ಬೀಜಿಂಗ್ ಚಳಿಗಾಲದ ಓಲಿಂಪಿಕ್ಸ್‍ಗೆ ಅಮೆರಿಕದ ಕೊಂಕು

2020ರ ಬೇಸಿಗೆ ಕಾಲದ ಓಲಿಂಪಿಕ್ಸ್ 2021 ರಲ್ಲಿ ಜಪಾನಿನ ಟೊಕಿಯೋ ನಗರದಲ್ಲಿ ನಡೆದರೆ, ಅದೇ 2020ರ ಚಳಿಗಾಲದ ಓಲಿಂಪಿಕ್ಸ್ ಫೆಬ್ರವರಿ 2022ರಲ್ಲಿ ಬೀಜಿಂಗ್ ಬಳಿಯ ಜಾಂಗ್‍ಜಿಯಾಕುನಲ್ಲಿ ನಡೆಯಲಿದೆ. ಟೋಕಿಯೋ ಓಲಿಂಪಿಕ್ಸ್‍ಗೆ ಇದ್ದಂತೆ ಈ ಚಳಿಗಾಲದ ಓಲಿಂಪಿಕ್ಸ್‍ಗೆ ಕೂಡಾ ಕೊರೊನಾ ಆತಂಕವಿದೆ. ಚೀನಾ ದೇಶವು ತನ್ನ ಗಡಿಗಳನ್ನು ಮುಚ್ಚಿ ಅತ್ಯಂತ ಕಟುವಾದ ಲಾಕ್‍ಡೌನ್ ಹೇರಿ ಕೋವಿಡ್ ಮೇಲೆ ನಿಯಂತ್ರಣ ಸಾಧಿಸಿದೆ. ಆದರೆ ಈ ‘ಶೂನ್ಯ ಕೋವಿಡ್ ನೀತಿ’ಯಿಂದಾಗಿ ಚೀನಾದ ಆರ್ಥಿಕತೆ ಸೊರಗಿದೆ. ಎಲ್ಲಿಯವರೆಗೆ ಚೀನಾ ತನ್ನ ಗಡಿಯನ್ನು ಮುಕ್ತವಾಗಿ ತೆರೆದು ಕೋವಿಡ್‍ನೊಂದಿಗೆ ಜೀವನ ಮಾಡುವುದು ಕಲಿಯುವುದಿಲ್ಲವೋ ಅಲ್ಲಿಯವರೆಗೆ ಚೀನಾ ಕೋವಿಡ್ ಹೆದರಿಕೆಯಲ್ಲಿಯೇ ಬದುಕಬೇಕಾಗುತ್ತದೆ.

ಈ ಚಳಿಗಾಲದ ಬೀಜಿಂಗ್ ಓಲಿಂಪಿಕ್ಸ್‍ಗೆ ಕೋವಿಡ್ ಒಂದೇ ಆತಂಕ ಸೃಷ್ಟಿಸಿಲ್ಲ. ಅಮೆರಿಕವು ಈ ಫೆಬ್ರವರಿ ಚಳಿಗಾಲದ ಓಲಿಂಪಿಕ್ಸ್‍ಗೆ ತನ್ನ ಅಧಿಕಾರಿಗಳನ್ನು ಕಳಿಸದೇ ಇರುವ ನಿರ್ಣಯ ಕೈಗೊಂಡಿದೆ. ಈ ಅರೆಬಹಿಷ್ಕಾರವನ್ನು ಕೆನಡಾ, ಆಸ್ಟ್ರೇಲಿಯಾ ಮತ್ತಿತರ ದೇಶಗಳು ಹಿಂಬಾಲಿಸಿವೆ. ಅಮೆರಿಕಾದ ಸ್ಫರ್ಧಾಳುಗಳು ಭಾಗವಹಿಸಿದರೂ ಯಾವುದೇ ಅಮೆರಿಕದ ಅಧಿಕಾರಿ ಈ ಓಲಿಂಪಿಕ್ಸ್‍ನಲ್ಲಿ ಭಾಗವಹಿಸುವುದಿಲ್ಲ. ಚೀನಾದಲ್ಲಿನ ಮಾನವೀಯ ಹಕ್ಕುಗಳ ದಮನ ಹಾಗೂ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿ ಉಯ್‍ಘುರ್ ನಾಗರಿಕರ ದಮನದ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಹೇಳಿದೆ. ಸಹಜವಾಗಿ ಇದನ್ನು ಟೀಕಿಸಿರುವ ಚೀನಾ, ಆಡಳಿತಕ್ಕೆ ಅಮೆರಿಕಾದ ರಾಜಕೀಯವೊಂದೇ ಮಾದರಿಯಲ್ಲವೆಂದು ಹೇಳಿಕೊಂಡಿದೆ. ಅಮೆರಿಕದ ಪ್ರಜಾಪ್ರಭುತ್ವ ‘ಹಣದ ರಾಜಕೀಯ’ವಾಗಿದೆ ಎಂದೂ ಚೀನಾ ಏಷ್ಯಾಆಫ್ರಿಕಾ ಬಡದೇಶಗಳ ಮುಂದೆ ಪ್ರತಿಪಾದಿಸಿದೆ.

ಚೀನಾದ ಯಾವುದೇ ಯಶಸ್ಸಿಗೆ ಕೊಂಕು ನುಡಿಯುತ್ತಿರುವ ಅಮೆರಿಕಾ ಯಾವುದೇ ರೀತಿಯಲ್ಲಿ ಆ ದೇಶಕ್ಕೆ ಮಾನ್ಯತೆ ಸಿಗದಂತೆ ನೋಡಿಕೊಳ್ಳುತ್ತಿದೆ. ಅಮೆರಿಕಾದ ಜೊತೆ ಜಪಾನ್, ಆಸ್ಟ್ರೇಲಿಯಾ, ಕೆನಡಾ ಹಾಗೂ ಯುಕೆ ನಿಲ್ಲುತ್ತವೆ. ಯೂರೋಪ್ ಒಕ್ಕೂಟ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತಹಾ ನಾಟಕವಾಡುತ್ತದೆ. ರಷ್ಯಾ, ಪಾಕಿಸ್ತಾನ ಹಾಗೂ ಟರ್ಕಿಗಳು ಚೀನಾ ಬೆಂಬಲಕ್ಕೆ ನಿಂತಿವೆ. ಫೆಬ್ರವರಿಯ ಈ ಓಲಿಂಪಿಕ್ಸ್‍ನಲ್ಲಿ ಈ ದೇಶಗಳ ನಡುವೆಯ ಮೇಲಾಟದ ರಾಜಕೀಯ ಯಾವ ಬಣ್ಣ ತಳೆಯುತ್ತದೆಯೋ ಎಂಬುದನ್ನು ನೋಡಬೇಕಿದೆ.

ರಷ್ಯಾದ ಕೆಂಗಣ್ಣಿಗೆ ಗುರಿಯಾಗಿರುವ ಯುಕ್ರೇನ್

ಯುಕ್ರೇನ್ ಗಡಿಗೆ 90,000 ಸೈನಿಕರನ್ನು ಕಳಿಸಿರುವ ರಷ್ಯಾ ತನ್ನ ಹಳೆಯ ಮಿತ್ರದೇಶ ಯುಕ್ರೇನ್ ಮೇಲೆ ದಾಳಿಗೆ ಸಿದ್ಧವಾದಂತೆ ಕಾಣಿಸುತ್ತಿದೆ. ಇನ್ನು ಒಂದೆರೆಡು ತಿಂಗಳುಗಳಲ್ಲಿ ರಷ್ಯಾ ಪಡೆ ಗಡಿ ದಾಟಿ ಯುಕ್ರೇನ್ ಮೇಲೆ ದಾಳಿ ಮಾಡಲಿದೆಯೆಂದು ಅಮೆರಿಕ ಹೇಳುತ್ತಿದೆ. ತನಗೆ ದಾಳಿ ಮಾಡುವ ಯಾವುದೇ ಉದ್ದೇಶವಿಲ್ಲವೆಂದು ಹಾಗೂ ತಾನು ಕೇವಲ ತನ್ನ ಗಡಿಯ ಹಿತರಕ್ಷಣೆ ಮಾಡಲು ಬದ್ಧವಾಗಿದ್ದೇನೆಂದು ರಷ್ಯಾ ಹೇಳಿಕೊಂಡಿದೆ.

ಹಳೆಯ ಸೋವಿಯಟ್ ಯೂನಿಯನ್‍ನಿಂದ 1991 ರಲ್ಲಿ ಯುಕ್ರೇನ್ ಬಿಡುಗಡೆ ಹೊಂದಿ ಸ್ವತಂತ್ರ ದೇಶವಾಗಿತ್ತು. ಅದಕ್ಕೂ ಹಿಂದೆ ರಷ್ಯಾ ಸಾಮ್ರಾಜ್ಯದ ಅಂಗವೇ ಆಗಿದ್ದ ಯುಕ್ರೇನ್‍ನಲ್ಲಿ ರಷ್ಯಾ ಭಾಷೆ ಮತ್ತು ಸಂಸ್ಕøತಿಯ ಹಳೆಯ ಬಾಂಧವ್ಯವಿದೆ. 2014 ರಲ್ಲಿ ರಷ್ಯಾದ ಜೊತೆ ಮಿಲಿಟರಿ ಒಡಂಬಡಿಕೆ ಬಯಸಿದ್ದ ಅಂದಿನ ಅಧ್ಯಕ್ಷ ವಿಕ್ಟರ್ ಯಾನುಕೊವಿಚ್ ಅವರನ್ನು ಜನಪ್ರಿಯ ದಂಗೆಯೊಂದು ಪದಚ್ಯುತಗೊಳಿಸಿತ್ತು. ನಂತರ ಬಂದ ಯುಕ್ರೇನ್ ಸರ್ಕಾರಗಳು ಐರೋಪ್ಯ ಒಕ್ಕೂಟ ಸೆರಲು ಬಯಸಿವೆ. ಯುಕ್ರೇನ್‍ನನ್ನು ನೇಟೋ ಒಕ್ಕೂಟಕ್ಕೂ ಸೇರಿಸಿಕೊಳ್ಳಬೇಕೆಂದು ಅಮೆರಿಕ ಆಹ್ವಾನಿಸಿತ್ತು. ಎಲ್ಲಿ ಯುಕ್ರೇನ್ ನೇಟೋ ಸೇರಿದರೆ ಅಮೆರಿಕ ಮತ್ತು ಐರೋಪ್ಯ ಸೈನ್ಯಗಳು ತನ್ನ ಗಡಿಯವರೆಗೆ ಬರುವುದೋ ಎಂದು ಹೆದರಿ ರಷ್ಯಾ ಗರಿಗೆದರಿದೆ. ಕಳೆದ ವರ್ಷ ಯುಕ್ರೇನಿನ ಭಾಗವಾದ ಕ್ರಿಮಿಯಾವನ್ನು ಆಕ್ರಮಿಸಿಕೊಂಡಿದೆ. ಯುಕ್ರೇನ್ ಏನಾದರೂ ನೇಟೋ ಸೇರಲು ಮುಂದಾದರೆ ಇಡೀ ಯುಕ್ರೇನ್ ದೇಶವನ್ನೇ ಆಕ್ರಮಿಸಲು ತಾನು ಸಿದ್ಧನಿದ್ದೇನೆಂದು ತೋರಿಸಿದೆ.

2022 ರ ಜನವರಿಯಲ್ಲಿ ದಾಳಿ ನಡೆದರೆ ಯುಕ್ರೇನ್‍ಗೆ ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸಲು ಆಗುವುದಿಲ್ಲ. ಎಲ್ಲಾ ಹೇಳಿಕೆಗಳ ನಡುವೆಯೂ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಯುಕ್ರೇನ್ ನೆರವಿಗೆ ಸೈನ್ಯ ಕಳಿಸುವ ಸಾಧ್ಯತೆಗಳಿಲ್ಲ. ಯುಕ್ರೇನಿಗೆ ತನ್ನ ಸ್ಥಾನ ತೋರಿಸಿ ತಮ್ಮ ದೇಶದಲ್ಲಿ ಜನಮನ್ನಣೆ ಗಳಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾತೊರೆಯುತ್ತಿದ್ದಾರೆ. ಈಗಾಗಲೇ 14,000 ಯುಕ್ರೇನ್ ಸೈನಿಕರನ್ನು ಬಲಿ ತೆಗೆದುಕೊಂಡಿರುವ ಈ ವೈಮನಸ್ಸು ಪೂರ್ಣ ಪ್ರಮಾಣದ ಯುದ್ಧಕ್ಕೆ ತಿರುಗಿದರೆ ಹೇಗೆಂದು ಚರ್ಚೆ ನಡೆಯುತ್ತಿದೆ.

10 ದಿನ ನಗುವುದನ್ನು ನಿಷೇಧಿಸಿದ ಉತ್ತರ ಕೊರಿಯಾ

ಉತ್ತರ ಕೊರಿಯಾದ ನಾಗರಿಕರನ್ನು ಡಿಸೆಂಬರ್ 17 ರಿಂದ ಹತ್ತು ದಿನಗಳ ಕಾಲ ನಗುವುದು, ಸಂಭ್ರಮಿಸುವುದು, ಕುಡಿಯುವುದು ಹಾಗೂ ಬೇರೆ ಯಾವುದೇ ಮನರಂಜನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನಿಷೇಧಿಸಲಾಗಿದೆ. ಹತ್ತು ವರ್ಷಗಳ ಹಿಂದೆ ಇದೇ ಡಿಸೆಂಬರ್ 17 ಕ್ಕೆ ಅಂದಿನ ಸರ್ವಾಧಿಕಾರಿ ಕಿಮ್ ಜೊಂಗ್-2 ಅವರು ನಿಧನ ಹೊಂದಿದ್ದರು. ಅವರ ನಿಧನದ 10 ವರ್ಷಗಳ ನೆನಪಿಗೆ 10 ದಿನಗಳ ಕಾಲ ರಾಷ್ಟ್ರಾದ್ಯಂತ ಶೋಕ ಆಚರಣೆಗೆ ಸರ್ಕಾರ ಕರೆ ಕೊಟ್ಟಿದೆ. ಈ ಶೋಕದ ಸಂದರ್ಭದಲ್ಲಿ ಯಾವುದೇ ಶವಸಂಸ್ಕಾರ ಅಥವಾ ಹುಟ್ಟುಹಬ್ಬವನ್ನೂ ಆಚರಿಸಲು ಅನುಮತಿಯಿಲ್ಲ. ಮದುವೆಯ ಪ್ರಶ್ನೆಯಂತೂ ಇಲ್ಲವೇ ಇಲ್ಲ. ಇದರ ಜೊತೆಯಲ್ಲಿ ಹತ್ತು ದಿನಗಳ ಕಾಲ ಕಿಮ್ ಜೋಂಗ್ ನೆನಪಿನಲ್ಲಿ ಹಲವಾರು ಕಲಾ ಪ್ರದರ್ಶನಗಳು ಮತ್ತು ಸಭೆಗಳು ನಡೆಯಲಿವೆ. ಹೂವೊಂದಕ್ಕೆ ‘ಕಿಮ್‍ಜೋಂಗಿಲಿಯಾ’ ಎಂದೂ ಹೆಸರಿಡಲಾಗಿದೆ.

ಇದನ್ನು ಓದಿದ ನೀವು ಯಾರಾದರೂ ಇದೇನು ತಮಾಷೆ ಎಂದೀರಿ! ಇಂತಹಾ ಆದೇಶವನ್ನು ತಮಾಷೆಯೆಂದು ಹಿಂದೆ ಪರಿಗಣಿಸಿದ ಉತ್ತರ ಕೊರಿಯನ್ನರನ್ನು ಸೇನೆ ಕೊಂಡೊಯ್ದಿತ್ತು. ಅಂದಿನಿಂದ ಅವರು ನಾಪತ್ತೆಯಾಗಿ ಯಾವುದೇ ಗೊತ್ತು ಗುರಿಗಳಿಲ್ಲದೇ ಹೋಗಿದ್ದಾರೆ. ಉತ್ತರ ಕೊರಿಯನ್ನರು ಕಳೆದುಕೊಂಡಿರುವ ನಗುವನ್ನು ಕಂಡು ನಾವು ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ.

ಬಾಂಗ್ಲಾದೇಶಕ್ಕೆ ಸುವರ್ಣ ಸಂಭ್ರಮ

23 ವರ್ಷಗಳ ಪಶ್ಚಿಮಪಾಕಿಸ್ತಾನದ ಆಳ್ವಿಕೆಯನ್ನು ಕೊನೆಗಾಣಿಸಿ ಬಾಂಗ್ಲಾದೇಶ 1971 ರ ಡಿಸೆಂಬರ್ 16 ರಂದು ಸ್ವಾತಂತ್ರ ದೇಶವಾಗಿತ್ತು. ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ನೇತೃತ್ವದ ಮುಕ್ತಿಬಾಹಿನಿಯ ಸೈನಿಕರು ಭಾರತೀಯ ಸೈನ್ಯದ ನೆರವಿನಿಂದ ಪಾಕಿಸ್ತಾನದ ಸೈನ್ಯವನ್ನು ಪರಾಭವಗೊಳಿಸಿದ್ದರು. ಒಟ್ಟು ಒಂಬತ್ತು ತಿಂಗಳು ನಡೆದ ಈ ದಂಗೆ ಕಡೆಯ 13 ದಿನಗಳಲ್ಲಿ ಭಾರತಪಾಕಿಸ್ತಾನ ನಡುವೆ ಪೂರ್ಣಪ್ರಮಾಣದ ಯುದ್ಧವಾಗಿ ಪರಿಣಮಿಸಿತ್ತು. ಕಡೆಗೆ ಡಿಸೆಂಬರ್ 16 ರಂದು ಪಾಕಿಸ್ತಾನದ 92,000 ಸೈನಿಕರು ಶರಣಾಗತರಾಗುವುದರೊಂದಿಗೆ ಯುದ್ಧ ಮುಗಿದಿತ್ತು. ಬಾಂಗ್ಲಾದೇಶ ಸ್ವತಂತ್ರ ದೇಶವಾಗಿ ಹೊರಹೊಮ್ಮಿತ್ತು. ಈ ಹೋರಾಟದಲ್ಲಿ ಬಾಂಗ್ಲಾದೇಶದ ಇಪ್ಪತ್ತರಿಂದ ಮೂವತ್ತು ಲಕ್ಷ ಜನ ಮಡಿದರೆ ಭಾರತೀಯ ಸೈನ್ಯದ 12,189 ಸೈನಿಕರೂ ಸಹಾ ಮಡಿದಿದ್ದರು. ಪಾಕಿಸ್ತಾನದ ಸೈನ್ಯ ಎಂಟುಹತ್ತು ಲಕ್ಷ ಬಾಂಗ್ಲಾ ಮಹಿಳೆಯರ ಮೇಲೆ ಬಲಾತ್ಕಾರ ಮಾಡಿತ್ತು.

1947 ರಿಂದಲೇ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಅಸ್ತಿತ್ವ ಕಷ್ಟಕರವಾಗಿತ್ತು. 1600 ಕಿಲೋಮೀಟರ್ ಅಂತರದ ಈ ಎರಡೂ ಭೂಪ್ರದೇಶಗಳ ಮೇಲೆ ಪಂಜಾಬ್ ಪಾಕಿಸ್ತಾನದ ಸೈನ್ಯ ದಮನ ನಡೆಸಿತ್ತು. 1951 ರಲ್ಲಿ ಬಾಂಗ್ಲಾ ಭಾಷೆಗೆ ಮಾನ್ಯತೆ ನೀಡದ ಸಂದರ್ಭದಿಂದಲೇ ಶುರುವಾದ ದಂಗೆಗಳು 1971 ರವರೆಗೂ ಮುಂದುವರೆದಿದ್ದವು. 1970 ರ ಚುನಾವಣೆಯಲ್ಲಿ ಶೇಖ್ ಮುಜಿಬುರ್ ರೆಹಮಾನ್‍ರವರ ಆವಾಮಿ ಲೀಗ್ ಪ್ರಚಂಡ ಜಯ ಗಳಿಸಿತ್ತು. ಆದರೆ ಪಾಕಿಸ್ತಾನ ಸೈನ್ಯ ಈ ಫಲಿತಾಂಶವನ್ನು ಅಮಾನ್ಯ ಮಾಡಿ ಸೈನ್ಯಾಡಳಿತ ವಿಧಿಸಿತ್ತು. ಮುಂದಿನ ಒಂಬತ್ತು ತಿಂಗಳು ನಡೆದ ದಂಗೆ 1971 ರ ಡಿಸೆಂಬರ್ 16 ರಂದು ಬಾಂಗ್ಲಾದೇಶದ ಉದಯದಲ್ಲಿ ಕೊನೆಗಂಡಿತ್ತು. ಅಂದಿನ ಸಮಯದ ಭಾರತ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಅಪಾರ ಕೀರ್ತಿ ತಂದುಕೊಟ್ಟ ಈ ಬಾಂಗ್ಲಾ ವಿಮೋಚನೆಗೆ ಈಗ ಸುವರ್ಣ ಸಂಭ್ರಮ. ಜೊಯ್ ಬಾಂಗ್ಲಾ.

ಪುರುಷೋತ್ತಮ ಆಲದಹಳ್ಳಿ

Leave a Reply

Your email address will not be published.