ಬವಣೆಯ ಬದುಕನ್ನು ಬರವಣಿಗೆಯಾಗಿಸಿದ ಅಬ್ದುಲ್ ರಜಾಕ್ ಗುರ್ನಾ

ನೊಬೆಲ್ ಪುರಸ್ಕಾರದ 120 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಸಾಹಿತ್ಯ ಕ್ಷೇತ್ರದ ಗರಿಯನ್ನು ಮುಡಿಗೇರಿಸಿಕೊಂಡ ಕೇವಲ ನಾಲ್ಕನೇ ಕಪ್ಪುವರ್ಣೀಯರಾಗಿ ಅಬ್ದುಲ್ ರಜಾಕ್ ಗುರ್ನಾ ಹೊರಹೊಮ್ಮಿದ್ದಾರೆ.

ನಿವೇದಿತಾ ಬಿ.ತುಮಕೂರು

ಸಾಹಿತ್ಯ, ಶಾಂತಿ ಮತ್ತು ಆರ್ಥಿಕ ಕ್ಷೇತ್ರದ ನೊಬೆಲ್ ಪುರಸ್ಕಾರವು ತೀವ್ರವಾಗಿ ರಾಜಕೀಯ ಪ್ರೇರಿತವಾದುದು ಮತ್ತು ಐರೋಪ್ಯಕೇಂದ್ರಿತವಾದುದು ಎಂಬ ವಿವಾದಗಳ ಹೊರತಾಗಿಯೂ ತಮ್ಮ ಹೆಜ್ಜೆಗುರುತನ್ನು ಸ್ಥಾಪಿಸಲು ಯಶಸ್ವಿಯಾಗಿದ್ದಾರೆ ಅಬ್ದುಲ್ ರಜಾಕ್ ಗುರ್ನಾ. ಅವರು ‘ವಸಾಹತುಶಾಹಿಯ ಪರಿಣಾಮಗಳು ಹಾಗೂ ವಿವಿಧ ಸಂಸ್ಕøತಿ ಮತ್ತು ಖಂಡಗಳ ನಡುವೆ ಸಿಲುಕಿರುವ ನಿರಾಶ್ರಿತರ ಬವಣೆಗಳನ್ನು ಯಥಾವತ್ತಾಗಿ ಮತ್ತು ಸಹಾನುಭೂತಿಪೂರ್ವವಾಗಿ ನಿರೂಪಿಸಿದ ಕಾರಣಕ್ಕಾಗಿ’ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಆಯ್ಕೆ ಸಮಿತಿ ಹೇಳಿದೆ.

ಬರಹಗಾರನಾಗುವುದು ಎಂದರೇನು? ಬರಹಗಾರನೊಬ್ಬ ಹೇಗೆ ರೂಪುಗೊಳ್ಳುತ್ತಾನೆ? ಎಂಬ ಪ್ರಶ್ನೆಗಳನಿಟ್ಟುಕೊಂಡು ಗುರ್ನಾರ ಜೀವನವನ್ನು ಓದಿದರೆ ಸಿಗುವ ಉತ್ತರವು ಬರವಣಿಗೆ ಲೋಕದ ಒಂದು ವಿಶಿಷ್ಟ ಮುಖಕ್ಕೆ ಕನ್ನಡಿ ಹಿಡಿಯುತ್ತದೆ. ಬೆಳೆಯುವ ಹಂತದಲ್ಲಿ ಯಾರೂ ತಾನು ಬರಹಗಾರನಾಗಬಹುದು ಎಂದು ಎಣಿಸಿರುವುದಿಲ್ಲ. ಇಂಜಿನಿಯರ್ ನಂತಹ ಉಪಯುಕ್ತ ವೃತ್ತಿಪರನಾಗಬಹುದೆಂದು ತಿಳಿದಿದ್ದೆ ಎಂದು ಗುರ್ನಾ ಅವರೇ ಹೇಳಿಕೊಳ್ಳುವುದರಲ್ಲಿ ಬರವಣಿಗೆಯನ್ನು ವೃತ್ತಿಪರವಾಗಿ ನೋಡುವುದು ಯಾವಾಗಲೂ ಯೋಜಿತವಾಗಿರುವುದಿಲ್ಲ ಎಂಬುದು ಸಾಬೀತಾಗುತ್ತದೆ. 1960ರ ದಶಕದಲ್ಲಿ ತಾಂಜೇನಿಯಾದ ಜಂಜೀಬಾರ್ ಕ್ರಾಂತಿಯ ಪ್ರಕ್ಷುಬ್ಧತೆಯಿಂದÀ ತಪ್ಪಿಸಿಕೊಳ್ಳಲು ತನ್ನ ಅಣ್ಣನೊಂದಿಗೆ ಸ್ವತಃ ತಾವೇ ಒಬ್ಬ ನಿರಾಶ್ರಿತರಾಗಿ ಯುನೈಟೆಡ್ ಕಿಂಗ್ಡಮ್‍ಗೆ ಆಶ್ರಯವನ್ನರಸಿ ಬಂದಾಗ ಅವರಿಗೆ ಕೇವಲ ಹದಿನೆಂಟರ ಪ್ರಾಯ. ಆಗ ತಾವು ಅನುಭವಿಸಿದ ಮನೋವ್ಯಾಕುಲತೆ, ತಾಯ್ನಾಡಿನ ಗೀಳು, ಪರಕೀಯ ಭಾವಗಳೇ ಮುಂದೆ ಅವರ ಕಾದಂಬರಿಯ ಕಥಾವಸ್ತುವಾಗಿವೆ. ಅಂದರೆ ಅವರ ಬದುಕೇ ಅವರ ಬರವಣಿಗೆಯಾಗಿದೆ. ಅಂತಹ ಬರಹಗಾರನ ಬದುಕು, ಬರಹ ಮತ್ತು ಅವರ ಸಾಧನೆಗಳತ್ತ ನೋಟ ಹರಿಸುವುದೇ ಈ ಲೇಖನದ ಉದ್ದೇಶ.

ಅವರು ಬರೆದಿರುವ ಅಷ್ಟೂ ಕಾದಂಬರಿಗಳು, ಸಣ್ಣಕಥೆಗಳು, ಪ್ರಬಂಧಗಳು, ವಿಮರ್ಶೆಗಳೆಲ್ಲದರಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ನಿರಾಶ್ರಿತರ ಅಥವಾ ವಸಾಹತುಶಾಹಿಯು ಸೃಷ್ಟಿಸಿದ ತಲ್ಲಣಗಳು ಪ್ರತಿಫಲಿಸುತ್ತವೆ. ಹದಿಹರೆಯದ ವಯಸ್ಸಿನಲ್ಲೇ ತಾಂಜೇನಿಯಾ ತೊರೆದರೂ ತಮ್ಮ ಎಲ್ಲಾ ಬರವಣಿಗೆಗಳಲ್ಲಿ ತಮ್ಮ ತಾಯ್ನಾಡಿನಲ್ಲಿ ಜೀವಿಸಿದ್ದಾರೆ. ತಾಂಜೇನಿಯಾದಿಂದ ನಿರ್ಗಮಿಸಿದ ನಂತರ ಯುನೈಟೆಡ್ ಕಿಂಗ್ಡಮ್‍ನಲ್ಲಿ ಅನುಭವಿಸಿದ ಮಾನಸಿಕ ತೊಳಲಾಟಗಳು ಮತ್ತು ಯಾತನೆಯನ್ನು ತಮ್ಮ ದಿನಚರಿಯಲ್ಲಿ ಇಂಚಿಂಚು ದಾಖಲಿಸಲು ಆರಂಭಿಸುತ್ತಾರೆ.

ಹೀಗೆ ಅಂಟಿದ ಬರವಣಿಗೆಯ ಗೀಳು ನಂತರದ ಹಂತದಲ್ಲಿ ತನ್ನಂತೆಯೇ ಸ್ಥಳಾಂತರದಿಂದ ಪರಕೀಯ ಭಾವ ಅನುಭವಿಸುತ್ತಿರುವ ಇನ್ನಿತರರ ಬದುಕಿನ ಮೇಲೆ ಪ್ರತಿಫಲಿಸುವ ಕಡೆಗೆ ವಾಲುತ್ತದೆ. ಅವರದ್ದೇ ಮಾತಿನಲ್ಲಿ ಹೇಳುವುದಾದರೆ, ಅವರ ಏಕಾಂಗಿತನದ ಮತ್ತು ಸ್ವನೆಲವನ್ನು ತೊರೆದ ಅನುಭವಗಳ ಮೇಲಿನ ಪ್ರತಿಫಲನಗಳೇ ಅವರ ಕಾಲ್ಪನಿಕ ಕಥೆಗಳನ್ನು ಬರೆಯುವ ಅಭ್ಯಾಸಕ್ಕೆ ಬುನಾದಿಯಾಗಿವೆ. ಪರಿಣಾಮವಾಗಿ, ಪಿಎಚ್‍ಡಿ ಪದವಿಯ ಪ್ರೌಢ ಪ್ರಬಂಧದ ಜೊತೆಜೊತೆಗೇ ಅವರ ಮೊದಲನೇ ಕಾದಂಬರಿಯಾದ ಮೆಮೊರಿ ಆಫ್ ಡಿಪಾರ್ಚರ್ (ನಿರ್ಗಮನದ ನೆನಪುಗಳು-1987) ಸಹ ಪ್ರಕಟಣೆಗೆ ಸಿದ್ಧವಾಗುತ್ತದೆ.

ಇಂಗ್ಲಿಷ್ ಮತ್ತು ವಸಾಹತೋತ್ತರ ಸಾಹಿತ್ಯದ ಪ್ರಾಧ್ಯಾಪಕರಾಗಿ ಕೆಂಟ್ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸಿರುವ ಗುರ್ನಾರವರು ತಮ್ಮ ಜೀವಿತಾವಧಿಯ ಹೆಚ್ಚಿನ ಭಾಗವನ್ನು ಯುನೈಟೆಡ್ ಕಿಂಗ್ಡಮ್‍ನಲ್ಲಿ ಕಳೆದರೂ, ಕಪ್ಪುವರ್ಣದ ಬ್ರಿಟಿಷ್ ಬರಹಗಾರರ ಗುಂಪಲ್ಲಿ ಒಬ್ಬರೆಂದು ಗುರುತಿಸಿಕೊಂಡರೂ, ಅಲ್ಲಿನ ಸರ್ಕಾರ ಆಶ್ರಯವನ್ನರಸಿ ಬರುವ ಇತರ ದೇಶದ ಜನರನ್ನು ಅಪಾಯಕರವೆಂದು ಚಿತ್ರಿಸುವ ಮನೋಭಾವವನ್ನು ಖಂಡಿಸುತ್ತಾರೆ. ಈಗಲೂ ತಮ್ಮ ಕೆಲವು ಸಂಬಂಧಿಕರನ್ನು ತಾಂಜೇನಿಯಾದಲ್ಲಿ ಹೊಂದಿರುವ ಅವರು ಸಮಯವಾದಾಗ ಹೋಗಿ ಬಂದು ಮಾಡುತ್ತಿರುತ್ತಾರಂತೆ. “ನಾನು ಅಲ್ಲಿಯವನು. ಹಾಗಾಗಿ ಮನಸಿನಲ್ಲಿಯೇ ಅಲ್ಲಿ ಜೀವಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ. ಈ ರೀತಿಯ ತಾಯ್ನಾಡಿನ ಮೇಲಿನ ಮೋಹ ಮತ್ತು ಕಾಳಜಿಯು ಅವರ ಎಲ್ಲಾ ಕಾದಂಬರಿಗಳಲ್ಲೂ ಸ್ಪಷ್ಟವಾಗಿ ಗೋಚರಿಸುತ್ತವೆ. ಸ್ವಂತ ನೆಲದಿಂದ ದೂರವಾದ ಕಾರಣಕ್ಕೆ ಮತ್ತು ಆಶ್ರಯ ಪಡೆದ ನೆಲದಲ್ಲಿ ಸ್ವಂತ ನೆಲಕ್ಕಾಗಿಯೇ ಹವಣಿಸಿದ ಕಾರಣಕ್ಕೆ ಗುರ್ನಾರವರು ಎರಡೂ ನೆಲದಲ್ಲೂ ಪರಕೀಯವಾಗಿಯೇ ಉಳಿದುಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ಬುಕರ್ ಪುರಸ್ಕಾರದ ಕಿರುಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದ ಅವರ ‘ಪ್ಯಾರಡೈಸ್’ (1994) ಕಾದಂಬರಿಯು ಅರಬ್ ವ್ಯಾಪಾರಿಯ ಬಳಿ ತನ್ನ ತಂದೆ ಮಾಡಿದ್ದ ಸಾಲವನ್ನು ತೀರಿಸಲೆಂದು ಜೀತದಾಳಾಗಿ ದುಡಿಯುವ ಮಗನ ಸುತ್ತಲೂ, ‘ಅಡ್ಮೈರಿಂಗ್ ಸೈಲೆನ್ಸ್’ (1996) ನಿರಾಶ್ರಿತನೊಬ್ಬ ಇಂಗ್ಲೆಂಡ್‍ನಲ್ಲಿ ಜೀವಿಸಿ ಮರಳಿ ತನ್ನೂರಿಗೆ ತೆರಳಿ ಅದು ತನ್ನದಾಗಿ ಉಳಿದಿಲ್ಲವೆಂದು ಅರಿಯುವ ಕಥೆಯನ್ನೂ, ಬುಕರ್ ಪುರಸ್ಕಾರದ ದೀರ್ಘಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದ ‘ಬೈ ದ ಸೀ’ (2001) ಕಾದಂಬರಿಯು ಜಂಜೀಬರ್‍ನ ನಂಟು ಹೊಂದಿದ್ದು ನಂತರ ಇಂಗ್ಲೆಂಡ್‍ನಲ್ಲಿ ಭೇಟಿಯಾಗುವ ಇಬ್ಬರು ನಿರಾಶ್ರಿತರ ಚಿತ್ರಣ ನೀಡುತ್ತವೆ. ‘ಡೆಸರ್ಶನ್’ (2005) ಕಾದಂಬರಿಯು ಗುರ್ನಾರ ಪಾತ್ರವನ್ನೇ ಮರುಸೃಷ್ಟಿಸಿದಂತೆ ಕಾಣುವ ರಶೀದ್ ಎಂಬ ಪಾತ್ರದ ಸುತ್ತಲೂ ಹರಡಿಕೊಂಡಿದೆ. ಇದೇ ರೀತಿ ಅವರೆಲ್ಲಾ ಕಾದಂಬರಿಗಳಲ್ಲಿಯೂ ಸಾಮಾನ್ಯರೇ ಪ್ರಧಾನ ಪಾತ್ರದಾರಿಗಳಾಗಿದ್ದಾರೆ.

ಆಫ್ರಿಕನ್ ಸಾಹಿತ್ಯದ ಪಿತಾಮಹ ಎಂದೇ ಕರೆಯಲಾಗುವ ಚಿನುಹಾ ಅಚಿಬೇ ಕೃತಿಗಳೊಂದಿಗೆ ಗುರ್ನಾ ಕೃತಿಗಳು ಹಲವು ವಿಷಯಗಳಲ್ಲಿ ಸಾಮ್ಯ ಹೊಂದಿರುವುದನ್ನು ಕಾಣಬಹುದು. ಅಂದರೆ, ಅಚಿಬೇ ನೈಜೀರಿಯಾ ಎಂಬ ವಾಸ್ತವ ಪ್ರದೇಶದ ಒಳಗೆ ಕಾಲ್ಪನಿಕ ಪ್ರದೇಶಗಳನ್ನು ಸೃಷ್ಟಿಸಿದಂತೆ, ಗುರ್ನಾ ತಾಂಜೇನಿಯಾದಲ್ಲಿ ಕಾಲ್ಪನಿಕ ಪ್ರದೇಶಗಳನ್ನು ಸೃಷ್ಟಿಸುತ್ತಾರೆ. ತಮ್ಮದೇ ಪರಂಪರೆಯ, ತಾವೇ ಬದುಕಿದ ಜಗತ್ತಿನ ಕುರಿತು ಅಚಿಬೇ ಬರೆಯುವಂತೆ, ಗುರ್ನಾ ಸಹ ಬರೆಯುತ್ತಾರೆ. ಆದರೆ ಅಚಿಬೇ ತಮ್ಮ ಜಗತ್ತಿನ ಒಳಗೇ ನಿಂತು, ಅಲ್ಲಿಯ ವಸಾಹತುಪೂರ್ವ, ವಸಾಹತು ಕಾಲದ, ವಸಾಹತೋತ್ತರದ ಅನುಭವಗಳನ್ನು ಅನುಭವಿಸಿ, ಅವುಗಳನ್ನೇ ಒಂದಕ್ಕೊಂದು ಸಂಬಂಧವಿರುವ ಸರಣಿ ಕಥಾನಕಗಳನ್ನಾಗಿ ಪರಿವರ್ತಿಸಿದರೆ ಗುರ್ನಾರವರು ತಮ್ಮ ಜಗತ್ತಿನ ಹೊರಗೆ ನಿಂತು ಕೇವಲ ವಸಾಹತೋತ್ತರದ ಅನುಭವಗಳನ್ನಷ್ಟೇ ಅಲ್ಲದೇ ಪರಕೀಯನಾಗಿ ಬದುಕಿದ ಅನುಭವಗಳನ್ನು ಪಾತ್ರಗಳ ಮೂಲಕ ಬಿಡಿ ಬಿಡಿಯಾಗಿ ಬಿಚ್ಚಿಡುತ್ತಾರೆ.

ಇತ್ತೀಚೆಗಷ್ಟೇ ಪ್ರಕಟಣೆಗೊಂಡ ‘ಆಫ್ಟರ್‍ಲೈವ್ಸ್’ ಅವರ ‘ಪ್ಯಾರಡೈಸ್’ ಕಾದಂಬರಿಯ ಮುಂದುವರಿದ ಭಾಗದಂತೆ ಕಾಣುತ್ತದೆ ಎನ್ನುವುದನ್ನು ಬಿಟ್ಟರೆ ಇನ್ನಿತರ ಕೃತಿಗಳು ಬೇರೆ ಬೇರೆ ಕಥೆಗಳನ್ನೇ ಹೇಳುತ್ತವೆ. ಆದರೆ ಇಬ್ಬರ ಪುಸ್ತಕಗಳು ಕೂಡ ಅಲಕ್ಷಿತರ ಧ್ವನಿಯಾಗಿ, ಸಾಮಾನ್ಯ ವರ್ಗದ ಪ್ರತಿಧ್ವನಿಯಾಗಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಅಚಿಬೇರವರ ‘ಥಿಂಗ್ಸ್ ಫಾಲ್ ಅಪಾರ್ಟ್’ ತರಹ ‘ಪ್ಯಾರಡೈಸ್’ ಕಾದಂಬರಿಯನ್ನು ಜೋಸೆಫ್ ಕಾನ್ರಾಡ್‍ರ ‘ಹಾರ್ಟ್ ಆಫ್ ಡಾರ್ಕ್‍ನೆಸ್’ ಗೆ ಉತ್ತರವಾಗಿ ಬರೆದಿದ್ದಾರೆ ಎಂದೂ ಸಹ ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಕೆಲವು ಪಠ್ಯಗಳಲ್ಲಿ ಬಹಳ ಕಲಾತ್ಮಕವಾಗಿ ಮತ್ತು ಸಂಕೀರ್ಣವಾಗಿ ಅಂತರಪಠ್ಯತೆಯನ್ನು ಹೆಣೆದಿದ್ದಾರೆ. ಇದಲ್ಲದೇ ಇಸ್ಲಾಮ್ ಮತ್ತು ಬೈಬಲ್‍ನಲ್ಲಿನ ಉಲ್ಲೇಖಗಳನ್ನು ಪಾತ್ರಗಳ ಮುಖೇನ ಅಲ್ಲಲ್ಲಿ ತಂದಿದ್ದಾರೆ. ಆಫ್ರಿಕಾದಿಂದ ಪಶ್ಚಿಮಕ್ಕೆ ಹೋದಾಗಿನ ಅನುಭವಗಳನ್ನು ಚಿತ್ರಿಸಿದ ಮೊದಲ ಲೇಖಕ ಎಂದೂ ಹೇಳಲಾಗುತ್ತದೆ. ವಸಾಹತುಶಾಹಿಯು ಹೇಗೆ ಎಲ್ಲವನ್ನೂ ಬದಲಾಯಿಸಿದೆ ಮತ್ತು ಜನರು ಅದರಿಂದ ಆದ ಗಾಯವನ್ನು ಇನ್ನೂ ಹೇಗೆ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಗುರ್ನಾ ತಮ್ಮ ಕೃತಿಗಳಲ್ಲಿ ಅಚ್ಚುಕಟ್ಟಾಗಿ ನಿರೂಪಿಸುತ್ತಾರೆ ಎಂದು ವಿಮರ್ಶಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಹೀಗೆ ಕೆಲವೆಡೆ ಸ್ವಲ್ಪ ಮಟ್ಟಿಗೆ ಹಿಂದಿನವರ ಜಾಡನ್ನು ಹಿಡಿದು ಬರೆದಿದ್ದರೂ ತಮ್ಮ ಸ್ವಂತಿಕೆಯ ಸೃಜನಶೀಲ ಪ್ರಯೋಗಗಳ ಮೂಲಕವೂ ಗುರ್ನಾ ಹೆಸರು ಮಾಡಿದ್ದಾರೆ.

ಕಳೆದ ಬಾರಿ ಸಾಹಿತ್ಯ ಕ್ಷೇತ್ರದ ನೊಬೆಲ್ ಪುರಸ್ಕಾರ ಪಡೆದ ಲೂಯಿಸ್ ಗ್ಲೋಕ್ ಸಂದರ್ಶನ ಒಂದರಲ್ಲಿ ನೊಬೆಲ್ ದೊರೆತದ್ದಕ್ಕೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ, “ನನಗಿಂತಲೂ ಅರ್ಹರಾದ ಲೇಖಕರು ಇದ್ದು, ನನಗೆ ಇದು ದೊರೆತಿರುವುದು ಅಚ್ಚರಿ ತರುತ್ತದೆಈಗ ಇನ್ನಷ್ಟು ನನ್ನ ಗೆಳೆಯರು ನನ್ನಿಂದ ದೂರವಾಗಬಹುದು” ಎಂದು ಹೇಳಿದ್ದರು. ಸಾಮಾನ್ಯವಾಗಿ ಯಶಸ್ಸಿನೊಂದಿಗೆ ಎಲ್ಲರಿಗೂ ಬರುವ ಆತಂಕವಿದು. ಆದರೆ ಗುರ್ನಾರ ವಿಷಯದಲ್ಲಿ ಇದು ವ್ಯತಿರಿಕ್ತವಾಗಿದೆ. ಅವರ ಹಿತೈಷಿಗಳು, ಜೊತೆಗಾರರು ಬಹಳ ಸಂತೋಷದಿಂದ ಅವರ ಈ ಸಾಧನೆಯನ್ನು ಸಂಭ್ರಮಿಸಿದ್ದಾರೆ. ಗುರ್ನಾರ ಬರವಣಿಗೆಯು ಇನ್ನೂ ಹೆಚ್ಚಿನ ಗೌರವಕ್ಕೆ ಪಾತ್ರವಾಗಲು ಮತ್ತು ಓದುಗರನ್ನು ಆಕರ್ಷಿಸಲು ಯೋಗ್ಯವೆಂದು ಅವರ ನಿಕಟವರ್ತಿಗಳು ಬಹಳ ಹಿಂದಿನಿಂದಲೂ ಹೇಳುತ್ತಿದ್ದರಂತೆ.

ಕಳೆದ ವಾರದ ಪಾಡ್‍ಕ್ಯಾಸ್ಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅಬ್ದುಲ್ ರಜಾಕ್ ಗುರ್ನಾರವರು ಆಫ್ರಿಕಾದ ಅದ್ಭುತ ಬರಹಗಾರರಲ್ಲಿ ಒಬ್ಬರು. ಅವರ ಪ್ರತಿಭೆಯನ್ನು ಯಾರೂ ಗುರುತಿಸದೆ ಅವರನ್ನು ಕಡೆಗಣಿಸಲಾಗಿದೆ ಎನ್ನುವುದು ನನಗೆ ತುಂಬಾ ನೋವುಂಟು ಮಾಡಿದೆ ಎಂದು ಹೇಳಿದ್ದೆ. ಆದರೆ ಈಗ ಈ ಪುರಸ್ಕಾರ ದೊರೆತಿದೆ” ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗುರ್ನಾರ ಹಲವಾರು ಪುಸ್ತಕಗಳನ್ನು ಮಾರುಕಟ್ಟೆಗೆ ತಂದಿರುವ ಅಲೆಕ್ಸಾಂಡರ್ ಪ್ರಿಂಗಲ್ ಹೇಳಿದ್ದಾರೆ. “ನೊಬೆಲ್ ನಿಜಕ್ಕೂ ಅದ್ಭುತ ಅನುಭವ ತಂದಿದೆ. ಮೊದಲು ವಿಷಯ ತಿಳಿದಾಗ ನಾನು ಇದ್ಯಾವುದೋ ಸುಳ್ಳು ಕರೆ ಎಂದು ಭಾವಿಸಿದ್ದೆ” ಎಂದು ತಮ್ಮ ಸಂದರ್ಶನದಲ್ಲಿ ನುಡಿದಿರುವ ಗುರ್ನಾ, ಅಲೆಕ್ಸಾಂಡರ್ ಪ್ರಿಂಗಲ್ ಹೇಳಿಕೆಗೆ ಉತ್ತರವಾಗಿ, “ಬಹುಶಃ ನನ್ನನ್ನು ಕಡೆಗಣಿಸಲಾಗಿದೆ ಎಂಬುದು ಅವರ ಮಾತಿನ ಅರ್ಥವಾಗಿರಲಿಕ್ಕಿಲ್ಲ. ಬದಲಾಗಿ ನಾನು ಇನ್ನೂ ಹೆಚ್ಚಿನದಕ್ಕೆ ಅರ್ಹನೆಂಬುದು ಅವರ ಅಭಿಪ್ರಾಯವಿರಬಹುದು. ಏಕೆಂದರೆ ನನಗೆ ಎಂದೂ ನನ್ನನ್ನು ನಿರ್ಲಕ್ಷಿಸಲಾಗಿದೆ ಎಂದೆನಿಸಿಲ್ಲ. ನನಗಿರುವ ಓದುಗರ ಸಂಖ್ಯೆಯ ಬಗ್ಗೆ ನನಗೆ ಸಂತೃಪ್ತಿ ಇದೆ. ಆದರೂ ಇನ್ನೂ ಹೆಚ್ಚಿನ ಓದುಗರನ್ನು ಸಂಪಾದಿಸಲು ಶ್ರಮಿಸುತ್ತೇನೆ” ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ಗುರ್ನಾರವರ ಕೃತಿಗಳು ಅವರೇ ಹೇಳುವಂತೆ ಒಳ್ಳೆಯ ಓದುಗ ಸಂಖ್ಯೆಯನ್ನು ಹೊಂದಿದ್ದರೂ, ವಿಮರ್ಶಕರಿಂದ ಅದ್ವಿತೀಯ ಮನ್ನಣೆ ಪಡೆದಿದ್ದರೂ ಅವರಿಗೆ ನೊಬೆಲ್ ಪುರಸ್ಕಾರ ಘೋಷಣೆ ಆಗುವವವರೆಗೆ ಇತರ ನೊಬೆಲ್ ಪುರಸ್ಕøತರ ಪುಸ್ತಕಗಳು ಜಾಗತಿಕ ಮಟ್ಟದಲ್ಲಿ ಪರಿಚಿತವಾಗಿದ್ದ ಬಗೆಯಲ್ಲಿ ಪರಿಚಿತವಾಗಿರಲಿಲ್ಲ ಎಂಬುದೇ ಸತ್ಯ. ಅದೇ ಕಾರಣಕ್ಕೆ ವಾಣಿಜ್ಯಾತ್ಮಕವಾಗಿ ಯಶಸ್ಸನ್ನೂ ಕಂಡಿರಲಿಲ್ಲ. ಆದರೆ ಈಗ ಏಕಾಏಕಿ ಅವರ ಪುಸ್ತಕಗಳಿಗೆ ಬೇಡಿಕೆ ಹೆಚ್ಚಾಗಿದೆ. ಬರಹಗಾರನೋರ್ವನ ಕೃತಿಗಳಿಗೆ ಪ್ರಶಸ್ತಿ ಅಥವಾ ಪುರಸ್ಕಾರಗಳು ಪ್ರೋತ್ಸಾಹದಾಯಕವಾಗುತ್ತವೆ ಎಂಬುದು ಇದರಿಂದ ರುಜುವಾತಾಗುತ್ತದೆ. ಅದರರ್ಥ ಬರವಣಿಗೆಯೊಂದು ಪ್ರಶಸ್ತಿ ಅಥವಾ ಪುರಸ್ಕಾರಗಳ ಬೆನ್ನುಹತ್ತಿ ಹೋಗಬೇಕು, ಅವುಗಳಿಗಾಗಿ ಹಪಹಪಿಸಬೇಕು ಎಂದಲ್ಲ.

ಸಾರಸ್ವತ ಲೋಕದ ಮೇಲಿನ ಕಾಳಜಿಯಿಂದ, ಕ್ರಿಯಾತ್ಮಕ ಕೃತಿಗಳು “ಕಲೆಯ ಹಿತಕ್ಕಾಗಿ ಕಲೆ” ಎಂಬ ಮಂತ್ರದೊಂದಿಗೆ ಕಾರ್ಯನಿರ್ವಹಿಸಿದರೆ, ಅದಕ್ಕೆ ದೊರಕಬೇಕಾದ ಸ್ವಾಗತವು ಎಂದಾದರೂ ದೊರತೇ ತೀರುತ್ತದೆ ಎಂಬುದಕ್ಕೆ ಅಬ್ದುಲ್ ರಜಾಕ್ ಗುರ್ನಾ ಉದಾಹರಣೆಯಾಗಿ ನಿಲ್ಲುತ್ತಾರೆ.

*ಲೇಖಕಿ ತುಮಕೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ; ಧಾರವಾಡದ ಕರ್ನಾಟಕ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿನಿ.

Leave a Reply

Your email address will not be published.