ದೇವೇಗೌಡರ ಸ್ವಗತಗಾಥೆ ‘ಫರೋಸ್ ಇನ್ ಎ ಫೀಲ್ಡ್’

ಈ ಕೃತಿಯಲ್ಲಿ ಲೇಖಕರು ದೇವೇಗೌಡರು ದೇವಲೋಕದಿಂದ ಇಳಿದು ಬಂದ ಇಂದ್ರನಂತೆ ತೋರಿಸಲು ಪ್ರಯತ್ನಿಸುತ್ತಾರೆ. ಹಾಲಿನಲ್ಲಿ ತೊಳೆದಿಟ್ಟ ದಾರ್ಶನಿಕನಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ. ಇದು ಓದುಗರಲ್ಲಿ ಕಸಿವಿಸಿ ಹಾಗೂ ವಿಷಾದ ಮೂಡಿಸುತ್ತದೆ.

ಮೋಹನದಾಸ್

ಫರೋಸ್ ಇನ್ ಎ ಫೀಲ್ಡ್’

ದಿ ಅನ್‍ಎಕ್ಸ್‍ಪ್ಲೋರ್ಡ್ ಲೈಫ್ ಆಫ್ ಹೆಚ್.ಡಿ.ದೇವೇಗೌಡ

ಲೇಖಕ: ಸುಗತ ಶ್ರೀನಿವಾಸರಾಜು

ಪ್ರಕಾಶನ: ಪೆಂಗ್ವಿನ್ ವಿಂಟೇಜ್, 2021

ಪುಟಗಳು: 562, ಬೆಲೆ: ರೂ.799

ದೇಶ ಕಂಡ ಅತ್ಯಂತ ಪ್ರತಿಭಾಶಾಲಿ ರಾಜಕಾರಣಿಗಳಲ್ಲಿ ದೇವೇಗೌಡರು ಒಬ್ಬರು ಎಂಬುದು ಬಹಳ ಜನರಿಗೆ ಗೊತ್ತಿರಲಾರದು. ಇಲ್ಲಿಯವರೆಗಿನ ದೇಶದ ಪ್ರಧಾನಮಂತ್ರಿಗಳಲ್ಲಿ ಜವಹರಲಾಲ್ ನೆಹರೂ, ನರಸಿಂಹರಾವ್ ಮತ್ತು ಮನಮೋಹನಸಿಂಗ್ ಹೆಚ್ಚು ವಿದ್ವಾಂಸರೂ ಹಾಗೂ ದೇಶಕ್ಕೆ ಹೆಚ್ಚು ಕೊಡುಗೆ ನೀಡಿದವರೂ ಆಗಿ ಕಾಣಿಸುತ್ತಾರೆ. ಆದರೆ ದೇಶದ ಸಾಮಾನ್ಯ ಜನರ, ರೈತರ ಹಾಗೂ ಕಾರ್ಮಿಕರ ಬವಣೆಗಳನ್ನು ಇವರ್ಯಾರೂ ದೇವೇಗೌಡರಷ್ಟು ಅರಿತಿರಲಿಲ್ಲ ಎಂದರೆ ತಪ್ಪಾಗಲಾರದು. ಜನಸಾಮಾನ್ಯರ ಬವಣೆ ನೀಗಿಸುವಲ್ಲಿ ದೇವೇಗೌಡರಿಗಿದ್ದ ಸೂಕ್ಷ್ಮಮಟ್ಟದ ಜ್ಞಾನ ಈ ಮೂವರಿಗೂ ಇರಲಿಲ್ಲವೇನೋ ಎಂದು ನಾವು ಸಂದೇಹಿಸಿದರೂ ಅದು ತಪ್ಪಾಗಲಾರದು.

ಆದರೆ ದೇವೇಗೌಡರ ಬಗೆಗೆ ನಮ್ಮೆಲ್ಲಾ ಮಾಧ್ಯಮಗಳಲ್ಲಿಯೂ ನಿಮಗೆ ಋಣಾತ್ಮಕವಾದ ಹಾಗೂ ನಕಾರಾತ್ಮಕವಾದ ಚಿತ್ರಣ ಸಿಕ್ಕಿರುತ್ತದೆ. ದೇವೇಗೌಡರ ಯಾವುದೇ ಸಾಧನೆ ಮತ್ತು ಕೊಡುಗೆಗಳನ್ನು ದೇಶದ ವಿದ್ವಾಂಸರು ಮತ್ತು ಪತ್ರಕರ್ತರು ಎತ್ತಿ ಹೇಳಿರಲಾರರು. ಅಧಿಕಾರದಲ್ಲಿದ್ದಾಗ ಕೇವಲ ನಿದ್ರೆ ಮಾಡಿದ ಪ್ರಧಾನಿಯೆಂದೋ ಅಥವಾ ಹಾಸನದ ಪ್ರಧಾನಿಯೆಂದೋ ದೇವೇಗೌಡರನ್ನು ಚಿತ್ರಿಸಿದ ಬರಹಗಳನ್ನು ನೀವು ಓದಿರುತ್ತೀರಿ. ಕೇವಲ ಹನ್ನೊಂದು ತಿಂಗಳಲ್ಲಿ ಅಧಿಕಾರ ಕಳೆದುಕೊಂಡ ಹಳ್ಳಿ ಗಾಂಪನೆಂದೂ ಮಾಧ್ಯಮಗಳು ಗೇಲಿ ಮಾಡಿದ್ದನ್ನೂ ನೀವು ಕೇಳಿರುತ್ತೀರಿ.

ದೇವೇಗೌಡರ ಬಗ್ಗೆ ನಮ್ಮ ಮಾಧ್ಯಮಗಳು ಮತ್ತು ವಿದ್ವಾಂಸರು ಈ ತೆರನಾದ ಅಭಿಪ್ರಾಯ ವ್ಯಕ್ತಪಡಿಸಲು ಹಲವು ಕಾರಣಗಳಿರಬಹುದು. 90 ರ ದಶಕದ ದೆಹಲಿಯ ಪಟ್ಟಭದ್ರ ಹಿತಾಸಕ್ತಿಗಳಿಗೆ ದೇವೇಗೌಡರು ಅಪಥ್ಯವಾಗಿದ್ದಿರಬಹುದು. ಮೇಲಾಗಿ ವೈದಿಕ ಭಾವನೆಯುಳ್ಳ ದೆಹಲಿಯ ಮೇಲ್ವರ್ಗದ ಹಾಗೂ ಮೇಲ್ಜಾತಿಯ ಮಾಧ್ಯಮದವರಿಗೆ ದೇವೇಗೌಡರು ಹೊರಗಿನವರಾಗಿ ಕಂಡಿರಬಹುದು. ಶೂದ್ರವರ್ಗದಿಂದ ದೇಶದ ಅತ್ಯುನ್ನತ ಹುದ್ದೆಗೇರಿದ ದಕ್ಷಿಣ ಭಾರತೀಯನನ್ನು ಈ ವರ್ಗದ ಜನರು ಪರಕೀಯನಾಗಿ ಕಂಡಿರಲೂಬಹುದು.

ಬೆಂಗಳೂರಿನವರಾದ ಸುಗತ ಶ್ರೀನಿವಾಸರಾಜು ಅವರ ‘ಫರೋಸ್ ಇನ್ ಎ ಫೀಲ್ಡ್’ (ಹೊಲದೊಳಗಿನ ಸಾಲುಗಳು) ಪುಸ್ತಕ ದೇವೇಗೌಡರ ಬಗೆಗಿನ ಈ ಎಲ್ಲಾ ಅಪವಾದ, ಅಪಪ್ರಚಾರ ಮತ್ತು ಅಪನಂಬಿಕೆಗಳಿಗೆ ಸಮರ್ಥವಾಗಿ ಉತ್ತರ ನೀಡುತ್ತದೆ. ದೇವೇಗೌಡರ ಸಾಧನೆ ಮತ್ತು ಕೊಡುಗೆಗಳನ್ನು ಅತ್ಯಂತ ವಿಶದವಾಗಿ ಹಾಗೂ ಅತ್ಯಂತ ಸಮಗ್ರವಾಗಿ ಹಿಡಿದಿಟ್ಟಿರುವ ಈ ಪುಸ್ತಕ ದೇವೇಗೌಡರ ಜೀವನಗಾಥೆಯನ್ನು ಪುನರ್ಪ್ರತಿಷ್ಠಾಪಿಸಿದೆ ಎಂದೇ ಹೇಳಬಹುದು. ದೇವೇಗೌಡರೇ ತಮ್ಮ ಆತ್ಮಚರಿತ್ರೆಯನ್ನು ಬರೆದಿದ್ದರೆ ಇಷ್ಟು ಸಮರ್ಥವಾಗಿ ಬರೆಯುತ್ತಿದ್ದರೋ ಏನೋ ಅಂದು ನಿಮಗೆ ಅನ್ನಿಸುವ ಮಟ್ಟಿಗೆ ಈ ಪುಸ್ತಕ ದೇವೇಗೌಡರ ಜೀವನಗಾಥೆಯನ್ನು ಆಮೂಲಾಗ್ರವಾಗಿ ಅಳೆದು ಕಡೆದು ನಿಲ್ಲಿಸಿದೆ ಎಂದೂ ಹೇಳಬಹುದು. ಕವಿಸಾಹಿತಿ ಚಿ. ಶ್ರೀನಿವಾಸರಾಜು ಅವರ ಮಗನಾದ ಸುಗತ ಶ್ರೀನಿವಾಸರಾಜು ಅವರು ಕಳೆದ ಮೂರು ವರ್ಷಗಳಿಂದ ಮಾಡಿದ ದೀರ್ಘ ಸಂಶೋಧನೆಯ ಫಲವಾಗಿ ಈ ಗ್ರಂಥ ಹೊರಬಂದಿದೆ. ಇತ್ತೀಚಿನ ಭಾರತೀಯ ರಾಜಕಾರಣಿಯೊಬ್ಬರ ಜೀವನಚರಿತ್ರೆ ಇಷ್ಟು ಸಮಗ್ರವಾಗಿ ಹೊರಬಂದಿರುವುದು ಜೀವನಚರಿತ್ರೆ ಪ್ರಕಾರಕ್ಕೆ ಒದಗಿಬಂದಿರುವ ಹೊಸ ಮಾದರಿಯೂ ಆಗಿದೆ.

ಸುಗತ ಅವರು ದೇವೇಗೌಡರು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯಾಗಿದ್ದಾಗ ಮಾಡಿದ ಸಾಧನೆಗಳನ್ನು ಬೇರಾರಿಗಿಂತಲೂ ಸಮಗ್ರವಾಗಿ ಕಟ್ಟಿಕೊಟ್ಟಿದ್ದಾರೆ. ಉತ್ತಮ ಭಾಷೆ ಮತ್ತು ವಿವರಣೆ ನೀಡುವ ಶೈಲಿಯ ಆಕರ್ಷಕ ಬರವಣಿಗೆಯಲ್ಲಿ ಈ ಪುಸ್ತಕ ಕರ್ನಾಟಕದ ಇತಿಹಾಸವನ್ನು ಓದಬೇಕಾದವರಿಗೆ ಅಗತ್ಯ ವಿಷಯ ವಸ್ತು ನೀಡಲಿದೆ. ಸುಮಾರು ಎರಡು ವರ್ಷಗಳ ಅವಧಿಯಲ್ಲಿ ದೇವೇಗೌಡರ ಜೊತೆಗೆ ನಡೆಸಿದ ಹಲವಾರು ಸಂಭಾಷಣೆಗಳಲ್ಲಿ ಸುಗತ ಅವರು ಇಲ್ಲಿಯವರೆಗೂ ಬೆಳಕಿಗೆ ಬಾರದೆ ಇದ್ದ ದೇವೇಗೌಡರ ಜೀವನದ ಹಲವಾರು ಘಟನೆಗಳನ್ನು ವಿವರಿಸಿದ್ದಾರೆ. ಸುಗತ ಅವರಿಗೆ ತಮ್ಮ ಜೀವನದ ಬಗ್ಗೆ ದೇವೇಗೌಡರು ಒದಗಿಸಿದಷ್ಟು ಮಾಹಿತಿಯನ್ನು ಬೇರೆ ಯಾರಿಗೂ ಒದಗಿಸಿದ್ದಿರಲಾರರು. ಈ ಕಾರಣಕ್ಕೆ ಒಂದು ರೀತಿಯಲ್ಲಿ ಇದು ದೇವೇಗೌಡರಿಂದ ‘ಅಧಿಕೃತ’ವಾದ ಜೀವನಗಾಥೆಯೂ ಆಗಿದೆ.

1997 ರಲ್ಲಿ ಪ್ರಧಾನಮಂತ್ರಿ ಪದವಿಗೆ ರಾಜೀನಾಮೆ ನೀಡುವ ಮೊದಲು ಸಂಸತ್ತಿನಲ್ಲಿ ದೇವೇಗೌಡರು ತಾವು ‘ಫೀನಿಕ್ಸ್’ ಪಕ್ಷಿಯಂತೆ ಮತ್ತೆ ಎದ್ದು ಬರುವುದಾಗಿ ಘೋಷಿಸಿದ್ದರು. ಆದರೆ ದುರದೃಷ್ಟವಶಾತ್ ದೇವೇಗೌಡರಿಗೆ ರಾಜಕೀಯವಾಗಿ ಅಥವಾ ಬೇರೆ ಯಾವುದೇ ರೀತಿಯಲ್ಲೂ ಮತ್ತೆ ಮೇಲೆದ್ದು ಬರಲು ಆಗಲೇ ಇಲ್ಲ. ಅವರ ಪಕ್ಷವೂ ಅಧಿಕಾರ ಕಳೆದುಕೊಂಡು ಮೂಲೆಗುಂಪಾಯಿತು. ಅವರ ಮಕ್ಕಳು ಕರ್ನಾಟಕದಲ್ಲಿಯೂ ಬಿಜೆಪಿ ಬೆಳೆಯುವುದಕ್ಕೆ ಅನುವು ಮಾಡಿಕೊಟ್ಟು ತಮ್ಮ ಕಾಲಿನ ಮೇಲೆಯೇ ಕೊಡಲಿ ಪೆಟ್ಟು ನೀಡಿಕೊಳ್ಳುವ ಮೂರ್ಖತನವನ್ನು ತೋರಿದ್ದರು. ದೇವೇಗೌಡರು ತಮ್ಮ ರಾಜಕೀಯದಲ್ಲಿ ಮೇಲೆದ್ದು ಬರುವ ಆಸೆಯನ್ನು ಬಿಟ್ಟಂತೆ ಕೇವಲ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ರಾಜಕೀಯ ಭವಿಷ್ಯ ನೋಡಲಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡರು. ಹೀಗಾಗಿ ದೇವೇಗೌಡರ ‘ಫೀನಿಕ್ಸ್’ ಕ್ಷಣ ಬರಲೇ ಇಲ್ಲ. ಈ ಪುಸ್ತಕ ದೇವೇಗೌಡರ ಫೀನಿಕ್ಸ್ ಕ್ಷಣಕ್ಕೆ ಸಾಕ್ಷಿಯಾಗದೇ ಇದ್ದರೂ ಅವರ ಜೀವನದ ಸಾಧನೆಯನ್ನು ಅತ್ಯಂತ ವರ್ಣರಂಜಿತವಾಗಿ ಹಾಗೂ ವಿವರಣಾತ್ಮಕವಾಗಿ ಕಟ್ಟಿಕೊಟ್ಟಿದೆ. ದೇವೇಗೌಡರು ಮತ್ತೆ ಏಳಲಾಗದೇ ಇದ್ದರೂ ಅವರ ಗೌರವಗರಿಮೆಯು ಮತ್ತೆ ಎದ್ದೇಳಲು ಸಹಕಾರಿಯಾಗಿದೆ.

ಈ ಪುಸ್ತಕವು ಒಳ್ಳೆಯ ವಿನ್ಯಾಸ ಮತ್ತು ಮುದ್ರಣದ ಜೊತೆಗೆ ಆಂಗ್ಲಭಾಷೆಯ ಓದುಗರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬರೆದ ಹೊತ್ತಿಗೆಯಾಗಿದೆ. ಇಂಗ್ಲಿಷ್ ಓದುಗರಿಗೆ ಬೇಕಿರುವ ಅಖಿಲ ಭಾರತೀಯ ದೃಷ್ಟಿಕೋನ ಈ ಪುಸ್ತಕದಲ್ಲಿದೆ. ದೇವೇಗೌಡರ ಹಿರಿಮೆಯನ್ನು ಹೇಳುವಾಗ ಸುಗತ “ದೇವೇಗೌಡರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಮತ್ತು ರಾಜ್ಯದ ಮುಖ್ಯ ಎಂಜಿನಿಯರ್ ಆಗಿದ್ದರು” ಎಂದು ಹೇಳುವಲ್ಲಿ ಅವರ ಪ್ರತಿಭೆಯನ್ನು ನಿಖರವಾಗಿ ಗುರುತಿಸುತ್ತಾರೆ. ಡಿಪ್ಲೊಮಾ ಸಿವಿಲ್ ಎಂಜಿನಿಯರ್ ಮತ್ತು ಸಿವಿಲ್ ಕಂಟ್ರಾಕ್ಟರ್ ಕೂಡ ಆಗಿದ್ದ ದೇವೇಗೌಡರು ಜನಪ್ರತಿನಿಧಿಯೊಬ್ಬರಿಗೆ ಬೇಕಿದ್ದ ಸಿವಿಲ್ ಎಂಜಿನಿಯರಿಂಗ್ ಪ್ರವೀಣರೂ ಆಗಿದ್ದರು ಎಂಬಂತಹಾ ಹಲವಾರು ಅಂಶಗಳನ್ನು ಪುಸ್ತಕದಲ್ಲಿ ಹೇಳಲಾಗಿದೆ. ಆರು ವರ್ಷಗಳ ಕಾಲದ ನೀರಾವರಿಸಾರ್ವಜನಿಕ ಕಾಮಗಾರಿ ಸಚಿವರಾಗಿ, ಒಂದೂವರೆ ವರ್ಷಗಳ ಕಾಲದ ಮುಖ್ಯಮಂತ್ರಿಯಾಗಿ ಹಾಗೂ ಹನ್ನೊಂದು ತಿಂಗಳ ಪ್ರಧಾನಿಯಾಗಿ ದೇವೇಗೌಡರ ದೃಷ್ಟಿಕೋನ ಸಾಮಥ್ರ್ಯ ಹಾಗೂ ಹತ್ತುಹಲವು ಕೊಡುಗೆಗಳನ್ನು ಹೆಸರಿಸುವಲ್ಲಿ ಕೂಡಾ ಈ ಪುಸ್ತಕ ಸಹಕಾರಿಯಗಿದೆ.

ಸುಗತ ಅವರ ಪುಸ್ತಕದ ಬಿಡುಗಡೆ ಸಂದರ್ಭದಲ್ಲಿ ಫಾಲಿ ನಾರಿಮನ್, ಫಾರೂಕ್ ಅಬ್ದುಲ್ಲಾ, ಜೈರಾಮ್ ರಮೇಶ್ ಮತ್ತಿತರರು ದೇವೇಗೌಡರ ಮತ್ತು ಪುಸ್ತಕದ ಗುಣಗಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಹಾ ಈ ಗುಣಗಾನ ಮುಂದುವರೆಯಲಿದೆ. ದೇವೇಗೌಡರು ಅಥವಾ ಅವರ ಕುಟುಂಬದ ಯಾರಾದರೂ ಮತ್ತೆ ಅಧಿಕಾರಕ್ಕೆ ಬಂದರೆ ಈ ಗುಣಗಾನ ತಾರಕಕ್ಕೆ ಏರಬಹುದು. ಈ ಹೊಗಳಿಕೆಗೆ ಆಕ್ಷೇಪಣೆ ಎತ್ತುವ ಅಗತ್ಯವಿಲ್ಲ. ಸುಗತರ ಸಂಶೋಧನೆ ಮತ್ತು ಪುಸ್ತಕ ಈ ಎಲ್ಲಾ ಪ್ರಶಂಸೆಗೆ ಅರ್ಹವಾಗಿದೆ. ಆದರೆ ಅತಿಯಾದ ಹೊಗಳುವಿಕೆಯಲ್ಲಿ ಎಲ್ಲಿ ಪುಸ್ತಕದ ವಸ್ತುನಿಷ್ಠ ವಿಮರ್ಶೆ ಮರೆಯಾಗುವುದೋ ಎಂಬ ಗುಮಾನಿಯಲ್ಲಿ ಪುಸ್ತಕದ ಈ ಕೆಲವು ನ್ಯೂನತೆಗಳನ್ನು ಇಲ್ಲಿ ಹೆಸರಿಸಲೇಬೇಕಾಗಿದೆ.

1. ಸ್ಥೂಲವಾಗಿ ನೋಡಿದಾಗ ಸುಗತರ ಪುಸ್ತಕ ಏಕಮುಖವಾಗಿದೆ. ದೇವೇಗೌಡರ ಚರಿತೆಯ ಗುಣಾತ್ಮಕ ಅಂಶಗಳನ್ನು ಪುಷ್ಟೀಕರಿಸಲೇ ಈ ಪುಸ್ತಕ ಬರೆಯಲಾಗಿದೆಯೇನೋ ಎಂಬ ಅನಿಸಿಕೆ ನಿಮ್ಮದೂ ಆದರೆ ಆಶ್ಚರ್ಯವಿಲ್ಲ. ಮಾಜಿ ಪ್ರಧಾನಿಯ ಜೀವನಗಾಥೆ ಬರೆಯುವ ಏಕಮಾತ್ರ ಅವಕಾಶದಲ್ಲಿ ಕೇವಲ ಒಮ್ಮುಖವಾಗಿ ಚಲಿಸಿ ಸುಗತ ಅವರು ತಮ್ಮ ಸಂಶೋಧನೆಗೆ ಹಾಗೂ ವೃತ್ತಿಪರತೆಗೆ ಅನ್ಯಾಯ ಮಾಡಿಕೊಂಡಿದ್ದಾರೆ. ಪರಿಪಕ್ವ ಮತ್ತು ಸಂಪೂರ್ಣ ಜೀವನಚರಿತೆ ಬರೆಯುವ ದಾಷ್ಟ್ರ್ಯ ತೋರದೇ ಹೋಗಿದ್ದಾರೆ.

2. ಎರಡು ಮೂರು ವರ್ಷಗಳ ಕಾಲ ಸಂಶೋಧನೆ ಮಾಡಿಯೂ ಸುಗತ ಅವರು ದೇವೇಗೌಡರ ಟೀಕಾಕಾರರಲ್ಲಿ ಯಾರನ್ನೂ ಸಂದರ್ಶನ ಮಾಡುವ ಗೋಜಿಗೆ ಹೋಗಿಲ್ಲ. ಸಕ್ರಿಯ ರಾಜಕಾರಣದಲ್ಲಿರುವ ಬಿ.ಎಲ್.ಶಂಕರ್ ಮತ್ತು ಪಿ.ಜಿ.ಆರ್.ಸಿಂಧ್ಯಾ ಅವರನ್ನು ಹೊರತುಪಡಿಸಿ ಬೇರಾರಿಂದಲೂ ಪ್ರಮುಖ ಉಲ್ಲೇಖಗಳಿಲ್ಲ. ಹೆಗಡೆ ಆಪ್ತರು, ಎಸ್ಸಾರ್ ಬೊಮ್ಮಾಯಿ ಹಾಗೂ ಜೆ.ಎಚ್.ಪಟೇಲ್ ಆಪ್ತರು, ಸಿದ್ದರಾಮಯ್ಯ, ಸಿಎಂ ಇಬ್ರಾಹಿಮ್, ವಿ.ಎಸ್.ಉಗ್ರಪ್ಪ ಮತ್ತಿತರ ಹಲವಾರು ಟೀಕಾಕಾರರನ್ನು ಮಾತನಾಡಿಸುವ ಗೋಜಿಗೆ ಹೋಗಿಲ್ಲ. ಅದೇ ರೀತಿಯಲ್ಲಿ ರಾಷ್ಟ್ರಮಟ್ಟದ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಧುರೀಣರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸುವ ಕಷ್ಟದ ಕೆಲಸಕ್ಕೂ ಕೈ ಹಾಕಿದಂತೆ ಕಾಣುತ್ತಿಲ್ಲ. ಎರಡು ಮೂರು ವರ್ಷಗಳ ಸಂಶೋಧನೆ ಕೇವಲ ದೇವೇಗೌಡರ ಸ್ವಗತಗೀತೆ ಹಾಡಲು ಸೀಮಿತವಾಗಿದೆಯೇನೋ ಎಂಬ ಗುಮಾನಿ ಮೂಡುತ್ತದೆ.

3. ದೇವೇಗೌಡರ ಜೀವನಚರಿತೆ ಬರೆಯುವ ಸಂದರ್ಭದಲ್ಲಿ ಎಪ್ಪತ್ತರ ದಶಕದಿಂದ ಇಲ್ಲಿಯವರೆಗಿನ ಕರ್ನಾಟಕದ ಇತಿಹಾಸವನ್ನು ದಾಖಲಿಸುವ ಸಾಧ್ಯತೆಯಿಂದಲೂ ಸುಗತ ವಂಚಿತರಾಗಿದ್ದಾರೆ. ದೇವೇಗೌಡದೇವರಾಜ ಅರಸು, ದೇವೇಗೌಡವೀರೇಂದ್ರ ಪಾಟೀಲ್, ದೇವೇಗೌಡರಾಮಕೃಷ್ಣ ಹೆಗಡೆ, ದೇವೇಗೌಡಎಸ್ಸಾರ್ ಬೊಮ್ಮಾಯಿ, ದೇವೇಗೌಡಉಳಿದ ಲಿಂಗಾಯಿತ ನಾಯಕರು, ದೇವೇಗೌಡಉಳಿದ ಒಕ್ಕಲಿಗ ನಾಯಕರು, ದೇವೇಗೌಡಸಿದ್ದರಾಮಯ್ಯನವರ ನಡುವಿನ ಸೂಕ್ಷ್ಮ ಸಂಬಂಧ ಹೇಳುವಲ್ಲಿ ಸಾಧ್ಯವಿದ್ದ ದಶಕಗಳ ಇತಿಹಾಸವನ್ನು ಸುಗತ ಕಳೆದುಕೊಂಡಿದ್ದಾರೆ. ಈ ದಶಕಗಳ ಅಭಿವೃದ್ಧಿ ರಾಜಕೀಯವನ್ನು ಹೇಳುವಲ್ಲಿ ಸಾಕಷ್ಟು ವಿವರಗಳನ್ನು ನೀಡಿದ್ದರೂ ಕರ್ನಾಟಕದ ಭೂ ಸುಧಾರಣೆ, ಹಿಂದುಳಿದ ವರ್ಗಗಳ ಮುನ್ನಡೆ, ಒಕ್ಕಲಿಗಲಿಂಗಾಯಿತ ರಾಜಕೀಯ ಸಂಘರ್ಷ, ನೀರಾವರಿ ಆದ್ಯತೆಗಳಲ್ಲಿ ರಾಜಕೀಯದಂತಹಾ ಸೂಕ್ಷ್ಮ ವಿಷಯಗಳನ್ನು ಹೇಳುವಲ್ಲಿ ಮತ್ತು ವ್ಯಾಖ್ಯಾನಿಸುವಲ್ಲಿ ಸುಗತ ವಿಫಲರಾಗಿದ್ದಾರೆ. ಕಳೆದ ನಾಲ್ಕಾರು ದಶಕಗಳ ಕರ್ನಾಟಕದ ಸಾಮಾಜಿಕ ಪಲ್ಲಟಗಳನ್ನು ಹೇಳುವಲ್ಲಿ ವಿಮುಖರಾಗಿದ್ದಾರೆ.

4. ದೇವೇಗೌಡರ ಜೊತೆ ಖಾಸಗಿಯಗಿ ಕುಳಿತು ಮಾತನಾಡಿದ ಎಲ್ಲರೂ ಹೇಗೆ ಗೌಡರು ಪುಂಖಾನುಪುಂಖವಾಗಿ ಹಲವರು ತಮಗೆ ಮೋಸ ಮಾಡಿದರೆಂದು ಹೇಳುತ್ತಾರೆ ಎಂದು ನಿಮಗೆ ತಿಳಿದಿರಬಹುದು. ತಮಗೆ ಮೋಸ ಮಾಡಿದ ಲಿಂಗಾಯಿತ ಮುಖಂಡರ ಬಗ್ಗೆಯಂತೂ ಗೌಡರು ‘ವಿಶೇಷ ಟಿಪ್ಪಣಿ’ ನೀಡುತ್ತಾರೆ. ಸುಗತ ಅವರೂ ಈ ಎಲ್ಲಾ ರೋದನಗಳನ್ನು ಕೇಳಿರಲೇಬೇಕು. ಆದರೆ ದೇವೇಗೌಡರಿಂದ ಮೋಸ ಹೋದ ಕರ್ನಾಟಕದ ನಾಯಕರ ದೊಡ್ಡ ಪಟ್ಟಿಯೇ ಇದೆ. ತಮಗೆ ಸಹಾಯ ಮಾಡಿದ ಯಾರ ಬಗ್ಗೆಯೂ ದೇವೇಗೌಡರು ಕೃತಜ್ಞರಾಗಿ ಉಳಿದ ಉದಾಹರಣೆಗಳೇ ಇಲ್ಲ. ಒಂದಲ್ಲಾ ಒಂದು ದಿನ ಅವರನ್ನು ಮೆಟ್ಟಿ ದೇವೇಗೌಡರು ಮುನ್ನಡೆದ ಘಟನೆಗಳೇ ಸಾರ್ವತ್ರಿಕ. ದೇವೇಗೌಡರ ಮಕ್ಕಳಿಗೆ ವಚನಭ್ರಷ್ಟರೆಂಬ ಬಳುವಳಿ ಆನುವಂಶಿಕವಾಗಿ ಬಂದಿತ್ತೆಂದು ಹೇಳಿದರೂ ಸುಳ್ಳಾಗಲಾರದು. ಆದರೆ ಈ ಯಾವುದೇ ಘಟನೆಗಳ ಬಗ್ಗೆ ಸುಗತ ಚಕಾರವೆತ್ತಿಲ್ಲ. ದೇವೇಗೌಡರು ದೇವಲೋಕದಿಂದ ಇಳಿದು ಬಂದ ಇಂದ್ರನಂತೆ ತೋರಿಸಲು ಪ್ರಯತ್ನಿಸುತ್ತಾರೆ. ಹಾಲಿನಲ್ಲಿ ತೊಳೆದಿಟ್ಟ ದಾರ್ಶನಿಕನಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ. ಇದು ಓದುಗರಲ್ಲಿ ಕಸಿವಿಸಿ ಹಾಗೂ ವಿಷಾದ ಮೂಡಿಸುತ್ತದೆ. ಯಾವುದೇ ವ್ಯಕ್ತಿಯ ಚರಿತೆ ಹೇಳುವ ಸಂದರ್ಭದಲ್ಲಿ ಕೇವಲ ಗುಣಾತ್ಮಕ ಅಂಶಗಳನ್ನು ಹೆಸರಿಸುವ ಪ್ರಯತ್ನದಲ್ಲಿ ಈ ಗುಣಾತ್ಮಕ ಅಂಶಗಳೂ ಕೃತಕವೆಂದು ಅನ್ನಿಸತೊಡಗುತ್ತವೆ.

5. 1997 ರ ನಂತರದಲ್ಲಿ ದೇವೇಗೌಡರ ಧೃತರಾಷ್ಟ್ರ ಪ್ರೇಮವನ್ನು ಸುಗತ ಅವರು ಅತ್ಯಂತ ಸಹಜ ಮಾನವೀಯ ಪ್ರಕ್ರಿಯೆಯೋ ಎಂಬಂತೆ ವಿವರಿಸಿದ್ದಾರೆ. ಇದು ದುರದೃಷ್ಟಕರ. ದೇವೇಗೌಡರ ಧೃತರಾಷ್ಟ್ರ ಪ್ರೇಮದಿಂದ ಜನತಾದಳವೆಂಬ ರಾಷ್ಟ್ರೀಯ ರಾಜಕೀಯ ಪರ್ಯಾಯಕ್ಕೆ ಒದಗಿಬಂದ ಘನಘೋರ ಅನ್ಯಾಯವನ್ನು ಸುಗತ ಮರೆಮಾಚುತ್ತಾರೆ. ಮಕ್ಕಳ ಮೇಲಿನ ಅತಿವ್ಯಾಮೋಹದಿಂದ ದೇವೇಗೌಡರು ರಾಷ್ಟ್ರೀಯ ಪಕ್ಷವನ್ನು ಪ್ರಾದೇಶಿಕ ಪಕ್ಷವಾಗಿಸಿದ್ದು, ಪ್ರಾದೇಶಿಕ ಪಕ್ಷವನ್ನು ಒಕ್ಕಲಿಗ ಪಕ್ಷವಾಗಿಸಿದ್ದು, ಹಾಗೂ ಇದೀಗ ಒಕ್ಕಲಿಗ ಪಕ್ಷವನ್ನು ಹೊಳೆನರಸೀಪುರದ ಪಕ್ಷವಾಗಿರಿಸಿದ ದುರಂತಚಿತ್ರಣವನ್ನು ಸುಗತ ನಿರ್ಲಕ್ಷಿಸುತ್ತಾರೆ. ಜನತಾದಳವನ್ನು ತಮ್ಮ ತೆವಲಿಗೆ ಬಳಸಿಕೊಂಡ ದೇವೇಗೌಡರ ರಾಜಕೀಯ ಧೂರ್ತತನವನ್ನು ಸಮರ್ಥಿಸಿಕೊಳ್ಳುವವರಂತೆ ಕಾಣಿಸುತ್ತಾರೆ.

6. ಪುಸ್ತಕದ ಉದ್ದಕ್ಕೂ ದೇವೇಗೌಡರು ಬಯಸಿದ ಘಟನೆವಿವರಅಭಿಪ್ರಾಯಗಳೇ ಕಾಣಸಿಗುತ್ತವೆ. ನಿಷ್ಪಕ್ಷಪಾತವಾದ ಹಾಗೂ ನಿರ್ದಾಕ್ಷಿಣ್ಯದ ಅಭಿಪ್ರಾಯ ಹಾಗೂ ಮಾಹಿತಿಗಳು ಕಾಣಸಿಗುವುದಿಲ್ಲ. ಹೀಗೆ ಇದು ಸುಗತ ಬರೆದ ದೇವೇಗೌಡರ ‘ಆತ್ಮಚರಿತ್ರೆ’ಯೇನೋ ಎಂಬ ಸಂಶಯ ನಿಮ್ಮಲ್ಲಿ ಮೂಡಿಸಿದರೆ ಆಶ್ಚರ್ಯ ಬೇಕಿಲ್ಲ. ಉದಾಹರಣೆಗೆ ದೇವೇಗೌಡರು ಮೊರಾರ್ಜಿ ದೇಸಾಯಿ ತಮ್ಮ ರಾಜಕೀಯ ಗುರು ಎಂದು ಹೇಳಿಕೊಂಡಿದ್ದನ್ನು ಸುಗತ ಪುನರುಚ್ಛರಿಸುತ್ತಾರೆ. ಚಂದ್ರಶೇಖರ್ ಅವರಿಂದ ಪಡೆದ ಹಲವು ರಾಜಕೀಯ ಮರುಹುಟ್ಟುಗಳನ್ನು ಮರೆತ ದೇವೇಗೌಡರ ಮರೆವನ್ನು ಸುಗತ ತಮ್ಮ ಮೇಲೆಯೇ ಆವಾಹನೆಗೊಳಿಸಿಕೊಳ್ಳುತ್ತಾರೆ.

ಸದ್ಯಕ್ಕೆ ಇಷ್ಟು ಸಾಕು. ಇಷ್ಟರಲ್ಲಿಯೇ ನಿಮಗೆ ಸುಗತರ ಪುಸ್ತಕ ಕಳೆದುಕೊಂಡ ಚಾರಿತ್ರಿಕ ಅವಕಾಶದ ಅನುಭವವಾಗುತ್ತದೆ. ಕರ್ನಾಟಕದ ರಾಜಕಾರಣಿಯೊಬ್ಬನ ಬಗ್ಗೆ ದೀರ್ಘ ಹಾಗೂ ಸವಿವರ ಚರಿತ್ರೆಯನ್ನು ಇಂಗ್ಲಿಷ್‍ನಲ್ಲಿ ಕಟ್ಟಿಕೊಡುವ ಸಂದರ್ಭದಲ್ಲಿ ಸುಗತ ಅವರೇನಾದರೂ ವ್ಯಕ್ತಿನಿಷ್ಠೆ ತೊರೆದು ಇತಿಹಾಸನಿಷ್ಠೆ ತೋರಿದ್ದರೆ ಈ ಪುಸ್ತಕ ಎಲ್ಲ ಭಾಷೆಗಳಲ್ಲಿಯೂ ಜೀವನಚರಿತೆ ಬರೆಯುವ ಮಾದರಿಯಾಗುತ್ತಿತ್ತು. ಇತಿಹಾಸದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಸ್ಸಾರ್ ಬೊಮ್ಮಾಯಿ, ಎಸ್ಸೆಮ್ ಕೃಷ್ಣ ಮತ್ತಿತರ ನಾಯಕರ ಜೀವನಚರಿತ್ರೆ ಬರೆಯುವ ಮಾದರಿಯಾಗುತ್ತಿತ್ತು. ಈ ವಂಚಿತ ಅವಕಾಶಕ್ಕೆ ನಾವು ಸುಗತರಿಗೆ ಸಾಂತ್ವನ ಹೇಳಲೇಬೇಕು. ಆದರೂ ಈ ಪುಸ್ತಕದ ಶಿಸ್ತು, ವಿವರಣೆ ಹಾಗೂ ಸುಲಲಿತ ಬರವಣಿಗೆ ಕರ್ನಾಟಕದ ಮೇಲಿನ ಪುಸ್ತಕಗಳ ಸಾಲಿನಲ್ಲಿ ಅಗ್ರಪಂಕ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚರಿತ್ರೆ ಮಾಡುವ ಅವಕಾಶ ಕಳೆದುಕೊಂಡಿದ್ದರೂ ಚರಿತ್ರೆಯ ಒಂದು ಮುಖ ದಾಖಲಿಸಿದ ತೃಪ್ತಿ ನೀಡಿದೆ.

Leave a Reply

Your email address will not be published.