ನಾಯಿಕತೆಗೆ ಸಾವಿರ ರೂಪಾಯಿ!

ನಾಯಿ ಮುಖ ನೋಡಬೇಕು ನ್ಯಾಯವಾಗಿ ಬಾಳಬೇಕುಎನ್ನುತ್ತಾ ಕೈ ಮುಗಿದು ನಿಂತ್ಲು ಸುಬ್ಬಿ. ಮನೆಯಲ್ಲೊಂದು ನಾಯಿ ಸಾಕಿದ್ಲು, ಇದು ದೇವರ ನಾಯಿ ಎಂದು ಹೆಸರಿಟ್ಟು ತಿಮ್ಮನ ಹಿಂದೆ ಬಿಟ್ಲು!

ಅಜಮೀರ ನಂದಾಪುರ

ಅವನ ಕಥೆ ಕೇಳಲು ಮೂರು ತಿಂಗಳ ಮುಂಚೆ ಹೆಸರು ಬರೆಸಬೇಕಿತ್ತು. ಸುತ್ಲು ಊರಿಂದ ಜನ ಕಥೆ ಕೇಳಲು ನೀರಿನಂತೆ ಹರಿದು ಬರುತ್ತಿತ್ತು. ಒಂದು ಕಥೆ ಹೇಳಲು ಅವನು ಸಾವಿರದೊಂದು ರುಪಾಯಿ ಫೀಜು ಮಾಡಿದ್ದ, ಕಥೆ ಕೇಳುವ ಸೌಭಾಗ್ಯ ಎಲ್ಲರಿಗೂ ಸಿಗ್ತಿರಲಿಲ್ಲ, ಕತೆ ಕೇಳುವ ಸೌಭಾಗ್ಯ ಸಿಕ್ರೆ ಧನ್ಯರಾಗ್ತಿದ್ರು. ಎಷ್ಟೋ ಜನರು ಕಥೆ ಕೇಳಲು ಬಂದರೆ ಪಾಳಿ ಸಿಗ್ದೆ ಮೂರು ಮೂರು ದಿನ ಕಾಯ್ತಿದ್ರು, ದುಡ್ಡಿದ್ದವರು, ಇಲ್ಲದವರು, ಸೇವಕರು, ಸಮಾಜ ಸುಧಾರಕರು, ರಾಜಕಾರಣಿಗಳು, ಪಂಡಿತರು, ಪಾಮರರು, ಶಾಲಾ ಮಕ್ಕಳು ಮೇಷ್ಟ್ರು ಸಹ ಸಾವಿರದೊಂದು ರೂಪಾಯಿ ಇಟ್ಟು ಕಥೆ ಕೇಳಿ ಪಾವನರಾಗ್ತಿದ್ರು.

ಮೊದ್ಲೆಲ್ಲ ನಮ್ಮೂರಲ್ಲಿ ಕಟ್ಟೆಯ ಮೇಲೆ ಅಜ್ಜಿ ಹೇಳುವ ಕಥೆಯನ್ನು ನಾವೆಲ್ಲ ಗುಂಪು ಗುಂಪಾಗಿ ಕುಳಿತು ಕಿವಿ ನಿಮಿರಿ ಕೇಳುತ್ತಿದ್ದೇವು, ಆಗ್ಯಾವ ಫೀಸು ಇರ್ತಿರಲಿಲ್ಲ ಕತೆಯ ನಡುನಡುವೆ ಹೂಂ ಅನ್ನಬೇಕಿತ್ತು. ಕಥೆ ಕುತೂಹಲ ಕ್ಲೈಮ್ಯಾಕ್ಸ್ ತಲುಪಿದಾಗ ಅಜ್ಜಿ ಇದ್ದಕ್ಕಿದ್ದಂತೆ ಕಥೆ ಅರ್ಧಕ್ಕೆ ನಿಲ್ಲಿಸಿ ಮನೆಗೆ ಹೋಗಿ ಊಟ ಮಾಡಿ ಬರ್ರಿಅಂತಿದ್ಲು. ಥುಥು ಕತೆ ಮುಗಿದ ಮೇಲೆ ಊಟ, ನೀವು ಕತೆ ಮುಗಿಸಿ ಅಜ್ಜಿ ಅಂದ್ರು ಪಟ್ಟು ಸಡಿಲುಸುತ್ತಿರಲಿಲ್ಲ. ಹುಂ ಅನ್ನದಿದ್ರೆ ಅಜ್ಜಿ ಕಥೆ ಹೇಳುವುದನ್ನು ನಿಲ್ಲಿಸಿ ಬಿಡುತ್ತಿದ್ದರು. ಆವಾಗೆಲ್ಲ ಹೂಂ ಅನ್ನುವುದೇ ಫೀಜು ಇದ್ದಂಗ. ಹುಂ ಅನ್ನುವನನ್ನು ಫಿಕ್ಸು ಮಾಡಿದ ಮೇಲೆ ಅಜ್ಜಿ ಕಥೆ ಹೇಳುವುದನ್ನು ಶುರು ಮಾಡುತ್ತಿದ್ಲು.

ಆದರೆ ಈಗ ಕಥೆ ಕೇಳುವುದಕ್ಕೆ ಸಾವಿರದೊಂದು ರುಪಾಯಿ ಕೊಡಬೇಕೆಂದರೆ ಬೇಜಾರಾಗ್ತಿತ್ತು ಅಂತಿದ್ರು ಜನ. ವೈದ್ಯರು, ವಕೀಲರು ಕಥೆ ಕೇಳಿ ಪುನೀತಗೊಳ್ತಿದ್ರು, ಸಾವಿರದೊಂದು ರೂಪಾಯಿ ಫೀಸು ಮುಖ್ಯವಲ್ಲ ತಿಮ್ಮನ ಬಾಯಿಂದ ಕಥೆ ಕೇಳುವ ಭಾಗ್ಯ ಸಿಗುವುದು ಮುಖ್ಯ ಎಂದು ಚಿತ್ರಮಂದಿರಕ್ಕೆ ನುಗ್ಗಿದಂತೆ ಜನ ತಿಮ್ಮನ ಕಥೆ ಕೇಳಲು ನುಗ್ತಿದ್ರು. ಕೆಲವರಿಗೆ ತಿಮ್ಮ ಸಾಮೂಹಿಕವಾಗಿ ಕಥೆ ಹೇಳಿದರೆ ತುಂಬಾ ಬೇಕಾದವರಿಗೆ ಪ್ರತ್ಯೇಕವಾಗಿ ಕಥೆ ಹೇಳ್ತಿದ್ದ. ಕಥೆ ಹೇಳುವ ವಿಚಾರದಲ್ಲಿ ತಿಮ್ಮನನ್ನು ಮೀರಿಸುವ ಪರಮ ಗಂಡಸು ಆ ಭಾಗದಲ್ಲಿರಲಿಲ್ಲ. ಜಾತರಿಗೆ ಬರುವಂತೆ ಬಂಡಿ ಕಟ್ಟಿಕೊಂಡು ತಿಮ್ಮ ಹೇಳುವ ಕಥೆಗೆ ಮುಗಿಬೀಳ್ತಿದ್ರು. ತಿಮ್ಮನಿಗೆ ಕೊಡುವ ದುಡ್ಡು ದೊಡ್ಡದಲ್ಲ, ಆತ ಹೇಳುವ ಕಥೆ ದೊಡ್ಡದು ಎಂದು ಧಿಮಾಕು ತೋರಿಸಿದ್ರು.

ತಿಮ್ಮನ ಕಥೆಯ ಮಹಿಮೆ ಎಲ್ಲ ಊರುಗಳಿಗೆ ಪಸರಿಸಿತು, ತಿಮ್ಮನ ಪ್ರಭಾವ ಸುಬ್ಬಿಗೂ ಗೊತ್ತಾಯಿತು. ಅದೇನ್ ಕಥೆ ಹೇಳ್ತಾನೆ ಅಂತ ಸುಬ್ಬಿಯೂ ಸಾಲಿಗೆ ನಿಂತ್ಲು. ಮೂರು ದಿನಕ್ಕೆ ಪಾಳಿ ಸಿಕ್ತು. ಕಥೆ ಹೇಳುವ ತಿಮ್ಮ ಯಾರ ಮುಖವೂ ನೋಡದೆ ಹೇಳ್ತಿದ್ದ. ಸುಬ್ಬಿ ಸಾವಿರದೊಂದು ರೂಪಾಯಿ ಇಟ್ಟು ಕಥೆ ಶುರು ಮಾಡಂದ್ಲು. ತಿಮ್ಮ ಕಥೆ ಪ್ರಾರಂಭಿಸಿದ, “ನಾಯಿ ಮುಖ ನೋಡಬೇಕು ನ್ಯಾಯವಾಗಿ ಬಾಳಬೇಕುಕತೆ ಮುಗಿತು ಅಂದ.

ಪಕ್ದಲ್ಲಿದ್ದ ಸಮಾಧಿ ತೋರಿಸಿ ಕೈ ಮುಗಿದು ಬರ್ರಿ ಅಂದ. ಕಠಾಣಿ ಒತ್ತೆಯಿಟ್ಟು ದುಡ್ಡು ತಂದಿದ್ಲು. ನಾಯಿ ಕತೆ ಕೇಳಿದವರು ಉದ್ದಾರ ಆಗ್ತಾರೆ ಎಂಬ ನಂಬಿಕೆ ಆ ಊರಲ್ಲಿತ್ತು. “ನಾಯಿ ಮುಖ ನೋಡಬೇಕು ನ್ಯಾಯವಾಗಿ ಬಾಳಬೇಕುಎಂದು ಹೇಳಿ ಕತೆ ಮುಗಿಸಿದ, ವಿವರಣೆ ಬೇಕೆಂದರೆ ಮತ್ತೆ ಫೀಜು ಕೊಡಬೇಕೆಂದ. ಸುಬ್ಬಿ, ಕಥೆ ಕೇಳಲು ಕುಂತ ಮೇಲೆ ಪೂರ್ಣವಾಗಿ ಕೇಳ್ಲೆಬೇಕೆಂದು ತೀರ್ಮಾನಿಸಿ ಮತ್ತೊಂದು ಸಾವಿರ ರೂಪಾಯಿ ನಾಯಿ ಸಮಾಧಿಗೆ ಸಮರ್ಪಿಸಿ ಕಥೆ ಮುಂದುವರೆಸು ಅಂದ್ಲು.

ನನ್ನ ಬದ್ಧವೈರಿ ಬುಲ್ಡಿ ಈರ ದೇವಸ್ಥಾನದ ಚೆರ್ಮನ್ ಆಗಿದ್ದ. ಪ್ರಧಾನ ಪೂಜಾರಿಯಾಗಿ ಊರುಜನ ನನ್ನನ್ನು ನೇಮಿಸಿದ್ರು. ನಾನು ದೇವಸ್ಥಾನಕ್ಕೆ ಹೋಗುವಾಗ ನನ್ನ ಸಾಕು ನಾಯಿ ನಿಷ್ಠೆಯಿಂದ ಹಿಂಬಾಲಿಸುತ್ತಿತ್ತು. ನಾಯಿ ಮುಖ ನೋಡಿದವರಿಗೆಲ್ಲ ಒಳ್ಳೆಯದಾಗುತ್ತಿತ್ತು. ಆ ಊರಲ್ಲಿ ಒಬ್ಬನಿಗೆ ಸರ್ಕಾರಿ ನೌಕರಿ ಸಿಕ್ಕಿತ್ತು. ನಾಯಿ ಮುಖ ನೋಡಿ ಪರೀಕ್ಷೆ ಬರೆದವರೆಲ್ಲ ಅತಿ ಹೆಚ್ಚು ಅಂಕ ಪಡಿತಿದ್ರು. ತಿಮ್ಮನ ನಾಯಿ ಮುಖ ನೋಡಿದ ಬಹುತೇಕ ಕನ್ಯೆಯರಿಗೆ ಕಂಕಣ ಭಾಗ್ಯ ಕೂಡಿ ಬಂದಿತ್ತು, ಕೆಲವರಿಗೆ ಪ್ರಮೋಷನ್ ಸಿಕ್ಕಿತ್ತು. ನಾಯಿ ಮುಖ ನೋಡಿ ಚುನಾವಣೆಗೆ ನಿಂತವರು ತಮ್ಮ ಎದುರಾಳಿ ಅಭ್ಯರ್ಥಿಯನ್ನು ಸುಲಭವಾಗಿ ಸೋಲಿಸಿದ್ದರು.

ನಾಯಿಯ ಫೆÇೀಟೋ ಪ್ರತಿ ಮನೆಯ ಗೋಡೆಯ ಮೇಲೆ ನೇತಾಕಿ ನಮಸ್ಕರಿಸುವ ಪದ್ಧತಿ ಇತ್ತು. ನಾಯಿ ಮಹಿಮೆಯಿಂದ ತಿಮ್ಮ ಪೂಜಾರಿಯ ಕೆಲಸ ಬಿಟ್ಟಿದ್ದ. ಇದರಿಂದ ಸಿಟ್ಗೆದ್ದ ಬುಲ್ಡಿ ಈರ ನನಗೆ ಹಿಗ್ಗಾಮುಗ್ಗಾ ಬೈದು ಊರು ಬಿಡಿಸುವ ಪ್ಲಾನ್ ಮಾಡಿದ. ದೇವಿಯ ಮಹಿಮೆಗಿಂತ ನನ್ನ ನಾಯಿಯ ಮಹಿಮೆ ಹೆಚ್ಚಿತ್ತು. ದೇವಸ್ಥಾನಕ್ಕೆ ಹೋಗುವ ಭಕ್ತರೆಲ್ಲ ನನ್ನ ಮನೆಯ ಮುಂದೆ ಸಾಲು ಸಾಲಾಗಿ ನಿಂತು ಗಲ್ಲಗಲ್ಲ ಬಡಿದುಕೊಳ್ತಿದ್ರು. ಕೆಲವರಿಗೆ ಒಳ್ಳೆಯದಾದರೆ ಚಿನ್ನದ ಸರ ಮಾಡ್ಸಿ ನಾಯಿಯ ಕೊರಳಿಗೆ ಹಾಕ್ತಿದ್ರು. ಕೆಲವು ಧನಿಕರಂತು ನಾವು ಬೆಳೆದಿದ್ದೆ ನಾಯಿ ಮುಖದಿಂದ ಎಂದು ಚಿನ್ನದ ಜೀನು ನಾಯಿ ಮೈಗೆ ತೊಡಿಸಿ ಫೆೀಟೋ ತೆಗ್ಸಿ ಪವಿತ್ರ ಗೊಳ್ತಿದ್ರು.

ದೇವಸ್ಥಾನದ ಚೇರ್ಮನ್ ಬುಲ್ಡಿ ಈರನಿಗೆ ನನ್ನ ಪ್ರಸಿದ್ಧಿ ಸಹಿಸಲಾಗಲಿಲ್ಲ ತಾನು ಒಂದು ಕರೀ ನಾಯಿ ಸಾಕಿದ. ನನ್ನ ವಿರುದ್ಧ ಛೂ ಬಿಡಲು ಪ್ರಯತ್ನಿಸಿದ. ತಿಮ್ಮನ ನಾಯಿ ಕಂಡಾಗಲೆಲ್ಲ ಬೌವ್ ಅಂತಿತ್ತು. ನಾಯಿ ಮುಖ ನೋಡಿ ಬಂದವರಿಗೆಲ್ಲ ದುರುಗುಟ್ಟಿ ನೋಡಿ ಹಲ್ಲು ತೆಗೆದು ಗುರ್ ಅಂತಿತ್ತು. ಕೆಲವರಿಗೆ ಬೆನ್ನಟ್ಟಿ ತಿರುವ್ಯಾಡಿತ್ತು. ಇದರಿಂದ ನನಗೆ ತುಂಬಾ ಬೇಸರವಾಯಿತು. ನಾಯಿ ಮುಖ ನೋಡುವುದಿಲ್ಲ ಎಂದು ಧಿಮಾಕು ತೋರಿಸಿದ್ದ ಬುಲ್ಡಿ ಈರ ಪಂಚಾಯಿತಿ ಚುನಾವಣೆಯಲ್ಲಿ ಮೂರು ಬಾರಿ ಸೋತಿದ್ದ. ಗತಿಯಿಲ್ಲದೆ ದೇವಸ್ಥಾನದ ಚೇರ್ ಮನ್ ಆಗಿದ್ದ. ಈರನ ಆದಾಯ ಕಡಿಮೆಯಿತ್ತು, ಆದರೆ ತಿಮ್ಮನ ಖಜಾನೆ ತುಂಬಿ ತುಳುಕುತ್ತಿತ್ತು. ಹೇಗಾದರೂ ಮಾಡಿ ತಿಮ್ಮನನ್ನು ಊರಿಂದ ಓಡಿಸಬೇಕೆಂದು ಈರ ಪ್ಲಾನ್ ಮಾಡಿದ.

ಊರಲ್ಲಿ ಕುಲಕಂಟಕರನ್ನು ಸೇರಿಸಿ ಸಭೆ ನಡೆಸಿದ. ಯಾವುದೋ ನಾಯಿಯನ್ನು ತಂದು ಈ ತಿಮ್ಮ ಊರ ಮಾನ ತೆಗೆದಿದ್ದಾನೆ ಎಂದು ಬೋಂಗಾ ಊದಿದ. ಕೆಲವು ಜನ ನಂಬಿದರು. ದೇವಸ್ಥಾನದೊಳಗೆ ತಿಮ್ಮನ ಚಪ್ಲಿ ಕಂಡು ಊರ ಜನ ರೊಚ್ಚಿಗೆದ್ರು. ದೇವಸ್ಥಾನದಲ್ಲಿ ತಿಮ್ಮನ ಕೆರವು ನೋಡಿದ ಕೆಲವರು ಬುಲ್ಡಿ ಈರನಿಗೆ ಸುದ್ದಿ ಮುಟ್ಟಿಸಿದ್ರು. ಇದು ಅವನ ನಾಯಿ ಮಾಡಿದ ಕಿತಾಪತಿ ಎಂದು ಕಿವಿಯಿಂದ ಕಿವಿಗೆ ಪಾರ್ಸಲ್ ಮಾಡಿದ. ಬುಲ್ಡಿ ಈರನ ಗುಂಪು ಮನೆಗೆ ನುಗ್ಗಿ ತಿಮ್ಮನನ್ನು ತಳ್ಳಾಡಿದರು. ನಾಯಿಗೂ ಮನಬಂದಂತೆ ಬಡಿದರು ಜನರ ಏಟಿಗೆ ನಾಯಿ ಪ್ರಾಣ ಬಿಟ್ಟಿತು.

ಅಂದು ರಾತ್ರಿ ಈರ, ‘ಲೇ ತಿಮ್ಮಹೇಗಿತ್ತು ನನ್ನ ಕರಿ ನಾಯಿಯ ಪವಾಡ…’ ಎಂದು ಕುಡಿದು ಕೇಕೆ ಹೊಡೆದಿದ್ದ. ಈರನ ಕರಿ ನಾಯಿ ತಿಮ್ಮನ ಚಪ್ಲಿಯನ್ನು ಬಾಯಲ್ಲಿಟ್ಟು ಗರ್ಭಗುಡಿಗೆ ತಂದು ಬಿಟ್ಟಿತ್ತು. ಈ ವಿಷಯ ಊರಿನ ಎಲ್ಲ ಜನರಿಗೆ ತಿಳಿದೋಯ್ತು. ಈರನ ಅಸಲಿ ಚಾಳಿ ಅರಿತ ಊರಿನ ಜನ ಸುಮ್ನಿರ್ಲಿಲ್ಲ. ನಾಯಿ ಪ್ರೀತಿಗೆ ಮನಸೋತು ಭಾವುಕರಾದ ಭಕ್ತರೆಲ್ಲ ತಿಮ್ಮನ ಕಾಲಿಗೆ ಬಿದ್ದು ಕ್ಷಮೆ ಕೋರಿದರು. ಸತ್ತ ನಾಯಿಯನ್ನು ಹೂವಿನ ಹಾರದಲ್ಲಿ ಮೆರೆಸಿದರು, ಊರಿನ ಜನರೆಲ್ಲ ಕಂಬನಿ ಮಿಡಿದರು, ಶ್ರದ್ಧೆ ಭಕ್ತಿಯಿಂದ ಶ್ರಾದ್ಧ ಮಾಡಿದ್ರು. ಜನ ನಾಯಿಯ ಸಮಾಧಿ ನೋಡಲು ಧಾವಿಸಿ ಬಂದ್ರು. ನಾಯಿ ಮುಖ ನೋಡಲು ಮಿಸ್ ಆದವರು ಸಮಾಧಿ ಮುಟ್ಟಿ ದೀರ್ಘದಂಡ ನಮಸ್ಕಾರ ಮಾಡಿದರು ನಾಯಿಯ ಘನತೆ ಹೆಚ್ಚಿದಂತೆ ತಿಮ್ಮನು ಪ್ರಸಿದ್ಧಿಗೆ ಬಂದ. ನಿತ್ಯ ಸಂಜೆಯಾಗುತ್ತಲೇ ನಾಯಿ ಸಮಾಧಿ ಮುಟ್ಟಿ ಬಂದವರಿಗೆ ನಾಯಿಯ ಕಥೆ ಹೇಳುತ್ತಿದ್ದ. ನೂಕುನುಗ್ಗಲು ತಡೆಗಟ್ಟಲು ಸಾವಿರದೊಂದು ರೂಪಾಯಿ ಫೀಸು ಮಾಡಿದೆ ಎಂದು ನಾಯಿಯ ಕಥೆ ಬಿಚ್ಚಿಟ್ಟ.

ಸುಬ್ಬಿಗೆ ಕಣ್ಣು ತೇವವಾಯಿತು ನಾಯಿ ಮುಖ ನೋಡಬೇಕು ನ್ಯಾಯವಾಗಿ ಬಾಳಬೇಕುಎನ್ನುತ್ತಾ ಕೈ ಮುಗಿದು ನಿಂತ್ಲು ಸುಬ್ಬಿ. ಮನೆಯಲ್ಲೊಂದು ನಾಯಿ ಸಾಕಿದ್ಲು, ಇದು ದೇವರ ನಾಯಿ ಎಂದು ಹೆಸರಿಟ್ಟು ತಿಮ್ಮನ ಹಿಂದೆ ಬಿಟ್ಲು.

Leave a Reply

Your email address will not be published.