ಬುದ್ಧಿಜೀವಿ ಮತ್ತು ಸಾಕ್ಷಿಪ್ರಜ್ಞೆ

ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಬುದ್ಧಿಜೀವಿ ಮತ್ತು ಸಾಕ್ಷಿಪ್ರಜ್ಞೆ ಎಂಬ ಪದಗಳು ಚಾಲ್ತಿಗೆ ಬಂದಿದ್ದು ನವ್ಯಸಾಹಿತ್ಯ ಮತ್ತು ವಿಮರ್ಶೆ ಭದ್ರವಾಗಿ ಬೇರೂರಿದ 1970ರ ಮಧ್ಯಭಾಗದಲ್ಲಿ. ಈ ವಿಶಿಷ್ಟ ಪದದ ಮಾತಾಪಿತೃಗಳು ಕನ್ನಡದ ನವ್ಯ ಸಾಹಿತಿಗಳು ಮತ್ತು ವಿಮರ್ಶಕರು. ಆಗ ಇವರಲ್ಲಿ ಕೆಲವರಿಗೆ ಬುದ್ಧಿಜೀವಿಗಳ ಒಂದು ಪಟ್ಟಿ ತಯಾರಿಸಿ ತಮ್ಮ ಮುಂದಿನ ಪೀಳಿಗೆಗೆ ಅನುಕೂಲಮಾಡಿಕೊಡುವ ಉಮೇದು ಹುಟ್ಟಿತು

ಎಂ..ಶ್ರೀರಂಗ

ನವ್ಯ ಸಾಹಿತ್ಯ ಎಂಬ ಪಂಥ (ಗುಂಪು) ಬರುವುದಕ್ಕಿಂತ ಮುಂಚೆ ಇದ್ದ ನವೋದಯ ಹಾಗೂ ಪ್ರಗತಿಶೀಲ ಸಾಹಿತಿಗಳನ್ನು ಸೇರಿಸಿಕೊಂಡು ಬುದ್ಧಿಜೀವಿ ಎಂದರೆ ಯಾರು? ಅವರ ಗುಣಲಕ್ಷಣಗಳು ಹೇಗಿರುತ್ತವೆ? ಹೇಗಿರಬೇಕು? ಯಾವ ವಿಷಯವನ್ನು ಯಾವ ಕಾಲದಲ್ಲಿ ವಿರೋಧಿಸಬೇಕು? ಯಾವಾಗ ವಿರೋಧಿಸಬಾರದು? ಇವರ ಸಾಹಿತ್ಯ ಪ್ರಗತಿಪರವೊ ವಿರೋಧವೋ? ಎಂಬುದರ ಬಗ್ಗೆ ಚರ್ಚೆ ನಡೆದು ಕೊನೆಗೂ ಒಂದು ಬುದ್ಧಿಜೀವಿ ಮತ್ತು ಸಾಕ್ಷಿ ಪ್ರಜ್ಞೆಯ ಸಾಂಸ್ಕೃತಿಕ ಸಂವಿಧಾನ ತಯಾರಾಯಿತು.

ಆಗ ನಮ್ಮ ಬಹುಪಾಲು ಹಿರಿಯ ಸಾಹಿತಿಗಳು ಈ ಸಾಂಸ್ಕೃತಿಕ ಸಂವಿಧಾನದಲ್ಲಿ ನಿರೂಪಿಸಲ್ಪಟ್ಟ ನಿಯಮಾನುಸಾರ ಅರ್ಹತೆ ಪಡೆಯದ ಕಾರಣ ಬುದ್ಧಿಜೀವಿ ಎಂಬ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಹೊರಗುಳಿಯಬೇಕಾಯಿತು. ಇನ್ನು ಕೆಲವರನ್ನು ನಿರ್ದಿಷ್ಟವಾಗಿ ಇವರು ಪ್ರಗತಿ ಪರರೊ ವಿರೋಧಿಗಳೋ ಎಂದು ನಿರ್ಧರಿಸುವಲ್ಲಿ ಗೊಂದಲಮೂಡಿ ಅಮಾನತ್ತು ಮಾಡಿ ಅವರನ್ನು ಬುದ್ಧಿಜೀವಿಗಳು ಹೌದೋ ಅಲ್ಲವೋ ಎಂದು ನಿರ್ಧರಿಸುವ ಕೆಲಸವನ್ನು ತಮ್ಮ ಮುಂದಿನ ಪೀಳಿಗೆಯವರು ಮಾಡಲಿ ಎಂದು ಬಿಟ್ಟುಬಿಟ್ಟರು. ಎಪ್ಪತ್ತರ ದಶಕದ ಹೊತ್ತಿಗಾಗಲೇ ಸಾಕಷ್ಟು ವಯಸ್ಸಾಗಿದ್ದ ಹಿರಿಯ ಸಾಹಿತಿಗಳು ಯಾವ ಪ್ರತಿಭಟನೆಯನ್ನು ಮಾಡದೆ ತಾತ, ತಮ್ಮ ಮೊಮ್ಮಕ್ಕಳ ಆಟ ನೋಡುವಂತೆ ನೋಡಿ ನಕ್ಕು ಸುಮ್ಮನಾದರು. ದೇಹದಲ್ಲಿ ಇನ್ನೂ ಕಸುವಿದ್ದವರು ಪ್ರತಿಭಟಿಸಿದರು. ಮತ್ತೆ ಕೆಲವರು ಈ ಬುದ್ಧಿಜೀವಿಗಳ ಸಂವಿಧಾನವನ್ನೇ ನಿರ್ಲಕ್ಷಿಸಿದರು. ಆಗ ಈ ಬುದ್ಧಿಜೀವಿಗಳಿಗೆ ತಮ್ಮ ಪಂಥ ಪ್ರಚಾರಕ್ಕೆ ತಮ್ಮದೇ ಒಂದು ಸಾಹಿತ್ಯಿಕ ಪತ್ರಿಕೆಯಿದ್ದರೆ ಉತ್ತಮ ಎನಿಸಿತು. ಅದನ್ನೂ ಮಾಡಿದರು. ತಮ್ಮ ತುತ್ತೂರಿಯನ್ನು ತಾವೇ ಊದಿಕೊಂಡರು.

ಕಾಲ ಕಳೆದಂತೆ ಇವರಲ್ಲೇ ಬಿರುಕು ಹುಟ್ಟಿ ದಿನ ಬೆಳಗಾದರೆ ಜಾತಿ, ಮತ, ವೈಯಕ್ತಿಕ ವಿಷಯಗಳನ್ನು ಹಿಡಿದುಕೊಂಡು ಪರಸ್ಪರ ಕೆಸರೆರಚಾಟ ಪ್ರಾರಂಭಿಸಿದರು. ಇದು ನಮ್ಮ ಬುದ್ಧಿಜೀವಿಗಳ ಪೂರ್ವಾಶ್ರಮದ ಕಥೆ. ಇಷ್ಟು ಪ್ರಸ್ತಾವನೆಯಿಂದ ಬುದ್ಧಿಜೀವಿಗಳು ಎಂದರೆ ಸಾಹಿತಿಗಳು ಮಾತ್ರ ಇರುವ ಒಂದು ಸಾಂಸ್ಕೃತಿಕ ಕೂಟ ಎಂದು ಯಾರು ಬೇಕಾದರೂ ಊಹಿಸಬಹುದು. ಅದು ನಿಜವೂ ಆಗಿದ್ದೇ ನಮ್ಮ ಕಾಲದ ದುರಂತ. ಇವರಿಗೆ ಗೊತ್ತಿಲ್ಲದ ವಿಷಯ ಈ ಪ್ರಪಂಚದಲ್ಲೇ ಇಲ್ಲ. ಗುಂಡು ಸೂಜಿಯಿಂದ ಹಿಡಿದು ರಾಕೆಟ್ ಸೈನ್ಸ್ ತನಕ ಯಾವ ವಿಷಯ ಕೇಳಿ ಇವರಲ್ಲಿ ಉತ್ತರವಿದೆ. ಇದೇ ಕಾರಣದಿಂದ ಸರ್ಕಾರ ಯಾವ ಕೆಲಸ ಮಾಡಲು ಹೊರಟರೂ ಇವರ ಸಲಹೆ ಪಡೆಯಲೇಬೇಕು; ನೆಲ, ಜಲ, ಭಾಷೆ ಯಾವ ವಿಷಯದ ಸಮಿತಿಯಿರಲಿ ಅದರಲ್ಲಿ ಇವರಿಗೊಂದು ಸ್ಥಾನ ಖಾಯಂ.

ಹಾಗಾದರೆ ವೈದ್ಯ, ವಕೀಲ, ಇಂಜಿನಿಯರ್, ಮುಂತಾದ ವೃತ್ತಿಗಳಲ್ಲಿ ಇರುವವರು ಬುದ್ಧಿಜೀವಿಗಳಲ್ಲವೇ? ಅಲ್ಲ ಎಂದವರಾರು? ದಿನನಿತ್ಯ ವಾಹನ ನಡೆಸುವ ಡ್ರೈವರ್ ಸಹ ಬುದ್ಧಿಜೀವಿಯೇ. ಹಾಗಾದರೆ ಈ ಬುದ್ಧಿಜೀವಿಗಳ ಸಂವಿಧಾನಕ್ಕೆ ಕಳೆದ ಐವತ್ತು ವರ್ಷಗಳಲ್ಲಿ ಏನೂ ತಿದ್ದುಪಡಿಗಳೇ ಆಗಿಲ್ಲವೇ? ಆಗಿದೆ. ತಮ್ಮ ಕೂಟದ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಇವರು ಒಂದು ತಂತ್ರ ಹೂಡಿದ್ದಾರೆ. ಸಿನಿಮಾ, ನಾಟಕ, ಪತ್ರಿಕೋದ್ಯಮ, ರಾಜಕೀಯ, ವಕೀಲರು, ಸಾಮಾಜಿಕ ಕಾರ್ಯಕರ್ತರು ಹೀಗೆ ಯಾವ ರಂಗದ ಯಾರು ಬೇಕಾದರೂ ಈಗ ಬುದ್ಧಿಜೀವಿಯಾಗಬಹುದು. ಮುಖ್ಯವಾದ ವಿಷಯವೆಂದರೆ ಏನಾದರೊಂದು ವಿವಾದ ಹುಟ್ಟಿಸುವ ಮಾತಾಡಿ ಅಥವಾ ಬರೆದು ಪ್ರಕಟಿಸಿ ಚಾಲ್ತಿಯಲ್ಲಿರಬೇಕಷ್ಟೆ.

ಈಗಂತೂ 24×7 ಸುದ್ದಿವಾಹಿನಿಗಳ ಕಾಲ. ಅಲ್ಲಿ ಯಾವುದೇ ಚರ್ಚೆ ಇರಲಿ ಈ ಬುದ್ಧಿಜೀವಿಗಳ ಕೂಟದ ಒಬ್ಬ ಸದಸ್ಯರ ಹಾಜರಿ ಖಾತರಿ. ಈಗ ಒಂದೆರೆಡು ವರ್ಷದಿಂದ ಕೋವಿಡ್ ಕಾರಣದಿಂದಲೋ ಏನೋ ಮಂಕಾಗಿದ್ದ ಬುದ್ಧಿಜೀವಿಗಳಿಗೆ ಕಳೆದ ಹತ್ತು ಹದಿನೈದು ದಿನಗಳಿಂದ ಹೊಸ ವಿಷಯ ಸಿಕ್ಕಿದೆ. ಅದು ಮಾತಾಡುವಾಗ ಲಯ ತಪ್ಪುವುದು ಒಳ್ಳೆಯದೋ ಕೆಟ್ಟದ್ದೋ? ಒಳ್ಳೆಯದು ಎಂದು ಬುದ್ಧಿಜೀವಿಗಳು ಈ ಹಿಂದೆ ನಮ್ಮ ಹಿರಿಯರು ಯಾವಾಗ ಹೇಗೆ ಲಯ ತಪ್ಪಿ ನಡೆದು ಮಾತಾಡಿ ದೇಶಕ್ಕೆ, ಸಮಾಜಕ್ಕೆ ಒಳಿತು ಮಾಡಿದ್ದಾರೆ ಎಂದು ಸೋದಾಹರಣವಾಗಿ ಉತ್ತರಕೊಟ್ಟಿದ್ದಾರೆ. ಹಾಗಾಗಿ ಈಗ ಯಾರು ಬೇಕಾದರೂ ಲಯ ತಪ್ಪಿ ಮಾತಾಡಿ ನಂತರ ಎದುರಾಗಬಹುದಾದ ಸಿವಿಲ್ ದೂರುಗಳಿಂದ ಪಾರಾಗಬಹುದು. ಇದು ತಮಾಷೆ ಎನಿಸಬಹುದು. ಆದರೆ ವಾಸ್ತವ ಸ್ಥಿತಿ. ಬುದ್ಧಿಜೀವಿಗಳಿಗೆ ಈ ಅಧಿಕಾರ ಕೊಟ್ಟವರು ಯಾರು ಎಂದು ಯಾರಾದರೂ ಕೇಳಿದರೋ ಬಂತು ಕಷ್ಟ. ಆಗ ಕೇಳಿದವರು ಪುರೋಹಿತಶಾಹಿ, ಮನುವಾದಿ, ಬಲಿತ ಜಾತಿವಾದಿ ಮತ್ತು ಮುಖ್ಯವಾಗಿ ನಮ್ಮ ದೇಶದ ಸಂವಿಧಾನದತ್ತವಾದ ಮಾತಾಡುವ ಹಕ್ಕನ್ನು ಕಸಿದುಕೊಂಡ ನಿರಂಕುಶವಾದಿ ಎಂಬ ನಾನಾ ಆರೋಪಗಳನ್ನು ಎದುರಿಸಬೇಕಾಗುತ್ತದೆ.

ನಮ್ಮ ರಾಜ್ಯ/ದೇಶದ ಚುನಾವಣೆಗಳ ಕಾಲ ಬಂತೆಂದರೆ ಅದು ಬುದ್ಧಿಜೀವಿಗಳಿಗೆ ಸುಗ್ಗಿಯ ಕಾಲ. ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಟಿವಿ ಚರ್ಚೆಗಳಲ್ಲಿ ಭಾಗವಹಿಸಿ ನಿರ್ಧರಿಸುವವರು ಇವರೇ. ಹುಮ್ಮಸ್ಸು ಇದ್ದವರು ತಾವೇ ಪಕ್ಷೇತರರಾಗೋ ಇಲ್ಲ ತಮಗೆ ಟಿಕೆಟ್ ಕೊಟ್ಟ ಪಕ್ಷದಿಂದಲೋ ಚುನಾವಣೆಗೆ ನಿಂತಿದ್ದ ಉದಾಹರಣೆಗಳೂ ಇವೆ. ಆದರೆ ಇವರು ಟಿವಿ ಚರ್ಚೆಗಳಲ್ಲಿ ನಿರ್ಧರಿಸಿದ ರಾಜಕೀಯ ಪಕ್ಷ ಅಧಿಕಾರಕ್ಕೆ ಬರದೇ, ತಾವೂ ಠೇವಣಿ ಕಳೆದು ಕೊಂಡು ನಿರಾಶರಾಗಿ ಈ ದೇಶಕ್ಕೆ ಭವಿಷ್ಯವಿಲ್ಲ ಎಂದು ಕೊರಗಿ ಮಂಕಾಗಿರುತ್ತಾರೆ. ಆದರೆ ಅದು ತಾತ್ಕಾಲಿಕ ಅಷ್ಟೇ. ಮತ್ತೆ ಇವರೋ, ಇವರ ಕೂಟದ ಸದಸ್ಯರಲ್ಲಿ ಯಾರಾದರೊಬ್ಬರು ಮಾತಾಡುವಾಗ ಲಯ ತಪ್ಪುತ್ತಾರೆ. ಮತ್ತೆ ಬುದ್ಧಿಜೀವಿಗಳು ಎಂದಿನಂತೆ ಹುರುಪಿನಿಂದ ತಮ್ಮ ಲಯಕ್ಕೆ ಮರಳುತ್ತಾರೆ.

ಇದು ಕೊನೆಯಿಲ್ಲದ ಪಯಣ.

ಸಾಕ್ಷಿಪ್ರಜ್ಞೆ ಎಂದರೇನು?

ಬುದ್ಧಿಜೀವಿ ಎಂಬ ಪದದ ಜತೆಜತೆಯಲ್ಲೇ ಬರುವ ಸಾಕ್ಷಿಪ್ರಜ್ಞೆಯ ಆಳ, ಅಗಲಗಳ ವಿಸ್ತಾರ ಅಪಾರವಾದದ್ದು. ಸಾಕ್ಷಿ ಅಂದರೆ ರುಜುವಾತು, ಕಣ್ಣಿನಿಂದ ನೋಡಿದವನು ಎಂದರ್ಥ. ಪ್ರಜ್ಞೆಯ ಅರ್ಥ ಎಚ್ಚರ, ತಿಳಿವಳಿಕೆ. ಈ ಎರಡೂ ಪದಗಳು ಸೇರಿ ಉದ್ಭವಿಸಿರುವ ಈ `ಸಾಕ್ಷಿಪ್ರಜ್ಞೆಎಂದರೇನು ಎಂದು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಈ ಪದದ ಮೋಡಿಯೇ ಅಂತಹದ್ದು. ಯಾವ ಅನುಮಾನವೂ ಬೇಡ ಈ ಸಾಕ್ಷಿಪ್ರಜ್ಞೆ ಎಂಬ ಪದದ ಎಲ್ಲಾ ಹಕ್ಕುಗಳೂ ಬುದ್ಧಿಜೀವಿಗಳಿಗೆ ಮಾತ್ರ ಸೇರಿವೆ.

ಈಗ ಬುದ್ಧಿಜೀವಿಗಳಿಗೆ ಇರುವ ಸಾಕ್ಷಿಪ್ರಜ್ಞೆ ಎಂಬ (ಬಹುಶಃ ಕನ್ನಡ ಸಾಂಸ್ಕೃತಿಕ ಲೋಕದಲ್ಲಷ್ಟೇ ಇರಬಹುದಾದ) ಸವಲತ್ತಿನ ಬಗ್ಗೆ ಹೇಳುವುದಾದರೆ ಅದಕ್ಕೆ ಕೊನೆಯಿಲ್ಲ ಮೊದಲಿಲ್ಲ. ಅದೊಂದು ತರಹ ಆಲ್ ಇಂಡಿಯಾ ಪರ್ಮಿಟ್ ಇರುವ ವಾಹನದಂತೆ. ಮತ್ತೆ ಕೆಲವೊಮ್ಮೆ ವಿದೇಶದ ಪಾಸ್ಪೋರ್ಟ್ ಮತ್ತು ವೀಸಾ ಸಹ ಅದಕ್ಕೆ ಸಿಗುವುದುಂಟು. ಭಾರತದ ಯಾವ ಮೂಲೆಯಲ್ಲಿ ಏನೇ ಅಚಾತುರ್ಯ ನಡೆಯಲಿ ಅದಕ್ಕೆ ಕಾರಣ ಏನು ಎಂದು ತನಿಖೆ ನಡೆಯುವ ಮೊದಲೇ ಈ ಸಾಕ್ಷಿಪ್ರಜ್ಞೆ ಎಂಬ ವಿಶಿಷ್ಟ ಕಣ್ಣು, ಕಿವಿ ಮತ್ತು ಮಿದುಳು ಇರುವ ಬುದ್ಧಿಜೀವಿಗಳ ಪ್ರತಿಕ್ರಿಯೆ ಸಿದ್ಧವಾಗಿರುತ್ತದೆ.

`ನಮ್ಮ ಸದ್ಯದ ರಾಜಕೀಯ ವ್ಯವಸ್ಥೆ ಸರಿಯಿಲ್ಲದಿರುವುದೇ ಇದಕ್ಕೆ ಕಾರಣ, ಇದು ಬದಲಾಗದ ಹೊರತು ಪ್ರಯೋಜನವಿಲ್ಲ, ನಾಳೆ ನಾವು ಧರಣಿ ಕೂರುತ್ತೇವೆ, ಹಕ್ಕೊತ್ತಾಯ ಮಾಡುತ್ತೇವೆ‘ (ಇಲ್ಲಿ ಸದ್ಯದ ರಾಜಕೀಯ ವ್ಯವಸ್ಥೆ ಅಂದರೆ ಇವರಿಗೆ ಅಪ್ರಿಯವಾದ ಪಕ್ಷ ಅಧಿಕಾರದಲ್ಲಿರುವುದು ಎಂದು ಅರ್ಥ). ಯಾರಾದರೂ ಹಿಂದಿನ ಸರ್ಕಾರವಿದ್ದಾಗಲೂ ಇದೆ ರೀತಿ ನಡೆದಿತ್ತು. ಆದರೆ ಆಗ ನೀವು ಸುಮ್ಮನಿದ್ದಿರಲ್ಲ ಏಕೆ ಎಂದು ಕೇಳಿದರೆ `ಆಗಿನ ಸನ್ನಿವೇಶವೇ ಬೇರೆ ಈಗಿನದೇ ಬೇರೆ. ಇದು ಮಾತು ಸೋತ ಭಾರತದ ಲಕ್ಷಣ. ಕಾಲ ಕಳೆದಂತೆ ನಾವು ಬಹುವಚನ ಭಾರತದಿಂದ ಏಕವಚನ ಭಾರತದತ್ತ ಹೋಗುತ್ತಿದ್ದೇವೆಯೋ ಏನೋ ಎಂದು ನನಗೆ ಮುಂದಿನ ದಿನಗಳನ್ನು ನೆನಸಿಕೊಂಡರೆ ಕಳವಳ ಆಗುತ್ತದೆ. ಈಗ ನಮ್ಮ ಜವಾಬ್ದಾರಿ ಹೆಚ್ಚಾಗಿದೆ’ ಎಂದು ಹೇಳಿ ಆ ಪ್ರಶ್ನೆಗೆ ನೇರ ಉತ್ತರಕೊಡದೆ ತಪ್ಪಿಸಿಕೊಳ್ಳುತ್ತಾರೆ. (ಕಾರಣ: ಆಗ ಇದ್ದ ಸರ್ಕಾರ ಇವರಿಗೆ ಪ್ರಿಯವಾಗಿತ್ತು; ಇವರನ್ನು ಓಲೈಸುತ್ತಿತ್ತು ಅಷ್ಟೇ ಗೂಢಾರ್ಥ). ವಿದೇಶದಲ್ಲಿ ಸರ್ಕಾರ ಬದಲಾದರೆ ಆ ದೇಶದ ಪ್ರಜೆಗಳಿಗಿಂತ ಹೆಚ್ಚಾಗಿ ಈ ಸಾಕ್ಷಿಪ್ರಜ್ಞೆಗಳಿಗೆ ಸಂತೋಷ ಅಥವಾ ವ್ಯಸನವಾಗುತ್ತದೆ. ಅದಕ್ಕೊಂದು ಪ್ರತಿಕ್ರಿಯೆ. ಹೀಗೆ ಬೆಳಗ್ಗೆ ಎದ್ದಾಗಿಲಿಂದ ರಾತ್ರಿ ಮಲಗುವ ತನಕ ದೇಶ ವಿದೇಶದ ವಿದ್ಯಮಾನಗಳ ಬಗ್ಗೆಯೇ ಇವರಿಗೆ ಚಿಂತೆ.

ಇನ್ನು ಇವರ ಪ್ರಕಾರ ಕನ್ನಡ ಸಾಹಿತ್ಯ ಒಂದು ಹಂತದ ನಂತರ ನಿಂತ ನೀರಾಗಿದೆ. ಯಾವುದೇ ಭಾಷಣವಿರಲಿ, ಚರ್ಚೆಯಿರಲಿ ಇಲ್ಲ ಲೇಖನ ಬರೆಯಲಿ ಇವರು ಪಟ್ಟಿ ಮಾಡಿರುವ ಒಂದಷ್ಟು ಜನ ಸಾಹಿತಿಗಳನ್ನು ಮತ್ತು ಅವರ ಅದದೇ ಕೃತಿಗಳನ್ನು ಉದಾಹರಿಸಲೇ ಬೇಕು. ಅವರಲ್ಲಿ ಕೆಲವರು ಈಗ ಇಲ್ಲ. ಉಳಿದರು ಬರೆಯುವುದನ್ನು ನಿಲ್ಲಿಸಿ ಬಹಳ ಕಾಲವಾಗಿದೆ. ಇವರ ಓದು ಅಷ್ಟಕ್ಕೇ ನಿಂತುಹೋಗಿದೆಯೇ? ಇವರ ಪಟ್ಟಿಯಲ್ಲಿ ನಾನಾ ಕಾರಣಗಳಿಂದ ಸೇರದೇ ಹೋದ ಹಲವರು ಉತ್ತಮ ಕೃತಿಗಳನ್ನು ಬರೆದಿದ್ದಾರೆ. ಅವರ ಉಲ್ಲೇಖ ಮಾಡುವುದೇ ಇಲ್ಲ. ಹೊಸಬರು ಜೀವನದ ನಾನಾ ಮಗ್ಗಲುಗಳನ್ನು ಅನ್ವೇಷಿಸುತ್ತಿದ್ದಾರೆ. ಯಾರಾದರೂ ಅಂತಹವರ ಬಗ್ಗೆ ಮಾತಾಡಿದರೆ ಬರೆದರೆ `ಅದು ವ್ಯಕ್ತಿ ಪೂಜೆ.; ಅಂಧಾಭಿಮಾನ. ಅವರ ಓದಿನ ರೀತಿಯೇ ಸರಿಯಿಲ್ಲ‘. ಇವರು ಹಿಂದೆ ಮಾಡಿದ್ದೂ ಅದೇ ಅಲ್ಲವೇ ಅಂದರೆ ಅಲ್ಲ. ಕಾರಣ ಅದು ಸಾಕ್ಷಿಪ್ರಜ್ಞೆಯ ಮಾತು ಬರಹ. ಅಂದರೆ ಈ ಬುದ್ಧಿಜೀವಿಗಳು ನಿರ್ಧರಿಸಿದ ಒಂದಷ್ಟು ಜನರಿಗೆ ಮಾತ್ರ ನಮ್ಮ ದೇಶ, ಭಾಷೆ, ಸಮಸ್ಯೆ, ಇತ್ಯಾದಿಗಳ ಬಗ್ಗೆ ಮಾತಾಡುವ, ಬರೆಯುವ ಸಾಹಿತ್ಯಿಕ ಶಕ್ತಿ ಇದೆ. ಬೇರೆಯವರು ಅದು ಹಾಗಲ್ಲ ಹೀಗೆ ಎಂದು ಹೇಳಿದರೆ ಇವರಿಗೆ ಅದು ಪ್ರಭುತ್ವವಾದಿ, ವಸಾಹತುಶಾಹಿ ನಿಲುವಾಗಿ ಕಾಣುತ್ತದೆ.

ಸಾಕ್ಷಿಪ್ರಜ್ಞೆಯವರು ಶಾಂತಿ, ಸಹನೆ ಮತ್ತು ಅಹಿಂಸೆ ತಮ್ಮ ಮೂಲಗುಣ ಎನ್ನುತ್ತಾರೆ. ಹಾಗೆಯೇ, ಅಶಾಂತಿ, ಅಸಹನೆ ಮತ್ತು ಹಿಂಸೆಯನ್ನೂ ಕಾಲ ಕಾಲಕ್ಕೆ ತಕ್ಕಂತೆ ಬೆಂಬಲಿಸುವುದು ಇವರ ಇನ್ನೊಂದು ಮುಖ. ಅದು ಮಾತು ಕಳೆದುಕೊಂಡ ವರ್ಗದವರ ಕೊನೆಯ ಅಸ್ತ್ರ ಎನ್ನುತ್ತಾರೆ. ನಕ್ಸಲಿಸಂ, ಮಾವೋವಾದಿಗಳನ್ನು ಸರಕಾರ ನಿಗ್ರಹಿಸಿದರೆ ಅದು ಇವರಿಗೆ ಮಾನವ ಹಕ್ಕುಗಳ ದಮನವಾಗಿ ಕಾಣುತ್ತದೆ. ಆದರೆ ನಕ್ಸಲರಿಂದ, ಮಾವೋವಾದಿಗಳಿಂದ ಪ್ರಾಣ ಕಳೆದುಕೊಂಡವರ ಬಗ್ಗೆ ಇವರು ಮಾತಾಡುವುದಿಲ್ಲ.

ಸಾಕ್ಷಿಪ್ರಜ್ಞೆಯ ಮುಂದಾಳುಗಳ ಪ್ರಕಾರ ನಕ್ಸಲ್ ಮತ್ತು ಮಾವೋವಾದಿಗಳು ಗ್ರಾಮ ಸ್ವರಾಜ್ಯ ಸ್ಥಾಪಿಸುವ ಮತ್ತು ನಮ್ಮ ದೇಶದ ಸಂಪನ್ಮೂಲಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ವಸಾಹತುಶಾಹಿ ಮತ್ತು ಜಾಗತೀಕರಣ ತರುವ ಅಪಾಯಗಳಿಂದ ನಾವು ಪಾರಾಗಬಹುದಂತೆ. ಇವರಿಗೆ ಬೆಂಬಲಕೊಡುವುದು ಬುದ್ಧಿಜೀವಿಗಳ ಸಾಕ್ಷಿಪ್ರಜ್ಞೆಯ ಕೆಲಸ. ಹೀಗೆ ತಮ್ಮ ಸಾಕ್ಷಿಪ್ರಜ್ಞೆಯ ಕರೆಗೆ ಓಗೊಟ್ಟು ಹೊರಗಿನಿಂದ ಬೆಂಬಲ ಕೊಟ್ಟ ಆರೋಪದ ಮೇಲೆ ಕೆಲವು ಬುದ್ಧಿಜೀವಿಗಳನ್ನು ಸರ್ಕಾರ ಬಂಧಿಸಿದಾಗ ನಿಮ್ಮ ಜತೆ ನಾವಿದ್ದೇವೆ ಎಂದು ಒಗ್ಗಟ್ಟು (Soiಜಚಿಡಿiಣಥಿ) ತೋರಿಸುವ ಸಲುವಾಗಿ ನಮ್ಮ ರಾಜ್ಯದ ಬುದ್ಧಿಜೀವಿಗಳು `ನಾನು ನಗರ ನಕ್ಸಲ‘ (Uಡಿbಚಿಟಿ ಓಚಿxಚಿಟ) ಎಂಬ ರಟ್ಟಿನ ಫಲಕವನ್ನು ಕೊರಳಿಗೆ ನೇತು ಹಾಕಿಕೊಂಡು ರಸ್ತೆ ಬದಿಯಲ್ಲಿ ನಿಂತುಕೊಂಡು ಸರ್ಕಾರಕ್ಕೆ ಸವಾಲ್ ಹಾಕಿದರು. ಆ ಮೂಲಕ ಭಾರತದ ಸುದ್ದಿವಾಹಿನಿಗಳಲ್ಲಿ ಸುದ್ದಿಯಾದರು.

ಕನ್ನಡ ಸಾಹಿತ್ಯ ಪರಿಷತ್ತನ್ನು ಮತ್ತು ಅದು ನಡೆಸುವ ಸಾಹಿತ್ಯ ಸಮ್ಮೇಳನಗಳನ್ನು `ರಾಜಕಾರಣಿಗಳ ಕೃಪಾಪೆೀಷಿತ ನಾಟಕ ಮಂಡಳಿ‘, `ಪುರೋಹಿತಶಾಹಿಯ ಪ್ರತೀಕಎಂದು ಹಿಗ್ಗಾಮುಗ್ಗಾ ಟೀಕಿಸಿದ ಬುದ್ಧಿಜೀವಿಗಳು ನಾಲ್ಕು ದಶಕಗಳ ಹಿಂದೆ ಪರ್ಯಾಯವಾಗಿ ಬಂಡಾಯ ಸಾಹಿತ್ಯ ಸಮ್ಮೇಳನವನ್ನೂ ನಡೆಸಿದರು. ಅದಕ್ಕೊಂದು ಸೈದ್ಧಾಂತಿಕ ಕಾರಣವನ್ನೂ ಕೊಟ್ಟರು. ನಂತರದಲ್ಲಿ ಈ ಬುದ್ಧಿಜೀವಿಗಳೇ ಅದೇ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರು ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿ ಮೈಸೂರು ಪೇಟ ಧರಿಸಿ ಧನ್ಯರಾದರು. ಆಗ ಇವರ ಸಾಕ್ಷಿಪ್ರಜ್ಞೆ ರಜೆ ತೆಗೆದುಕೊಂಡಿತ್ತು.

ನೀವೇನಂತೀರಿ…?

ಒಂದು ವಲಯಗಳಲ್ಲಿ ಗೌರವ ಗಿಟ್ಟಿಸಿಕೊಳ್ಳುವ ‘ಬುದ್ಧಿಜೀವಿ’ ಪದ ಇನ್ನೊಂದು ಪಂಗಡದಲ್ಲಿ ಗೇಲಿಗೆ ಒಳಗಾಗುವುದನ್ನು ಕಾಣುತ್ತೇವೆ. ಹಾಗೆಯೇ ಸಾಕ್ಷಿಪ್ರಜ್ಞೆಗೆ ಪ್ರತ್ಯಕ್ಷ ಸಾಕ್ಷಿಗಳನ್ನು ಹುಡುಕುವುದು ಕಷ್ಟ! ಈ ಬರಹದಲ್ಲಿ ಲೇಖಕರು ಇವೆರಡೂ ಪದಗಳನ್ನು ತಮ್ಮದೇ ಆದ ರೀತಿ ಮತ್ತು ನೀತಿಯಲ್ಲಿ ವ್ಯಾಖ್ಯಾನಿಸಲೋ, ವ್ಯಂಗ್ಯವಾಡಲೋ ಬಳಸಿದ್ದಾರೆ. ಅವರ ವಾದವನ್ನು ಎಲ್ಲರೂ ಇಡೀಯಾಗಿ ಒಪ್ಪಬೇಕು ಅಥವಾ ತಿರಸ್ಕರಿಸಬೇಕು ಎಂದೇನೂ ಇಲ್ಲ. ಆರೋಗ್ಯಕಾರಿ ಸಂವಾದಕ್ಕೆ, ಅಭಿಪ್ರಾಯಕ್ಕೆ, ಭಿನ್ನಾಭಿಪ್ರಾಯಕ್ಕೆ ಮುಕ್ತ ವೇದಿಕೆ ಒದಗಿಸಲು ಸಮಾಜಮುಖಿ ಸದಾ ಸಿದ್ಧ, ಬದ್ಧ. ನೀವೂ ನಿಮ್ಮ ಚಿಂತನೆ ಹರಿಯಬಿಡಿ.

ಈ ಬುದ್ಧಿಜೀವಿಗಳು ರಾಜಕೀಯದ ಕಟುಟೀಕಾಕಾರರು. ಆದರೂ ಎಂ.ಎಲ್.ಸಿ. ಆಗಿ ವಿಧಾನಸೌಧ ಪ್ರವೇಶಿಸಿದರು. ಎಲ್ಲಾ ಸವಲತ್ತುಗಳನ್ನು ಅನುಭವಿಸಿದರು. ಅದೇ ರೀತಿ ರಾಜ್ಯ ಹಾಗೂ ಕೇಂದ್ರದ ಸಾಹಿತ್ಯ, ಸಾಂಸ್ಕೃತಿಕ ಮತ್ತಿತರ ಸಂಸ್ಥೆಗಳ ಸದಸ್ಯರಾದರು, ಕೆಲವರು ಅಧ್ಯಕ್ಷರೂ ಆದರು. ಆಗ ಇವರ ಶಿಷ್ಯರು `ಈ ಸ್ಥಾನವನ್ನು ಇವರಿಗೆ ಕೊಡುವ ಮೂಲಕ ಸರ್ಕಾರ ತನ್ನನ್ನು ತಾನೇ ಗೌರವಿಸಿಕೊಂಡಿದೆ. ಅರ್ಹ ವ್ಯಕ್ತಿಗಳನ್ನು ಗೌರವಿಸುವ ನಮ್ಮ ಪರಂಪರೆಗೆ ಇದು ಮತ್ತೊಂದು ಉದಾಹರಣೆಎಂದು ಹೇಳಿಕೆ ಕೊಟ್ಟರು. ಸನ್ನಿವೇಶ, ಸರ್ಕಾರ ಮತ್ತು ಕಾಲ ಬದಲಾದಂತೆ ಸಾಕ್ಷಿಪ್ರಜ್ಞೆಯ ಅರ್ಥವ್ಯಾಪ್ತಿಯೂ ಹಿಗ್ಗುತ್ತಾ ಹೋಗುತ್ತದೆ ಎಂಬುದಕ್ಕೆ ಇಂಥ ಹತ್ತು ಉದಾಹರಣೆಗಳನ್ನು ಕೊಡಬಹುದು. ತಾತ್ಪರ್ಯ ಒಂದೇ `ಗಾಳಿ ಬಂದಾಗ ತೂರಿಕೋಅಷ್ಟೇ.

ಆದರೆ ಇಷ್ಟು ಸರಳವಾಗಿ ಹೇಳಿದರೆ ಸಾಕ್ಷಿಪ್ರಜ್ಞೆಯ ಕೊಂಬಿಗೆ ಅವಮಾನವಲ್ಲವೇ? `ರಾಜಕೀಯ ಮತ್ತು ಅಧಿಕಾರಶಾಹಿ ಎಂಬುದು ನಮ್ಮ ಎದುರಿಗಿರುವ ವಾಸ್ತವ. ಆ ವ್ಯವಸ್ಥೆಯೊಳಗಿದ್ದೂ ಅದರ ಮೂಲಕ ಅರ್ಥಪೂರ್ಣವಾದದ್ದನ್ನು ಸಾಧಿಸಲು ಸಾಧ್ಯವೇ ಎಂಬುದು ಸಾಹಿತಿಗಳ ಸಾಮಾಜಿಕ ಪ್ರಜ್ಞೆ ಮತ್ತು ಮೌಲ್ಯಗಳನ್ನು ನಿಕಷಕ್ಕೆ ಒಡ್ಡಲು ಇರುವ ಒಂದು ಸಾಧನ. ಇದರಿಂದ ವಿಮುಖರಾಗುವುದು ಜನರಿಗೆ ನಾವು ಮಾಡುವ ವಂಚನೆಎಂದು ಗಂಭೀರವದನರಾಗಿ ಹೇಳುತ್ತಾರೆ.

ಐದಾರು ವರ್ಷಗಳ ಹಿಂದೆ ಈ ನಮ್ಮ ಸಾಕ್ಷಿಪ್ರಜ್ಞೆಯ ವಕ್ತಾರರಿಗೆ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಅನಿಸಿತು. ಸರಿ ಇವರಲ್ಲಿ ಕೆಲವರು ಕೇಂದ್ರ ಸಾಹಿತ್ಯ ಅಕಾಡೆಮಿ ಕೊಟ್ಟ ಪ್ರಶಸ್ತಿಗಳನ್ನು ಹಿಂತಿರುಗಿಸುವ `ಪ್ರಶಸ್ತಿ ವಾಪ್ಸಿಎಂಬ ಪ್ರಹಸನ ನಡೆಸಿದರು. ಇನ್ನು ಕೆಲವರು ಕೇಂದ್ರ ಸರ್ಕಾರದ ಕೆಲವು ಸಂಸ್ಥೆಗಳ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅಸಹಿಷ್ಣುತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಇವೆಲ್ಲಾ ಕೇವಲ ನೆಪ ಅಷ್ಟೇ. ಸುಮಾರು ವರ್ಷಗಳಿಂದ ಇವರನ್ನು ಪ್ರಶ್ನಿಸುವವರು ಯಾರೂ ಇರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರರಾದ ಇವರನ್ನು ಮಾತ್ರ ಯಾರೂ ಪ್ರಶ್ನಿಸಬಾರದು. ಹೀಗೆ ಪ್ರಶ್ನಿಸಿದ್ದೆ ತಡ ಇವರು ಹೆಡೆ ತುಳಿಸಿಕೊಂಡ ಹಾವಿನಂತೆ ಬುಸುಗುಟ್ಟಿದರು. ಭಾರತದ ವಿರುದ್ಧ ವಿದೇಶದ ಪತ್ರಿಕೆಗಳಿಗೆ ಲೇಖನ ಬರೆದರು; ಇವರನ್ನು ಓಲೈಸುವ ದೇಶೀ ಸುದ್ದಿವಾಹಿನಿಗಳಲ್ಲಿ ಪ್ಯಾನೆಲ್ ಚರ್ಚೆ ಮಾಡಿದರು. ಭಾರತದಲ್ಲಿ ಸಾಮಾನ್ಯ ಜನರ ಜೀವನ ಅಪಾಯದಲ್ಲಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿದರು. ಆಮೇಲೆ ತಣ್ಣಗಾದರು. ಆದರೆ ಇದು ತಾತ್ಕಾಲಿಕ. ತಕ್ಕ ಸಮಯಕ್ಕೆ ಕಾಯುತ್ತಿದ್ದಾರೆ ಅಷ್ಟೇ.

*ಲೇಖಕರು ನಿವೃತ್ತ ಪೋಸ್ಟ್ ಮಾಸ್ಟರ್. ಹೊಸ ಕನ್ನಡ ಸಾಹಿತ್ಯದ ಹವ್ಯಾಸಿ ಓದುಗ. ಆಗಾಗ ಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳಿಗೆ ಮತ್ತು ಕನ್ನಡ ಬ್ಲಾಗ್ ಗಳಿಗೆ ಸಾಹಿತ್ಯ ಸಂಬಂಧಿ ಲೇಖಗಳನ್ನು ಬರೆಯುತ್ತಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ.

Leave a Reply

Your email address will not be published.