ದಾರಾ ಶಿಕೊಹ್ ಪತ್ತೆಯಾದ..!

ದಕ್ಷಿಣ ದಿಲ್ಲಿಯ ಇಂಜಿನಿಯರ್ ಸಂಜೀವ್‍ಕುಮಾರ್ ಸಿಂಗ್ ಕಳೆದ ಹತ್ತು ವರ್ಷಗಳಿಂದ ಸತತ ಶೋಧಿಸಿ ಹುಮಾಯೂನ್ ಗೋರಿ ಸಂಕೀರ್ಣದಲ್ಲಿ ದಾರಾ ಶಿಕೊಹ್ ಶವಪೆಟ್ಟಿಗೆಯನ್ನು ಪತ್ತೆಹಚ್ಚಿದ್ದಾರೆ. ಹಲವು ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ಇತಿಹಾಸದ ಗರ್ಭದಲ್ಲಿ ಅಡಗಿಹೋಗಿದ್ದ ಮಹನೀಯನನ್ನು ಅಕ್ಷರಶಃ ಹೊರತೆಗೆದಿದ್ದಾರೆ.

ಮೋಹನದಾಸ್

ಔರಂಗಜೇಬನ ಬದಲು ದಾರಾ ಶಿಕೊಹ್ ಮೊಘಲ್ ಸಾಮ್ರಾಟನಾಗಿದ್ದಿದ್ದರೆ ಭಾರತದ ಇತಿಹಾಸವೇನಾಗುತ್ತಿತ್ತು ಎಂಬುದೊಂದು ಯಕ್ಷಪ್ರಶ್ನೆ. 1658 ರ ಮೇ 29ರ ಆ ಸಮುಘರ್ ಯುದ್ಧದಲ್ಲಿ ದಾರಾ ಗೆದ್ದಿದ್ದರೆ ದೇಶದ ಇತಿಹಾಸವೇ ಬದಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಮೊಘಲ್ ಸಾಮ್ರಾಜ್ಯ ಮುಂದುವರೆದು ಮರಾಠರ ಉಪಟಳ ಇರುತ್ತಿರಲಿಲ್ಲ. ಬ್ರಿಟಿಷರು ಕೇವಲ ಫ್ರೆಂಚ್ಡಚ್ಚರಂತೆ ವ್ಯಾಪಾರಿಗಳಾಗಿಯೇ ಹೆಸರು ಗಳಿಸಬೇಕಿತ್ತು. ದೇಶದ ವಿಭಜನೆ ಮತ್ತಿತರ ಹಲವು ಘಟನೆಗಳು ಯಾವ ಸ್ವರೂಪ ಪಡೆಯುತ್ತಿತ್ತು ಎಂದು ಹೇಳಲಾಗುತ್ತಿರಲಿಲ್ಲ.

ಆದರೆ ಅಂದು ಸಮುಘರ್ ಯುದ್ಧದಲ್ಲಿ ದಾರಾ ಶಿಕೊಹ್ ಸೋತು ಹೋಗಿದ್ದ. ಒಮ್ಮೆ ಸೋತ ನಂತರದಲ್ಲಿ ಅವನ ಭವಿಷ್ಯ ನಿರ್ಧಾರವಾಗಿತ್ತು. ಮುಂದಿನ ಒಂದು ವರ್ಷದೊಳಗೆ ಔರಂಗಜೇಬನ ಸರದಾರರು ದಾರಾನನ್ನು ಹಿಡಿದು ತಂದಿದ್ದರು. ದಾರಾನ ತಲೆಕಡಿದು ಔರಂಗಜೇಬನಿಗೆ ತೋರಿಸಿ ಖಾತ್ರಿ ಮಾಡಿಸಿದ್ದರು. ಬದುಕಿದ್ದ ದಾರಾನನ್ನು ದ್ವೇಷಿಸಿದ್ದ ಔರಂಗಜೇಬ್ ದಾರಾ ದೇಹವನ್ನು ರಕ್ತಸಿಕ್ತ ಬಟ್ಟೆಗಳೊಡನೆ ದಿಲ್ಲಿಯ ಹುಮಾಯೂನ್ ಗೋರಿಯಲ್ಲಿ ಅಕ್ಬರನ ಮಕ್ಕಳಾದ ಮುರಾದ್ ಮತ್ತು ಡಾನಿಯಲ್‍ರವರ ದೇಹವನ್ನು ಇಟ್ಟಿದ್ದ ಜಾಗದಲ್ಲಿಯೇ ಇಡಿಸಿದನೆಂದು ಪ್ರತೀತಿ. ಆದರೆ ಈ ಜಾಗಕ್ಕೆ ಯಾವುದೇ ಗುರುತುಕುರುಹುಗಳಿರಲಿಲ್ಲ. ಹೀಗೆ ಬಾದಶಹಾನಾಗಬೇಕಿದ್ದ ದಾರಾ ಶಿಕೊಹ್ ಹುಮಾಯೂನ್ ಗೋರಿ ಸಂಕೀರ್ಣದಲ್ಲ್ಲಿ ಅನಾಮಿಕ ಶವವಾಗಿಬಿಟ್ಟ. ಮುಂದೆ ಇತಿಹಾಸದ ನಾಗಾಲೋಟದಲ್ಲಿ ದಾರಾನ ಹೆಸರು ಮರೆತು ಆತನ ಶವವೂ ಅನಾಥವಾಗಿತ್ತು.

ಇಪ್ಪತ್ತನೆಯ ಶತಮಾನದಲ್ಲಿ ಇತಿಹಾಸಕಾರರು ದಾರಾನ ಜೀವನಚರಿತ್ರೆÉಯನ್ನು ಮತ್ತೆಮತ್ತೆ ಕೆದಕಿ ಹೇಳುತ್ತಿದ್ದಂತೆ ದಾರಾ ಅಂತಿಮಸ್ಥಳದ ಹುಡುಕುವಿಕೆಯೂ ಶುರುವಾಗಿತ್ತು. ದಾರಾನನ್ನು ಒಬ್ಬ ಮುಸ್ಲಿಮ್ ಎಂದೇ ಒಪ್ಪಲು ಸಿದ್ಧನಿಲ್ಲದ ಔರಂಗಜೇಬ್ ದಾರಾ ಶವವನ್ನು ಹುಮಾಯೂನ್ ಗೋರಿಯಲ್ಲಿ ಇರಿಸಿದ ವಿಷಯವನ್ನು ಬಹಳಷ್ಟು ವಿದ್ವಾಂಸರು ಒಪ್ಪುತ್ತಿರಲಿಲ್ಲ. ಮೇಲಾಗಿ ರುಂಡ ಬೇರ್ಪಡಿಸಿದ ಶರೀರಕ್ಕೆ ಒದಗಿದ ಅಂತ್ಯಕ್ರಿಯೆಯೂ ಚರ್ಚೆಗೆ ಒಳಗಾಗಿತ್ತು. ಯಾವುದೇ ಗುರುತು ವಿಶೇಷಣಗಳಿಲ್ಲದ ದಾರಾನ ಶವಪೆಟ್ಟಿಗೆಯನ್ನು ಹುಡುಕುವುದು ಸರಿಸುಮಾರು ಅಸಾಧ್ಯವೇ ಆಗಿತ್ತು. ಪರ್ಶಿಯನ್ ಕೃತಿಗಳಲ್ಲಿನ ಒಂದೆರೆಡು ಉಲ್ಲೇಖಗಳ ಹೊರತಾಗಿ ದಾರಾನ ಶವಪೆಟ್ಟಿಗೆ ಹುಮಾಯೂನ್ ಗೋರಿಯಲ್ಲಿ ಇರಬಹುದೆಂಬುದಕ್ಕೆ ಬೇರಾವುದೇ ಸಾಕ್ಷ್ಯಗಳೂ ಇರಲಿಲ್ಲ. ದಿಲ್ಲಿಯ ಹತ್ತುಹಲವು ಸಂರಕ್ಷಿತ ಸ್ಮಾರಕಗಳಲ್ಲಿ ಇದನ್ನು ಹುಡುಕುವುದಕ್ಕೆ ಅವಕಾಶವೂ ಇರಲಿಲ್ಲ.

ಈ ಹುಡುಕುವಿಕೆ ಈಗ ಕೊನೆಯಾದಂತೆ ಕಾಣುತ್ತಿದೆ. ದಕ್ಷಿಣ ದಿಲ್ಲಿ ಮುನಿಸಿಪಾಲಿಟಿ ಕಾರ್ಪೊರೇಶನ್ನಿನ ಪಾರಂಪರಿಕ ತಾಣಗಳ ಸೆಲ್‍ನಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸಂಜೀವ್‍ಕುಮಾರ್ ಸಿಂಣ್ ಈ ಸಂಶೋಧನೆ ಮಾಡಿ ತೋರಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ತಾವು ಮಾಡಿದ ಶೋಧವನ್ನು ದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್‍ನಲ್ಲಿ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳನ್ನು ಒಳಗೊಂಡು ಹಲವು ವಿದ್ವಾಂಸರ ಮುಂದೆ ಮಂಡಿಸಿದ್ದಾರೆ. ಹುಮಾಯೂನ್ ಗೋರಿ ಸಂಕೀರ್ಣದಲ್ಲಿ ದಾರಾನ ಶವಪೆಟ್ಟಿಗೆಯನ್ನು ಹುಡುಕಿದ್ದಾರೆ. ಇದು ದಾರಾನ ಶವಪೆಟ್ಟಿಗೆಯೇ ಎಂಬುದಕ್ಕೆ ಹಲವು ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ಇತಿಹಾಸದ ಗರ್ಭದಲ್ಲಿ ಅಡಗಿಹೋಗಿದ್ದ ಮಹನೀಯನನ್ನು ಅಕ್ಷರಶಃ ಹುಡುಕಿ ತೆಗೆದಿದ್ದಾರೆ.

ಇಂಜಿನಿಯರು ಮನಸ್ಸು ಮಾಡಿದರೆ

ದೆಹಲಿಯ ಸಹಾಯಕ ಎಂಜಿನಿಯರ್ ಸಂಜೀವ್‍ಕುಮಾರ್ ಸಿಂಗ್ ತಮ್ಮ ಸರ್ಕಾರಿ ಕೆಲಸದ ನಡುವೆಯೇ ಮಹತ್ವಪೂರ್ಣ ಮತ್ತು ಅನುಕರಣೀಯ ಐತಿಹಾಸಿಕ ಶೋಧನೆ ಮಾಡಿದ್ದಾರೆ. ಕರ್ನಾಟಕದ ಎಂಜಿನಿಯರುಗಳೇನಾದರೂ ಬಯಸಿದಲ್ಲಿ ಇಂತಹಾ ಸಹಸ್ರಾರು ಕರ್ನಾಟಕ ಇತಿಹಾಸದ ಸಂಶೋಧನೆಗಳು ಹುಡುಕುವಿಕೆಗೆ ಕಾದು ಕುಳಿತಿವೆ. ಅಲ್ಲವೇ..?

ಹುಮಾಯೂನನ ಗೋರಿಗುಂಬಜ್‍ನಲ್ಲಿ 140 ರಿಂದ 150 ಗೋರಿಗಳಿವೆಯಂತೆ. ಬಹುತೇಕ ಈ ಗೋರಿಗಳಿಗೆ ಯಾವುದೇ ಹೆಸರು ಗುರುತುಗಳಿಲ್ಲ. ಆದರೆ ಶಹಜಹಾನನ ಸಮಯದ ಅಲಂಕಾರವಿದ್ದ ಒಂದು ಶವಪೆಟ್ಟಿಗೆ ಅಕ್ಬರನ ಪುತ್ರರಾದ ಮುರಾದ್ ಮತ್ತು ಡಾನಿಯಲ್‍ರವರ ಶವಪೆಟ್ಟಿಗೆಯೊಂದಿಗೆ ಇತ್ತು. ಔರಂಗಜೇಬನ ಇತಿಹಾಸಕಾರನೊಬ್ಬನು ಬರೆದ ‘ಆಲಂಗೀರ್‍ನಾಮಾ’ದಲ್ಲಿ ದಾರಾನ ಶವವನ್ನು ಮುರಾದ್ ಮತ್ತು ಡಾನಿಯಲ್ ಶವದೊಂದಿಗೆ ಇಡಲಾಯಿತೆಂದು ಹೇಳಿದೆ. ಮೇಲಾಗಿ ಹುಮಾಯೂನ್ ಗೋರಿ ದಾರಾ ಕೊಲೆಯಾದ ಖಿಜ್ರಾಬಾದ್ ಕೋಟೆಯಿಂದ ಕೇವಲ ಐದು ಕಿಲೋಮೀಟರ್ ದೂರವಿದೆ. ದಾರಾನ ಕೊಲೆಯ ನಂತರ ಔರಂಗಜೇಬನಿಗೆ ಕನಿಕರ ಕಾಡಿ ಸನಿಹದಲ್ಲಿಯೇ ಇದ್ದ ಹುಮಾಯೂನ್ ಗೋರಿಯಲ್ಲಿ ಶವಪೆಟ್ಟಿಗೆ ಇಡಿಸಿರುವ ಸಾಧ್ಯತೆ ಸ್ಪಷ್ಟವಾಗಿದೆ.

ದಾರಾನ ಶವಪೆಟ್ಟಿಗೆಯನ್ನೇನೂ ತೆಗೆದಿಲ್ಲ. ಅವನ ರಕ್ತಸಿಕ್ತ ಬಟ್ಟೆಗಳು ಅಥವಾ ರುಂಡ ಬೇರ್ಪಟ್ಟ ಮುಂಡವನ್ನು ಗುರುತಿಸಿಲ್ಲ. ಆ ಶವಪೆಟ್ಟಿಗೆಯಲ್ಲಿರಬಹುದಾದ ಬೇರಾವುದೇ ಕುರುಹು ಕಂಡಿಲ್ಲ. ಆದರೂ ಈ ಶವಪೆಟ್ಟಿಗೆಯೇ ದಾರಾ ಶಿಕೊಹ್‍ನ ಅಂತಿಮ ವಿರಾಮದ ಸ್ಥಳವೆಂದು ಖಚಿತಪಡಿಸಿಕೊಳ್ಳಲಾಗಿದೆ. ಈ ಶೋಧದ ಹಿಂದಿರುವ ಸಹಾಯಕ ಎಂಜಿನಿಯರ್ ಸಂಜೀವ್ ಕುಮಾರ್ ಸಿಂಣ್‍ರವರ ಕೊಡುಗೆಯನ್ನು ಶ್ಲಾಘಿಸಲಾಗಿದೆ.

ಅಧಿಕೃತವಾಗಿ ಮೊಘಲ್ ಸಾಮ್ರಾಟನಾಗದಿದ್ದರೂ ಬೇರೆಲ್ಲಾ ಮೊಘಲ್ ಬಾದಶಹಾರಿಗಿಂತಲೂ ಹೆಚ್ಚು ವಿದ್ವಾಂಸನೂ ಹಾಗೂ ಜನಾನುರಾಗಿಯಾಗಿದ್ದ ದಾರಾ ಶಿಕೊಹ್‍ಗೆ ನಾವು ಸಲ್ಲಿಸಬೇಕಾದ ನಮನ ಬಾಕಿಯಿದೆ. ಇಂದಿನ ಕಾಲದಲ್ಲಿಯೂ ಮುಸ್ಲಿಮ್ ಉದಾರವಾದಿ ಸಾಧಕನಾಗಿಯೂ ಮತ್ತು ಸರ್ವಧರ್ಮ ಸಹಿಷ್ಣು ಮಾನವತಾವಾದಿ ಆಗಿಯೂ ದಾರಾಗೆ ಇತಿಹಾಸದಲ್ಲಿ ತನ್ನದೇ ಆದ ಸ್ಥಾನವಿದೆ. ದಾರಾನ ಹಾದಿಯಲ್ಲಿ ಹಿಂದೂಇಸ್ಲಾಮ್ ಧವ್ರ್ಮಗಳ ‘ಸಮುದ್ರ ಸಂಗಮ’ ಸಾಧ್ಯವಿದೆ. ಅಂದಿನ ದಿನಗಳಲ್ಲಿಯೇ ಉಪನಿಷತ್ತುಗಳನ್ನು ಪರ್ಶಿಯನ್ ಭಾಷೆಗೆ ತರ್ಜುಮೆ ಮಾಡಿದ್ದ ದಾರಾ ಶಿಕೊಹ್ ಮಾದರಿಯಲ್ಲಿ ಭಾರತದ ಸಮ್ಮಿಳಿತ ಇತಿಹಾಸದ ಪರಂಪರೆ ಹೇಳುವ ಹೊಸಜಾಡು ಅವಶ್ಯವಿದೆ.

ಈ ಮಧ್ಯೆ ದಿಲ್ಲಿಯಲ್ಲಿ ದಾರಾ ಶಿಕೊಹ್ ಸನ್ಮಾನಕ್ಕೆ ಸೂಕ್ತ ಗೋರಿಗುಂಬಜ್ ಒಂದನ್ನು ಕಟ್ಟಿ ಅದನ್ನು ಸೂಫಿ ಸಂತರ ಕೊಡುಗೆ ಹೇಳುವ ಆದರ್ಶ ಪ್ರವಾಸಿ ತಾಣವಾಗಿಸಬೇಕಿದೆ.

Leave a Reply

Your email address will not be published.