ಭಾರತದಲ್ಲಿ ಕೋವಿಡ್: ಸಾಂಕ್ರಾಮಿಕದಿಂದ ಸ್ಥಳಿಕವಾಗಿ ಪರಿವರ್ತನೆ

ವಿಶ್ವದಲ್ಲಿ ಸಾಂಕ್ರಾಮಿಕ (ಚಿಟಿಜಛಿ) ಹಂತವನ್ನು ದಾಟಿ ಸ್ಥಳಿಕ (ಇಟಿಜಛಿ) ಹಂತಕ್ಕೆ ಮನ್ವಂತರ ಹೊಂದಿದ ನಂತರ, ಈ ಹಂತವನ್ನು ಹೆಚ್ಚು ಕಾಲ ಸ್ಥಿರವಾಗಿ ಕಾಪಾಡಿಕೊಂಡು ಬಂದಿರುವ ಏಕೈಕ ರಾಷ್ಟ್ರ ಭಾರತ ಎನ್ನುವುದು ಹೆಮ್ಮೆಯ ವಿಚಾರ. ಕೋವಿಡ್-19 ಎದುರಿಸುವುದು ಹೇಗೆ ಎಂದು ಇಡೀ ವಿಶ್ವಕ್ಕೆ ತೋರಿಸಲು ಇದು ಸಕಾಲ.

ನಾ ದಿವಾಕರ

ಕೋವಿಡ್ ಇನ್ನೂ ನಿವಾರಣೆಯಾಗಿಲ್ಲ. ಸದ್ಯದಲ್ಲಿ ಪೂರ್ಣ ನಿವಾರಣೆಯಾಗುವ ಸಂಭವವೂ ಕಾಣುತ್ತಿಲ್ಲ. ಅನೇಕ ದೇಶಗಳಲ್ಲಿ ಕೋವಿಡ್ ಸೋಂಕು ಇನ್ನೂ ವ್ಯಾಪಕವಾಗಿ ಹರಡುತ್ತಲೇ ಇದ್ದು, ಐರೋಪ್ಯ ರಾಷ್ಟ್ರಗಳಲ್ಲಿ, ಚೀನಾ, ಬ್ರಿಟನ್, ಜರ್ಮನಿ, ನಾರ್ವೆ ಮುಂತಾದ ದೇಶಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನನಿತ್ಯ ಹೆಚ್ಚಾಗುತ್ತಲೇ ಇದೆ. ಸೋಂಕು ಹರಡುವಿಕೆ ಕ್ಷೀಣಿಸುತ್ತಾ ಬಂದು ಒಂದು ಹಂತದಲ್ಲಿ ಎಲ್ಲ ದೇಶಗಳಲ್ಲೂ ಕೋವಿಡ್ ಸ್ಥಳಿಕವಾಗಿ ಪರಿವರ್ತನೆಯಾದಾಗ ಮಾತ್ರವೇ ಜಗತ್ತು ಕೋವಿಡ್‍ನಿಂದ ಮುಕ್ತವಾಗಿದೆ ಎಂದು ಭಾವಿಸಬಹುದು. ಕಳೆದ ವಾರ ಜರ್ಮನಿಯಲ್ಲಿ ಸರಾಸರಿ ದಿನಕ್ಕೆ 53 ಸಾವಿರ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಅಮೆರಿಕದಲ್ಲಿ ಕಳೆದ ವಾರ 1,42,000 ಮಕ್ಕಳಿಗೆ ಕೊರೋನಾ ಸೋಂಕು ತಗುಲಿರುವುದಾಗಿ ವರದಿಯಾಗಿದೆ. ಆಸ್ಟ್ರಿಯಾ, ರೊಮೇನಿಯಾ ಮುಂತಾದ ದೇಶಗಳಲ್ಲಿ ಕೊರೋನಾ ಉಲ್ಬಣಿಸಿದ್ದು ಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.

ಆದರೂ ವಿಶ್ವದಾದ್ಯಂತ ಕೋವಿಡ್ ಹೊಸ ತಳಿ ಬಿ.1.1.529 ತೀವ್ರ ಹಾವಳಿ ಉಂಟುಮಾಡುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆಯೂ ಸಹ ಎಲ್ಲ ದೇಶಗಳಿಗೂ ಎಚ್ಚರಿಕೆ ನೀಡಿದೆ. ಈ ತಳಿಯು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ದಕ್ಷಿಣ ಆಫ್ರಿಕಾ, ಬೋಟ್ಸ್‍ವಾನಾ, ಜಿಂಬಾಬ್ವೆ, ನಮೀಬಿಯಾ, ಮತ್ತು ಲೆಸೊಟೋ ದೇಶಗಳಲ್ಲಿ ಈ ತಳಿಯಿಂದ ಸೋಂಕು ಹರಡುತ್ತಿದ್ದು ಸೋಂಕಿತರ ಪ್ರಮಾಣ ವಿಪರೀತ ಏರಿಕೆಯಾಗಿದೆ. ಈ ತಳಿಯ ಜಿನೋಮ್ ಸೀಕ್ವೆನ್ಸ್ ಪರಿಶೋಧನೆಯನ್ನು ಸಿಂಗಪುರ ವಿಜ್ಞಾನಿಗಳು ಮಾಡಿದ್ದು ಇದು ಕೊರೋನಾ ವೈರಾಣು ಮತ್ತು ಡೆಲ್ಟಾ ತಳಿಗಳಿಗಿಂತಲೂ ಅತಿ ಶೀಘ್ರವಾಗಿ ಹರಡುತ್ತದೆ ಎಂದು ಹೇಳಲಾಗಿದೆ.

ಕರ್ನಾಟಕದ ಸತ್ತೂರಿನಲ್ಲಿರುವ ಎಸ್‍ಡಿಎಂ ವೈದ್ಯಕೀಯ ಕಾಲೇಜಿನಲ್ಲಿ 204 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದ್ದು, ಆನೇಕಲ್ ತಾಲ್ಲೂಕಿನ ದೊಮ್ಮಸಂದ್ರ ಬಳಿ ಇರುವ ಇಂಟರ್ ನ್ಯಾಷನಲ್ ವಸತಿ ಶಾಲೆಯ 33 ವಿದ್ಯಾರ್ಥಿಗಳು ಸೋಂಕಿತರಾಗಿರುವುದಾಗಿ ವರದಿಯಾಗಿದೆ. ರಾಜ್ಯದ ಇತರ ಶಾಲಾ ಕಾಲೇಜುಗಳಲ್ಲೂ ಸೋಂಕು ಕಂಡುಬಂದಿದ್ದು ಕಳೆದ ಶುಕ್ರವಾರ (26-11) 402 ಜನರು ಸೋಂಕಿತರಾಗಿದ್ದಾರೆ. ಈ ಆಫ್ರಿಕಾ ತಳಿಯು ಅಪಾಯಕಾರಿಯೋ ಅಲ್ಲವೋ ಎನ್ನುವುದನ್ನು ನಿರ್ಧರಿಸಲು ವಿಶ್ವ ಆರೋಗ್ಯ ಸಂಸ್ಥೆ ತುರ್ತು ಸಭೆಯೊಂದನ್ನು ಆಯೋಜಿಸಿದ್ದು, ಈವರೆಗೆ ಲಭ್ಯವಾಗಿರುವ ಮಾಹಿತಿಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ. ಈಗಿರುವ ಲಸಿಕೆಗಳು ಹೊಸ ತಳಿಯ ವಿರುದ್ಧ ಯಶಸ್ವಿಯಾಗಿ ಕೆಲಸ ಮಾಡುವುದೋ ಇಲ್ಲವೋ ಎನ್ನುವ ಅನುಮಾನಗಳೂ ಸೃಷ್ಟಿಯಾಗಿದ್ದು, ಈ ಬಗ್ಗೆಯೂ ಸ್ಪಷ್ಟ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ನಿರೀಕ್ಷಿಸಲಾಗುತ್ತಿದೆ.

ಭಾರತದಲ್ಲಿ 100 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ ಎಂದು ಸರ್ಕಾರ ಘೋಷಿಸಿದೆ. ಶೇ 29ರಷ್ಟು ಜನರು ಪೂರ್ಣ ಪ್ರಮಾಣದ ಲಸಿಕೆಯನ್ನು ಪಡೆದಿದ್ದಾರೆ. ಲಸಿಕಾ ಅಭಿಯಾನ ಇನ್ನೂ ಜಾರಿಯಲ್ಲಿದ್ದು ಈಗ 18 ವರ್ಷದ ಕೆಳಗಿನವರಿಗೂ ಲಸಿಕೆಯನ್ನು ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ನಡುವೆಯೇ 2021ರ ಜೂನ್ 21ರ ವೇಳೆಗೆ ಭಾರತ ಕೋವಿಡ್ ಸಾಂಕ್ರಾಮಿಕ ಹಂತದಿಂದ ಸ್ಥಳಿಕ ಹಂತಕ್ಕೆ ಮನ್ವಂತರ ಹೊಂದಿದ್ದು 140 ದಿನಗಳ ಸ್ಥಿರತೆಯನ್ನು ಕಾಪಾಡಿಕೊಂಡ ನಂತರ ಈಗ ಸ್ಥಳಿಕ ಸನ್ನಿವೇಶವನ್ನು ಎದುರಿಸುತ್ತಿದೆ. ಆದರೆ ಇದರಿಂದ ಅಪಾಯದಿಂದ ಪಾರಾಗಿದ್ದೇವೆ ಎಂದು ಹೇಳಲಾಗುವುದಿಲ್ಲ. ಕೋವಿಡ್ ಮೊದಲನೆಯ ಅಲೆಯ ನಂತರವೂ ಭಾರತ ಹತ್ತು ತಿಂಗಳ ಕಾಲ ಸ್ಥಳಿಕ ಹಂತದಲ್ಲೇ ಮುಂದುವರೆದಿತ್ತು. ಆದರೆ ಅಷ್ಟರಲ್ಲಿ ಕೊರೋನಾ ಎರಡನೆ ಅಲೆ ಅಪ್ಪಳಿಸಿತ್ತು. ಆದಾಗ್ಯೂ ಕೊರೋನಾ ವೈರಾಣುವಿನ ಪ್ರಸರಣದ ಪ್ರಮಾಣ ಶೇ 0.1ಕ್ಕಿಂತಲೂ ಕಡಿಮೆ ಇರುವುದರಿಂದ ಭಾರತ ಸದ್ಯದ ಪರಿಸ್ಥಿತಿಯಲ್ಲಿ ಸ್ಥಳಿಕ ಹಂತಕ್ಕೆ ತಲುಪಿದೆ ಎಂದು ಹೇಳಬಹುದು.

ಸಾಂಕ್ರಾಮಿಕ ಅಥವಾ ಸೋಂಕಿನ ಹಂತ ಎಂದರೆ ಕೊರೋನಾ ಸೋಂಕಿತರ ಸಂಖ್ಯೆ ದಿನವೂ ಏರಿಕೆಯಾಗುತ್ತಲೇ ಹೋಗಿ ಉಚ್ಛ್ರಾಯ ಹಂತ ತಲುಪುತ್ತದೆ ಮತ್ತು ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. ಕೊರೋನಾ ಎರಡನೆ ಅಲೆಯಲ್ಲೂ ಮೇ 6 ರಂದು ನಾಲ್ಕು ಲಕ್ಷಕ್ಕೂ ಹೆಚ್ಚು ಸೋಂಕಿತರು ದಾಖಲಾಗಿದ್ದರು. ಆದರೆ ಜೂನ್ 27ರ ವೇಳೆಗೆ ದಿನಕ್ಕೆ 50 ಸಾವಿರ ಸೋಂಕು ದಾಖಲಾಗಿತ್ತು. ಈಗಿನ ಪರಿಸ್ಥಿತಿಯಲ್ಲಿ ಶೇ 85ರಷ್ಟು ಕೊರೋನಾ ಸೋಂಕಿತರಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ. ಉಳಿದಂತೆ ಶೇ 15ರಷ್ಟು ಸೋಂಕಿತರಲ್ಲಿ ಮಾತ್ರವೇ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಈ ಸಂಖ್ಯೆಯನ್ನು ಕಡಿಮೆ ಮಾಡುವ ವಿಧಾನ ಎಂದರೆ ಜನರಲ್ಲಿ ರೋಗನಿರೋಧಕ ಅಂಶಗಳನ್ನು ಹೆಚ್ಚಿಸುವುದು. ಲಸಿಕೆ ನೀಡುವ ಪ್ರಮಾಣ ಹೆಚ್ಚಾದಂತೆಲ್ಲಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. ಕ್ರಮೇಣ ಇದು ಸ್ಥಳಿಕ ಹಂತಕ್ಕೆ ಬಂದು ತಲುಪುತ್ತದೆ.

ಸಮೂಹ ರೋಗನಿರೋಧಕ ಮಿತಿಯನ್ನು ತಲುಪುವುದರ ಮೂಲಕ ಸಾಂಕ್ರಾಮಿಕದ ಅಂತ್ಯವನ್ನೂ ಗುರುತಿಸಬಹುದು. ಇತ್ತೀಚೆಗೆ ಐಸಿಎಮ್‍ಆರ್ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಆರು ವರ್ಷಕ್ಕೂ ಮೇಲ್ಪಟ್ಟವರಲ್ಲಿ ಶೇ 67.4ರಷ್ಟು ಜನರಿಗೆ ರೋಗನಿರೋಧಕ ಅಂಶಗಳು ಇದ್ದವು. ಎರಡನೆ ಸಮೀಕ್ಷೆಯಲ್ಲಿ ಈ ಹಿಂದೆ ಕೊರೋನಾ ಪಾಸಿಟಿವ್ ಆಗಿದ್ದವರ ಪೈಕಿ ಶೇ 64 ರಷ್ಟು ಜನರಲ್ಲಿ ರೋಗ ನಿರೋಧಕಗಳು ವೃದ್ಧಿಯಾಗಿದ್ದವು. ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಬಹುಸಂಖ್ಯೆಯ ಜನರು ಈಗಾಗಲೇ ಸೋಂಕಿತರಾಗಿದ್ದು, ರೋಗನಿರೋಧಕ ಶಕ್ತಿ ಇವರಲ್ಲಿ ವೃದ್ಧಿಯಾಗಿದೆ. ರೋಗ ನಿರೋಧಕಗಳು ಕಂಡುಬರದ ಶೇ 32.6ರಷ್ಟು ಜನರಲ್ಲೂ ಸಹ ಬಹುಸಂಖ್ಯೆಯ ಜನರಿಗೆ ಹಿಂದೆ ಕೊರೋನಾ ಸೋಂಕು ತಗುಲಿರುವ ಸಂಭವವಿರುವುದರಿಂದಲೇ ಭಾರತದಲ್ಲಿ ಸಾಂಕ್ರಾಮಿಕ ಅಂತ್ಯವಾಗಿ ಸ್ಥಳಿಕ ಹಂತಕ್ಕೆ ತಲುಪಿದ್ದೇವೆ ಎಂದು ಐಸಿಎಂಆರ್ ತಜ್ಞರು ಅಭಿಪ್ರಾಯಪಡುತ್ತಾರೆ.

ಈಗಿನ ಪರಿಸ್ಥಿತಿಯಲ್ಲಿ ರೋಗ ನಿರೋಧಕ ಇಲ್ಲದ ಜನಸಂಖ್ಯೆ ಕ್ಷೀಣಿಸಿರುವುದರಿಂದ ಕೊರೋನಾ ಮೂರನೆಯ ಅಲೆ ಅಷ್ಟಾಗಿ ಕಾಡುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಆದಾಗ್ಯೂ ಹೊಸ ಡೆಲ್ಟಾ ಮುಂತಾದ ಹೊಸ ತಳಿಗಳು ಈ ರೋಗ ನಿರೋಧಕಗಳನ್ನೂ ಭೇದಿಸಲು ಸಾಧ್ಯವಾಗುವುದಾದರೆ ಕೊರೋನಾ ಮತ್ತೊಮ್ಮೆ ಹರಡುವ ಸಾಧ್ಯತೆಗಳಿವೆ. ಈ ಬಗ್ಗೆ ವಿಜ್ಞಾನಿಗಳು ನಿರಂತರವಾಗಿ ಗಮನ ನೀಡುತ್ತಿದ್ದಾರೆ. ಭಾರತದ ಲಸಿಕಾ ಅಭಿಯಾನದ ಮೂಲ ಉದ್ದೇಶ ಡೆಲ್ಟಾ ತಳಿಯ ಸಮೂಹ ರೋಗ ನಿರೋಧಕ ಹಂತವನ್ನು ತಲುಪುವುದೇ ಆಗಿದ್ದುದರಿಂದ ಭಾರತದಲ್ಲಿ ಸಾಂಕ್ರಾಮಿಕ ಅಂತ್ಯವಾಗಿದೆ. ಈಗ ಭಾರತ ಸರ್ಕಾರ ತನ್ನ ಲಸಿಕಾ ನೀತಿಯನ್ನು ಪರಿಷ್ಕರಿಸಬೇಕಿದೆ. ಸ್ಥಳಿಕ ಹಂತದಲ್ಲಿರುವಾಗ ಇತರ ಸಂಭಾವ್ಯ ರೋಗಗಳ ತೀವ್ರತೆಯಿಂದಾಗುವ ಅಪಾಯವನ್ನು ತಡೆಗಟ್ಟುವುದು ಮೊದಲ ಆದ್ಯತೆಯಾಗಬೇಕಿದೆ. ಎರಡನೆಯದಾಗಿ ಸೋಂಕಿನ ಮೂಲಗಳನ್ನು ಕಡಿಮೆ ಮಾಡಬೇಕಿದೆ.

ಸೋಂಕಿನಿಂದ ಉಂಟಾಗುವ ಅಪಾಯಗಳಿಗೆ ಸಿಲುಕುವ ಪ್ರಮುಖ ಮೂಲಗಳು ಎಂದರೆ ಗರ್ಭಿಣಿಯರು, 60 ವರ್ಷಕ್ಕೂ ಮೇಲ್ಪಟ್ಟು ಮಧುಮೇಹ ಮುಂತಾದ ಪೂರಕ ಕಾಯಿಲೆಗಳನ್ನು ಹೊಂದಿರುವವರು, ಕ್ಯಾನ್ಸರ್ ಪೀಡಿತರು, ಅಂಗಾಂಗ ಜೋಡಣೆಯನ್ನು ಹೊಂದಿರುವವರು ಇತ್ಯಾದಿ. ಇಂತಹ ಜನರನ್ನು ಪತ್ತೆ ಹಚ್ಚಿ ಅವರಲ್ಲಿ ರೋಗ ನಿರೋಧಕಗಳನ್ನು ಹೆಚ್ಚಿಸಬೇಕಾಗುತ್ತದೆ. ಗರ್ಭಿಣಿ ಮಹಿಳೆಯರಿಗೆ ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ನೀಡುವುದೇ ಅಲ್ಲದೆ, ಎರಡನೆ ಬಾರಿ ಗರ್ಭಧಾರಣೆಯಾದರೆ ಬೂಸ್ಟರ್ ಡೋಸ್ ನೀಡಬೇಕಾಗುತ್ತದೆ. ಉಳಿದವರಲ್ಲಿ ಲಸಿಕೆಯ ಎರಡನೆ ಡೋಸ್ ಪಡೆದ ಒಂದು ವóರ್ಷದೊಳಗಾಗಿ ಬೂಸ್ಟರ್ ಡೋಸ್ ಪಡೆಯುವುದು ಉಚಿತ ಎಂದು ಹೇಳುವ ವಿಜ್ಞಾನಿಗಳು, ಬೂಸ್ಟರ್ ಡೋಸ್ ನೀಡುವುದರ ಮೂಲಕ ಪ್ರಾಣ ರಕ್ಷಿಸಲು ಸಾಧ್ಯ ಮತ್ತು ವೈರಾಣು ಪ್ರಸರಣವನ್ನೂ ನಿಯಂತ್ರಿಸಬಹುದು ಎಂದು ಹೇಳುತ್ತಾರೆ.

ಈಗ ವೈರಾಣುವಿನ ಮೂಲವನ್ನು ಮರುಶೋಧಿಸುವುದೂ ಅವಶ್ಯ. ಈವರೆಗೂ ಲಸಿಕೆ ಪಡೆಯದವರು ಮತ್ತು ಎರಡು ಡೋಸ್ ಲಸಿಕೆಯನ್ನು ಪಡೆದ ನಂತರ ದೇಹದಲ್ಲಿ ರೋಗ ನಿರೋಧಕಗಳ ಅಂಶ ಕಡಿಮೆಯಾಗಿರುವವರು ಅಥವಾ ಒಮ್ಮೆ ಸೋಂಕಿಗೆ ಒಳಗಾಗಿ ಮತ್ತೊಮ್ಮೆ ಸೋಂಕು ತಗಲುವ ಸಾಧ್ಯತೆ ಇರುವವರು, ಈ ಮೂರು ರೀತಿಯ ಜನರನ್ನು ಗುರುತಿಸಿ ಲಸಿಕೆ ವಿತರಣೆಯನ್ನು ಪುನರ್ ಪರಿಷ್ಕರಿಸಬೇಕಾಗುತ್ತದೆ.

ಈಗ ಶಾಲೆಗಳು ತೆರೆದಿರುವುದರಿಂದ ಶಾಲಾ ಮಕ್ಕಳೇ ಸೋಂಕಿನ ಪ್ರಧಾನ ಮೂಲ ಆಗುವ ಸಾಧ್ಯತೆಗಳಿವೆ. ಈಗ ಭಾರತದಲ್ಲಿ ಸ್ಥಳಿಕ ಹಂತ ತಲುಪಿರುವುದರಿಂದ ಶಾಲಾ ಮಕ್ಕಳಿಗೆ ಲಸಿಕೆಯನ್ನು ನೀಡುವುದು ಆದ್ಯತೆಯಾಗಬೇಕಿದೆ. ನಂತರದಲ್ಲಿ ಲಸಿಕೆ ಮತ್ತು ಬೂಸ್ಟರ್ ಪಡೆಯುವ ಆದ್ಯತೆಯನ್ನು ಜನರೊಡನೆ ಬೆರೆತು ತಮ್ಮ ಕಾರ್ಯನಿರ್ವಹಿಸುವವರಿಗೆ ನೀಡಬೇಕಾಗುತ್ತದೆ. ಆರೋಗ್ಯ ಸೇವೆಯಲ್ಲಿರುವವರು, ಪೊಲೀಸ್ ಸಿಬ್ಬಂದಿ, ಧಾರ್ಮಿಕ ವಲಯ, ಶಿಕ್ಷಣ, ವಾಣಿಜ್ಯ ಮತ್ತು ವ್ಯಾಪಾರ, ಸಾರಿಗೆ, ಉತ್ಪಾದನೆ ಮತ್ತು ತಯಾರಿಕಾ ವಲಯ, ಹೋಟೆಲ್ ಮುಂತಾದ ಆತಿಥ್ಯ ಸೇವಾ ವಲಯಗಳಲ್ಲಿ ಕಾರ್ಯನಿರ್ವಹಿಸುವವರು ಆದ್ಯತೆಯ ಮೇಲೆ ಲಸಿಕೆ ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನ್ನ ಲಸಿಕೆ ನೀತಿಯನ್ನು ಪುನರ್ ಪರಿಷ್ಕರಿಸಬೇಕಿದೆ.

ಲಸಿಕಾ ಅಭಿಯಾನದಲ್ಲಿ ಭಾರತ ಅದ್ಭುತ ಸಾಧನೆಯನ್ನು ಮಾಡಿದ್ದು, ಈ ಕಾರಣದಿಂದಲೇ ಜನರಲ್ಲಿ ರೋಗ ನಿರೋಧಕ ಅಂಶಗಳು ವೃದ್ಧಿಯಾಗಿದ್ದು, ದೈನಂದಿನ ಸೋಂಕಿತರ ಪ್ರಮಾಣವೂ 10 ಸಾವಿರದ ಆಸುಪಾಸಿನಲ್ಲಿದೆ. ಆದರೆ ಹೊಸ ತಳಿಯ ಹಾವಳಿ ಮತ್ತು ಈ ತಳಿಯ ವಿರುದ್ಧ ಲಸಿಕೆಯು ನಿಷ್ಫಲವಾಗುವ ಆತಂಕವೂ ಕಾಡುತ್ತಿದೆ. ಆದಾಗ್ಯೂ ವಿಶ್ವದಲ್ಲಿ ಸಾಂಕ್ರಾಮಿಕ ಹಂತವನ್ನು ದಾಟಿ ಸ್ಥಳಿಕ ಹಂತಕ್ಕೆ ಮನ್ವಂತರ ಹೊಂದಿದ ನಂತರ, ಸ್ಥಳಿಕ ಹಂತವನ್ನು ಹೆಚ್ಚು ಕಾಲ ಸ್ಥಿರವಾಗಿ ಕಾಪಾಡಿಕೊಂಡು ಬಂದಿರುವ ಏಕೈಕ ರಾಷ್ಟ್ರ ಭಾರತ ಎನ್ನುವುದು ಹೆಮ್ಮೆಯ ವಿಚಾರ. ಕೋವಿಡ್-19 ಎದುರಿಸುವುದು ಹೇಗೆ ಎಂದು ಇಡೀ ವಿಶ್ವಕ್ಕೆ ತೋರಿಸಲು ಇದು ಸಕಾಲ. ಭಾರತ ಈ ನಿಟ್ಟಿನಲ್ಲಿ ಯಶಸ್ವಿಯಾಗುತ್ತದೆ ಎಂದು ಆಶಿಸೋಣ.

[ಈ ಲೇಖನದ ಮಾಹಿತಿ, ಅಂಕಿಅಂಶಗಳು ಮತ್ತು ದಾಖಲೆಗಳನ್ನು ‘ದ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್’ ಪತ್ರಿಕೆಯಲ್ಲಿ ಪ್ರಕಟವಾದ ಡಾ.ಟಿ.ಜಾಕಬ್ ಜಾನ್ ಮತ್ತು ಡಾ.ಎಂ.ಎಸ್.ಶೇಷಾದ್ರಿ ಅವರ ಲೇಖನದಿಂದ

ಪಡೆಯಲಾಗಿದೆ.]

Leave a Reply

Your email address will not be published.