ಭಾಷಾ ಪರಂಪರೆಗಳ ಕೊಡುಕೊಳ್ಳುವಿಕೆ

ನವೆಂಬರ್ ತಿಂಗಳನ್ನು ಆಯಾ ಭಾಷಾ ಸಂಸ್ಥಾನಗಳ ಹುಟ್ಟಿನ ದಿನವಾಗಿ ಆಚರಿಸುವಂತೆಯೇ ಭಾಷಾ ಸಹಬಾಳ್ವೆಯ ಮಾಸವಾಗಿಯೂ ಆಚರಿಸಬೇಕು.

ಎಂ.ಎಸ್.ಆಶಾದೇವಿ

ತೆಲುಗಿನ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ವಸಂತ ಕಣ್ಣಬಿರನ್ ಅವರನ್ನು ಸಂದರ್ಶಿಸುತ್ತಿದ್ದೆ. ಹೆಣ್ಣನ್ನು ಕುರಿತ ನೂರಾರು ಅರಿವಿನ ಕಾರ್ಯಕ್ರಮಗಳನ್ನು ರೂಪಿಸಿರುವವರು ಅವರು. ಬೀದಿ ನಾಟಕಗಳು, ವಿಚಾರ ಸಂಕಿರಣಗಳು, ಹೋರಾಟಗಳು ಈ ಎಲ್ಲವನ್ನೂ ನಾಲ್ಕೈದು ದಶಕಗಳಿಂದ ನಡೆಸುತ್ತಲೇ ಬಂದಿರುವವರು. ಮಾತಿನ ನಡುವೆ ಅವರು ಹೇಳಿದರು, ಒಮ್ಮೆ ನಾಟಕ ಬರೆಯಬೇಕು ಅಂತ ವಿಷಯಕ್ಕಾಗಿ ಹುಡುಕುತ್ತಿದ್ದೆ, ಅದು ಬಹಳ ಹಿಂದೆ, ಸುಮಾರು ನಲ್ವತ್ತು ವರ್ಷಗಳ ಹಿಂದೆ ಅಂತಲೇ ಇಟ್ಟುಕೋಬಹುದು. ನನ್ನ ಗೆಳೆತಿಯೊಬ್ಬರ ಹತ್ತಿರ ಮಾತನಾಡುತ್ತಿದ್ದಾಗ, ಅಕ್ಕಮಹಾದೇವಿಯ ವಿಷಯ ಬಂತು, ಅವಳ ಬದುಕಿನ ವಿವರ ಕೇಳಿದ ಮೇಲೆ, ಆಕೆ ನನ್ನನ್ನ ಎಷ್ಟು ಆವರಿಸಿಕೊಂಡುಬಿಟ್ಟಳು ಅಂದರೆ, ಆಕೆಯನ್ನು ಕುರಿತೇ ನಾನು ನಾಟಕ ಬರೆದೆ. ಆಕೆ ಇಂದಿಗೂ ನನ್ನ ಅಕ್ಕನೇ, ಆ ನಾಟಕವೂ ಬಹಳ ಯಶಸ್ವಿಯಾಯಿತು. ಈಗಲೂ ಹೇಳುತ್ತೇನೆ ಆಶಾ, ಆಕೆ ನಮ್ಮಿಡೀ ಹೆಣ್ಣು ಕುಲದ ಅಕ್ಕ ಎಂದರು.

ಈ ಪ್ರಸಂಗ ಎರಡು ಅಂಶಗಳನ್ನು ಏಕಕಾಲಕ್ಕೆ ಮಂಡಿಸುತ್ತಿದೆ. ಒಂದು, ಮಹಿಳಾ ಸಂಕಥನಕ್ಕೆ ಸಂಬಂಧ ಪಟ್ಟದ್ದು, ಹೆಣ್ಣಿಗೆ ಇರುವುದು ಒಂದೇ ಪರಂಪರೆ ಎನ್ನುವ ನಂಬಿಕೆಗೆ ಸಂಬಂಧಪಟ್ಟದ್ದು. ಇನ್ನೊಂದು, ಭಾರತ ಜಗತ್ತಿನ ಹಾಗೂ ಜಗತ್ತಿನ ಹಲವು ಭಾಷಾ ಪರಂಪರೆಗಳ ನಡುವಿನ ಕೊಡುಕೊಳ್ಳುವಿಕೆಗೆ ಸಂಬಂಧಪಟ್ಟದ್ದು.

ಭಾಷೆಗಳನ್ನು ಕುರಿತಂತೆ ನಮ್ಮಲ್ಲಿ ನಿರ್ಭಾವುಕ ಬೌದ್ಧಿಕತೆಯ ಹಾಗೂ ಅತಿ ಭಾವುಕತೆಯ ಅತಿರೇಕಗಳು ಸೃಷ್ಟಿಸಿರುವ ಸವಾಲುಗಳು ಕೆಲವೊಮ್ಮೆ ಗಾಬರಿ ಹುಟ್ಟಿಸುತ್ತವೆ. ಸೂಜಿಯಂತೆ ಹೆಣೆಯಬೇಕಾದ ಭಾಷೆಗಳು ಕತ್ತರಿಯ ಕೆಲಸವನ್ನು ಮಾಡುವ ಸಂದರ್ಭಗಳನ್ನೂ ನಾವು ನೋಡಿದ್ದೇವೆ. ಈ ಎರಡರ ನಡುವಿನ ಸಮತೋಲನದಲ್ಲಿ ಭಾಷಾ ಸಂದರ್ಭಗಳನ್ನು ಚರ್ಚಿಸುವುದು ಅಗತ್ಯ. `ಸರ್ವ ಭಾಷಾಮಯಿ ಸರಸ್ವತಿಎನ್ನುವುದು ದೂರದ ಆದರ್ಶದಂತೆ ಕಾಣಿಸುವ ಬೆಳವಣಿಗೆಗಳೂ ನಮ್ಮ ನಡುವೆ ಆಗಿ ಹೋಗಿವೆ.

ಭಾರತದ `ಬಹುತ್ವಸ್ವರೂಪದಲ್ಲಿ ಸಂಸ್ಕøತಿ ವಿನ್ಯಾಸಗಳು ಮತ್ತು ಹಲವು ಭಾಷೆಗಳ ಸಹ ಅಸ್ತಿತ್ವ ಪ್ರಧಾನ ಪಾತ್ರ ವಹಿಸುತ್ತದೆ. ಇದರ ಅರಿವಿದ್ದೂ ನಮ್ಮ ಪ್ರಭುತ್ವವು ಅಲ್ಲೊಂದು ಯಾಜಮಾನಿಕೆಯನ್ನು ಹೇಗಾದರೂ ಸ್ಥಾಪಿಸಲು ಪ್ರಯತ್ನಿಸುತ್ತಲೇ ಇರುತ್ತದೆ. ಭಾಷಾ ಸೌಹಾರ್ದಕ್ಕೆ ವಿಘಟನೆಯನ್ನೇ ಮಂತ್ರವಾಗಿಸಿಕೊಂಡ ಪ್ರಭುತ್ವದ ಕೊಡುಗೆ ದೊಡ್ಡದು. ಭಾಷೆಗಳ ನಡುವೆ ಚಪ್ಪರವನ್ನು ಕಟ್ಟಿ ಹಲವು ವರ್ಣಗಳ ಹೂಬಳ್ಳಿಗಳನ್ನು ಭಾಷೆಯ ಮೂಲಕವೇ ಭಾಷಾತೀತವಾಗಿ ಕಟ್ಟಿದ, ಕಟ್ಟುತ್ತಿರುವ ಘನ ಪರಂಪರೆಯೇ ಭಾರತದಲ್ಲಿದೆ. ಇದು ಅಖಂಡ ಭಾರತೀಯ ಪರಂಪರೆಯ ರಚನೆಯ ಹೆದ್ದಾರಿಯೂ ಹೌದು. ಇದೊಂದು ಅಪೂರ್ವ ಸಾಂಸ್ಕøತಿಕ ಪ್ರಕ್ರಿಯೆ. ಭಾರತವನ್ನು ಸಮೃದ್ಧಗೊಳಿಸುವ, ಬಹುತ್ವಗಳ ಸಹಬಾಳ್ವೆಯನ್ನು ಪ್ರಾಯೋಗಿಕವಾಗಿ ಸಾಧಿಸಿಕೊಳ್ಳುತ್ತಲೇ ಭಾರತೀಯ ಸಮುದಾಯವನ್ನು ‘ಒಳಗೊಳ್ಳುವಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಆರೋಗ್ಯಪೂರ್ಣ ಮತ್ತು ಮುಕ್ತ ಸಮುದಾಯ ರಚನೆಗೆ ರಚನಾತ್ಮಕ ನೆಲೆಯನ್ನು ಒದಗಿಸಿಕೊಡುವಂಥದ್ದೂ ಆಗಿದೆ.

ಇಂಗ್ಲಿಷ್ ಗೀತೆಗಳಲ್ಲಿ ಶ್ರೀಯವರು ಬರೆದ ಸಾಲುಗಳು ಘೋಷವಾಕ್ಯಗಳಂತೆ ಈಗಲೂ ಭಾಸವಾಗುತ್ತವೆ.

ಇವಳ ತೊಡುಗೆ ಅವಳಿಗಿಟ್ಟೂ ನೋಡಬಯಸಿದೆ

ಅವಳ ತೊಡುಗೆ ಇವಳಿಗಿಟ್ಟು ಹಾಡಬಯಸಿದೆ

ಇದು ಖಂಡಿತಕ್ಕೂ ಕೇವಲ ಅನುವಾದಗಳನ್ನು ಕುರಿತ ಮಾತಲ್ಲ. ಇದೊಂದು ರಮ್ಯ ಹೇಳಿಕೆಯಂತೆ ಕಾಣಿಸುತ್ತಲೇ ಸತ್ಯದ ದರ್ಶನವೂ, ನಡೆಯಬೇಕಾದ ದಾರಿಯ ರಚನೆಯೂ ಆಗಿದೆ. ಇದು ಸಾಹಿತ್ಯ ಪರಂಪರೆಗಳ ನಡುವಿನ ಆರೋಗ್ಯಪೂರ್ಣ, ಸಹಜ ಸುಂದರ ಗೆಳೆತನಕ್ಕೆ ಸಂಬಂಧಪಟ್ಟದ್ದು. ಈ ಅಂಶವನ್ನು ಮುಂದುವರೆಸಿದರೆ, ತಾಯಿಭಾಷೆ ಮತ್ತು ಸಾಕುಭಾಷೆಗಳ ನಡುವಿನ ಕುತೂಹಲಕರವಾದ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆ. ತಾಯಿಭಾಷೆಗೆ ಪರ್ಯಾಯವಿಲ್ಲ ಎನ್ನುತ್ತಿರುವಾಗಲೇ ತನ್ನನ್ನು ಸಾಕಿ, ಬೆಳೆಸಿದ ಭಾಷೆಯು ತಾಯಿಯಷ್ಟೇ ಪ್ರಿಯವಾಗುವ, ಅಂತರಂಗದ್ದಾಗಿ ತನ್ನ ಅಖಂಡ ಭಾಗವಾಗುವ ಸಾಧ್ಯತೆಯೂ ನಮ್ಮೆದುರಿಗೆ ಢಾಳಾಗಿಯೇ ಇದೆ. ಇದೊಂದು ಸಂಕೀರ್ಣವಾದ, ಸೂಕ್ಷ್ಮವಾದ ಸಂಗತಿ. ಇದನ್ನು ಸಾಮಾನ್ಯೀಕರಿಸುವುದು ಸಾಧ್ಯವಿಲ್ಲ ನಿಜ, ಆದರೆ ಇದರ ಸಾಧ್ಯತೆಗಳನ್ನು ಕುರಿತಂತೆ ನಾವು ಮುಕ್ತಮನಸ್ಥಿತಿಯವರಾಗಿರುವುದು ಅಗತ್ಯ. ಇದು ನಮ್ಮನ್ನು ಇನ್ನೂ ಹೆಚ್ಚು ವಿಕಾಸಶೀಲರನ್ನಾಗಿ ಮಾಡುತ್ತದೆ.

.ಕೆ.ರಾಮನುಜನ್ ಅವರ ಲೇಖನ `ಮುನ್ನೂರು ರಾಮಾಯಣಗಳುಈ ದೃಷ್ಟಿಯಿಂದ ನಿರ್ಣಾಯಕ. ಭಾರತದ ಲಿಖಿತ, ಮೌಖಿಕ, ಸಂಸ್ಕøತಿನಿಷ್ಟ, ಭಿನ್ನ ದೃಷ್ಟಿ ಮತ್ತು ಭಿನ್ನ ನಿರೂಪಣೆಗಳ ಅನೇಕ ರಾಮಾಯಣಗಳನ್ನು ಒಟ್ಟಾಗಿ ನೋಡುವುದೇ ಮಹತ್ವದ ಸಂಗತಿ. ಅನೇಕ ಭಾಷೆಗಳಲ್ಲಿ ಲಭ್ಯವಿರುವ ಇವುಗಳನ್ನು ನಾವು ಹೇಗೆ ಗ್ರಹಿಸಬೇಕು? ಇವುಗಳನ್ನೆಲ್ಲ ಒಂದೇ ಪಠ್ಯದ ಹಲವು ನಿರೂಪಣೆಗಳಂತೆ ನೋಡುವುದು ಒಂದು ರೋಮಾಂಚಕಾರಿ ಅನುಭವ. ಗಂಡಾಳಿಕೆಯ ಮತ್ತು ಶ್ರೇಣೀಕೃತ ವ್ಯವಸ್ಥೆಯನ್ನು ಪ್ರತಿರೋಧಿಸುವ ಅನೇಕ ಮಾದರಿಗಳು ಇಲ್ಲಿ ಲಭ್ಯವಾಗುತ್ತವೆ. ಅಲಕ್ಷಿತರ ಹೋರಾಟದ ಕಥನಗಳಾಗಿಯೂ ಇವುಗಳನ್ನು ನೋಡಲು ಸಾಧ್ಯವಿದೆ. ಇದು ಸಾಧ್ಯವಾದದ್ದು ಬಹುದೃಷ್ಟಿಕೋನಗಳನ್ನು ಅಭಿವ್ಯಕ್ತಿಸುವ ಬಹುಭಾಷಿಕತೆಯಿಂದ.

ರಾಮಾನುಜನ್ ತನ್ನದೇ ಬಹುಭಾಷಿಕ ಸಂದರ್ಭವನ್ನು ವ್ಯಕ್ತಪಡಿಸಿದ ರೀತಿಯು ಒಂದು ಮಾದರಿಯೇ ಆಗಿದೆ. ತಂದೆಯು ಜಗಲಿಯಲ್ಲಿ ಮಾತನಾಡುತ್ತಿದ್ದ ಕನ್ನಡ, ಅಟ್ಟದ ಮೇಲೆ ಪಂಡಿತರೊಂದಿಗೆ ಮಾತನಾಡುತ್ತಿದ್ದ ಸಂಸ್ಕøತ ಹಾಗೂ ತಮಿಳು; ತಾಯಿ ಹಿತ್ತಲಿನಲ್ಲಿ ಸಹಾಯಕರೊಂದಿಗೆ, ನೆರೆಹೊರೆಯವರೊಂದಿಗೆ ಮಾತನಾಡುತ್ತಿದ್ದ ಕನ್ನಡ ಈ ನಾಲ್ಕೂ ಹೇಗೆ ತನ್ನ ಸ್ವಂತ ಭಾಷೆಗಳಾದವು ಎನ್ನುವುದನ್ನು ರಾಮಾನುಜನ್ ಸ್ವಾರಸ್ಯಕರವಾಗಿ ಹೇಳುತ್ತಾರೆ. ರಾಮಾನುಜನ್ ಅವರನ್ನು ಕನ್ನಡ, ತಮಿಳು ಮತ್ತು ಇಂಗ್ಲಿಷ್ ನ ಮೂರೂ ಭಾಷೆಯವರು ತಮ್ಮವರೇ ಎನ್ನುವಷ್ಟು ಆಪ್ತತೆಯಿಂದ ಅವರನ್ನು ನೆನೆಯುತ್ತಾರೆ. ಇಷ್ಟೇಕೆ, ಅವರು ಬಹುಕಾಲ ಇದ್ದ ಶಿಕಾಗೋ ನಗರದ ನಗರ ಸಾರಿಗೆ ವ್ಯವಸ್ಥೆಯ ಎಲ್ಲಾ ಬಸ್ಸುಗಳಲ್ಲೂ ರಾಮಾನುಜನ್ ಶಿಕಾಗೊ ನಗರವನ್ನು ಕುರಿತು ಬರೆದ ಕವಿತೆಯನ್ನು ಬರೆಸಿದ್ದರು ಎಂದೂ ಕೇಳಿದ್ದೇನೆ.

ಸ್ಪೀಕಿಂಗ್ ಆಫ್ ಶಿವ ಕೃತಿಯ ಇಂಗ್ಲಿಶ್ ಅನುವಾದವು ಕನ್ನಡದ್ದೆಷ್ಟೋ ಅಷ್ಟೇ ಜಗತ್ತಿನದ್ದೂ ಆಗಿದೆ. ರಾಮಾನುಜನ್ ಅವರನ್ನು ಕನ್ನಡಿಗರು ಮತ್ತು ಅನ್ಯ ಭಾಷಿಕರು ಎಂದು ಕರೆಯಬೇಕೋ, ಬಹುಭಾಷಿಕರು ಎಂದು ಕರೆಯಬೇಕೋ? ಇವರ ಮತ್ತು ಬಿ.ಸಿ.ರಾಮಚಂದ್ರ ಶರ್ಮರ ಇನ್ನೊಂದು ಪ್ರಸಂಗ ನೆನಪಾಗುತ್ತದೆ. ಈ ಇಬ್ಬರೂ ಅನಿವಾಸಿ ಭಾರತೀಯರು ಬೆಂಗಳೂರಿಗೆ ಬಂದಾಗೊಮ್ಮೆ ದೂರದರ್ಶನದವರು ಇವರಿಬ್ಬರ ಮಾತುಕತೆಯನ್ನು ಏರ್ಪಡಿಸಿದ್ದರು. ಕನ್ನಡವಿಲ್ಲದ ಪರಿಸರದಲ್ಲಿ ಕನ್ನಡ ಸಾಹಿತ್ಯದ ಓದು ಮತ್ತು ಬರವಣಿಗೆಯನ್ನು ಮಾಡುತ್ತಿರುವ ತಮ್ಮ ಸನ್ನಿವೇಶಗಳನ್ನು ಚರ್ಚಿಸುತ್ತಿದ್ದರು. ಮಾತಿನ ನಡುವೆ ರಾಮಚಂದ್ರ ಶರ್ಮ, `ಇಂಗ್ಲಿಷ್ ನಿನ್ನದೇ ಭಾಷೆ ಅಂತ ನಿಮಗೆ ಅನ್ನಿಸುತ್ತಾ ರಾಮಾನುಜನ್? ಎಂದು ಪ್ರಶ್ನಿಸಿದರು. ಖಂಡಿತ ಎಂದರು ರಾಮಾನುಜನ್. ನಿಜಕ್ಕೂ ಮತ್ತೆ ಪ್ರಶ್ನೆ ಶರ್ಮರಿಂದ, ಡೆಫನೆಟ್ಲಿ ಎಂದರು ರಾಮಾನುಜನ್. ನಿಮಗೆ ಇಂಗ್ಲಿಷ್ ನಲ್ಲಿ ಕನಸೂ ಬೀಳುತ್ತೋ ಹಾಗಾದರೆ ಎನ್ನುವ ಪ್ರಶ್ನೆಗೆ ರಾಮಾನುಜನ್ ಹೌದು ನನಗೆ ಇಂಗ್ಲಿಷ್ ನಲ್ಲೂ ಕನಸು ಬೀಳುತ್ತೆ ಅಂದರು. ನನಗೆ ಬೀಳೋಲ್ಲಪ್ಪ ಇಂಗ್ಲಿಷ್ ನಲ್ಲಿ ಕನಸು ಎಂದು ನಕ್ಕರು ಶರ್ಮ.

ಇದು ಇನ್ನೂಂದು ರೂಪಕ ಮತ್ತು ಮಾದರಿ. ಭಾಷೆಗಳು ನಮ್ಮನ್ನು ಆವರಿಸಿ, ಅಪ್ಪಿ ನಮ್ಮ ರಕ್ತ ಮಾಂಸವಾಗುವ, ಹಲವು ಭಾಷೆಗಳ ಜಾಯಮಾನಗಳು, ಸ್ಮøತಿಕೋಶಗಳು ನಮ್ಮೊಳಗೆ ಹೊಗಬಲ್ಲ ಸಾಧ್ಯತೆಯನ್ನು ಇದು ಹೇಳುತ್ತಿದೆ. ವಚನಗಳನ್ನು ಅನುವಾದಿಸಿದಷ್ಟೇ ಉತ್ಕಟತೆಯಲ್ಲಿ ರಾಮಾನುಜನ್ ಸಂಗಂ ಸಾಹಿತ್ಯವನ್ನೂ ಅನುವಾದಿಸಿದ್ದು ಈ ಕಾರಣಕ್ಕಾಗಿ. ಅವರ ಅನುವಾದಗಳ ಬಗ್ಗೆ ನಮ್ಮ ಪ್ರಶ್ನೆಗಳೇನೇ ಇರಲಿ, ಅವುಗಳ ಮಹತ್ವ ಮತ್ತು ಪ್ರಸ್ತುತತೆಯನ್ನು ಅಲ್ಲಗಳೆಯುವುದು ಸಾಧ್ಯವೇ ಇಲ್ಲ. ಇದು ಕನ್ನಡದ ಕೆಲಸವಲ್ಲದಿದ್ದರೆ ಮತ್ತಾವುದು ಕನ್ನಡದ ಕೆಲಸ?

ಮಾಸ್ತಿ, ಬೇಂದ್ರೆ ಕನ್ನಡದ ಇಬ್ಬರು ಯುಗಪ್ರವರ್ತಕ ಲೇಖಕರು. ಮಾಸ್ತಿಯವರ ಮನೆಮಾತು ತಮಿಳು, ಬೇಂದ್ರೆಯವರಿಗೆ ಮರಾಠಿ ಕನ್ನಡದಷ್ಟೇ ಆಪ್ತವಾಗಿದ್ದ ಭಾಷೆ. ತಮಿಳು ಮತ್ತು ಮರಾಠಿ ಭಾಷೆ ಮತ್ತು ಸಾಹಿತ್ಯಗಳು ಇವರಿಬ್ಬರನ್ನೂ ಬೆಳೆಸಿದಂತೆಯೇ ಕನ್ನಡ ಭಾಷೆ ಮತ್ತು ಸಾಹಿತ್ಯ ಪರಂಪರೆಗಳ್ನೂ ಬೆಳೆಸಿವೆ. ಇವತ್ತಿನ ಬೆಳವಣಿಗೆಗಳಿಗೆ ಸಂಬಂಧಪಟ್ಟಂತೆ ಒಂದು ಮಾತು ಹೇಳಬೇಕು, ಮಾಸ್ತಿಯವರಿಗಾಗಲಿ, ಬೇಂದ್ರೆಯವರಿಗಾಗಲಿ ಭಾಷಾಬಾಂಧವ್ಯ ಎನ್ನುವುದು ಕಷ್ಟಪಟ್ಟು ಬೆಳೆಯಿಸಿಕೊಳ್ಳಬೇಕಾದ ಸಂಗತಿಯೇ ಆಗಿರಲಿಲ್ಲ. ಕನ್ನಡವನ್ನು ಕುರಿತ ಅವರ ಬದ್ಧತೆಯನ್ನೋ ಅನುರಕ್ತಿಯನ್ನೋ ಯಾರಾದರೂ ಪ್ರಶ್ನಿಸಬಹುದು ಎನ್ನುವ ಅಳುಕು ಅವರಿಗೂ ಇರಲಿಲ್ಲ, ಇತರರಿಗೂ ಇರಲಿಲ್ಲ.

ಮಾಸ್ತಿಯವರ ಚೆನ್ನಬಸವನಾಯಕ ಕಾದಂಬರಿಯ ವಿವಾದದ ಪ್ರಶ್ನೆಯು ಜಾತಿಯ ಕಾರಣಕ್ಕೆ ಹುಟ್ಟಿದ್ದೇ ಹೊರತು ಭಾಷೆಯ ಕಾರಣಕ್ಕಲ್ಲ. ಆ ಸಂದರ್ಭದಲ್ಲಿ ಕನ್ನಡದ ಬಹುಪಾಲು ಲೇಖಕರು ಜಿ.ಎಸ್.ಎಸ್. ನೇತೃತ್ವದಲ್ಲಿ ತೆಗೆದುಕೊಂಡ ನಿಲುವು, ಮಾಸ್ತಿಯವರಿಗೆ ಕೊಟ್ಟ ಒತ್ತಾಸೆ ಎಲ್ಲವೂ ಕನ್ನಡದ ಘನತೆಯನ್ನು ಎತ್ತಿಹಿಡಿಯುವಂಥದ್ದೇ ಆಗಿತ್ತು. ಕುಬ್ಜತೆಯ, ಸಾಹಿತ್ಯಕ ರಾಜಕಾರಣದ ಸಂದರ್ಭಗಳು ಕನ್ನಡದಲ್ಲಿಯೂ ಆಗಿ ಹೋಗಿವೆ ಎನ್ನುವುದು ನಿಜ. ಆದರೆ, ಆ ಪ್ರಸಂಗಗಳನ್ನು ಮೀರಿಸುವ ಆರೋಗ್ಯಪೂರ್ಣ ಹಾಗೂ ವಿವೇಕದ ಸಂದರ್ಭಗಳು ಅವುಗಳಿಗಿಂತ ಹೆಚ್ಚು. ಯಾವುದೇ ಇತರ ಭಾಷಾ ಮೂಲದ (ಯಾಕೋ ನನಗೆ ಅನ್ಯ ಭಾಷಿಕ ಎನ್ನುವ ಪದವನ್ನು ಬಳಸುವುದು ಒಪ್ಪಿಗೆಯಿಲ್ಲ. ಕಾರಣವಿಲ್ಲದೆ ಅದು ಭಾಷೆಗಳ ನಡುವೆ ಕಂದರವನ್ನು ಸೃಶ್ಟಿಸುತ್ತದೆ ಎನ್ನಿಸುತ್ತದೆ) ಲೇಖಕರನ್ನು ಭಾಷೆಯ ಕಾರಣಕ್ಕಾಗಿ ನಾವು ಅನುಮಾನಿಸಿದ ಪ್ರಸಂಗಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಆ ಲೇಖಕರಾದರೂ ಕನ್ನಡವನ್ನು ಅವರ ಪ್ರಾಣದಂತೆ ಪ್ರೀತಿಸಿದವರು. ಕನ್ನಡದ ಹಿತ, ಬೆಳವಣಿಗೆ ಮತ್ತು ಸಾಧನೆಗಳು ಅವರಿಗೆ ಅವರ ವೈಯಕ್ತಿಕ ಸಾಧನೆಗಳಷ್ಟು ಮುಖ್ಯವಾಗಿದ್ದವು. ಕನ್ನಡದ ಪ್ರಶ್ನೆಗಳು ಎದುರಾದಾಗಲೆಲ್ಲ ಮುಂಚೂಣಿಯಲ್ಲಿದ್ದವರು ಇವರೆಲ್ಲ.

ಹೊರನಾಡಿನ ಕನ್ನಡಿಗರ ವರ್ಗದ ಬಗೆಗೂ ಆಗಾಗ ನಮ್ಮಲ್ಲಿ ಪ್ರಸ್ತಾಪಗಳಾಗುತ್ತಿರುತ್ತವೆ. ಅವರ ಕೊಡುಗೆಯನ್ನು ವಾಸ್ತವಕ್ಕಿಂತ ಕಿಂಚಿತ್ ಉತ್ಪ್ರೇಕ್ಷೆಯಲ್ಲಿ ನೋಡುವುದು ಸಕಾರಣವೆಂದೇ ನನಗಂತೂ ಅನ್ನಿಸುತ್ತದೆ. ನಿಜವೆಂದರೆ, ಅವರ ಕೊಡುಗೆಗಳನ್ನು, ಸಾಹಿತ್ಯವನ್ನು ಸರಿಯಾದ ಸಂದರ್ಭದಲ್ಲಿ ಗುರುತಿಸಿದ್ದೂ ಕಡಿಮೆಯೇ. ಅದನ್ನು ತುಂಬಿಕೊಳ್ಳುವ ಪ್ರಯತ್ನವಾಗಿಯೇ ಇವುಗಳನ್ನು ನಾವು ನೋಡಬೇಕು. ಯಶವಂತ ಚಿತ್ತಾಲರ ಕಥನ ಸಾಹಿತ್ಯವನ್ನು, ಗಂಗಾಧರ ಚಿತ್ತಾಲರ ಕಾವ್ಯವನ್ನು ಸರಿಯಾಗಿ ಸ್ಥಾನನಿರ್ದೇಶನ ಮಾಡಲು ಹೆಚ್ಚಿನ ಸಮಯ ತೆಗೆದುಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಯಶವಂತ ಚಿತ್ತಾಲರ `ಆಟಕತೆ ಕನ್ನಡದ ಶ್ರೇಷ್ಠ ಕತೆಗಳಲ್ಲೊಂದು. ಅದನ್ನು ಆಮೂರರು ಗುರುತಿಸಿದ್ದು 7-8 ವರ್ಷಗಳ ನಂತರ. ಚಿತ್ತಾಲರೇ ಸಂದರ್ಶನವೊಂದರಲ್ಲಿ, ಆ ಸಂಕಲನ ಬಂದಾಗಲೇ ಗುರುತಿಸಿದ್ದರೆ ನನ್ನ ಕಥನ ಮಾರ್ಗವೇ ಬೇರೆ ದಾರಿ ಹಿಡಿಯುತ್ತಿತ್ತೇನೋ ಎಂದು ಇಂದಿಗೂ ಅನ್ನಿಸುತ್ತದೆ. ಆದರೆ ಆಮೂರರ ಲೇಖನ ಬರುವ ಹೊತ್ತಿಗೆ ತಡವಾಗಿಬಿಟ್ಟಿತ್ತುಎಂದದ್ದು ನೆನಪಾಗುತ್ತದೆ.

ನವೆಂಬರ್ ತಿಂಗಳನ್ನು ಆದ್ದರಿಂದಲೇ ಆಯಾ ಭಾಷಾ ಸಂಸ್ಥಾನಗಳ ಹುಟ್ಟಿನ ದಿನವಾಗಿ ಆಚರಿಸುವಂತೆಯೇ ಭಾಷಾ ಸಹಬಾಳ್ವೆಯ ಮಾಸವಾಗಿಯೂ ಆಚರಿಸಬೇಕು ಅನ್ನಿಸುತ್ತದೆ.

ಉದ್ದೇಶ ಈಡೇರಿಸದ ಲೇಖನಗಳು

ನವೆಂಬರ್ 2021ರ “ಸಮಾಜಮುಖಿ” ಮಾಸಿಕದಲ್ಲಿ ಪ್ರಕಟವಾಗಿರುವ ವೀರೇಂದ್ರ ಯಾದವ್ ಅವರ “ಕಲಿಕೆಗಾಗಿ ಪರೀಕ್ಷೆಗಳು, ಪರೀಕ್ಷೆಗಾಗಿ ಕಲಿಕೆಯಲ್ಲ” ಲೇಖನದ ವಿಷಯವಾಗಲೀ, ಡಾ.ಸಿದ್ಧಲಿಂಗಯ್ಯ ಹಿರೇಮಠ ಅವರ “ಮೌಲ್ಯ ಕಳೆದುಕೊಳ್ಳುತ್ತಿರುವ ಮೌಲ್ಯಮಾಪನ” ಲೇಖನದ ವಿಷಯವಾಗಲೀ ಹಾಗೂ ವನಿತಾ ಪಿ.ವಿಶ್ವನಾಥ್ ಅವರ “ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕನ್ನಡವೇಕೆ ಬೇಡದ ವಿಷಯ” ಲೇಖನದ ವಿಷಯವಗಲೀ ಬಹಳ ಹಳೆಯ ಹಾಗೂ ಬಹು ಚರ್ಚಿತ ವಿಷಯಗಳಾಗಿವೆ. ಆದರೆ ಯಾವುದಕ್ಕೂ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಶಿಕ್ಷಣದ ಬಗ್ಗೆ ಕಾಳಜಿ ಇರುವವರಿಗೆ ಈ ಮೂರೂ ವಿಷಯಗಳು ಸಮಸ್ಯೆಗಳಾಗಿ ಕಾಡುತ್ತವೆಯೇ ಹೊರತು, ಸರ್ಕಾರಕ್ಕಾಗಲೀ, ಪೋಷಕರಿಗಾಗಲೀ ಹಾಗೂ ವಿದ್ಯಾರ್ಥಿಗಳಿಗಾಗಲೀ ಇವು ಯಾವುವೂ ಸಮಸ್ಯೆಗಳೇ ಅಲ್ಲ. ಹಾಗಾಗಿ ಈ ಮೂರೂ ಲೇಖನಗಳು ಯಾವುದೇ ಉದ್ದೇಶವನ್ನೂ ಈಡೇರಿಸದೇ ಇದ್ದಾಗ್ಯೂ ಲೇಖನಗಳು ಸಮಯೋಚಿತವಾಗಿವೆ ಎಂದಷ್ಟೇ ಹೇಳಬಹುದು.

ಇದೇ ಸಂಚಿಕೆಯಲ್ಲಿ ಮುಖ್ಯ ಚರ್ಚೆಗೆ ಎತ್ತಿಕೊಂಡಿರುವ “ಬಹು ಭಾಷಿಕ ಕನ್ನಡಿಗರ ಕೊಡುಗೆ ಮತ್ತು ಮಹತ್ವ” ವಿಷಯ ಬಹಳ ಉಪಯುಕ್ತವಾಗಿದೆ. ಈ ಕುರಿತು ಒಟ್ಟು ಎಂಟು ಜನ ವಿದ್ವಾಂಸರ ಎಂಟು ಪ್ರಬುದ್ಧ ಲೇಖನಗಳಿವೆ. ಈ ಲೇಖನಗಳು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಭ್ಯಸಿಸುವವರ ಮನೋವೈಶಾಲ್ಯಕ್ಕೆ ಸಹಕಾರಿಯಾಗಿವೆ. ನಿಜಕ್ಕೂ ನನಗೆ ಈ ಲೇಖನಗಳನ್ನು ಮತ್ತೆ ಮತ್ತೆ ಓದಬೇಕೆನಿಸಿತು. ಇಂಥ ಶ್ರೇಷ್ಠ ಲೇಖನಗಳನ್ನು ಬರೆದ ವಿದ್ವಾಂಸರಿಗೆ ಹಾಗೂ ಇವುಗಳನ್ನು ಪ್ರಕಟಿಸಿದ “ಸಮಾಜಮುಖಿ” ಬಳಗಕ್ಕೆ ಅನಂತ ಧನ್ಯವಾದಗಳು.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಭಾಷೆ ಮತ್ತು ಚಿತ್ರಗಳ ಬಗ್ಗೆ ತಕರಾರು

ನವೆಂಬರ್ ಸಮಾಜಮುಖಿಯಲ್ಲಿ ಪ್ರಕಟವಾದ ಜಾಜಿ ದೇವೇಂದ್ರಪ್ಪ ಅವರ ಹೈಮಾಮ್ ಧೂಲ್ಯೋ ಕತೆ ಓದಿದೆ. ಎರಡು ತಕರಾರು!

ಒಂದು: ಈ ಕತೆಗೆ ಬಳಸಿದ ಚಿತ್ರಗಳು ಪೂರಕವಾಗಿಲ್ಲ. ಪೀರ್ಲ ದೇವರ ಚಿತ್ರಗಳನ್ನು ಬಳಸಿರುವುದು ಕತೆಗೆ ಪೂರಕ ಎನಿಸಿದರೂ ಅದು ಬೇರೆಯದೇ ಆದ ಚಿತ್ರಗಳನ್ನು ಬಳಸಬಹುದಿತ್ತು, ಕತೆಯ ಆಶಯಕ್ಕೆ ಇಂಬುಕೊಡುವಂತಿರಬೇಕಿತ್ತು. ಆದರೆ ಇಲ್ಲಿ ಪೀರ್ಲ ದೇವರ ಹಬ್ಬದ ವರದಿ ಅಥವಾ ಲೇಖನಕ್ಕೆ ಬಳಸಿಕೊಂಡ ಚಿತ್ರಗಳಿಂತಿವೆ. ಕತೆಗೆ ಈ ಥರದ ಚಿತ್ರಗಳು ಒಪ್ಪುವುದಿಲ್ಲ.

ಇನ್ನು ಒಂದು ಹೆಣ್ಣು ಮಲಗಿರುವ ಮತ್ತು ಒಂದು ಗಂಡು ಮತ್ತು ಒಂದು ಹೆಣ್ಣು ಆ ಮಲಗಿರುವ ಹೆಣ್ಣಿನ ಕಡೆ ನೋಡುತ್ತಾ ಏನೋ ಚರ್ಚಿಸುತ್ತಿರುವಂತಹ ಚಿತ್ರ ಇದೆ. ಇದು ಯಾಕೆ ಹಾಕಿದರೋ ತಿಳಿಯದು. ಈ ಕತೆಯ ಯಾವ ಸನ್ನಿವೇಶಕ್ಕೆ ಇದು ಹೊಂದುತ್ತದೋ? ಈ ಚಿತ್ರಗಳು ಸಮಾಜಮುಖಿ sಣಚಿಟಿಜಚಿಡಿಜ ಗೆ ಅಲ್ಲ!

ದಯವಿಟ್ಟು ಯಾವುದೇ ಕತೆ ಅಥವಾ ಕವಿತೆಗಳಿಗೆ ಪೂರಕವಾದ ಚಿತ್ರಗಳನ್ನು ಬಳಸಿದರೆ ಉತ್ತಮ ಎಂದು ಭಾವಿಸುವೆ.

ಎರಡು: ಕತೆಯಲ್ಲಿ ಬರುವ ಭಾಷೆ ಬಳ್ಳಾರಿ ಮತ್ತು ಆಂಧ್ರ ಗಡಿಯ ಭಾಗದ ಹಗರಿ ದಂಡೆಯ ಹಳ್ಳಿಗಳಲ್ಲಿ ಆಡುವ ಗ್ರಾಮ್ಯ ಭಾಷೆ. ಇದನ್ನು ಇಲ್ಲಿ ಟೈಪಿಸುವಾಗ ಅನೇಕ ತಪ್ಪುಗಳು ಸಂಭವಿಸಿವೆ. ಈ ಭಾಗದ ಓದುಗರಿಗೆ ತಕ್ಷಣಕ್ಕೇ ಅರಿವಿಗೆ ಬರುತ್ತದೆ. ಇತರೆ ಭಾಗದ ಜನರಿಗೆ ಕಬ್ಬಿಣದ ಕಡಲೆ ಎನಿಸಿಬಿಡುತ್ತದೆ. ಹೀಗಿರುವಾಗ ಕಾಗುಣಿತ ತಪ್ಪುಗಳಾದರೆ ಅವರಿಗೆ ಏನೂ ಅರ್ಥವಾಗುವುದಿಲ್ಲ. ವಿಶಿಷ್ಟ ಭಾಷೆಯ ಬರೆಹಗಳನ್ನು ಪ್ರಕಟಿಸುವಾಗ ತುಂಬಾ ಎಚ್ಚರಿಕೆಯಿಂದ ಟೈಪಿಸಬೇಕಾಗುತ್ತದೆ. ಅವಸರದಲ್ಲಿ ಟೈಪಿಸಿದ್ದಕ್ಕೆ ಹೀಗಾಗಿರಬಹುದು. ಸಾಧ್ಯವಾದರೆ ಕತೆಗಾರರಿಗೆ ಅದರ ಠಿಡಿಜಿ ತಿದ್ದಲು ಕೊಡಿ ಅಥವಾ ಕತೆಗಾರರೇ ನೇರವಾಗಿ ಹಾಗೆ ಕಳಿಸಿದ್ದರೆ ಅದನ್ನೇ ನೇರವಾಗಿ ಪ್ರಕಟಿಸಿದ್ದರೆ ಏನೂ ಮಾಡಲಾಗದು. ಮೊದಲಬಾರಿಗೆ ಸಮಾಜಮುಖಿ ಪತ್ರಿಕೆ ಯಾಕೋ ಅದರ sಣಚಿಟಿಜಚಿಡಿಜ ಉಳಿಸಿಕೊಂಡಿಲ್ಲ ಎನಿಸಿತು! ಕ್ಷಮಿಸಿ.

ಹರಿನಾಥಬಾಬು ವಿ., ಸಿರುಗುಪ್ಪ.

Leave a Reply

Your email address will not be published.