ಪರ್ಯಾಯ ಪತ್ರಿಕೋದ್ಯಮ ಹೊಸ ಸಾಧ್ಯತೆಗಳು

ಸ್ಥಳೀಯ ಸುದ್ದಿ ಮತ್ತು ತನಿಖಾ ಪತ್ರಿಕೋದ್ಯಮವನ್ನು ಬೆಂಬಲಿಸಲು ಗೂಗಲ್ ಸಂಸ್ಥೆ ಸಹ ಧನಸಹಾಯ ನೀಡುತ್ತಿದೆ. ಅಮೆರಿಕ ಮತ್ತು ಕೆನಡಾ ದೇಶಗಳ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ತನಿಖಾ ಪತ್ರಕರ್ತರಿಗೆ ನಿಗದಿತ ಅವಧಿಗೆ ವೇತನವನ್ನು ನೀಡುತ್ತದೆ. ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ಕೊರತೆಯನ್ನು ನೀಗಿಸವಲ್ಲಿ ಇಂತಹ ಪ್ರಯತ್ನಗಳು ಬಹಳ ಮುಖ್ಯವಾಗುತ್ತಿವೆ.

ಡಾ..ಎಸ್.ಬಾಲಸುಬ್ರಹ್ಮಣ್ಯ

ತಂತ್ರಜ್ಞಾನ ಬದಲಾಗುತ್ತಿದ್ದಂತೆ ಮಾಧ್ಯಮ ಸಂಸ್ಥೆಗಳ ಸ್ವರೂಪವೂ ಬದಲಾಗುತ್ತಿದೆ. ಅದು ಸಹಜ ಪ್ರಕ್ರಿಯೆ ಕೂಡ. ಇದು ಎಲ್ಲ ಬಗೆಯ ಉದ್ದಿಮೆಗಳಿಗೆ ಅನ್ವಯಿಸುತ್ತದೆ. ನೂರಕ್ಕೂ ಅಧಿಕ ವರ್ಷಗಳ ಕಾಲ ಪತ್ರಿಕೆಗಳು ಸಮಾಜದಲ್ಲಿ ಬಹು ನಿರ್ಣಾಯಕ ಪಾತ್ರ ವಹಿಸಿದ್ದವು. 1990 ರ ನಂತರದ ಕಂಪ್ಯೂಟರ್ ತಂತ್ರಜ್ಞಾನ ಆಧಾರಿತ ಸಂಪರ್ಕ ಕ್ರಾಂತಿ ಬಹು ಗಂಭೀರ ಬದಲಾವಣೆಗೆ ಕಾರಣವಾಯಿತು. ಸಮುದಾಯ ಆಧಾರಿತ ಅವಲಂಬನೆಯ ಬದಲು ವ್ಯಕ್ತಿ ಆಧಾರಿತ ಸೇವೆಗಳ ಲಭ್ಯತೆ ನಮ್ಮ ಆಲೋಚನಾ ಕ್ರಮವನ್ನೇ ಬದಲಿಸಿತು. ಕಂಪ್ಯೂಟರ್ ಆಧಾರಿತ ಅಂತರ್ಜಾಲ ಸೇವೆಗಳು ಸಮಾಚಾರದ ಮಹಾಪೂರವನ್ನೇ ನಮ್ಮ ಮುಂದೆ ಇರಿಸಿದವು. ಸುದ್ದಿ, ವಿಶ್ಲೇಷಣೆ ಹಾಗೂ ಅಭಿಪ್ರಾಯಗಳು ಕ್ಷಣ ಮಾತ್ರದಲ್ಲಿ ಕಂಪ್ಯೂಟರ್, ನಂತರ ಮೊಬೈಲ್‍ಗಳಲ್ಲಿ ಹರಿದಾಡಲಾರಂಭಿಸಿದವು.

ತದನಂತರ ಓದುಗರ ಮತ್ತು ಜಾಹೀರಾತಿನ ಬೆಂಬಲ ಪತ್ರಿಕೆಗಳಿಗೆ ಕ್ಷೀಣಿಸತೊಡಗಿತು. ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಪತ್ರಿಕೆಗಳು ಇಂದು ಸಂಕಷ್ಟದಲ್ಲಿವೆ. ಮುಂದುವರಿದ ಅಮೆರಿಕಾ ಹಾಗೂ ಯುರೋಪಿನ್ನಲ್ಲಂತೂ ಪತ್ರಿಕೆಗಳ ಸ್ಥಿತಿ ಬಹು ಗಂಭೀರ. ಕಳೆದ ಮೂರು ದಶಕಗಳಲ್ಲಿ ಆದ ಪರಿವರ್ತನೆಗಳು ಪತ್ರಿಕೆಗಳ ಅಸ್ತಿತ್ವವನ್ನೇ ಅಲುಗಾಡಿಸುತ್ತಿವೆ. ಜಾಹೀರಾತಿನ ಆದಾಯ ಕುಸಿದಿದೆ. ಏತನ್ಮಧ್ಯೆ, ಫೇಸ್ ಬುಕ್ ಮತ್ತು ಗೂಗಲ್ ಕಳೆದ ವರ್ಷವೊಂದರಲ್ಲೇ ತಮ್ಮ ಡಿಜಿಟಲ್ ಜಾಹೀರಾತು ವ್ಯವಹಾರಗಳಿಂದ ಶತಕೋಟಿ ಗಳಿಸಿವೆ. ಎರಡು ಕಂಪನಿಗಳು ಎಲ್ಲಾ ಡಿಜಿಟಲ್ ಜಾಹೀರಾತು ಆದಾಯದ ಸುಮಾರು 60% ನಷ್ಟು ಪಾಲನ್ನು ಹೊಂದಿವೆ ಎಂದರೆ ಈ ದೈತ್ಯ ಟೆಕ್ ಕಂಪನಿಗಳ ಪ್ರಭಾವ ಊಹಿಸಬಹುದಾಗಿದೆ.

ಅನೇಕ ಕಡೆ ಸ್ಥಳೀಯ ಸುದ್ದಿಯನ್ನು ಪ್ರಕಟಿಸುವ ಪತ್ರಿಕೆಗಳೇ ಇಲ್ಲ. ಜನರ ಸಮಸ್ಯೆಗಳನ್ನು ಸ್ಥಳೀಯವಾಗಿ ಚರ್ಚಿಸುವ ವೇದಿಕೆಗಳೇ ಇಲ್ಲ. `ಸುದ್ದಿ ಕ್ಷಾಮಉಂಟಾಗಿದೆ. ಇದು ಪ್ರಜಾಸತ್ತೆಗೆ ಮಾರಕ ಎಂದು ಮಾಧ್ಯಮ ತಜ್ಞರು ಆತಂಕಗೊಂಡಿದ್ದಾರೆ. ಇಂತಹ ಗಂಭೀರ ತೊಡಕುಗಳ ನಡುವೆ, ಪರ್ಯಾಯ / ಸ್ವತಂತ್ರ / ಲಾಭರಹಿತ / ಸಮುದಾಯ ಆಧಾರಿತ / ಪತ್ರಿಕೋದ್ಯಮ ಪ್ರಭೇದಗಳು ಹೊರ ಹೊಮ್ಮುತ್ತಿರುವುದು ಸಂತಸಕರ. ಈ ಬಗೆಯ ಪತ್ರಿಕೋದ್ಯಮಕ್ಕೆ ವಿಶ್ವದಾದ್ಯಂತ ನೀರೆರೆಯುವ ಪ್ರಯತ್ನಗಳು ನಡೆಯುತ್ತಿವೆ.

ಇದು ಸಾಧ್ಯವಾಗುತ್ತಿರುವುದು ಓದುಗರ ಬೆಂಬಲ ಮತ್ತು ದೇಣಿಗೆ ಸಂಸ್ಥೆಗಳ ನೆರವು ಹಾಗೂ ಸಹಕಾರಗಳಿಂದ. ಬೃಹತ್ ಪತ್ರಿಕೆಗಳು, ದೃಶ್ಯ ಮಾಧ್ಯಮವಾದ ಟಿವಿ ವಾಹಿನಿಗಳಿಗೆ ಅಧಿಕ ಜಾಹೀರಾತು ಮತ್ತು ಪ್ರಾಯೋಜಕರು ಮುಂಬರುತ್ತಾರೆ. ಆದರೆ ಪತ್ರಿಕೆಗಳಿಗೆ, ಅದರಲ್ಲೂ ಸಣ್ಣ ಮತ್ತು ಸಮುದಾಯ ಪತ್ರಿಕೆಗಳಿಗೆ ಜಾಹೀರಾತು ಬರುವ ಪ್ರಮಾಣ ಬಹಳವಾಗಿ ಕ್ಷೀಣಿಸಿದೆ. ಗಂಭೀರ ಚರ್ಚೆಗಳಿಗೆ ಇಲ್ಲವೇ ತನಿಖಾ ವರದಿಗಳಿಗೆ ಪ್ರಾಯೋಜಕತ್ವ ಬಲು ಅಪರೂಪ.

ಜಾಹೀರಾತಿನ ಬೆಂಬಲ ಇಳಿಮುಖವಾಗುತ್ತಿದ್ದಂತೆ ಪತ್ರಿಕೆಗಳ ಮೇಲಿನ ಒತ್ತಡ ಅಧಿಕವಾಗಿ ಪತ್ರಕರ್ತರ ವೃತ್ತಿಪರ ಸ್ವಾಯತ್ತತೆಯ ಮೇಲೆ ಸಹ ಗುರುತರ ಪರಿಣಾಮಗಳು ಬೀರುತ್ತಿವೆ. ಮೊದಲಿಗೆ ಸುದ್ದಿ ಆಯ್ಕೆಯಲ್ಲಿ ಪತ್ರಕರ್ತರು ಬಹುತೇಕ ಪೂರ್ಣ ಪ್ರಮಾಣದ ಸ್ವಾತಂತ್ರ್ಯವನ್ನು ಹೊಂದಿದ್ದರು. ಅದು ಕ್ರಮೇಣ ಕುಂಠಿತವಾಗಿ ಈಗ ಆಡಳಿತ ಮತ್ತು ಜಾಹೀರಾತು ವಿಭಾಗದವರ ಪ್ರಭಾವ ಹೆಚ್ಚಿದೆ. ಒಂದು ಅಧ್ಯಯನದ ಪ್ರಕಾರ ಅಮೆರಿಕೆಯ ಪತ್ರಿಕಾ ಕಚೇರಿಗಳಲ್ಲಿ 1971 ಮತ್ತು 1982 ರ ಸಮಯದಲ್ಲಿ ಶೇ. 60 ರಷ್ಟು ಪತ್ರಕರ್ತರು ಸುದ್ದಿಲೇಖನಗಳನ್ನು ಆಯ್ಕೆ ಮಾಡುವಲ್ಲಿ ಬಹುತೇಕ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ್ದರು. ಆದರೆ 2013ರ ವೇಳೆಗೆ ಈ ಪ್ರಮಾಣ ಶೇ.33.6ಕ್ಕೆ ಕುಸಿಯಿತು. ಬಹುತೇಕ ಎಲ್ಲ ದೇಶಗಳಲ್ಲಿ ಪತ್ರಕರ್ತರ ವೃತ್ತಿಪರ ಸ್ವಾಯತ್ತತೆ ತೀವ್ರವಾಗಿ ಕುಸಿದಿದೆ. ವಾಣಿಜ್ಯ ಹಾಗೂ ಬಂಡವಾಳಶಾಹಿಗಳ ಮೇಲಾಟ ವೈಭವೀಕರಿಸುತ್ತಿದೆ. ಮುದ್ರಣ ಕಾಗದದ ತೀವ್ರ ಬೆಲೆ ಏರಿಕೆ, ಜಾಹೀರಾತಿನ ಕುಸಿತ ಹಾಗೂ ಅತಿ ಕಡಿಮೆ ಬೆಲೆಗೆ ಪತ್ರಿಕೆಗಳನ್ನು ಮಾರಬೇಕಾದ ಒತ್ತಡಗಳು ಪತ್ರಿಕಾ ಪ್ರಕಟಣೆಯನ್ನು ಸಂಕಷ್ಟಕ್ಕೆ ದೂಡಿವೆ.

ಸಮುದಾಯ ಸೇವೆಯನ್ನೇ ಮುಖ್ಯ ಆಶಯವನ್ನಾಗಿರಿಸಿಕೊಂಡ ಲಾಭರಹಿತ ಪ್ರಕಟಣೆಗಳು ಇಂದು ವಿಶ್ವದ ಹಲವು ದೇಶಗಳಲ್ಲಿ ಹೊರಬರುತ್ತಿವೆ. ಇವು ಸಾರ್ವಜನಿಕರ ಅಗತ್ಯಗಳನ್ನು ತ್ವರಿತವಾಗಿ ಮನಗಂಡಿವೆ ಮತ್ತು ಬೇರೆಲ್ಲಿಯೂ ಕಂಡುಕೊಳ್ಳಲಾಗದ ಮಾಹಿತಿ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿವೆ. ಪರ್ಯಾಯ ಪತ್ರಿಕೋದ್ಯಮವು 21ನೇ ಶತಮಾನದ ಅವಧಿಯಲ್ಲಿ ಬಹು ವೇಗವಾಗಿ ಬೆಳೆಯುತ್ತಿರುವುದು ಸ್ಥಳೀಯ ಸಮುದಾಯಗಳಲ್ಲಿ ಹೊಸ ಆಶಾಭಾವನೆಯನ್ನು ಸೃಷ್ಟಿಸಿದೆ.

ಬಹುಪಾಲು ಪಾಶ್ಚಿಮಾತ್ಯ ದೇಶಗಳ ನಗರಗಳು ಮತ್ತು ಗ್ರಾಮೀಣ ಸಮುದಾಯಗಳಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳು ಆರ್ಥಿಕ ಒತ್ತಡಗಳಿಂದ ಕಣ್ಮರೆಯಾದವು. ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ವಿಶ್ವಾಸಾರ್ಹ ಸುದ್ದಿಗಳ ಮೂಲಗಳೇ ಇಲ್ಲವಾದವು! ಹಲವಾರು ತಲೆಮಾರುಗಳಿಂದ ಪತ್ರಿಕೆಗಳನ್ನು ಓದಿ ಬೆಳೆದವರಿಗೆ ತಾವು ಏನೋ ಕಳೆದುಕೊಂಡೆವು ಎಂದು ಭಾಸವಾಯ್ತು. ಟಿವಿ ಇಲ್ಲವೇ ಡಿಜಿಟಲ್ ಮಾಧ್ಯಮಗಳು ಪತ್ರಿಕೆಗಳಷ್ಟು ಸಮರ್ಥವಾಗಿ ಸುದ್ದಿ ಇಲ್ಲವೇ ಅಭಿಪ್ರಾಯಗಳನ್ನು ಪ್ರತಿಬಿಂಬಿಸಲಾರವು ಎಂಬುದನ್ನು ಸಮುದಾಯಗಳು ಮನಗಂಡವು. ಹಲವರು ಪತ್ರಿಕೆಗಳಿಗೆ ನೇರವಾಗಿ ಹಣದ ನೆರವು ನೀಡಿದರು. ಇದನ್ನು ಮನಗಂಡ ಹಲವು ದಾನಿಗಳು ಕೈಜೋಡಿಸಲು ಆರಂಭಿಸಿದರು. ನಂತರ ಲಾಭರಹಿತ ಸುದ್ದಿ ಚಳವಳಿ ಒಂದು ರೀತಿಯ ಆಂದೋಲನವಾಗಿ ಮಾರ್ಪಟ್ಟಿತು.

ಆಸಕ್ತಿಯ ಸಂಗತಿ ಎಂದರೆ ಅಂತಾರಾಷ್ಟ್ರೀಯ ತನಿಖಾ ವರದಿಗಾರರ ಒಕ್ಕೂಟಕೂಡ ಒಂದು ಲಾಭ ರಹಿತ ಸಂಸ್ಥೆ ಎಂಬುದು ಗಮನಾರ್ಹ. ಈ ಒಕ್ಕೂಟ, ಪನಾಮ ಮತ್ತು ಪಂಡೋರಾ ಹೆಸರಿನ ಅತ್ಯುತ್ತಮ ತನಿಖಾ ವರದಿಗಳನ್ನ ಪ್ರಕಟಿಸಿ ಜಗತ್ತಿನ ಗಮನ ಸೆಳೆದಿವೆ. ರಾಷ್ಟ್ರೀಯ ನಾಯಕರು ಸೇರಿದಂತೆ ವಿಶ್ವದ ಶ್ರೀಮಂತರು ಮತ್ತು ಶಕ್ತಿಶಾಲಿಗಳಿಂದ ಶೋಷಣೆಗೊಳಗಾದ ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯನ್ನು ಬಹುದೇಶಗಳ ಪರಿಣತ ತನಿಖಾ ವರದಿಗಾರರ ಒಕ್ಕೂಟ ಬಹಿರಂಗಪಡಿಸಿತು. ಅಮೆರಿಕೆಯ ಹೆಸರಾಂತ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ (ಎಪಿ) ಕೂಡ ಲಾಭರಹಿತ ಸಹಕಾರಿ ಸಂಸ್ಥೆ. ವಿಕಿಪೀಡಿಯಾ ಜನತೆಯ ಹಣಕಾಸು ನೆರವಿನಿಂದ ಬೆಳೆದ ಜ್ಞಾನ ಗಂಗೋತ್ರಿ. ನಮ್ಮ ದೇಶದ ದೂರದರ್ಶನ ಮತ್ತು ಆಕಾಶವಾಣಿ ಕೇವಲ ಸರಕಾರದ ನೆರವು ಮತ್ತು ಜಾಹೀರಾತು ಅವಲಂಬಿಸಿದರೆ, ಅಮೆರಿಕೆಯ ನ್ಯಾಷನಲ್ ಪಬ್ಲಿಕ್ ರೇಡಿಯೋ ಕೇಳುಗರ ದೇಣಿಗೆಗಳು, ಜಾಹೀರಾತು ಮತ್ತು ಸರ್ಕಾರಿ ಧನಸಹಾಯ ಪಡೆಯುವ ಲಾಭರಹಿತ ಬಾನುಲಿ ಸೇವೆ. ಆದರೆ ನಮ್ಮಲ್ಲಿ ದೇಣಿಗೆ ಪಡೆಯುವ ಪರಿಪಾಠವಿಲ್ಲ. ಸರ್ಕಾರಿ ಮತ್ತು ಜಾಹೀರಾತಿನ ನೆರವುಗಳಿಂದ ಮಾತ್ರ ಇವು ಕಾರ್ಯ ನಿರ್ವಹಿಸುತ್ತವೆ.

ಪೆÇ್ರಪಬ್ಲಿಕಾ ಸಂಸ್ಥೆ

ಹಲವು ಆಸಕ್ತಯುತ ಸುದ್ದಿಗಳನ್ನು ಪ್ರಕಟಿಸಿದ ಪೆ್ರಪಬ್ಲಿಕಾ ಕೂಡ ದೇಣಿಗೆಗಳಿಂದ ಬೆಂಬಲಿತ ಲಾಭರಹಿತ ಸಂಸ್ಥೆ ಎಂಬುದು ಗಮನಾರ್ಹ. ಸಹಜವಾಗಿ, ಸಾರ್ವಜನಿಕ ಸೇವಾ ಮಾದರಿಯು ಅತ್ಯಂತ ಭರವಸೆದಾಯಕವಾಗಿದೆ. 1977ರಲ್ಲಿ ಸ್ಥಾಪನೆಯಾದ `ತನಿಖಾ ವರದಿಯ ಕೇಂದ್ರ‘, ತನಿಖಾ ವರದಿಗಾಗಿ ಸ್ಥಾಪಿಸಲಾದ ಮೊದಲ ಅಮೆರಿಕಾದ ಲಾಭರಹಿತ ಮಾಧ್ಯಮ ಸಂಸ್ಥೆಯಾಗಿದೆ. 2007ರಲ್ಲಿ ಸ್ಥಾಪಿಸಲಾದ ಪೆ್ರಪಬ್ಲಿಕ, ತನಿಖಾ ಪತ್ರಿಕೋದ್ಯಮಕ್ಕಾಗಿ ಸ್ಥಾಪಿತವಾದ ಲಾಭರಹಿತ ಸುದ್ದಿಸಂಸ್ಥೆ ಮುಂಚೂಣಿಯಲ್ಲಿದೆ. ಇದು ಇತರೆ ಮಾಧ್ಯಮ ಸಂಸ್ಥೆಗಳ ಸಹಕಾರದೊಂದಿಗೆ ತನಿಖಾ ವರದಿಗಳನ್ನೂ ಪ್ರಕಟಿಸುತ್ತದೆ. 100 ಕ್ಕೂ ಮಿಗಿಲಾದ ವರದಿಗಾರರು ಮತ್ತು ಸಂಪಾದಕರನ್ನು ನೇಮಿಸಿಕೊಂಡು ಸಕ್ರಿಯವಾಗಿದೆ. ಈ ಸಂಸ್ಥೆಯ ಅನೇಕರಿಗೆ ಪುಲಿಟ್ಜರ್ ಪ್ರಶಸ್ತಿ ಸೇರಿ ಅನೇಕ ಬಹುಮಾನಗಳು ಸಂದಿವೆ.

ಸಾರ್ವಜನಿಕ ಸೇವೆ ಮತ್ತು ತನಿಖಾ ಪತ್ರಿಕೋದ್ಯಮದ ಮೌಲ್ಯ ಮತ್ತು ಪ್ರಯೋಜನವನ್ನು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ಪತ್ರಿಕೋದ್ಯಮವನ್ನು ಲೋಕೋಪಕಾರಿ ಸಾಧನವಾಗಿ ಉನ್ನತೀಕರಿಸಿ, ಅಂತಹ ಮಾಧ್ಯಮ ಸಂಸ್ಥೆಗಳಿಗೆ ಸುಸ್ಥಿರ ಆದಾಯವನ್ನು ಸೃಷ್ಟಿಸುವಲ್ಲಿ ಹಲವು ಸಂಸ್ಥೆಗಳು ಸಕ್ರಿಯವಾಗಿವೆ. ಈ ಹೊಸ ಮಾದರಿ ಸೇವಾ ನಿರತ ಸಂಸ್ಥೆಗಳು ಹೊಸ ಆರ್ಥಿಕ ಮಾದರಿಗಳಿಗೆ ಹೊಂದಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಅನೇಕ ಪೂರಕ ಕ್ರಮಗಳನ್ನು ಇವು ಪ್ರಾಯೋಜಿಸುತ್ತವೆ.

ಉದಾಹರಣೆಗೆ ಈ ಬಗೆಯ ಮಾಧ್ಯಮ ಸಂಸ್ಥೆಗಳು ತಮ್ಮ ಓದುಗರಿಂದ ಸಂಗ್ರಹಿಸುವ ನೆರವಿಗೆ ಪೂರಕವಾಗಿ ದಾನಿಗಳು ಮತ್ತು ಸಾಂಸ್ಥಿಕ ನಿಧಿಗಳಿಂದ (ಫೌಂಡೇಷನ್ಸ್) ನೆರವು ಕೊಡಿಸುವ ಪ್ರಯತ್ನಗಳಲ್ಲಿ ಸಹಕರಿಸುತ್ತವೆ. ದೇಶದ ನಿಧಿ ಸಂಗ್ರಹಣೆಯ ರೂಪುರೇಷೆಗಳು ಹಾಗೂ ನೀತಿ ನಿಯಮಗಳನ್ನು ಇವು ಅನುಸರಿಸುತ್ತವೆ. `ನ್ಯೂಸ್ ಮ್ಯಾಚ್ಅಂತಹ ಒಂದು ಸಹಯೋಗದ ನಿಧಿ ಸಂಗ್ರಹಣೆ ಚಳವಳಿ. ಒಂದು ಪತ್ರಿಕೆ ಸ್ಥಳೀಯ ಓದುಗರಿಂದ ಸಂಗ್ರಹಿಸುವ ಹಣದ ಮೊತ್ತದಷ್ಟೇ ಹಣವನ್ನು (ಸಮಾನಾಂತರ ಮೊತ್ತ) ದಾನಿಗಳಿಂದ ಸಂಗ್ರಹಿಸಿಕೊಡುತ್ತದೆ. ನ್ಯೂಸ್ ಮ್ಯಾಚ್ ಅನ್ನು ಅಮೆರಿಕೆಯ ಪ್ರಮುಖ ಸಾಂಸ್ಥಿಕ ದಾನ ಸಂಸ್ಥೆಗಳಾದ ಡೆಮಾಕ್ರಸಿ ಫಂಡ್, ನೈಟ್ ಫೌಂಡೇಶನ್, ಫೇಸ್ ಬುಕ್ ಜರ್ನಲಿಸಂ ಪ್ರಾಜೆಕ್ಟ್ ಉದಾರವಾಗಿ ಬೆಂಬಲಿಸುತ್ತವೆ.

ಈ ಸಮುದಾಯ ಸೇವಾ ಪ್ರಕಟಣೆಗಳು ಪಶ್ಚಿಮ ಅಮೆರಿಕೆಯ ಭಾಗದಲ್ಲಿ ಹಲವಾರು ತಿಂಗಳುಗಳ ಕಾಲ ಮಾಹಿತಿ ಸಂಗ್ರಹಿಸಿ ಕಲುಷಿತ ನೀರು, ಬರಗಾಲ, ಅಂತರ್ಜಲದ ಅತಿಯಾದ ಬಳಕೆ ಮತ್ತು ಭೂ ಮಾಲೀಕತ್ವ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳ ಕುರಿತ ವರದಿಗಳನ್ನು ಪ್ರಕಟಿಸಿ ಸರಕಾರದ ಗಮನ ಸೆಳೆದವು. ಕೋವಿಡ್-19 ರ ಸಾಂಕ್ರಾಮಿಕ ರೋಗದ ಸಮಯದಲ್ಲಿ ಇವುಗಳ ಸಾರ್ವಜನಿಕ ಸೇವೆ ಜನಮನ ಸೆಳೆದವು. ಲಾಭರಹಿತ ಸುದ್ದಿ ಸಂಸ್ಥೆಗಳ ಗುಂಪಿನಲ್ಲಿ 350ಕ್ಕೂ ಹೆಚ್ಚು ಸ್ವತಂತ್ರ ಪ್ರಕಟಣೆಗಳನ್ನು ಓದುಗರು ಮತ್ತು ದಾನಿಗಳು ಬಲಪಡಿಸಿವೆ. ಲಾಭರಹಿತ, ನಿಷ್ಪಕ್ಷಪಾತ ಮತ್ತು ಸಾರ್ವಜನಿಕ ಸೇವೆಗೆ ಇವುಗಳು ಮೀಸಲಾಗಿವೆ. ದಿ ಮಿಯಾಮಿ ಫೌಂಡೇಶನ್ ಸಹ ಶಿಕ್ಷಣ, ಆರೋಗ್ಯ ರಕ್ಷಣೆ ಹಾಗೂ ಪರಿಸರದಂತಹ ವಿಷಯಗಳ ಮೇಲೆ ಕೇಂದ್ರೀಕರಿಸಿದ ಸ್ವತಂತ್ರ ಪತ್ರಿಕೋದ್ಯಮಕ್ಕೆ ಧನಸಹಾಯ ಮಾಡುತ್ತಿದ್ದಾರೆ. ಜನರಿಗೆ ಮಾಹಿತಿ ನೀಡಿದರೆ ಅವರ ಕೆಲಸವು ಹೆಚ್ಚು ಪರಿಣಾಮ ಬೀರುತ್ತದೆ ಎಂದು ಈ ಸಂಸ್ಥೆ ನಂಬಿಕೆ ಇರಿಸಿದೆ.

ಬಡತನ, ಹಸಿವು ಮತ್ತು ಶಿಕ್ಷಣ ಕೊರತೆಗಳ ಬಗ್ಗೆ ಬರೆಯಲು ಮೀಸಲಾದ 2,500ಕ್ಕೂ ಹೆಚ್ಚು ವರದಿಗಾರನನ್ನು ಪತ್ರಿಕೆಗಳೂ ಸೇರಿದಂತೆ, ಬಾನುಲಿ ಮತ್ತು ಡಿಜಿಟಲ್ ಮಾಧ್ಯಮ ಸಂಸ್ಥೆಗಳು ನೇಮಿಸಿಕೊಳ್ಳುವ ಮೂಲಕ ಬರಹಗಳ ವೈವಿಧ್ಯವನ್ನು ಹೆಚ್ಚಿಸಿಕೊಂಡಿವೆ ಹಾಗೂ ಪ್ರಸಾರವನ್ನು ಸಹ ಉತ್ತಮಪಡಿಸಿಕೊಂಡಿವೆ. ಸ್ಥಳೀಯ ಪೆÇಲೀಸ್ ಮತ್ತು ಸಾರ್ವಜನಿಕ ಸುರಕ್ಷತಾ ನೀತಿಗಳಲ್ಲಿ ಉದ್ದೇಶಿತ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ಪರಿಶೀಲಿಸಿ, ಈ ಧನಸಹಾಯ ಪಡೆದ ಪತ್ರಕರ್ತರು ವಿಶೇಷ ವರದಿಗಳನ್ನು ಪ್ರಕಟಿಸುವರು. ಈ ವರದಿಗಳನ್ನು ಮುಕ್ತವಾಗಿ ಇತರೆ ಪ್ರಕಟಣೆಗಳು ಬಳಸಬಹುದಾಗಿದೆ.

ಇತರೆ ಸಂಸ್ಥೆಗಳ ನೆರವು

ಸ್ಥಳೀಯ ಸುದ್ದಿ ಮತ್ತು ತನಿಖಾ ಪತ್ರಿಕೋದ್ಯಮವನ್ನು ಬೆಂಬಲಿಸಲು ಗೂಗಲ್ ಸಂಸ್ಥೆ ಸಹ ಧನಸಹಾಯ ನೀಡುತ್ತಿದೆ. ಅಮೆರಿಕ ಮತ್ತು ಕೆನಡಾ ದೇಶಗಳ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ತನಿಖಾ ಪತ್ರಕರ್ತರಿಗೆ ನಿಗದಿತ ಅವಧಿಗೆ ವೇತನವನ್ನು ನೀಡುತ್ತದೆ. ಪತ್ರಕರ್ತರ ನೇಮಕ, ತರಬೇತಿ, ಹಾಗೂ ಅವರು ಪ್ರಕಟಿಸುವ ವರದಿಗಳನ್ನು ಬಹು ಎಚ್ಚರಿಕೆಯಿಂದ ಪರಿಶೀಲನೆ ನಡೆಸಲಾಗುವುದು. ಯಾವ ಸಮುದಾಯಗಳಲ್ಲಿ ಮಾಧ್ಯಮಗಳು ಕೊರತೆ ಇದೆಯೋ ಅಂತಹ ಕಡಿಮೆ ಪ್ರತಿನಿಧಿಸುವ ಸಮುದಾಯಗಳು ನೆರವು ಪಡೆಯುತ್ತವೆ. ಸ್ಥಳೀಯ ಪತ್ರಿಕೋದ್ಯಮವು ಪ್ರಜಾಪ್ರಭುತ್ವಕ್ಕೆ ಆಧಾರ ಮತ್ತು ಆರೋಗ್ಯಕ್ಕೆ ನಿರ್ಣಾಯಕವಾಗಿವೆ. ಮಾಹಿತಿಯನ್ನು ಬಹಿರಂಗಪಡಿಸಲು ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ಕೊರತೆಯನ್ನು ನೀಗಿಸುವಲ್ಲಿ ಇಂತಹ ಪ್ರಯತ್ನಗಳು ಬಹಳ ಮುಖ್ಯವಾಗುತ್ತಿವೆ.

ಆಯಾ ಸಮುದಾಯಗಳಿಗೆ ಅಗತ್ಯವೆನಿಸಿರುವ ಮಾಹಿತಿಯನ್ನು ದೊರಕಿಸಿಕೊಡುವಲ್ಲಿ ಹಲವಾರು ಬೃಹತ್ ಮಾಧ್ಯಮ ಸಂಸ್ಥೆಗಳು ವಿಶ್ವದಾದ್ಯಂತ ತಮ್ಮ ನೆರವು ನೀಡಲು ಆರಂಭಿಸಿರುವುದು ಅಭಿನಂದನೀಯ. ಇವುಗಳ ಜತೆ ಹಲವು ವಿಶ್ವವಿದ್ಯಾಲಯಗಳು ನೆರವಾಗಿ ಪತ್ರಕರ್ತರಿಗೆ ತಂತ್ರಜ್ಞಾನ ಮತ್ತು ಕೌಶಲ ಅಭಿವೃದ್ಧಿಗೆ ಕೈಜೋಡಿಸಿವೆ.

ಕಳೆದ ಮೂರು ವರ್ಷಗಳಲ್ಲಿ, ಫೇಸ್ ಬುಕ್ ಸಂಸ್ಥೆ ಇಂಗ್ಲೆಂಡಿನಲ್ಲಿ ಸುಮಾರು 139 ಉದಯೋನ್ಮುಖ ವರದಿಗಾರರನ್ನು ಆಯ್ಕೆ ಮಾಡಿ ತರಬೇತಿ ನೀಡಿ ಅಗತ್ಯವಿರುವ ಸಮುದಾಯ ಪತ್ರಿಕೆಗಳಿಗೆ ಕಳುಹಿಸಿದೆ. ಇವರು ತಮಗೆ ವಹಿಸಿರುವ ನಿರ್ದಿಷ್ಟ ಕ್ಷೇತ್ರಗಳಲ್ಲಿ ಕೆಲಸ ಮಾಡಿ ವರದಿಗಳನ್ನು ಪ್ರಕಟಿಸಬೇಕಾಗಿದೆ. ಇಂಗ್ಲೆಂಡಿನಲ್ಲಿ ನಿರ್ದಿಷ್ಟ ತರಬೇತಿ ಇಲ್ಲದೆ ಪತ್ರಕರ್ತನಾಗುವಂತಿಲ್ಲ. ಪತ್ರಕರ್ತರ ತರಬೇತಿಯ ರಾಷ್ಟ್ರೀಯ ಮಂಡಳಿಯ (ನ್ಯಾಶನಲ್ ಕೌನ್ಸಿಲ್ ಫಾರ್ ದಿ ಟ್ರೈನಿಂಗ್ ಆಫ್ ಜರ್ನಲಿಸ್ಟ್ಸ್ ಓಅಖಿಎ) ಸಹಭಾಗಿತ್ವದಲ್ಲಿ ತರಬೇತಿ ನೀಡಲಾಗುತ್ತದೆ. ತನ್ನ `ಸಮುದಾಯ ಸುದ್ದಿ ಯೋಜನೆಮೂಲಕ ಫೇಸ್ ಬುಕ್ ಸಂಸ್ಥೆ ಹಲವಾರು ದೇಶಗಳಲ್ಲಿ ಇಂತಹ ಕೆಲಸವನ್ನು ನಿಭಾಯಿಸುತ್ತಿದೆ. ವಿವಿಧ ಸಮುದಾಯಗಳಿಗೆ ಸೇರಿದವರನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತದೆ. ಇದರಿಂದ ಸಮಾಜದ ಎಲ್ಲ ವರ್ಗಗಳ ಆಶೋತ್ತರಗಳನ್ನು ಸಮರ್ಥವಾಗಿ ಪ್ರತಿಬಿಂಬಿಸಲು ಸಾಧ್ಯ ಎನ್ನುವ ನಂಬಿಕೆ ಹೊಂದಲಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಅನೇಕ ದೇಶಗಳಿಂದ ಬಂದು ನೆಲೆಸಿದವರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಅಗತ್ಯವಾಗಿದೆ.

ಫೇಸ್ ಬುಕ್ ಸಂಸ್ಥೆ 2019 ರಿಂದ ಸ್ಥಳೀಯ ಸುದ್ದಿಗಳನ್ನು ಬೆಂಬಲಿಸಲು ಜಾಗತಿಕವಾಗಿ 230 ಮಿಲಿಯನ್ ಅಮೆರಿಕನ್ ಡಾಲರ್‍ಗಳನ್ನು ಹೂಡಿಕೆ ಮಾಡಿದೆ. ಈ ಯೋಜನೆಯ ಪ್ರಮುಖ ಉದ್ದೇಶ ಪ್ರಪಂಚದಾದ್ಯಂತ ಸ್ಥಳೀಯ ಸುದ್ದಿ ಸಂಸ್ಥೆಗಳೊಂದಿಗೆ ಸಹಕರಿಸಿ ಸ್ಥಳೀಯರಿಗೆ ಅಗತ್ಯವಾದ ಹಾಗೂ ಅವರ ಬೆಳವಣಿಗೆಗೆ ಪೂರಕವಾದ ಮಾಹಿತಿಯನ್ನು ನೀಡುವುದೇ ಆಗಿದೆ.

ದೈತ್ಯ ಟೆಕ್ ಕಂಪನಿಗಳ ನೆರವು

ಸ್ಥಳೀಯ ಮತ್ತು ಸಮುದಾಯ ಪತ್ರಿಕೆಗಳಿಗೆ ನೆರವಾಗಲು ಜಗತ್ತಿನ ದೈತ್ಯ ಟೆಕ್ ಕಂಪನಿಗಳಾದ ಗೂಗಲ್, ಫೇಸ್ ಬುಕ್ ಹಾಗು ಬಿ.ಬಿ.ಸಿ, ಅನೇಕ ಉಪಕ್ರಮಗಳನ್ನು ಆರಂಭಿಸಿವೆ. ಹಣಕಾಸಿನ ನೆರವಿನ ಜತೆಗೆ ಪತ್ರಕರ್ತರ ವೃತ್ತಿ ಕೌಶಲಗಳನ್ನು ಉನ್ನತೀಕರಿಸಲು ಸಿದ್ಧಪಾಠಗಳು ಮತ್ತು ವಿಡಿಯೋಗಳನ್ನೂ ಸಿದ್ಧಪಡಿಸಿವೆ. ಇವುಗಳನ್ನು ಯುವ ಪತ್ರಕರ್ತರು ಮತ್ತು ಮಾಧ್ಯಮ ವಿದ್ಯಾರ್ಥಿಗಳು ಉಚಿತವಾಗಿ ವೀಕ್ಷಿಸಬಹುದು ಇಲ್ಲವೇ ಡೌನ್ಲೋಡ್ ಮಾಡಿಕೊಳ್ಳಬಹುದು.

ಪತ್ರಿಕೋದ್ಯಮ ವಿದ್ಯಾರ್ಥಿಗಳು ಅಮೆರಿಕೆಯ ಸ್ಥಳೀಯ ಸುದ್ದಿ ಮನೆಗಳಲ್ಲಿ ಇನ್ಸ್ಟಾಗ್ರಾಮ್ ಸಂಪಾದಕರಾಗಿ ಕೆಲಸ ಮಾಡಲು ಲೋಕಲ್ ನ್ಯೂಸ್ ಫೆಲೋಶಿಪ್ ಅಡಿಯಲ್ಲಿ ಹತ್ತು ವಾರಗಳ ಬೇಸಿಗೆ ಫೆಲೋಶಿಪ್ ಕಾರ್ಯಕ್ರಮ.

ಬಿ.ಬಿ.ಸಿ ಸಹ ಹಲವಾರು ಉಪಯುಕ್ತ ಪಾಠ ಮತ್ತು ವಿಡಿಯೋಗಳನ್ನು ಉಚಿತವಾಗಿ ನೀಡುತ್ತಿದೆ.

ಎಲ್ಲ ಜನಾಂಗವರ್ಗದವರಿಗೆ ಪ್ರಾತಿನಿಧ್ಯ ಸಮಾಜದ ಎಲ್ಲ ವರ್ಗದವರಿಗೆ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ ಪತ್ರಿಕೋದ್ಯಮ ವೈವಿಧ್ಯ ಪ್ರಾತಿನಿಧ್ಯ ಯೋಜನೆ  ಮೂಲಕ ವೈವಿಧ್ಯಮಯ ಹಿನ್ನೆಲೆಯಿಂದ ಪತ್ರಕರ್ತರನ್ನು ಬೆಂಬಲಿಸುವುದನ್ನು ಈ ಯೋಜನೆ ನೆರವಾಗುತ್ತದೆ. ಪತ್ರಿಕೋದ್ಯಮ ಕೋರ್ಸ್ ಶುಲ್ಕ ಮತ್ತು ಜೀವನ ವೆಚ್ಚಗಳನ್ನು ಸರಿದೂಗಿಸಲು ಸಹಾಯ ಮಾಡುವ 53 ಆಕಾಂಕ್ಷಿಗಳಿಗೆ ನೆರವು ನೀಡಲಾಗುತ್ತಿದೆ. ಇಂಗ್ಲೆಂಡಿನ ಪತ್ರಿಕೆಗಳಲ್ಲಿ ಶೇ.92 ರಷ್ಟು ಬಿಳಿಯರ ಪ್ರಾತಿನಿಧ್ಯವಿದೆ. ಇತರೆ ಜನಾಂಗದವರಿಗೆ ಈ ಉದ್ಯಮ ಪ್ರವೇಶಿಸಲು ಈ ನೆರವುಗಳು ಸಹಾಯ ಮಾಡುತ್ತಿವೆ. ಈ ಯೋಜನೆಗೆ ಧನಸಹಾಯವು ಪ್ರಮುಖ ಉದ್ಯಮ ಸಂಸ್ಥೆಗಳು ಮತ್ತು ಸುದ್ದಿ ಸಂಸ್ಥೆಗಳಿಂದ ಬರುತ್ತಿದೆ.

ಈ ಮಹತ್ವಾಕಾಂಕ್ಷಿ ಯೋಜನೆಗೆ ಫೇಸ್ ಬುಕ್ (ಮೆಟ) ಸಹ ಎಂಟು ಮಿಲಿಯನ್ ದತ್ತಿ ದೇಣಿಗೆ ನೀಡಿದೆ. ಇದರಿಂದ ಮುಂದಿನ ಎರಡು ವರ್ಷಗಳಲ್ಲಿ ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ವೇಲ್ಸ್‍ನಾದ್ಯಂತ ವಿವಿಧ ಸಮುದಾಯಗಳ ಕುರಿತು ವರದಿ ಮಾಡಲು 100 ಸಮುದಾಯ ವರದಿಗಾರರನ್ನು ತರಬೇತಿಗೊಳಿಸಿ ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಕಳುಹಿಸಲಿದೆ. ಪತ್ರಕರ್ತರಿಗೆ ನಿಗದಿತ ಅರ್ಹತೆ ಗಳಿಸಲು ಮತ್ತು ಕಲಿಕೆಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸುದ್ದಿ ಉದ್ಯಮವನ್ನು ಬೆಂಬಲಿಸುವ ಉತ್ತಮ ಪ್ರಯತ್ನ ಇದಾಗಿದೆ. ಬಿ.ಬಿ.ಸಿ ಸಹ ಇಂತಹುದೇ ಉದ್ದೇಶಗಳಿಗೆ ಹಣಕಾಸು ನೆರವು ನೀಡಿದೆ.

ಸರಕಾರದಿಂದ ತೆರಿಗೆ ವಿನಾಯಿತಿ ಪಡೆಯಲು ಅನೇಕ ಮಾಧ್ಯಮ ಘಟಕಗಳು ಲಾಭೋದ್ದೇಶವಿಲ್ಲದ ಸುದ್ದಿ ಮಾಧ್ಯಮಗಳೆಂದು ಘೋಷಿಸಿಕೊಂಡಿವೆ. ಇವು ಹೆಚ್ಚು ಪ್ರಾತಿನಿಧಿಕ, ಹಾಗೂ ಸ್ಥಳೀಯ ಸಮುದಾಯಗಳೊಂದಿಗೆ ಹೆಚ್ಚು ನಿಕಟವಾಗಿ ಸಂಬಂಧ ಹೊಂದಿವೆ. ಇಂತಹ ಲಾಭೋದ್ದೇಶವಿಲ್ಲದ ಮಾಧ್ಯಮ ಸಂಸ್ಥೆಗಳು ಅಮೆರಿಕನ್ ಪತ್ರಿಕೋದ್ಯಮಕ್ಕೆ ಅರ್ಥಪೂರ್ಣವಾದ ಕೊಡುಗೆ ನೀಡುತ್ತಿವೆ. ರಿಪೆೀರ್ಟ್ ಫಾರ್ ಅಮೆರಿಕಾ ಸಂಸ್ಥೆ ಈಗ ಸುಮಾರು 70 ಮಾಧ್ಯಮ ಸಂಸ್ಥೆಗಳಿಗೆ 150 ವರದಿಗಾರರನ್ನು ನೇಮಕ ಮಾಡಿಕೊಳ್ಳಲು ಸಹಾಯ ಮಾಡಲಿದೆ. ಸ್ಥಳೀಯ ಪತ್ರಿಕೋದ್ಯಮದ ಕುಸಿತವನ್ನು ಹಿಮ್ಮೆಟ್ಟಿಸಲು ಈ ಪ್ರಯತ್ನಗಳು ಸಹಕಾರಿಯಾಗಲಿದೆ. ದೇಶದ ಎಲ್ಲ ರಾಜ್ಯಗಳ 270 ಮಾಧ್ಯಮ ಸಂಸ್ಥೆಗಳಿಗೆ ವಿಸ್ತರಿಸಲು ಹಾಗು 325 ತರಬೇತಿಪಡೆದ ಪತ್ರಕರ್ತರನ್ನು ಒದಗಿಸಲು ಯೋಜನೆ ಹಾಕಿ ಕೊಂಡಿದೆ.

ಇಂತಹ ಅರ್ಥಪೂರ್ಣ ಪ್ರಯತ್ನಗಳಲ್ಲಿ ಹಲವಾರು ಲೋಕೋಪಕಾರಿ ನಾಯಕರು, ಓದುಗರು ಮತ್ತು ದಾನಿಗಳು ಸಕ್ರಿಯವಾಗಿರುವುದರಿಂದ ಮರೆಯಾಗುತ್ತಿರುವ ಸ್ಥಳೀಯ ಪತ್ರಿಕೆಗಳಿಗೆ, ಪತ್ರಕರ್ತರಿಗೆ ಮತ್ತು ಓದುಗರಿಗೆ ಹೊಸ ಆಶಾಭಾವನೆ ಮೂಡಿದೆ.

*ಲೇಖಕರು ವಿಶ್ರಾಂತ ಪತ್ರಿಕೋದ್ಯಮ ಪ್ರಾಧ್ಯಾಪಕರು ಮತ್ತು ಮಾಧ್ಯಮ ತಜ್ಞರು.

Leave a Reply

Your email address will not be published.