ಮಹಿಳೆಯರ ಸ್ವ ಅರಿವಿಗೆ ಮೂಢನಂಬಿಕೆಗಳ ತಡೆಗೋಡೆ!

ಮಹಿಳೆಯರು ಪುರುಷರಿಗಿಂತ ಹೆಚ್ಚು ಮೂಢನಂಬಿಕೆಯನ್ನು ಹೊಂದಿರುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಇದು ತಮ್ಮ ಅಸ್ಮಿತೆಯನ್ನು ಕೀಳಾಗಿಸುತ್ತಿದೆ ಅಥವಾ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುತ್ತದೆ ಎನ್ನುವ ಸ್ವಅರಿವಿನ ಕೊರತೆಯಿಂದ ಮಹಿಳೆಯರು, ಈ ಮೂಢ ಆಚರಣೆಗಳನ್ನು ಪ್ರಶ್ನಿಸದೇ, ಬಹಳ ಶ್ರದ್ಧೆಯಿಂದ ಆಚರಿಸುತ್ತಾರೆ.

ಡಾ.ಜ್ಯೋತಿ

ಮೂಢನಂಬಿಕೆಗಳ ಕುರುಡು ಆಚರಣೆಯನ್ನು ನಮ್ಮ ಸಮಾಜದಿಂದ ಕಿತ್ತೊಗೆಯುವ ನಿಟ್ಟಿನಲ್ಲಿ ಸರಕಾರವು ಕಾನೂನನ್ನು ಜಾರಿಗೆ ತರಬೇಕೆ? ಅದರಿಂದ ಮೂಢನಂಬಿಕೆಗಳ ಸಂಪೂರ್ಣ ನಿರ್ಮೂಲನ ಸಾಧ್ಯವೇ? ಅಥವಾ ಅದಕ್ಕೆ ಬೇರೆ ಸೂಕ್ತ ಮಾರ್ಗಗಳೇನಾದರೂ ಇವೆಯೇ? ಎನ್ನುವುದನ್ನು ಚರ್ಚಿಸುವ ಮೊದಲು ಪ್ರಾಸ್ತಾವಿಕವಾಗಿ, `ಮೂಢನಂಬಿಕೆಎಂದರೇನು, ಅನ್ನುವುದನ್ನು ವಿಶ್ಲೇಷಿಸೋಣ.

ಇದಕ್ಕೆ, ನಿಘಂಟಿನಲ್ಲಿ ಸಿಗುವ ವ್ಯಾಖ್ಯಾನವೆಂದರೆ, `ಭಯ ಅಥವಾ ಸಂಪೂರ್ಣ ನಂಬಿಕೆಯಿಂದ ಪ್ರೇರಿತವಾದ, ಒಂದು ತಪ್ಪು ಕಲ್ಪನೆ ಆಧಾರಿತ ಧಾರ್ಮಿಕ ಆಚರಣೆ‘. ಈ ನಂಬಿಕೆಗಳನ್ನು ಜನಸಾಮಾನ್ಯರಲ್ಲಿ ಬೇರೂರಿಸಿ ನಿಯಂತ್ರಣ ಸಾಧಿಸಬೇಕೆಂಬ ಪಣತೊಟ್ಟ ಅಧಿಕಾರಶಾಹಿ ಸಂಪ್ರದಾಯಸ್ಥ ಮನಸ್ಸುಗಳು, ಅವುಗಳನ್ನು ಬಹಳ ಜಾಣ್ಮೆಯಿಂದ, ಆಯಾಯ ಧರ್ಮಗಳಿಗೆ ಸಂಬಂಧಿಸಿದ ಆಚರಣೆಗಳನ್ನಾಗಿ ಮಾರ್ಪಡಿಸಿರುವುದರಿಂದ, ಅವುಗಳಿಗೆ ಒಂದು ಅಧಿಕೃತ ಮನ್ನಣೆ ಸಿಕ್ಕಿರುವುದಲ್ಲದೆ, ಕಡ್ಡಾಯವಾಗಿ ಅನುಸರಿಸಬೇಕಾದ ಸಾಮಾಜಿಕ ಹಾಗು ಧಾರ್ಮಿಕ ಒತ್ತಡವೂ ಕೆಲಸ ಮಾಡುತ್ತದೆ. ಜೊತೆಗೆ, ಒಂದು ವೇಳೆ ಅನುಸರಿಸದಿದ್ದಲ್ಲಿ ದೇವರು, ದೈವಗಳ ಕೆಂಗಣ್ಣಿಗೆ ಗುರಿಯಾಗಿ ಕಷ್ಟಗಳನ್ನು ಎದುರಿಸಬೇಕಾಗಬಹುದು ಎನ್ನುವ ಅವ್ಯಕ್ತ ಭಯವನ್ನು ಜನಸಾಮಾನ್ಯರಲ್ಲಿ ಬಿತ್ತಿರುವುದರಿಂದ, ಇವುಗಳ ಪ್ರಶ್ನಾತೀತ ಮುಂದುವರಿಕೆ ಸುಗಮವಾಗಿದೆ.

ಈ ನಿಟ್ಟಿನಲ್ಲಿ, ತತ್ವಶಾಸ್ತ್ರಜ್ಞ ಬಟ್ರ್ರಂಡ್ ರಸೆಲ್ ಹೇಳುವಂತೆ, `ಮನುಷ್ಯನ ಭಯಗ್ರಸ್ತ ಮನಸ್ಸು, ಅವನನ್ನು ಮೂಢನಂಬಿಕೆಗಳತ್ತ ತಳ್ಳುವುದಲ್ಲದೆ, ಅವನಲ್ಲಿ ಕ್ರೌರ್ಯವನ್ನು ಕೂಡ ಹೆಚ್ಚಿಸುತ್ತದೆ‘. ಈ ಭಯವನ್ನು ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವುದರಿಂದ ಮಾತ್ರ ಜಯಿಸಬಹುದು. ಉದಾಹರಣೆಗೆ, ಮೂಢನಂಬಿಕೆಯೆನ್ನುವುದು ಮನುಷ್ಯನಿಂದ, ಸಾಮಾನ್ಯವಾಗಿ ಪ್ರಾಣಿಬಲಿ ಅಥವಾ ಕೆಲವೊಮ್ಮೆ ನರಮೇಧವನ್ನೂ ಮಾಡಿಸುತ್ತದೆ. ವಿಸ್ಮಯವೆಂದರೆ, ಇದನ್ನು ಆಚರಿಸುವವರು ಅತ್ಯಂತ ಶ್ರದ್ಧೆ, ನಂಬಿಕೆ ಹಾಗೂ ಆತ್ಮವಿಶ್ವಾಸದಿಂದ ತಮ್ಮ ನಂಬಿಕೆಯನ್ನು ಸಮರ್ಥಿಸುವುದನ್ನು ನಾವು ಕಾಣುತ್ತೇವೆ.

`ಅಜ್ಜ ನೆಟ್ಟ ಆಲದ ಮರಕ್ಕೆ ಸುತ್ತು ಬಂದಂತೆಮೂಢನಂಬಿಕೆಗಳಿಗೆ ಯಾವುದೇ ದೃಢೀಕೃತ ಪುರಾವೆಗಳಿಲ್ಲದಿದ್ದರೂ ಸಹ, ಜನರು ಅದನ್ನು ಬಲವಾಗಿ ನಂಬುತ್ತಾ ಬಂದಿದ್ದಾರೆ. ಮಾತ್ರವಲ್ಲ, ಅದಕ್ಕೆ ವಿರುದ್ಧವಾದ ಅಂಶಗಳು ಕಣ್ಣಿಗೆ ಗೋಚರಿಸಿದರೂ ಕೂಡ, ಜನರು ಅವುಗಳನ್ನು ಪರಿಗಣಿಸುವ ಗೋಜಿಗೆ ಹೋಗುವುದಿಲ್ಲ. ಅಮೆರಿಕಾದ ಕಾದಂಬರಿಕಾರ ಜಾರ್ಜ್ ಐಲ್ಸ್ ಹೇಳಿದಂತೆ, `ಮೂಢನಂಬಿಕೆಯೆನ್ನುವುದು ಯಾವುದೇ ಒಂದು ವಿಷಯದ ಅಪ್ರಬುದ್ಧ ಅರ್ಥಗ್ರಹಿಕೆಯಾಗಿದ್ದು, ಆದರೆ, ಕಾಲಕ್ರಮೇಣ ಅದು ತನ್ನ ಸ್ಪಷ್ಟತೆಯನ್ನು ಕಂಡುಕೊಳ್ಳದೆ, ಕಾಲಾತೀತವಾಗಿ ಜನರ ನಡವಳಿಕೆಯಲ್ಲಿ ಹಾಗೂ ಆಚರಣೆಯಲ್ಲಿ ಹಾಗೆಯೇ ಉಳಿದುಕೊಂಡು ಬಿಡುತ್ತದೆ.’

ಅಂದರೆ, ಮೂಢನಂಬಿಕೆಗಳ ಮೂಲ, ಮನುಷ್ಯನ ಅಪ್ರಬುದ್ಧ ಮನಸ್ಥಿತಿ. ಅದರಲ್ಲಿ ಹುದುಗಿರುವ ಭಯ, ಆತಂಕ, ದುರಾಸೆ, ನಿರೀಕ್ಷೆ ಇತ್ಯಾದಿ ಅಂಶಗಳು, ಅವನನ್ನು ಈ ಹುಸಿ ನಂಬಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತವೆ. ನಮ್ಮ ಜೀವನದ ಯಾವುದೇ ಮಹತ್ವದ ಸಂದರ್ಭಗಳಲ್ಲಿ, ನಾವೆಷ್ಟೇ ಸಿದ್ಧತೆ ನಡೆಸಿದ್ದರೂ ಕೂಡ, ಸಂಪೂರ್ಣ ಆತ್ಮವಿಶ್ವಾಸ ಹೊಂದಿರುವುದಿಲ್ಲ. ಯಾಕೆಂದರೆ, ಕ್ಷಣಕ್ಷಣಕ್ಕೂ ಬದಲಾಗುವ ಪ್ರಪಂಚದಲ್ಲಿ, ನಮ್ಮ ನಿಯಂತ್ರಣವನ್ನು ಮೀರಿ ಘಟನೆಗಳು ನಡೆಯಬಹುದು, ಅಥವಾ ಅಡ್ಡಿ, ಆತಂಕಗಳು ಸಂಭವಿಸಬಹುದು ಎನ್ನುವ ಭಯ, ನಮ್ಮ ಮನಸ್ಸಿನ ಒಂದು ಮೂಲೆಯಲ್ಲಿ ಕಾಡುತ್ತಿರುತ್ತದೆ. ಅದನ್ನು ಮೀರಿ, ಪರಿಸ್ಥಿತಿಯನ್ನು ನಮ್ಮ ಹತೋಟಿಗೆ ತೆಗೆದುಕೊಳ್ಳಲು, ಸಾಮಾನ್ಯವಾಗಿ ಮೂಢನಂಬಿಕೆಗಳಿಗೆ ಮೊರೆ ಹೋಗುತ್ತೇವೆ. ಅಂದರೆ, ನಮಗೆ ನಾವು ಮಾಡುವ ಕಾರ್ಯದಲ್ಲಿ ಆತ್ಮವಿಶ್ವಾಸ ಕಡಿಮೆಯಿದ್ದಾಗ, ಮೂಢನಂಬಿಕೆ ಮುಖ್ಯ ಭೂಮಿಕೆ ಪಡೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ, ಮೂಢನಂಬಿಕೆಯನ್ನು ಮನುಷ್ಯ ತಾನು ಮಾಡುವ ಕೆಲಸದ ಫಲಿತಾಂಶ ಪೂರಕವಾಗಿರಲಿ ಎಂದು ಖಚಿತ ಪಡಿಸಿಕೊಳ್ಳಲು ನೆಚ್ಚಿಕೊಳ್ಳುವ ಮಾರ್ಗವೆಂದು ವ್ಯಾಖ್ಯಾನಿಸಬಹುದು.

ಈ ಹಿನ್ನೆಲೆಯಲ್ಲಿ ಮೂಢನಂಬಿಕೆಗಳನ್ನು ವಿಶ್ಲೇಷಿಸಿದರೆ, ಕೆಲವೊಂದು ಮೂಢನಂಬಿಕೆಗಳು ಮನುಷ್ಯನ ಆತಂಕ ನಿವಾರಿಸಿ, ಅವನ ಕಾರ್ಯ ನಿರ್ವಹಣೆಯಲ್ಲಿ ಸಕಾರಾತ್ಮಕ ಪ್ರಭಾವ ಬೀರಬಹುದು. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ, ಅವನ ಕಾರ್ಯಕ್ಷಮತೆಗೆ ಅಡ್ಡಿಯಾಗುವುದೇ ಹೆಚ್ಚು. ಅದಕ್ಕಿಂತ ಮುಖ್ಯವಾಗಿ ಪರಿಗಣಿಸಬೇಕಾದ ಅಂಶವೆಂದರೆ, ನಮ್ಮ ಮೂಢನಂಬಿಕೆಗಳ ದುಷ್ಪರಿಣಾಮ ನಮಗಷ್ಟೇ ಸೀಮಿತವಾಗಿದ್ದರೆ, ಅದನ್ನು ಅವರವರ ನಂಬಿಕೆ ಅಥವಾ ದಡ್ಡತನವೆಂದು ಸುಮ್ಮನಾಗಬಹುದು. ಆದರೆ, ನಾವು ಬಲವಾಗಿ ನಂಬಿ ಆಚರಿಸುವ ಮೂಢನಂಬಿಕೆಗಳು ಉಳಿದವರಿಗೆ ಸಾವು, ನೋವು, ಸ್ವಾತಂತ್ರ್ಯ ಹರಣ, ಸಾಮಾಜಿಕ ಹಾಗೂ ಧಾರ್ಮಿಕ ತಾರತಮ್ಯಗಳನ್ನು ತಂದೊಡ್ಡುವ ಸಂದರ್ಭಗಳೇ ಹೆಚ್ಚು.

ಅಮೆರಿಕಾದ ವಿಚಾರವಾದಿ ಜೋಸೆಫ್ ಲೆವಿಸ್ ಹೇಳಿದಂತೆ, `ಮೂಢನಂಬಿಕೆಯು ಮನುಷ್ಯನ ಮನಸ್ಸಿಗೆ ವಿಷದಂತೆ ಕೆಲಸ ಮಾಡುತ್ತದೆ‘. ಹಾಗಾಗಿ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ದೆಸೆಯಿಂದ ಈ ಮೂಢನಂಬಿಕೆಗಳಿಗೆ ಅಂಕುಶ ತೊಡಿಸುವ ಅಗತ್ಯವಿದೆ. ನಮ್ಮ ದೇಶದಲ್ಲಿ, ಈಗಾಗಲೇ ಹಲವಾರು ರಾಜ್ಯಗಳಲ್ಲಿ, ಸಾಮಾಜಿಕ ಕಾರ್ಯಕರ್ತರ ಹೋರಾಟದ ಫಲದಿಂದ, ಮೂಢನಂಬಿಕೆ ಆಚರಣೆ ವಿರೋಧಿ ಕಾನೂನುಗಳು ಜಾರಿಗೆ ಬಂದಿವೆ. ಇದನ್ನು, ನಮ್ಮ ರಾಜ್ಯದಲ್ಲಿಯೂ ಕೂಡ ರೂಪಿಸಲಾಗಿದೆ. ಇದನ್ನು ಜಾರಿಗೆ ತರುವ ಇಚ್ಛಾಶಕ್ತಿಯನ್ನು ಸರಕಾರವು ತೋರಿಸಬೇಕಾಗಿದೆ. ಇದರೊಂದಿಗೆ, ಹೆಚ್ಚೆಚ್ಚು ಜನಜಾಗೃತಿ ಆಂದೋಲನಗಳನ್ನು ನಡೆಸಿ, ಜನರನ್ನು ಈ ಭ್ರಮೆಗಳಿಂದ ಮುಕ್ತಿಗೊಳಿಸಬೇಕಾದ ಅನಿವಾರ್ಯತೆಯಿದೆ.

ಖ್ಯಾತ ಚಿಂತಕ ಎಡ್ಮಂಡ್ ಬರ್ಕ್ ಹೇಳುವಂತೆ, ಮೂಲತಃ, `ಮೂಢನಂಬಿಕೆಯೆನ್ನುವುದು ದುರ್ಬಲ ಮನಸ್ಸಿನ ಧರ್ಮದಂತೆ‘. ಹಾಗಾಗಿ, ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ನಂಬಿಕೆ ಇಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಹಾಗೂ ಇಂತಹ ದುರ್ಬಲ ಮನಸ್ಥಿತಿಯವರನ್ನು ಈ ಆಚರಣೆಗಳಿಗೆ ನಿಷ್ಠರನ್ನಾಗಿ ಉಳಿಸಿಕೊಳ್ಳುತ್ತದೆ. ಗಮನಾರ್ಹ ಅಂಶವೆಂದರೆ, ಆರಂಭದಲ್ಲಿ ಬಾಹ್ಯ ವ್ಯವಸ್ಥೆ ಹಾಗೂ ವ್ಯಕ್ತಿಗಳು ಮೂಢ ನಂಬಿಕೆಗಳನ್ನು ನಮ್ಮ ಮೇಲೆ ಹೇರಿರಬಹುದು. ಆದರೆ, ಹೆಚ್ಚಿನವರು, ಅವುಗಳನ್ನು ವಿಮರ್ಶಿಸದೆ, ಪ್ರಶ್ನಿಸದೆ, ಕುರುಡಾಗಿ ಮುಂದುವರಿಸಿಕೊಂಡು ಹೋಗುತ್ತಾರೆ, ಮಾತ್ರವಲ್ಲ, ಅವುಗಳನ್ನು ತಮ್ಮ ಮುಂದಿನ ಪೀಳಿಗೆಗಳಿಗೆ ದಾಟಿಸುತ್ತಾರೆ. ಸಿಂಗಾಪುರ ಮೂಲದ ರಾಜಕೀಯ ಹೋರಾಟಗಾರ ಡಾ.ಟಿ.ಪಿ.ಚಿಯಾ ಹೇಳುವಂತೆ, `ಮೂಢನಂಬಿಕೆಯು ಮನುಷ್ಯನ ಸ್ವಚಿಂತನೆಯನ್ನು ಸಾಯಿಸುತ್ತದೆ.’ ಈ ಸ್ವಚಿಂತನೆಯನ್ನು ಉದ್ದೀಪನಗೊಳಿಸಿ, ಈ ಮೌಢ್ಯಗಳಿಂದ ಬಿಡಿಸಿಕೊಳ್ಳುವ ಕೆಲಸವನ್ನು ಸಮಾಜದ ಸ್ವಸ್ಥ ಮನಸ್ಸುಗಳು ಕಾಲಕಾಲಕ್ಕೆ ಮಾಡಬೇಕಿದೆ.

ಈ ಹಿನ್ನೆಲೆಯಲ್ಲಿ ನಾವು ಪರಾವಲೋಕಿಸಿದರೆ, ಮನುಷ್ಯ ತನ್ನ ಅಪ್ರಬುದ್ಧ ಚಿಂತನೆ ಹಾಗೂ ಅಜ್ಞಾನದಿಂದ ಸೃಷ್ಟಿಸಿರುವ ಈ ಮೂಢ ನಂಬಿಕೆಗಳ ಆಚರಣೆಯಲ್ಲಿ ಹೆಚ್ಚಾಗಿ ಬಲಿಪಶುಗಳಾಗುವುದು, ಮಹಿಳೆಯರು, ಮನುಷ್ಯೇತರ ಜೀವರಾಶಿಗಳು ಹಾಗೂ ಸಮಾಜದ ಕೆಳಸ್ತರದ ಜನರು. ಉದಾಹರಣೆಗೆ, ಮನುಷ್ಯ ಮಾಡುವ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ಹಾಗೂ ಅವನ ಅತಿಯಾದ ಬೇಡಿಕೆಗಳನ್ನು ಪ್ರಾಪ್ತಿಮಾಡಲು ದೇವರುಗಳಿಗೆ ಹರಕೆಯಾಗಿ ಪ್ರಾಣಿಗಳನ್ನು ಬಲಿಕೊಡುವುದು ವಿವಿಧ ಧರ್ಮಗಳಲ್ಲಿ ವಿಶಿಷ್ಟ ಪದ್ಧತಿಯಾಗಿ ಮುಂದುವರಿಯುತ್ತಿರುವುದನ್ನು ನಾವು ಕಾಣಬಹುದು. ಅದೇ ರೀತಿ, ಧರ್ಮಗ್ರಂಥಗಳಲ್ಲಿ ಪ್ರಸ್ತಾಪಿಸಲಾಗಿದೆಯೆಂದು ಹೇಳಿ, ಮನುಷ್ಯ ಹುಟ್ಟಿದ ಜಾತಿಗೆ ಅನುಗುಣವಾಗಿ, ಸಮಾಜವನ್ನು ಮೇಲು ಕೀಳುಗಳ ಸ್ಥರಗಳನ್ನು ಮಾಡಿ, ವ್ಯವಸ್ಥಿತವಾಗಿ ಕೆಳಜಾತಿಯವರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ನಾವು ಇಂದಿಗೂ ಕಾಣುತ್ತೇವೆ. ಇವುಗಳೊಂದಿಗೆ, ತಲತಲಾಂತರಗಳಿಂದ ಮಹಿಳೆಯರ ಆತ್ಮವಿಶ್ವಾಸವನ್ನು, ಸ್ವಾವಲಂಬಿಯಾಗಿ ಬದುಕುವ ಶಕ್ತಿಯನ್ನು ಹಾಗೂ ಸ್ವ ಅರಿವಿನ ದಾರಿಯಲ್ಲಿ ದೊಡ್ಡ ಅಡ್ಡಗೋಡೆಯಾಗಿರುವುದು ಮೂಢನಂಬಿಕೆಗಳೆಂಬ ಚಕ್ರವ್ಯೂಹ. ಮಹಿಳೆಗೆ, ಇವುಗಳನ್ನು ಸಂಪೂರ್ಣವಾಗಿ ಭೇದಿಸಿ, ತನ್ನ ಅಸ್ಮಿತೆಯನ್ನು ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.

ಸಾಮಾನ್ಯವಾಗಿ, ನಾವು ನಮ್ಮ ಸುತ್ತಲಿನ ಸಮಾಜದಲ್ಲಿ ಗಮನಿಸುವಂತೆ, ಮಹಿಳೆಯರು ಪುರುಷರಿಗಿಂತ ಹೆಚ್ಚು ಮೂಢನಂಬಿಕೆಯನ್ನು ಹೊಂದಿರು ತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಇದು ತಮ್ಮ ಅಸ್ಮಿತೆಯನ್ನು ಕೀಳಾಗಿಸುತ್ತಿದೆ ಅಥವಾ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುತ್ತದೆ ಎನ್ನುವ ಸ್ವಅರಿವಿನ ಕೊರತೆಯಿಂದ ಮಹಿಳೆಯರು, ಈ ಮೂಢ ಆಚರಣೆಗಳನ್ನು ಪ್ರಶ್ನಿಸದೇ, ಬಹಳ ಶ್ರದ್ಧೆಯಿಂದ ಆಚರಿಸುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ, ಇಂದಿಗೂ ಕೂಡ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು, ತಮ್ಮ ಅದೃಷ್ಟ, ಭವಿಷ್ಯ ಹಾಗೂ ವೈಯಕ್ತಿಕ ಜೀವನದ ಮೇಲೆ ತಾವು ಕಡಿಮೆ ಸ್ವನಿಯಂತ್ರಣವನ್ನು ಹೊಂದಿದ್ದೇವೆ ಎಂದು ಭಾವಿಸುತ್ತಾರೆ. ಹಾಗಾಗಿ, ಈ ಬಾಹ್ಯ ಅಗೋಚರ ಶಕ್ತಿಗಳ ಬೆಂಬಲ ಪಡೆಯುತ್ತಾರೆ.

ಇನ್ನು ವಿಶೇಷವಾಗಿ ಭಾರತೀಯ ಮಹಿಳೆಯರ ವಿಷಯಕ್ಕೆ ಬಂದರೆ, ಮಹಿಳೆಯರ ಅಸ್ತಿತ್ವಕ್ಕೆ ಮೂಢನಂಬಿಕೆಗಳ ಬಲವಾದ ಬೇಲಿಗಳು ಅನಾದಿಕಾಲದಿಂದಲೂ ಸುತ್ತುವರಿಯಲ್ಪಟ್ಟಿವೆ. ಈ ಮೂಲಕ, ಅವಳೆಂದೂ ತನ್ನ ಅಂತಃಶಕ್ತಿಯನ್ನು ಕಂಡುಕೊಳ್ಳದಂತೆ ಕಡಿವಾಣ ಹಾಕಲಾಗಿದೆ. ಇಂದಿಗೂ ಮಹಿಳಾ ಸಬಲೀಕರಣ ಕಾರ್ಯಯೋಜನೆಗಳಿಗೆ ಇದೊಂದು ದೊಡ್ಡ ತಡೆಗೋಡೆಯಾಗಿಯೇ ಉಳಿದಿದೆ. ಮಹಿಳೆಯ ಬಲಿದಾನವನ್ನು ಕೇಳುವ ಸತಿ ಸಹಗಮನ, ಕೆರೆಗೆ ಹಾರ ಅಥವಾ ದೇವದಾಸಿ ಪದ್ಧತಿ, ಮಾಟಗಾತಿಯ ಪಟ್ಟ, ವಿಧವೆಯರ ನಿರ್ಬಂಧನ ಇತ್ಯಾದಿ ಭಯಾನಕ ಆಚರಣೆಗಳಿಂದ ತೋರಿಕೆಯ ಮುಕ್ತಿ ಪಡೆದಿದ್ದರೂ, ಮುಟ್ಟು ಮೈಲಿಗೆಗಳಿಂದ ಮಹಿಳೆಗೆ ಇನ್ನೂ ಬಿಡುಗಡೆ ಸಿಕ್ಕಿಲ್ಲ.

ಮುಟ್ಟು ಹೆಣ್ಣಿನ ದೇಹದ ಒಂದು ಸಹಜ ಮಾಸಿಕ ಪ್ರಕ್ರಿಯೆ ಎನ್ನುವ ವೈಜ್ಞಾನಿಕ ಅರಿವಿನ ನಡುವೆಯೂ, ಆ ದಿನಗಳಲ್ಲಿ ಮುಜುಗರವಿಲ್ಲದೆ ಬಾಹ್ಯ ಜಗತ್ತಿನಲ್ಲಿ ಓಡಾಡಲು ಮತ್ತು ದೈನಂದಿನ ಕೆಲಸಗಳನ್ನು ನಿರ್ವಿಘ್ನವಾಗಿ ಮಾಡಲು ಸ್ಯಾನಿಟರಿ ಪ್ಯಾಡ್ ಗಳು ಲಭ್ಯವಿದ್ದರೂ ಸಹ, ಮಹಿಳೆಯನ್ನು ಅಸ್ಪøಶ್ಯರನ್ನಾಗಿ ಇಡುವ ಹಲವಾರು ಅಸಂಬದ್ಧ ಆಚರಣೆಗಳು ಇನ್ನೂ ಜಾರಿಯಲ್ಲಿವೆ. ಈ ಮೂಲಕ, ಮಹಿಳೆ ಆ ದಿನಗಳಲ್ಲಿ ಅನುಭವಿಸುವ ದೈಹಿಕ ನೋವಿನೊಂದಿಗೆ, ಮಡಿವಂತಿಕೆಯ ಮಾನಸಿಕ ಹಿಂಸೆಯನ್ನು ಸಮಾಜ ಉಡುಗೊರೆಯಾಗಿ ಕೊಟ್ಟಿದೆ. ಉದಾಹರಣೆಗೆ, ದೇವಾಲಯಗಳಿಗೆ ಪ್ರವೇಶ ನಿಷಿದ್ಧವಾಗಿರುವುದು ಮೊದಲ್ಗೊಂಡಂತೆ, ಯಾವುದೇ ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸದಂತಹ ಕಟ್ಟುಪಾಡುಗಳ ನಡುವೆ, ಮನೆಯಲ್ಲಿಯೂ ಕೂಡ ಈ ದಿನಗಳಲ್ಲಿ ಹೆಣ್ಣು ಅಸ್ಪøಶ್ಯಳಾಗಿದ್ದು ಯಾರಿಂದಲೂ ಮುಟ್ಟಿಸಿಕೊಳ್ಳದಂತಹ ಮೈಲಿಗೆಯನ್ನು ಇಂದಿಗೂ ಹೆಚ್ಚಿನ ಸಂಪ್ರದಾಯಸ್ಥ ಮನೆಗಳಲ್ಲಿ ಆಚರಿಸಲಾಗುತ್ತಿದೆ.

ಹೀಗೆ, ಈ ಮೌಢ್ಯ ಕಟ್ಟುಪಾಡುಗಳು ಸಾರ್ವಜನಿಕ ಚರ್ಚೆಗೆ ಪ್ರವೇಶಿಸದೆ, ಪ್ರಶ್ನಿಸದೆ ಕುರುಡಾಗಿ ಮುಂದುವರಿಯುತ್ತಿರುವ ಹಿನ್ನೆಲೆಯನ್ನು ಗಮನಿಸಿದರೆ, ಇವುಗಳ ಹರಿಕಾರರ ಕಬಂಧ ಬಾಹುಗಳು ಹೇಗೆ ಇವುಗಳನ್ನು ಸುತ್ತುವರಿದು ಪೆೀಷಿಸುತ್ತಿವೆ ಹಾಗೂ ರಕ್ಷಿಸುತ್ತಿವೆ ಎನ್ನುವ ಅರಿವಾಗುತ್ತದೆ. ಹಾಗೆಯೇ, ಇವುಗಳ ಪಾಲನೆಯ ಕುರಿತಾಗಿ ಹೆಣ್ಣಿನ ಮನಸ್ಸಿನಲ್ಲಿ ಬಿತ್ತಿರುವ ಅವ್ಯಕ್ತ ಭಯ ಕೆಲಸ ಮಾಡುವುದನ್ನು ನಾವು ಕಾಣಬಹುದು. ಉದಾಹರಣೆಗೆ, ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿಷೇಧವನ್ನು ಸಮರ್ಥಿಸುವವರು ಹೇಳುವಂತೆ, `ಒಂದು ವೇಳೆ ಹೆಣ್ಣುಮಕ್ಕಳು ಪ್ರವೇಶಿಸಿದರೆ, ಅವರಿಗೆ ಮುಂದೆ ಮಕ್ಕಳಾಗುವುದಿಲ್ಲ.’ ಇಂತಹ ಆಧಾರರಹಿತ ಹೇಳಿಕೆಗಳು ಹೆಣ್ಣುಮಕ್ಕಳ ಧೈರ್ಯವನ್ನು ಸಹಜವಾಗಿ ಕುಂದಿಸುತ್ತದೆ. ಅದೂ ಕೂಡ, ಹೆಣ್ಣಿನ ಅಸ್ಮಿತೆ ಮಕ್ಕಳನ್ನು ಹೆರುವುದರಲ್ಲಿಯೇ ಇದೆಯೆಂದು ಸಾರುವ ಸಮಾಜದಲ್ಲಿ, ಹೆಣ್ಣುಮಕ್ಕಳು ಈ ಸಂಪ್ರದಾಯಗಳನ್ನು ಮುರಿಯುವ ಸಾಹಸಮಾಡುವುದಿಲ್ಲ. ಹಾಗಾಗಿ, ಈ ಮೂಢನಂಬಿಕೆಗಳ ಹರಿಕಾರರಿಗೆ ಯಾವ ಮಾರ್ಗಗಳಿಂದ ಈ ನಂಬಿಕೆಗಳನ್ನು ಉಳಿಸಿಕೊಳ್ಳಬೇಕು ಎನ್ನುವುದು ಸ್ಪಷ್ಟವಾಗಿ ತಿಳಿದಿದೆ.

ವಿಶೇಷವಾಗಿ, ಮಹಿಳೆಯರಿಗೆ ಸಂಬಂಧಿಸಿದ ಇನ್ನೂ ಕೆಲವು ಮೂಢನಂಬಿಕೆಗಳನ್ನು ಹೆಸರಿಸುವುದಾದರೆ, ಗಂಡನಿಗಿಂತ ಹೆಂಡತಿಯ ವಯಸ್ಸು ಚಿಕ್ಕದಾಗಿರಬೇಕು, ಹೆಂಡತಿ ಗಂಡನಿಗಿಂತ ಮೊದಲು ಮುತ್ತೈದೆಯಾಗಿ ಸಾಯಬೇಕು, ಗಂಡ ಕಟ್ಟುವ ಮಾಂಗಲ್ಯ ಬಹಳ ಪಾವಿತ್ರ್ಯವಾದದ್ದು ಹಾಗೂ ಅದನ್ನು ತೆಗೆದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆ, ಹೆಣ್ಣಿನ ಕಾಲ್ಗುಣ ಹಾಗೂ ಕೈಗುಣಗಳ ಮಹತ್ವ, ಇತ್ಯಾದಿಗಳು. ಇನ್ನೊಂದು ವಿಶಿಷ್ಟವಾದ ಮೂಢನಂಬಿಕೆಯೆಂದರೆ, ಜಾತಕ ಫಲ. ಒಂದು ವೇಳೆ, ಹೆಣ್ಣಿನ ಜಾತಕದಲ್ಲಿ ಅನಿಷ್ಟ ನಕ್ಷತ್ರ ಕಂಡುಬಂದಲ್ಲಿ, ಅವಳಿಗೆ ಮದುವೆಗೆ ಗಂಡು ಸಿಗುವುದು ಕಷ್ಟವಾಗುತ್ತದೆ.

ಆದರೆ, ಇಲ್ಲಿನ ಮುಖ್ಯ ಪ್ರಶ್ನೆ, ಕಾನೂನಿನ ಮೂಲಕ ಜನಜಾಗೃತಿ ಮೂಡಿಸಬಹುದೇ? ನಮ್ಮಲ್ಲಿ, ವರದಕ್ಷಿಣೆ ನಿಷೇಧ ಕಾನೂನು ಜಾರಿಗೆ ಬಂದು ಬಹಳ ವರ್ಷವಾಗಿವೆ. ಆದರೆ, ಅದನ್ನು ಎಷ್ಟು ಜನರು ಪಾಲಿಸುತ್ತಿದ್ದಾರೆ? ಎನ್ನುವುದು ಕೂಡ ಅಷ್ಟೇ ಮುಖ್ಯ. ಆದ್ದರಿಂದ, ಕಾನೂನಿನ ರಕ್ಷಣೆ ಬೇಕೇನೋ ನಿಜ. ಇದರಿಂದ, ಮೂಢನಂಬಿಕೆಗಳ ವಿರುದ್ಧ ಹೋರಾಡಲು ಶಕ್ತಿ ಬರುತ್ತದೆ. ಆದರೆ, ಇದನ್ನು ಜಾರಿಗೆ ತರಲು ಸರಕಾರಕ್ಕೆ ಇಚ್ಛಾಶಕ್ತಿ ಇದೆಯೇ? ಯಾಕೆಂದರೆ, ಸಂಪ್ರದಾಯವಾದಿಗಳಿಂದ, ಹಾಗು ಮುಖ್ಯವಾಗಿ ಟಿವಿ ಚಾನೆಲ್ ಗಳಲ್ಲಿ ಬೆಳ್ಳಂಬೆಳಗ್ಗೆ ದಿನಭವಿಷ್ಯ ಹೇಳುವ ಪ್ರಭಾವಿ ಜ್ಯೋತಿಷಿಗಳಿಂದ, ವಾಸ್ತುತಜ್ಞರಿಂದ, ಸಾಕಷ್ಟು ಪ್ರತಿರೋಧ ಬರಬಹುದು. ಕುಚೋದ್ಯವೆಂದರೆ, ಪಕ್ಷಾತೀತವಾಗಿ ನಮ್ಮನ್ನು ಆಳುವವರೆಲ್ಲಾ ಇವರ ಶಿಷ್ಯಂದಿರೆ. ಹಾಗಾಗಿ, ಸರ್ಕಾರಗಳು ಮೂಢನಂಬಿಕೆಗಳ ವಿರುದ್ಧ ಜನಸಾಮಾನ್ಯರಿಗೆ ಜಾಗೃತಿ ಹುಟ್ಟಿಸುವ ಸಾಧ್ಯತೆಗಳು ಬಹಳ ಕಡಿಮೆ.

ಆದ್ದರಿಂದ, ಕಾನೂನು ಜಾರಿಗೆ ತರುವ ಪ್ರಯತ್ನಗಳ ನಡುವೆ, ಜನಸಾಮಾನ್ಯರಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸುವ ಅಗತ್ಯವೂ ಅಷ್ಟೇ ಮುಖ್ಯವಾಗಿದೆ. ಈ ಮೂಢನಂಬಿಕೆಗಳನ್ನು ಬೆಂಬಲಿಸುವ ಮನುಷ್ಯನ ಮನಸ್ಸಿನಲ್ಲಿ ತುಂಬಿಕೊಂಡಿರುವ ಕಸವನ್ನು ತೆಗೆದು ತಿಳಿಗೊಳಿಸಿದಲ್ಲಿ, ಇವುಗಳನ್ನು ಕಿತ್ತೊಗೆಯುವ ಪ್ರಕ್ರಿಯೆ ಬಹಳ ಸುಲಭವಾಗುತ್ತದೆ. ಹಾಗಾಗಿ, ವೈಜ್ಞಾನಿಕ ದೃಷ್ಟಿಕೋನ ಬೆಳೆಸಲು ಪೂರಕವಾಗುವ ಪಠ್ಯಗಳನ್ನು ನಮ್ಮ ಶಾಲಾ ಕಾಲೇಜುಗಳಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಈ ಮೂಲಕ, ಇದೊಂದು ಸಾಮಾಜಿಕ ಜನಜಾಗೃತಿ ಆಂದೋಲನವಾಗಬೇಕಾಗಿದೆ. ಹೀಗಾದಲ್ಲಿ ಮಾತ್ರ, ಜನರು ಮೂಢನಂಬಿಕೆಗಳನ್ನು ವಿಮರ್ಶಿಸದೆ, ಪೀಳಿಗೆಯಿಂದ ಪೀಳಿಗೆಗೆ ಕುರುಡಾಗಿ ದಾಟಿಸುವುದನ್ನು ತಡೆಯಬಹುದು.

*ಲೇಖಕರು ತುಮಕೂರು ವಿಶ್ವವಿದ್ಯಾನಿಲಯದ ಆಂಗ್ಲ ಭಾಷಾ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.