ಬಳ್ಳಾರಿ ಜಿಲ್ಲೆಯ ಮಾನವ-ಕರಡಿ ಸಂಘರ್ಷ

-ಡಾ.ಸಮದ್ ಕೊಟ್ಟೂರು

ಮುಸ್ಸಂಜೆ ವೇಳೆ ಕಾಡಿನಿಂದ ಹೊರಬರುವ ಕರಡಿಯ ದಾರಿಯಲ್ಲಿ ಮನುಷ್ಯರು ಅಡ್ಡಬಂದರೆ ಅದಕ್ಕೆ ಎರಡೇ ಮಾರ್ಗಗಳು. ಒಂದೋ ತಪ್ಪಿಸಿಕೊಂಡು ಓಡುವುದು, ಎರಡನೇ ಮಾರ್ಗ ದಾಳಿ!

ದಖನ್ ಪ್ರಸ್ಥಭೂಮಿಯ ಪ್ರಮುಖ ಲಕ್ಷಣವಾದ ಕಲ್ಲು ಬಂಡೆಗಳ ಬೆಟ್ಟಗುಡ್ಡಗಳು ಹಾಗೂ ಕುರುಚಲು ಕಾಡು ವೈವಿಧ್ಯಮಯವಾದ ಜೀವಜಾಲವನ್ನು ವಿಕಸಿಸಿದೆ. ಅದರಲ್ಲೂ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಿಂದ ಬೆಂಗಳೂರಿನ ಬಳಿಯ ರಾಮನಗರದವರೆಗಿನ ಈ ಕಲ್ಲು ಬಂಡೆಗಳ ಪ್ರದೇಶವು ಕರಡಿಗಳಿಗೆ ಅತ್ಯಂತ ಸೂಕ್ತ ಆವಾಸವನ್ನೊದಗಿಸಿದೆ. ಇಡೀ ದಿನ ಕಲ್ಲುಬಂಡೆಗಳ ಗುಹೆಯೊಳಗೆ ನಿದ್ರಿಸಿ, ಸಂಜೆ ವೇಳೆ ಹೊರಬಂದು ರಾತ್ರಿಯಿಡೀ ಆಹಾರವನ್ನು ಅರಸುತ್ತಾ ಹೋಗುತ್ತವೆ. ಮರುದಿನ ಬೆಳಿಗ್ಗೆ ಮರಳಿ ಗುಹೆಗೆ ಬಂದು ವಿಶ್ರಮಿಸುತ್ತವೆ.

2-3 ಅಡಿ ಎತ್ತರ, 4-5 ಅಡಿ ಉದ್ದವಿರುವ ಕರಡಿಯ ಮೈತುಂಬಾ ಉದ್ದನೆಯ ಕೂದಲು, ಚೂಪಾದ ಮೂತಿ, ಕಣ್ಣ ರೆಪ್ಪೆಯ ಹಾಗೆ ಮುಚ್ಚಿಕೊಳ್ಳುವ ಮೂಗಿನ ಹೊರಳೆಗಳು, ಮೇಲಿನ ದವಡೆಯಲ್ಲಿ ಬಾಚಿಹಲ್ಲು ಕುಂಠಿತವಾಗಿ ಅಲ್ಲೊಂದು ಪುಟ್ಟ ಸಂದು ಇದೆ. ಅಗಲವಾದ ಮುಂದಿನ ಪಾದಗಳಲ್ಲಿ 4 ಇಂಚು ಚೂಪಾದ ಉಗುರು, ದೃಷ್ಟಿ ಹಾಗೂ ಶ್ರವಣ ಶಕ್ತಿ ಮಂದವಾಗಿದ್ದರೂ, ಘ್ರಾಣ ಶಕ್ತಿ ಮಾತ್ರ ಬಲು ಚುರುಕು. ಜಗತ್ತ್ತಿನಲ್ಲಿ 8 ಪ್ರಭೇದದ ಕರಡಿಗಳಿವೆ, ಅವುಗಳಲ್ಲಿ ಮಧ್ಯಮ ಗಾತ್ರದ ಭಾರತೀಯ ಕರಡಿ Indian Sloth bear –Melursus ursinus

ಹಿಮಾಲಯದ ಹೊರ ಅಂಚಿನಿಂದ ಹಿಡಿದು ಕನ್ಯಾಕುಮಾರಿಯವರೆಗೆ ವಿವಿಧ ಬಗೆಯ ಆವಾಸಸ್ಥಾನದಲ್ಲಿ ವಾಸಿಸುತ್ತಿವೆ. ಇದರ ಇನ್ನೊಂದು ಉಪ ಪ್ರಭೇದ ಶ್ರೀಲಂಕಾದಲ್ಲಿದೆ.

ಆಹಾರ ಪದ್ಧತಿ

ಇವುಗಳ ಆಹಾರ ಪದ್ಧತಿ ವಿಚಿತ್ರ. ಬೇಟೆಯಾಡಿ ಮಾಂಸಹಾರ ಸೇವಿಸದೇ ಇದ್ದರೂ ಇವು ಇರುವೆ, ಗೆದ್ದಲು, ಸಗಣಿ ಹುಳು, ಜೇನು ಹುಳುಗಳನ್ನು ತಿನ್ನುತ್ತವೆ. ತನ್ನ ಮೊನಚಾದ ಉದ್ದನೆಯ ಉಗುರುಗಳಿಂದ ಗೆದ್ದಲ ಗೂಡನ್ನು ಒಡೆದು ಅದರೊಳಗೆ ಮೂತಿ ತೂರಿಸಿ “ವ್ಯಾಕ್ಯೂಂ ಕ್ಲೀನರ್” ನಂತೆ ಸರ್‍ರ್ರನೆ ಗೆದ್ದಲು ಹುಳುಗಳನ್ನು ಹೀರಿ ತಿನ್ನುತ್ತದೆ. ಅಲ್ಲದೇ ಕುರುಚಲು ಕಾಡಿನ ಕವಳೆ, ಕಾರೆ, ಜಾನೆ, ಉಲುಪಿ, ಬೋರೆ, ನೇರಳೆ, ಇತ್ಯಾದಿ ಹಣ್ಣುಗಳನ್ನೂ, ಕಾಡಿನಂಚಿನಲ್ಲಿರುವ ಹೊಲಗಳಲ್ಲಿ ಬೆಳೆದ ಶೇಂಗಾ, ಮೆಕ್ಕೆಜೋಳ, ಎಳೆಯ ಜೋಳ, ಸಜ್ಜೆ, ಸಪೋಟಾ, ಮಾವು, ಪಪ್ಪಾಯಿ, ದಾಳಿಂಬೆ, ಕಲ್ಲಂಗಡಿ, ಹಲಸು ಇತ್ಯಾದಿ ಹಣ್ಣುಗಳೂ ಇದರ ಆಹಾರದ ಭಾಗ.  ಹೀಗೆ ತಿಂದ ಹಣ್ಣುಗಳ ಬೀಜಗಳು ಜಠರಾಮ್ಲದಲ್ಲಿ ಸಂಸ್ಕರಣೆಯಾಗಿ ಮಲದ ಮೂಲಕ ಕಾಡಿನ ಎಲ್ಲೆಡೆ ಹರಡುತ್ತವೆ. ಹೀಗೆ ನೆಲಕ್ಕೆ ಬಿದ್ದ ಬೀಜಗಳು ಮುಂಗಾರಿನ ಮಳೆಗೆ ಮೊಳಕೆಯೊಡೆದು ಮತ್ತೆ ಕಾಡು ಬೆಳೆಯತ್ತದೆ. ಹೀಗೆ ಕರಡಿಗಳು ಕಾಡನ್ನೂ ಬೆಳೆಸುತ್ತಿವೆ.

ಸಂಘರ್ಷದ ಮೂಲ

ಕಾಡು ಪ್ರಾಣಿಗಳೊಂದಿಗೆ ಬದುಕುವ ಕಲೆ ಮಾನವನಿಗೆ ಕರಗತವಾಗಿದೆ. ಕಾಡನ್ನು ಕಡಿದು ನಾಡನ್ನು ನಿರ್ಮಿಸಿದ್ದಲ್ಲದೇ, ಸಕಲ ಜೀವರಾಶಿಗಳ ಹಕ್ಕಾಗಿದ್ದ ಅರಣ್ಯವನ್ನು ಸವರಿಹಾಕಿ ಕೃಷಿಭೂಮಿ ಮಾಡಿಕೊಂಡ. ಅಲ್ಲಿ ಲಕ್ಷಾಂತರ ವರ್ಷಗಳಿಂದ ಓಡಾಡಿಕೊಂಡಿದ್ದ ಪ್ರಾಣಿಗಳನ್ನು ಹೊಡೆದೋಡಿಸಿ ಬೇಲಿ ಹಾಕಿದ. ಯಾರ ಆಸ್ತಿಯೂ ಆಗಿರದ ಭೂಮಿಯ ಒಂದೊಂದು ಇಂಚನ್ನೂ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ತನ್ನ ಹೆಸರಿಗೆ ನೋಂದಾಯಿಸಿಕೊಂಡ. ನಿಜವಾದ ಹಕ್ಕುದಾರರಾಗಿರುವ ಸಕಲ ಜೀವರಾಶಿಗಳು ನಿರಾಶ್ರಿತರಾದವು. ಆಹಾರವನ್ನರಸುತ್ತಾ ಗುಹೆಯಿಂದ ಹೊರಬಂದ ಕರಡಿಗೆ ಇರುವ, ಗೆದ್ದಲು, ಕವಳೆ, ಕಾರೆ ಹಣ್ಣೂ ಒಂದೇ, ಹೊಲದಲ್ಲಿ ಬೆಳೆದ ಶೇಂಗಾ ಮೆಕ್ಕೆಜೋಳವೂ ಒಂದೇ. ಅದಕ್ಕೇನು ಗೊತ್ತು “ಇದು ರಾಮಣ್ಣನ ಹೊಲ, ಇದು ಭೀಮಣ್ಣನ ಹೊಲ” ಎಂದು. ಎಲ್ಲಿ ಆಹಾರವಿದೆಯೋ ಅಲ್ಲಿಗೆ ಹೋಗಿ ಅದನ್ನು ತಿನ್ನಲು ಯತ್ನಿಸುತ್ತದೆ. ತನ್ನ ಆಹಾರ ಸೇವನೆ ಹಕ್ಕಿಗೆ ಅಡ್ಡ ಬಂದವರನ್ನು ತನ್ನ ವೈರಿಗಳೆಂದೇ ಕರಡಿ ಭಾವಿಸುತ್ತದೆ. ಅಸ್ತಿತ್ವಕ್ಕಾಗಿ ಹೋರಾಟ, ಬಲಶಾಲಿಯ ಉಳಿವು- ವನ್ಯಜೀವಿಗಳ ನಿಯಮ. 

ಎಲ್ಲೋ ದೂರದಲ್ಲಿ ಮಾಗಿದ ಪಪ್ಪಾಯಿ ಹಣ್ಣಿನ ವಾಸನೆ ಮೂಗಿಗೆ ರಾಚುತ್ತಲೇ, ಅತ್ತ ಹೊರಡುವ ಕರಡಿ ಸೀದಾ ಗಿಡವನ್ನೇರಿ ಅದನ್ನು ತಿನ್ನುವವರೆಗೂ ವಿರಮಿಸುವುದಿಲ್ಲ. ಅದೇ ರೀತಿ ಕಾಡಿನಂಚಿಲ್ಲಿ ಬೆಳೆದ ಶೇಂಗಾ ಹೊಲಕ್ಕೆ ನುಗ್ಗಿ ಶೇಂಗಾ ಗಿಡಗಳನ್ನು ಕಿತ್ತು ತಿನ್ನುವವರೆಗೂ ಸಮಾಧಾನವಿಲ್ಲ.

ಆತ್ಮ ರಕ್ಷಣೆಗೆ ಆಕ್ರಮಣ

ಹೀಗೆ ಮುಸ್ಸಂಜೆ ವೇಳೆ ಕಾಡಿನಿಂದ ಹೊರಬರುವ ಕರಡಿಯ ದಾರಿಯಲ್ಲಿ ಮನುಷ್ಯರು ಅಡ್ಡಬಂದರೆ ಅದಕ್ಕೆ ಎರಡೇ ಮಾರ್ಗಗಳು. ಒಂದೋ ತಪ್ಪಿಸಿಕೊಂಡು ಓಡುವುದು, ಎರಡನೇ ಮಾರ್ಗ ದಾಳಿ. ಸಾಮಾನ್ಯವಾಗಿ ಎಲ್ಲಾ ವನ್ಯಜೀವಿಗಳು ಮನುಷ್ಯನನ್ನು ವೈರಿಯೆಂದೇ ಭಾವಿಸುತ್ತವೆ. ಆದ್ದರಿಂದ ಮನುಷ್ಯನನ್ನು ಕಂಡಾಗ ಓಡಿಹೋಗುತ್ತವೆ. ಆದರೆ ಅತೀ ಸಮೀಪದಲ್ಲಿ ಮನುಷ್ಯ ಬಂದಾಗ ತನ್ನನ್ನು ಕೊಲ್ಲಲೆಂದೇ ಬಂದಿದ್ದು ಎಂದು ಅವು ಭಾವಿಸಿ ಆತ್ಮ ರಕ್ಷಣಾ ದಾಳಿ ಮಾಡುತ್ತವೆ. ಕರಡಿಯ ವಿಷಯದಲ್ಲೂ ಇದು ಸರಿ. ಸುರಕ್ಷಿತ ಅಂತರದಲ್ಲಿ ಮನುಷ್ಯ ಕಂಡಲ್ಲಿ ಅವು ಮೆಲ್ಲಗೆ ಅಲ್ಲಿಂದ ಹೋಗುತ್ತವೆ. ಆದರೆ ಅತೀ ಸನಿಹದಲ್ಲಿ ಮನುಷ್ಯ ಕಂಡಲ್ಲಿ ಅವು ಆತ್ಮರಕ್ಷಣೆಗಾಗಿ ದಾಳಿ ಮಾಡಿ ಓಡುತ್ತವೆ. ಆದರೆ ಮನುಷ್ಯನ ಮೇಲೆ ಹೀಗೆ ಆಗುವ ದಾಳಿ ಪ್ರತಿಯೊಂದು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ.

ಸಂಘರ್ಷ ತಡೆಗಟ್ಟಿದ ಯಶೋಗಾಥೆ

1994ಕ್ಕಿಂತ ಮೊದಲು ಬಳ್ಳಾರಿ ಜಿಲ್ಲೆಯ ಹಂಪಿ-ದರೋಜಿ ಪ್ರದೇಶದಲ್ಲಿ ಮಾನವ ಕರಡಿ ಸಂಘರ್ಷ ವಿಪರೀತವಾಗಿತ್ತು. ಕಾಡಿನೊಳಗೆ ಕುರಿಗಾಹಿಗಳ ಖಾಯಂ ವಸತಿ, ಕಲ್ಲು-ಮರಳು ಸಾಗಿಸುವವರು, ಕಲ್ಲು ಒಡೆಯುವವರು, ಕಟ್ಟಿಗೆ ಕಡಿಯುವವರು, ಹಣ್ಣು ಹಂಪಲು ಸಂಗ್ರಹಿಸುವವರು, ಕುರಿ-ದನ ಮೇಯಿಸುವರು, ಕೌಜುಗ, ಮೊಲ, ಉಡ ಬೇಟೆಯಾಡುವವರ ಗದ್ದಲದಿಂದಲೇ ಇಡೀ ಕಾಡಿನಲ್ಲಿ ವನ್ಯಜೀವಿಗಳಿಗೆ ಶಾಂತಿಯೇ ಇರಲಿಲ್ಲ. ಸುಖವಾಗಿ ನಿದ್ರೆಮಾಡಲೂ ಬಿಡದಂತೆ ಇಡೀ ಕಾಡಿನ ತುಂಬ ಜನರ ಚಟುವಟಿಕೆಗಳಿರುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲಿ ಕರಡಿಗಳು ಸದಾ ವ್ಯಗ್ರವಾಗಿರುತ್ತವೆ.

ಮಾನವನ ಮೇಲೆ ಕರಡಿ ದಾಳಿ, ಅಂಗ ಊನ, ಪ್ರಾಣ ಹಾನಿ ಒಂದೆಡೆಯಾದರೆ, ದಾಳಿಗೆ ಪ್ರತೀಕಾರವಾಗಿ ಕರಡಿಗಳನ್ನು ಹೊಡೆದು ಸಾಯಿಸುವುದು ಇನ್ನೊಂದೆಡೆ. ಇದನ್ನು ತಪ್ಪಿಸಲು 1994ರಲ್ಲಿ ಬಿಳಿಕಲ್ಲು ಕಾದಿಟ್ಟ ಅರಣ್ಯದಲ್ಲಿ ಕರ್ನಾಟಕದ ಮೊದಲ ಕರಡಿಧಾಮ ಸ್ಥಾಪನೆಯಾಯಿತು. ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕಾಡಿನಲ್ಲಿ ಮಾನವನ ಚಟುವಟಿಕೆ ಸಂಪೂರ್ಣವಾಗಿ ನಿಂತು ಹೋಯಿತು. ಹಗಲೆಲ್ಲಾ ಸುಖವಾಗಿ ನಿದ್ರಿಸುವ ಕರಡಿಗಳು ರಾತ್ರಿಯಿಡೀ ಕಾಡಲ್ಲಿ ಓಡಾಡಿ ಆಹಾರ ಸೇವಿಸಿ ಪುನಃ ಗುಹೆ ಸೇರತೊಡಗಿದವು. ಹೀಗೆ ದರೋಜಿ ಕರಡಿಧಾಮ ರಚನೆಯಾದ ನಂತರ ಅದರ ಸುತ್ತಮುತ್ತ ಮಾನವನ ಮೇಲೆ ಕರಡಿ ದಾಳಿ ಸಂಪೂರ್ಣವಾಗಿ ನಿಂತುಹೋಗಿದೆ.

ಕರಡಿ ದಾಳಿಯಿಂದ ರಕ್ಷಿಸಿಕೊಳ್ಳುವುದು ಹೇಗೆ?

ಕರಡಿಗಳು ನಿಶಾಚರಿಗಳು, ಬೆಳಿಗಿನ ಜಾವ, ಮುಸ್ಸಂಜೆ ಹಾಗೂ ರಾತ್ರಿವೇಳೆ ಚುರುಕಾಗಿರುತ್ತವೆ. ಈ ಸಂದರ್ಭದಲ್ಲಿ ಕಾಡಿನ ಅಂಚಿನಲ್ಲಿ ಓಡಾಡುವಾಗ ಗದ್ದಲ ಮಾಡಿಕೊಂಡು ಹೋಗಬೇಕು. ಮೊಬೈಲಿನಲ್ಲಿ ರ‍್ಯಾಪ್ ಸಂಗೀತ ಹಚ್ಚಿಕೊಂಡು ಹೋದರೂ ಸರಿ ಅಥವಾ ಒಂದು ಖಾಲಿ ಕಬ್ಬಿಣದ ಡಬ್ಬಿಯಲ್ಲಿ ಕಲ್ಲು ಹಾಕಿಕೊಂಡು ಅಲುಗಾಡಿಸುತ್ತಾ ಅಥವಾ ಒಂದು ಬಡಿಗೆಯಿಂದ ನೆಲಕ್ಕೆ ಬಡಿಯುತ್ತಾ ಹೋದರೂ ಸರಿ. ಕತ್ತಲಲ್ಲಿ ಹೊರಗೆ ಹೋಗುವಾಗ ಟಾರ್ಚ್ ಇರಲೇ ಬೇಕು. ಹೀಗೆ ಮಾನವನ ಸುಳಿವು ಸಿಕ್ಕ ಕೂಡಲೇ ಕರಡಿಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ.

ಒಂದೊಮ್ಮೆ ಕರಡಿ ಮೈಮೇಲೆ ಬಿದ್ದೇ ಬಿಟ್ಟಿತು ಎಂಬ ಸಂದರ್ಭ ಬಂದಾಗ ಕೂಡಲೇ ಎರಡೂ ಕೈಗಳಿಂದ ತಲೆ ಮುಖ ಮುಚ್ಚಿಕೊಂಡು ನೆಲಕ್ಕೆ ಅಲುಗಾಡದ ಹಾಗೆ ಬಿದ್ದುಕೊಳ್ಳಬೇಕು. ಏಕೆಂದರೆ ಕರಡಿ ತಲೆಯನ್ನು ಹಾಗೂ ಮುಖವನ್ನು ಕಚ್ಚಿ ತುಂಡರಿಸುತ್ತದೆ. ಕಣ್ಣುಗುಡ್ಡೆಯನ್ನೇ ಕಿತ್ತು ಹಾಕುತ್ತದೆ. ಇಂತಹ ಸಂದರ್ಭದಲ್ಲಿ ಟವೆಲ್ಲಿನಿಂದಲೋ, ಲುಂಗಿಯಿಂದಲೇ ತಲೆ ಮುಖ ಮುಚ್ಚಿಕೊಂಡು ನೆಲಕ್ಕೆ ಬಿದ್ದರೆ ಇನ್ನೂ ಉತ್ತಮ. ಇವೆರಡೂ ಇಲ್ಲವೆಂದಲ್ಲಿ ಉಟ್ಟ ಅಂಗಿಯನ್ನೋ ಬನಿಯನ್ನೋ ಮೇಲಕ್ಕೆಳೆದು ತಲೆ ಮುಖ ಮುಚ್ಚಿಕೊಳ್ಳುವುದು ಸೂಕ್ತ. ಹೀಗೆ ನಿಶ್ಚಲವಾಗಿ ಬಿದ್ದ ಮುಖ ಕಾಣದ ಮನುಷ್ಯನನ್ನು ಕರಡಿ ಏನೂ ಮಾಡುವುದಿಲ್ಲ. ಸ್ವಲ್ಪ ಹೊತ್ತು ಕಾದು ನಂತರ ತನ್ನ ಪಾಡಿಗೆ ತಾನು ಹೋಗುತ್ತದೆ. ಈ ಉಪಾಯ ಮಾಡಿದ ಎಷ್ಟೋ ಜನರನ್ನು ನಾನು ಭೇಟಿಯಾಗಿದ್ದೇನೆ.

 

ಅದೇ ರೀತಿ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕರಡಿ ದಾಳಿಗೆ ಕುಖ್ಯಾತಿ ಹೊಂದಿತ್ತು. ಇಲ್ಲಿರುವ ಕಾಡಿನಲ್ಲಿ ಸೀತಾಫಲ ಗಿಡಗಳು ಯಥೇಚ್ಛವಾಗಿ ಬೆಳೆದಿವೆ. ಅರಣ್ಯ ಇಲಾಖೆಯು ಪ್ರತಿವರ್ಷ ಅರಣ್ಯ ಉತ್ಪನ್ನಗಳನ್ನು ಹರಾಜು ಹಾಕುತ್ತಿತ್ತು. ಹೀಗೆ ಹರಾಜು ಪಡೆದುಕೊಂಡವರು ಗುಡೇಕೋಟೆ ಕಾಡಿನಿಂದ 20ಕ್ಕೂ ಹೆಚ್ಚು ಲಾರಿ ಲೋಡ್‍ಗಳಷ್ಟು ಸೀತಾಫಲ ಹಣ್ಣನ್ನು ಸಂಗ್ರಹಿಸಿ ದೂರದ ನಗರಗಳಿಗೆ ಮಾರುತ್ತಿದ್ದರು. ಗುಡೇಕೋಟೆ ಸೀತಾಫಲ ಹಣ್ಣು ಎಂದರೆ ಅಷ್ಟೊಂದು ಹೆಸರುವಾಸಿಯಾಗಿತ್ತು.

ಜೊತೆಗೆ ಇಲ್ಲಿನ ಕಲ್ಲು ಬಂಡೆಗಳ ಮೇಲೆ ಇದ್ದ ಅಪಾರ ಪ್ರಮಾಣದ ಜೇನನ್ನೂ ಸಂಗ್ರಹಿಸುತ್ತಿದ್ದರು. ವಿಚಿತ್ರ ಎಂದರೆ, ಕರಡಿಯ ಪ್ರಧಾನ ಆಹಾರ ಸೀತಾಫಲ ಹಾಗೂ ಜೇನನ್ನು ಮನುಷ್ಯರು “ಕದ್ದೊಯ್ದರೆ” ಅದೇನು ತಿನ್ನಬೇಕು? ಬೇರೆ ಏನಿದೆ, ಜನರು ಬೆಳೆದ ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಇದೆಯಲ್ಲ. ಜೊತೆಗೆ ಈ ಕಾಡಿನಲ್ಲಿ ಅಪಾರ ಪ್ರಮಾಣದಲ್ಲಿ ಕಲ್ಲು ಒಡೆಯುವವರು, ಮರಳು ಸಾಗಿಸುವವರು, ದನ ಮೇಯಿಸುವವರೇ ತುಂಬಿರುತ್ತಿದ್ದರು. ಕಾಡಿನ ಬೆಂಕಿ ಎಳೆ ಗಿಡಗಳನ್ನೆಲ್ಲಾ ಬೂದಿಮಾಡುತ್ತಿದ್ದು. ಒತ್ತುವರಿ ಕಾಟ ಬೇರೆ.

ಇಂತಹ ಎಲ್ಲಾ ಕಾಡಿನ ವೈರಿಗಳನ್ನು ಪಟ್ಟಿಮಾಡಿದ ಲೇಖಕ ಸರ್ಕಾರಕ್ಕೆ ವರದಿ ಸಲ್ಲಿಸಿ ಈ ಪ್ರದೇಶವನ್ನು ವನ್ಯಧಾಮ ಎಂದು ಘೋಷಿಸಲು ಮಾಡಿದ ಮನವಿಗೆ ಸ್ಪಂಧಿಸಿದ ಅರಣ್ಯ ಇಲಾಖೆ 2013ರಲ್ಲಿ ಗುಡೇಕೋಟೆ ಕರಡಿಧಾಮವನ್ನು ರಚಿಸಿತು. ಆ ವರ್ಷದಲ್ಲೇ ಅರಣ್ಯ ಕಿರು ಉತ್ಪನ್ನ ಹರಾಜು ನಿಲ್ಲಿಸಲಾಯಿತು. ಎಲ್ಲಾ ಸೀತಾಫಲ, ಜೇನು ಕರಡಿಗಳಿಗೆ ಮಾತ್ರ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಿನೊಳಗೆ ನಡೆಯುತ್ತಿದ್ದ ಎಲ್ಲಾ ಅಕ್ರಮಗಳನ್ನು ತಡೆಗಟ್ಟಿ ಅದನ್ನು ಒಂದು ಸುರಕ್ಷಿತ, ಪ್ರಶಾಂತ ಪ್ರದೇಶವನ್ನಾಗಿಸಿದರು. ಕೆಲವೇ ವರ್ಷಗಳಲ್ಲಿ ಗುಡೇಕೋಟೆ ಸುತ್ತಮುತ್ತ ಮಾನವನ ಮೇಲೆ ಕರಡಿಯ ದಾಳಿ ಸಂಪೂರ್ಣವಾಗಿ ನಿಂತು ಹೋಯಿತು. ಇದಕ್ಕೆ ಕಾರಣ, ಕರಡಿಗಳ ಆವಾಸಸ್ಥಾನವನ್ನು ಸುರಕ್ಷಿತವಾಗಿ ಅವರಿಗೇ ಬಿಟ್ಟುಕೊಟ್ಟಿದ್ದು.

ಮಾನವ ಕರಡಿ ಸಂಘರ್ಷ

ಎಲ್ಲಿ ಅಭಯಾರಣ್ಯಗಳನ್ನು ನಿರ್ಮಿಸಲಾಗಿದೆಯೋ ಅಲ್ಲಿ ಮಾನವ-ಕರಡಿ ಸಂಘರ್ಷ ನಿಯಂತ್ರಣಕ್ಕೆ ಬಂದಿದೆ. ಮಾನವನ ಮೇಲೆ ದಾಳಿ ಕಡಿಮೆಯಾದರೂ ಬೆಳೆಗಳ ಮೇಲಿನ ದಾಳಿ ಹೆಚ್ಚಾಗಿದೆ. ಬೆಳೆನಾಶಕ್ಕೆ ಸೂಕ್ತ ಪರಿಹಾರವನ್ನು ಅರಣ್ಯ ಇಲಾಖೆ ನೀಡುತ್ತಿದೆ.

ಆದರೆ ಇಲ್ಲಿ ಗಂಭೀರವಾಗಿ ಪರಿಗಣಿಸಬೇಕಾದ ಅಂಶವೆಂದರೆ, ಅಭಯಾರಣ್ಯ ಹಾಗೂ ಸಂರಕ್ಷಿತ ಪ್ರದೇಶದ ಹೊರಗೆ ಕರಡಿಗಳ ದಾಳಿ ಹೆಚ್ಚಾಗುತ್ತಿರುವುದು. ಉದಾಹರಣೆಗೆ ಕೂಡ್ಲಿಗಿ ತಾಲೂಕಿನ ಜರಿಮಲೆ, ಸಿಡೆಗಲ್ಲು ಅರಣ್ಯಗಳ ಕರಡಿಗಳು 5-7 ಕಿಮೀ ದೂರದ ಸಿದ್ದಾಪುರ, ಚಿಕ್ಕಜೋಗಿಹಳ್ಳಿ ಸುತ್ತಮುತ್ತ ಬೆಳೆ ಪಪ್ಪಾಯಿ, ಸಪೋಟಾ, ದಾಳಿಂಬೆ ತೋಟಗಳಿಗೆ ಹೋಗಿ ಅಲ್ಲಿ ಈ ಹಣ್ಣುಗಳನ್ನು ಸೇವಿಸುತ್ತವೆ. ಒಂದೆಡೆ ವಿಪರೀತ ಹಾಳಾಗಿರುವ ಕಾಡು, ಇರುವ ಕುರುಚಲು ಕಾಡು ಕೊಡಲಿಗೆ ಬಲಿ, ನೀರಿನ ಸೆಲೆಗಳು ನಾಶವಾಗಿವೆ.

ಅಂಗನವಾಡಿಗೆ ಕನ್ನ ಹಾಕಿದ ಕರಡಿ

ಕರಡಿಗಳಿಗೆ ಬೆಲ್ಲ ಎಂದರೆ ಬಲು ಇಷ್ಟ. ದರೋಜಿ ಪಕ್ಕದ ದೇವಲಾಪುರ ಗ್ರಾಮದ ಹೊರವಲಯದಲ್ಲೊಂದು ಅಂಗನವಾಡಿ ಇದೆ, ಶಿಥಿಲವಾದ ಗೋಡೆಗಳ ಈ ಕಟ್ಟಡದಲ್ಲಿ ಮಕ್ಕಳಿಗೆ ವಿತರಿಸಲೆಂದು ಬೆಲ್ಲ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಶೇಖರಿಸಿ ಇಟ್ಟಿರುತ್ತಾರೆ. ಪಕ್ಕದಲ್ಲೇ ಇರುವ ಕರಡಿಧಾಮದ ಅಂಚಿನ ಬೆಟ್ಟದಲ್ಲಿರುವ ಕರಡಿಯೊಂದು ಈ ಬೆಲ್ಲದ ವಾಸನೆಯನ್ನು ಗ್ರಹಿಸಿ ಮಧ್ಯರಾತ್ರಿ ಬಂದು ಶಿಥಿಲವಾದ ಗೋಡೆಗೇ ಕನ್ನವನ್ನು ಕೊರೆದು ಒಳನುಗ್ಗಿ ಸಂಗ್ರಹಿಸಿಟ್ಟಿದ್ದ ಬೆಲ್ಲದ ದಾಸ್ತಾನನ್ನೆಲ್ಲಾ ತಿಂದು ಹೋಗಿತ್ತು.

ಎರಡು ದಶಕಗಳ ಹಿಂದೆ ಚಿಕ್ಕಜೋಗಿಹಳ್ಳಿ ಸುತ್ತಮುತ್ತ ಆರಂಭಿಸಿದ ತೋಟಗಾರಿಕೆ ಬೆಳೆಗಳು ದೂರದ ಕಾಡಿನ ಕರಡಿಗಳನ್ನು ಚುಂಬಕದಂತೆ ಆಕರ್ಷಿಸಿವೆ. ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ಬೆಳೆಯ ಜೊತೆಗೆ ಹಣ್ಣು ಹಂಪಲುಗಳು ಹಾಗೂ ಬೇಸಿಗೆಯಲ್ಲೂ ನೀರಿನ ಲಭ್ಯತೆಯ ಕಾರಣ ಕಾಡಿನಿಂದ ಹೊರಟ ಕರಡಿಗಳು ಈ ಭಾಗದೆಲ್ಲೆಡೆ ಹಂಚಿಹೋಗಿವೆ. ಹಗಲು ವೇಳೆಯಲ್ಲಿ ಇಲ್ಲಿರುವ ಪೊದೆಗಳಲ್ಲಿ, ಜೋಳದ ಹೊಲದಲ್ಲಿ ಕರಡಿಗಳು ವಿಶ್ರಮಿಸುತ್ತವೆ. ಅಕಸ್ಮಾತ್ತಾಗಿ ರೈತರು ನೀರು ಕಟ್ಟಲೋ, ಕಳೆ ಕೀಳಲೋ ಇವುಗಳ ಜಾಗಕ್ಕೆ ಬಂದಾಗ ಮಾರಣಾಂತಿಕ ದಾಳಿಯಾಗುತ್ತದೆ. ಕೆಲವೊಮ್ಮೆ ಕರಡಿಯನ್ನು ಕಂಡ ರೈತರು ಅದನ್ನು ಹೊಡೆಯಲು ಓಡಿಸಿಕೊಂಡು ಹೋಗುವಾಗ ಅನೇಕ ಜನರ ಮೇಲೆ ಕರಡಿದಾಳಿಯಾಗಿದೆ.

ಉದಾಹರಣೆಗೆ, 2017ರ ಜುಲೈ ತಿಂಗಳಲ್ಲಿ ಬೆಳಗಿನ ಜಾವ ಸಿದ್ದಾಪುರ ಗ್ರಾಮದ ಹೊರವಲಯದಲ್ಲಿ ಕರಡಿಯೊಂದು ಕಂಡು ಬರುತ್ತದೆ. ಅದನ್ನು ನೋಡಿದ ರೈತರು ಜೋರಾಗಿ ಗದ್ದಲವೆಬ್ಬಿಸಿ ಅದನ್ನು ಅಟ್ಟಿಸಿಕೊಂಡು ಹೊಗುತ್ತಾರೆ. ಅಲ್ಲೇ ಹೊಲಕ್ಕೆ ಹೋಗುತ್ತಿದ್ದವನನ್ನು ಪರಚಿದ ಕರಡಿ ಮುಂದಕ್ಕೆ ಹೋಗುತ್ತದೆ.

ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ಮನೆ ಮುಂದೆ ಮುಸುರೆ ತೊಳೆಯುತ್ತಿದ್ದ ಮಹಿಳೆಯನ್ನು ಕಚ್ಚುತ್ತದೆ. ಹಾಗೇ ಮುಂದಕ್ಕೆ ಓಡಿದ ಕರಡಿ ಹೊಲಕ್ಕೆ ಹೋಗುತ್ತಿದ್ದ 60 ವರ್ಷದ ಕಸ್ತೂರಿ ನಾಯ್ಕನನ್ನು ಕೆಡವಿ ಹಾಕಿ, ಅವನ ಮುಖ ಹಾಗೂ ತಲೆಯನ್ನು ಕಚ್ಚಿ ಹರಿದು ಹಾಕಿ ಸಾಯಿಸುತ್ತದೆ. ಹೀಗೆ ಜನರಿಂದ ಅಟ್ಟಿಸಿಕೊಂಡು ಓಡುತ್ತಾ 5 ಕಿಮೀ ದೂರದ ಕಾಡನ್ನು ಸೇರುವುದರೊಳಗೆ ಆ ಕರಡಿ 13 ಜನರನ್ನು ಕಚ್ಚಿ ಗಾಯಗೊಳಿಸಿದಲ್ಲದೇ ಒಬ್ಬ ವ್ಯಕ್ತಿಯ ಪ್ರಾಣವನ್ನೇ ತೆಗೆದುಹಾಕಿತ್ತು.

ಕೂಡ್ಲಿಗಿ ತಾಲೂಕಿನ ಕಡೆಕೊಳ್ಳದಿಂದ ಸಿದ್ದಾಪುರದವರೆಗೆ ಇರುವ ಹತ್ತಾರು ಹಳ್ಳಿಗಳ ನೂರಾರು ಜನರು ಕರಡಿದಾಳಿಗೆ ನಲುಗಿ ಹೋಗಿ, ಇಂದಿಗೂ ಜೀವ ಕೈಲಿ ಹಿಡಿದುಕೊಂಡೇ ಕೃಷಿಕಾರ್ಯದಲ್ಲಿ ತೊಡಗಿದ್ದಾರೆ.

ಸಂಘರ್ಷಕ್ಕೆ ಕಾರಣಗಳು

 • ಹಾಳಾದ ಆವಾಸ ಸ್ಥಾನ: ಅರಣ್ಯವಷ್ಟೇ ಅಲ್ಲ ಕಲ್ಲು ಬಂಡೆಗಳ ಪರಂಪೋಕು, ಗೋಮಾಳಗಳು ಕಲ್ಲು ಗಣಿಗಾರಿಕೆ, ಅಭಿವೃದ್ಧಿಗಾಗಿ ಹಾಳಾಗುತ್ತಿವೆ. 
 • ಅರಣ್ಯದ ನಾಶ: ಕಾಡಿನ ಬೆಂಕಿ, ಅತಿಯಾದ ಮೇಯಿಸುವಿಕೆ, ಒತ್ತುವರಿ, ಕಲ್ಲು-ಮರಳು ಗಣಿಗಾರಿಕೆ, ಇತ್ಯಾದಿ.
 • ಬದಲಾದ ಕೃಷಿ ಪದ್ಧತಿ: ಪರಂಪರಾಗತ ಬೆಳೆಗಳ ಬದಲಾಗಿ, ಆರ್ಥಿಕ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ದಾಳಿಂಬೆ, ಮುಂತಾದ ಹಣ್ಣಿನ ಬೆಳೆ.
 • ಕಳ್ಳ ಭಟ್ಟಿ ಅಡ್ಡೆಗಳು: ಕಳ್ಳಭಟ್ಟಿಯನ್ನು ಮಾಡಲು ಕಳಿತ ಬೆಲ್ಲವನ್ನು ಬಳಸಿ, ಮಡಕೆಯನ್ನು ತಿಪ್ಪೆಗುಂಡಿಯಲ್ಲಿ ಹೂತು ಹಾಕುತ್ತಾರೆ. ಇಂತಹ ವಾಸನೆ ಹಿಡಿಯುವ ಕರಡಿಗಳು ಮಡಕೆಯನ್ನು ಬಗೆದು ಅರೆಬರೆ ಸಿದ್ಧವಾದ ಶೆರೆಯನ್ನು ಕುಡಿದು ನಿಶೆ ಏರಿ ದಾಳಿ ಮಾಡುವ ಸಾಧ್ಯತೆ ಇದೆ.
 • ಶೇಂದಿ: ತೆಂಗಿನ ಮರ ಅಥವಾ ಈಚಲ ಮರಗಳ ಮೇಲೆ ಹೆಂಡವನ್ನು ಇಳಿಸಲು ಕಟ್ಟಿದ ಸಂದರ್ಭದಲ್ಲಿ ಅದರ ವಾಸನೆ ಗ್ರಹಿಸುವ ಕರಡಿಗಳು ಮರವೇರೆ ಹೆಂಡ ಕುಡಿದು ಮತ್ತೇರಿ ದಾಳಿ ಮಾಡಬಹುದು.
 • ಹುಚ್ಚುನಾಯಿ ರೋಗ: ಹುಚ್ಚು ನಾಯಿ ರೋಗ ಪೀಡಿತ ಕರಡಿಗಳು ವಿನಾಕಾರಣ ಜನರ ಮೇಲೆ ದಾಳಿ ಮಾಡಿ ಮನುಷ್ಯ ಸಾಯುವವರೆಗೂ ಬಿಡುವುದಿಲ್ಲ. ಸತ್ತ ನಂತರ ಶವದ ಮೇಲೇರಿ ಕುಳಿತುಕೊಳ್ಳುತ್ತದೆ. ಜನರ ಗುಂಪು ಸೇರಿ ಹೆಚ್ಚು ಗದ್ದಲ ಮಾಡಿದಷ್ಟೂ ತಾನು ಹಿಡಿದ ಮನುಷ್ಯನನ್ನು ಭೀಕರವಾಗಿ ಕಚ್ಚುತ್ತಲೇ ಇರುತ್ತದೆ. (ಕೆಲವು ವರ್ಷಗಳ ಹಿಂದೆ ಶಿರಾದಲ್ಲಿ ಇಬ್ಬರನ್ನು ಸಾಯಿಸಿದ ಕರಡಿಗೆ ಗುಂಡಿಕ್ಕಿ ಕೊಂದ ನಂತರ ಪರೀಕ್ಷಿಸಲಾಗಿ ಅದಕ್ಕೆ ಹುಚ್ಚುನಾಯಿ ರೋಗವಿತ್ತು).
 • ಮರಿಗಳೊಂದಿಗೆ ಇರುವ ಹೆಣ್ಣು ಕರಡಿ ಸದಾ ವ್ಯಗ್ರವಾಗಿರುತ್ತದೆ. ಎಲ್ಲಿ ತನ್ನ ಮರಿಗಳನ್ನು ಸಾಯಿಸುತ್ತಾರೋ ಎಂಬ ಭಯದಿಂದ ಗಂಡು ಕರಡಿಗಳನ್ನು 3 ವರ್ಷ ಹತ್ತಿರ ಬಿಡುವುದಿಲ್ಲ. ಅದೇ ರೀತಿ ಇಂತಹ ಕರಡಿಗೆ ಮನುಷ್ಯರು ಹತ್ತಿರದಲ್ಲಿ ಕಂಡು ಬಂದರೆ, ವಿನಾಕಾರಣವಾಗಿ ಅವರ ಮೇಲೆ ದಾಳಿ ಮಾಡಿ, ಮಾರಣಾಂತಿಕವಾಗಿ ಗಾಯಗೊಳಿಸುತ್ತದೆ.
 • ತಾನು ಕೊಂದ ಮನುಷ್ಯನನ್ನು ತನ್ನ ಮುಂಗೈಯಿಂದ ಅಪ್ಪಿಕೊಂಡು ಎರಡು ಕಾಲುಗಳ ಮೇಲೆ ನಡೆಯುವುದನ್ನು ನೋಡಿದ ಜನರು ಅದು ಸಂಭೋಗಿಸುತ್ತದೆ ಎಂಬ ತಪ್ಪು ಕಲ್ಪನೆ ಬೆಳೆಸಿಕೊಂಡಿದ್ದಾರೆ. ಆದರೆ ಕರಡಿ ತನ್ನ ಬಲಿಪಶುವನ್ನು ಬಿಗಿದಪ್ಪಿ ಉಸಿರುಗಟ್ಟಿಸಿ ಕೊಲ್ಲುತ್ತದೆ. ಇದನ್ನು ಬೇಅರ್ ಹಗ್ ಎನ್ನುತ್ತಾರೆ. ಧೃತರಾಷ್ಟ್ರನು ಭೀಮನನ್ನು ಅಪ್ಪಿಕೊಂಡು ಕೊಲ್ಲಲು ಬಯಸಿದ್ದನ್ನು “ಕರಡಿಯ ಆಲಿಂಗನ” ಎಂದೇ ಹೆಸರಾಗಿದೆ.

ಪರಿಹಾರೋಪಾಯಗಳು

 • ಹಾಳಾದ ಅರಣ್ಯ ಹಾಗೂ ಕರಡಿಗಳ ಆವಾಸಸ್ಥಾನದ ಮರುಸ್ಥಾಪನೆ.
 • ಕಾಡಿನ ವೈರಿಗಳಾದ ಕಲ್ಲು-ಮರಳು ಗಣಿಗಾರಿಕೆ, ಒತ್ತುವರಿ, ಕಾಡಿನ ಬೆಂಕಿ, ಅತಿಯಾದ ಮೇಯಿಸುವಿಕೆ, ಉರುವಲಿಗಾಗಿ ಅರಣ್ಯ ನಾಶ ಇತ್ಯಾದಿ ತಡೆಗಟ್ಟುವುದು.
 • ಅರಣ್ಯದ ನೈಸರ್ಗಿಕ ಪುನರುತ್ಪತ್ತಿ ಮಾಡುವುದು.
 • ಗ್ರಾಮದೊಳಗೆ ಹಾಗೂ ಸುತ್ತಮುತ್ತ ಬೆಳೆದ ಪೊದೆಗಳನ್ನು ತೆರವುಗೊಳಿಸಿ ಬಯಲು ಮಾಡುವುದು.
 • ರೈತರ ಜಮೀನಿಗೆ ಸೌರ ಬೇಲಿ ಸಂಪರ್ಕ ನೀಡುವುದು.
 • ವನ್ಯಜೀವಿ ಸಂಘರ್ಷದ ಬಗ್ಗೆ ಜನರಿಗೆ ಅರಿವು ಮೂಡಿಸುವುದು.
 • ಮಾನವ ಕರಡಿ ಸಂಘರ್ಷ ಹೆಚ್ಚು ಇರುವ ಸ್ಥಳದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ರಚಿಸುವುದು.

 

 

Leave a Reply

Your email address will not be published.