ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಬೇಕು

ವ್ಯಕ್ತಿಗತ ನೆಲೆಯಲ್ಲಿ ನಡೆಯುವ `ಮೌಢ್ಯದ ಪ್ರಕ್ರಿಯೆಗೆ ಬೇಕಾದದ್ದು ಕಾನೂನಲ್ಲ. ಕಾನೂನು ಇಲ್ಲಿ ಕೆಲಸ ಮಾಡುವುದಿಲ್ಲ. ಇಲ್ಲಿ ಬೇಕಾದದ್ದು ಪ್ರಯತ್ನದ ಬಲದ ಜೊತೆಗೆ ಒಂದು ಧನಾತ್ಮಕ ನಂಬಿಕೆಯ ಸಾಂಗತ್ಯ. ಆ ಧನಾತ್ಮಕ ನಂಬಿಕೆ ಮೌಢ್ಯದತ್ತ ತಿರುಗದಂತೆ ನೋಡಿಕೊಳ್ಳುವುದು, ನರಳುವಿಕೆಗೆ ಒಳಗಾಗುವುದನ್ನು ತಡೆಯುತ್ತದೆ.

ಡಾ.ಕೆ.ಎಸ್.ಪವಿತ್ರ

ಮೂಢನಂಬಿಕೆಗಳ ಬಗೆಗೆ ಯಾವುದೇ ಚರ್ಚೆ ನಡೆಯುವಾಗಲೂ ಅದು ಬಹುಬಾರಿ ತಿರುಗುವುದು ಧರ್ಮಗಳ ಬಗೆಗೆ. ಬಲಪಂಥಎಡಪಂಥಗಳನ್ನು ಕುರಿತು, ಅಂಥ ಪಂಥಗಳ ಗೋಜಿಗೆ ಹೋದಾಗ `ವಸ್ತು ನಿಷ್ಠತೆಎನ್ನುವುದು ತನ್ನಿಂತಾನೆ ಬದಿಗೆ ಸರಿದುಬಿಡುತ್ತದೆ. ಹಾಗಾಗಿಯೇ ಕೆಲ ವರ್ಷಗಳ ಹಿಂದೆ ಮೂಢನಂಬಿಕೆಗಳ ಕಾನೂನಿನ ಬಗ್ಗೆ ಮನೋವೈದ್ಯರು ಯಾರೂ ಮಾತನಾಡುತ್ತಿಲ್ಲ ಏಕೆ ಎಂಬ ಪ್ರಶ್ನೆಯನ್ನು ಡಾ.ಶ್ರೀಕಂಠ ಕೂಡಿಗೆಯವರು ಎತ್ತಿದಾಗ, ನಾವ್ಯಾರೂ ಪ್ರತಿಕ್ರಿಯಿಸಿರಲೇ ಇಲ್ಲ. ಅದಕ್ಕೆ ಕಾರಣ ಮೂಢನಂಬಿಕೆಯಂತಹ ಜನರಲ್ಲಿ ವ್ಯಾಪಕವಾಗಿರುವ ನಡವಳಿಕೆಗಳಲ್ಲಿ, ವೈದ್ಯರು `ಇದಮಿತ್ಥಂಎನ್ನುವಂತೆ ನಿರ್ಧರಿಸುವುದರ ಹಿಂದಿನ ಸಮಸ್ಯೆಗಳು ಹಲವು.

ನಾನು ಪ್ರತಿನಿತ್ಯ ನೋಡುವ ಮಾನಸಿಕ ಸಮಸ್ಯೆಗಳಿಂದ ನರಳುವ ವ್ಯಕ್ತಿಗಳಲ್ಲಿ, ನನ್ನ ಸಂಪರ್ಕಕ್ಕೆ ಬರುವ ಹಲವು ವರ್ಗಗಳ ಜನರಲ್ಲಿ ನಾನು ನೋಡಿರುವ ಒಂದು ಗಮನಾರ್ಹ ಅಂಶವಿದೆ. ಅದೆಂದರೆ `ಮೂಢನಂಬಿಕೆಎಂಬುದು ವಯಸ್ಸುಜಾತಿಲಿಂಗವಿದ್ಯಾ ಭೇದವನ್ನು ಮೀರಿದ್ದು. ಮೂಢನಂಬಿಕೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ಸಾಮಾನ್ಯವಾಗಿ ಕೆಲವು ಪೂರ್ವಗ್ರಹಗಳಿರುತ್ತವೆ.

ಮೊದಲನೆಯದು, ಆರ್ಥಿಕವಾಗಿ ಮೇಲಿನ ಸ್ತರದಲ್ಲಿರುವವರು, ಬ್ರಾಹ್ಮಣರು ಮೂಢನಂಬಿಕೆಗಳನ್ನು ಪೆೀಷಿಸುತ್ತಾರೆ, ಇತರರನ್ನು ಶೋಷಿಸುತ್ತಾರೆ ಎಂಬುದು. ಎರಡನೆಯದು, ಗ್ರಾಮೀಣ ವರ್ಗದವರಲ್ಲಿ ಮೂಢನಂಬಿಕೆಗಳು ಅಧಿಕ ಎನ್ನುವುದು. ಮೂರನೆಯದು, ಅನಕ್ಷರಸ್ಥರುಅವಿದ್ಯಾವಂತರಲ್ಲಿ ಇವು ಹೆಚ್ಚು ಎಂಬುದು.

ಆದರೆ ವೈದ್ಯೆಯಾಗಿ ನಾನು ನೋಡಿರುವಂತೆ ಸಾಮಾನ್ಯ ಮೂಢನಂಬಿಕೆಗಳನ್ನು ನಾವು `ಅವು ನಿರುಪಾಯಕಾರಿಎಂದು ಮುಂದುವರಿಸುತ್ತೇವೆ. ಹಾಗೆಯೇ ತೀವ್ರವಾದ ನೋವುಸಂಕಷ್ಟಹತಾಶೆ ಮೂಢನಂಬಿಕೆಗಳಿಗೆ ನಾವು ಮೊರೆ ಹೋಗುವ ಸಾಧ್ಯತೆಯನ್ನು ನಮ್ಮ ಎಂಥದ್ದೇ ವೈಜ್ಞಾನಿಕ ಹಿನ್ನೆಲೆಯನ್ನೂ ಮೀರಿ ಹೆಚ್ಚಿಸುತ್ತದೆ. ಪೌರ್ವಾತ್ಯರಲ್ಲಿ ವಿಶೇಷವಾಗಿ ನಮ್ಮ ಭಾರತದಲ್ಲಿ, ಹಿಂದೂಗಳಲ್ಲಿ ಮೂಢನಂಬಿಕೆಗಳು ಇರುವಂತೆಯೇ, ಪಾಶ್ಚಾತ್ಯರಲ್ಲಿ ಎಲ್ಲ ಧರ್ಮದವರಲ್ಲಿ ಮೂಢನಂಬಿಕೆಗಳು ವ್ಯಾಪಕವಾಗಿಯೇ ಕಾಣಬಹುದು. ಆದ್ದರಿಂದ ಮೂಢನಂಬಿಕೆಗಳ ಹಿಂದಿರುವ ಮೌಢ್ಯವೆನ್ನುವುದು ಯಾವುದೇ ಒಂದು ಧಾರ್ಮಿಕ/ಸಾಮಾಜಿಕ ಆಚರಣೆ ಎನ್ನುವುದಕ್ಕಿಂತ, ಮೌಢ್ಯದ ನೆಲೆ ಮನಸ್ಸು; ಮನಸ್ಸಿನ ಭಯ; ಅನಿಶ್ಚಿತತೆಯನ್ನು ನಿಶ್ಚಿತಗೊಳಿಸುವ ಹಂಬಲ.

ನಮ್ಮ ಮನಸ್ಸುಗಳಿಗೆ ಆಗಾಗ ಬಂದೆರಗುವ ಭಾವನೆ ಭಯ. ಆದರೆ `ಭಯಒಂದು ಮೂಲಭೂತವಾದ ರಕ್ಷಣಾ ಪ್ರವೃತ್ತಿ. `ಭಯದ ಬಗೆಗೆ ಝೆನ್ ಕಥೆಯೊಂದು ನೆನಪಾಗುತ್ತದೆ. ಅದೊಂದು ಬೆಟ್ಟದ ತುದಿಯಲ್ಲಿದ್ದ ಭೌದ್ಧ ಭಿಕ್ಷುಗಳ ಆಶ್ರಮ. ಝೆನ್ ಗುರುವೂ, ಆತನ ಹಲವು ಶಿಷ್ಯರೂ ಅಲ್ಲಿ ವಾಸವಾಗಿದ್ದರು. ಪ್ರತಿ ದಿನ ಸುತ್ತಲ ದಟ್ಟ ಅಡವಿಯಿಂದ ಕೆಲವು ಹರಿಣಗಳು ಬರುತ್ತಿದ್ದವು. ಶಿಷ್ಯರೆಲ್ಲ ಆ ಚಿಗರೆಗಳಿಗೆ ಹುಲ್ಲು ತಿನ್ನಿಸಿ, ಮುದ್ದಾಡುತ್ತಿದ್ದರು. ಹೀಗೆ ಕೆಲ ದಿನಗಳು ಕಳೆದವು.

ಒಂದು ದಿನ ಜಿಂಕೆಗಳು ಹತ್ತಿರ ಬರುತ್ತಿದ್ದಂತೆ ಝೆನ್ ಗುರು ಬಂದು ಕೈಬೀಸಿ, ಜೋರಾಗಿ ಕೂಗಿ, ಆ ಜಿಂಕೆಗಳನ್ನು ಓಡಿಸಿದ. ಶಿಷ್ಯರೆಲ್ಲ ಬಂದು ಬೇಸರದಿಂದ ಗುರುವನ್ನು ಕೇಳಿದರು, “ಮಾಸ್ಟರ್, ನಾವು ಕಲಿಯಲು ಬಂದಿರುವುದೇ ಸರ್ವಜೀವಿಗಳಲ್ಲಿ ಕರುಣೆ ತೋರುವ ಕಲೆಯನ್ನು. ಹೀಗಿರುವಾಗ ನಮಗೆ ಕಲಿಸುವ ಗುರುವಾದ ನೀವು ಹೀಗೆ ಮಾಡಬಹುದೆ?”. ಆಗ ಗುರು ಹೇಳಿದ ಆ ಜಿಂಕೆಗಳು ಬೇಟೆಗಾರರಿರುವ, ಕಾಡು ಪ್ರಾಣಿಗಳಿಗಿರುವ ದಟ್ಟ ಅಡವಿಯಲ್ಲಿ ಬದುಕಬೇಕು. ಅವುಗಳಿಗಿರುವ ಒಂದೇ ರಕ್ಷಣೆಯೆಂದರೆ ಭಯ. ಅದನ್ನು ನೀವು ಪ್ರತಿನಿತ್ಯ ಅವುಗಳನ್ನು ಲಾಲಿಸುವ ಮೂಲಕ ತೆಗೆದು ಬಿಟ್ಟರೆ, ಅವುಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ”. ಅಂದರೆ `ಭಯಎನ್ನುವುದು ಪ್ರತಿಯೊಂದು ಜೀವಿಯ ರಕ್ಷಣಾತ್ಮಕ ಸಾಧನ. ಹಾಗಾಗಿ ಅದು ಅಸಹಜವಲ್ಲ. ಅವೈಜ್ಞಾನಿಕವೂ ಅಲ್ಲ.

ಈಗ `ಭಯಎನ್ನುವುದು ಹೇಗೆ ಒಂದು ನಂಬಿಕೆಗೆ ಕಾರಣವಾಗುತ್ತದೆ ಎಂಬುದನ್ನು ನೋಡೋಣ. ನಾವು ಒಂದು ಪರೀಕ್ಷೆ ಬರೆಯಲು ಹೊರಟಿದ್ದೇವೆ. `ಹೇಗಾಗುತ್ತದೆಎಂಬ ಆತಂಕಭಯ ನಮ್ಮನ್ನು ಕಾಡುತ್ತದೆ. ಆ ಆತಂಕಭಯಗಳನ್ನು ನಿವಾರಿಸಿಕೊಳ್ಳಬೇಕು. ಆಗ ನಾವು ಸಾಮಾನ್ಯವಾಗಿ ಮಾಡುವುದು ದೇವರನ್ನು ನೆನೆಸುವುದೋ, ಅಥವಾ ಸುತ್ತಮುತ್ತಲಲ್ಲಿ ನಡೆಯುವ ಯಾವುದಾದರೊಂದು ಸಂಗತಿಗೆ (ನಮ್ಮ ಉಡುಗೆಯ ಬಣ್ಣ /ವಾರದ ದಿನ ಇತ್ಯಾದಿ) ನಮ್ಮ ಯಶಸ್ಸಿನ ಸಾಧ್ಯತೆಯನ್ನು ಜೋಡಿಸಿ ಆ ಕ್ಷಣಕ್ಕೆ ಆತಂಕದಿಂದ ಮುಕ್ತರಾಗುವುದು. ಇಂತಹ ನಡವಳಿಕೆಗಳನ್ನು ಮನಸ್ಸು ತನಗಾಗಿ ಸೃಷ್ಟಿಸಿಕೊಳ್ಳುವ ಸಮಾಧಾನಗಳು. ಅವು ಆತಂಕವನ್ನು ಕಡಿಮೆ ಮಾಡುವುದರಿಂದ ಆರೋಗ್ಯಕರವೇ.

ಆದರೆ ಇಂಥ ನಂಬಿಕೆಗಳು ಮೌಢ್ಯವಾಗಿ ಬದಲಾಗುವುದು, ವ್ಯಕ್ತಿ ತನ್ನ ಪ್ರಯತ್ನವನ್ನು ಮಾಡದೆ, ಮುಂದಿನ ಬಾರಿ ಕೇವಲ ವಾರದ ದಿನ/ ಉಡುಗೆಯ ಬಣ್ಣ /ದೇವರ ಸೇವೆಗಳನ್ನು ಮಾಡಿ ಪರೀಕ್ಷೆ ಎದುರಿಸಲು ಹೋದಾಗ! ಇವು ವೈಯಕ್ತಿಕವಾದ ಮೂಢನಂಬಿಕೆಗಳಾಗಿ ಬೆಳೆಯುತ್ತವೆ. ಮನುಷ್ಯರು ಸಂಘಜೀವಿಗಳಾದ್ದರಿಂದ ಕ್ರಮೇಣ ಅವು ಸಮಾಜದ ನಡವಳಿಕೆಗಳೂ ಆಗಿಬಿಡಬಹುದು. ಕೆಲವೊಮ್ಮೆ `ಗೀಳುಕಾಯಿಲೆಎಂಬ ಮಾನಸಿಕ ಸಮಸ್ಯೆಯೂ ಆಗುವ ಸಾಧ್ಯತೆಯಿದೆ. ಆಗ ಸಮಸ್ಯೆ ಕೇವಲ ಕೊನೆಯ ಫಲಿತಾಂಶದ್ದಲ್ಲ. ಆ ನಿರ್ದಿಷ್ಟ ಕ್ರಿಯೆ (ಸಮಸಂಖ್ಯೆ/ಬೆಸಸಂಖ್ಯೆ/ಆಯಾ ಬಣ್ಣ/ವಾರದ ದಿನ ಪಾಲಿಸುವುದು) ಮಾಡದಿದ್ದಾಗ ಉಂಟಾಗುವ `ಮಾಡಿಲ್ಲ, ಮಾಡಿಲ್ಲಎಂಬ ಚಡಪಡಿಕೆ. ಆ ಚಡಪಡಿಕೆಯ ಸಮಾಧಾನಕ್ಕಾಗಿ ಆ ಕ್ರಿಯೆಯನ್ನು ಮುಂದುವರಿಸುವುದು ಹೀಗೆ ಒಂದು ಗೀಳಾಗಿ ಕ್ರಮೇಣ ವ್ಯಕ್ತಿ ನರಳತೊಡಗುತ್ತಾನೆ.

ಇಂಥ ವ್ಯಕ್ತಿಗತ ನೆಲೆಯಲ್ಲಿ ನಡೆಯುವ `ಮೌಢ್ಯದ ಪ್ರಕ್ರಿಯೆಗೆ ಬೇಕಾದದ್ದು ಕಾನೂನಲ್ಲ. ಕಾನೂನು ಇಲ್ಲಿ ಕೆಲಸ ಮಾಡುವುದಿಲ್ಲ. ಇಲ್ಲಿ ಬೇಕಾದದ್ದು ಪ್ರಯತ್ನದ ಬಲದ ಜೊತೆಗೆ ಒಂದು ಧನಾತ್ಮಕ ನಂಬಿಕೆಯ ಸಾಂಗತ್ಯ. ಆ ಧನಾತ್ಮಕ ನಂಬಿಕೆ ಮೌಢ್ಯದತ್ತ ತಿರುಗದಂತೆ ನೋಡಿಕೊಳ್ಳುವುದು, ನರಳುವಿಕೆಗೆ ಒಳಗಾಗುವುದನ್ನು ತಡೆಯುತ್ತದೆ.

ಈಗ ಸಾಮಾಜಿಕವಾಗಿ, ನಾವು ಒಂದು ಸಮುದಾಯವಾಗಿ ನಂಬಿರುವ ನಂಬಿಕೆಗಳತ್ತ ಗಮನ ಹರಿಸೋಣ. ಅವುಗಳಲ್ಲಿ ಜ್ಯೋತಿಷ್ಯ, ವಾಸ್ತು, ಪ್ರಾಣಿಬಲಿ, ಹುಣ್ಣಿಮೆಅಮಾವಾಸ್ಯೆಗಳಲ್ಲಿ ದೇವಸ್ಥಾನಗಳಲ್ಲಿ ನಡೆಯುವ ಆಚರಣೆಗಳು ಎಲ್ಲವೂ ಸೇರಬಹುದು. ಅವುಗಳಲ್ಲಿ ಕೆಲವು ಅಮಾನವೀಯವಾಗಿ, ಮೋಸ ಮಾಡುವ ದುರುದ್ದೇಶದಿಂದ, ಮತ್ತೊಬ್ಬರ ಮುಗ್ಧತೆಯನ್ನು ಶೋಷಿಸುವ ಉದ್ದೇಶದಿಂದಲೇ ನಡೆಯುತ್ತವೆ. ಆದರೆ ಮುಗ್ಧತೆಯನ್ನು ಶೋಷಿಸುವ ಈ ಪ್ರವೃತ್ತಿ, ಅಜ್ಞಾನವನ್ನು ಬಳಸಿ ದುಡ್ಡು ಮಾಡುವ ಕೆಟ್ಟ ಬುದ್ಧಿ ಇವುಗಳಿಗೆ ಮಾತ್ರ ಸೀಮಿತವಲ್ಲ ಎಂಬುದು ಗಮನಾರ್ಹ.

ಫೈನಾನ್ಸ್‍ನಂತಹ ವ್ಯವಹಾರಗಳು, ಬಂಗಾರದಲ್ಲದ ಬಳೆಯನ್ನು ಬಂಗಾರ ಮಾಡಿಕೊಡುತ್ತೇವೆ ಎಂಬ ಆಶ್ವಾಸನೆ, ನಂಬಲಾರದಷ್ಟು ಕಡಿಮೆ ಬೆಲೆಗೆ ಸೈಟು ಕೊಡುತ್ತೇವೆ ಎಂಬ ವಂಚನೆಯ ಮಾತು ಇಂತಹ ಎಲ್ಲ ಮೋಸದ ಮಾತುಗಳಿಗೂ ಮಾರು ಹೋಗಿ, ಹಣ ಕಳೆದುಕೊಳ್ಳುವ, ನೋವನ್ನು ಅನುಭವಿಸುವ ಜನರಿದ್ದಾರೆ. ಅಂತಹವರ ಮೂಢತನವನ್ನು ಅವಲಂಬಿಸಿ ಮತ್ತಷ್ಟು ಇಂತಹ ವಂಚನೆಯ ಜಾಲಗಳು ಹುಟ್ಟಿಕೊಳ್ಳುತ್ತವೆ. ಕಷ್ಟಪಡದೇ ಸಿಗುವ ದುಡ್ಡಿನಶ್ರೀಮಂತಿಕೆಯ ಆಸೆ ಹೇಗೆ ಮೂಢತನಕ್ಕೆ ನಮ್ಮನ್ನು ತಳ್ಳಬಹುದೋ ಹಾಗೆಯೇ ಪವಾಡದಂತಹ ಮಾರ್ಗದಿಂದ ತತ್‍ಕ್ಷಣ ಅನಾರೋಗ್ಯದ ನರಳುವಿಕೆಯೂ ನಮ್ಮನ್ನು ಮೌಢ್ಯದೆಡೆಗೆ ಸುಲಭವಾಗಿ ದೂಡಬಹುದು.

ಸಕ್ಕರೆ ಕಾಯಿಲೆಯಂತಹ ಬಲವಾದ ವೈಜ್ಞಾನಿಕ ಆಧಾರವುಳ್ಳ, ಚಿಕಿತ್ಸೆಯುಳ್ಳ ಕಾಯಿಲೆ ವಿಷಯದಲ್ಲಿಯೂ ಇದು ಸತ್ಯವೇ. ಟಿವಿ ವಾಹಿನಿಯಲ್ಲಿ ಬರುವ `ಇಂತಹ ರಸ ಕುಡಿದರೆ ಸಕ್ಕರೆ ಕಾಯಿಲೆ ನಿಮ್ಮ ಬಳಿ ಸುಳಿಯುವುದಿಲ್ಲಎಂಬ ಮಾತಿಗೆ ಮರುಳಾಗಿ, ಮಾತ್ರೆ ಬಿಟ್ಟು ವಿವಿಧ ತೊಂದರೆಗಳಿಗೆ ಒಳಗಾದವರು ಎಷ್ಟೋ ಜನ. ಇಂತಹ ಜಾಹೀರಾತುಗಳು ವೈಜ್ಞಾನಿಕ ಆಧಾರಗಳನ್ನು ಅವಲಂಬಿಸದೆ, ಜನರ ಮೌಢ್ಯ ಮತ್ತು ತತ್‍ಕ್ಷಣದ ಪರಿಹಾರವನ್ನು ಕಷ್ಟಪಡದೇ ಹುಡುಕುವ ಮಾನವ ಸಹಜ ಸ್ವಭಾವವನ್ನೇ ಅವಲಂಬಿಸಿದೆ.

ಈಗ ಕಾನೂನಿನ ಪ್ರಶ್ನೆಗೆ ಬರೋಣ. ನೆರೆ ರಾಜ್ಯವಾದ ಮಹಾರಾಷ್ಟ್ರ, ಕೇರಳಗಳು `ಅಂಧಶ್ರದ್ಧಾ ಕಾನೂನುಗಳನ್ನು ಬಲವಾಗಿ ಜಾರಿಗೆ ತರಲು ಪ್ರಯತ್ನಿಸಿವೆ. ಅವು ಎಷ್ಟು ಉಪಯುಕ್ತವಾಗಿವೆ ಎಂಬ ಮೌಲ್ಯಮಾಪನ ನಡೆಯುವ ಮೊದಲೇ, ಅವುಗಳ ಬಗ್ಗೆ ವಿವಾದಗಳೇ ಎದ್ದು ನಿಂತಿವೆ. ಹಾಗೆ ನೋಡಿದರೆ ಇಂಥ ವಿವಾದಗಳಿಲ್ಲದಿರುವ, ಯಾರೂ ಒಪ್ಪಬಹುದಾದ, `ಧಾರ್ಮಿಕಎಂಬ ಪರಿಧಿಗೆ ದೂರವಾದ ಹಲವು ಕಾನೂನುಗಳಿವೆ. ಕೌಟುಂಬಿಕ ದೌರ್ಜನ್ಯದ ಕಾನೂನು, ಅತ್ಯಾಚಾರದ ವಿರುದ್ಧದ ಕಾನೂನು, ಸ್ತ್ರೀಭ್ರೂಣಹತ್ಯೆಲಿಂಗಪತ್ತೆಯ ಕಾನೂನು ಇತ್ಯಾದಿ ಇತ್ಯಾದಿ. ಈ ಕಾನೂನುಗಳು ಎಷ್ಟು ಉಪಯುಕ್ತವಾಗಿವೆ ಎಂಬುದನ್ನು ನೋಡಿದರೆ, ಕಾನೂನುಗಳ ಸಾಫಲ್ಯ, ಸರಿಯಾದ ಬಳಕೆ ಜನರ ಅರಿವನ್ನು ಅವಲಂಬಿಸಿರುತ್ತವೆ ಎಂಬುದು ಸ್ಪಷ್ಟವಾಗಿರುತ್ತವೆ.

ಅಂದರೆ ಉದಾಹರಣೆಗೆ ಹೆಣ್ಣು ಮಗುವನ್ನು ಸುರಕ್ಷಿತವಾಗಿ, ಆತ್ಮಾಭಿಮಾನದಿಂದ, ಸಂತಸದಿಂದ ಬೆಳೆಸುವ ಪರಿಸರ ನಿರ್ಮಾಣವಾಗದೆ, ದಂಪತಿ ಹೇಗಾದರೂ ಲಿಂಗಪತ್ತೆ ಮಾಡುವ ಸಾಹಸ, ಇಲ್ಲವೇ ಅನುಮಾನವಿದ್ದಾಗ ಗರ್ಭಪಾತಕ್ಕೆ ಮುಂದಾಗುವುದು ಸಾಮಾನ್ಯ.

ಆದರೆ ಕಾನೂನಿನ ಭಯ, ಭಾರತದಲ್ಲಿ ಕಿಂಚಿತ್ ನಿಯಂತ್ರಣಕ್ಕೆ ದಾರಿಯಾಗುತ್ತದೆ ಎಂಬುದು ಸರಿಯಾದ ಮಾತೇ. ಆದರೆ ಮೌಢ್ಯದ ಬಗೆಗಿನ ಕಾನೂನು `ಸ್ಪಷ್ಟಎಂಬಂತೆ ರೂಪುಗೊಳ್ಳುವುದು ಕಷ್ಟ. ಮೌಢ್ಯದ ಅಮಾನವೀಯ ಪದ್ಧತಿಗಳುಬೆತ್ತಲೆಸೇವೆ, ದೇವದಾಸಿಯಂತಹ ರೂಢಿಗಳಲ್ಲಿ ಜನರ ನಂಬಿಕೆ ಬಲವಾಗಿರುತ್ತವೆ ಎಂಬುದನ್ನು ನಾವು ಗಮನಿಸಲೇಬೇಕು. ಇಂಥ ಕಡೆಗಳಲ್ಲಿ ಸೇವೆಗಳಲ್ಲಿ ಪಾಲ್ಗೊಳ್ಳುವ ಜನರಿಗೆ ಬಹುವಿಧದ ಸಂಕಟಗಳು, ಮಾನಸಿಕ ಸಮಸ್ಯೆಗಳು ಇರುವ ಸಾಧ್ಯತೆ ಇದೆ. ಅವುಗಳಿಗೆ ಪರ್ಯಾಯ ಪರಿಹಾರವನ್ನು, ಅಂತಹ ಪರಿಹಾರಗಳ ಬಗೆಗೆ ಅರಿವುಸ್ಥೈರ್ಯಪ್ರಾಯೋಗಿಕ ಬೆಂಬಲ ನೀಡದೆ, ಕಾನೂನು ಜಾರಿಗೊಳಿಸಿದರೆ ಅದೂ ಅಮಾನವೀಯವೇ!

ಹಾಗಿದ್ದರೆ ಮಾಡಬೇಕಾದ್ದೇನು? ಮೌಢ್ಯದ ಕಾನೂನಿನ ಪರಾಮರ್ಶೆಯನ್ನು ಮಾಡುವ ಸಮಿತಿಯಲ್ಲಿ ಮನೋವೈದ್ಯರನ್ನೂ ಒಳಗೊಂಡಂತೆ ಹಲವು ವಿವಿಧ ಕ್ಷೇತ್ರಗಳ ತಳಮಟ್ಟದಲ್ಲಿ ಕೆಲಸ ಮಾಡುವ ತಜ್ಞರು ಇರಬೇಕು. ಪೂರ್ವಗ್ರಹಗಳನ್ನು, ಧಾರ್ಮಿಕ ಹಿನ್ನೆಲೆಯನ್ನು ಬದಿಗಿಟ್ಟು, ಜನಪರ ಕಾಳಜಿಆರೋಗ್ಯ ದೃಷ್ಟಿಯಿಂದ ಮೌಢ್ಯದ ವಿವಿಧ ನೆಲೆಗಳ ಬಗ್ಗೆ ಕ್ಷೇತ್ರಕಾರ್ಯಅಧ್ಯಯನ ಸೀಮಿತ ನಿರ್ದಿಷ್ಟ ಅವಧಿಗೆ ನಡೆಯಬೇಕು. ಅದನ್ನನುಸರಿಸಿ ಕಾನೂನಿನ ಕರಡು, ನಂತರ ಪುನರ್ ಮೌಲ್ಯಮಾಪನ, ಕಾನೂನಿನ ಅನುಷ್ಠಾನ, ಅದರ ಭಾಗವಾಗಿಯೇ ಅರಿವಿನ ಅಭಿಯಾನ ಇವು ನಡೆಯಬೇಕಾದ ಕಾರ್ಯಗಳು.

*ಲೇಖಕರು ಶಿವಮೊಗ್ಗದಲ್ಲಿ ಮನೋರೋಗ ಚಿಕಿತ್ಸಕರು; ಮನೋವೈದ್ಯಶಾಸ್ತ್ರ, ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಜೊತೆಗೆ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಯೋಗ, ವೀಣೆಹೀಗೆ ಬಹುಕ್ಷೇತ್ರಗಳಲ್ಲಿ ಆಸಕ್ತಿ ಮತ್ತು ಪರಿಣತಿ ಹೊಂದಿದ್ದಾರೆ.

Leave a Reply

Your email address will not be published.