ಮಾಧ್ಯಮಗಳು ಮತ್ತು ಮೂಢನಂಬಿಕೆ

ಜನರನ್ನು ಮೂಢನಂಬಿಕೆಗಳಿಂದ ಬಿಡುಗಡೆಗೊಳಿಸುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಭಾವಶಾಲಿಯಾಗಿರುತ್ತವೆ ಎಂದು ಭಾವಿಸುವ ಹೊತ್ತಿನಲ್ಲೇ ಸುದ್ದಿ ಮಾಧ್ಯಮಗಳು ಮೂಢನಂಬಿಕೆಯನ್ನು ಇನ್ನಷ್ಟು ಬಿತ್ತುವ, ಜನರನ್ನು ಆ ಕಡೆಗೆ ಸೆಳೆಯುವಲ್ಲಿ ನಿರತವಾಗಿರುವುದು ವಿಜ್ಞಾನ ಮತ್ತು ವೈಚಾರಿಕತೆಯ ದಮನವೇ ಸರಿ.

ಎನ್.ರವಿಕುಮಾರ್ ಟೆಲೆಕ್ಸ್

ಮನುಷ್ಯ ತನ್ನ ಸಾಮಾಜಿಕ, ವೈಯಕ್ತಿಕ ಸಮಸ್ಯೆಗಳಿಂದ ಬಿಡುಗಡೆಗೊಳ್ಳಲು ತನ್ನ ಶ್ರಮ ಮತ್ತು ಬೌದ್ಧಿಕ ಶಕ್ತಿಯ ಹೊರತಾಗಿಯೂ ಒಂದು ಅಗೋಚರ ಶಕ್ತಿಯ ಬಗೆಗಿನ ನಂಬಿಕೆಯನ್ನು ಹೊಂದಿರುತ್ತಾನೆ. ದೇವರು, ಧರ್ಮ, ಮಾಟ. ಮಂತ್ರ, ದಿನಭವಿಷ್ಯ, ಜೋತಿಷ್ಯ, ಯಜ್ಞಯಾಗಗಳಂತಹ ಸಂಗತಿಗಳ ಹಿಂದೆ ಬಿದ್ದು ಪವಾಡವೊಂದನ್ನು ನಿರೀಕ್ಷಿಸುತ್ತಿರುತ್ತಾನೆ. ಇಂತಹ ಮೌಢ್ಯಗಳ ಹಿಂದೆ ಧರ್ಮ ಮತ್ತು ದೇವರು ಎಂಬ ನಂಬಿಕೆಗಳು ಇರುತ್ತವೆ ಎನ್ನುವುದನ್ನು ಎಲ್ಲಾ ಸಂದರ್ಭಗಳಲ್ಲಿ ನಾವು ಕಾಣುತ್ತಿದ್ದೇವೆ. ವಿಜ್ಞಾನ, ವೈಚಾರಿಕತೆಯ ನಾಗಲೋಟದಲ್ಲಿರುವ ವರ್ತಮಾನ ಸಮಾಜ ಈ ಹಿಂದಿಗಿಂತಲೂ ಗಾಢವಾದ ಮೌಢ್ಯದ ಕಡೆಗೆ ಚಲಿಸುತ್ತಿರುವುದು ಆಘಾತಕಾರಿ ಬೆಳವಣಿಗೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲಘಟ್ಟದಲ್ಲಿ ಈ ದೇಶದ ಸಾಕ್ಷರತೆ ಕೇವಲ ಶೇ. 27 ರಷ್ಟಿತ್ತು. ಇಂದು ಶೇ.94 ರಷ್ಟನ್ನು ತಲುಪಿದ್ದೇವೆ. ವಿಜ್ಞಾನದಲ್ಲಿ ಮನುಷ್ಯ ಅಗಾಧ ಸಾಧನೆಗಳನ್ನು ಮಾಡಿರುವುದು, ಅದನ್ನು ಮನುಷ್ಯಕಲ್ಯಾಣಕ್ಕೆ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಶ್ರಮವಹಿಸುತ್ತಿರುವುದರ ಮಧ್ಯೆಯೇ ಮೂಢನಂಬಿಕೆಗಳ ಕಡೆಗೂ ಮುಖಮಾಡಿರುವುದು ದೊಡ್ಡ ವೈರುಧ್ಯ ಎನ್ನಬಹುದು. ಮನುಷ್ಯ ಧಾರ್ಮಿಕನಾಗುವುದು ಮುಖ್ಯವಲ್ಲ. ಆದರೆ ಆತ ಧಾರ್ಮಿಕತೆಯ ನೆಪದಲ್ಲಿ ಮತ, ಮೌಢ್ಯಗಳಿಗೆ ಒಳಗಾಗುವುದು ಹೆಚ್ಚು ಅಪಾಯಕಾರಿ. ಇಂತಹ ಮೌಢ್ಯವನ್ನು ಧರಿಸುವುದರ ಮತ್ತು ಬಿತ್ತುವುದರ ಹಿಂದೆ ಪುರೋಹಿತಶಾಹಿ ಹಿತಾಸಕ್ತಿ ಅಡಗಿದೆ ಎನ್ನುವುದೇ ಸತ್ಯ.

ಧರ್ಮ, ದೇವರು ಹೊರತಾಗಿ ಮೂಢನಂಬಿಕೆಗಳ ಕುರಿತು ಚರ್ಚೆ ಮಾಡಲಾಗದು. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಮೌಢ್ಯ ಕುರಿತು ಕಾರ್ಲ್‍ಮಾಕ್ರ್ಸ್ ಆಡಿರುವ ಈ ಮಾತುಗಳು ಬಹುಮುಖ್ಯವೆನಿಸುತ್ತವೆ:

ಜನರ ಭ್ರಾಮಕ ಸಂತೋಷವಾದ ಧರ್ಮವನ್ನು ತೊಡೆದು ಹಾಕುವುದೆಂದರೆ, ಅವರ ನಿಜವಾದ ಸಂತೋಷಕ್ಕಾಗಿ ಆಗ್ರಹಿಸುವುದು ಎಂದಾಗುತ್ತದೆ. ಅಸ್ತಿತ್ವದಲ್ಲಿರುವ ಪರಿಸ್ಥಿತಿಯ ಬಗೆಗೆ ಭ್ರಮೆಗಳನ್ನು ಬಿಟ್ಟುಕೊಡುವಂತೆ ಆಗ್ರಹಿಸುವುದೆಂದರೆ, ಭ್ರಮೆಗಳ ಅವಶ್ಯಕತೆ ಇರುವ ಪರಿಸ್ಥಿತಿಗಳನ್ನು ಬಿಟ್ಟುಕೊಡಲು ಆಗ್ರಹಿಸುವುದು ಎಂದಾಗುತ್ತದೆ. ಆದ್ದರಿಂದ ಧರ್ಮದ ಬಗೆಗಿನ ಟೀಕೆಯು ಭ್ರೂಣಾವಸ್ಥೆಯಲ್ಲಿ ಕಣ್ಣೀರಿನ ಕಡಲಿನ ಟೀಕೆಯೇ ಆಗಿರುತ್ತದೆ. ಧರ್ಮವು ಈ ಕಣ್ಣೀರಿನ ಕಡಲಿನ ಪ್ರಭಾ ಮಂಡಲವಾಗಿರುತ್ತದೆ”.

ಹಾಗೆ ನೋಡಿದರೆ ಮಂದಿರ, ಮಸೀದಿ, ಚರ್ಚ್‍ಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳು ಮೂಢನಂಬಿಕೆಗಳಿಂದ ಮುಕ್ತವಾಗಿಲ್ಲ. ಯಾವ ಧರ್ಮಗಳು ಕೂಡ ಮುಕ್ತವಾಗಿಲ್ಲ ಎಂಬುದನ್ನು ಮರೆಮಾಚುವಂತಿಲ್ಲ. ಅನ್ನ, ನೀರು, ಬಟ್ಟೆಗಿಂತ ದೇವರು, ದೇವಸ್ಥಾನಗಳು ಮುಖ್ಯವಾಗಿಬಿಡುತ್ತವೆ. ಈ ಭ್ರಮೆಯಿಂದ ಜನರನ್ನು ಹೊರತರಲು ಹೋರಾಡಿದವರು ಕೊಲೆಯಾಗುವವರೆಗೂ ಎಲ್ಲವೂ ಘಟಿಸಿಹೋದ ಉದಾಹರಣೆಗಳು ಕಣ್ಣಮುಂದೆ ಇವÉ. ಇವತ್ತಿನ ಯುಗ ಆಧುನಿಕ ಸಂವಹನದ ಯುಗ. ಸಾಂಪ್ರ್ರದಾಯಿಕ ಸುದ್ದಿ ಮಾಧ್ಯಮಗಳ ಜೊತೆಗೆ ಸಾಮಾಜಿಕ ಜಾಲ ತಾಣಗಳ ಉಚ್ಛ್ರಾಯ ಸ್ಥಿತಿಯನ್ನು ಕಾಣುತ್ತಿದ್ದೇವೆ. ಜನರನ್ನು ಮೂಢನಂಬಿಕೆಗಳಿಂದ ಬಿಡುಗಡೆಗೊಳಿಸುವಲ್ಲಿ ಈ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಭಾವಶಾಲಿಯಾಗಿರುತ್ತವೆ ಎಂದು ಭಾವಿಸುವ ಹೊತ್ತಿನಲ್ಲೇ ಸುದ್ದಿ ಮಾಧ್ಯಮಗಳು ಮೂಢನಂಬಿಕೆಯನ್ನು ಇನ್ನಷ್ಟು ಬಿತ್ತುವ, ಜನರನ್ನು ಆ ಕಡೆಗೆ ಸೆಳೆಯುವಲ್ಲಿ ನಿರತವಾಗಿರುವುದು ವಿಜ್ಞಾನ ಮತ್ತು ವೈಚಾರಿಕತೆಯ ದಮನವೆನ್ನಬಹುದು. ವಿಶೇಷವಾಗಿ ಮಾಧ್ಯಮಗಳು ಪ್ರತಿ ಕ್ಷಣದಲ್ಲೂ ಪ್ರತಿಪಾದಿಸಬೇಕಾದ ಮತ್ತು ಪಾಲಿಸಬೇಕಾದ ಸಾಮಾಜಿಕ ಹೊಣೆಗಾರಿಕೆಯಿಂದ ಅವು ವಿಮುಖಗೊಳ್ಳುತ್ತಿರುವುದು ಈ ಸಮಾಜವನ್ನು ಹಿಮ್ಮುಖ ಚಲನೆಗೆ ಪ್ರಚೋದಿಸುತ್ತಿರುವುದರ ಸಂಕೇತವೆನ್ನಬಹುದು.

ಮಾಧ್ಯಮಗಳು ಮೂಢನಂಬಿಕೆಗಳನ್ನು ವಿರೋಧಿಸುವ ಸಾಮಾಜಿಕ ವಿಜ್ಞಾನಿಗಳನ್ನು ನಿರಾಕರಿಸುವ ಮೂಲಕ ಅಥವಾ ಅವರನ್ನು ವಿವಾದಕ್ಕೆಳೆಯುವ ಮೂಲಕ ಅವರ ಮೇಲೆ ಹಲ್ಲೆ, ಹತ್ಯೆಗೆ ಪ್ರಚೋದಿಸುತ್ತಿರುವುದು ಈ ಸಮಾಜದ ದುರ್ದೈವ. 1989ರಲ್ಲಿ ಡಾ.ನರೇಂದ್ರ ಅಚ್ಯುತ ದಾಭೋಳ್ಕರ್ ಅವರು ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ ರಚಿಸಿ ಆ ಮೂಲಕ ಮೂಢನಂಬಿಕೆಗಳ ನಿವಾರಣೆಗೆ ಮುಂದಾದರು. ಜನರಲ್ಲಿ ಅರಿವು ಮೂಡಿಸಲು ಹೋರಾಡಿದರು. ಪುರೋಹಿತಶಾಹಿಗಳ, ಪವಾಡಪುರುಷರ ಬಣ್ಣಬಯಲು ಮಾಡಿದರು. ಆದರೆ ಪ್ರತಿಗಾಮಿ ವರ್ಗ ಆಗಸ್ಟ್ 20, 2013 ರಂದು ಅವರನ್ನು ಕೊಂದುಹಾಕಿತು. ಈ ಸಾಲಿಗೆ ಪನ್ಸಾರೆ ಎಂಬ ಸಮಾಜ ವಿಜ್ಞಾನಿಯ ಹತ್ಯೆಯೂ ಸೇರಿದೆ.

ಕರ್ನಾಟಕದಲ್ಲೂ ಇಂತಹುದ್ದೇ ಅನಾಹುತವೊಂದು ನಡೆದುಹೋಯಿತು. ಕನ್ನಡದ ಖ್ಯಾತ ಸಂಶೋಧಕ ಎಂ.ಎಂ.ಕಲಬುರ್ಗಿ ಅವರು ಡಾ.ಯು.ಆರ್.ಅನಂತಮೂರ್ತಿ ಅವರ ಕೃತಿಯಲ್ಲಿರುವಂತೆ ಬಾಲ್ಯದಲ್ಲಿ ದೇವರ ವಿಗ್ರಹದ ಮೇಲೆ ಮೂತ್ರ ವಿಸರ್ಜನೆ ಮಾಡಲಾಗಿತ್ತು ಎಂಬುದರ ಪ್ರಸ್ತಾಪ ದೊಡ್ಡ ವಿವಾದವನ್ನೆಬ್ಬಿಸಿತು. ಅದು ಅಂತಿಮವಾಗಿ ಕಲಬುರ್ಗಿ ಅವರ ಕೊಲೆಯಲ್ಲಿ ಅಂತ್ಯಗೊಂಡಿತು. ಕಲಬುರ್ಗಿ ಹೇಳಿಕೆಯನ್ನು ವಿವಾದ ಮಾಡಿದ (ಅಪ)ಕೀರ್ತಿ ಕನ್ನಡದ ನ್ಯೂಸ್ ಚಾನಲ್ ಗಳಿಗೆ ಸಲ್ಲುತ್ತದೆ.

ಕನ್ನಡದ ಶ್ರೇಷ್ಠ ಸಾಹಿತಿ, ಸಂಶೋಧಕ ಕಲಬುರ್ಗಿ ಅವರ ಹೇಳಿಕೆಯನ್ನು ನಕರಾತ್ಮಕ ನೆಲೆಯಲ್ಲಿ ವಿಶ್ಲೇಷಣೆ ಮಾಡುವ ಮೂಲಕ ಜನರ ಯೋಚನಾ ಶಕ್ತಿಯನ್ನೆ ಹತ್ತಿಕ್ಕಿದ ಮಾಧ್ಯಮಗಳು ಸ್ಥಾಪಿತ ಪುರೋಹಿತಶಾಹಿ ಶಕ್ತಿಗಳನ್ನು ಹುರಿದುಂಬಿಸಿದವು. ಧರ್ಮ, ದೇವರು ಎಂಬ ಭಾವನಾತ್ಮಕ ಸೋಂಕನ್ನು ದಿನಮಾತ್ರದಲ್ಲಿ ವ್ಯಾಪಕವಾಗಿ ಹರಡುವಲ್ಲಿ ಮಾಧ್ಯಮಗಳು ಯಶಸ್ವಿಯಾದವು. ಇದು ಕಲಬುರ್ಗಿಯವರನ್ನು ಕೊಲ್ಲುವವರೆಗೂ ಮುಂದುವರೆದು ಕಲಬುರ್ಗಿ ಅವರನ್ನು ಬೆಂಬಲಿಸಿದ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡುವವರೆಗೂ ಬಂದು ತಲುಪಿದರೆ. ಅನೇಕರ ವಿರುದ್ಧ ಪೊಲೀಸ್ ಕೇಸುಗಳು ದಾಖಲಾಗುವ ಮಟ್ಟಕ್ಕೆ ಹೋಯಿತು. ಸಮಾಜದಲ್ಲಿ ಒಂದು ಕಾಡುನ್ಯಾಯ ನೆಲೆಗೊಂಡ ವಾತಾವರಣವೇ ಇಂದಿಗೂ ಮುಂದುವರೆದಿದೆ. ಕಲಬುರ್ಗಿಯವರ ಹತ್ಯೆ ಮಾಧ್ಯಮ ಪ್ರಾಯೋಜಿತ ಹತ್ಯೆಯೇ ಆಗಿತ್ತು.

ಯಾವ ಮಾಧ್ಯಮಗಳು ವೈಜ್ಞಾನಿಕ ಮತ್ತು ವೈಚಾರಿಕ ಚರ್ಚೆ, ವಿಶ್ಲೇಷಣೆಗಳ ಮೂಲಕ ಸಮಾಜವನ್ನು ಮೂಢನಂಬಿಕೆಗಳಿಂದ ಬಿಡುಗಡೆಗೊಳಿಸುವ ಸಾಮಾಜಿಕ ಮತ್ತು ವೃತ್ತಿಪರ ಹೊಣೆಗಾರಿಕೆಯನ್ನು ತೋರಬೇಕಿತ್ತೋ, ಮೂಢನಂಬಿಕೆಗಳ ವಿರುದ್ಧ ಹೋರಾಡುವ ಸಾಮಾಜಿಕ ವಿಜ್ಞಾನಿಗಳು, ಚಿಂತಕರ ಬೆಂಬಲವಾಗಿ ನಿಲ್ಲಬೇಕಿತ್ತೋ ಅದೇ ಮಾಧ್ಯಮಗಳು ಇಂದು ಮೂಢನಂಬಿಕೆಗಳನ್ನು ಪುಷ್ಟೀಕರಿಸುವ, ಜ್ಯೋತಿಷ್ಯ, ಪವಾಡ, ಮಾಟ, ಮಂತ್ರಗಳ ಜಾಹೀರಾತುಗಳನ್ನು ಪ್ರಸಾರ ಮಾಡುವ ಮೂಲಕ ಲಾಭಕೋರತನಕ್ಕಿಳಿದಿವೆ.

ಭಾರತದ ಸಂವಿಧಾನದ ವಿಧಿ 51(ಹೆಚ್) ನಲ್ಲಿನ ಮೂಲಭೂತ ಕರ್ತವ್ಯವಾಗಿರುವ “ಜನರಲ್ಲಿ ವೈಜ್ಞಾನಿಕ ಮನೋಭಾವ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿ ಇವುಗಳನ್ನು ಅಭಿವೃದ್ದಿಗೊಳಿಸುವುದು” ಎಂಬುದನ್ನು ಕನಿಷ್ಠ ಮಾಧ್ಯಮಗಳಾದರೂ ಅರ್ಥಮಾಡಿಕೊಳ್ಳದೇ ಇರುವುದರ ಪರಿಣಾಮ ಇಂದು ಮೂಢನಂಬಿಕೆಗಳು ಜನರ ಬದುಕನ್ನು ಕಾಡುತ್ತಿವೆ. ಅದನ್ನು ವಿರೋಧಿಸುವವರ ಕೊಲ್ಲುವ ಸ್ಥಿತಿಯನ್ನು ನಿರ್ಮಿಸುತ್ತಿವೆ.

ಕರ್ನಾಟಕ ಸರ್ಕಾರ “ಕರ್ನಾಟಕ ಮೂಢನಂಬಿಕೆಗಳ ಪ್ರತಿಬಂಧಕ ವಿಧೇಯಕ 2013” ಸಿದ್ಧಪಡಿಸಿದ್ದು ಒಂದು ಕ್ರಾಂತಿಕಾರಕ ನಿರ್ಧಾರ. ಜನರ ನಂಬಿಕೆ, ಆಚರಣೆಗಳ ನೆಪವನ್ನು ಮುಂದಿಟ್ಟುಕೊಂಡು ಜನರನ್ನು ಧಾರ್ಮಿಕವಾಗಿ, ಸಾಮಾಜಿಕವಾಗಿ ಶೋಷಿಸುವ ಶಕ್ತಿಗಳ ವಿರುದ್ಧ ಇದೊಂದು ಪ್ರಬಲ ಅಸ್ತ್ರವಾಗಿತ್ತು. ಎಲ್ಲ ಧರ್ಮದಲ್ಲಿನ ಕಂದಾಚಾರಗಳನ್ನು ಮಟ್ಟಹಾಕಿ ವೈಚಾರಿಕ ಸಮಾಜವನ್ನು ಕಟ್ಟುವ ಸಂಕಲ್ಪವುಳ್ಳ ಈ ವಿಧೇಯಕವನ್ನು ವಿವಾದಕ್ಕೀಡು ಮಾಡಿದ ಕೀರ್ತಿ ಮಾಧ್ಯಮಗಳಿಗೆ ಸಲ್ಲಬೇಕು. ಇದೊಂದು ದೊಡ್ಡ ವಿಪರ್ಯಾಸ. ಜನರ ನಂಬಿಕೆ, ಶ್ರದ್ಧೆ, ಆಚರಣೆಗಳು ಅವರವರಿಗೆ ಬಿಟ್ಟಿದ್ದು, ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಅಕ್ಷೇಪಗಳನ್ನು ಮಾಧ್ಯಮಗಳೇ ಪ್ರಚೋದಿಸಿದವು.

ಸುದ್ದಿವಾಹಿನಿಗಳಲ್ಲಿ ದಿನಬೆಳಗಾದರೆ, ದಿನಭವಿಷ್ಯ, ಜ್ಯೋತಿಷ್ಯ, ದೇವತಾರಾಧನೆ ಹೆಸರಿನಲ್ಲಿ ನಡೆಯುತ್ತಿದ್ದ ವ್ಯಾಪಾರವನ್ನು ರಕ್ಷಿಸಿಕೊಳ್ಳಲು ಮಾಧ್ಯಮಗಳು ಮತೀಯ ಶಕ್ತಿಗಳಿಗಿಂತಲೂ ಮಿಗಿಲಾಗಿ ಕಾಯ್ದೆಯ ವಿರುದ್ಧ ‘ಕಲ್ಪಿತ ಜನಾಭಿಪ್ರಾಯ’ ಸೃಷ್ಟಿಸಿದವು. ಮಡೆಸ್ನಾನದಂತಹ ಅಮಾನವೀಯ ಕೃತ್ಯವನ್ನು ನಿಷ್ಠುರವಾಗಿ ಖಂಡಿಸಬೇಕಾದ ಮಾಧ್ಯಮಗಳು ಅದನ್ನು ದೈವೀಕರಿಸಿ ಹೊಣೆಗಾರಿಕೆಯಿಂದ ನುಣುಚಿಕೊಂಡವು.

ಎಂಬತ್ತರ ದಶಕದಲ್ಲಿ ಕರ್ನಾಟಕ ಕಂಡ ಅತ್ಯಂತ ಅನಾಗರಿಕ ಮತ್ತು ಅಮಾನವೀಯವಾದ ಚಂದ್ರಗುತ್ತಿ ಬೆತ್ತಲೆ ಸೇವೆಯ ವಿರುದ್ಧ ನಡೆದ ಚಳವಳಿ ಇಂದಿಗೂ ಒಂದು ವೈಚಾರಿಕ ಹೋರಾಟದ ಮೈಲಿಗಲ್ಲು, ಇದರಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಜೊತೆಗೆ ಅಂದಿನ ಪತ್ರಿಕೆಗಳಾದ ಮುಂಗಾರು, ಲಂಕೇಶ್ ಪತ್ರಿಕೆ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಸೇರಿದಂತೆ ನಾಡಿನ ಅನೇಕ ಪತ್ರಿಕೆಗಳ ಕೊಡುಗೆ ಅಪಾರ. ಇದರ ಪರಿಣಾಮವೇ ಬೆತ್ತಲೆ ಸೇವೆಯಂತಹ ಅನಾಗರಿಕ ಮೂಢನಂಬಿಕೆಯೊಂದು ಕೊನೆಗೊಂಡಿತು. ಒಂದು ಹಂತದಲ್ಲಿ ಇದು ಮಾಧ್ಯಮಗಳ ಹೆಗ್ಗಳಿಕೆ ಎನ್ನಬಹುದು. ಆದರೆ ಇಂದು ಮಾಧ್ಯಮಗಳಿಗೆ ಬದ್ಧತೆ ಇಲ್ಲ ಎಂಬುದು ಅನೇಕ ಸಂದರ್ಭದಲ್ಲಿ ಸಾಬೀತಾಗುತ್ತಿದೆ.

ಸಮಾಜದಲ್ಲಿ ತಲತಲಾಂತರಗಳಿಂದ ಬಂದಿರುವ ಧಾರ್ಮಿಕ ನಂಬಿಕೆ, ಶ್ರದ್ಧೆ, ಆಚರಣೆಗಳನ್ನು ಒಂದೇ ಬಾರಿಗೆ ನಿರ್ಮೂಲನೆ ಮಾಡಲಾಗುವುದಿಲ್ಲ. ಆದರೆ ಅವುಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುವುದು, ಅಂತಹ ದಿಕ್ಕಿನಲ್ಲಿ ಸರ್ಕಾರಗಳು ರೂಪಿಸಿದ ಕಾನೂನುಕಾಯ್ದೆಗಳನ್ನು ಬೆಂಬಲಿಸುವುದು ಮಾಧ್ಯಮಗಳ ಹೊಣೆಗಾರಿಕೆಯೇ ಆಗಿರುತ್ತದೆ.

ಆಸ್ತಿಕ ಭಕ್ತರ ಭಾವನೆಗಳನ್ನು ದುರ್ಲಾಭಪಡಿಸಿಕೊಂಡ ಅದೆಷ್ಟೋ ಸ್ವಾಮೀಜಿಗಳು, ಮಠಾಧೀಶರು ಅತ್ಯಾಚಾರ, ಅನಾಚಾರಗಳಲ್ಲಿ ತೊಡಗಿಲ್ಲ? ತನ್ನ ಮೇಲೆ ಅತ್ಯಾಚಾರ ಮಾಡಿದ ಮಠಾಧಿಪತಿಯೊಬ್ಬನ ವಿರುದ್ಧ ದೂರು ನೀಡಿದ ಸಂತ್ರಸ್ತ ಮಹಿಳೆಯೊಬ್ಬಳು, ‘ಸಾಕ್ಷಾತ್ ದೇವರಿಗೆ ನೀನು ಅರ್ಪಣೆ ಆದಂತೆ’ ಎಂದು ಹೇಳುವ ಮೂಲಕ ತನ್ನ ಭಕ್ತಿಯನ್ನು ದುರ್ಬಳಕೆ ಮಾಡಿ ಅತ್ಯಾಚಾರ ಎಸಗಲಾಗಿದೆ ಎಂದು ದಾಖಲಿಸಿದ್ದಾಳೆ. ನಿಧಿ ಶೋಧನೆಗಾಗಿ ಮಕ್ಕಳನ್ನು ಬಲಿಕೊಟ್ಟ ಘಟನೆಗಳು ಇವೆ. ಅನಾದಿಕಾಲದಿಂದಲೂ ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತಿ ಹುಲುಸಾಗಿ ಬೆಳೆಸಿದ ಶಕ್ತಿಗಳು ಇಂದು ಅದೇ ಜನರ ಭಾವನೆಗಳನ್ನು ಪ್ರಚೋದಿಸಿ ರಾಜಕೀಯ ಲಾಭಪಡೆಯುವ ಹುನ್ನಾರವನ್ನು ನಡೆಸುತ್ತಲೆ ಬಂದಿವೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳು ಕೈಜೋಡಿಸಿದರೆ ಅಂತಹ ಸಮಾಜ ಪತನದ ಹಾದಿ ಹಿಡಿಯುತ್ತದೆ.

ವಿಜ್ಞಾನದ ಕ್ಷಿಪ್ರ ಬೆಳವಣಿಗೆಯ ಕಾಲಘಟ್ಟದಲ್ಲಿರುವ ನಾವು ಎಲ್ಲವನ್ನು ವೈಜ್ಞಾನಿಕ ಕಾರಣ, ಫಲದ ಸಿದ್ಧಾಂತದ ಮೇಲೆ ಜಗತ್ತನ್ನು ಕಾಣುವ ತವಕದಲ್ಲಿರುವಾಗಲೇ ನಂಬಿಕೆ, ಆಚರಣೆಗಳ ಹೆಸರಿನಲ್ಲಿ ಮೂಢನಂಬಿಕೆಗಳನ್ನು ಧರಿಸಿಕೊಂಡು, ಪೋಷಿಸಿಕೊಂಡು ಓಡಾಡುತ್ತಿದ್ದೇವೆ. ಇದೊಂದು ವೈರುಧ್ಯದ ಬದುಕು. ಇದು ಮಾಧ್ಯಮಗಳ ಯುಗ, ಮಾಧ್ಯಮಗಳು ಸಮಾಜದ ಮೇಲೆ ಹಿಡಿತ ಸಾಧಿಸಿರುವ ಪ್ರಭಾವಿ ಶಕ್ತಿಗಳಾಗಿವೆ. ವ್ಯಾಪಾರಿ, ಲಾಭಕೋರತನದ ಮನೋಭಾವದಿಂದ ಹೊರಬಂದು ವೈಚಾರಿಕ ಸಮಾಜವನ್ನು ಕಟ್ಟುವಲ್ಲಿ ಸಾಂವಿಧಾನಿಕ ಮೂಲಭೂತ ಕರ್ತವ್ಯಗಳನ್ನು (ವಿಧಿ 51ಹೆಚ್) ಮೆರೆಯಬೇಕು.

ಮೂಢನಂಬಿಕೆಯನ್ನು ವಿರೋಧಿಸಿದ ಮೊದಲ ಬಂಡಾಯಗಾರ ಬಸವಣ್ಣ. ವಚನಗಳ, ನಡೆನುಡಿಗಳ ಮೂಲಕ ಬಸವಣ್ಣ ಸೇರಿದಂತೆ ಶರಣರು, ದಾಸರು, ಸೂಫಿಸಂತರು, ಬುದ್ಧ, ರಾಜಾರಾಮ್ ಮೋಹನ್ ರಾಯ್, ಜ್ಯೋತಿಬಾ ಪುಲೆ, ಸಾವಿತ್ರಿಬಾಯಿ ಪುಲೆ, ಅಂಬೇಡ್ಕರ್ ಅವರು ಮೂಢನಂಬಿಕೆಗಳಿಂದ ಜನರನ್ನು ಬಿಡಿಸಲು ತಮ್ಮ ಬದುಕನ್ನೆ ತ್ಯಾಗ ಮಾಡಿದ್ದಾರೆ. ಮಾಧ್ಯಮಗಳು ಇವರ ವಿಚಾರಧಾರೆ, ಬದುಕನ್ನು ಜನರಲ್ಲಿ ಬಿತ್ತುವ ಕೆಲಸ ಮಾಡುವುದು ಈ ಕಾಲದ ತುರ್ತು. ಈ ಮೂಲಕ ಮೂಢನಂಬಿಕೆಗಳಿಂದ ಸಮಾಜವನ್ನು ಮುಕ್ತಗೊಳಿಸುವುದು ಮಾಧ್ಯಮಗಳ ಹೊಣೆಗಾರಿಕೆ.

*ಲೇಖಕರು ಸೃಜನಶೀಲ ಪತ್ರಕರ್ತರು; ‘ಶಿವಮೊಗ್ಗ ಟೆಲೆಕ್ಸ್’ ದಿನಪತ್ರಿಕೆ ಸಂಪಾದಕರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಂದಿದೆ. ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

Leave a Reply

Your email address will not be published.