ದಿವಾಳಿ ಸರ್ಕಾರಕ್ಕೆ ‘ಸರ್ಕಾರಿ’ಗುತ್ತಿಗೆದಾರರ ಅಭಯ..!

ನಲವತ್ತು ಪರ್‍ಸೆಂಟ್ ಕಮಿಷನ್ ಹಾವಳಿಯಲ್ಲಿ ಗುಣಮಟ್ಟದ ಗುತ್ತಿಗೆದಾರರೆಲ್ಲಾ ಕರ್ನಾಟಕ ಸರ್ಕಾರದ ಗುತ್ತಿಗೆಗಳಿಂದ ಹಿಂದೆ ಸರಿದಿದ್ದಾರೆ. ಮೂಲದ ‘ಆಂಧ್ರ’ ಗುತ್ತಿಗೆದಾರರ ಜೊತೆಗೆ ‘ಆಂಧ್ರ ಟೈಪ್’ ಗುತ್ತಿಗೆದಾರರು ಇವರ ಜಾಗ ತುಂಬುತ್ತಿದ್ದಾರೆ.

ಮೋಹನದಾಸ್

ಯಾವುದೇ ಅಭಿವೃದ್ಧಿಶೀಲ ದೇಶದಲ್ಲಿ ಸರ್ಕಾರವೇ ಅತ್ಯಂತ ದೊಡ್ಡ ಖರೀದಿದಾರ ಹಾಗೂ ಬಳಕೆದಾರನಾಗಿರುತ್ತದೆ. ಅಭಿವೃದ್ಧಿಗೆ ಪೂರಕ ಮೂಲಸೌಲಭ್ಯ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಶಿಕ್ಷಣ ಆರೋಗ್ಯ ಮತ್ತಿತರ ಎಲ್ಲಾ ಸೌಲಭ್ಯಗಳನ್ನು ಕೊಡಮಾಡಬೇಕಾದ ಕಾರಣದಿಂದ ದೇಶಗಳ ಫೆಡೆರಲ್ ಮತ್ತು ಸ್ಥಾನೀಯ ಸರ್ಕಾರಗಳು ಖರ್ಚು ಮಾಡಲೇ ಬೇಕಾಗುತ್ತದೆ. ಸೇವೆ ಮತ್ತು ಸರಬರಾಜಿನ ವಿಷಯದಲ್ಲಿ ಸರ್ಕಾರಗಳು ಈಗಾಗಲೇ ವಿಫಲಗೊಂಡಿರುವ ಕಾರಣದಿಂದ ಖಾಸಗಿ ಸಹಭಾಗಿತ್ವದಲ್ಲಿಯೇ ಜನಪರ ಸೇವೆ ಮತ್ತು ಸಾಮಾನು ಸರಬರಾಜು ಮಾಡುವ ಗುತ್ತಿಗೆದಾರರು ಪ್ರಮುಖರಾಗುತ್ತಾರೆ.

ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಟಾಟಾ ಮತ್ತು ಬಿರ್ಲಾ ಕುಟುಂಬಗಳು ಬ್ರಿಟಿಷ್ ಸರ್ಕಾರಕ್ಕೆ ಮೂಲತಃ ಸಾಮಾನು ಸರಂಜಾಮು ಸರಬರಾಜು ಮಾಡುವ ಉದ್ದೇಶದಿಂದಲೇ ತಮ್ಮ ವಾಣಿಜ್ಯ ಪ್ರಾರಂಭಿಸಿ ನಂತರದ ದಿನಗಳಲ್ಲಿ ತಾವೇ ಉತ್ಪಾದನೆ ಮಾಡಿ ಸರಬರಾಜು ಮಾಡಲು ಅನುವಾಗುವಂತೆ ಕೈಗಾರಿಕೆಗಳನ್ನೂ ಸ್ಥಾಪಿಸಿದ್ದರು. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಈ ರೀತಿಯ ಸರ್ಕಾರಿ ಸೇವೆಸರಬರಾಜು ಮಾಡುವ ಉದ್ಯಮಗಳನ್ನೇ ಪ್ರಾರಂಭಿಸಿದ್ದ ಭಾರತಿ ಮಿತ್ತಲ್ ಕುಟುಂಬ, ಲಲಿತ್ ಸೂರಿ ಕುಟುಂಬ ಮತ್ತಿತರರು ಮೂಲತಃ ಸರ್ಕಾರಿ ಗುತ್ತಿಗೆದಾರರೇ ಆಗಿದ್ದು ಮುಂದೆ ಹಲವು ಉದ್ಯಮಗಳನ್ನೇ ಸ್ಥಾಪಿಸಿದ್ದರು. ಸರ್ಕಾರಿ ಗುತ್ತಿಗೆದಾರರಾಗಿ ಪ್ರಾರಂಭಿಸಿ ದೇಶದ ದೊಡ್ಡ ಉದ್ಯಮಪತಿಗಳಾದವರ ಉದ್ದದ ಪಟ್ಟಿಯೇ ಇದೆ.

ಸರ್ಕಾರಿ ಗುತ್ತಿಗೆ ಪಡೆಯುವುದರ ಜೊತೆಗೆ ಕಿಕ್‍ಬ್ಯಾಕ್ ಭ್ರಷ್ಟಾಚಾರ ತಳುಕು ಹಾಕಿಕೊಂಡಿದೆ. ಈ ಪಿಡುಗು ಕೇವಲ ಭಾರತಕ್ಕೆ ಮಾತ್ರವಲ್ಲ. ಪ್ರಪಂಚದ ಕೆಲವು ಮುಂದುವರೆದ ದೇಶಗಳಲ್ಲಿ ಹಾಗೂ ಬಹುತೇಕ ಹಿಂದುಳಿದ ದೇಶಗಳಲ್ಲಿ ಈ ಭ್ರಷ್ಟಾಚಾರ ತಾಂಡವವಾಡುತ್ತಿದೆ. 80 ರ ದಶಕದಲ್ಲಿ ಬೋಫೋರ್ಸ್ ಖರೀದಿಯಲ್ಲಿ ಹಾಗೂ ಇತ್ತೀಚೆಗೆ ರಫೇಲ್ ವಿಮಾನ ಖರೀದಿಯ ವಿಷಯಗಳಲ್ಲೂ ಕಿಕ್‍ಬ್ಯಾಕ್ ಇತ್ತೆಂಬ ಬಗ್ಗೆ ದೂರುಗಳು ಬಂದಿವೆ. ಈ ಸಂದರ್ಭಗಳಲ್ಲಿ ಕಮಿಷನ್ ರೂಪದಲ್ಲಿ ಕಿಕ್‍ಬ್ಯಾಕ್ ಪಡೆದರೆಂಬ ಬಗ್ಗೆ ಕೆಲವು ದಾಖಲೆಗಳೂ ಬಿಡುಗಡೆಯಾಗಿದ್ದವು. ಆದರೂ ನಿರ್ಣಾಯಕವಾಗಿ ಇದನ್ನು ಪುರಾವೆ ಸಹಿತ ರುಜುವಾತು ಮಾಡಲು ಸಾಧ್ಯವಾಗಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯವೇ.

ಸರ್ಕಾರಿ ಸೇವೆಸರಬರಾಜಿನಲ್ಲಿ ಭ್ರಷ್ಟಾಚಾರ ಕರ್ನಾಟಕಕ್ಕೆ ಹೊಸದೇನಲ್ಲ. ದೇವರಾಜ ಅರಸು ಕಾಲದಿಂದಲೂ ವ್ಯಾಪಕವಾಗಿ ಶುರುವಾಗಿದ್ದ ಈ ಪಿಡುಗು ಮುಂದೆ ಬಂಗಾರಪ್ಪರವರ ಕಾಲದಲ್ಲಿ ಅತಿಹೆಚ್ಚು ಪ್ರಚಾರ ಪಡೆದಿತ್ತು. ಮುಂದಿನ ಬಹುತೇಕ ಮುಖ್ಯಮಂತ್ರಿಗಳು ಇದನ್ನು ಹತೋಟಿಯಲ್ಲಿ ಇಡಲು ಪ್ರಯತ್ನಿಸಿದರೂ 2004 ರಿಂದ ಇದು ಸಾಂಕ್ರಾಮಿಕ ರೂಪ ತಳೆದಿದೆ. ಕಳೆದ 15 ವರ್ಷಗಳಲ್ಲಿ ಸರ್ಕಾರವೆಂದರೇ ಕಿಕ್‍ಬ್ಯಾಕ್ ಕಮಿಷನ್ ಎನ್ನುವ ಮಟ್ಟಕ್ಕೆ ಇದು ಬೆಳೆದು ನಿಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕಾಲದಲ್ಲಿ ಮುಖ್ಯಮಂತ್ರಿ ಕಚೇರಿ ಸ್ವಲ್ಪವಾದರೂ ಬಿಗುಬಿಮ್ಮಾನ ತೋರಿ ಗೌರವ ಉಳಿಸಿಕೊಂಡಿತ್ತು. ಹಾಗೆಂದ ಮಾತ್ರಕ್ಕೆ ಸಿದ್ದರಾಮಯ್ಯನವರ ಮಂತ್ರಿಗಳೇನೂ ಸಾಚಾಗಳಾಗಿರಲಿಲ್ಲ. ಹಲವಾರು ಮಂತ್ರಿಗಳ ಮೇಲೆ ಗಂಭೀರ ಆರೋಪಗಳಿದ್ದವು.

2018ರ ನಂತರದ ಸಮ್ಮಿಶ್ರ ಹಾಗೂ ಬಿಜೆಪಿ ಸರ್ಕಾರಗಳಲ್ಲಿ ಈ ಕಿಕ್‍ಬ್ಯಾಕ್ ಪಿಡುಗು ಮಾರಣಾಂತಿಕ ಮಟ್ಟಕ್ಕೆ ತಲುಪಿದೆ ಎಂದು ಹೇಳಲಾಗುತ್ತಿದೆ. 2018ರಲ್ಲಿನ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಅಂದಿನ ಕಾಂಗ್ರೆಸ್ ಸರ್ಕಾರವನ್ನು ‘ಟೆನ್ ಪರ್ಸೆಂಟ್’ ಸರ್ಕಾರವೆಂದು ಗೇಲಿ ಮಾಡಿದ್ದರು. ಆದರೆ ಮುಂದಿನ ಮೂರೂವರೆ ವರ್ಷಗಳಲ್ಲಿ ಈ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿ ಈಗ ನಮ್ಮ ಸರ್ಕಾರವನ್ನು 40% ಸರ್ಕಾರವೆಂದು ಕರೆಯುವ ಹಂತ ಬಂದಿದೆ. ಈ ಆರೋಪವನ್ನು ಕರ್ನಾಟಕದ ಗುತ್ತಿಗೆದಾರ ಸಂಘದ ಅಧ್ಯಕ್ಷರಾದ ಡಿ.ಕೆಂಪಣ್ಣನವರೇ ಪತ್ರಿಕಾ ಹೇಳಿಕೆಯಲ್ಲಿ ಹಾಗೂ ಪ್ರಧಾನಿಗೆ ಬರೆದ ದೂರಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಶೇಕಡಾ ಹತ್ತರ ಸುಮಾರಿಗೆ ಒಗ್ಗಿಹೋಗಿದ್ದ ನಮ್ಮ ವ್ಯವಸ್ಥೆ ಈಗ ಶೇಕಡಾ ನಲವತ್ತರ ಭಾರಕ್ಕೆ ಬಾಗಿ ಮುರಿದುಹೋಗುವ ಹಂತಕ್ಕೆ ಬಂದಿದೆ.

ಮುಖ್ಯಮಂತ್ರಿ ಕಾರ್ಯಾಲಯದಿಂದಲೇ ಶುರುವಾಗಿರುವ ಈ ಸಾಂಕ್ರಾಮಿಕ ಸಚಿವರೆಲ್ಲರಿಗೂ ಹಾಗೂ ಅಧಿಕಾರಿಗಳಲ್ಲಿ ಬಹುತೇಕರಿಗೆ ತಟ್ಟಿದೆ. ಯಾವುದೇ ಲಂಗುಲಗಾಮಿಲ್ಲದೆ ಹಾಗೂ ಮುಲಾಜಿಲ್ಲದೆ ಇವರು ಕಮಿಷನ್‍ಗೆ ಬೇಡಿಕೆ ಇಡುತ್ತಾರೆ. ರಾಜಾರೋಷವಾಗಿ ನಡೆಯುತ್ತಿರುವ ಈ ದಂಧೆಯಲ್ಲಿ ಸರ್ಕಾರಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲರೂ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪಾಲ್ಗೊಳ್ಳದ ಅಧಿಕಾರಿಗಳು ತಾವೇ ಬಯಸಿ ಯಾವುದೇ ಬೇಡಿಕೆಯಿರದ ಇಲಾಖೆಗಳಿಗೆ ಹೋಗಿ ಕೂರಬೇಕಾದಂತಹಾ ಸನ್ನಿವೇಶ ಸೃಷ್ಟಿಯಾಗಿದೆ.

ಕಳೆದ ಕೆಲವಾರು ವರ್ಷಗಳಲ್ಲಿ ಈ ವ್ಯಾಪಕ ಭ್ರಷ್ಟಾಚಾರ ಸರ್ಕಾರಿ ಸೇವೆಸರಬರಾಜಿನ ಮೇಲೆಯೇ ಪರಿಣಾಮ ಬೀರಿದೆ. ಹಿಂದೆ ಅಧಿಕಾರಿಗಳು ಸರ್ಕಾರಿ ಸೇವೆಗೆ ಬೇಕಾದ ಸಾಮಾನುಸರಂಜಾಮುಗಳನ್ನು ಪಟ್ಟಿ ಮಾಡುತ್ತಿದ್ದರು. ಹಾಗೆಯೇ ಸರ್ಕಾರಿ ಕೆಲಸಕ್ಕೆ ಬೇಕಾದ ಸೇವೆಗಳನ್ನು ಖಾಸಗಿಯವರಿಂದ ಗುತ್ತಿಗೆ ಮಾಡಲು ಬಯಸುತ್ತಿದ್ದರು. ಆದರೆ ಯಾವಾಗ ಕಮಿಷನ್ ಮಟ್ಟ ಶೇಕಡಾ 10 ರಿಂದ ಶೇಕಡಾ 40ಕ್ಕೆ ಏರುತ್ತಿದ್ದಂತೆ ಹಳೆಯ ಸರಬರಾಜುಸೇವೆ ಒದಗಿಸುತ್ತಿದ್ದ ಗುತ್ತಿಗೆದಾರರು ಹಿಂದೇಟು ಹಾಕಿದರು. ಶೇಕಡಾ ನಲವತ್ತರಷ್ಟು ನಗದು ನೀಡಿ ಉಳಿಕೆ ಹಣದಲ್ಲಿ ಸೇವೆಸರಬರಾಜು ಹಾಗೂ ತಮ್ಮ ಲಾಭಾಂಶ ಸರಿದೂಗಿಸುವುದು ಅವರಿಗೆ ಕಷ್ಟವಾಯಿತು. ಇವರಲ್ಲಿ ಬಹಳಷ್ಟು ಜನ ಉತ್ತಮ ಗುತ್ತಿಗೆದಾರರು ಸರ್ಕಾರಿ ಸಹವಾಸವೇ ಬೇಡವೆಂದು ಬೇರೆ ಕೆಲಸಗಳನ್ನು ಮಾಡಲು ಹೊರಟರು. ಇನ್ನು ಕೆಲವರು ಇದುವರೆಗೆ ಬಾಕಿ ಉಳಿದಿದ್ದ ಹಣವನ್ನು ಸರ್ಕಾರದಿಂದ ಪಡೆಯಲು ಹೆಣಗುತ್ತಿದ್ದಾರೆ.

ನಲವತ್ತು ಪರ್ಸೆಂಟ್ ಕಮಿಷನ್ ನೀಡುವುದು ಸುಲಭವೇನಲ್ಲ. ಈ ರೀತಿಯ ಕಮಿಷನ್ ನೀಡಬಲ್ಲ ಗುತ್ತಿಗೆದಾರರ ಸಂಖ್ಯೆಯೂ ಹೆಚ್ಚಿಲ್ಲ. ಶೇಕಡಾ ನಲವತ್ತರಷ್ಟು ಹಣವನ್ನು ನಗದು ಮಾಡಿ ಹಂಚುವ ಸಂದರ್ಭದಲ್ಲಿ ಹಾಗೂ ಈ ನಲವತ್ತು ಭಾಗಕ್ಕೆ ಕೂಡಾ ಖರ್ಚಿನ ಬಿಲ್ಲುಗಳನ್ನು ಸರಿದೂಗಿಸುವಲ್ಲಿ ಗುತ್ತಿಗೆದಾರರು ಹೆಣಗಾಡಬೇಕಾಗುತ್ತದೆ. ಬ್ಯಾಂಕಿನಿಂದ ಹಣವನ್ನು ನಗದೀಕರಿಸಿದಾಗ ಆದಾಯ ತೆರಿಗೆ ಇಲಾಖೆಯೂ ಇವರ ಮೇಲೆ ಕಣ್ಣಿಡುತ್ತದೆ. ಸಣ್ಣ ಪ್ರಮಾಣದಲ್ಲಿ ಇದನ್ನು ನಡೆಸಬಹುದು. ಆದರೆ ಇದನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕಾದಾಗ ಹಲವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ಪ್ರತಿಸ್ಪರ್ಧಿಗಳು ಪರಸ್ಪರ ದೂರು ನೀಡುತ್ತಾರೆ. ಐಟಿ, ಇಡಿ, ಎಸಿಬಿ, ಲೋಕಾಯುಕ್ತ ಮತ್ತಿತರ ಕಡೆಗಳಲ್ಲಿ ಇಂತಹಾ ಗುತ್ತಿಗೆದಾರರ ಮೇಲೆ ದೂರುಗಳು ಸಲ್ಲಿಕೆಯಾಗುತ್ತವೆ. ಮಾಹಿತಿ ಹಕ್ಕು ಕಾರ್ಯಕರ್ತರ ದಂಡೇ ಈ ಗುತ್ತಿಗೆದಾರರನ್ನು ಬ್ಲಾಕ್‍ಮೇಲ್ ಮಡಲು ಶುರುಮಾಡುತ್ತದೆ. ಮಾಧ್ಯಮದವರ ಕಾಟವಂತೂ ಹೇಳತೀರದು. ಇಷ್ಟೆಲ್ಲಾ ಉಪಟಳಗಳನ್ನು ತಡೆದುಕೊಂಡು ವ್ಯವಹಾರ ಕುದುರಿಸಿದರೆ ಯಾವುದೋ ಇಲಾಖೆಯಲ್ಲಿ ಯಾವುದೋ ‘ಪ್ರಾಮಾಣಿಕ’ ಅಧಿಕಾರಿಯೊಬ್ಬ ಕಡತಕ್ಕೆ ಕೊಕ್ಕೆ ಹಾಕಿಬಿಡುತ್ತಾನೆ. ಈ ಕೊಕ್ಕೆ ಹಾವಳಿಯಿಂದ ಪಾರಾಗಲು ಮತ್ತೆ ಮಂತ್ರಿಮುಖ್ಯಮಂತ್ರಿಯ ಬಳಿಯೇ ಹೋಗಬೇಕಾಗುತ್ತದೆ. ಅಲ್ಲಿ ಮತ್ತಷ್ಟು ಹಣ ನೀಡಿ ಈ ಪ್ರಾಮಾಣಿಕ ಅಧಿಕಾರಿಯನ್ನು ವರ್ಗಾವಣೆ ಮಾಡಿಸಬೇಕು.

ಎಲ್ಲ ಅಡೆತಡೆಗಳನ್ನು ದಾಟಿ ಕಾರ್ಯಾದೇಶ ಪಡೆದು ಸೇವೆಸರಬರಾಜು ಮಾಡಬಹುದು. ಆದರೆ ಗುತ್ತಿಗೆದಾರರ ಬಿಲ್ಲು ಬಟವಾಡೆಗೆ ಬರುವ ಸಮಯಕ್ಕೆ ಸದರಿ ಇಲಾಖೆಯಲ್ಲಿ ಅಥವಾ ಒಟ್ಟಾರೆ ಸರ್ಕಾರದಲ್ಲಿಯೇ ಹಣ ಇಲ್ಲದೇ ಇರಬಹುದು. ಈಗಾಗಲೇ ಗುತ್ತಿಗೆಯ ಎಂಬತ್ತರಿಂದ ತೊಂಬತ್ತರಷ್ಟು ಖರ್ಚು ಮಾಡಿರುವ ಗುತ್ತಿಗೆದಾರ ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡಿಸಿಕೊಳ್ಳದೇ ಹೋದರೆ ಬಡ್ಡಿಚಕ್ರಬಡ್ಡಿಯ ಸುಳಿಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಈಗಾಗಲೇ ಅಡವಿಟ್ಟಿರುವ ಮನೆಹೊಲನಿವೇಶನಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹಣ ಬಿಡುಗಡೆ ಮಾಡಿಸಿಕೊಳ್ಳಲು ಮತ್ತೆ ಹಣಕಾಸು ಇಲಾಖೆ, ಮಂತ್ರಿ, ಮುಖ್ಯಮಂತ್ರಿಯ ಮನೆಯ ಮುಂದೆ ಹೋಗಿ ನಿಲ್ಲಬೇಕಾಗುತ್ತದೆ.

ಈ ಮಧ್ಯೆ ಯಾವುದೇ ಗುತ್ತಿಗೆದಾರ ತಾನು ಸಿರಿವಂತ ಹಾಗೂ ರಾಜಕೀಯ ಪ್ರಭಾವಿ ಎಂದು ತೋರಿಸಿಕೊಳ್ಳುತ್ತಿರಬೇಕು. ಅದಕ್ಕಾಗಿ ಸಾಲಸೋಲ ಮಾಡಿಯೋ ಬೆಂಝ್ ಕಾರಿನಲ್ಲಿ ಓಡಾಡಬೇಕು ಹಾಗೂ ಪಂಚತಾರಾ ಶೈಲಿಯಲ್ಲಿ ಆತಿಥ್ಯ ನೀಡುತ್ತಿರಬೇಕು. ಈ ಅಭಾವದ ಐಶಾರಾಮಿ ಶೈಲಿಗೆ ಗುತ್ತಿಗೆದಾರ ತಾನು ಗಳಿಸಿದ ಲಾಭಾಂಶದ ಪಾಲನ್ನು ವ್ಯಯಮಾಡಲೇಬೇಕು.

ಈ ಎಲ್ಲ ಕಾರಣಗಳಿಂದ ಗುಣಮಟ್ಟದ ಗುತ್ತಿಗೆದಾರರು ಕರ್ನಾಟಕ ಸರ್ಕಾರದ ಗುತ್ತಿಗೆಗಳನ್ನೇ ಬಹಿಷ್ಕರಿಸುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಯಾವುದೇ ಸೇವೆಸರಬರಾಜು ಮಾಡದೆ ಕೇವಲ ಬಿಲ್ಲು ಮಾತ್ರ ಮಾಡಿ ಹಣ ಗಳಿಸಬಲ್ಲ ‘ಆಂಧ್ರ’ ಗುತ್ತಿಗೆದಾರರೇ ಉಳಿದುಕೊಂಡಿದ್ದಾರೆ. ನಲವತ್ತು ಪರ್ಸೆಂಟ್ ಆಸೆಯಲ್ಲಿ ಸರ್ಕಾರಗಳು ತಮಗೆ ಬೇಕಾದ ವಸ್ತುಸೇವೆಗಳನ್ನು ಪಡೆಯಲು ವಿಫಲರಾಗಿದ್ದಾರೆ. ಬದಲಿಗೆ ಈ ‘ಆಂಧ್ರ’ ಗುತ್ತಿಗೆದಾರರು ಯಾವ ಸೇವೆ ನೀಡಲು ಸಿದ್ಧರಿದ್ದಾರೆಯೋ ಅಥವಾ ಯಾವ ಸಾಮಾನು ಸರಬರಾಜು ಮಾಡಲು ಸಿದ್ಧರಿದ್ದಾರೆಯೋ, ಆ ಸೇವೆಸಾಮಾನುಗಳನ್ನು ಪಡೆಯಲು ಮುಂದೆ ಬಂದಿದ್ದಾರೆ. ಇದರಿಂದ ಜನರಿಗೆ ಬೇಡದ ಹಾಗೂ ಅನುಪಯುಕ್ತ ಸೇವೆಸರಂಜಾಮುಗಳನ್ನು ಆಯ್ಕೆ ಮಾಡಲಾಗುತ್ತಿದೆ.

ಈಗಿರುವ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ದೀಪ ಹಾಕಲು ಸರ್ಕಾರಗಳ ಬಳಿ ದುಡ್ಡಿಲ್ಲ. ಆದರೆ ಹಳ್ಳಿಹಳ್ಳಿಗಳಲ್ಲಿಯೂ ಹೈ ಮಾಸ್ಟ್ ವಿದ್ಯುತ್ ಕಂಬ ಹಾಕಲಾಗುತ್ತಿದೆ. ಅದೇ ರೀತಿಯಲ್ಲಿ ಎಲ್ಲೆಲ್ಲಿಯೂ ಸೌರ ವಿದ್ಯುತ್ ನೆಪದಲ್ಲಿ ಕೋಟ್ಯಾಂತರ ಖರ್ಚು ಮಾಡಲಾಗುತ್ತಿದೆ. ಒಂದು ವರ್ಷ ಹೊಳೆಯಿಂದ ಹೂಳೆತ್ತಿ ಪಕ್ಕಕ್ಕೆ ಹಾಕಿ ಬಿಲ್ಲು ಸಲ್ಲಿಸಿದರೆ ಮುಂದಿನ ವರ್ಷ ಅದೇ ಹೂಳನ್ನು ಬಳಸಿ ಹೊಳೆಯ ದಡದಲ್ಲಿ ಬಂಡ್ ನಿರ್ಮಾಣವಾಗುತ್ತದೆ. ಒಂದು ವರ್ಷ ಗೋಶಾಲೆ ನಿರ್ಮಾಣಕ್ಕೆ ಹಣ ಬಿಡುಗಡೆಯಾದರೆ ಮುಂದಿನ ವರ್ಷದಲ್ಲಿ ಆ ಕಾಗದದ ಗೋಶಾಲೆಯಲ್ಲಿ ಇರದ ರಾಸುಗಳಿಗೆ ಮೇವಿನ ಸರಬರಾಜಿನ ಬಿಲ್ಲುಗಳು ರೆಡಿಯಾಗುತ್ತವೆ. ಪ್ರತಿವರ್ಷವೂ ರಸ್ತೆ ಪಕ್ಕದ ಪಾದಚಾರಿ ರಸ್ತೆಗೆ ಹಾಕಿದ ಕಲ್ಲುಬ್ಲಾಕ್‍ಗಳನ್ನು ಬದಲಿಸಲಾಗುತ್ತದೆ. ಗವರ್ನೆನ್ಸ್ ಹೆಸರಿನಲ್ಲಿ ಪ್ರತಿವರ್ಷವೂ ಹೊಸಹೊಸ ವೆಬ್‍ಸೈಟ್ ತಯಾರಿಗೆ ಹಣ ಬಿಡುಗಡೆಯಾಗುತ್ತದೆ. ವಿದ್ಯುತ್ ಮತ್ತು ಕುಡಿಯುವ ನೀರಿನ ನಿಗಮಗಳಲ್ಲಿ ಪೋಲಾಗುವ ಹಣಕ್ಕೆ ಲೆಕ್ಕವೇ ಇಲ್ಲ.

ನಲವತ್ತು ಪರ್‍ಸೆಂಟ್ ಕಮಿಷನ್ ಹಾವಳಿಯಲ್ಲಿ ಗುಣಮಟ್ಟದ ಗುತ್ತಿಗೆದಾರರೆಲ್ಲಾ ಕರ್ನಾಟಕ ಸರ್ಕಾರದ ಗುತ್ತಿಗೆಗಳಿಂದ ಹಿಂದೆ ಸರಿದಿದ್ದಾರೆ. ಮೂಲದ ‘ಆಂಧ್ರ’ ಗುತ್ತಿಗೆದಾರರ ಜೊತೆಗೆ ‘ಆಂಧ್ರ ಟೈಪ್’ ಗುತ್ತಿಗೆದಾರರು ಇವರ ಜಾಗ ತುಂಬುತ್ತಿದ್ದಾರೆ. ಗುತ್ತಿಗೆ ಪಡೆಯುವ ಮೊದಲೇ 15 ರಿಂದ 20 ಪರ್ಸೆಂಟ್ ಕಮಿಷನ್ ನೀಡಲು ಸಿದ್ಧರಾಗಿರುವ ಇವರು ಒಟ್ಟು ಶೇಕಡಾ ನಲವತ್ತು ಕಮಿಷನ್ ನೀಡಲೂ ಸಿದ್ಧ. ಇವತ್ಯಾರೂ ಸ್ವತಃ ಕಾಮಗಾರಿಸರಬರಾಜು ಮಾಡುವವರಲ್ಲ. ಇವರ ಕೆಲಸವೇನಿದ್ದರೂ ಬೆಳಿಗ್ಗೆಯಿಂದ ರಾತ್ರಿಯವರೆಗೆ ಮಂತ್ರಿಅಧಿಕಾರಿಇಂಜಿನಿಯರುಗಳ ಎಡತಾಗಿ ಗುತ್ತಿಗೆ ಪಡೆಯುವುದಷ್ಟೇ.

ಒಮ್ಮೆ ಗುತ್ತಿಗೆ ಪಡೆದ ಮೇಲೆ ಈ ‘ಸರ್ಕಾರಿ’ ಗುತ್ತಿಗೆದಾರರು ಬೇರ್ಯಾವುದೋ ಗುತ್ತಿಗೆದಾರರಿಗೆ ತುಂಡುಗುತ್ತಿಗೆ ನೀಡುತ್ತಾರೆ. ಕೆಲವರು ಇಡೀ ಗುತ್ತಿಗೆಯನ್ನೇ ಸಾರಾಸಗಟಾಗಿ ಬೇರೊಬ್ಬ ‘ಖಾಸಗಿ’ ಗುತ್ತಿಗೆದಾರರನಿಗೆ ನೀಡುತ್ತಾರೆ. ಒಟ್ಟು ಮೌಲ್ಯದ ಶೇಕಡಾ 50 ರೊಳಗೆ (ತಮ್ಮ ಲಾಭಾಂಶವೂ ಸೇರಿ) ಈ ಖಾಸಗಿ ಗುತ್ತಿಗೆದಾರರು ಸೇವೆಸರಬರಾಜು ನಿರ್ವಹಣೆ ಮಾಡುತ್ತಾರೆ. ‘ಸರ್ಕಾರಿ’ ಗುತ್ತಿಗೆದಾರ ತನ್ನ ಶೇಕಡ ಹತ್ತರ ಲಾಭಾಂಶ ಉಳಿಸಿಕೊಂಡು ಉಳಿದ ಶೇಕಡಾ ನಲವತ್ತರ ಗುತ್ತಿಗೆ ಮೌಲ್ಯವನ್ನು ಮಂತ್ರಿಶಾಸಕಅಧಿಕಾರಿಎಂಜಿನಿಯರುಗಳಿಗೆ ಹಂಚುತ್ತಾನೆ.

ಮೇಲ್ಕಂಡ ಗುತ್ತಿಗೆ ಪದ್ಧತಿ ನೇರ ಗುತ್ತಿಗೆಗಳಿಗೆ ಹಾಗೂ ಸುಲಭದ ಸರಬರಾಜಿಗೆ ಅನ್ವಯವಾಗುತ್ತದೆ. ಈ ಗುತ್ತಿಗೆಗಳಲ್ಲಿ ಯಾವುದೇ ತಾಂತ್ರಿಕ ತೊಡಕು ಅಥವಾ ಸಂಕೀರ್ಣತೆ ಇರುವುದಿಲ್ಲ. ಇಂತಹಾ ಗುತ್ತಿಗೆದಾರರು ಸಂಕೀರ್ಣ ಗುತ್ತಿಗೆಗಳಿಗೆ ಕೈ ಹಾಕುವುದಿಲ್ಲ. ಅವರೇನಿದ್ದರೂ ಆರೋಗ್ಯ ಇಲಾಖೆಗೆ ಔಷಧ ಪೂರೈಕೆ ಅಥವಾ ಶಿಕ್ಷಣ ಇಲಾಖೆಗೆ ಸಮವಸ್ತ್ರ ಪಠ್ಯಪುಸ್ತಕ ಸರಬರಾಜಿನಂತಹಾ ಬಾಬತ್ತನ್ನೇ ಹುಡುಕುತ್ತಾರೆ. ಸಂಕೀರ್ಣ ಮತ್ತು ತಾಂತ್ರಿಕ ತೊಡಕುಗಳಿರುವ ಗುತ್ತಿಗೆ ನಿರ್ವಹಿಸಬಲ್ಲ ಗುತ್ತಿಗೆದಾರರೇ ಕಣ್ಮರೆಯಾಗಿದ್ದಾರೆ. ಇಂತಹಾ ಹಲವು ಗುತ್ತಿಗೆದಾರರ ಹಲವು ಹಳೆಯ ಮೊತ್ತಗಳು ಇನ್ನೂ ಬಾಕಿ ಉಳಿದಿವೆ.

ಬೆಂಗಳೂರಿನಲ್ಲಿ ವೈಟ್ ಟಾಪಿಂಗ್ ಮಾಡಲು ನಿಮಗೆ ಹಲವು ಗುತ್ತಿಗೆದಾರರು ಸಿಗುತ್ತಾರೆ. ಆದರೆ ಉತ್ತರದಕ್ಷಿಣ ಅಥವಾ ಪೂರ್ವಪಶ್ಚಿಮ ಕಾರಿಡಾರ್‍ನಂತಹಾ ಪ್ರಾಜೆಕ್ಟ್ ಮಾಡಲು ಯಾರೂ ಮುಂದೆ ಬರುವುದಿಲ್ಲ. ಏಕೆಂದರೆ ಇದಕ್ಕೆ ಪರಿಸರವಾದಿಗಳು, ನ್ಯಾಯಾಲಯಗಳು, ಮಾಹಿತಿ ಹಕ್ಕಿನ ಕಾರ್ಯಕರ್ತರು, ಮಾಧ್ಯಮದವರು ಹೆಜ್ಜೆಹೆಜ್ಜೆಗೂ ಅಡೆತಡೆ ಒಡ್ಡುತ್ತಾರೆಂದು ಎಲ್ಲರಿಗೂ ಗೊತ್ತು. ಈ ಅಡೆತಡೆಗಳನ್ನು ನಿವಾರಿಸುವ ಕ್ಷಮತೆ ಮತ್ತು ಸಾಮಥ್ರ್ಯ ಇಂದಿನ ಸರ್ಕಾರಗಳಿಗಿಲ್ಲ. ಮೇಲಾಗಿ ನಮ್ಮ ನ್ಯಾಯಿಕ ವ್ಯವಸ್ಥೆ ಗೋಜಲಾಗಿ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವಂತಿಲ್ಲ. ಒಮ್ಮೆ ಇಂತಹಾ ಯಾವುದೇ ಗುತ್ತಿಗೆ ಪಡೆಯಲು ಯಾವುದೇ ಗುತ್ತಿಗೆದಾರ ಹತ್ತಿಪ್ಪತ್ತು ಪರ್ಸೆಂಟ್ ಕಮಿಷನ್ ನೀಡಿ ಸಿಕ್ಕಿಹಾಕಿಕೊಂಡರೆ ಅದರಿಂದ ಹೊರಬರಲು ಎಂಟುಹತ್ತು ವರ್ಷಗಳೇ ಕಳೆಯುತ್ತದೆ. ಹಾಗಾಗಿ ಕ್ಲಿಷ್ಟ ಮತ್ತು ಸಂಕೀರ್ಣ ಗುತ್ತಿಗೆ ಮಾಡಲು ಯಾರೂ ಮುಂದೆ ಬರದಂತಾಗಿ ನಮ್ಮ ಸರ್ಕಾರಗಳು ಕೇವಲ ಚಪ್ಪಡಿ ಕಲ್ಲು ಬದಲಾಯಿಸುವ ಅಥವಾ ವೈಟ್ ಟಾಪಿಂಗ್ ಮಾಡಿಸುವ ಸರ್ಕಾರಗಳಾಗಿವೆ.

ಮೊದಲು ತಮ್ಮ ಕ್ಷಮತೆ ಕಳೆದುಕೊಂಡ ಸರ್ಕಾರಗಳು ತಮ್ಮ ಕಮಿಷನ್ ದುರಾಸೆಯಲ್ಲಿ ಗುತ್ತಿಗೆದಾರರ ಕ್ಷಮತೆ ಮತ್ತು ಸಾಮಥ್ರ್ಯವನ್ನು ಹಾಳುಮಾಡಿವೆ. ‘ಸರ್ಕಾರಿ’ ಗುತ್ತಿಗೆದಾರರು ಮಾಡಬಯಸುವ ಕಾಮಗಾರಿಗಳನ್ನೇ ಕೈಗೆತ್ತಿಕೊಂಡು ಸಾರ್ವಜನಿಕ ಕಾಮಗಾರಿಗಳ ರೂಪುರೇಷೆಗಳನ್ನು ನಗೆಪಾಟಲಾಗಿಸಿವೆ. ಇದೇ ರೀತಿಯಲ್ಲಿ ಮುಂದುವರೆದರೆ ವಿಧಾನಸೌಧದ ನಿರ್ವಹಣೆಯನ್ನು, ಮುಖ್ಯಮಂತ್ರಿ ಕಾರ್ಯಾಲಯವನ್ನು, ರಾಜಭವನದ ತೋಟಆಳುಕಾಳು ನಿರ್ವಹಣೆಯನ್ನು, ಹಣಕಾಸು ಇಲಾಖೆಯ ಬಜೆಟ್ ತಯಾರಿಯ ಪ್ರಕ್ರಿಯೆಯನ್ನೂ ಸರ್ಕಾರಗಳು ‘ಸರ್ಕಾರಿ’ ಗುತ್ತಿಗೆದಾರರಿಗೆ ಬಿಟ್ಟುಕೊಡಬಹುದು.

ಮುಂದಿನ ದಿನಗಳಲ್ಲಿ ಅಬಕಾರಿ ವಸೂಲಿ, ಜಿಎಸ್‍ಟಿ ಸಂಗ್ರಹ, ಮೋಟಾರು ವಾಹನಗಳ ಶುಲ್ಕ ವಸೂಲಾತಿಯನ್ನು ಹರಾಜು ಹಾಕಿ ಬಂದಷ್ಟು ಗೋಚಿಕೊಂಡು ತಿಂದು ತೇಗಿ ಒರೆಸಿಕೊಂಡು ಹೋಗಬಹುದು. ಈಗಾಗಲೇ ಮಂತ್ರಿ ಪದವಿಯನ್ನು ಗುತ್ತಿಗೆ ಪಡೆಯುತ್ತಿರುವಂತೆ ಮುಂದೆ ಮುಖ್ಯಮಂತ್ರಿ ಹುದ್ದೆಯನ್ನೇ ಯಾರಾದರೂ ಗುತ್ತಿಗೆಗೆ ಕೇಳಬಹುದು.

ಇದು ಹೀಗೆಯೇ ಮುಂದುವರೆದರೆ ಏನಾಗಬಹುದು..? ಇದಕ್ಕೆ ಪರಿಹಾರವಿದೆಯೇ..? ಪರಿಹಾರ ನೀಡುವವರಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ನೀವೇ ಉತ್ತರ ನೀಡಬೇಕು.

Leave a Reply

Your email address will not be published.