ನಮ್ಮ-ಬಗ್ಗೆ

ಏಕೆ ಸಮಾಜಮುಖಿ ಪತ್ರಿಕೆ ..?

ಕನ್ನಡ ಭಾಷಾ ಪರಂಪರೆಯ ಅಳಿವು ಉಳಿವಿನ ಕವಲುದಾರಿಯಲ್ಲಿ ಇಂದು ನಾವಿದ್ದೇವೆ. ಇದುವರೆಗಿನ ಕನ್ನಡ ಸಾಹಿತ್ಯದ ಶ್ರೇಷ್ಠತೆಯ ಅಭಿಮಾನದಲ್ಲಿ ನಮ್ಮ ಎದೆ ಉಬ್ಬಿದ್ದರೂ, ಮಾತೃ ಭಾಷೆಯು ನಮ್ಮ ಬದುಕು ಭವಿಷ್ಯದ ಅನ್ನದ ಭಾಷೆಯಾಗಿಲ್ಲವೆಂದೋ, ಇಲ್ಲವೆ ಮುಂದಿನ ಪೀಳಿಗೆಗೆ ಭಾಷೆಯ ಉಳಿವಿನ ಮಹತ್ವ ಹೇಳಲಾಗುತ್ತಿಲ್ಲವೆಂದೋ ನಮ್ಮ ಮನ ಕುಗ್ಗಿದೆ. ಅಗ್ಗದ ಸರಕನ್ನಿತ್ತರೂ ಕಣ್ಸೆಳೆಯುವ ಸಮೂಹ ಮಾಧ್ಯಮಗಳ ಅಬ್ಬರದ ನಡುವೆ ಸರಿ-ತಪ್ಪು ಹೇಳುವ ಸಂವಹನ ಸಾಧನಗಳಿಲ್ಲದೆ ಕನ್ನಡದ ಯುವಜನಾಂಗ ವೈಚಾರಿಕ ತಬ್ಬಲಿಗಳಾಗುತ್ತಿದ್ದಾರೆಂಬ ಭಯಕಾಡಿದೆ. ಕುರುಡುಕಿತ್ತಾಟದ ಸಾಮಾಜಿಕ ಮಾಧ್ಯಮಗಳ ಸಮೂಹಸನ್ನಿಯ ಪ್ರಭಾವದಲ್ಲಿ ಮತ್ತು ಮಾರಾಟಕ್ಕಿರುವ ಸುದ್ದಿ-ವರದಿಗಳ ಜಾಲದಲ್ಲಿ ವಸ್ತುನಿಷ್ಠ ಜಿಜ್ಞಾಸೆಯ ಆಧುನಿಕತೆಯೇ ಮರೆಯಾಗುವ ಆತಂಕಕಾಡಿದೆ. ಇಂತಹ ಸಂದರ್ಭದಲ್ಲಿ ಯಾಂತ್ರಿಕ ಬದುಕಿನ ವೇಗ-ತಲ್ಲಣ-ಪಲ್ಲಟಗಳ ನಡುವೆ ಚದುರಿ ಹೋಗಿರುವ ಸಂವೇದನಾಶೀಲ ಮನಸ್ಸುಗಳು ಒಂದೆಡೆ ಸೇರಿ ಮಾತುಕತೆಯಾಡುವ ತುರ್ತನ್ನು ಪ್ರಜ್ಞಾವಂತರಾದ ತಾವು ಸ್ವಾಭಾವಿಕವಾಗಿ ಮನಗಂಡಿರುತ್ತೀರಿ.

ಯಾರಿಂದ ಈ ಪತ್ರಿಕೆ..?

ಇಂತಹ ಕಳವಳಕಾರಿ ಸಂಕ್ರಮಣ ಸನ್ನಿವೇಶದಲ್ಲಿ ಸಮಾನ ಮನಸ್ಕರ ಸೇರುವಿಕೆ ಮತ್ತು ಅರ್ಥಪೂರ್ಣ ಅಭಿವ್ಯಕ್ತಿಯ ವೇದಿಕೆಯಾಗಿ ಸಮಾಜಮುಖಿ ಮಾಸಪತ್ರಿಕೆ ರೂಪುಗೊಂಡಿದೆ. ಸಾಮಾಜಿಕ ಕಳಕಳಿ, ಬದ್ಧತೆ ಹೊತ್ತ ವಿವಿಧ ವೃತ್ತಿ ಹಿನ್ನೆಲೆಯ ಸುಸಜ್ಜಿತ ತಂಡ ಈ ಸಾಹಸದಲ್ಲಿ ಗಂಭೀರವಾಗಿ ಮತ್ತು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದೆ. ಎಲ್ಲ ಕಷ್ಟನಷ್ಟಗಳ ನಡುವೆಯೂ 2018ರ ಜನವರಿಯಿಂದ ಸಮಾಜಮುಖಿ ಪತ್ರಿಕೆಯನ್ನು ನಿರಂತರವಾಗಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಈ ಪ್ರಯೋಗಕ್ಕೆ ನಿಷ್ಕಲ್ಮಶ ಬೆಂಬಲ ನೀಡುತ್ತಿರುವ ನೀವೆಲ್ಲರೂ ಈ ಪತ್ರಿಕೆಯ ತಂಡದವರೇ ಎಂದು ಭಾವಿಸಿದ್ದೇವೆ.

ಸಮಾಜಮುಖಿ ಪತ್ರಿಕೆಯ ಉದ್ದೇಶಗಳೇನು..?

ಅತಿ ಬೌದ್ಧಿಕತೆಯ ಭಾರ ಹೊರಿಸದೇ, ಕಳಪೆ ಬರಹದ ಮೂಲಕ ಓದುಗರ ಘನತೆತಗ್ಗಿಸದೇ, ಜಾಗತಿಕ ನೆಲೆಯಲ್ಲಿ ಕನ್ನಡದ ಕಂಪು ವಿಸ್ತರಿಸುವ ಕಾಯಕದ ಭಾಗವಾಗಿ ಸಮಾಜಮುಖಿ ರೂಪುಗೊಳ್ಳಬೇಕೆಂಬ ಉದಾತ್ತ ಆಶಯ ನಮ್ಮದು. ಕನ್ನಡವನ್ನು ವಿಶ್ವದ ಮುಖ್ಯಭಾಷೆಗಳಲ್ಲಿ ಒಂದಾಗಿ ಕಂಡು ಕನ್ನಡದ ಓದುಗರಿಗೆ ಜಾಗತಿಕ ಆಗುಹೋಗುಗಳ ಪರಿಚಯ ಮತ್ತು ವೈಚಾರಿಕ ಸಂವಾದಗಳ ಸಾರಾಂಶ ನೀಡಿ, ಸಮಕಾಲೀನ ಚರ್ಚೆಗಳೆಲ್ಲವನ್ನು ಕನ್ನಡದಲ್ಲಿಯೇ ಮುಂದುವರೆಸಲು ಸಮಾಜಮುಖಿ ಮುಂದಾಗಿದೆ.

ಕನ್ನಡವನ್ನುಅನ್ನದ ಭಾಷೆಯಾಗಿಸುವ ನಿಟ್ಟಿನಲ್ಲಿ ಕನ್ನಡಯುವಕ-ಯುವತಿಯರಿಗೆ ತಮ್ಮಜೀವನ ಹಾಗೂ ಉದ್ಯೋಗ ಕಟ್ಟಿಕೊಳ್ಳಲು ಬೇಕಿರುವ ಸಾಧನಗಳೆಲ್ಲವನ್ನೂ ನೀಡುವ ಮಹದಾಶೆಯನ್ನು ಹೊಂದಿದೆ. ಆಪಾದನೆ ಮಾಡುವ, ಘೋಷಣೆ ಕೂಗುವ ಹಾಗೂ ತೀರ್ಮಾನಗಳನ್ನು ಹೇರುವ ಬರಹಗಳ ಬದಲಿಗೆ ಅಂಕಿ-ಅಂಶಗಳ ಸಹಿತ ಸಮಸ್ಯೆಗಳನ್ನು ವಿಶ್ಲೇಶಿಸುವ ಮತ್ತು ಸಾಮಾಜಿಕ-ಆರ್ಥಿಕ-ರಾಜಕೀಯ ಪ್ರಕ್ರಿಯೆಗಳ ಅಂತಃ ಸತ್ವವನ್ನು ಓದುಗರ ಮುಂದೆ ಅನಾವರಣಗೊಳಿಸುವ ಉದ್ದೇಶ ಹೊಂದಿದೆ. ಉತ್ತಮ ಸಾಹಿತ್ಯಕ್ಕೆ ಮನಮುದಗೊಳಿಸುವ, ಅಹ್ಲಾದಕರ ವಾತಾವರಣ ಮೂಡಿಸುವ ಹಾಗೂ ಮುರಿದ ಮನಸ್ಸುಗಳನ್ನು ಜೋಡಿಸುವ ಚಿಕಿತ್ಸಕ ಗುಣವಿದೆಯೆಂದೂ ತೋರಿಸುವ ಇರಾದೆಯನ್ನು ಸಮಾಜಮುಖಿ ಹೊಂದಿದೆ. ಸುಲಭವಾಗಿ ಪರಿಚಯಿಸಲು ಹೇಳುವುದಾದರೆ ಇದುಭಾರತ ಭಾಷಾಸಾಹಿತ್ಯದಲ್ಲಿ ಬೆಳಕು ಕಂಡಿರುವ ಗಂಭೀರ ಡೈಜೆಸ್ಟ್ ಮಾದರಿಗೂ ಮೀರಿದ ಹಾಗೂ ಕನ್ನಡಿಗರೆಲ್ಲರೂ ಓದಲೇಬೇಕಾದ ಅಪ್ರತಿಮ ಪ್ರಯೋಗವಾಗಿದೆ.

 

ಸಮಾಜಮುಖಿ ಅಂತರ್ಜಾಲ ತಾಣದ ಹಿರಿಮೆಯೇನು..?

ಚಿಂತನಶೀಲ ಸಮಾಜಮುಖಿ ಮಾಸಿಕದಲ್ಲಿ ಮುದ್ರಣವಾದ ಎಲ್ಲ ಲೇಖನಗಳು ನಿಮಗೆ ಸಮಾಜಮುಖಿ ಜಾಲತಾಣದಲ್ಲಿ ದೊರಕುತ್ತವೆ. ಮುಖಪುಟದಲ್ಲಿ ಇತ್ತೀಚೆಗಿನ ಸಂಚಿಕೆಯ ಪ್ರಮುಖ ಲೇಖನಗಳಿದ್ದರೆ ವಿವಿಧ ವಿಭಾಗಗಳ ಬೇರೆಲ್ಲಾ ಲೇಖನಗಳು ಚಿತ್ರಸಹಿತ ನಿಮಗೆ ದೊರಕುತ್ತವೆ. ಜಾಗದ ಕೊರತೆಯಿಂದ  ಪತ್ರಿಕೆಯಲ್ಲಿ ಮೊಟಕುಗೊಂಡ ಕೆಲವು ಲೇಖನಗಳು ಹಾಗೂ ಚಿತ್ರಗಳು ನಿಮಗೆ ಜಾಲತಾಣದಲ್ಲಿ ಸಂಪೂರ್ಣವಾಗಿ ದೊರಕುತ್ತವೆ (ಇವುಗಳನ್ನು ವಿಶೇಷವಾಗಿ ನಮೂದಿಸಲಾಗಿದೆ). ಇವುಗಳ ಜೊತೆಗೆ ವಾರದ ಚರ್ಚೆ ಅಂಕಣ ಪುಟದಲ್ಲಿ ಪತ್ರಿಕೆಯಲ್ಲಿ ಮುದ್ರಿತವಾಗದ ಹಲವು ಲೇಖನಗಳು ಹಾಗೂ ಅಭಿಪ್ರಾಯಗಳು ನಿಮಗೆ ಲಭ್ಯ. ಜಾಲತಾಣದಲ್ಲಿ ದೊರಕಿದ ಎಲ್ಲ ಲೇಖನಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳನ್ನು ಮುಂದುವರೆದ ಚರ್ಚೆಯಾಗಿ ನೀವು ನೀಡಬಹುದು. ಇವುಗಳನ್ನು ಸೂಕ್ತ ಸಂಪಾದನೆಯ ನಂತರ ಜಾಲತಾಣದಲ್ಲಿ ಆಯಾ ಲೇಖನಗಳ ಕೆಳಗೆ ಪ್ರಕಟಿಸಲಾಗುತ್ತದೆ.

ಸಂಪಾದಕೀಯ ತಂಡ

ಸಂಪಾದಕ : ಚಂದ್ರಕಾಂತ ವಡ್ಡು

ಗೌರವ ಸಹಸಂಪಾದಕ : ಪೃಥ್ವಿದತ್ತ ಚಂದ್ರಶೋಭಿ

ಸಂಪಾದಕೀಯ ಸಲಹಾ ಸಮಿತಿ : ನಾಗೇಶ ಹೆಗಡೆ, ಪದ್ಮರಾಜ ದಂಡಾವತಿ, ಪ್ರೊ ಎನ್.ಬೋರಲಿಂಗಯ್ಯ, ವಸಂತ ಶೆಟ್ಟಿ, ಡಾ.ಕೆ.ಪುಟ್ಟಸ್ವಾಮಿ, ರಘುನಂದನ, ಡಾ.ಟಿ.ಆರ್.ಚಂದ್ರಶೇಖರ, ಪ್ರೊ.ಬಿ.ಜಯಪ್ರಕಾಶಗೌಡ, ಸಿ.ಚನ್ನಬಸವಣ್ಣ, ಡಾ.ರಾಜೇಂದ್ರ ಚೆನ್ನಿ, ಡಾ.ಮಾಲತಿ ಪಟ್ಟಣಶೆಟ್ಟಿ, ಪಿ.ಬಿ.ಕೋಟೂರ, ನಿತ್ಯಾನಂದ ಶೆಟ್ಟಿ, ಡಾ.ಪ್ರಕಾಶ ಭಟ್, ಡಾ.ಜ್ಯೋತಿ, ಸುಧೀಂದ್ರ ಬುಧ್ಯ, ಡಾ.ಎಚ್.ಎಸ್.ಅನುಪಮಾ, ಡಾ.ವಿಷ್ಣು ಶಿಂದೆ, ಟಿ.ಎಸ್.ವೇಣುಗೋಪಾಲ್, ಕಮಲಾಕರ ಕಡವೆ, ಡಾ.ಕಲೀಂ ಉಲ್ಲಾ, ಡಾ.ಕೆ.ಎಂ.ಮ್ಯಾಥ್ಯೂ, ಡಾ.ಜಾಜಿ ದೇವೇಂದ್ರಪ್ಪ, ಎಂ.ಕೆ.ಆನಂದರಾಜೇ ಅರಸ್  ಮತ್ತು ನೀವು.

 

ನಮ್ಮ ಅಂಚೆ ವಿಳಾಸ:
ಸಮಾಜಮುಖಿ ಪ್ರಕಾಶನ ಪ್ರೈವೇಟ್ ಲಿಮಿಟೆಡ್
ನಂ. 114, ಕೃಷ್ಣಪ್ಪ ಲೇಔಟ್, ಲಾಲ್ ಬಾಗ್ ರಸ್ತೆ, ಬೆಂಗಳೂರು-560027
Samajamukhi Prakashana Private Limited
No. 114,   Krishnappa, Layout, Lalbagh Road, Bangalore-560027

ದೂರವಾಣಿ  : 96069 34018

Telephone number : 96069 34018

ಇ-ವಿಳಾಸ : email : samajamukhi2017@gmail.com

 

ಈ ಜಾಲತಾಣದ ಎಲ್ಲಾ ಹಕ್ಕುಗಳು ‘ಸಮಾಜಮುಖಿ ಪ್ರಕಾಶನ ಪ್ರೈ.ಲಿ.’ ಬಳಿ ಇರುತ್ತವೆ.
All rights of this website are with ‘Samajamukhi Prakashana P Ltd.’