ಬೇಂದ್ರೆ ಕಾವ್ಯಕ್ಕೊಬ್ಬ ಯಾಸ್ಕ: ಡಾ.ಜಿ.ಕೃಷ್ಣಪ್ಪ

 

ಕೃಷ್ಣಪ್ಪನವರು ‘ಮುತ್ತು ಮುಳಗ  ಕುಂಗನಂತೆ, ಬೇಂದ್ರೆ ಕಾವ್ಯ ಸಾಗರದಲ್ಲಿ ಈಜಾಡಿ, ಪಾತಾಳಗರಡಿ ಹಿಡಿದು ಜಾಲಾಡಿ, ಅಲ್ಲಿರುವ ಅನನ್ಯ ಮುಕ್ತಕ ಪದಗಳಿಗೆ ನಿರುಕ್ತವನ್ನು ನೀಡುತ್ತಾರೆ.

-ಪ್ರೊ. ಶಿವರಾಮಯ್ಯ

 


 

ಬೇಂದ್ರೆ ಕಾವ್ಯ: ಪದನಿರುಕ್ತ

ಡಾ.ಜಿ.ಕೃಷ್ಣಪ್ಪ

ಪುಟ: 512 ದರ: ರೂ.480

ವಂಶಿ ಪಬ್ಲಿಕೇಷನ್ಸ್

ಟಿ.ಬಿ.ಬಸ್ ಸ್ಟಾಂಡ್ ಹತ್ತಿರ, ಬಿ.ಎಚ್.ರಸ್ತೆ

ನೆಲಮಂಗಲ, ಬೆಂಗಳೂರು 562123

ದೂ: 99165 95916

 


ಡಾ.ಜಿ.ಕೃಷ್ಣಪ್ಪನವರು ಬೇಂದ್ರೆ ಕಾವ್ಯ ಜೇನಿನ ಭೃಂಗ. ಈ ಭೃಂಗ “ಏನು ಏನು? ಜೇನು ಜೇನು? ಎನೆ ಗುಂಗುಂಗಾನಾ, ಓಂಕಾರದ ಶಂಖನಾದಕಿಂತ ಕಿಂಬೆದೂನಾ” ಎಂದು ತನ್ನ ಜೀವಮಾನ ತುಂಬ ಅಂಬಿಕಾತನಯದತ್ತರ ಕಾವ್ಯಲೋಕದ ಜೇನ ಹೀರಲು ಗುಂಗುಂ ಗಾನಾ ಮಾಡುತ್ತಾ. ಮುತ್ತಿದಂತೆ ಭಾಸವಾಗುತ್ತದೆ. ಇದು ಉತ್ಪ್ರೇಕ್ಷೆಯಲ್ಲ. ತನು ಮನ ಧನ ಸಮೇತ ಬೇಂದ್ರೆ ಕಾವ್ಯ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕೃಷ್ಣಪ್ಪನವರ ಜೀವನಯಾನವನ್ನು ಹತ್ತಿರದಿಂದ ಕಂಡವರಿಗೆ ಅನುಭವಕ್ಕೆ ಬರುವ ವಾಸ್ತವ.

ಆಟೊಮೊಬೈಲ್ ಇಂಜಿನಿಯರ್ ಆದ ಕೃಷ್ಣಪ್ಪನವರು ಬೇಂದ್ರೆ ಕಾವ್ಯಕ್ಕೆ ಮಾರು ಹೋಗಿ ವೃತ್ತಿಯಲ್ಲಿ ಮೋಟರು ವಾಹನಗಳ ಪರಿವೀಕ್ಷಕರಾಗಿ ಪ್ರವೃತ್ತಿಯಲ್ಲಿ ಬೇಂದ್ರೆ ಕಾವ್ಯಾಸಕ್ತರಾಗಿ ಕಳೆದ ಮೂವತ್ತು ವರ್ಷ ಆ ಕಾವ್ಯಲೋಕದ ಹೃದಯ ವಿಹಾರಿಯಾಗಿ ತಾವು ಕಂಡುಂಡ ಸವಿಯ ರಸಿಕ ಜನರಿಗೂ ಉಣಬಡಿಸುತ್ತಾ ಬಂದದ್ದು ಬೆರಗು ಹುಟ್ಟಿಸುವಂತಿದೆ. ಕೃಷ್ಣಪ್ಪನವರು ಇದುವರೆಗೆ ಪ್ರಕಟಿಸಿರುವ 18 ಕೃತಿಗಳಲ್ಲಿ 12 ಕೃತಿಗಳು ಬೇಂದ್ರೆ ಸಾಹಿತ್ಯ ಕುರಿತಾಗಿವೆ. ಬೇಂದ್ರೆ ಕುರಿತ ಇವರ ಕಾವ್ಯ ಕುತೂಹಲಕ್ಕೆ ಕವಿಪ್ರೀತಿಗೆ ಈ ಪುಸ್ತಕಗಳೇ ಸಾಕ್ಷಿ.

ಇಂಜಿನಿಯರ್ ಆಗಿದ್ದ ಇವರು ಹೊಟ್ಟೆಪಾಡಿಗೆ ಸರ್ಕಾರಿ ಉದ್ಯೋಗಿಯಾಗಿದ್ದುಕೊಂಡೇ ಬೇಂದ್ರೆ ಕಾವ್ಯದ ‘ತಿಕ್ಲು’ ಹತ್ತಿ ವರ್ಗಾವಣೆಯಾಗಿ ಹೋದಲ್ಲಿ ಬಂದಲ್ಲಿ ಆ ಜಾನಪದ ಪ್ರತಿಭೆ ಬೇಂದ್ರೆಯವರ ಸಾಹಿತ್ಯ ಪ್ರವೇಶಕ್ಕೆ ಹೆಣಗಾಡಿದ್ದುಂಟು. ಅದಕ್ಕಾಗಿ ಮುಕ್ತ ವಿ.ವಿ.ದಲ್ಲಿ ಕನ್ನಡ ಎಂ.ಎ. ಪದವಿ ಪಡೆದರು. ಅದು ಇನ್ನೂ ಸಾಲದು ಎಂದು ಬೇಂದ್ರೆ ಕಾವ್ಯವನ್ನು ಕುರಿತು “ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ” ಎಂದು ಮಹಾ ಪ್ರಬಂಧವನ್ನೇ ಬರೆದು ಡಾಕ್ಟರೇಟ್ ಪದವಿಯನ್ನೂ ಪಡೆದರು. ಕವಿಯ ಮೇಲಿನ ಪ್ರೀತಿಗೆ ಇಷ್ಟು ಸಾಲದೆಂಬಂತೆ, ಬೇಂದ್ರೆಯವರ ಕಾವ್ಯ ಪ್ರಸಾರಕ್ಕೆ ತೊಡಗಿಸಿಕೊಂಡ ಕೃಷ್ಣಪ್ಪನವರು ನಾಡಿನ ತುಂಬ ಓಡಾಡಿಕೊಂಡು ಶಾಲಾ ಕಾಲೇಜುಗಳಲ್ಲಿ ಬೇಂದ್ರೆ ಕವನ-ಗಾಯನ ಸ್ಪರ್ಧೆಗಳನ್ನೇರ್ಪಡಿಸಿ ಬಹುಮಾನಿತರಿಗೆ ಬೇಂದ್ರೆ ಕವನ ಸಂಕಲನಗಳ ಬಹುಮಾನ ಕೊಡುತ್ತ ಬಂದಿದ್ದಾರೆ.

ಬೇಂದ್ರೆ ಹೆಸರಿನಲ್ಲಿ ಅವರ ಕಾವ್ಯ ಲೇಖಕರಿಗೆ ಸನ್ಮಾನಿಸುತ್ತಲೂ ಬಂದಿದ್ದಾರೆ. ಈ ನಿಟ್ಟಿನಲ್ಲಿ ಈವರೆಗೆ ಸುಮಾರು 600 ಕಾರ್ಯಕ್ರಮಗಳನ್ನು ಮಾಡಿದ್ದಾರೆಂದರೆ ಯಾರಿಗಾದರೂ ಮೂಗಿನ ಮೇಲೆ ಬೆರಳೇರುತ್ತದೆ. ಯಾವುದಾದರೊಂದು ವಿ.ವಿ. ಅಥವಾ ಅಧ್ಯಯನ ಪೀಠ ಅಥವಾ ಸಾಹಿತ್ಯ ಅಕಾಡೆಮಿ ಅಥವಾ ಸಾಹಿತ್ಯ ಪರಿಷತ್ತು ಮಾಡಬಹುದಾದಷ್ಟು ಬೇಂದ್ರೆ ಕುರಿತ ಕಾರ್ಯಕ್ರಮಗಳನ್ನು ಕೃಷ್ಣಪ್ಪನವರು ಸವ್ಯಸಾಚಿ ಎಂಬಂತೆ ನಿರ್ವಹಿಸುತ್ತಿರುವುದು ಆಶ್ಚರ್ಯದ ಸಂಗತಿ. ಅವರ ವಿದ್ಯಾಗುರು ಮೈಸೂರಿನ ಪ್ರೊ. ಕೆ. ಅನಂತರಾಮು ಅವರು ಬಣ್ಣಿಸಿರುವಂತೆ ‘ಕೃಷ್ಣಪ್ಪನವರಿಗೆ ಕೃಷ್ಣಪ್ಪನವರೇ ಸಾಟಿ’. ಈ ಎಲ್ಲಾ ಕಾರಣದಿಂದ ನಾಡಿನ ಜನ ಇವರನ್ನು ‘ಬೇಂದ್ರೆ ಕೃಷ್ಣಪ್ಪ’ ಎಂದೇ ಗುರ್ತಿಸುತ್ತಿರುವುದು ಆಶ್ಚರ್ಯವಲ್ಲ.

ಪ್ರಸ್ತುತ, ಅಂಬಿಕಾತನಯದತ್ತರ ಕಾವ್ಯ ಲೋಕದಲ್ಲಿ ವಿಹರಿಸುತ್ತಾ ಹೊರಟ ಈ ಕಾವ್ಯ ಭೃಂಗ ತನ್ನೆಲ್ಲಾ ಜೀವಿತ ಶ್ರಮವನ್ನೂ ಸೃಜನಶಕ್ತಿಯನ್ನೂ ಇದ್ದ ಹಣವನ್ನು ಕೂಡಿಸಿಕೊಂಡ “ಬೇಂದ್ರೆ ಕಾವ್ಯ; ಪದನಿರುಕ್ತ” ಎಂಬ ಮತ್ತೊಂದು ಮಹತ್ಕøತಿಯನ್ನು ಬೇಂದ್ರೆ ಸಹೃದಯ ಬಳಗಕ್ಕೆ ಬಹುಮಾನವೆಂಬಂತೆ ಪ್ರಕಟಿಸಿ ಧನ್ಯರಾಗಿರುತ್ತಾರೆ. ಏನಿದು ‘ಬೇಂದ್ರೆ ಕಾವ್ಯ: ನಿರುಕ್ತ?’ ಎಂದು ಯಾರಾದರೂ ಕೇಳಬಹುದು. ಈ ಕುರಿತು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಗುರ್ತಿಸಿರುವಂತೆ, ಇದು ‘ಬೇಂದ್ರೆ ಕಾವ್ಯದ ಒಳ ತಿರುಳಿನ ನಿರುಕ್ತ’ ಎಂದೇ ಹೇಳಬಹುದು. ಪ್ರಾಚೀನ ಕಾಲದಲ್ಲಿ ಯಾಸ್ಕನೆಂಬ ಋಷಿ ವೇದಗಳಲ್ಲಿ ಬರುವ ವಿಶಿಷ್ಟ ಪದಗಳಿಗೆ ನಿರುಕ್ತವನ್ನು (ವಿವರಣೆ) ನೀಡಿ ಮಹದುಪಕಾರ ಮಾಡಿರುತ್ತಾನೆ. ಇದಕ್ಕಾಗಿ ಕೃಷ್ಣಪ್ಪನವರು ಮಾಡಿದ ಕ್ಷೇತ್ರಕಾರ್ಯ ಕುರಿತು ಹೀಗೆ ಹೇಳಿಕೊಂಡಿದ್ದಾರೆ:

ಬೇಂದ್ರೆ ಕಾವ್ಯದ ದೇಸಿ ಪದಗಳ ಅರ್ಥವನ್ನು ತಿಳಿಯಲು ನಾಡಿನಾದ್ಯಂತ ನಾನು ಪ್ರವಾಸ ಮಾಡಿದೆ. ರೈತರನ್ನು, ಕುಶಲಕರ್ಮಿಗಳನ್ನು, ಶಿಕ್ಷಕರನ್ನು, ಪ್ರಾಧ್ಯಾಪಕರನ್ನು, ಸಹೃದಯ ಸ್ನೇಹಿತರನ್ನು ಕಂಡು ನನಗೆ ಅರ್ಥವಾಗದ ಪದ, ಪದಸಮುಚ್ಛಯಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿದೆ. ಪದಗಳು ಅರ್ಥ-ಭಾವದಲ್ಲಿ ಒಂದಾಗಿ ನಾದಮಯವಾಗಿರುವಾಗ ಅದು ನನಗೆ ಅರ್ಥವಾಗಿಲ್ಲವೆಂದು ಮೌನವಾಗಿ ಆ ಕವನದ ಸಾಲುಗಳನ್ನು ಧ್ಯಾನಿಸಿದೆ. ಆಗ ನನ್ನ ಅಳವಿಗೆ ಸಿಕ್ಕಷ್ಟು ಅರ್ಥವನ್ನು ನೀಡಿದೆ.

ಲೇಖಕರು ಬೇಂದ್ರೆಯವರ ಪ್ರಾರಂಭಿಕ ಕವನ ಸಂಗ್ರಹದಿಂದ ಮೊದಲುಗೊಂಡು ಅವರ ಮರಣೋತ್ತರ ಪ್ರಕಟವಾದ ಕವನ ಸಂಕಲನದವರೆಗೂ ತಮ್ಮ ‘ನಿರುಕ್ತ’ದಲ್ಲಿ ಹೇಳಿರುತ್ತಾರೆ. ತಮಿಳಿನ ಶಾಸ್ತ್ರ ಗ್ರಂಥ ‘ತೋಲ್ಗಾಪ್ಪಿಯಂ’ ನಲ್ಲಿ ವಿವರಿಸಿರುವಂತೆ, ಮನುಷ್ಯರ ವೈಯಕ್ತಿಕ ಭಾವನೆಗಳನ್ನು ಅಭಿವ್ಯಕ್ತಿಸುವ ಕಾವ್ಯವನ್ನು ‘ಅಗಂ’ ಎಂದೂ, ಮನುಷ್ಯರ ಸಾಮಾಜಿಕ ಬದುಕನ್ನು ಅಭಿವ್ಯಕ್ತಿಸುವ ಕಾವ್ಯವನ್ನು ‘ಪುರಂ’ ಎಂದೂ ವಿಂಗಡಿಸಲಾಗಿದೆ. ‘ಅಗಂ’ ಎಂಬುದು ‘ಒಳ’ ಎಂದೂ ‘ಮನಸ್ಸು’ ಎಂದೂ ಅರ್ಥಕೊಟ್ಟರೆ, ‘ಪುರಂ’ ಎಂಬುದು ‘ಅಗಂ’ ಬದುಕಿಗೆ ಹೊರತಾದ ಸಾರ್ವಜನಿಕ ಬದುಕಾಗಿರುತ್ತದೆ ಎಂದೂ ವಿವರಿಸಲಾಗುತ್ತದೆ. ಎಂದರೆ ‘ಪುರಂ’ ಎಂಬುದು (ಹೊರ) ಜೀವನದಲ್ಲಿ ನಡೆಯುವ ಯುದ್ಧ, ವೀರ, ದಾನಾದಿ ವಿಷಯಗಳ ಅಡಿಪಾಯದಲ್ಲಿ ರಚಿತವಾದ ಹಾಡುಗಳು. ‘ಸಂಗಂ’ (ಪಾಂಡ್ಯ, ಚೋಳ, ಚೇರ) ಸಾಹಿತ್ಯ ಕಾಲದ ಚಾರಣ ಕವಿಗಳು ತಾವು ಬದುಕಿದ ಕಾಲ ಘಟ್ಟದಲ್ಲಿ ಅವರು ಕಂಡುಂಡ ಲೋಕಾನುಭವಗಳನ್ನು ತಂತಿವಾದ್ಯ ವಿಶೇಷವೊಂದರಲ್ಲಿ ನುಡಿಸುತ್ತಾ ದೇಶ ಪರ್ಯಟನೆ ಮಾಡುತ್ತಿದ್ದರೆಂದು ತಿಳಿದು ಬರುತ್ತದೆ.

ನಮ್ಮ ‘ಶಬ್ದ ಗಾರುಡಿಗ’ರಾದ ದ.ರಾ. ಬೇಂದ್ರೆಯವರು ಸಹ ಆ ‘ಸಂಗಂ’ ಕವಿಗಳಂತೆ ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂದು ಹಾಡು ಕಟ್ಟಿ ಹಾಡಿಕೊಳ್ಳುತ್ತಾ ತಿರುಗಾಟ ಮಾಡಿದ ಅನಿಕೇತನ ಮನೋಭಾವದ ಚಾರಣ ಕವಿ. ಅವರ ಕಾವ್ಯ ಎಂದರೆ ‘ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ’. ಅದರ ಗುಂಗುಂಗಾನ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ’ ಜಗದಗಲ ಮುಗಿಲಗಲ ಪಸರಿಸುತ್ತದೆ. ಅದರಲ್ಲಿ ಉತ್ತರ ಕರ್ನಾಟಕದ ಕನ್ನಡ ಭಾಷೆ ಪುನರ್ ಸೃಷ್ಟಿ ಪಡೆದಿದೆ. ಅನೇಕ ವೇಳೆ ನಾವು ಕೇಳುವ ಸಂಗೀತದ ವಾಚ್ಯಾರ್ಥ ತಿಳಿಯದಿದ್ದರೂ ಆ ಸಂಗೀತಗಾರನ ನಾದ ಸ್ವರಲಯ ಲಾಲಿತ್ವದಲ್ಲಿ ತೇಲಿ ರಸಾಸ್ವಾದ ಪಡೆಯುತ್ತೇವೆ. ಆದರೆ ಆ ಹಾಡಿನ ಸಾಹಿತ್ಯ ಏನು ಅದರ ಅರ್ಥ ಏನು ಎಂಬುದು ತಿಳಿದರೆ ಇನ್ನಷ್ಟು ರಸಾನಂದ ಲಭಿಸಬಹುದಲ್ಲವೆ?

ಸಂಗೀತದ ಹಾಗೇ ಬೇಂದ್ರೆಯವರ ಕಾವ್ಯ. ಅದರ ಗಾನ ಮಾಧುರ್ಯದಿಂದಲೇ ಓದುಗನನ್ನು ಸೂರೆಗೊಂಡರೂ ಅನೇಕ ವೇಳೆ ಆ ಕಾವ್ಯಾಂತರಂಗದ ಗೂಡಾರ್ಥ ಏನು ಎಂದು ಕೇಳಿದರೆ ತಬ್ಬಿಬ್ಬಾಗಿಬಿಡುತ್ತೇವೆ. ಮಾನ್ಯ ಡಾ.ಜಿ. ಕೃಷ್ಣಪ್ಪನವರು ಸಹೃದಯರ ಈ ಕಷ್ಟವನ್ನು ಪಾರು ಮಾಡಿ ಬೇಂದ್ರೆ ಕಾವ್ಯದಲ್ಲಿ ಕಂಡು ಬರುವ ಅಂಥ ಕಷ್ಟ-ಕ್ಲಿಷ್ಟ ಪದಗಳಿಗೆ ಜನಪದದಲ್ಲಿ ಬಳಕೆಯಾಗಿರುವ ಸಂದರ್ಭಗಳನ್ನು ಕ್ಷೇತ್ರಕಾರ್ಯ ನಡೆಸಿ ಗಮನಿಸಿ, ಉಲ್ಲೇಖಿಸಿ, ವಿವರಣೆಯನ್ನು ನೀಡುತ್ತಾರೆ. ಆಗ ಓದುಗನಿಗೆ ಕವಿಯ ಕಾವ್ಯಾರ್ಥ ಏನೆಂದು ಜಲಕ್ಕನೆ ಹೊಳೆದು ಬಿಡುತ್ತದೆ.

ಕೃಷ್ಣಪ್ಪನವರು ‘ಮುತ್ತು ಮುಳಗ’  ಕುಂಗನಂತೆ. ಬೇಂದ್ರೆ ಕಾವ್ಯ ಸಾಗರದಲ್ಲಿ ಈಜಾಡಿ, ಪಾತಾಳಗರಡಿ ಹಿಡಿದು ಜಾಲಾಡಿ, ಅಲ್ಲಿರುವ ಅನನ್ಯ ಮುಕ್ತಕ ಪದಗಳಿಗೆ ನಿರುಕ್ತವನ್ನು ನೀಡುತ್ತಾರೆ. ಅವರಿಲ್ಲಿ ಅನುಸರಿಸಿರುವ ಮಾರ್ಗವೆಂದರೆ, ಮೊದಲು ಪದರೂಪವನ್ನು ಕೊಟ್ಟು, ಅದು ಬಳಕೆಯಾಗಿರುವ ಕವಿತೆಯ ವಾಕ್ಯವೃಂದವನ್ನು ಉಲ್ಲೇಖಿಸುತ್ತಾರೆ, ತದನಂತರ ಅದರ ಅರ್ಥ, ಕೆಲವೊಮ್ಮೆ ಪ್ರತಿಪದಾರ್ಥ, ಇಲ್ಲವಾದರೆ ಒಂದಕ್ಕಿಂತ ಹೆಚ್ಚು ಅರ್ಥ ಇರುವುದನ್ನೂ ಅದರ ಅಲಂಕಾರ ರೂಪ ಸ್ವರೂಪವನ್ನೂ ಅಲ್ಲಿಗಲ್ಲಿಗೆ ನೀಡುತ್ತಾರೆ. ಕೆಲವೊಮ್ಮೆ ಪದದ ಸಾಂಸ್ಕತಿಕ ಹಿನ್ನೆಲೆಯ ಟಿಪ್ಪಣಿಯನ್ನೂ ನೀಡಿರುವುದುಂಟು. ಇದಿಷ್ಟು ಕೃಷ್ಣಪ್ಪನವರ ಪದನಿರುಕ್ತದ ಸ್ಥೂಲ ಪರಿಚಯ.

ಅಕ್ಕಸಾಲಿಗನು ಹಳೆಗಾಲದ ಹೊನ್ನಒಡವೆಗಳನ್ನು ಹೇಗೆ ಮೂಸೆಯಲ್ಲಿ ಕಾಸಿ ಸೋಸಿ ಬಡಿದು ಬಗ್ಗಿಸಿ ಹೊಸಗಾಲದ ಆಭರಣ ಪ್ರಿಯರಿಗೆ ಒಪ್ಪುವಂತೆ ಮರುಸೃಷ್ಟಿ ಮಾಡುತ್ತಾನೋ ಹಾಗೆ ಕವಿಗಳೂ ಸಹ ಆಡು ಭಾಷೆಯಲ್ಲಿ ಸವೆದು ಹೋದ ಪದಗಳನ್ನು ಎತ್ತಿ ಮರುಜೀವ ಕೊಡುತ್ತಾರೆ. ಅಭಿಜಾತ ಕವಿಗಳಿಂದ ಮಾತ್ರ ಇದು ಸಾಧ್ಯ. ಚಾರಣ ಕವಿಯಾದ ಬೇಂದ್ರೆ ತಮ್ಮ ಸುತ್ತಣದ ಪರಿಸರದ ದೇಶಿಯನ್ನು ಎತ್ತಿ ಮಾರ್ಗಕ್ಕೆ ಹಾಸುಹೊಕ್ಕಾಗಿಸಿ ನೇಯುತ್ತಾರೆ. ಉತ್ತರ ಕರ್ನಾಟಕದ ಯುಗಯಾತ್ರೀ ಕರುನಾಡ ಸಂಸ್ಕøತಿಯು ಈ ಕವಿಯ ಕಾವ್ಯದಲ್ಲಿ ಧಾರೆ ಧಾರೆಯಾಗಿ ಇಳಿದು ಬರುತ್ತದೆ. ಆ ಧಾರೆಯಲ್ಲಿ ಹತ್ತು ಮೀನಿನಂತೆ ಹೊಳೆವ ಪದಗಳನ್ನು ಗೊತ್ತು ಹಿಡಿದು ಕೃಷ್ಣಪ್ಪನವರು ನಿರುಕ್ತದಲ್ಲಿ ವಿವರಿಸುತ್ತಾರೆ. ಇವರು ಬೇಂದ್ರೆ ಕಾವ್ಯದ ಯಾಸ್ಕ.

ಈಚೆಗೆ ಕೃಷ್ಣಪ್ಪನವರಿಗೆ ಕೊರೊನಾ ವೈರಾಣು ತಗುಲಿ ಹೈರಣರಾಗಿದ್ದಾರೆ. ಆದರೂ ಸಹ ವ್ರತ ಬಿಡದ ಜಿನಯತಿಯಂತೆ ಬೇಂದ್ರೆ ಕಾವ್ಯ ಜೇನಿನ ತ್ರಾಣದಲ್ಲಿ ‘ಬೇಂದ್ರೆ ಕಾವ್ಯ – ಪದನಿರುಕ್ತ’ ವನ್ನು ಪ್ರಕಟಿಸಿ ದಡ ಸೇರಿರುವುದರು ಸಾಹಸವೇ ಸರಿ. ಸಮಸ್ತ ಕನ್ನಡಿಗರಿಂದ ಅವರು ಅಭಿನಂದನಾರ್ಹರು.

ಇನ್ನೊಂದು ಮಾತು. ಬೇಂದ್ರೆ, ಕುವೆಂಪು ಕನ್ನಡ ನವೋದಯ ಸಾಹಿತ್ಯ ಸಹ್ಯಾದ್ರಿಯ ಎರಡು ಗಿರಿಶಿಖರಗಳು. ಕೃಷ್ಣಪ್ಪನವರು ಇದುವರೆಗೆ ಬೇಂದ್ರೆ ಕಾವ್ಯವನ್ನು ಕುರಿತು ಹತ್ತಾರು ಪುಸ್ತಕಗಳನ್ನು ಬರೆದವರು. ಈಗ ಅವರ ಚಿತ್ತ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದತ್ತ ಹರಿದಿದೆ. ಅದರ ಮಹತ್ ದರ್ಶನಕ್ಕೆ ಮಾರು ಹೋದ ಇವರು ಆ ಅನುಭವವನ್ನು ಸಾಕ್ಷಾತ್ಕರಿಸಿಕೊಂಡು ಈಚೆಗೆ ‘ಕುವೆಂಪು ಹನುಮದ್ದರ್ಶನ’ ಎಂಬ ಕೃತಿಯೊಂದನ್ನು ಹೊರತಂದಿದ್ದಾರೆ. ಕುವೆಂಪು ರಾಮಾಯಣದ ‘ಸಾಗರೋಲ್ಲಂಘನಂ’ ಸಂಚಿಕೆಯು ಕವಿಯ ಹಾಗೂ ಆಂಜನೇಯ ದ್ವಯರ ಭಾವಯಾತ್ರೆಯ ಅದ್ವೈತ ಸಿದ್ದಿಯ ಸಕ್ಕದ್ದರ್ಶನ. ಡಾ.ವಿ.ಚಂದ್ರಶೇಖರ ನಂಗಲಿ ಅವರೆಂದಿರುವಂತೆ, ಇದು ಕುವೆಂಪು ರಾಮಾಯಣದ ‘ರಸಘಟ್ಟಿ ಪರಿಪಾಕ’. ಇಷ್ಟಕ್ಕೂ ಅವರ ಆ ಕಾವ್ಯಾಭ್ಯಾಸದ ಹಸಿವು ತಣಿಯದು. ಅವರೀಗ ತಮ್ಮ ಇಳಿವಯಸ್ಸಿನ ಅನಾರೋಗ್ಯದಲ್ಲೂ ಕುವೆಂಪು ಮಹಾಕಾವ್ಯಕ್ಕೆ ‘ಪರಾರ್ಥಕೋಶ’ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.

 

Leave a Reply

Your email address will not be published.