ್ಕೆಯಾಗಿರುವುದಿಲ್ಲ. ಹಾಗೆಂದು ಅವರು ಒಟ್ಟು ಮನುಷ್ಯಜಾತಿಯೇ ಗಳಿಸಿರುವ ಅನುಕೂಲಗಳ ಮೇಲಿನ ಹಕ್ಕನ್ನು ಕಳೆದುಕೊಂಡು ಹಿಂದಿನಂತೆಯೇ ಬದುಕಬೇಕೆಂಬ ವಾದವನ್ನೂ ಪ್ರಭಾಕರ ಒಪ್ಪುವುದಿಲ್ಲ.

6. ಕ್ಷೇತ್ರಕಾರ್ಯದ ಜೊತೆಗೆ/ಬದಲಾಗಿ ತಾತ್ವಿಕ ವಿಶ್ಲೇಷಣೆಗೆ ಸಿಕ್ಕಿರುವ ಒತ್ತು ಈ ಪುಸ್ತಕದ ವಿಶಿಷ್ಟತೆ. ಅಂತಹ ವಿಶ್ಲೇಷಣೆಯು ನಿರ್ದಿಷ್ಟವಾದ ರಾಜಕೀಯ ನಿಲುವುಗಳ ಫಲಿತವೇ ಹೌದು. ಹಾಗೆಂದರೆ ಅವರು ಫೀಲ್ಡ್ ವರ್ಕ್ ಮಾಡಿಲ್ಲವೆಂದು ಅರ್ಥವಲ್ಲ. ಬದಲಾಗಿ ಅವರು ಸಂಶೋಧಕ ಮತ್ತು ಸಂಶೋಧಿತ ವಸ್ತುಗಳ ನಡುವಿನ ಸಂಬಂಧವನ್ನು `ಒಳಗಿನವನಾಗಿ ನೋಡುವುದು‘, `ಹೊರಗಿದ್ದು ನೋಡುವುದುಎಂಬ ಪರಿಕಲ್ಪನೆಗಳ ಬೆಳಕಿನಲ್ಲಿ ಅನನ್ಯವಾಗಿ ನೋಡಿದ್ದಾರೆ. ಆ ಸಮುದಾಯದವನೇ ಆದರೂ ರಾಜಕೀಯವಾಗಿ ತಪ್ಪುನಿಲುವು ತಳೆದ ಲಂಬಾಣಿ ಸಂಶೋಧಕನ ದುರಂತವನ್ನು ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ, ಪಾಶ್ಚಾತ್ಯ ಸಂಶೋಧಕರ ಜೊತೆಜೊತೆಗೆ ಎಂ.ಎನ್.ಶ್ರೀನಿವಾಸ್, ಎಂ.ಚಿದಾನಂದಮೂರ್ತಿ ಮುಂತಾದ ಭಾರತೀಯ ಸಂಶೋಧಕರ ನಿಲುವುಗಳ ಅಪಾಯವನ್ನೂ ತೋರಿಸಿದ್ದಾರೆ.

7. ಆದಿವಾಸಿಗಳು ನಡೆಸಿಕೊಂಡು ಬಂದಿರುವ ಹೋರಾಟಗಳನ್ನು ಹತ್ತಿಕ್ಕಿರುವುದರ ಹಿಂದಿರುವ ಆರ್ಥಿಕನೆಲೆಗಳನ್ನು ಬಯಲಿಗೆಳೆಯುತ್ತಲೇ ಅವರ ಪರವೆಂದು ಹೇಳುವ ಸಂಘಸಂಸ್ಥೆಗಳ ಶಕ್ತಿಪರಿಮಿತಿಗೊಂದಲಗಳನ್ನು ತೋರಿಸಿಕೊಟಿದ್ದಾರೆ. ಹಾಗೆಯೇ ಅವರ ಜೀವನದ ಕಲಾತ್ಮಕ ನೆಲೆಗಳನ್ನು ವೈಭವೀಕರಿಸುತ್ತಾ ಅವುಗಳ ನಿರ್ಗಮನಕ್ಕಾಗಿ ಕೊರಗುವ ಯಥಾಸ್ಥಿತಿವಾದಿಗಳ ರಮ್ಯಧೋರಣೆಗಳ ಮಿತಿಯನ್ನೂ ಇಲ್ಲಿ ಗುರುತಿಸಲಾಗಿದೆ. ಇದರ ಜೊತೆಗೆ `ಕರ್ನಾಟಕ ಪ್ರಾಂತ ರೈತಸಂಘ‘, `ಕರ್ನಾಟಕ ರಾಜ್ಯರೈತಸಂಘಮುಂತಾದ ಸಂಘಟನೆಗಳ ವರ್ಗಸ್ವಭಾವವನ್ನು ಕುರಿತ ನಿಷ್ಟುರ ಚರ್ಚೆಯೂ ಮುಖ್ಯವಾಗಿದೆ. ಕಾಗೋಡು ಹೋರಾಟ, ತುಂಗಾಮೂಲದ ಹೋರಾಟಗಳ ಕಥನವೂ ಕೂಡ ಪ್ರಸ್ತುತವೇ. ನಿಜವಾದ ಹೋರಾಟಗಾರರಿಗೆ `ಹುಸಿ ಹಣೆಪಟ್ಟಿಗಳನ್ನು ಅಂಟಿಸುವ ಕ್ರೌರ್ಯದ ಕಥನವೂ ಇಲ್ಲಿದೆ.

8. ಸಮಾಜವಿಜ್ಞಾನಗಳ ಜೊತೆಗೆ ಸಾಹಿತ್ಯದ ವಿದ್ಯಾರ್ಥಿಯೂ ಆಗಿರುವ ಪ್ರಭಾಕರ ಅವರು ಸಾಹಿತ್ಯಕ ಆಕರಗಳನ್ನು ಅಷ್ಟಾಗಿ ಬಳಸಿಕೊಳ್ಳುವುದಿಲ್ಲ. ಮಹಾಶ್ವೇತಾದೇವಿಯವರಲ್ಲಿ ಕೂಡ ಸಾಹಿತ್ಯೇತರ ಬರವಣಿಗೆಯನ್ನೇ ಹೆಚ್ಚಾಗಿ ಆಧರಿಸುತ್ತಾರೆ. ನಿಜ. ಸಾಹಿತ್ಯಕ್ಕೂ ವರ್ಗಲಕ್ಷಣಗಳ ಅಂಟು ಇದ್ದೇ ಇರುತ್ತದೆ. ಆದರೆ, ಧ್ವನಿಶಕ್ತಿಯಿಂದ ವಸ್ತುಸ್ಥಿತಿಯನ್ನು `ಸಬ್ವರ್ಟ್ಮಾಡಿ ಸತ್ಯ ಹೇಳುವ ಶಕ್ತಿ ಸಾಹಿತ್ಯಕ್ಕೆ ಇರುತ್ತದೆ. ಕೃಷ್ಣಾರ್ಜುನರು ಒಟ್ಟಾಗಿ ನಡೆಸುವ ಖಾಂಡವದಹನದಿಂದ ಮೊದಲಾಗಿ (ಗಿರಿವನಪ್ರಾಣಿಜನ ನಾಶ) ಟೆಂಪೆಸ್ಟ್ ನಾಟಕದವರೆಗೆ ವಾದವ್ಯಾಖ್ಯಾನಗಳ ಸಾಧ್ಯತೆಯನ್ನು ಜೀವಂತವಾಗಿ ಇಟ್ಟಿರುವುದು ನೆನಪಾಗುತ್ತಿದೆ. ಗೋಪೀನಾಥ ಮೊಹಂತಿ, (ಪರ್ಜಾ) ಮಾಣಿಕ್ ಬ್ಯಾನರ್ಜಿ, (ಪದ್ಮಾನದಿಯ ನಾವಿಕ) ಇಂದಿರಾ ಗೋಸ್ವಾಮಿ (ದಕ್ಷಿಣ ಕಾಮರೂಪದ ಕಥಾನಕ) ಮುಂತಾದವರ ಬರೆಹಗಳು ಕೂಡ ಮುಖ್ಯ. ಪ್ರಭಾಕರ ಅವರಿಗೆ ಇಂಥ ಆಕರಗಳನ್ನು ಬಳಸಿಕೊಳ್ಳುವ ಸಾಮಥ್ರ್ಯವಿದೆ.

9. ಮುಖ್ಯವೆನಿಸಿದ ಇನ್ನೊಂದು ಸಂಗತಿಯೆಂದರೆ ಆದಿವಾಸಿಗಳ ಅಧ್ಯಯನದ ಹಿನ್ನೆಲೆಯಲ್ಲಿ ಪ್ರಮುಖ ಚಿಂತಕರ ವಾಗ್ವಾದಗಳನ್ನು ಅವರು ಪರಿಶೀಲಿಸುವ ರೀತಿ. ಡಿ.ಆರ್. ನಾಗರಾಜ ಅವರು ರೂಪಿಸಿದ ಹಲವು ವಿಚಾರಗಳನ್ನು ಒಪ್ಪಿಕೊಳ್ಳುತ್ತಲೇ ಅವು `ಪ್ಯಾನ್ ಇಂಡಿಯನ್ಆದಾಗ ದೇಶೀ ಆಕರಗಳನ್ನು ಬದಿಗಿಡುವ ಬಗೆಯನ್ನು ಮೊಗಳ್ಳಿ ಗಣೇಶ ಅವರ ಆಲೋಚನೆಗಳ ಮುಖಾಮುಖಿಯಲ್ಲಿ ಸ್ಪಷ್ಟಪಡಿಸುತ್ತಾರೆ. ನೆಹರೂ ಅವರ ಕಾಳಜಿಗಳನ್ನು ನ್ಯಾಯವಾಗಿಯೇ ಮೆಚ್ಚಿಕೊಳ್ಳುವಾಗಲೂ ಅವರ ಮಿತಿಗಳನ್ನು ಕಟುವಾಗಿ ಗುರುತಿಸುತ್ತಾರೆ. ಈ ವಿಷಯದಲ್ಲಿ ಸ್ಫೋಟಕವಾದ ಸತ್ಯಗಳನ್ನು ಹೇಳಿರುವ ಬಾಬಾಸಾಹೇಬ್ ಅಂಬೇಢ್ಕರ್ ಅವರ ವಿಚಾರಗಳೊಂದಿಗೆ ನೆಹರೂ ಮತ್ತು ಅವರಿಗಿಂತ ದುಷ್ಟರಾದ ವರ್ತಮಾನದ ನಾಯಕರ ವಾದಸರಣಿಯನ್ನು ಮುಖಾಮುಖಿ ಮಾಡುತ್ತಾರೆ. ಆಗಲೂ ಬಾಬಾಸಾಹೇಬರ ಹಿಂದಿಯ ಪರವಾದ ನಿಲುವುಗಳನ್ನು ಪ್ರಶ್ನಿಸುತ್ತಾರೆ. ಇಂಥ ಅನೇಕ ನಿದರ್ಶನಗಳು ಈ ಬರೆಹಗಳನ್ನು ಕನ್ನಡ ಚಿಂತನಪರಂಪರೆಯ ಮುಖ್ಯ ಭಾಗವಾಗಿಸುತ್ತವೆ. ಏಜಾಜ್ ಅಹ್ಮದ್ ಅವರ ಮೌಲಿಕ ಚಿಂತನೆಗಳೂ ಇಲ್ಲಿ ಪ್ರಸ್ತುತವಾಗುತ್ತಿದ್ದವು.

10. ಈ ಪುಸ್ತಕದ ಮುಖ್ಯವಾದ ವಿಚಾರಗಳನ್ನು ಕ್ವೋಟ್ ಮಾಡಲು ಪ್ರಯತ್ನಿಸಿದರೆ, ಪುಟಗಳೇ ಬೇಕು. ಸಮೃದ್ಧವಾದ ಆಕರಗಳು, ಭಾವನಾತ್ಮಕವಾದ ಅಂತರಂಗ ಮತ್ತು ತರ್ಕಬದ್ಧವಾದ ವಾದಸರಣಿಗಳು ಮುಪ್ಪುರಿಗೊಂಡಿರುವ ಇಲ್ಲಿನ ಬರೆಹಗಳು ಸಂಸ್ಕೃತ ಪದಗಳ ಕಡೆ ಓಲುವೆ ತೋರಿದರೂ ಪರಿಭಾಷೆಯಿಂದ ಭಾರವಾಗಿಲ್ಲ. ಅಂಕಿಅಂಶಗಳು ಮುಂದಾಗಿ ಆಲೋಚನೆಗಳು ಹಿಂದೆ ಸರಿದಿಲ್ಲ. ಡಾ.ಪ್ರಶಾಂತ ನಾಯಕ ಅವರ ಮುನ್ನುಡಿ ತುಂಬಾ ಉಪಯುಕ್ತವಾಗಿದೆ.

11. ಕೊನೆಯದಾಗಿ ಈ ಪುಸ್ತಕದ ಶೀರ್ಷಿಕೆಯ ಬಗ್ಗೆ ಒಂದೆರಡು ಮಾತು. ಯಾವುದೇ ಸಮುದಾಯದ ವಿಶಿಷ್ಟ ನಡಾವಳಿ ಮತ್ತು ಚಹರೆಗಳನ್ನು ಅನನ್ಯವೆಂದು ಗುರುತಿಸಿ ಅದರ ಸಾಂಸ್ಕೃತಿಕ ಮಹತ್ವವನ್ನೋ ಕಲಾತ್ಮಕತೆಯನ್ನೋ ಕೊಂಡಾಡುವ ಚಿಂತಕರು ಅಂತಹ ಚಹರೆಗಳ ಐತಿಹಾಸಿಕತೆ, ಸಾಮಾಜಿಕತೆ ಹಾಗೂ ಧ್ವನಿಶಕ್ತಿಗಳನ್ನು ಗಮನಿಸುವುದಿಲ್ಲ. ವಾಸ್ತವವಾಗಿ, ಅನೇಕ ಸಲ ಇಂಥ ನಡಾವಳಿಗಳು `ತುಟಿಕಚ್ಚಿ ಹಿಡಿದ ಬಿಕ್ಕುಗಳಾಗಿರುತ್ತವೆ (ಬೇಂದ್ರೆ) ಅಸಹಾಯಕ ಆಕ್ರಂದನಗಳಾಗಿರುತ್ತವೆ. ಆದ್ದರಿಂದಲೇ ಪ್ರಭಾಕರ ಅವರು ಚಹರೆಗಳು `ಗಾಯಗಳೂ ಹೌದುಎಂದಿದ್ದಾರೆ. ಅವೆಲ್ಲವೂ ಗಾಯಗಳೆಂದು ಹೇಳದ ಎಚ್ಚರ ತೋರಿಸಿದ್ದಾರೆ.

ನನಗೆ ಉಳಿದಿರುವ ಸಣ್ಣ ಅಸಮಾಧಾನವೆಂದರೆ, ಇಷ್ಟೊಂದು ಸಮರ್ಥರಾದ ಈ ಲೇಖಕರು ಸುಮಾರು ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಇಷ್ಟು ಕಡಿಮೆ ಬರೆದಿರುವುರಲ್ಲಾ ಎನ್ನುವುದು. ಏನೂ ತಿಳಿಯದ ದುರುಳ ಅವಿವೇಕಿಗಳು ಬಂಡಿಗಟ್ಟಲೆ ಬರೆದು ಮೆರೆಯುವ ಕಾಲದಲ್ಲಿ ಈ ಪರಿಯ ಲೇಖನ ನಿಯಂತ್ರಣ ಸರಿಯಲ್ಲ. ಡಾ.ಪ್ರಭಾಕರ ಅವರನ್ನು ಇನ್ನಷ್ಟು ವಿಷಯಗಳನ್ನು ಕುರಿತು ಬರೆಯಿರೆಂದು ಕೇಳಿಕೊಳ್ಳುತ್ತಾ ಮತ್ತು ಈ ಪುಸ್ತಕವನ್ನು ಸಾವಧಾನವಾಗಿ ಓದಿರೆಂಬ ಮನವಿ ಸಲ್ಲಿಸುತ್ತೇನೆ.

Leave a Reply

Your email address will not be published.