ಪುನಶ್ಚೇತನದ ಹಾದಿಯಲ್ಲಿ ಮೂಡಲಪಾಯ ಯಕ್ಷಗಾನ

ಜೀ.ಶಂ.. ಮತ್ತು ಹೆಚ್.ಎಲ್.ನಾಗೇಗೌಡ ಅವರ ನಂತರ ವ್ಯವಸ್ಥಿತ ಸಂಘಟನೆಯಿಲ್ಲದೆ ಚದುರಿ ಹೋಗಿದ್ದ ಮೂಡಲಪಾಯದ ಕಲಾವಿದರನ್ನು, ಭಾಗವತರನ್ನು, ತಜ್ಞರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿರುವ ಪ್ರೊ.ಜಯಪ್ರಕಾಶಗೌಡ ಹಾಗೂ ಜಯರಾಮ್ ರಾಯಪುರ ಜೋಡಿ ದಿಟ್ಟತನದಿಂದ ಈ ಕಲೆಯನ್ನು ಸಂರಕ್ಷಿಸಲು ಮುಂದಡಿಯಿಟ್ಟಿದ್ದಾರೆ. ಇದು ಈ ಕಲೆಯ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ.

ಡಾ.ಎಂ.ಕೆಂಪಮ್ಮ ಕಾರ್ಕಹಳ್ಳಿ

ಜನಪದ ರಂಗಭೂಮಿ ಕಲೆಗಳಲ್ಲಿ `ಯಕ್ಷಗಾನ’ ಅಪೂರ್ವವೂ ಆಕರ್ಷಕವೂ ಆದ ಕಲೆಯಾಗಿದೆ. ಯಕ್ಷಗಾನ ಬಯಲಾಟ ಜನರಿಂದ ರೂಪುಗೊಂಡು ಜನರ ನೋವುನಲಿವುಗಳಿಗೆ ಸ್ಪಂದಿಸುವ ಸಮೂಹ ಕಲೆ. ಒಂದು ಕಡೆ ಜ್ಞಾನ ಮತ್ತೊಂದು ಕಡೆ ಮನರಂಜನೆ ಹಾಗೂ ಆಧ್ಯಾತ್ಮಿಕ ಸಮೃದ್ಧಿಯ ಭಾಗವಾಗಿ ಹಿಂದಿನವರು ಯಕ್ಷಗಾನ ಕಲೆಯನ್ನು ಬೆಳೆಸಿಕೊಂಡು ಬಂದಿದ್ದಾರೆ.

ದಕ್ಷಿಣ ಕರ್ನಾಟಕ ಭಾಗದಲ್ಲಿ ಅಥವಾ ಬಯಲು ಸೀಮೆಯಲ್ಲಿ ಪ್ರಚಲಿತವಾಗಿರುವ ಬಯಲಾಟವನ್ನು ಮೂಡಲಪಾಯ ಯಕ್ಷಗಾನ, ಬಯಲಾಟ, ಕೇಳಿಕೆ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ದಕ್ಷಿಣ ಸಂಪ್ರದಾಯದ ಬಯಲು ಸೀಮೆಯ ಮೂಡಲಪಾಯ ಯಕ್ಷಗಾನ ಪ್ರಾಚೀನವಾದ ಕಲೆ, ಸಾಹಿತ್ಯ, ಹಾಡುಗಾರಿಕೆ, ಮಾತುಗಾರಿಕೆ, ಬಣ್ಣಗಾರಿಕೆ, ಅಭಿನಯ, ಕುಣಿತ, ವೇಷಭೂಷಣಗಳು ವಾದ್ಯಮೇಳ ಮೊದಲಾದ ಅಂಶಗಳಿಂದ ಶ್ರೀಮಂತವಾದ ಹಾಗೂ ಪಾರಂಪರಿಕ ರಂಗಭೂಮಿ ಪರಂಪರೆಯಲ್ಲಿ ಅತ್ಯಂತ ವಿಶಿಷ್ಟ ದೃಶ್ಯಕಲಾ ಪ್ರಕಾರವಾದ ಮೂಡಲಪಾಯ ಯಕ್ಷಗಾನ ಗ್ರಾಮೀಣ ಪ್ರದೇಶದ ಮನರಂಜನೆಯ ಮಾಧ್ಯಮ.

ದಕ್ಷಿಣದ ಮೈಸೂರು ಜಿಲ್ಲೆಯಿಂದ ಉತ್ತರದ ಬೀದರ್ ಜಿಲ್ಲೆಯವರೆಗೆ ಸುಮಾರು 15 ಜಿಲ್ಲೆಗಳಲ್ಲಿ ವ್ಯಾಪಕವಾಗಿದ್ದ ಈ ಕಲೆಗೆ 500ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆಯೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಒಂದು ಕಾಲಕ್ಕೆ ವ್ಯಾಪಕವಾಗಿದ್ದು, ವೈಭವೋಪೇತವಾಗಿದ್ದ ಮೂಡಲಪಾಯ ಯಕ್ಷಗಾನವು ಕರಾವಳಿಯ ಪಡುವಲಪಾಯ ಯಕ್ಷಗಾನದ ಅಬ್ಬರ ಜನಪ್ರಿಯತೆಯ ನಡುವೆ ಬರುಬರುತ್ತ ತೆರೆಮರೆಗೆ ಸರಿದು ಯಕ್ಷಗಾನವೆಂದರೆ ಕರಾವಳಿ ಯಕ್ಷಗಾನ ಮಾತ್ರ ಎಂಬಷ್ಟರ ಮಟ್ಟಿಗೆ ಇದ್ದೂ ಇಲ್ಲದಂತಾಗಿತ್ತು. ಬರುಬರುತ್ತಾ ಅನೇಕ ಕಡೆ ಪ್ರೋತ್ಸಾಹವಿಲ್ಲದೆ ಸಂಪೂರ್ಣವಾಗಿ ಮರೆತುಹೋಗುವ ಸ್ಥಿತಿ ತಲುಪಿತು.

ಇಂಥ ಸಂದರ್ಭದಲ್ಲಿ ಡಾ.ಜೀ.ಶಂ.. ಅವರು ದಕ್ಷಿಣ ಕರ್ನಾಟಕದ ಕಾವ್ಯ ಪ್ರಕಾರಗಳನ್ನು ಕುರಿತು ವ್ಯಾಪಕವಾಗಿ ಕ್ಷೇತ್ರಕಾರ್ಯ ಮಾಡಿ ಸಂಶೋಧನೆ ಮಾಡಿ ಕಲಾವಿದರನ್ನೆಲ್ಲ ಗುರುತಿಸುವ ಕಾರ್ಯದಲ್ಲಿ ಯಶಸ್ವಿಯಾಗಿ ತೊಡಗಿದ್ದ ಸಂದರ್ಭದಲ್ಲಿಯೇ 1970ರ ದಶಕದಲ್ಲಿ ದಕ್ಷಿಣ ಕರ್ನಾಟಕದಲ್ಲಿನ ಜಿಲ್ಲೆಗಳಾದ ತುಮಕೂರು, ಹಾಸನ, ಕೋಲಾರ, ಬೆಂಗಳೂರು, ಮಂಡ್ಯ, ಚಿತ್ರದುರ್ಗ ಜಿಲ್ಲೆಗಳಲ್ಲಿನ ಬಯಲಾಟವನ್ನು ಅದರ ವೈವಿಧ್ಯ, ಉಡುಗೆ ತೊಡುಗೆ, ವಾದ್ಯಪರಿಕರಗಳ ಹಿನ್ನೆಲೆ ಅಟ್ಟುಹಾಕುವ ದಿಕ್ಕನ್ನು ಪ್ರಧಾನವಾಗಿ ಪರಿಗಣಿಸಿ ‘ಮೂಡಲಪಾಯ ಯಕ್ಷಗಾನ’ ಎಂದು ಕರೆದರು. ಅಲ್ಲದೆ ಇದರ ಸಂಶೋಧನೆ, ಸಂಘಟನೆಗೆ ತೊಡಗಿಕೊಂಡರು. ಅಲ್ಲದೆ ಜೀ.ಶಂ.ಪರಮಶಿವಯ್ಯ ಹಾಗೂ ಹೆಚ್.ಎಲ್.ನಾಗೇಗೌಡರ ಜೋಡಿ ಆರಂಭದಿಂದಲೂ ಜನಪದ ಕಲೆ, ಸಾಹಿತ್ಯ ಸಂಸ್ಕøತಿಯ ಬಗೆಗೆ ವಿಶೇಷ ಒಲವಿಟ್ಟುಕೊಂಡು ಕರ್ನಾಟಕ ಜಾನಪದ ಕ್ಷೇತ್ರಕ್ಕೆ ಒಂದು ಹೊಸ ಆಯಾಮವನ್ನು ತಂದುಕೊಟ್ಟರು.

ಮೂಡಲಪಾಯ ಯಕ್ಷಗಾನಕ್ಕೆ ಮರುಜೀವ ನೀಡುವ ನಿಟ್ಟಿನಲ್ಲಿ ಜೀಶಂಪರವರು 1969ರಲ್ಲಿ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಕೊನೆಹಳ್ಳಿಯಲ್ಲಿ `ಶ್ರೀ ಬಿದರೆಯಮ್ಮ ಯಕ್ಷಗಾನ ಮಂಡಲಿ’ ಎಂಬ ಸಂಸ್ಥೆ ಸ್ಥಾಪಿಸಿದ್ದು ಮಹತ್ವದ ಮೈಲಿಗಲ್ಲು. ಆ ಸಂದರ್ಭಕ್ಕೆ `ಮೂಡಲಪಾಯ ಯಕ್ಷಗಾನದ ಕಾಶಿ’ ಎಂದೇ ಗುರುತಿಸುವಷ್ಟರ ಮಟ್ಟಿಗೆ ಕಲಾವಿದರು ಭಾಗವತರನ್ನೆಲ್ಲ ಒಟ್ಟುಗೂಡಿಸುವ ಕೆಲಸ ಮಾಡಿದರು. ಮರೆಯಾಗಿ ಹೋಗುತ್ತಿದ್ದ ಮೂಡಲಪಾಯವನ್ನು ನಾಡಿನ ಕಲಾರಸಿಕರಿಗೆ ಪರಿಚಯಿಸುವ ಕಾರ್ಯ ಕೈಗೆತ್ತಿಕೊಂಡ ಮೇಲೆ ಇದಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿತು. ಹಲವು ದಿಟ್ಟ ಹೆಜ್ಜೆಗಳನ್ನು ಇಟ್ಟು ಅನೇಕ ರೀತಿಯಲ್ಲಿ ಈ ಕಲೆಯನ್ನು ಅಂತರ ರಾಷ್ಟ್ರೀಯಮಟ್ಟದಲ್ಲಿ ಬೆಳಗಿಸಿದರು. ಹೀಗೆ 1969-1993ರ ಅವಧಿಯಲ್ಲಿ ಇಟ್ಟ ಹೆಜ್ಜೆಗುರುತುಗಳು ಈಗ ಇತಿಹಾಸ. ಜೀಶಂಪರವರ ಅಕಾಲ ಮರಣ ಮತ್ತು ನಾಗೇಗೌಡ ನಿಧನದೊಂದಿಗೆ ಮತ್ತೆ ಮೂಡಲಪಾಯ ಅವನತಿಯತ್ತ ಜಾರಿತು.

ಬಯಲು ಸೀಮೆಯ ಜನಪದ ಕಲೆಯಾದ ಮೂಡಲಪಾಯ ಯಕ್ಷಗಾನ ಪ್ರಸ್ತುತ ಸಾರ್ವಜನಿಕರ ಸಂಪೂರ್ಣ ಅಸಹಕಾರ, ಇಚ್ಛಾಶಕ್ತಿಯ ಕೊರತೆಯಿಂದ ನಶಿಸಿ ಹೋಗುತ್ತಿದೆ. ಹಿರಿಯ ಕಲಾವಿದರಿಂದ ಈ ಕಲೆ ಹೊಸತಲೆಮಾರಿಗೆ ರವಾನೆಯಾಗುತ್ತಿಲ್ಲ. ಇಂದು ಉತ್ತುಂಗ ಸ್ಥಿತಿಯಲ್ಲಿರುವ ಕರಾವಳಿ ಯಕ್ಷಗಾನಕ್ಕೆ ದೊರೆತ ಮಾನ್ಯತೆ ಸಿಗಲಿಲ್ಲ. ಆ ಕಲೆ ಇಂದು ದೇಶವಿದೇಶಗಳಲ್ಲಿ ಮಾನ್ಯತೆ ಪಡೆದು ವಾಣಿಜ್ಯ ಕಲೆಯಾಗಿ ಕಲಾವಿದರ ಬದುಕನ್ನ ಶ್ರೀಮಂತಗೊಳಿಸಿದ್ದು ಕರಾವಳಿಯ ಅಸ್ಮಿತೆಯಾಗಿ ಕಂಗೊಳಿಸುತ್ತಿದೆ.

ಆದರೆ ಒಂದು ಕಾಲಕ್ಕೆ ಅಷ್ಟೆ ಜನಪ್ರಿಯತೆ ಪ್ರಬುದ್ಧತೆ ಹೊಂದಿದ್ದ ಮೂಡಲಪಾಯ ಇಂದು ಅಂಥ ಅವಕಾಶಗಳು ದೊರಕದೆ, ಜೀಶಂಪ ನಂತರ ವ್ಯವಸ್ಥಿತ ಸಂಘಟನೆಯಿಲ್ಲದೆ ಮೂಡಲಪಾಯ ಕಲಾವಿದರು ಭಾಗವತರು ದಿಕ್ಕಾಪಾಲಾಗಿದ್ದರು. ಹೀಗೆ ಗುಟುಕು ಜೀವವಿಟ್ಟುಕೊಂಡು ಮುನ್ನೆಲೆಗೆ ಬರಲು ಹೆಣಗಾಡುತ್ತಿದ್ದ ಈ ಕಲೆ ಮತ್ತು ಕಲಾವಿದರನ್ನು ಮತ್ತೆ ಸಂಘಟಿಸುವ ಪುನರುಜ್ಜೀವನ ಕಾರ್ಯ ಈ ಹಿಂದೆ ಮಂಡ್ಯ ನೆಲೆದಿಂದಲೇ, ಮಂಡ್ಯದ ವಿದ್ವಾಂಸರಿಂದಲೇ ಆದಂತೆ ಪ್ರಸ್ತುತವೂ ಮಂಡ್ಯದ ತಜ್ಞ ಸಂಘಟಕರಿಂದಲೇ ಚಾಲನೆಗೊಂಡಿರುವುದು ಮಹತ್ವದ ಸಂಗತಿ.

ಮೂಡಲಪಾಯಕ್ಕೆ ಒದಗಿರುವ ದುಸ್ಥಿತಿಯನ್ನು ಗಮನಿಸುತ್ತಾ ಬಂದಿದ್ದ, ಮಂಡ್ಯ ‘ಕರ್ನಾಟಕ ಸಂಘ’ದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡರು, ಮಂಡ್ಯವನ್ನು ಕೇಂದ್ರವಾಗಿಟ್ಟುಕೊಂಡು ಈ ಕಲೆಯ ಪುನಶ್ಚೇತನ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಕರ್ನಾಟಕ ಸಂಘದ ನೇತೃತ್ವದಲ್ಲಿ, ‘ಕರ್ನಾಟಕ ಜಾನಪದ ಪರಿಷತ್ತಿ’ನ ಅಧ್ಯಕ್ಷರಾದ ಟಿ.ತಿಮ್ಮೇಗೌಡ, ‘ಸಮಾಜಮುಖಿ ಬಳಗ’ದ ಜಯರಾಮ್ ರಾಯಪುರ, ‘ಕರ್ನಾಟಕ ಯಕ್ಷಗಾನ ಅಕಾಡೆಮಿ’, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮಿಗಳು, ‘ಕನ್ನಡ ಮತ್ತು ಸಂಸ್ಕøತಿ ಇಲಾಖೆ’, ‘ಜಾನಪದ ವಿಶ್ವವಿದ್ಯಾನಿಲಯ’ ಹಾಗೂ ರಾಜ್ಯ ಸಂಘಟನೆಗಳು, ಸಂಘಸಂಸ್ಥೆಗಳು, ಉದ್ಯಮಿಗಳು, ಅಧಿಕಾರಿಗಳು, ವಿಶ್ವವಿದ್ಯಾನಿಲಯಗಳು ಮತ್ತು ಜಾನಪದ ತಜ್ಞ ವಿದ್ವಾಂಸರೊಡಗೂಡಿ ಎಲ್ಲರ ಆರ್ಥಿಕ ನೈತಿಕ ಬೆಂಬಲದೊಂದಿಗೆ ಕಳೆದ ಮೂರು ವರ್ಷಗಳಿಂದ ಮೂಡಲಪಾಯ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರೊ.ಜಯಪ್ರಕಾಶಗೌಡರು ಮೂಡಲಪಾಯ ಪುನಶ್ಚೇತನ ಕಾರ್ಯಕೈಗೆತ್ತಿಕೊಂಡಿದ್ದರ ಬಗ್ಗೆ ಹೇಳುವುದು ಹೀಗೆ:

ಮೂಡಲಪಾಯ ಯಕ್ಷಗಾನದ ಕಲಾವಿದ ತಿಪಟೂರು ತಾಲೂಕಿನ ಕಲ್ಮನೆ ನಂಜಪ್ಪ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಬಂದಾಗ ಅವರನ್ನು ನನ್ನ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅಭಿನಂದಿಸಲಾಯಿತು. ಅಂದು ತೀರ್ಮಾನಿಸಿದ್ದರ ಫಲವಾಗಿ ಕಲಾವಿದರನ್ನು ಸಂಘಟಿಸುವ, ಈ ಕಲೆಯನ್ನು ಸಂಪೂರ್ಣವಾಗಿ ಪುನರುಜ್ಜೀವನಗೊಳಿಸುವ ತೀರ್ಮಾನವನ್ನು ನನ್ನ ಸ್ನೇಹಿತರಾದ ಈ ಕ್ಷೇತ್ರದಲ್ಲಿ ಪರಿಣತರಾದ ಡಾ.ಚಂದ್ರು ಕಾಳೇನಹಳ್ಳಿ, ಡಾ.ಹಿ.ಶಿ.ರಾಮಚಂದ್ರೇಗೌಡ, ಡಾ.ರಾ.ಗೌ., ಡಾ.ಕುರುವ ಬಸವರಾಜು, ಮಲ್ಲಿಕಾರ್ಜುನ ಮಹಾಮನೆ, ಡಾ.ಚಿಕ್ಕಣ್ಣ ಯಣ್ಣೆಕಟ್ಟೆ, ಡಾ.ರಂಗಾರೆಡ್ಡಿ ಕೋಡಿರಾಂಪುರ, ಡಾ.ಮೀರಾಸಾಬಿಹಳ್ಳಿ ಶಿವಣ್ಣ ಮುಂತಾದವರೊಡಗೂಡಿ ಈ ಕಾರ್ಯಕ್ಕೆ ಕೈಹಾಕಲಾಯಿತು. ಇದೆಲ್ಲಕ್ಕೂ ಮಿಗಿಲಾಗಿ ಮೂಡಲಪಾಯ ಯಕ್ಷಗಾನ ಪುನರುಜ್ಜೀವನಕ್ಕೆ ಕೈಹಾಕಬೇಕೆಂದು ನನ್ನಲ್ಲಿ ಮೊಳಕೆಯೊಡೆಸಿದವರು ಕೇಂದ್ರ ಸರ್ಕಾರದ ಕಂದಾಯ ಇಲಾಖೆಯ ಆಯುಕ್ತರೂ, ನಾಟಕಕಾರರೂ, ಸಜ್ಜನರೂ, ಸಹೃದಯರೂ ಆದ ಜಯರಾಮ್ ರಾಯಪುರ ಅವರು. ಶ್ರೀಯುತರಿಲ್ಲದಿದ್ದರೆ ಈ ಪ್ರಯತ್ನಕ್ಕೆ ಕೈಹಾಕುತ್ತಿರಲಿಲ್ಲ. ಅವರು ನನ್ನೊಡನೆ ಪ್ರಸ್ತಾಪ ಮಾಡಿದಾಗ ಹಣಕಾಸಿನ ಮುಗ್ಗಟ್ಟಿನ ಬಗ್ಗೆ ಹೇಳಿದೆ. ಅದಕ್ಕೆ ಅವರು ‘ನಾನಿದ್ದೇನೆ ನೀವು ಮುಂದುವರಿಯಿರಿ’ ಎಂದರು. ಅವರ ಪ್ರೇರಣೆಯೇ ನಮ್ಮ ದಿಟ್ಟನಿರ್ಧಾರಕ್ಕೆ ಕಾರಣ. ಕಲಾಪ್ರೇಮಿಗಳು, ಪ್ರೋತ್ಸಾಹಕರು ಆದ ಈ ಎಲ್ಲ ಮಹನೀಯರ ನಿರಂತರ ಪ್ರೇರಣೆ, ಸಹಾಯ, ಸಹಕಾರದೊಟ್ಟಿಗೆ ಕರ್ನಾಟಕ ಸಂಘ ಈ ಮೂರು ವರ್ಷಗಳಲ್ಲಿ ಹಲವು ದಿಟ್ಟಹೆಜ್ಜೆಗಳನ್ನಿಟ್ಟು ರಾಜ್ಯದಲ್ಲಿಯೇ ಸಂಚಲನವನ್ನುಂಟು ಮಾಡಿದೆ.

ಪುನಶ್ಚೇತನದ ಮೊದಲ ಹೆಜ್ಜೆಯಾಗಿ 24, 25, 26 ಮೇ 2019ರಲ್ಲಿ ‘ಕರ್ನಾಟಕ ಜಾನಪದ ಪರಿಷತ್ತು’ ಹಾಗೂ ‘ಚಿಂತನಶೀಲ ಸಮಾಜಮುಖಿ ಬಳಗ’ ಬೆಂಗಳೂರು ಇವರ ಸಹಯೋಗದಲ್ಲಿ ಮಂಡ್ಯ ಕರ್ನಾಟಕ ಸಂಘದಲ್ಲಿ ಮೂರು ದಿನಗಳ ‘ಮೂಡಲಪಾಯ ಯಕ್ಷಗಾನ ಕಾರ್ಯಾಗಾರ’ ನಡೆಯಿತು. ಮುಖ್ಯವಾಗಿ ಮೂಡಲಪಾಯ ಯಕ್ಷಗಾನ ಹೆಜ್ಜೆಗಳನ್ನು ಹೊಸತಲೆಮಾರಿಗೆ ಕಲಿಸುವ ಕೌಶಲವನ್ನು ಕರಾವಳಿ ಭಾಗವತರಿಂದ ಅಭ್ಯಾಸ ಮಾಡಿಕೊಳ್ಳಲು ಪ್ರಯತ್ನಿಸಲಾಯಿತು ಹಾಗೂ ಇತರೆ ಭಾಗಗಳ ಮೂಡಲಪಾಯ ಭಾಗವತರು ತಜ್ಞ ವಿದ್ವಾಂಸರನ್ನು ಮುಖಾಮುಖಿಯಾಗಿಸಿ ಹೊಸಸಾಧ್ಯತೆಗಳ ಬಗ್ಗೆ ಚರ್ಚಿಸಲಾಯಿತು. 50 ಮಂದಿ ಶಿಬಿರಾರ್ಥಿಗಳಿಗೆ ಮೂಡಲಪಾಯದ ತಾಳ, ಹೆಜ್ಜೆಗಳ ಅಭ್ಯಾಸ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಹಿ.ಶಿ.ರಾಮಚಂದ್ರೇಗೌಡ, ಟಿ.ತಿಮ್ಮೇಗೌಡ, ಜಯರಾಮ್ ರಾಯಪುರ, ಡಾ.ರಾಜೇಗೌಡ ಹೊಸಹಳ್ಳಿ ಮೊದಲಾದ ತಜ್ಞರು ಅನೇಕ ವಿಷಯಗಳನ್ನು ಕುರಿತು ಪ್ರಸ್ತಾಪಿಸಿದರು. ನಂತರ ಜಾನಪದ ಲೋಕದ ತಂಡವು ‘ಕರಿರಾಯನ ಕಥೆ’ಯನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆಯಿತು. ಮುಖ್ಯವಾಗಿ ಈ ಕಾರ್ಯಾಗಾರ ಹೊತಲೆಮಾರಿಗೆ ಮೂಡಲಪಾಯ ಕಲೆಯ ಬಗ್ಗೆ ಪ್ರಾಥಮಿಕ ಅರಿವು ಮೂಡಿಸಿ ದೀರ್ಘ ಕಲಿಕೆಗೆ ಅವರನ್ನು ತೊಡಗುವಂತೆ ಪ್ರೇರೇಪಿಸಿತು.

ಎರಡನೇ ಹೆಜ್ಜೆಯಾಗಿ 21, 22, 23, 24 ಜೂನ್ 2019 ರಂದು ಕರ್ನಾಟಕ ಸಂಘದ ಕೆ.ವಿ.ಎಸ್. ಸಭಾಂಗಣದಲ್ಲಿ ಕರ್ನಾಟಕ ಜಾನಪದ ವಿ.ವಿ., ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ನಾಲ್ಕು ದಿನಗಳ ‘ಮೂಡಲಪಾಯ ಯಕ್ಷಗಾನ ಕಮ್ಮಟ’ ಹಮ್ಮಿಕೊಳ್ಳಲಾಯಿತು. ಈ ಹಿಂದೆ ನಡೆಸಿದ ಕಾರ್ಯಾಗಾರದ ಯಶಸ್ಸಿನ ಮೇರೆಗೆ ಮುಂದಿನ ದಿನಗಳಲ್ಲಿ ಈ ಕಲೆಗೆ ಕಲಿಕಾ ಶಾಲೆ ತೆರೆಯಬೇಕೆಂಬ ಮುಖ್ಯ ನಿರ್ಧಾರದ ಹಿನ್ನೆಲೆಯಲ್ಲಿ ಏರ್ಪಡಿಸಿದ ಈ ಕಮ್ಮಟದಲ್ಲಿ ಇತರೆ ಭಾಗಗಳ ಅನೇಕ ಭಾಗವತರು, ವಾದ್ಯಗಾರರು, ತಜ್ಞರನ್ನು ಆಹ್ವಾನಿಸಲಾಗಿತ್ತು. ಕಾಲಕ್ಕನುಗುಣವಾಗಿ ಮೂಲಕ್ಕೆ ಧಕ್ಕೆ ಬರದಂತೆ ಈ ಕಲೆಯಲ್ಲಿ ತರಬೇಕಾದ ಸುಧಾರಣೆಗಳ ಬಗ್ಗೆ ಚರ್ಚಿಸಿ ವಿವಿಧ ಭಾಗದ ಭಾಗವತರಿಂದ ಭಿನ್ನ ಶೈಲಿಯ ಮೂಡಲಪಾಯದ ಹೆಜ್ಜೆ, ನೃತ್ಯಗಳ ಧಾಟಿ, ವಾದ್ಯಗಳನ್ನು ಪ್ರತಿನಿತ್ಯ ಪ್ರದರ್ಶಿಸಿ ವೀಡಿಯೋ ಮೂಲಕ ದಾಖಲಿಸಲಾಯಿತು. ಸುಧಾರಣೆಯ ವಿವಿಧ ಅಂಶಗಳ ಬಗ್ಗೆ ಸುದೀರ್ಘವಾಗಿ ಮೂಲ ಭಾಗವತರು, ವಿದ್ವಾಂಸರು ಹಾಗೂ ಆಧುನಿಕ ರಂಗನಿರ್ದೇಶಕರೊಡಗೂಡಿ ಚರ್ಚಿಸಲಾಯಿತು.

ಪುನಶ್ಚೇತನದ ಮೂರನೇ ಹೆಜ್ಜೆಯಾಗಿ 12 ಆಗಸ್ಟ್, 2019 ರಂದು ರಾಮನಗರ ‘ಜಾನಪದ ಲೋಕ’ದಲ್ಲಿ ‘ಮೂಡಲಪಾಯ ಯಕ್ಷಗಾನ ಕಲೆಯ ಸಮಾಲೋಚನ ಸಭೆ ಹಾಗೂ ವಿಚಾರ ಸಂಕಿರಣ’ವನ್ನು ಏರ್ಪಡಿಸಲಾಗಿತ್ತು. ಸಭೆಯ ಮುಖ್ಯ ಉದ್ದೇಶ ಈ ಕಲೆಯ ಪುನರುಜ್ಜೀವನಕ್ಕಾಗಿ ಇತರೆ ಕಲೆಗಳಂತೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವುದರ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸುವುದು. ಈ ಸಭೆಯಲ್ಲಿ ಅನೇಕ ವಿದ್ವಾಂಸರು, ಭಾಗವತರು, ಕಲಾವಿದರು, ಸಂಘಟಕರು ಭಾಗವಹಿಸಿ ಕಲೆಯ ಬೆಳವಣಿಗೆ ಬಗ್ಗೆ ಚರ್ಚಿಸಿ ಹಲವು ನಿರ್ಧಾರಗಳನ್ನು ಕೈಗೊಂಡರು.

ನಾಲ್ಕನೇ ಹೆಜ್ಜೆಯಾಗಿ 17 ಅಕ್ಟೋಬರ್ 2019ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕರ್ನಾಟಕ ಸಂಘವು ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಂಸ್ಕøತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ಸ್ಥಳೀಯ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ‘ಮೂಡಲಪಾಯ ಯಕ್ಷಗಾನ ಅಂದುಇಂದು’ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಿತ್ತು. ಈ ಹಿಂದೆ ಮಂಡ್ಯ, ರಾಮನಗರವನ್ನು ಕೇಂದ್ರೀಕರಿಸಿ ಅಯೋಜಿಸಿದ ಕಾರ್ಯಕ್ರಮಗಳು ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಕಲೆ ಯಾವ ಯಾವ ಜಿಲ್ಲೆಗಳಲ್ಲಿ ಪ್ರಚಲಿತವಿದೆಯೋ ಅಲ್ಲೆಲ್ಲ ಕಲಾವಿದರನ್ನು ಭಾಗವತರನ್ನು, ತಜ್ಞರನ್ನು ಸಂಘಟಿಸಿ ಈ ಕಲೆಯ ಪ್ರಾಮುಖ್ಯ, ಹೊಸ ಸಾಧ್ಯತೆಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ಬೆಂಗಳೂರು ಭಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವಿಚಾರಗೋಷ್ಠಿಗಳಲ್ಲಿ ‘ಮೂಡಲಪಾಯ ಯಕ್ಷಗಾನ ವಸ್ತುವೈವಿಧ್ಯ’, ‘ಮೂಡಲಪಾಯ ಯಕ್ಷಗಾನ ಮತ್ತು ರಂಗಭೂಮಿ ಅನ್ವಯಿಕ ಸಾಧ್ಯತೆ’, ‘ಮೂಡಲಪಾಯ ಯಕ್ಷಗಾನ ಅಂದುಇಂದುಮುಂದು’ ಎಂಬ ವಿಷಯಗಳನ್ನು ಕುರಿತು ವಿದ್ವಾಂಸರು ವಿಚಾರಮಂಡನೆ ಮಾಡಿದರು. ನಂತರ ಆಹ್ವಾನಿತ 40ಕ್ಕೂ ಹೆಚ್ಚಿನ ಕಲಾವಿದರೊಡನೆ ಸಂವಾದಗೋಷ್ಠಿ ನಡೆಸಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಪುನಶ್ಚೇತನದ ಐದನೆಯ ಪ್ರಯತ್ನವಾಗಿ 18 ಡಿಸೆಂಬರ್ 2019 ರಂದು ಮಂಡ್ಯ ಕರ್ನಾಟಕ ಸಂಘದ ಕೆ.ವಿ.ಎಸ್.ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಜಾನಪದ ಜನ್ನೆಯರು ಮೊದಲಾದ ಸಂಘಟನೆಗಳ ಸಹಕಾರದಲ್ಲಿ ‘ಯಕ್ಷಗಾನ ಸಂಭ್ರಮ 2019 ಉಪನ್ಯಾಸಸಂವಾದ ಪ್ರದರ್ಶನ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ.ಎಂ..ಹೆಗಡೆ, ಡಾ.ಚಕ್ಕೆರೆ ಶಿವಶಂಕರ್ ಅವರು ಮೂಡಲಪಾಯ ಕಲೆಯ ಪರಂಪರೆ, ಬೆಳವಣಿಗೆ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡರು. ವಿಚಾರಗೋಷ್ಠಿಯಲ್ಲಿ ‘ಮೂಡಲಪಾಯ ಸಂಗೀತ ವೈಶಿಷ್ಟ್ಯಗಳು’ ಹಾಗೂ ‘ಮೂಡಲಪಾಯ ಹೊಸಸಾಧ್ಯತೆಗಳು’ ಎಂಬ ವಿಚಾರಗಳನ್ನು ತಜ್ಞರು ಮಂಡಿಸಿದರು. ನಂತರ ಡಾ.ಚಿಕ್ಕಣ್ಣ ಯೆಣ್ಣೆಕಟ್ಟೆ ಅವರ ಅಧ್ಯಕ್ಷತೆಯಲ್ಲಿ ವಿವಿಧ ವಿದ್ವಾಂಸರು, ಸಂಘಟಕರು, ಕಲಾವಿದರೊಡನೆ ಸಂವಾದಗೋಷ್ಠಿ ನಡೆದು ಹಲವು ಮಹತ್ವದ ವಿಚಾರಗಳು ಚರ್ಚಿತವಾದವು.

ಪುನಶ್ಚೇತನದ ಆರನೆಯ ಪ್ರಯತ್ನವಾಗಿ ಇಂದಿಗೂ ಹೆಚ್ಚಿನ ಮೂಡಲಪಾಯ ಕಲಾವಿದರಿರುವ ತುಮಕೂರು ಭಾಗದಲ್ಲಿ ಎಲ್ಲರನ್ನು ಸಂಘಟಿಸುವ ಉದ್ದೇಶದಿಂದ 19 ಜನವರಿ 2020 ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿ, ತುಮಕೂರು ಜಿಲ್ಲಾ ಜಾನಪದ ಪರಿಷತ್ತಿನ ಸಹಯೋಗದಲ್ಲಿ ‘ಮೂಡಲಪಾಯ ಯಕ್ಷಗಾನ ಪರಂಪರೆ ಪುನರ್‍ಚೇತನ ವಿಚಾರ ಸಂಕಿರಣ ಮತ್ತು ಭಾಗವತರ ಸಮಾವೇಶ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಮಾವೇಶದಲ್ಲಿ ತುಮಕೂರು ಜಿಲ್ಲೆಯ 150ಕ್ಕೂ ಹೆಚ್ಚಿನ ಭಾಗವತರು, ಕಲಾವಿದರು, ವಿದ್ವಾಂಸರು ಭಾಗಿಯಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡೆಮಿ ಅಧ್ಯಕ್ಷರಾದ ಪ್ರೊ.ಎಂ..ಹೆಗಡೆ ಹಾಗೂ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಕಲೆಯ ಬಗೆಗೆ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು. ವಿಚಾರಗೋಷ್ಠಿಯಲ್ಲಿ ತಜ್ಞರು “ಮೂಡಲಪಾಯ ಯಕ್ಷಗಾನದ ಪುನರ್‍ಚೇತನದ ಸಾಧ್ಯತೆಗಳು ಮತ್ತು ‘ಮೂಡಲಪಾಯ ಯಕ್ಷಗಾನದ ಪ್ರಾದೇಶಿಕ ಅನನ್ಯತೆ’ ಎಂಬ ವಿಷಯಗಳನ್ನು ಮಂಡಿಸಿದರು. ನಂತರ ಡಾ.ರಂಗಾರೆಡ್ಡಿ ಕೋಡಿರಾಂಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂವಾದಗೋಷ್ಠಿಯಲ್ಲಿ ನಾಡಿನ ವಿವಿಧ ತಜ್ಞರು ಕಲೆ ಕುರಿತು ಸಂವಾದ ನಡೆಸಿದರು.

ಪುನಶ್ಚೇತನದ ಏಳನೆಯ ಹೆಜ್ಜೆಯಾಗಿ ಕೋಲಾರದಲ್ಲಿ 26 ಫೆಬ್ರವರಿ 2020 ರಂದು ಮುಂದಿನ ದಿನಗಳಲ್ಲಿ ವಿಚಾರಸಂಕಿರಣ ಕಾರ್ಯಾಗಾರ ಹಾಗೂ ಭಾಗವತರ ಸಮಾವೇಶವನ್ನು ಏರ್ಪಡಿಸಲು ಆ ಭಾಗದ ಕಲಾವಿದರು ಹಾಗೂ ತಜ್ಞರ ಸಮಾಲೋಚನ ಸಭೆ ನಡೆಸಲಾಯಿತು. ಆದರೆ ಮುಂದೆ ಕೋರೋನಾ ಸೋಂಕು ಹರಡುವಿಕೆ ಕಾರಣದಿಂದ ಕಾರ್ಯಕ್ರಮ ರೂಪಿಸಲು ಸಾಧ್ಯವಾಗಲಿಲ್ಲ.

ಮೂಡಲಪಾಯ ಪುನಶ್ಚೇತನದ ಎಂಟನೆಯ ಹೆಜ್ಜೆಯಾಗಿ 6 ಆಗಸ್ಟ್ 2020 ರಂದು ಕರ್ನಾಟಕ ಸಂಘದಲ್ಲಿ ಕರ್ನಾಟಕ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ‘ಪ್ರದರ್ಶನ ಕಲೆಗಳ ಸರ್ಟಿಫಿಕೇಟ್ ಕೋರ್ಸ್’ಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮುಖ್ಯವಾಗಿ ಯುವ ಸಮೂಹಕ್ಕೆ ಜನಪದ ಸಂಗೀತ, ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ ಸೇರಿದಂತೆ ಮೂಡಲಪಾಯ ಮೊದಲಾದ ಪ್ರದರ್ಶಕ ಕಲೆಗಳ 10 ತಿಂಗಳ ಸರ್ಟಿಫಿಕೇಟ್‍ಕೋರ್ಸ್‍ನ್ನು ಕರ್ನಾಟಕ ಸಂಘದ ನೇತೃತ್ವದಲ್ಲಿ ತೆರೆಯಲು ವಿ.ವಿ.ಯಿಂದ ಮಾನ್ಯತೆ ಪಡೆಯಲಾಯಿತು. ಅದರ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.

ಮುಂದಿನ 6 ತಿಂಗಳು ಕೋರೋನಾ ಕಾರಣದಿಂದ ಯಾವ ಸಭೆ ಸಮಾರಂಭಗಳನ್ನು ಮಾಡದ ಸ್ಥಿತಿಯುಂಟಾಯಿತು. ಆದರೆ ಕರ್ನಾಟಕ ಸಂಘವು ಕೊರೋನಾ ಅಬ್ಬರದ ನಡುವೆಯೇ ಮೂಡಲಪಾಯ ಪುನಶ್ಚೇತನದ ತನ್ನ ಕಾರ್ಯವನ್ನು ಮತ್ತೆ ಕೈಗೆತ್ತಿಕೊಂಡು ಮುಂದೆ ಇಟ್ಟ ಹೆಜ್ಜೆಗಳು ದಾಖಲಾರ್ಹವಾದಂತವು. ಈ ಕಲೆ ಯುವ ಸಮುದಾಯಕ್ಕೆ ಅದರಲ್ಲೂ ಮುಖ್ಯವಾಗಿ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ತಲುಪಿ ಅಲ್ಲಿಂದ ಅದು ಹರಡುವಂತಾಗಬೇಕೆಂಬ ದೂರದೃಷ್ಟಿಯಿಂದ ಹಾಗೂ ಮುಂದೆ ‘ಮೂಡಲಪಾಯ ಯಕ್ಷಗಾನ ತರಬೇತಿ ಕೇಂದ್ರ’ ಸ್ಥಾಪಿಸಲು ಹಲವು ಯೋಜನೆಗಳನ್ನು ರೂಪಿಸಿತು. ಅದಕ್ಕೆ ಪೂರ್ವಭಾವಿಯಾಗಿ ಮೂಡಲಪಾಯ ಯಕ್ಷಗಾನವನ್ನು ಇಂದಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಂಭಾಷಣೆ, ಪ್ರದರ್ಶನ ಸಮಯ, ಪ್ರಸಂಗಗಳಲ್ಲಿ ಭಾಷೆಯ ಬಳಕೆ, ವೇಷಭೂಷಣಗಳು, ಸಂಗೀತ ಮೊದಲಾದ ಅಂಶಗಳಲ್ಲಿ ನಾವೀನ್ಯ, ಮಾಧುರ್ಯ ತಂದು ಆಕರ್ಷಕಗೊಳಿಸಲು ಮುಂದಾಯಿತು. ಆಧುನಿಕ ರಂಗ ನಿರ್ದೇಶಕರಾದ ಪ್ರಮೋದ್ ಶಿಗ್ಗಾಂವ್ ಹಾಗೂ ತಲಕಾಡಿನ ಮೂಲ ಭಾಗವತರಾದ ಟಿ.ಎಸ್.ರವೀಂದ್ರ ಅವರ ನಿರ್ದೇಶನ ಮತ್ತು ಭಾಗವತಿಕೆಯೊಂದಿಗೆ ಕರ್ನಾಟಕ ಸಂಘದಲ್ಲಿ ದಿನಾಂಕ 15.02.2021 ರಿಂದ 18.02.2021 ರವರೆಗೆ ತರಬೇತಿಯನ್ನು ಏರ್ಪಡಿಸಲಾಯಿತು. ಮಂಡ್ಯ ತಾಲ್ಲೂಕು ಬೇಲೂರು ಪ್ರೌಢಶಾಲೆಯ 25 ವಿದ್ಯಾರ್ಥಿಗಳಿಗೆ ಎರಡು ತಿಂಗಳು ತರಬೇತಿ ನೀಡಿ ‘ಕರ್ಣಾವಸಾನ’ ಎಂಬ ಪ್ರಸಂಗವನ್ನು ಕಲಿಸಿ ಪ್ರಸಂಗದ ವೇಷಭೂಷಣ, ಪರಿಕರಗಳನ್ನು ಪರಿಷ್ಕರಣೆ ಮಾಡಿ ಆಕರ್ಷಕವಾಗಿ ಸಂಘದಲ್ಲಿಯೇ ಸಿದ್ಧಪಡಿಸಲಾಯಿತು.

ದಿನಾಂಕ 18.04.2021 ರಂದು ಭಾಗವತರು, ವಿದ್ವಾಂಸರು, ಕಲಾವಿದರನ್ನು ಆಹ್ವಾನಿಸಿ ವಿಚಾರ ಸಂಕಿರಣ ಸಂವಾದಗಳನ್ನು ನಡೆಸಲಾಯಿತು. ಸಂಜೆ ಶಿಬಿರದಲ್ಲಿ ತಯಾರಾದ ‘ಕರ್ಣಾವಸಾನ ಪ್ರಸಂಗ’ ಅಪಾರ ಜನಸ್ತೋಮದ ನಡುವೆ ಯಶಸ್ವಿ ಪ್ರದರ್ಶನಗೊಂಡು ಸಂಚಲನ ಮೂಡಿಸಿತು. ಅದರಲ್ಲೂ ಮುಖ್ಯವಾಗಿ ಯುವಕ ನಿಶ್ಚಯ್ ಜೈನ್ ಹೊಸದಾಗಿ ಭಾಗವತಿಕೆ ಕಲಿತು ಪ್ರಸಂಗ ನಡೆಸಿಕೊಟ್ಟಿದ್ದು ಪ್ರಮುಖ ಬೆಳವಣಿಗೆ. ಕಳೆದ ಎರಡು ವರ್ಷಗಳಿಂದ ಮೂಡಲಪಾಯ ಕಲೆಯ ಸೈದ್ಧಾಂತಿಕ ಚರ್ಚೆಗಳಿಗೆ ಸೀಮಿತವಾಗಿದ್ದ ಕರ್ನಾಟಕ ಸಂಘದ ಸಾಮೂಹಿಕ ಪ್ರಯತ್ನ ಅಂದು ಪ್ರಾಯೋಗಿಕವಾಗಿಯೂ ಯಶಸ್ಸನ್ನು ಕಂಡಿತು.

ಕರ್ನಾಟಕ ಸಂಘವು ಕೈಗೊಂಡಿರುವ ಮೂಡಲಪಾಯ ಪುನರುಜ್ಜೀವನದ ಪ್ರಯತ್ನಗಳಲ್ಲಿ ಕಿರೀಟ ಪ್ರಾಯವಾದದ್ದು ‘ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ’ ಕೇಂದ್ರದ ಸ್ಥಾಪನೆ. 29.08.2021ರಂದು ಪೂಜ್ಯ ಡಾ.ನಿರ್ಮಲಾನಂದನಾಥ ಸ್ವಾಮಿಗಳಿಂದ ಅಧಿಕೃತವಾಗಿ ಉದ್ಘಾಟನೆಗೊಂಡ ಈ ಕೇಂದ್ರದ ವಾರಾಂತ್ಯ ಶಾಲಾ ಚಟುವಟಿಕೆಗಳು ಒಂದು ತಿಂಗಳಿನಿಂದಲೇ ಆರಂಭಗೊಂಡಿದ್ದವು. 25ಕ್ಕೂ ಹೆಚ್ಚಿನ ಅಸಕ್ತ ಯುವಕಯುವತಿಯರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮುಖವೀಣೆ, ಮದ್ದಳೆ, ಹೆಜ್ಜೆ, ತಾಳ ಹಾಗೂ ಭಾಗವತಿಕೆ ಕಲಿಸಲು ಆರಂಭಿಸಿದ್ದಲ್ಲದೆ ಮೂಡಲಪಾಯ ಪ್ರಸಂಗಗಳನ್ನು ಕಲಿಸುವ ಕಾರ್ಯವನ್ನು ರೂಪಿಸಲಾಯಿತು. ಶ್ರೀಮಠದ ಹೆಸರಿನಲ್ಲಿ ಪ್ರಾರಂಭಿಸಲಾಗಿರುವ ಈ ಕೇಂದ್ರವನ್ನು ಉತ್ತರೋತ್ತರವಾಗಿ ಬೆಳೆಸುವ ಕರ್ನಾಟಕ ಸಂಘದ ಎಲ್ಲಾ ಪ್ರಯತ್ನಕ್ಕೂ ನಮ್ಮ ಬೆಂಬಲವಿರುವುದಾಗಿ ಸ್ವಾಮೀಜಿ ತಿಳಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಈ ಕೇಂದ್ರದ ಬೆಳವಣಿಗೆಗೆ ಪ್ರತಿವರ್ಷ ತಲಾ ಒಂದು ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಉದ್ಯಮಿಗಳಾದ ಟಿ.ಎಸ್.ಚಿಕ್ಕರಾಮಕೃಷ್ಣಪ್ಪ ಹಾಗೂ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಕಾಳೇನಹಳ್ಳಿ ತಿಮ್ಮೇಗೌಡ ಅವರು ಘೋಷಿಸಿದರು.

ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ ಕೇಂದ್ರ’ ಅಸ್ತಿತ್ವಕ್ಕೆ ಬಂದ ಕೂಡಲೇ ಮೊದಲ ಪ್ರಯೋಗವಾಗಿ ಕೇಂದ್ರದ ವತಿಯಿಂದ ಮಂಡ್ಯ ತಾಲ್ಲೂಕು ಶಾಸಕರು, ಕರ್ನಾಟಕ ಸಂಘದ ಪೋಷಕರು, ಈ ಕಲೆಯ ಪೋಷಕರು ಆದ ಎಂ.ಶ್ರೀನಿವಾಸ್ ಅವರ ಹನಕೆರೆ ‘ವಿವೇಕ ವಿದ್ಯಾಸಂಸ್ಥೆ’ಯ ಮಾಧ್ಯಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಪ್ರಸಂಗ ಕಲಿಸುವ ಯೋಜನೆ ರೂಪಿಸಲಾಯಿತು. ತಿಪಟೂರು ತಾಲ್ಲೂಕಿನ ಅರಳಗುಪ್ಪೆ ಭಾಗವತರಾದ ಎ.ಆರ್.ಪುಟ್ಟಸ್ವಾಮಿ ಮತ್ತು ತಂಡದವರು ಹನಕೆರೆ ಶಾಲೆಯಲ್ಲಿ ಎರಡು ತಿಂಗಳು ತರಬೇತಿ ನೀಡಿ ‘ದೇವಿಮಹಾತ್ಮೆ’ ಎಂಬ ಪ್ರಸಂಗವನ್ನು ಕಲಿಸಿದರು. ಹೊಸ ಪರಿಕರ ವೇಷಭೂಷಣಗಳ ತಯಾರಿಯೊಂದಿಗೆ ದಿನಾಂಕ 05.12.2021 ರಂದು ಹನಕೆರೆ ಗ್ರಾಮದಲ್ಲಿ ಹಾಗೂ 8.12.2021 ರಂದು ಮಂಡ್ಯದ ಪಿ..ಎಸ್. ಕಾಲೇಜು ವಿವೇಕಾನಂದ ರಂಗಮಂದಿರದಲ್ಲಿ ಮಕ್ಕಳು ಅಮೋಘವಾಗಿ ಪ್ರದರ್ಶನ ನೀಡಿದರು. ಮೊದಲ ಪ್ರಯತ್ನದಲ್ಲಿಯೇ ವಿವಿಧ ಪಾತ್ರಗಳಲ್ಲಿ ಮನೋಜ್ಞವಾಗಿ ತಮ್ಮ ವಯಸ್ಸಿಗೂ ಮೀರಿದ ಅಭಿನಯವನ್ನು ಮಾಡಿದ್ದನ್ನು ಕಂಡು ಪ್ರೇಕ್ಷಕರು ಮೂಕವಿಸ್ಮಿತರಾದರು. ಆಧುನಿಕ ರಂಗ ನಿರ್ದೇಶಕರಾದ ಮಂಜುನಾಥ ಎನ್.ಬಡಿಗೇರ್ ಅವರು ರಂಗ ಪ್ರದರ್ಶನದಲ್ಲಿ ಒಂದಷ್ಟು ನಾವೀನ್ಯ ತಂದು ಆಕರ್ಷಕವಾಗಿಸಿದರು. ಪ್ರದರ್ಶನಕ್ಕೆ ಚಾಲನೆ ನೀಡಿ ಮಕ್ಕಳ ಅದ್ಭುತ ಪ್ರದರ್ಶನ ವೀಕ್ಷಣೆ ಮಾಡಿದ ಮುಖ್ಯ ಅತಿಥಿಗಳಾಗಿದ್ದ ಜಯರಾಮ್ ರಾಯಪುರ ಅವರು ತುಂಬಾ ಆನಂದಪಟ್ಟು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮಕ್ಕಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಮೂಡಲಪಾಯ ಯಕ್ಷಗಾನ ಕಲೆಯ ಪುನರುಜ್ಜೀವನ ಕಾರ್ಯವನ್ನು ಪ್ರೊ.ಜಯಪ್ರಕಾಶಗೌಡರು ಕೈಗೊಂಡ ಆರಂಭದ ದಿನಗಳಿಂದಲೂ ಸರ್ವ ರೀತಿಯಲ್ಲಿಯೂ ಪ್ರೋತ್ಸಾಹ ನೀಡಿ ಬೆಂಬಲಕ್ಕೆ ನಿಂತಿರುವವರು ಜಯರಾಮ್ ರಾಯಪುರ ಅವರು. ಈ ಕಲೆಯನ್ನು ಉಳಿಸಿ ಬೆಳೆಸಬೇಕೆಂಬ ಮಹತ್ತರವಾದ ಉದ್ದೇಶವನ್ನಿರಿಸಿಕೊಂಡು ಸಕ್ರಿಯವಾಗಿದ್ದಾರೆ. ಈ ಕಲೆಯ ಪ್ರಗತಿಗೆ ಸರ್ಕಾರದ ಪ್ರೋತ್ಸಾಹ ಪಡೆಯಲು ಪ್ರತ್ಯೇಕ ಅಕಾಡೆಮಿ ಸೇರಿದಂತೆ ‘ಮೂಡಲಪಾಯ ಯಕ್ಷಗಾನ ಪರಿಷತ್ತು’ ಅನ್ನು ಪ್ರಾರಂಭಿಸಬೇಕೆಂಬ ಗುರಿಯನ್ನು ಹೊಂದಿದ್ದಾರೆ. ಅದಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.

ಈ ದಿಸೆಯಲ್ಲಿ 2022ರ ಫೆಬ್ರವರಿಯಲ್ಲಿ ‘ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ ಕೇಂದ್ರ’ ಇತರ ಸಾಂಸ್ಕøತಿಕ ಸಂಸ್ಥೆಗಳು ಹಾಗೂ ಶ್ರೀ ಮಠದ ಸಹಯೋಗದಲ್ಲಿ ಅಖಿಲ ಕರ್ನಾಟಕ ಪ್ರಪ್ರಥಮ ಮೂಡಲಪಾಯ ಯಕ್ಷಗಾನ ಭಾಗವತ, ಕಲಾವಿದರ ಸಮ್ಮೇಳನವನ್ನು ಫೆಬ್ರವರಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆಸಲು ತೀರ್ಮಾನಿಸಿದೆ. ಇದಕ್ಕೆ ಪೂರ್ವಭಾವಿಯಾಗಿ ತುಮಕೂರು ಜಿಲ್ಲೆಯ ಕಲಾವಿದರನ್ನು ಅವರವರ ಗ್ರಾಮಗಳಲ್ಲಿಯೇ ಹೋಗಿ ಸಂದರ್ಶಿಸುವ ಕಾರ್ಯವನ್ನು ಪ್ರೊ.ಜಯಪ್ರಕಾಶಗೌಡ, ಜಯರಾಮ್ ರಾಯಪುರ ಅವರ ತಂಡ ಕೈಗೊಂಡಿದೆ. ಆ ಭಾಗದ ತಜ್ಞರು, ಭಾಗವತರಾದ, ಡಾ.ಚಿಕ್ಕಣ್ಣ ಯಣ್ಣೆಕಟ್ಟೆ, .ಆರ್.ಪುಟ್ಟಸ್ವಾಮಿ, ಹೆಚ್.ನರಸೇಗೌಡ ಮೊದಲಾದವರ ಸಹಕಾರದೊಂದಿಗೆ ದಿನಾಂಕ 17.12.2021 ರಂದು ತಿಪಟೂರು ತಾಲ್ಲೂಕಿನ ನೊಣವಿನಕೆರೆ, ಅರಳಗುಪ್ಪೆ, ಬಿದರೆಗುಡಿ, ಕೊನೆಹಳ್ಳಿಗಳಲ್ಲಿ ಮತ್ತು ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಅಳಿಲಗಟ್ಟ, ಚೇಳೂರು, ಹಿರಕಸಂದ್ರ, ತೊಣಚನಹಳ್ಳಿಗಳಲ್ಲಿ ಮತ್ತು 18.12.2021ರಂದು ಕೊರಟಗೆರೆ, ಮಧುಗಿರಿ, ಮಿಡಿಗೇಶಿ, ಕನ್ನಮ್ಮೇಡಿ, ಸಿರಾ ತಾಲ್ಲೂಕಿನ ಬರಗೂರು, ಕರಿರಾಯನಹಳ್ಳಿ, ಈಡಿಗರ ದಾಸರಹಳ್ಳಿ, ಕಳ್ಳಂಬೆಳ್ಳ ಮೊದಲಾದ ಊರುಗಳಲ್ಲಿ ಭಾಗವತರ, ಕಲಾವಿದರ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಕೈಗೊಳ್ಳುವ ಮೂಲಕ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿರುವುದು ಮೂಡಲಪಾಯ ಕಲೆಯ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ಆಶಾದಾಯಕವಾಗಿದೆ.

ಹೀಗೆ ಜೀ.ಶಂ.. ಮತ್ತು ಹೆಚ್.ಎಲ್.ನಾಗೇಗೌಡ ಅವರ ನಂತರ ವ್ಯವಸ್ಥಿತ ಸಂಘಟನೆಯಿಲ್ಲದೆ ಹಲವಾರು ಕಡೆ ಚದುರಿ ಹೋಗಿದ್ದ ಮೂಡಲಪಾಯದ ಕಲಾವಿದರನ್ನು, ಭಾಗವತರನ್ನು, ತಜ್ಞರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿರುವ ಪ್ರೊ.ಜಯಪ್ರಕಾಶಗೌಡ ಹಾಗೂ ಜಯರಾಮ್ ರಾಯಪುರ ಜೋಡಿಯೂ ಹಿಂದಿನ ಜೀ.ಶಂ..-ಹೆಚ್.ಎಲ್.ನಾಗೇಗೌಡರÀ ಜೋಡಿಯಂತೆ ದಿಟ್ಟತನದಿಂದ ಈ ಕಲೆಯನ್ನು ಸಂರಕ್ಷಿಸಲು ಮುಂದಡಿಯಿಟ್ಟಿದ್ದಾರೆ. ಇದು ಈ ಕಲೆಯ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಏಕೆಂದರೆ ಮೂಡಲಪಾಯವು ಸತ್ವಸಂಪನ್ನವಾದ ಕಲೆ. ಅದರ ಉಳಿವು ಬೆಳೆವುಗಳು ಕನ್ನಡ ನಾಡಿನ ಸಾಂಸ್ಕøತಿಕ ಅಸ್ಮಿತೆಗೆ ಅತ್ಯವಶ್ಯವೆಂಬುದನ್ನು ಎಲ್ಲರೂ ಮನಗಾಣಬೇಕಾಗಿದೆ.

*ಲೇಖಕರು, ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ (ಸ್ವಾಯತ್ತ) ಕನ್ನಡ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.