ಮತಾಂತರದ ಆದರದಪ್ಪುಗೆ ಔದಾರ್ಯದ ಉರುಲಾಗದಿರಲಿ!

ಮತಾಂತರವು ಅಮುಖ್ಯ ಪರಿಹಾರೋಪಾಯ ಆಗಬೇಕೇ ವಿನಾ ಉತ್ತಮ ಪರಿಹಾರವಾಗಬಾರದು. ಯಾವೊಬ್ಬ ಭಾರತೀಯ ವ್ಯಕ್ತಿಗೂ ಮೂಲ ಸೌಲಭ್ಯ, ಸವಲತ್ತು, ಸೌಕರ್ಯಗಳು ಸಿಕ್ಕದೆ ಬದುಕುವುದಕ್ಕೆ ಇರುವುದು ಮತಾಂತರ ಒಂದೇ ಮಾರ್ಗ ಎನಿಸಕೂಡದು. ಬದುಕಲು ಮುಕ್ತ ಅವಕಾಶ ಇರುವುದಾದರೆ ಮತಾಂತರವು ಅವಿಷಯವಾಗುತ್ತದೆ; ನಿಷೇಧದ ಪರ ವಿರೋಧಗಳೆಲ್ಲ ಅದೃಶ್ಯವಾಗುತ್ತವೆ.

ಬಿದರಹಳ್ಳಿ ವಾಸುದೇವ ಮೂರ್ತಿ

ಯಾವುದೇ ವಿಚಾರ ಅಲೆಅಲೆಯಾಗಿ, ದೊಡ್ಡ ದೊಡ್ಡ ಅಲೆಗಳಾಗಿ ಆಕಾಶದ ಎತ್ತರಕ್ಕೆ ನೆಗೆದು ಸುತ್ತೆಲ್ಲ ಅಪ್ಪಳಿಸಿ ಅಪ್ಪಳಿಸಿ ಹಿಮ್ಮೆಟ್ಟಿ ಎಂದಿನಂತೆ ಪ್ರಶಾಂತವಾಗಿಬಿಡುತ್ತದೆ. ಮುದ್ರಣ ಶ್ರವಣ ದೃಶ್ಯ ಮಾಧ್ಯಮಗಳ ಸಾಂಪ್ರದಾಯಿಕ ವೈಯಕ್ತಿಕ ಸಂಘಟಿತ ಮತ್ತು ಕುಶಾಗ್ರ ಮತಿಯಿಂದ ವ್ಯಕ್ತಿವ್ಯಕ್ತಿಯ ಮನಸ್ಸಿಗೆ ನುಗ್ಗಿ ತನ್ಮೂಲಕ ಸಮಾಜದ ಸಮಷ್ಟಿ ಮನಸ್ಸನ್ನು ತ್ವರಿತವಾಗಿ ತೀವ್ರವಾಗಿ ಪ್ರಚೋದಿಸುವುದು ಸಮಕಾಲೀನ ಜಗತ್ತಿನ ಸುದ್ದಿಜಾಲಗಳ ಹಿಂಗದ ಸುದ್ದಿದಾಹ. ವೈಯಕ್ತಿಕ ಹಾಗೂ ಸಂಘಟನೆಯ ದೃಷ್ಟಿಯಿಂದ ಎಳಸು ಎನಿಸಿದರೂ ವ್ಯಷ್ಟಿಯ ಸಮಷ್ಟಿಯ ಪ್ರತಿಕ್ರಿಯೆ ಸ್ಪಂದನೆಗಳ ದೃಷ್ಟಿಯಿಂದ ಸಾಂಪ್ರದಾಯಿಕ ಮಾಧ್ಯಮಗಳೆಲ್ಲದರ ಸಮಸಮಕ್ಕೂ, ಸ್ವಲ್ಪ ಹೆಚ್ಚೇ ಅಂದರೆ ತಪ್ಪಾಗದ ತ್ವರೆ ತೀವ್ರತೆಯಿಂದಲೇ ಮನಸ್ಸಿನ ಧೋರಣೆಗಳನ್ನು ಪ್ರಚೋದಿಸುವುದು ಸಾಮಾಜಿಕ ಜಾಲತಾಣಗಳ ಸುದ್ದಿಬಾಕತನ!

ವರ್ಷಗಳಿಂದ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಎಂತೋ ಅಂತೆಯೇ ಕರ್ನಾಟದಲ್ಲಿ ಸುದ್ದಿಕೂಸಾದ ಮತಾಂತರ ನಿಷೇಧ ಆಗ ಆಡಳಿತ ಪಕ್ಷ ಈಗ ವಿರೋಧ ಪಕ್ಷದ ಮೊಲೆಹಾಲು ಕುಡಿದು, ತಟ್ಟಿದಾಗ ಸಪ್ಪಗೆ ಮಲಗಿ ನಿದ್ರಿಸಿ ಸ್ವಲ್ಪ ವಿರಾಮದ ನಂತರ ಈಗ ಆಡಳಿತ ಪಕ್ಷ ಆಗ ವಿರೋಧ ಪಕ್ಷದ ಲೆಕ್ಕಾಚಾರದ ನವಿರಾದ ತಟ್ಟುವಿಕೆಯಿಂದ ಬೆಚ್ಚಿ ಎದ್ದ ಕೈಗೂಸಾಗಿದೆ.

ಹಸುಗೂಸನ್ನು ಮನೆಮನೆಗಳಲ್ಲಿ ತೊಟ್ಟಿಲಿಗೆ ಹಾಕುವ ಸಂಪ್ರದಾಯದಂತೆ ಯಾರದೇ ದೃಷ್ಟಿ ತಗುಲದೆ ಇರಲು ಮೊದಲು ಗುಂಡಪ್ಪನನ್ನು ಇಟ್ಟು ತೂಗಿ ಆಮೇಲೆ ಮಗುವನ್ನು ಮಲಗಿಸಿ ಹೆಸರಿಟ್ಟು ಎತ್ತಾಡಿಸಿ ತೂಗಿ ಅಕ್ಕ ಪಕ್ಕದವರ ಉಪಸ್ಥಿತಿಯಲ್ಲಿ ಸಂತಸ ಸಂಭ್ರಮ ಪಡುವ ರೂಢಿಗಳು ವಾಡಿಕೆಗಳು ಈಚೀಚೆಗೆ ಅಷ್ಟೇನೂ ಇಲ್ಲ ಎನಿಸಿದರೂ ನಶಿಸದಿರುವುದು ಈಗಲೂ ಇರುವ ಮನೆಗಳಲ್ಲಿ, ಇದ್ದು ಗೊತ್ತಿರುವವರಿಗೆ ನೆನಪಾಗುವುದು ಸಹಜ. ಎಲ್ಲ ಕೂಸುಗಳಿಗೂ ಆ ಭಾಗ್ಯ ಇರುವುದಿಲ್ಲ. ಸಮಸಮಾಜದ ಎಷ್ಟೋ ಕೂಸುಗಳು ಅಂತಹ ಸಂತಸ ಸಂಭ್ರಮಗಳಿಗೆ ಹೊರತಾಗಿರುವುದು ಅಸಮವಾಗೇ ಹುಟ್ಟಿ ಬೆಳೆಯುತ್ತಿರುವುದು ಎಲ್ಲರ ಅನುಭವ.

ಈಗ ಕರ್ನಾಟಕದ ಮತಾಂತರ ನಿಷೇಧದ ಹಿನ್ನೆಲೆ ಅವಾಂತರನೆಲೆ ಮುನ್ನೆಲೆ ಸದನದಲ್ಲಿ ಒಪ್ಪಿದ ನಂತರದ ಪ್ರಕ್ರಿಯೆ ನೆನೆಗುದಿಗೆ ಬಿದ್ದಿರುವುದು ಎಲ್ಲವೂ ಎಲ್ಲರಿಗೂ ನಿಚ್ಚಳವಾಗಿದೆ.

ಅದನ್ನೇ ಒಮ್ಮೆ ಸೂಕ್ಷ್ಮವಾಗಿ ಮೆಲುಕು ಹಾಕಿಬಿಡೋಣ:

ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಮತ್ತು ಭಾರತ ಸಂವಿಧಾನದ ಭಾಗ III ರ ಇತರ ಉಪಬಂಧಗಳಿಗೆ ಒಳಪಟ್ಟು ಭಾರತ ಸಂವಿಧಾನದ 25ನೇ ಅನುಚ್ಛೇದದ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಖಾತ್ರಿ. ಮೂಲಭೂತ ಹಕ್ಕುಗಳಿಂದ ವ್ಯಕ್ತಿಗಳೆಲ್ಲ ಯಾವುದೇ ಧರ್ಮವನ್ನು ಆಯ್ದು ಅಂಗೀಕರಿಸಿ ಆಚರಿಸಲು, ಪ್ರಸಾರ ಮಾಡಲು ಮುಕ್ತರು. 25ನೇ ಅನುಚ್ಛೇದದ ಅಡಿಯ ಪ್ರಚಾರದ ಹಕ್ಕು ಮತ್ತೊಬ್ಬ ವ್ಯಕ್ತಿಯನ್ನು ಮತಾಂತರಗೊಳಿಸುವ ಹಕ್ಕನ್ನು ಒಳಗೊಳ್ಳುವುದಿಲ್ಲ ಎನ್ನುವುದು ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯ.

ಕರ್ನಾಟಕದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದಿವೆ ಎನ್ನಲಾಗಿರುವ ಈಚೀಚೆಯ ಆಮಿಷ ಒತ್ತಾಯ ಬಲವಂತ ವಂಚನೆಗಳ ಮತಾಂತರ, ಸಾಮೂಹಿಕ ಮತಾಂತರಗಳನ್ನು ತಡೆಗಟ್ಟಲು ಅಂತಹ ಮಂತಾಂತರಗಳಲ್ಲಿ ತೊಡಗಿರುವವರನ್ನು ಶಿಕ್ಷಿಸಲು ಶಾಸನವಿರದೆ ಸಾಕಷ್ಟು ಕಾನೂನುಗಳ ಅಧ್ಯಯನದ ನಂತರ ಅಧಿನಿಯಮ ಹೊರಡಿಸಲು ರಾಜ್ಯ ಕಾನೂನು ಆಯೋಗÀ ಶಿಫಾರಸು ಮಾಡಿದೆ.

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ, ಹಕ್ಕು, ಸಂರಕ್ಷಣಾ ವಿಧೇಯಕ, 2021 (2021ರ ವಿಧಾನಸಭೆಯ ವಿಧೇಯಕ ಸಂಖ್ಯೆ 50)- ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆಗಾಗಿ ಮತ್ತು ತಪ್ಪು ನಿರೂಪಣೆ (ಮಿಸ್ಸಿಂಟರ್ಪ್ರಿಟೇಷನ್), ಬಲವಂತ, ಅನುಚಿತ ಪ್ರಭಾವ, ಒತ್ತಾಯ, ಆಮಿಷದ ಮೂಲಕ ಅಥವಾ ವಂಚಿಸುವ ಉದ್ದೇಶದಿಂದ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನು ಬಾಹಿರವಾಗಿ ಮತಾಂತರ ಮಾಡುವುದನ್ನು ನಿಷೇಧಿಸುವುದಕ್ಕಾಗಿ ಹಾಗೂ ಅದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕವಾದ ವಿಷಯಗಳಿಗಾಗಿ ಉಪಬಂಧ ಬೇಕು ಎನ್ನುವುದು ಆಡಳಿತ ಪಕ್ಷದ ಪೀಠಿಕೆ.

ಈಗಾಗಲೇ ಭಾರತದಲ್ಲಿ ಜಾರಿಯಲ್ಲಿರುವ ಮತಾಂತರ ಕಾಯಿದೆಯ ಅನುಕೂಲದ ಹರಣವಾಗುತ್ತದೆ ಎನ್ನುವುದು ವಿರೋಧ ಪಕ್ಷ, ಇತರ ಪಕ್ಷಗಳ, ಧರ್ಮ ಮತಗಳ ಅನುಯಾಯಿಗಳ ಟೀಕೆ.

ಸದನದ ಅಂಗೀಕಾರಕ್ಕೂ ಅನುಷ್ಠಾನಕ್ಕೂ ನಡುವೆ ಇರುವ ಅಂತರದ ಬಗ್ಗೆ ಬಹುತೇಕ ತಮ್ಮ ತಮ್ಮದೇ ನಿಲುವುಗಳನ್ನು ತಳೆದು ತಳೆಯದೆ ತಡವರಿಸಿ ತಳೆಯದಿರಲು ನಿರ್ಧರಿಸಿ ಬಗೆ ಬಗೆಯಾಗಿ ಮತಾಂತರ ನಿಷೇಧದ ರಾಗಕ್ಕೆ ದನಿಗೂಡಿಸಿ ತಾಳಕ್ಕೆ ಹೆಜ್ಜೆ ಹಾಕಿ ಕುಣಿ ಕುಣಿದು ತಮತಮಗೆ ಒಗ್ಗಿರುವ ತಾವು ತಾವು ರೂಢಿಸಿಕೊಂಡಿರುವ ಬದುಕಿನ ರಾಗ ತಾಳ ಕುಣಿತಗಳಿಗೆ ಎಲ್ಲರೂ ಮರಳಿರುವುದು ಅತ್ಯಂತ ಸಹಜ, ಸಮಕಾಲೀನ ವಿಶ್ವದೃಷ್ಟಿಯ ಭಾರತದ ಮಣ್ಣಿನ ಕನ್ನಡದ ಕಣ್ಣಿನ ಎಲ್ಲರ ಮುಂದಿರುವ ಇಂದಿನ ಬಹುತ್ವದ ವಾಸ್ತವ.

ಚಿಕ್ಕ ಮಗುವಿನ ಬೆರಳ ತುದಿ ಹಗುರವಾಗಿ ಮೊಬೈಲ್ ಸ್ಕ್ರೀನಿಗೆ ಅಕಸ್ಮಾತ್ ಸೋಕಿದೊಡನೆ ಮಗುವಿಗೆ ಏನೂ ಅರಿವಾಗದಿದ್ದರೂ ತೆರೆದುಕೊಂಡುಬಿಡುವ ಬಹುತ್ವ ಜಗತ್ತಿನ ವಾಸ್ತವದ ಬಗ್ಗೆ ಎಷ್ಟೇ ತಿಳಿದರೂ ತಿಳಿಯುವುದು ಅಗಾಧವಾಗೇ ಉಳಿದುಬಿಡುವುದು ಜಗತ್ತಿನ ವೈಚಿತ್ರ್ಯ. ಇರಲಿ..

ತನ್ನನ್ನು ತಾನೇ ಮೂರು ಲೋಕಗಳ ಒಡೆಯ ಎಂದು ಘೋಷಿಸಿದ ಹಿರಣ್ಯಕಶಿಪುವಿನ ಮಗ ಬಾಲಕ ಪ್ರಹ್ಲಾದನಿಗೆ ಗುರುಗಳು ‘ಹಿರಣ್ಯಕಶಿಪುವೇ ನಮಃ’ ಎಂದು ಬೋಧಿಸಿದರೆ ಭಕ್ತಿ ಸ್ವಭಾವದ ಪ್ರಹ್ಲಾದ ‘ನಾನು ವಿಷ್ಣುವನ್ನೇ ಭಜಿಸುವವನು. ವಿಷ್ಣುವನ್ನು ಬಿಟ್ಟು ಮತ್ತ್ಯಾರನ್ನೂ ಭಜಿಸುವುದಿಲ್ಲ’ ಎಂದು ತನ್ನ ತಂದೆಯದು ಅಹಂಕಾರ ಸ್ವಾರ್ಥ ಎಂದು ಗುರುಗಳ ಮಾತನ್ನು ಕಡೆಗಣಿಸಿ ರಾಜಾಜ್ಞೆಯನ್ನೇ ಧಿಕ್ಕರಿಸಿ ತನ್ನ ವಯಸ್ಸಿನ ಸಹಪಾಠಿಗಳನ್ನೂ ಹರಿಭಕ್ತಿಯೆಡೆಗೆ ಹರಿಸಿದ ಭಕ್ತಿ ಭಾವ ವೈಯಕ್ತಿಕ ಸ್ವಾತಂತ್ರ್ಯದ ಮೇಲ್ಮೆಯನ್ನು ಸಾರುತ್ತದೆ ಭಾಗವತ ಪುರಾಣ.

9ನೇ ಶತಮಾನದ ಕಾಶ್ಮೀರ ನ್ಯಾಯಪಂಡಿತ ಜಯಂತ ಭಟ್ಟ ‘ಆಗಮಡಂಬರ’ ಅಂದರೆ ‘ಧರ್ಮದ ಸಡಗರ’ ಎಂದರ್ಥ ಕೊಡುವ ನಾಟಕದಲ್ಲಿ ಸಮಕಾಲೀನ ವೈದಿಕ ಪರಂಪರೆಯನ್ನು ಪ್ರತಿನಿಧಿಸುವ ಮುಖ್ಯಪಾತ್ರ ಸಂಕರ್ಷಣನ ಮೂಲಕ ಬೌದ್ಧ ಜೈನ ಮತಗಳು ಅಸಾಂಪ್ರದಾಯಿಕ ಎಂದು ನಿರೂಪಿಸುತ್ತಾ ಸಾರ್ವಜನಿಕವಾಗಿ ಮತಮತಗಳನ್ನು ಖಂಡಿಸುತ್ತಾ ಖಂಡಿಸುತ್ತಾ ಆಳುವ ಚಕ್ರವರ್ತಿಯು ಯಾವುದೇ ಪರಂಪರೆಯ ಚೌಕಟ್ಟಿನ, ಹೊಸ್ತಿಲಿನ ಹೊರಗೆ ಸಾರ್ವಜನಿಕವಾಗಿ ಕೈಗೊಳ್ಳುವ ಪ್ರಕ್ರಿಯೆಯನ್ನು ಉತ್ತೇಜಿಸುವುದಿಲ್ಲ ಎಂದರಿವಾಗಿಸಿ ಎಲ್ಲ ಧರ್ಮಗಳಿಗೂ ಮುಕ್ತ ಅವಕಾಶವಿದೆ ಎನ್ನುವ ಸಂದೇಶ ನೀಡುತ್ತಾನೆ. ಮತಮತಗಳು ತಮ್ಮ ಇತಿಮಿತಿಗಳೊಳಗಿದ್ದು, ಅತಿರೇಕಗಳಿಗೆ ಎಡೆಗೊಡಗದೆ, ಭಿನ್ನ ಭಿನ್ನ ಮತಗಳು ಪರಸ್ಪರ ಗೌರವಾದರಗಳಿಂದ ‘ವಿಶ್ವ ಮತ’ವಾಗಿ ಎಲ್ಲ ಮತಗಳನ್ನೂ ಒಳಗೊಳ್ಳಬೇಕು ಎನ್ನುವ ಮತಬಹುತ್ವವನ್ನು ಸೂಚಿಸುತ್ತದೆ ಜಯಂತ ಭಟ್ಟನ ನಾಟಕ.

11ನೇ ಶತಮಾನದ ಶ್ರೀವೈಷ್ಣವ ಗುರುಗಳಾದ ಶ್ರೀ ರಾಮಾನುಜಾಚಾರ್ಯರು ದಾಸ, ದಾಸುಲು, ದಾಸು ಎಂದು ಕರೆಯುತ್ತಿದ್ದ ಅಸ್ಪøಶ್ಯರನ್ನು ಶ್ರೀ ವೈಷ್ಣವ ಭಕ್ತಿ ದೀಕ್ಷೆ ಕೊಟ್ಟು ಶ್ರೀ ವೈಷ್ಣವ ಪಂಥಕ್ಕೆ ಸೇರಿಸಿಕೊಳ್ಳುತ್ತಿದ್ದುದಲ್ಲದೆ ಅವರನ್ನೆಲ್ಲ ‘ತಿರುಕುಲತ್ತರ್’ ಅಂದರೆ ‘ಉದಾತ್ತ ಸಂತತಿ’ ಎಂದು ಕರೆದು ಬಯಸಿ ಬಂದವರನ್ನೆಲ್ಲ ಭಕ್ತಿ ಪಂಥದೊಳಗೆ ಒಳಗೊಳಿಸಿರುತ್ತಾರೆ.

12ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರು ಎಲ್ಲ ಕಾಯಕದವರನ್ನೂ, ಎಲ್ಲ ಸ್ತರದವರನ್ನೂ ಶಿವಭಕ್ತರನ್ನಾಗಿಸಿ ಹುಟ್ಟು ಮುಖ್ಯವಲ್ಲ ಆಚಾರ ಮುಖ್ಯ ಎಂದು ಮೇಲು ಕೀಳು ಭಾವನೆ ಅಳಿಸಿ ಸಮಾಜದಲ್ಲಿ ಸಮಾನತೆ ಸಾರಿ ಎಲ್ಲರನ್ನೂ ಒಂದಾಗಿಸಿದ್ದು ಭಾರತ ಇತಿಹಾಸದ ಬಹು ಮುಖ್ಯ ಅಧ್ಯಾಯ.

ಸರಿಸುಮಾರು ಅದೇ ಶತಮಾನದ ಆಸುಪಾಸಿನಲ್ಲಿ ಹೊಯ್ಸಳರ ರಾಜ ವಿಷ್ಣುವರ್ಧನ ವೈಷ್ಣವ ದೀಕ್ಷೆ ತೆಗೆದುಕೊಂಡು ಶ್ರೀವೈಷ್ಣವರ ಕನ್ಯೆಯನ್ನು ಮದುವೆ ಆದರೂ ಅವನ ಪಟ್ಟದರಾಣಿ ಶಾಂತಲೆ ಜೈನಳಾಗೇ ಉಳಿದಿದ್ದು ಒಂದೇ ರಾಜ ಕುಟುಂಬದಲ್ಲೇ ಎರಡು ಪಂಥಗಳು ಒಟ್ಟಿಗೇ ಇರುವುದು ಸಾಧ್ಯ ಎಂದು ಇತಿಹಾಸ ತಿಳಿಸುತ್ತದೆ.

ಭಾರತದಲ್ಲಿ ಇದ್ದ ಅಸ್ಪøಶ್ಯತೆ, ಜಾತಿ, ಬಡತನ, ಲಿಂಗತಾರತಮ್ಯ, ಮತಾಂತರ ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲೇ ಮುಸ್ಲಿಮರು, ಕೈಸ್ತರು ಆಗಿನ ಶತಕಗಳಲ್ಲಿ ಭಾರತದ ಜನತೆ ಕೈಸ್ತ ಮತ್ತು ಮುಸಲ್ಮಾನ ಮತಗಳಿಗೆ ಅಂತರಗೊಳ್ಳಲು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅವಕಾಶ ಕಲ್ಪಿಸಿರುವುದೂ ಇತಿಹಾಸ.

ಮಹಾತ್ಮಾ ಗಾಂಧಿ, ರಾಜಾರಾಂ ಮೋಹನರಾಯ್ ಮತ್ತಿತರ ಸಮಾಜ ಸುಧಾರಕರು ಅಸ್ಪøಶ್ಯತೆ, ಜಾತಿ, ಬಡತನ, ಲಿಂಗಭೇದಗಳನ್ನು ಖಂಡಿಸಿ ಸಮಾನತೆಯನ್ನು ಸೌಹಾರ್ದವನ್ನು ಅನೇಕತೆಯಲ್ಲಿ ಏಕತೆಯನ್ನು ಸಾಧಿಸುವತ್ತ ಶ್ರಮಿಸಿ ಬಹುಮಟ್ಟಿಗೆ ಯಶಸ್ವಿಯಾಗಿರುವರು.

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಅಸ್ಪøಶ್ಯತೆ, ಜಾತಿ, ಬಡತನ, ಲಿಂಗಭೇದಗಳ ನಿರ್ಮೂಲನೆಗೆ ಸತತವಾಗಿ ಪ್ರಯತ್ನಿಸಿ ತಾವಿದ್ದಂತೆ ಮುಂದುವರೆಯಲು ತಮ್ಮ ಮನಸ್ಸು ಒಪ್ಪದೆ ಬೌದ್ಧ ಮತವನ್ನು ಅನುಸರಿಸಿ, ಅವರ ದಾರಿಯಲ್ಲಿ ಬೌದ್ಧ ಮತವನ್ನು ಅವಲಂಬಿಸಿ ಅನೇಕರು ಬದುಕುತ್ತಿರುವುದನ್ನು ಈಗಲೂ ಕಾಣುತ್ತಿದ್ದೇವೆ.

ಮಹಿಳೆಯರು ತವರಿನಿಂದ ಮದುವೆಯಾಗಿ ಬೇರೆಡೆ ಹೋಗಿ ಅಲ್ಲಿಯೇ ಬದುಕುವುದು ಬಹಳ ಹಿಂದಿನಿಂದ, ಅಲ್ಲಲ್ಲೇ ಇರುವ ಭಿನ್ನ ಭಿನ್ನ ಕುಟುಂಬ ಪದ್ಧತಿಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲೆಡೆ ನಡೆದುಕೊಂಡು ಬಂದಿರುವ ಪದ್ಧತಿ. ಪುಟ್ಟ ಕುಟುಂಬ ಪರಿಕಲ್ಪನೆ ಹೆಚ್ಚು ಪ್ರಸಿದ್ಧಿ ಪಡೆದಂದಿನಿಂದ ಮುಂದುವರೆದ ಬಹುತೇಕರು ತವರು ಬಿಟ್ಟು ಬೇರೆ ಇರುವ ಪದ್ಧತಿ ಮತಾಂತರ ಅಥವಾ ವಲಸೆ ಯಾವುದೂ ಅಲ್ಲದಿದ್ದರೂ ಚಿಕ್ಕಂದಿನಿಂದ ಬೆಳೆಯುವವರೆಗೂ ಇದ್ದ ತಾಣವನ್ನು ಬಿಟ್ಟು ಬೇರೊಂದು ತಾಣಕ್ಕೆ ಕಾಯಾ ವಾಚಾ ಮನಸಾ ಒಗ್ಗಿಕೊಳ್ಳುವುದು ಇನ್ನೂ ಪ್ರಚಲಿತವಿರುವ ವ್ಯವಸ್ಥೆ.

ಸಮಸ್ಯೆಯನ್ನು ಎಲ್ಲರೂ ಒಂದಾಗಿ ಬಗೆಹರಿಸಿಕೊಳ್ಳುವ ಬದಲು ಪರಸ್ಪರ ಹೊಡೆದಾಡಿ ಚೂರು ಚೂರಾಗಿರುವ ಒಡಕು ಕನ್ನಡಿಯಲ್ಲೇ ಒಡಕಲು ಬಿಂಬಗಳಾಗಿ, ಇದ್ದಬದ್ದ ಗೊತ್ತು ಗುರಿ ಎಲ್ಲವನ್ನೂ ಬದಿಗಿಟ್ಟು, ಹಳ್ಳಕ್ಕೆ ಹೊಡೆದು ಹೋರಾಡಿ ಹೋರಾಡಿ ದಣಿಯುವ ಬದಲು ಒಲಿದು ಒಗ್ಗೂಡಿ ಇಷ್ಟೆಲ್ಲ ವರ್ಷವಾದರೂ ಏನಿತ್ತು, ಏನಾಗಿದೆ ಏನಾಗಿಲ್ಲ, ಏನಾಗಬೇಕಿತ್ತು ಏನಾಗುತ್ತಿಲ್ಲ, ಏನಾಗಬೇಕು ಎನ್ನುವುದನ್ನು ಬಿಟ್ಟೂ ಬಿಡದೆ ಪರಸ್ಪರ ಕೆಸರೆರಚದೆ, ಕಿತ್ತಾಡದೆ ಬಸವ ಪಥದಲ್ಲಿ, ವಿವೇಕಾನಂದರ ಮಾರ್ಗದಲ್ಲಿ ಗಾಂಧಿ ಮಾರ್ಗದಲ್ಲಿ, ಅಂಬೇಡ್ಕರ್ ಇಟ್ಟ ಹೆಜ್ಜೆಗಳ ಜಾಡಿನಲ್ಲಿ ಕೊನೆ ಮುಟ್ಟುವವರೆಗೂ ಪ್ರಯತ್ನಿಸುವುದು ಇವತ್ತಿನ ಅಗತ್ಯ. ಎಲ್ಲರಿಗೂ ಸಮಾನ ಅವಕಾಶ ಇರುವಾಗ, ಒಬ್ಬರನ್ನೊಬ್ಬರು ಪ್ರಶಂಸಿಸಿ, ಪ್ರಶಸ್ತಿ ನೀಡಿ, ಪ್ರತಿಷ್ಠೆ ಹೆಚ್ಚಿಸುವುದೇನೂ ಅಗತ್ಯವಿಲ್ಲ. ಆದರೆ ಕೊನೆ ಪಕ್ಷ ಒಬ್ಬರನ್ನೊಬ್ಬರು ದ್ವೇಷಿಸದೆ ನಿಮ್ಮದು ನಿಮಗೆ ಚಂದ ನಮ್ಮದು ನಮಗೆ ಚಂದ ಎಂದು ಪರಸ್ಪರ ಗೌರವ ಆದರಗಳಿಂದ ಬದುಕುವುದು ಅತ್ಯವಶ್ಯಕವಾಗಿದೆ.

ಬಹುತ್ವ ಭಾರತದಲ್ಲಿ ಒಂದೇ ಜಾತಿ ಒಂದೇ ಪಂಗಡ ಒಂದೇ ಮತ ಇರುವುದು ಸಾಧ್ಯವಿಲ್ಲ. ಅಂತೆಯೇ ವಿಶಾಲ ವಿಶ್ವದಲ್ಲಿಯೂ ಕೂಡ. ಆಸ್ತಿಕರು ನಾಸ್ತಿಕರು ಎಲ್ಲೆಡೆ ಇರುವವರೇ ಆಗಿದ್ದಾರೆ. ಬೇರೆ ಬೇರೆ ಮತಗಳ ಮೇಲೆ ನಂಬಿಕೆ ಇರದ ಆ ಮತಗಳನ್ನು ಧಿಕ್ಕರಿಸಿ ಬದುಕುವ ಜನರು ಇರುವಲ್ಲಿ ನಂಬಿಕೆ ಇರದವರನ್ನು ಆ ಮತಗಳಲ್ಲಿ ನಂಬಿಕೆ ಹುಟ್ಟುವಂತೆ ಮಾಡುವುದಕ್ಕಿಂತ ಬೇರೆ ಮತದವರನ್ನು ತಮ್ಮ ಮತಕ್ಕೆ ಸೇರಿಸುವ ಹಂಬಲ ಬಿಡಬೇಕು.

ಇಷ್ಟಪಟ್ಟು ತಾವಾಗೇ ತಮ್ಮ ಮತವನ್ನು ಬಿಟ್ಟು ಬೇರೊಂದು ಮತವನ್ನು ಆಯ್ದುಕೊಳ್ಳುವವರಿಗೆ ಮುಕ್ತ ಅವಕಾಶ ಇದ್ದೇ ಇರುವಾಗ ಹಿಂಸೆ, ಕ್ರೌರ್ಯ, ಒತ್ತಾಯ, ಓಲೈಕೆಗಳೇಕೆ? ಯಾವುದೂ ಅತೀ ಅತೀ ಆಗುವುದು, ಅತಿರೇಕಕ್ಕೆ ಎಳೆಸುವುದು ಸಲ್ಲದು. ಎಲ್ಲವೂ ಅಂದರೆ ‘ಎಷ್ಟು ಬೇಕೋ ಅಷ್ಟು, ಎಷ್ಟು ಬೇಕೋ ಅಷ್ಟೂ’ ಇರುವಾಗ ಎಲ್ಲವೂ ಸಹ್ಯವಾಗಿರುತ್ತದೆ. ಇಲ್ಲವಾದಲ್ಲಿ ಗೊಂದಲಗಳು ಸೃಷ್ಟಿಯಾಗತ್ತಲೇ ಇರುತ್ತವೆ.

ಜಗತ್ತಿನಾದ್ಯಂತ ಇರುವ ಕ್ರೈಸ್ತರು, ಮುಸಲ್ಮಾನರು ಮತ್ತಿತರ ಎಲ್ಲ ಮತಗಳವರು ವಿಶ್ವಗ್ರಾಮದಲ್ಲಿ ಸಹನೆ, ಸಹಕಾರ, ಸಹಬಾಳ್ವೆ, ಸೌಹಾರ್ದಗಳೊಂದಿಗೆ ಭಿನ್ನ ಭಿನ್ನ ನೆಲಗಳಲ್ಲಿ, ನೆಲೆಗಳಲ್ಲಿ, ನೆರೆಗಳಲ್ಲಿ, ನೆರೆಹೊರೆಗಳಲ್ಲಿ ತಮ್ಮ ತಮ್ಮ ಮತಗಳನ್ನು ಅನುಸರಿಸುವುದು ಎಷ್ಟು ಆಪ್ಯಾಯವೋ, ಸಮಂಜಸವೋ, ಅಷ್ಟೇ ಆಪ್ಯಾಯ, ಸಮಂಜಸ ಬೇರೆ ಬೇರೆ ಮತದವರು ತಮ್ಮ ತಮ್ಮ ಮತಗಳನ್ನು ಅನುಸರಿಸುವುದು ಎಂದು ತಿಳಿಯದಿದ್ದರೆ ಆಗ ವಿಶ್ವಬಹುತ್ವದಲ್ಲಿ ವ್ಯಷ್ಟಿ ವ್ಯಷ್ಟಿಯೂ ಸಮಷ್ಟಿ ಸಮಷ್ಟಿಯೂ ಪರಸ್ಪರ ಅವಲಂಬಿಸಿಯೇ ಬದುಕಬೇಕಿರುವ ಪ್ರಕೃತಿಯ ನೈಸರ್ಗಿಕ ಏರ್ಪಾಟನ್ನೇ ಮತಮತಗಳ ತಿಕ್ಕಾಟದಲ್ಲಿ ಹೊಸಗಿದಂತಾಗಿಬಿಡುತ್ತದೆ.

ಒಂದುವೇಳೆ ಆಡಳಿತದಲ್ಲಿರುವ ಪಕ್ಷ ರಾಜಕೀಯ ತಂತ್ರವಾಗಿ ಬರುವ ಚುನಾವಣೆಯಲ್ಲಿ ಮತ ಗಳಿಸುವುದಕ್ಕಾಗಿಯೇ ಮತಾಂತರ ನಿಷೇಧಿಸುತ್ತಿದ್ದಾರೆ ಎಂದೇ ತಿಳಿದರೂ, ವಿರುದ್ಧ ಪಕ್ಷಗಳೂ ಕೂಡ ಮತಾಂತರ ನಿಷೇಧವನ್ನು ವಿರೋಧಿಸಿ ಬರುವ ಚುನಾವಣೆಯಲ್ಲಿ ಮತ ಗಳಿಸುವುದನ್ನು ಸಂಪೂರ್ಣವಾಗಿ ಬಿಟ್ಟು ಬರೀ ಅಲ್ಪಸಂಖ್ಯಾತರ, ಬಡವರ, ಅಸ್ಪøಶ್ಯರ ಪರ ಏನೂ ಶ್ರಮಿಸುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಅಲ್ಪಸಂಖ್ಯಾತ ಬಾಂಧವರು ಮತಾಂತರ ನಿಷೇಧವನ್ನು ಜಾರಿಗೊಳಿಸುವವರೆಗೂ, ತದನಂತರವೂ ಲಭ್ಯವಿದ್ದ ಸಾಂವಿಧಾನಿಕ ಸವಲತ್ತು ಸೌಲಭ್ಯ ಸೌಕರ್ಯಗಳಲ್ಲಿ ಚಾಚೂ ತಪ್ಪದೆ ಅನುಭವಿಸುವವರೇ ಆಗಿ ತಮ್ಮ ತಮ್ಮ ಮತದವರು ಮುಂದುವರೆಯುವರು. ಜಾರಿಗೊಳಿಸಿದ ನಂತರ ಅಗಬಹುದಾದ ಅವಾಂತರ ಅತಿರೇಕಗಳ ಬಗ್ಗೆ ಮುಂಜಾಗರೂಕತೆ ವಹಿಸುವುದು ಸಹಜ. ಅಂತಹ ಅವಾಂತರ ಅತಿರೇಕಗಳು ಆಗದಂತೆ ಎಚ್ಚರವಹಿಸುವುದು ಸರಿ. ಈಗಾಗಲೇ ತಮ್ಮ ತಮ್ಮ ಇತಿಮಿತಿಗಳೊಳಗೆ ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮತ್ತೊಂದು ಮತದೊಡನೆ ಪೈಪೋಟಿಗಿಳಿಯದೆ ತಮ್ಮ ತಮ್ಮ ಆಶೋತ್ತರಗಳಿಗೆ ಧಕ್ಕೆ ಆಗದಂತೆ ಎಲ್ಲ ಮತದವರೂ ಪರಸ್ಪರ ಆದರ ಗೌರವ ಸೌಹಾರ್ದಗಳಿಂದ ಇರುವಂತಾಗಬೇಕು.

ಪ್ರೇಮಿಗಳಿಗೆ ನಿರ್ಬಂಧ, ಮುಕ್ತ ಅವಕಾಶ ಇರಬೇಕು. ಮದುವೆ ಆಗುವುದಕ್ಕೂ, ಕೂಡಿ ಇರುವುದಕ್ಕೂ ಯಾವುದೇ ಮತ ಯಾವುದೇ ಹಿಂಸೆಗೆ ಗುರಿಯಾಗಿಸಬಾರದು, ಕಿಂಚಿತ್ತೂ ಕಾಡಬಾರದು. ಮತಾಂತರ ಆದಮೇಲೂ ವ್ಯಕ್ತಿಗತ ನಂಬಿಕೆ ಆಚರಣೆಗಳನ್ನು ಪರಸ್ಪರ ಗೌರವಿಸಿ ಮತಾಂತರಕ್ಕೂ ಮುಂಚಿನ, ನಂತರದ ಮತಗಳಲ್ಲಿ ಇಷ್ಟವಾಗುವ ಮತವನ್ನು ಅನುಸರಿಸುವ ಇಷ್ಟವಾಗದುದನ್ನು ಅನುಸರಿಸದಿರುವ ಸ್ವಾತಂತ್ರ್ಯ, ಆಯ್ಕೆ ಇರಬೇಕು. ಅದಕ್ಕೆ ಸೂಕ್ತ ಮುಕ್ತ ಉಚಿತ ಏರ್ಪಾಟಿರಬೇಕು. ಆದರದಪ್ಪುಗೆ ಔದಾರ್ಯದ ಉರುಲಾಗಬಾರದು.

ತನ್ನದೇ ಬಹುಭಾಷೆ ಉಪಭಾಷೆಗಳ, ಸಂಸ್ಕøತಿ ಉಪಸಂಸ್ಕøತಿಗಳ, ಕಲೆಗಳ, ಖಾದ್ಯಗಳ, ಅಟ್ಟುಣ್ಣುವ, ವೇಶ ಭೂಷಣಗಳ, ಕವಿಗಳ, ಕಲಿಗಳ, ಬುದ್ಧಿವಂತರ, ಜ್ಞಾನಪೀಠ ಪ್ರಶಸ್ತಿ ವಿಜೇತರ, ಶಾಂತಿ, ಶಿಸ್ತು, ಸಂಯಮ, ಶ್ರದ್ಧೆ, ನಂಬಿಕೆ, ಭಕ್ತಿ ಭಾವಗಳ, ಪಂಗಡ ಪಂಗಡಗಳ ಮತ ಒಳಮತಗಳ ಅಳೆದು, ಸುರಿದು, ಎಷ್ಟೇ ಸಂಶೋಧನೆ ಮಾಡಿದರೂ ಮುಗಿಯದ ಇನ್ನೂ ಏನೇನೋ ಎಲ್ಲವುಗಳ ನಾಡು, ಬೀಡು, ಕನ್ನಡನಾಡು, ಕರುನಾಡು ಕರ್ನಾಟಕ.

ಕನಕದಾಸರು ‘ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ’ ಎಂದು ಸಮಾಜದ ಎಲ್ಲರೂ ಒಳಗೊಳ್ಳಲು ಒಂದಾಗಿ ಬದುಕಲು ಸೂಚಿಸಿದ್ದಾರೆ.

ರಾಷ್ಟ್ರಕವಿ ಜ್ಞಾನಪೀಠ ಪ್ರಶಸ್ತಿ ವಿಜೇತ ಕುವೆಂಪು ‘ಸರ್ವಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ, ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನಕನ್ನಡ ನುಡಿ ಕುಣಿದಾಡುವ ಗೇಹ, ಕನ್ನಡ ತಾಯಿಯ ಮಕ್ಕಳ ದೇಹ! ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ’ ಎಂದು ಬಹುತ್ವದ ಮಹತ್ವವನ್ನು ಮೆರೆದಿದ್ದಾರೆ. ಹುಯಿಲುಗೋಳ ನಾರಾಯಣರಾವ್ ‘ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು, ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡುಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂದು ಹರಸಿದ್ದಾರೆ. ಕವಿ ನಿಸಾರ್ ಅಹ್ಮದ್ ಹಲವೆನ್ನದ ಹಿರಿಮೆಯ, ಕುಲವೆನ್ನದ ಗರಿಮೆಯ ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ. ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ಎಂದು ಹಾಡಿದ್ದಾರೆ.

ಇವೆಲ್ಲ ತಕ್ಷಣಕ್ಕೆ ನೆನಪಾದವುಗಳು. ಕನ್ನಡದ ಮಣ್ಣು, ನೀರು, ಗಾಳಿ ಮಿಕ್ಕೆಲ್ಲಕ್ಕೂ ಎಲ್ಲರಂತೆಯೇ ಹಕ್ಕು ಉಳ್ಳವರು ಕನ್ನಡ ಸಾಂಸ್ಕøತಿಕ, ಸಾಮಾಜಿಕ ಬದುಕಿನ ಅವಿಭಾಜ್ಯ ಅಂಗವಾಗಿರುವ ಅಸ್ಪøಶ್ಯರು, ದಲಿತರು, ಕನ್ನಡ ಕಲಿತು ಕನ್ನಡಿಗರಾಗಿರುವ ಅನ್ಯಭಾಷಿಗರು, ನೆರೆಹೊರೆಯ ವಲಸಿಗರು.

ಸಂವಿಧಾನದನ್ವಯ ಸರ್ಕಾರ ತೆಗೆದುಕೊಳ್ಳುವ ಕ್ರಮ, ನಿರ್ಧಾರಗಳನ್ನು ಬರೀ ವಿರೋಧಿಸುವುದಕ್ಕಾಗಿ ವಿರೋಧಿಸಿದರೆ, ಸರ್ಕಾರದ ಸೌಲಭ್ಯ ಸವಲತ್ತುಗಳನ್ನು ಮುಕ್ಕು ಮುರಿಯದಂತೆ ನೂರಕ್ಕೆ ನೂರು ಬಳಸಿಕೊಂಡು ವಿದ್ಯಾರ್ಜನೆ ಮಾಡಿ ತನ್ಮೂಲಕ ಸಮಾಜದಲ್ಲಿ ಸಮಾನ ಸ್ಥಾನ ಮಾನ ಸ್ಥಾಪಿಸಿ ತಮ್ಮ ಬಳಗವನ್ನೆಲ್ಲ ಅಂತೆಯೇ ತಯಾರು ಮಾಡಿ ಮುಖ್ಯವಾಹಿನಿಯಲ್ಲಿ ಎಲ್ಲ ರೀತಿಯಿಂದ ಮಿಳಿತವಾಗಿ ಇಷ್ಟು ಸಾಕು ಇನ್ನು ನಮಗೆ ವಿಶೇಷ ಸ್ಥಾನ ಮಾನ ಸವಲತ್ತುಗಳು ಬೇಡ ಅನ್ನುವಷ್ಟು ಮಟ್ಟಿಗೆ ಬದಲಾದಾಗ ಮತಾಂತರಗಳ ಸವಲತ್ತು ಸೌಲಭ್ಯಗಳನ್ನು ತಿರಸ್ಕರಿಸಬಹುದಾಗಿದೆ.

ಸಮಾಜದ ಎಲ್ಲ ಮೇಲ್ವರ್ಗದವರು ಹಾಗೂ ಅನುಕೂಲಸ್ಥರು ಎಲ್ಲರೂ ಅಸ್ಪøಶ್ಯರೂ ಹಾಗೂ ಬಡವರು ಮುಖ್ಯವಾಹಿನಿಯೊಡನೆ ಸರಾಗವಾಗಿ ಬೆರೆಯಲು ಅನುಕೂಲಿಗಳಾಗಿರಬೇಕು, ತಾತ್ಸಾರ ಮಾಡದೆ ತುಚ್ಛಭಾವ ತಳೆಯದೆ ಗೌರವ ಆದರಗಳಿಂದ ಅಂತಹ ಮುಕ್ತ ಮತಸೇರ್ಪಡೆ ವ್ಯಕ್ತಿ ವ್ಯಕ್ತಿಯ ಉದ್ದೇಶವನ್ನು ಈಡೇರಿಸುವಂತೆ ಆಗಬೇಕು, ಮತದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ತಂತ್ರದಿಂದ ಕೂಡಿರಬಾರದು. ಆಗ ಹಿಂದಾದುದಕ್ಕೆ ಇಂದಿನವರನ್ನು ತಪ್ಪಿತಸ್ಥರು, ಅನ್ಯಾಯಕೋರರು ಎಂದು ಹಣೆಪಟ್ಟಿ ಹಚ್ಚಿ ಜರೆಯುವುದು ತಪ್ಪಿ, ಪರಸ್ಪರ ತಾತ್ಸಾರ, ದ್ವೇಷ, ಅಸೂಯೆ, ಈಷ್ರ್ಯೆಳಿಂದ, ಅನುಮಾನಗಳಿಂದ ನೋಡುವುದು ನಿಲ್ಲಬಹುದು.

ಅಸ್ಪøಶ್ಯರಿಗೆ, ಬಡವರಿಗೆ ಮತ್ತಂತಹವರಿಗೆ ಮತಾಂತರವು ಅಮುಖ್ಯ ಪರಿಹಾರೋಪಾಯ ಆಗಬೇಕೇ ವಿನಾ ಮತಾಂತರವೇ ಉತ್ತಮ ಪರಿಹಾರವಾಗಬಾರದು. ಭಾರತದಲ್ಲಿ ಯಾವೊಬ್ಬ ಭಾರತೀಯ ವ್ಯಕ್ತಿಗೂ ಭಾರತದ ಮೂಲ ಸೌಲಭ್ಯ, ಸವಲತ್ತು, ಸೌಕರ್ಯಗಳು ಸಿಕ್ಕದೆ ಬದುಕುವುದಕ್ಕೆ ಇರುವುದು ಮತಾಂತರ ಒಂದೇ ಮಾರ್ಗ ಎನಿಸದೆಯೇ ಗೌರವದಿಂದ ದುಡಿದು ಗಳಿಸಿ ಬದುಕಲು ಮುಕ್ತ ಅವಕಾಶ ಇರುವುದಾದರೆ ಆಗ ಮತಾಂತರವು ಅವಿಷಯವಾಗುತ್ತದೆ. ಆಗ ಮತಾಂತರದ ನಿಷೇಧದ ಪರ ವಿರೋಧಗಳೆಲ್ಲ

ಅದೃಶ್ಯವಾಗುತ್ತವೆ.

ಬಹುಕಾಲದಿಂದಲೂ ಜಗತ್ತಿನಲ್ಲೇ ಕ್ರೈಸ್ತರು ಬಹುದೊಡ್ಡ ಸಂಖ್ಯೆಯವರಿದ್ದಾರೆ. ಮುಸಲ್ಮಾನರು ಎರಡನೇ ಬಹುದೊಡ್ಡ ಸಂಖ್ಯೆಯವರಿದ್ದಾರೆ. ಹಿಂದೂಗಳು ಮೂರನೆಯ ಬಹುದೊಡ್ಡ ಸಂಖ್ಯೆಯವರಿದ್ದಾರೆ. ಈ ಸ್ಥಾನಗಳು ಹಾಗೆಯೇ ಉಳಿದುಕೊಂಡು ಹೋಗುವುದು ವಿಶ್ವದ ಜನಗಣತಿಯ ದೃಷ್ಟಿಯಿಂದಲೂ ಅತ್ಯಂತ ಅವಶ್ಯಕವಾಗಿರುತ್ತದೆ. ದೊಡ್ಡ ಸಂಖ್ಯೆಯವರು ವಿಶ್ವದ ಎಲ್ಲೆಡೆ ಇರುವ ಎಲ್ಲ ಮತಗಳನ್ನೂ ಅವುಗಳು ಇರುವಂತೆಯೇ ಇರಲು ಬಿಡುವುದು ಸೌಹಾರ್ದದ ಔದಾರ್ಯವೇ ಆಗಿರುತ್ತದೆ, ಸಹನೆ ಸಹಕಾರಗಳ ಕುರುಹಾಗಿರುತ್ತದೆ. ‘ಬದುಕು, ಬದುಕಲು ಬಿಡು’ ಎನ್ನುವುದು ಎಲ್ಲರಿಗೂ ಇಷ್ಟವಾದರೆ ಸಾಲದು! ಎಲ್ಲರೂ ಬರೀ ಮಾತಾಡಿ ಮುಗಿಸಿದರೆ ಪ್ರಯೋಜನವೇನು? ಬಹುತ್ವದ ಬದುಕಿನಲ್ಲಿ ಬದುಕಿ ಬದುಕಲು ಬಿಡುವುದು ಸಾಕಾರಗೊಳ್ಳಬೇಕು.

ದೊಡ್ಡ ದೊಡ್ಡ ಸಂಖ್ಯೆಯವರು ಚಿಕ್ಕಪುಟ್ಟ ಸಂಖ್ಯೆಯವರನ್ನು ತಮ್ಮ ದೊಡ್ಡಮೊತ್ತಕ್ಕೆ ಸೇರಿಸಿಕೊಳ್ಳುವುದಕ್ಕಿಂತ ಚಿಕ್ಕ ಪುಟ್ಟ ಸಂಖ್ಯೆಯವರನ್ನು ಹಾಗೇ ಹಾಗೇ ಅವರವರಿರುವ ಸ್ಥಾನದಲ್ಲಿ ಉಳಿಸುವುದು ವಿಶ್ವಮಾನವತೆಯ ಪ್ರತೀಕವಾದೀತು, ಇಡೀ ವಿಶ್ವವೇ ಸಹನೆ, ಸಂಯಮ, ಶಾಂತಿಯ ತೋಟವಾದೀತು! ಎಲ್ಲ ಮತದವರೂ ತಮ್ಮ ತಮ್ಮ ಮತದ ಸಂಖ್ಯೆ ಹಿಗ್ಗಿಸುವತ್ತ ಪ್ರಯತ್ನಿಸುವುದನ್ನು ಬಿಟ್ಟು ಮತದ ಹಿರಿಮೆಯನ್ನು ತಮ್ಮ ತಮ್ಮಲ್ಲಿ ಮತ್ತು ತಮ್ಮ ಮತವನ್ನು ಬಯಸಿ ಅನುಸರಿಸಬಯಸುವ ಬೇರೆ ಬೇರೆ ಮತದವರನ್ನು ಆದರಿಸಿ ಬಾರದವರನ್ನು ಕಾಡದೆ, ಯಾವುದೇ ಶರತ್ತುಗಳನ್ನು ಹೇರದೆ ಮುಕ್ತವಾಗಿ ಇರಲು ಈಗಾಗಲೇ ಇರುವ ಅವಕಾಶಗಳು ತಪ್ಪಿ ಹೋಗದಂತೆ ನೋಡಿಕೊಳ್ಳುವುದು ಸೂಕ್ತ, ವಿಶ್ವಶಾಂತಿಗೆ ಅತ್ಯಗತ್ಯ.

ಕನ್ನಡದ ಮಣ್ಣಿನ ಬಹುತ್ವದಲ್ಲಿ ಏಕತ್ವ ಶಕ್ತಿ ಮತಾಂತರ ನಿಷೇಧದ ಏರಿದ ಬಿಸಿ ಇಳಿದು ಮತಾಂತರ ನಿಷೇಧದ ಫಲವನ್ನು ಉಣಬಯಸುವವರ ಮನ ತಣಿದು ಯಾವ ಮತದವರೂ ಘಾಸಿಗೊಳ್ಳದಂತೆ ಆದರ, ಔದಾರ್ಯ, ಗೌರವ, ಶಾಂತಿ, ಸಂಯಮ, ಶಿಸ್ತು ನಿರಂತರವಾಗಿ ನೆಲೆಸಲು ಅನುವಾಗಲಿ!

*ಲೇಖಕರು ಶಿವಮೊಗ್ಗದವರು, ಕರ್ನಾಟಕ ವಿದ್ಯುತ್ ನಿಗಮದ ನಿವೃತ್ತ ನೌಕರರು; ಕವಿತೆ, ನಾಟಕ ರಚನೆ, ನಿರ್ದೇಶನ, ಡಾಕ್ಯುಮೆಂಟರಿ ನಿರ್ದೇಶನ, ನಟನೆ ಹವ್ಯಾಸಗಳಲ್ಲಿ ತೊಡಗಿದ್ದಾರೆ. ಆಧ್ಯಾತ್ಮಿಕಲೌಕಿಕ ಚಿಂತನೆಯ ನಿರಂತರ ವಿದ್ಯಾರ್ಥಿ ಎಂದು ಕರೆದುಕೊಳ್ಳುತ್ತಾರೆ.

Leave a Reply

Your email address will not be published.