ದುರ್ಬಲ ಕಾನೂನಿಗೆ ಸೀಮಿತ ವ್ಯಾಪ್ತಿ!

ವಿಪರ್ಯಾಸವೆಂದರೆ ಮೌಢ್ಯಾಚರಣೆ ಕಾನೂನನ್ನು ವಿರೋಧಿಸಿದ ಭಾರತೀಯ ಜನತಾ ಪಕ್ಷವೇ 2020ರಲ್ಲಿ ಇದನ್ನು ಜಾರಿಗೆ ತಂದಿರುವುದು!

ನರೇಂದ್ರ ನಾಯಕ್

ಕಾನೂನುಗಳಿಂದ ಮೂಢನಂಬಿಕೆಗಳನ್ನು ಹೋಗಲಾಡಿಸುವುದು ಬಹಳ ಕಷ್ಟ. ಮೂಢನಂಬಿಕೆಗಳನ್ನು ದೂರ ಮಾಡಲು ಜಾಗೃತಿ, ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವಗಳನ್ನು ಬೆಳೆಸುವುದರಿಂದ ಮಾತ್ರ ಸಾಧ್ಯ. ಉದಾಹರಣೆಗೆ ಸಂವಿಧಾನ 51 ಎಎಚ್ 1976ರಲ್ಲಿ ಆಗಿರುವ ತಿದ್ದುಪಡಿ. ಇದರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು, ಪ್ರಶ್ನಿಸುವ ಪ್ರವೃತ್ತಿಯನ್ನು ಹಾಗೂ ಮಾನವವಾದವನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಈ ತಿದ್ದುಪಡಿಯು ಬಂದು ನಾಲ್ಕು ದಶಕಗಳು ಕಳೆದರೂ, ನಮ್ಮ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ!

2017ರ ಅಧಿಸೂಚನೆಯಲ್ಲಿ ಕೆಲವು ಅತಿಅಮಾನುಷ ಹಾಗೂ ಕ್ರೂರ ಪದ್ಧತಿಗಳನ್ನು ನಿಷೇಧಿಸುವ ಹೇಳಲಾಗಿತ್ತೇ ಹೊರತು, ಅದು ಮೂಢನಂಬಿಕೆಗಳನ್ನು ನಿವಾರಿಸುವಂತಹದಲ್ಲ! ಆದರೆ, ಏನೂ ಇಲ್ಲದಿರುವುದಕ್ಕಿಂತ ಸ್ವಲ್ಪವಾದರೂ ಇದ್ದರೆ ಉತ್ತಮ! ಈ ನಿಟ್ಟಿನಲ್ಲಿ 2020ರಲ್ಲಿ ಕಾನೂನಾದರೂ, ಇವತ್ತಿನವರೆಗೆ ಅದರ ಬಗ್ಗೆ ಏನೂ ನಡೆದದ್ದು ಕಾಣುವುದಿಲ್ಲ! ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡಾಗ ಈ ಕಾನೂನಿನಡಿಯಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಹೇಳಿಕೆ ಕೊಟ್ಟಿದ್ದರು. ಆದರೆ ಅಂತಹ ಕ್ರಮಗಳೇನೂ ಕಂಡು ಬರುತ್ತಿಲ್ಲ.

ಮೌಢ್ಯಾಚರಣೆ ನಿಷೇಧ ಕಾಯಿದೆಯು ಒಂದು ಚಿಕ್ಕ ಹೆಜ್ಜೆಯಷ್ಟೇ. ಅದಕ್ಕೆಯೇ ಇಷ್ಟರಮಟ್ಟಿಗೆ ವಿರೋಧ ಬಂದಿರುವಾಗ ಮುಂದೇನು ನಡೆಯಬಹುದು? ಮುಖ್ಯವಾಗಿ ಕೇಂದ್ರರಾಜ್ಯದ ಆಡಳಿತದಲ್ಲಿರುವ ಪಕ್ಷಗಳು ಜನರಿಂದ ಪ್ರಶ್ನಿಸದೆ ಹೇಳಿದ್ದನ್ನು ಒಪ್ಪಿಕೊಳ್ಳಬೇಕೆಂಬ ಮನೋಸ್ಥಿತಿಯನ್ನು ಉಂಟು ಮಾಡುವಂತಹವು. ಹೀಗಿರುವಾಗ ಅವರಿಂದ ಎಷ್ಟರಮಟ್ಟಿಗೆ ಈ ಕಾಯಿದೆಯ ಅನುಷ್ಠಾನವಾದೀತು?

ನಂಬಿಕೆ ಮತ್ತು ಮೂಢನಂಬಿಕೆಗಳ ಮಧ್ಯೆ ವರ್ಗೀಕರಣ ಮಾಡುವುದು ಬಹಳ ಕಷ್ಟ. ಒಂದು ವರ್ಗದ ನಂಬಿಕೆಯು ಇನ್ನೊಂದು ವರ್ಗಕ್ಕೆ ಮೂಢನಂಬಿಕೆಯಾಗಿ ಕಾಣುವುದು! ತತ್ಕಾರಣ, ಈ ಬಗ್ಗೆ ಸ್ಪಷ್ಟವಾದ ಕಾನೂನು ರಚಿಸುವುದು ಅಸಾಧ್ಯ. ಕರ್ನಾಟಕದ ಮೌಢ್ಯಾಚರಣೆ ನಿಷೇಧ ಕಾಯಿದೆಗೆ ಎರಡು ಕರಡುಗಳು ರಚಿತವಾಗಿದ್ದವು. ಆದರೆ, ಕೊನೆಗೆ ಆದದ್ದು ಇವೆರಡನ್ನೂ ತುಂಬಾ ಬದಲಾಯಿಸಿ ಬಂದದ್ದೇ ಒಂದು ಬಹಳ ದುರ್ಬಲವಾದ ಕಾಯಿದೆ. ಹೀಗಿರುವಾಗ ಸ್ಪಷ್ಟವಾದದ್ದನ್ನು ಹೇಗೆ ನಾವು ಅಪೇಕ್ಷಿಸಲು ಸಾಧ್ಯ? ಮಹಾರಾಷ್ಟ್ರದ ಕಾಯಿದೆಗಾಗಿ ನರೇಂದ್ರ ದಾಭೋಳ್ಕರ್ ಅವರು ದಶಕಗಳ ಕಾಲ ಒದ್ದಾಡಬೇಕಾಯಿತು. ಕೆಳಮನೆಯಲ್ಲಿ ಅಂಗೀಕೃತವಾದ ಕಾಯಿದೆ, ಪರಿಷತ್ತಿನಲ್ಲಿ ನಿಂತುಹೋಯಿತು. ಪ್ರಾಯಶಃ ಅವರ ಕೊಲೆಯಾಗದಿದ್ದಲ್ಲಿ, ಆ ಕಾನೂನು ಬರುತ್ತಲೇ ಇರಲಿಲ್ಲ!

ನನ್ನ ಸ್ಪಷ್ಟವಾದ ಅನಿಸಿಕೆಯೆಂದರೆ, ಮೂಢನಂಬಿಕೆಗಳನ್ನು ನಿವಾರಿಸಲು ಶಿಕ್ಷಣ (ನೈಜ ಶಿಕ್ಷಣ)ದಿಂದ ಮಾತ್ರ ಸಾಧ್ಯ. ಮಕ್ಕಳಲ್ಲಿ ಚಿಕ್ಕವಯಸ್ಸಿನಿಂದಲೇ ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಬೇಕು. ವೈಜ್ಞಾನಿಕ ದೃಷ್ಟಿಕೋನವನ್ನು ಉಂಟು ಮಾಡಬೇಕು. ಅವರಿಗೆ ಯಾವುದೇ ವಿಷಯವನ್ನು ಸ್ವೀಕರಿಸುವ ಮೊದಲು ಅದನ್ನು ವಿಚಾರದ ಒರೆಗಲ್ಲಿಗೆ ತಿಕ್ಕಿ ಹಚ್ಚಿ, ಸತ್ಯವೆಂದು ಕಂಡುಬಂದಲ್ಲಿ ಮಾತ್ರ ಒಪ್ಪಿಕೊಳ್ಳಬೇಕೆಂದು ಕಲಿಸಬೇಕು. ಆದರೆ, ಇದು ಸಾಧ್ಯವೇ? ಹೆತ್ತವರು, ಶಿಕ್ಷಕರು, ಸಮಾಜವು ಸುಳ್ಳುಗಳ ಮೇಲೆ, ಮೌಢ್ಯಗಳ ಮೇಲೆ ನಿಂತಿರುವಾಗ ಮಕ್ಕಳು ಹೇಗೆ ತಾನೆ ಇದನ್ನು ಕಲಿತಾರು?

ಮಕ್ಕಳು ಪ್ರಶ್ನಿಸಿದಲ್ಲಿ ಬಲವಂತವಾಗಿ, ಅವರ ಬಾಯಿ ಮುಚ್ಚಿಸಲಾಗುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಉದಾಹರಣೆಗಾಗಿ ಸ್ಕ್ಯಾಂಡಿನೇವಿಯನ್ ದೇಶಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಪ್ರಶ್ನಿಸುವ ಮನೋವೃತ್ತಿಯನ್ನು ಕಲಿಸಲಾಗುತ್ತದೆ. ಇದರಲ್ಲಿ, ಮತಧರ್ಮಾಚರಣೆಗಳೂ ಇರುತ್ತವೆ. ಇಂತಹದನ್ನು ಈ ದೇಶದಲ್ಲಿ ತಂದರೆ, ರಕ್ತಪಾತವಾದೀತು! ಪ್ರತಿಯೊಬ್ಬ ಜಾತಿಧರ್ಮದ ಅನುಯಾಯಿಗಳು ತಮ್ಮದೇ ಶ್ರೇಷ್ಠವೆಂಬ ಭ್ರಮೆಯಲ್ಲಿರುವ ಇಲ್ಲಿ, ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸುವುದು ಬಹಳ ಕಷ್ಟ.

ಶಿಕ್ಷಣ ವ್ಯವಸ್ಥೆಯಂತೂ, ಸರಕಾರಿಯಾಗಲಿ, ಖಾಸಗಿಯಾಗಲಿ ಎಂತಹ ಶಕ್ತಿಗಳ ಕಪಿಮುಷ್ಟಿಯಲ್ಲಿದೆ! ಹೀಗಿರುವಾಗ ಮಕ್ಕಳಲ್ಲಿ ನೈಜವಾದ ಶಿಕ್ಷಣವನ್ನು ತರುವುದು ಬಹಳ ಕಷ್ಟವಾಗಿ ಕಾಣುತ್ತದೆ. ಆದರೂ ಪ್ರಯತ್ನಿಸುತ್ತಲೇ ಇರುತ್ತೇವೆ.

ಕಾನೂನುಗಳ ದುರ್ಬಳಕೆಯಾಗುವುದು ಸಹಜ. ಆದರೆ, ಇಂತಹ ಮೌಢ್ಯಾಚರಣೆ ನಿಷೇಧ ಕಾನೂನುಗಳನ್ನು ದುರ್ಬಳಕೆ ಮಾಡುವುದು ಕಷ್ಟ. ತತ್ಕಾರಣ, ಇದರ ದುರ್ಬಳಕೆಯಾಗುವದೆಂಬ ಭಯದಿಂದ ಇದನ್ನು ನಿಲ್ಲಿಸುವ ಅಗತ್ಯವಿಲ್ಲ.

ಮೌಢ್ಯಾಚರಣೆ ನಿಷೇಧ ಕಾನೂನು ಈಗಿನವರೆಗೆ ಬಂದಿರುವುದು ಮಹಾರಾಷ್ಟ್ರದಲ್ಲಿ ಮಾತ್ರ. ಅಲ್ಲಿ ಅದರ ಬಹಳ ಉತ್ತಮವಾದ ಬಳಕೆಯಾಗುತ್ತಿದೆ. ಇದು ಒಂದೇ ಮತಧರ್ಮಾಚರಣೆಗೆ ಸೀಮಿತವಾದ ದ್ದೆಂದು ಹೇಳುವವರು ಅಲ್ಲಿಯ ಅಂಕಿಸಂಖ್ಯೆಗಳನ್ನು ಗಮನಿಸುವುದು ಅಗತ್ಯ. ಜನಸಂಖ್ಯೆಯ ಶೇಕಡಾವಾರಿಗಿಂತ ಹೆಚ್ಚಿನ ಮಟ್ಟದಲ್ಲಿ ಇದು ಕೆಲವರ ವಿರುದ್ಧ ಉಪಯೋಗವಾಗಿದೆ! ದೇಶದ ಇತರ ರಾಜ್ಯಗಳಲ್ಲಿ ಇಂತಹ ಕಾನೂನು ಬೇಕೆಂಬ ಬೇಡಿಕೆ ಬಂದಿದೆಯೇ ಹೊರತು ರಚಿತವಾಗಿಲ್ಲ. ಕೆಲವು ರಾಜ್ಯಗಳಲ್ಲಂತೂ ಈ ಮಾಟಮಂತ್ರಗಳ ನಿಷೇಧಕ್ಕಾಗಿರುವ ಕಾಯಿದೆಯಡಿಯಲ್ಲಿ ಇವುಗಳಿಂದ ತೊಂದರೆಗೀಡಾದವರಿಗೆಯೇ ಬಂಧನದಂತಹ ಶಿಕ್ಷೆಯಿದೆ! ಅವರ ಸುರಕ್ಷೆಗಾಗಿ ಹೀಗೆ ಮಾಡುವುದಂತೆ!

ತತ್ಕಾರಣ, ಇಂತಹ ಮೌಢ್ಯಾಚರಣೆ ನಿಷೇಧ ಕಾನೂನು ಕಾಯಿದೆಗಳು ಬಹಳ ಸೀಮಿತವಾದ ಪರಿವ್ಯಾಪ್ತಿಯನ್ನು ಪಡೆದಿವೆಯಾದರೂ, ಏನೂ ಇಲ್ಲದಿರುವುದಕ್ಕಿಂತ ಏನಾದರೂ ಇರಲಿ ಎಂಬ ಕಾರಣದಿಂದ ಇವುಗಳಾದರೂ ಜಾರಿಗೆ ಬರಲಿ ಎಂದು ಆಶಿಸಬಹುದು. ಕರ್ನಾಟಕದಲ್ಲಿ 2020ರಲ್ಲೇ ಇದನ್ನು ಜಾರಿಗೆ ತರಲಾದರೂ ಈ ಬಗ್ಗೆ ನಡೆದಿರುವ ಕಾರ್ಯಾಚರಣೆಗಳು ಅತ್ಯಲ್ಪವೆನ್ನಬಹುದು! ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಪರ್ಯಾಸವೇನೆಂದರೆ ಈ ಕಾನೂನನ್ನು ವಿರೋಧಿಸಿದ ಭಾರತೀಯ ಜನತಾ ಪಕ್ಷವೇ ಇದನ್ನು ಜಾರಿಗೆ ತಂದಿರುವುದು!

*ಲೇಖಕರು ಖ್ಯಾತ ವಿಚಾರವಾದಿಗಳು, ಮಂಗಳೂರಿನವರು. ವೈಜ್ಞಾನಿಕ ಚಿಂತನೆ, ಪ್ರಸಾರ, ಪವಾಡ ಬಯಲು, ಮೌಢ್ಯ ವಿರೋಧಿ ಆಂದೋಲನದಲ್ಲಿ ಸಕ್ರಿಯರು.

Leave a Reply

Your email address will not be published.