ಪುಟ್ಟನಾಡು ಸ್ಲೊವೆನಿಯಾ

ಯೂರೋಪಿನಲ್ಲಿ ನೂರಿನ್ನೂರು ಕಿಮೀ ಹಾದರೆ ಇನ್ನೊಂದು ದೇಶವೇ ಸಿಗುತ್ತದೆಯಷ್ಟೆ. ಸ್ಲೊವೇನಿಯಾ ತನ್ನ ಚರಿತ್ರೆಯುದ್ದಕ್ಕೂ ಬೇರೆಬೇರೆ ಶಕ್ತಿಗಳಿಂದ ಆಳಿಸಿಕೊಂಡ ದೇಶ. ಹೀಗಾಗಿಯೇ ಇಲ್ಲಿ ವಿವಿಧ ಭಾಷಿಕರ ಮತ್ತು ಜನಾಂಗಗಳ ವಲಸೆ ನಿರಂತರ ನಡೆದಿದೆ.

ಯೂರೋಪಿನಲ್ಲಿ ನಮಗೆ ಪ್ರಿಯವಾಗಿದ್ದು ಅಷ್ಟೇನೂ ಖ್ಯಾತವಲ್ಲದ ಪುಟ್ಟದೇಶ ಸ್ಲೊವೆನಿಯಾ. ಬಿಗಿಹುಬ್ಬಿನ ಅತಿಶಿಸ್ತಿನ ಜರ್ಮನಿಯಲ್ಲಿದ್ದು ಹೋದ ಕಾರಣವಿದ್ದೀತು, ಅಲ್ಲಿ ನಿರಾಳತೆ ಅನುಭವಿಸಿದೆವು. ಸ್ಲೊವೆನಿಯನರು ಭಾರತೀಯರಂತೆ ಅತಿಯಾದ ಖಾಸಗಿತನ ಪ್ರಜ್ಞೆಯಿಲ್ಲದೆ ಎದೆತೆರೆದು ಮಾತಾಡುವರು. ಇಟಲಿ ಆಸ್ಟ್ರಿಯಾ ಹಂಗೇರಿಗಳ ನಡುವೆ ಅದು ಇರುಕಿಕೊಂಡಿದೆ. ಮಹಾಯುದ್ಧಗಳ ಕಾಲದಲ್ಲಿ ಯುಗೊಸ್ಲಾವಿಯಾ ದೇಶದೊಳಗೆ ಸೇರಿಕೊಂಡಿದ್ದ ಸರ್ಬಿಯಾ ಕ್ರೊಶಿಯಾ ಸ್ಲೊವೆನಿಯಾಗಳು, 90ರ ದಶಕದಲ್ಲಿ ಹೊರಬಂದು ಸ್ವತಂತ್ರವಾದವು. ಈ ಅರ್ಥದಲ್ಲಿದು ಎಳೆಯ ದೇಶ. ಆದರೆ ಇದರ ಪರಂಪರೆ ಪ್ರಾಚೀನ; ಜಾನಪದ ಸಮೃದ್ಧ; ಹಿಮಪರ್ವತಗಳು, ನೀಲಕಡಲು, ಹಸಿರುಕಾಡು, ನಿರ್ಮಲ ನದಿ-ಸರೋವರಗಳು, ತಂಪು ಹವಾಮಾನ, ಯಥೇಚ್ಛ ಜೇನು ಹಣ್ಣುಹೂವು, ಜನರ ಸಜ್ಜನಿಕೆಗಳಿಂದ ಇಡೀ ದೇಶ ಸುಂದರವಾಗಿದೆ.

ಯೂರೋಪಿನಲ್ಲಿ ನೂರಿನ್ನೂರು ಕಿಮೀ ಹಾದರೆ ಇನ್ನೊಂದು ದೇಶವೇ ಸಿಗುತ್ತದೆಯಷ್ಟೆ. ಸ್ಲೊವೇನಿಯಾ ತನ್ನ ಚರಿತ್ರೆಯುದ್ದಕ್ಕೂ ಬೇರೆಬೇರೆ ಶಕ್ತಿಗಳಿಂದ ಆಳಿಸಿಕೊಂಡ ದೇಶ. ಹೀಗಾಗಿಯೇ ಇಲ್ಲಿ ವಿವಿಧ ಭಾಷಿಕರ ಮತ್ತು ಜನಾಂಗಗಳ ವಲಸೆ ನಿರಂತರ ನಡೆದಿದೆ. ಸ್ಲೋವೆನಿಯಾದ ರಾಜಧಾನಿ ಯುಬ್ಲಿಯಾನಾದ ನಿಲ್ದಾಣದಲ್ಲಿ ನಿಂತಿದ್ದ ಹಲವು ದೇಶದ ನಗರಗಳಿಗೆ ಹೋಗುವ ಬಸ್ಸುಗಳು ಇದಕ್ಕೆ ಸಾಕ್ಷಿಯಾಗಿದ್ದವು. ಯೂರೋಪಿನಲ್ಲಿ ವಿಮಾನಗಳು ನಮ್ಮಲ್ಲಿ ಟ್ಯಾಕ್ಸಿಗಳಿದ್ದಂತೆ. ದೇಶದಿಂದ ದೇಶಕ್ಕೆ ತಾಸಿನಲ್ಲಿ ಹಾರಿಹೋಗಬಹುದು. ಹೀಗೆ ಹಾರಿದರೆ ಭೂಮೇಲ್ಮೈನ ಚೆಲುವು, ಜನಬದುಕಿನ ಚಿತ್ರ ತಪ್ಪಿಹೋಗುತ್ತದೆ.

ನಾವು ಆದಷ್ಟೂ ಬಸ್ಸು-ರೈಲಲ್ಲಿ ತಿರುಗಿದೆವು. ವೆನಿಸಿನಿಂದ ರೋಮಿಗೆ ಮಾಡಿದ ರೈಲ್ವೇ ಪಯಣವಂತೂ ಮರೆಯಲಾಗದ್ದು. ಹಳ್ಳಿ ನಗರ ಹೊಳೆ ಹೊಲಗದ್ದೆ ಹುಲ್ಲುಗಾವಲುಗಳನ್ನು ಅದು ದಾಟಿ ಹೋಯಿತು. ಆಲ್ಫ್ಸ್ ಪರ್ವತಗಳನ್ನು ಪ್ಯಾರಿಸಿನಿಂದ ಮ್ಯೂನಿಕ್ಕಿಗೆ ಹೋಗುವ ಹಾದಿಯಲ್ಲಿ ಆಗಸದಿಂದ ಕಂಡಿದ್ದೆವು. ಆದರೆ ಜರ್ಮನಿಯಿಂದ ಆಸ್ಟ್ರಿಯಾ ಮೂಲಕ ಸ್ಲೊವೆನಿಯಾಕ್ಕೆ ಹೋಗುವಾಗ ಹಿಮಚ್ಛಾದಿತ ಪರ್ವತಗಳ ಬಗಲಲ್ಲೇ ಹೋದೆವು. ಜಗತ್ತಿನಲ್ಲೇ ಸುಂದರ ಹಾದಿಯಿದು ಅನಿಸಿಬಿಟ್ಟಿತು.

ನಮ್ಮ ಬಸ್ಸು ಜರ್ಮನಿ ಆಸ್ಟ್ರಿಯಾ ಸ್ಲೊವೆನಿಯಾದಲ್ಲಿ ಚಲಿಸುವಾಗ ಗಮನಿಸಿದೆ. ರಸ್ತೆಗೆ ತುಸುದೂರದಲ್ಲಿ 20-30 ಹರಡಿಕೊಂಡ ಮನೆಯುಳ್ಳ ಹಳ್ಳಿಗಳು (ಹಿಮಪರ್ವತಗಳ ಅಡಿಯಲ್ಲಿರುವ ಅವುಗಳ ಅವಸ್ಥೆ ಚಳಿಗಾಲದಲ್ಲಿ ಹೇಗೋ?); ಅಲ್ಲಿ ಕಂದುಹೆಂಚಿನ ಇಳಿಜಾರು ಮಾಡಿನ ಮನೆಗಳು; ಆಗಸಕ್ಕೆ ಮುಖಮಾಡಿ ನೆಟ್ಟ ಭರ್ಜಿಯಂತಹ ಗೋಪುರದ ಕಂದುಬಣ್ಣದ ಚರ್ಚು; ಹಳ್ಳಿಗೆ ಸಂಪರ್ಕವೀಯಲು ನೀಟಾದ ರಸ್ತೆಗಳು; ತಂತಿಬೇಲಿ ಹಾಕಿದ ವಿಶಾಲ ಹುಲ್ಲುಗಾವಲಲ್ಲಿ ಸ್ವತಂತ್ರವಾಗಿ ಮೇಯುವ ದನ ಕುರಿ ಕುದುರೆ. ಚಳಿಗೊ ಜನಸಂಖ್ಯೆ ವಿರಳವಾಗಿರುವುದಕ್ಕೊ ಯಂತ್ರಗಳು ಕೆಲಸ ಮಾಡುವುದರಿಂದಲೊ. ಎದ್ದು ಕಾಣುವ ಜನವಿಹೀನತೆ. ಫಾರಂ ಹೌಸುಗಳಂತಿರುವ ಮನೆಗಳ ಪಕ್ಕ ಹೂವು ಹಣ್ಣಿನ ಗಿಡಗಳಿಂದ ತುಂಬಿದ ಕೈದೋಟ.

ಯೂರೋಪಿಯನರ ಪುಷ್ಪಪ್ರೇಮ ವಿಶೇಷವಾದುದು. ಇದಕ್ಕೆ ತಕ್ಕಂತೆ ಬಗೆಬಗೆಯ ಹೂಗಳನ್ನು ಬೆಳೆಯಲು ಪರಿಸರದ ಥಂಡಿ ನೆರವಾಗಿದೆ. ಈ ಪುಷ್ಪಪ್ರೇಮವನ್ನು ಏಶಿಯನ್ ದೇಶಗಳಾದ ಇಸ್ರೇಲ್ ಪ್ಯಾಲಸ್ತೇನ್ ಜೋರ್ಡಾನ್ ಭೂತಾನ ಟರ್ಕಿಗಳಲ್ಲೂ ಕಾಣಸಿಗುತ್ತದೆ. ಕ್ರೊವೇಶಿಯಾದಲ್ಲಂತೂ ಕಾಡುಪುಷ್ಪಗಳು ರಸ್ತೆಬದಿ, ಗೋಡೆ ಮೇಲೆ ಯಾರೊ ಇಟ್ಟುಹೋದ ಹೂಗುಚ್ಛದಂತೆ ಬೆಳೆದಿದ್ದವು. ಟುಲಿಪ್ ಹೂದೋಟ ನೋಡಲು ನಾವು ನೆದರ್‍ಲ್ಯಾಂಡ್ಸಿಗೆ ಹೋಗಿದ್ದುಂಟು. ಅದು ನಮ್ಮ ಲಾಲ್‍ಬಾಗಿನಂತಿದ್ದು ಕೃತಕವೆನಿಸಿತು. ದಟ್ಟಕಾಡು ಮತ್ತು ಸಹಜವಾಗಿ ಬೆಳೆದ ನೂರಾರು ಬಗೆಯ ಹೂಗಳು ಇರುವುದರಿಂದ ಸ್ಲೊವೆನಿಯಾ ಜೇನುತ್ಪಾದನೆಗೂ ಹೆಸರಾಗಿದೆ.

ಯೂರೋಪಿನ ಪ್ರವಾಸದಲ್ಲಿ ಎದ್ದು ಕಾಣುವುದು ಕಂಗೊಳಿಸುವ ಹಸಿರು. ಅಲ್ಲಿನವರು ತಮ್ಮ ಕಾಡು ಹೊಳೆ ಕಡಲುಗಳನ್ನೂ ಚರಿತ್ರೆಯ ಸ್ಮಾರಕಗಳನ್ನೂ ಜತನದಿಂದ ಇಟ್ಟುಕೊಂಡಿದ್ದಾರೆ. ಕ್ರೋಶಿಯಾದ ಪ್ರಾಚೀನ ನಗರಿ ಡೊಬ್ನಿವಿಕದಲ್ಲಿ ತೆಳಗಿನ ಕಲ್ಲಹರಳು ಕಿರುಮೀನು ಗಾಜಿನಲ್ಲಿಟ್ಟು ತೋರುವಂತೆ ಕಡಲು ಪಾರದರ್ಶಕವಾಗಿತ್ತು. ರೋಮಿನೊಳಗೆ ಹರಿಯುವ ಟೈಗ್ರ್ ನದಿಯಾದರೂ ಎಷ್ಟು ಸ್ವಚ್ಛ? ಯೂರೋಪಿನ ಬಹುತೇಕ ಮಹಾನಗರಗಳು ಹೊಳದಡದಲ್ಲೇ ಇವೆ. ಆದರೆ ಹೊಳೆಗಳನ್ನು ಕೆಡಿಸಿಲ್ಲ. ಅವರ ನಗರ ನಿರ್ಮಾಣದ ಪರಿಕಲ್ಪನೆಯಲ್ಲೇ ಹೊಳೆ ಕಡಲು ಸರೋವರಗಳಿಗೆ ಚರಂಡಿಗಳನ್ನು ಲಗತ್ತಿಸದ ತಂತ್ರಜ್ಞಾನ ಇರಬೇಕು.

ನನಗೆ ಭದ್ರಾವತಿ ಪುಣೆ ಕಾಶಿ ಹೈದರಾಬಾದ್ ಬನಾರಸ್ ದೆಹಲಿ ಆಗ್ರಾ ಕಾನ್ಪುರಗಳಲ್ಲಿ ಹರಿವ ಹೊಳೆಗಳ ಪಾಡು ನೆನಪಾಯಿತು. ನಾವೇಕೆ ನಮ್ಮ ಊರು ಹೊಳೆಗಳನ್ನು ಕೊಳಕಾಗಿ ಇಷ್ಟುಕೊಂಡಿದ್ದೇವೆ? ಏಶಿಯನ್ ದೇಶಗಳ ಉಷ್ಣತೆಗೂ ಬಡತನಕ್ಕೂ ಗಲೀಜಿಗೂ ಸಂಬಂಧವಿದೆಯೇ? ನಮಗೆ ನಾಗರಿಕಪ್ರಜ್ಞೆಯ ಕೊರತೆಯುಂಟೆ? ಪ್ರಪಂಚದಲ್ಲಿ ಅತಿಹೆಚ್ಚು ಕೈಗಾರೀಕೀಕರಣ ಕಂಡ ದೇಶಗಳು ಯೂರೋಪಿನವು. ಅವುಗಳಷ್ಟು ಕೈಗಾರೀಕರಣವಿಲ್ಲದ ನಮ್ಮಲ್ಲೇಕೆ ನಿಸರ್ಗದ ಜತೆಗಿನ ನಮ್ಮ ಒಡನಾಟ ಬಳಸಿಬಿಸಾಡುವ ಪರಿಯಲ್ಲಿದೆ? ಎಲ್ಲೋ ನಮ್ಮ ಲೋಕದೃಷ್ಟಿಯಲ್ಲೇ ಸಮಸ್ಯೆಯಿದೆ ಅನಿಸಿತು.

ಪರ್ವತನಾಡಾದ ಸ್ಲೊವೆನಿಯಾಕ್ಕೆ ನಿಸರ್ಗವೇ ಬಂಡವಾಳ. ಕೃಷಿ ಪಶುಪಾಲನೆ ಕೈಗಾರಿಕೆಗಳಷ್ಟೇ ಪ್ರ್ರವಾಸೋದ್ಯಮವೂ ಮುಖ್ಯ ಆದಾಯ. ಇಲ್ಲಿ ದೊಡ್ಡ ಶಹರುಗಳಿಲ್ಲ. ಹಳ್ಳಿಗಳು ಹೆಚ್ಚು. ಜರ್ಮನಿಗೆ ಹೋಲಿಸಿದರೆ ಬಡದೇಶ. ಆದರೆ ಬದಿಯ ಸರ್ಬಿಯಾ ಕ್ರೊಶಿಯಾಗಳಿಗೆ ಹೋಲಿಸಿದರೆ ಸ್ಥಿತಿವಂತ. ನಾವು ಇಲ್ಲಿ ಗುಹೆಯನ್ನೂ ಸರೋವರಗಳನ್ನೂ ಕ್ಯಾಸೆಲ್ಲುಗಳನ್ನೂ ಹೊಳೆಯನ್ನೂ ಕಂಡೆವು. ಇಲ್ಲಿನ ಸರೋವರ ಹಾಗೂ ಹೊಳೆಗಳಿಗೆ ಕಾರಣ, ಆಲ್ಫ್ಸ್ ಪರ್ವತಗಳು. ನಾವು ಕಲ್ಲುಗೋಡೆಯ ಬೆಟ್ಟಗಳ ನಡುವೆ ಸ್ಫಟಿಕದಂತೆ ಹರಿಯುವ ಸೋಕಾ ಹೊಳೆಗೆ ಬದಿಗಿರುವ ಬಂಡೆಗಲ್ಲಿಗೆ ಅಟ್ಟಣಿಗೆ ಕಟ್ಟಿ ಹಾದಿ ಮಾಡಿದ್ದಾರೆ. ಅದರಲ್ಲಿ ನಾವು ಆರು ಕಿಮೀ ಧೋಧೋ ಸುರಿಯುವ ಮಳೆಯಲ್ಲಿ ಟ್ರೆಕ್ ಮಾಡಿದೆವು.

ಸ್ಲೊವೆನಿಯಾಕ್ಕೆ ನಿಸರ್ಗ ಹರಸಿದ ನಿಜವಾದ ಸಂಪತ್ತು ಎಂದರೆ ಪೊಸ್ತೊನ್ಕ ಗುಹೆ. ಲಕ್ಷಾಂತರ ವರ್ಷಗಳ ನೀರು ಜಿನುಗು ನಿಸರ್ಗ ಸಹಜವಾಗಿ ಬಗೆಬಗೆಯ ಆಕಾರದ ಕಲಾತ್ಮಕ ಶಿಲ್ಪಗಳನ್ನು ಅದರೊಳಗೆ ನಿರ್ಮಿಸಿದೆ. ಹಲವಾರು ಕಿಲೋಮೀಟರ್ ಉದ್ದವಿರುವ ಆ ಗುಹೆ ನೋಡಲು ಹಾಸಿದಹಳಿಯಲ್ಲಿ ಹೋಗುವ ಪುಟ್ಟರೈಲಿನಲ್ಲಿ ಹೋಗಬೇಕು. ಮತ್ತೊಂದು ದಿನ ಕಲ್ಲುಕೋಡಿನ ತುದಿಯಲ್ಲಿರುವ ಟ್ರಕೋಸ್ಕಾನ್ ಕ್ಯಾಸೆಲ್ಲಿಗೆ (ಬೆಟ್ಟದ ಮೇಲಿರುವ ಕೋಟೆ ಮತ್ತು ಅರಮನೆ) ಹೋದೆವು. ಅಲ್ಲಿಂದ ಕೆಳಗೆ ಹಸಿರಿಕಾಡಿನ ಅಂಚುಕಟ್ಟಿದ ದೇಶೋವಿಶಾಲ ಬ್ಲೆಡ್ ಸರೋವರ ಕಾಣುವುದು. ಎರಡನೆಯದು ಪ್ರೆದಾಮ ಕ್ಯಾಸೆಲ್, ಅಜಮ್ ಎಂಬ ವೀರನಿಗೆ ಸಂಬಂಧಿಸಿದ್ದು. ಪೊಟರೆ ಗುಹೆಗಳಿರುವ ಒಂದು ಬೆಟ್ಟವನ್ನು ಅಡಗುದಾಣವನ್ನಾಗಿ ರೂಪಿಸಲಾಗಿದೆ. ಇದಕ್ಕೆ ಲಗತ್ತಾಗಿ ಅನೇಕ ಐತಿಹ್ಯಗಳಿವೆ. ಈ ಆಜಮ್ ನಮ್ಮ ಕನ್ನೇಶ್ವರರಾಮ ಇದ್ದಂತೆ-ಸಿರಿವಂತರನ್ನು ದೋಚಿ ಬಡವರಿಗೆ ಹಂಚುತ್ತಿದ್ದವನು.

ಸ್ಲೋವೆನಿಯಾವನ್ನು ಚರಿತ್ರೆಯಲ್ಲಿ ರೋಮನರು ಟರ್ಕರು ರಷ್ಯನರು ಆಸ್ಟ್ರಿಯನರು ಜರ್ಮನರು ಆಳಿದರು. ಈ ಪರಕೀಯ ಆಳ್ವಿಕೆಯಲ್ಲಿ ಸ್ಲೋವನರು ನರಳಿದ್ದಾರೆ. ಮೊದಲನೇ ಮಹಾಯುದ್ಧದಲ್ಲಿ ಇಟಲಿಯ ಫ್ಯಾಸಿಸ್ಟರಿಂದ ಅತಿಹೆಚ್ಚು ಹಿಂಸೆ ಅನುಭವಿಸಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ನಾಜಿಗಳ ವಿರುದ್ಧ ಹಿಂಸೆ ಅನುಭವಿಸಿದ್ದಾರೆ. ಅವರ ವಿರುದ್ಧ ಹೋರಾಡಿದ್ದಾರೆ. ಲಕ್ಷಾಂತರ ತರುಣರು ಹುತಾತ್ಮಕರಾಗಿದ್ದಾರೆ. ಯುದ್ಧಕಾಲದಲ್ಲಿ ಸುಂದರ ತಾಣಗಳಲ್ಲಿ ಬಂಗಲೆ ಕಟ್ಟಿಕೊಂಡ ಕೆಲವು ಜರ್ಮನರು ಆಸ್ಟ್ರಿಯನರು ಇಟಲಿಗರು ಮರಳಿ ಹೋದರು. ಆದರೆ ಕೆಲವರು ಭಾಷಿಕ ಅಲ್ಪಸಂಖ್ಯಾತರಾಗಿ ಉಳಿದರು. ಅವರ ಬಗ್ಗೆ ಸ್ಲೊವೆನರಿಗೆ ಕಹಿ ಉಳಿದಿದೆ. ಆಳಿದವರೇ ಅಭದ್ರತೆಯಲ್ಲಿ ಬದುಕುತ್ತಿರುವ ವಿಚಿತ್ರ ಪರಿಯಿದು.

ಇದರ ಜತೆಗೆ ಯುಗೋಸ್ಲಾವಿಯಾದಿಂದ ಹೊರಬರುವಾಗ ಕ್ರೊಶಿಯನು ಸರ್ಬಿಯನರು ಜತೆಗಿನ ವಿದ್ವೇಷವೂ ಹೊಗೆಯಾಡುತ್ತಿದೆ. ಪಾಲಾಗಿ ಬೇರೆ ಮನೆಮಾಡಿದ ಸೋದರರಲ್ಲಿರುವ ಕಿನಿಸು ಇದು. ಚರಿತ್ರೆಯುದ್ಧಕ್ಕೂ ಯುದ್ಧ ಮತ್ತು ಜಾನಾಂಗಿಕ ಕಲಹಗಳಿಂದ ಬಳಲಿದ ಸ್ಲೊವೆನಿಯಾ ಚೇತರಿಸಿಕೊಳ್ಳುತ್ತಿದೆ. ಆದರೂ ಯೂರೋಪಿನ ಮನಸ್ಸು ಯುದ್ಧಾಘಾತದ ನೆನಪುಗಳಿಂದ ಪೂರ್ಣವಾಗಿ ಹೊರಬಂದಿಲ್ಲ ಅನಿಸಿತು. ಸ್ಲೊವೆನಿಯಾ ಸೋವಿಯತ್ ರಷ್ಯಾದ ಮಿತ್ರ ದೇಶವಾಗಿದ್ದರಿಂದ ಇರುವ ಸಂಪತ್ತನ್ನು ಹಂಚಿಕೊಂಡು ಬದುಕುವ ಕಲೆಯನ್ನು ಕಲಿತಿದೆ. ಆದರೀಗ ಅದು ಮುಕ್ತ ಬಂಡವಾಳವಾದಿ ಆರ್ಥಿಕತೆಗೆ ಹೊರಳಿಕೊಳ್ಳುತ್ತಿದೆ.

ಕೊನೆಯ ದಿನ ಆಲ್ಫ್ಸ್ ಹಿಮಪರ್ವತಗಳ ಬುಡದಲ್ಲಿರುವ ವಿಶಾಲ ಜಸ್ನಾ ಸರೋವರಕ್ಕೆ ಹೋದೆವು. ಅದರೊಳಗಿಂದ ಒಂದು ನದಿ ಹುಟ್ಟಿ ಹೊರಗೆ ಹರಿಯುತ್ತಿತ್ತು. ಅದರ ದಡದಲ್ಲೊಂದು ಜಿಂಕೆ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ನಮ್ಮ ಮಾರ್ಗದರ್ಶಿ ಮಾರ್ತಿನ್ ಆ ಜಿಂಕೆಯ ಐತಿಹ್ಯವನ್ನು ವಿವರಿಸಿದನು. ಸರೋವರದ ದಡದ ಪರ್ವತಗಳ ಬುಡದಲ್ಲಿ ಒಂದು ಹಳ್ಳಿಯಿದೆ. ಅಲ್ಲಿಯ ಜನ ತಮ್ಮದು ಜಗತ್ತಿನ ಕೊನೆಯ ಹಳ್ಳಿ ಎಂದು ಭಾವಿಸಿದ್ದರಂತೆ. ಅಲ್ಲಿದ್ದ ಒಬ್ಬ ಚೆಲುವೆಯನ್ನು ಊರಿನ ಒಬ್ಬ ಬಡತರುಣ ಪ್ರೇಮಿಸಿದ. ಚೆಲುವೆ ನಿನ್ನ ಸಂಪತ್ತೇನಿದೆ ಎಂದಳು. ತರುಣ ಅವಳಿಗಾಗಿ ಸಂಪತ್ತು ಗಳಿಸಲು ಹೊರಟನು. ಈ ನಡುವೆ ಇಟಲಿಯ ಸಿರಿವಂತ ವ್ಯಾಪಾರಿ ಚೆಲುವೆಯ ಪಾದಕ್ಕೆ ಹಣವನ್ನು ಸುರಿದು ಪ್ರೇಮನಿವೇದನೆ ಮಾಡಿದ. ಆಕೆ ನಿರಾಕರಿಸಿದಳು. ಬಡಪ್ರೇಮಿ ಸಂಪತ್ತು ಹುಡುಕುತ್ತ ಹೊರಟವನು ಕಾಡಿನಲ್ಲಿ ಹೊನ್ನಿನ ಕಾಡುಮೇಕೆಯನ್ನು ಕಂಡು ಕೊಂದನು. ಅದು ಪ್ರಾಣಬಿಡುವ ಮೊದಲು ಕಲ್ಲಾಗು ಎಂದು ಶಾಪಕೊಟ್ಟಿತು. ಚೆಲುವೆ ಇಬ್ಬರೂ ಪ್ರೇಮಿಗಳನ್ನು ಕಳಕೊಂಡಳು.

ಈ ಕತೆ ಏನನ್ನು ಸೂಚಿಸುತ್ತಿರಬಹುದು? ನಿಸರ್ಗದ ಜತೆ ಮಾನವರು ಇರಿಸಿಕೊಳ್ಳಬೇಕಾದ ಸಹಬಾಳುವೆಯ ಗುಟ್ಟನ್ನೇ? ನಿಜವಾದ ಪ್ರೇಮ ಗುರುತಿಸಲಾಗದವರು ಸಂಪತ್ತಿಗೆ ಆಸೆಪಟ್ಟು ಹಾಳಾಗುವುದನ್ನೇ? ಪರಿಮಿತ ಸಂಪನ್ಮೂಲಗಳಲ್ಲಿ ಬದುಕುವ ಕಲೆಯನ್ನೇ? ಇದು ಬುಡಕಟ್ಟು ಜನರ ಲೋಕದೃಷ್ಟಿಯನ್ನೂ ಪರಿಸರಪ್ರಜ್ಞೆಯನ್ನೂ ಇದು ಒಳಗೊಂಡಿದೆ. ಸಂಪತ್ತಿಗಾಗಿ ಏಶಿಯಾ ಆಫ್ರಿಕಾಗಳನ್ನು ಕಬ್ಜಾಮಾಡಿ ಲೂಟಿಹೊಡೆದ ವಸಾಹತುಶಾಹಿ ಯೂರೋಪಿನಲ್ಲೇ, ಸ್ಲೊವೇನಿಯಾದಂಥ ಯಾರನ್ನೂ ಆಕ್ರಮಿಸದ ಪುಟ್ಟದೇಶಗಳಿವೆ. ಸಂಪತ್ತಿನ ದುರಾಸೆ ಕೆಟ್ಟದ್ದು ಎಂಬ ದನಿಯುಳ್ಳ ನಂಬಿಕೆಗಳಿವೆ. ಯಾವುದೇ ದೇಶದ ಜನಸಮುದಾಯ ಹಾಗೂ ಆಳುವವರ ಆಲೋಚನಕ್ರಮ ಭಿನ್ನವಾಗಿರುತ್ತದೆ. ಅವನ್ನು ಒಂದೇಯೆಂದು ನಾವು ಗ್ರಹಿಸುತ್ತ ತಪ್ಪು ಮಾಡುತ್ತಿರುತ್ತೇವೆ. ಮಾರ್ತಿನ್‍ಗೆ ಈ ಕತೆಯನ್ನು ಹೇಳುವಲ್ಲಿ ವೈಯಕ್ತಿಕ ಉದ್ದೇಶವೂ ಇದ್ದಂತಿತ್ತು. ಹಳ್ಳಿಗಾಡಿನಿಂದ ನಗರಕ್ಕೆ ಬಂದು ಪ್ರವಾಸಿ ಮಾರ್ಗದರ್ಶಿಯಾಗಿ ಅವನು ಕಷ್ಟಪಟ್ಟು ಹೊಸಬದುಕು ಕಟ್ಟಿಕೊಳ್ಳುತ್ತಿದ್ದನು. ಅವನ ಪ್ರೇಯಸಿ ನಗರದವಳು. ಅವಳ ಮದುವೆಗೆ ಆತ ಹಣ ಜೋಡಿಸುತ್ತಿದ್ದನು.

ಸ್ಲೊವೇನಿಯಾದಲ್ಲಿ ಜನ ತಮ್ಮ ಪ್ರಕೃತಿಯ ಬಗ್ಗೆ, ಕವಿಗಳ ಬಗ್ಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಇಲ್ಲಿ ರಾಜಕೀಯ ನಾಯಕರ ಪ್ರತಿಮೆ ಕಡಿಮೆಯಿದ್ದು, ಕವಿ-ಕಲಾವಿದರ ಪ್ರತಿಮೆ ಹೆಚ್ಚಿದ್ದವು. ರಾಜಧಾನಿ ಯೂಬ್ಲಿಯಾನದಲ್ಲಿ ರಾಷ್ಟ್ರಕವಿ ಪ್ರೆಸೆರೆನ್ ಚೌಕವಿತ್ತು. ಅವನ ಹೆಸರಲ್ಲಿ ರಾಷ್ಟ್ರೀಯ ಹಬ್ಬ ಆಚರಿಸಲಾಗುತ್ತದೆ. ಬೀದಿಗಳಲ್ಲಿ ಪುಸ್ತಕದಂಗಡಿಗಳಿದ್ದವು. ರೋಮಿನಲ್ಲಂತೂ ಸೆಕೆಂಡಹ್ಯಾಂಡ್ ಪುಸ್ತಕದಂಗಡಿಗಳ ಸಾಲುಸಾಲು. ಯೂರೋಪಿಯನರು ಪಯಣಿಸುವಾಗ, ಉಣ್ಣುವಾಗ, ಕಾಫಿಸೇವಿಸುವಾಗ ಓದುವುದನ್ನು ಕಾಣಬಹುದು.

ಲುಬ್ಲಿಯಾನಾದ ಹೊಳೆಯಲ್ಲಿ ನಾವು ದೋಣಿವಿಹಾರ ನಡೆಸುವಾಗ, ಪಾವಟಿಗೆ ಮೇಲೆ ಕೂತು ಜನ ಪುಸ್ತಕ ಓದುತ್ತಿರುವುದನ್ನು ಕಂಡೆವು. ರಸ್ತೆ ಬದಿಯಲ್ಲಿ ಜನ ಗುಂಪುಗೂಡಿ ಚೆಸ್ ಆಡುವುದನ್ನೂ ಕಂಡೆವು. ದೇಶದೊಳಗೆ ಯಾವೆಲ್ಲ ಹೊಯ್ದಾಟಗಳಿವೆಯೊ ಗೊತ್ತಿಲ್ಲ. ನಗರದ ಬೀದಿಗಳಲ್ಲಿ ಗ್ರಾಫಿಕಿ ಕಲಾವಿದರ ಗೋಡೆಬರೆಹಗಳು ಮಾತ್ರ ಕಂಗೆಡಿಸುವಂತೆ ಎದ್ದು ಕಂಡವು. ಅದನ್ನು ಬರೆದ ಕಲಾವಿದರು ಯಾರು, ಅವುಗಳ ಸಂದೇಶವೇನು ತಿಳಿಯಲಿಲ್ಲ. ಅಲ್ಲಿನ ರಾಜಕೀಯ ಸಂಘಟನೆ ಚಳುವಳಿಗಳು ಕೂಡ ಘೋಷಣೆ ಬರೆದಿರಬಹುದು. ಮಾರ್ತಿನ್‍ಗೆ ಕೇಳಲು ಅವನು `ಇದೆಲ್ಲ ಪುಂಡಾಟಿಕೆ’ ಎಂದು ಜರಿದನು. ದೇಶದಲ್ಲಿ ಪ್ರಕ್ಷುಬ್ಧತೆ ಇದೆಯೆಂದರೆ ಪ್ರವಾಸಿಗರು ಬರಲು ಹಿಂಜರಿಯುತ್ತಾರೆ. ದೇಶದ ಮಾನ ಕಾಪಾಡಬೇಕು ಎಂಬ ಭಾವ ಅವನಲ್ಲಿದ್ದೀತು. ನೈಸರ್ಗಿಕ ಚೆಲುವಿನಿಂದ ಆಪ್ಯಾಯಮಾನವಾಗಿ ಕಂಡ ಸ್ಲೊವೆನಿಯಾ, ತನ್ನ ಒಡಲೊಳಗೆ ಯಾವೆಲ್ಲ ದುಗುಡಗಳಲ್ಲಿ ಬೇಯುತ್ತಿದೆಯೊ, ನಮಗೆ ತಿಳಿಯಲಿಲ್ಲ. ದೇಶವೊಂದರ ಅಂತರ್ಯ ವಾರಕಾಲದ ಪ್ರವಾಸಿಗರಿಗೆ ತಿಳಿಯುವುದು ಕಷ್ಟವೇ. 

Leave a Reply

Your email address will not be published.