ಮೂಢನಂಬಿಕೆಗಳ ವ್ಯಾಖ್ಯಾನ ಮಾಡುವವರು ಯಾರು?

ಕಾನೂನು ಹಾಗೂ ಮೂಢನಂಬಿಕೆಗಳು ಅವಳಿಜವಳಿಗಳಂತೆ. ಮೂಢನಂಬಿಕೆ ಎಂಬ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿದೆ. ಸಾವಿರಾರು ವರ್ಷಗಳಿಂದಲೂ ಎಲ್ಲಾ ಜಾತಿ ಹಾಗೂ ಧರ್ಮೀಯರಲ್ಲಿ ಪರಂಪರಾಗತವಾಗಿ ನಡೆದು ಬರುತ್ತಿರುವಂತಹ ಅನೇಕ ಆಚಾರವಿಚಾರಣೆಗಳನ್ನು ಪರಾಮರ್ಶೆಗೆ ಒಳಪಡಿಸಬೇಕು. ಅದಕ್ಕೂ ಮೊದಲು ಮೂಢನಂಬಿಕೆಗಳು ಯಾವುವು ಎಂಬ ವಿಮರ್ಶೆಗಳಾಗಬೇಕು.

ಕೇವಲ ದೈವೀಕ ಆಚರಣೆಗಳುಪ್ರಾಣಿ ಬಲಿ ಮುಂತಾದ ಕಾರ್ಯಕ್ರಮಗಳು ಮಾತ್ರ ಮೂಢನಂಬಿಕೆ ವ್ಯಾಪ್ತಿಯೊಳಗೆ ಬರುತ್ತವೆಯೋ…? ಹಾಗಿದ್ದರೆ ವಂಶಪಾರಂಪರ್ಯ ನಡೆದುಕೊಂಡು ಬರುತ್ತಿರುವ ಆಚರಣೆಗಳನ್ನು ಕಾನೂನು ಮೂಲಕ ಬಲಾತ್ಕಾರವಾಗಿ ನಿಲ್ಲಿಸುವುದು ಅಸಾಧ್ಯದ ಮಾತು.

ಭಾರತ ದೇಶ ವಿಭಿನ್ನ ಸಂಸ್ಕøತಿಯ, ವಿಭಿನ್ನ ಆಚರಣೆಗಳಿಂದ ಕೂಡಿದ ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಬೇರೆ ಬೇರೆ ರಾಜ್ಯಗಳಲ್ಲೂ, ಜಿಲ್ಲೆಗಳಲ್ಲೂ ವಿಭಿನ್ನ ರೀತಿಯ ಆಚರಣೆಗಳು ಜಾರಿಯಲ್ಲಿವೆ. ಪ್ರತಿ ಜಾತಿ ವರ್ಗ ಧರ್ಮಗಳಲ್ಲೂ ನೂರಾರು ಆಚರಣೆಗಳು ಆಚರಿಸಲ್ಪಡುತ್ತಿವೆ.

ಇವುಗಳಲ್ಲಿ ಮೂಢನಂಬಿಕೆ ಎಂಬುದನ್ನು ತೀರ್ಮಾನಿಸುವುದು ಹೇಗೆ? ನಮ್ಮ ಸಂವಿಧಾನದಲ್ಲಿ ಅವರವರ ಜಾತಿ ಧರ್ಮಗಳ ಪಾಲನೆಆಚರಣೆ ಅವರವರ ಸಾಂವಿಧಾನಿಕ ಹಕ್ಕು ಎಂದು ಪರಿಗಣಿಸಲ್ಪಟ್ಟಿದೆ. ಇದರಲ್ಲಿ ನಂಬಿಕೆ ಮೂಢನಂಬಿಕೆಗಳ ವ್ಯಾಖ್ಯಾನ ಮಾಡುವವರು ಯಾರು? ಒಂದು ಧರ್ಮದವರ ಆಚರಣೆಗಳನ್ನು ಮೂಢನಂಬಿಕೆಗಳ ವ್ಯಾಪ್ತಿಗೆ ತಂದು ತಡೆ ಮಾಡಿದರೆ ಧರ್ಮ ಧರ್ಮಗಳ ಮಧ್ಯೆ ದೊಡ್ಡ ಕಂದಕಗಳು ಏರ್ಪಟ್ಟು ಘರ್ಷಣೆಗಳಿಗೆ ದಾರಿ ಮಾಡಿದಂತಾಗುತ್ತದೆ. ಮೂಢನಂಬಿಕೆಗಳಾವುವು ಎಂಬುದನ್ನು ತೀರ್ಮಾನಿಸುವುದು ಅಷ್ಟು ಸುಲಭದ ಮಾತಲ್ಲ.

ಮೊದಲು ಎಲ್ಲಾ ಜಾತಿಧರ್ಮದವರ ಆಚರಣೆಗಳಲ್ಲಿ ಯಾವ್ಯಾವ ಆಚರಣೆಗಳು ಮೂಢನಂಬಿಕೆಗಳೆಂದು ತೀರ್ಮಾನವಾಗಬೇಕಿದೆ. ಈ ವಿಷಯದಲ್ಲಿ ಅಗಾಧ ಚರ್ಚೆವಿಮರ್ಶೆಕಾರ್ಯಾಗಾರಗಳ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಗಳಾಗಬೇಕು.

ಮೂಢನಂಬಿಕೆಗಳ ಆಚರಣೆ ಅನಕ್ಷರಸ್ಥರಲ್ಲೇ ಹೆಚ್ಚು. ಅವರಿಗೆ ಕಾನೂನು ಮುಖಾಂತರ ಬಲಾತ್ಕಾರದಿಂದ ಅವರ ನಂಬಿಕೆಗಳನ್ನು ಅಳಿಸಿಹಾಕುವುದು ಕನಸಿನ ಮಾತು. ಜತೆಗೆ ವಿದ್ಯಾವಂತರೂ ಈಗೀಗ ಮೂಢನಂಬಿಕೆಗಳ ಮುಖಾಂತರ ತಮ್ಮ ಜೀವನ ಶೈಲಿಯನ್ನು ಮುಂದುವರಿಸುವ ನಿರಂತರ ಪ್ರಯತ್ನ ನಡೆಯುತ್ತಿದೆ.

ಪ್ರಾಣಿ ಬಲಿ, ಮಾನವ ಬಲಿ (ಈಗ ಇರಲಿಕ್ಕಿಲ್ಲ) ಇನ್ನಿತರ ಆಚರಣೆಗಳನ್ನು ಕಾನೂನು ಬಲದಿಂದ ನಿಲ್ಲಿಸಲೇಬೇಕು. ಅದಕ್ಕೆ ಸಾಮಾನ್ಯ ಜನರ ಸಹಕಾರದ ಅವಶ್ಯಕತೆ ಇದೆ. ಜ್ಯೋತಿಷ್ಯಭವಿಷ್ಯ ಮುಂತಾದವುಗಳಲ್ಲಿ ಸಾಮಾನ್ಯ ಏಕೆ ವಿಶೇಷವಾಗಿ ರಾಜಕಾರಣಿಗಳೂ ಬಹಳ ನಂಬಿಕೆ ಇರಿಸಿರುತ್ತಾರೆ. ಮೂಢನಂಬಿಕೆಗಳ ಬಹುತೇಕ ಆಚರಣೆಗಳನ್ನು ರಾಜಕಾರಣಿಗಳು ಪಕ್ಷಭೇದವಿಲ್ಲದೆ ನಂಬಿಕೊಂಡು ಬಂದು ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡಿರಬೇಕಾದರೆ ಈ ‘ಮೂಢನಂಬಿಕೆ’ ಭೂತಗಳನ್ನು ಹೋಗಲಾಡಿಸಲು ಕಾನೂನುಗಳನ್ನು ರಚನೆ ಮಾಡುವುದು ಅಸಾಧ್ಯವೇ ಸರಿ.

ಆಫೀಸ್ ಜವಾನನಿಂದ ಹಿಡಿದು ದೇಶದ ರಾಷ್ಟ್ರಪತಿಯವರೆಗೆ ಒಂದಲ್ಲ, ಒಂದು ಮೂಢನಂಬಿಕೆ ಕಾರ್ಯಕ್ರಮಗಳಲ್ಲಿ ನಂಬಿಕೆ ಇರುವವರೇ ಆಗಿರುತ್ತಾರೆ. ಹೆಚ್ಚೇಕೆ, ನ್ಯಾಯಾಂಗ ವ್ಯವಸ್ಥೆಯೂ ಸಹ ಇದಕ್ಕೆ ಹೊರತಾಗಿಲ್ಲ. ಹಾಗಾಗಿ ಇಲ್ಲಿ ಕಾನೂನು ವ್ಯಾಪ್ತಿಯಲ್ಲಿ ಆ ಬಲದಿಂದ ಮೂಢನಂಬಿಕೆಗಳನ್ನು ಹೋಗಲಾಡಿಸುವುದು ಅಸಾಧ್ಯವೇ ಸರಿ.

ಇಂದಿನ ಆಧುನಿಕ ಜಗತ್ತಿನಲ್ಲಿ ದೃಶ್ಯ ಮಾಧ್ಯಮ ಹಾಗೂ ಪ್ರಚಾರ ಮಾಧ್ಯಮಗಳೂ ಸಹ ನಾವು ತಿಳಿದುಕೊಂಡ ಮೂಢನಂಬಿಕೆ ಆಚರಣೆಗಳಿಗೆ ಹೆಚ್ಚಿನ ಒತ್ತು ಕೊಟ್ಟು ಬಿತ್ತರಗೊಳ್ಳುವಂತೆ ಮಾಡುತ್ತಿವೆ. ಅನೇಕ ವಿದ್ಯಾವಂತರೂ ಸಕ್ರಿಯವಾಗಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ನಾವು ದಿನವೂ ನೋಡುತ್ತಿರುತ್ತೇವೆ.

ಕೇವಲ ಕಾನೂನು ಬಲದಿಂದ ಮೂಢನಂಬಿಕೆಗಳನ್ನು ಹೋಗಲಾಡಿಸಲು ಅಸಾಧ್ಯ. ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಸರಕಾರ ಕಾನೂನು ಪಾಲನೆಗೋಸ್ಕರ ಬಲ ಪ್ರಯೋಗಗಳಿಂದ ಆಚರಣೆ ಹತ್ತಿಕ್ಕುವುದಾದರೆ ಖಾಸಗಿಯಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ಈ ಆಚರಣೆಗಳು ಮುಂದುವರಿಯುವುದುಆಗ ಆಡಳಿತ ಯಂತ್ರ ಅಸಹಾಯಕ ಪರಿಸ್ಥಿತಿ ಎದುರಿಸಬೇಕಾಗಬಹುದು.

ಯಾವುದೇ ಆಚರಣೆಗಳು, ಸಂಪ್ರದಾಯಗಳು ಜನಸಾಮಾನ್ಯರ ತಿಳಿವಳಿಕೆಗಳಿಗೆ ಒಂದು ಬದಲಾವಣೆ ಹೊಂದಬೇಕಲ್ಲದೆ ಕಾನೂನು ಜಾರಿಗೊಳಿಸಿ ತಂಡ ಮಾಡುವುದು ಖಂಡಿತಾ ಅಸಾಧ್ಯ.

ಪ್ರಜಾಪ್ರಭುತ್ವ ದೇಶದಲ್ಲಿ ಮೊದಲು ಜನಪ್ರತಿನಿಧಿಗಳೆನಿಸಿಕೊಂಡವರು ಮೂಢನಂಬಿಕೆಗಳನ್ನು ಬದಿಗಿರಿಸಿ ಆಚಾರವಿಚಾರಗಳ ಬಗ್ಗೆ ಕೂಲಂಕಷ ವಿಮರ್ಶೆ ಮಾಡಲಿ. ನಂತರ ಜನಸಾಮಾನ್ಯರಿಗೆ ಇದರ ಬಗ್ಗೆ ಅರಿವು ಮೂಡಿಸಿ ಬದಲಾವಣೆ ತಂದು ಜಾಗೃತಿ ಮೂಡಿಸುವ ಕಾರ್ಯಗಳು ಆಗಬೇಕಿದೆ.

ಇದಲ್ಲದೆ ಕಾನೂನಿನ ಬಲದಿಂದ ಮೂಢನಂಬಿಕೆ ಹೋಗಲಾಡಿಸಲು ಸಾಧ್ಯವಿಲ್ಲವೆಂಬ ಕಟುಸತ್ಯವನ್ನು ನಾವೆಲ್ಲ ಮನಗಾಣಬೇಕಾಗಿದೆ.

ಎಚ್.ಎಸ್.ತಿಮ್ಮಪ್ಪಯ್ಯ, ಚೆಟ್ಟಳ್ಳಿ, ಕೊಡಗು.


ನಾನು ಬದಲಾಗದೇ ನನ್ನ ಮನೆ ಬದಲಾಗದು!

ಐಚಿತಿs ಚಿಡಿe mಚಿಜe o bಡಿeಚಿಞ ಎಂಬ ಮಾತು ತುಂಬಾ ಜನಜನಿತ. ಸರಕಾರ ರೂಪಿಸುವ ಕಾನೂನುಗಳು ನಾಗರಿಕ ಸಮಾಜಕ್ಕೆ ಬಹು ಉಪಯುಕ್ತ ಎಂಬ ಸತ್ಯ ಪ್ರಜ್ಞಾವಂತ ನಾಗರಿಕರಿಗೆ ತಿಳಿದ ಸಂಗತಿಯೇ ಆಗಿದೆ. ಕಾನೂನು ಅಥವಾ ಕಾಯ್ದೆ ಪರಿಪಾಲನೆ ಮಾಡುವುದಕ್ಕಾಗಿಯೇ ರೂಪಿತವಾಗಿರುತ್ತವೆ ಎಂಬುದು ಸಂವಿಧಾನದ ಆಶಯವೂ ಆಗಿದೆ. ಆದಾಗ್ಯೂ ಬಹುಪಾಲು ಕಾನೂನುಗಳನ್ನು ಉಲ್ಲಂಘನೆಯಲ್ಲಿ ಪಾಲನೆ ಮಾಡುತ್ತಿರುವುದು ಒಂದು ವ್ಯಂಗ್ಯ!

`ಮೌಢ್ಯಎಂಬುದು ನಾಗರಿಕ ಸಮಾಜಕ್ಕೆ ಕಳಂಕ ಎಂದು ತಿಳಿದವರ ಮತ್ತು ವಿದ್ಯಾವಂತರ ಅಭಿಮತ. ಅಂದು ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಕೊರತೆ ಇತ್ತು. ಅಂಧಕಾರ ಎಂಬುದು ತುಂಬಿ ತುಳುಕುತ್ತಿತ್ತು. ಪ್ರತಿ `ಮನೆಹಾಗೂ `ಮನಮೂಢನಂಬಿಕೆಗಳಿಗೆ ಜಾಗ ಕೊಟ್ಟಿತ್ತು. ಹೀಗಾಗಿ ಮಾಟ, ಮಂತ್ರ, ಯಂತ್ರ, ತಂತ್ರ ಇತ್ಯಾದಿ ಚಟುವಟಿಕೆಗಳು ಚಾಲ್ತಿಯಲ್ಲಿದ್ದವು. ದೇವರ ಹೆಸರಿನಲ್ಲಿ ಅದೆಷ್ಟೋ ಮೌಢ್ಯಗಳು ಅಮಾಯಕರ ಬದುಕಿಗೆ ಅಡ್ಡಗೋಡೆಯಂತೆ ನಿಂತಿದ್ದವು. ಇದರಲ್ಲಿ `ದೇವದಾಸಿಪದ್ಧತಿಯೂ ಒಂದೆಂಬುದು ವಿಷಾದದ ವಿಷಯ.

ಅಮಾಯಕ ಹೆಣ್ಣುಗಳ ಬದುಕಿಗೆ ಇದೊಂದು ಮಹಾ ಕಂಟಕವಾಗಿತ್ತು. ಇದಕ್ಕೆ ಸಾಕ್ಷರತೆಯ ಕೊರತೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವೂ ಆಗಿತ್ತು. ‘ಸ್ತ್ರೀ ಶಿಕ್ಷಣಅಂದು ಗಣನೀಯ ಮಟ್ಟದಲ್ಲಿ ಇರಲಿಲ್ಲ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ಅಷ್ಟೊಂದು ಗೌರವ ದಕ್ಕದೇ ಇದ್ದುದು ಶೋಚನೀಯ.

ದಶಕಗಳ ನಂತರ ಅಂದರೆ ವರ್ತಮಾನದ ದಿನಗಳಲ್ಲಿ ಅಂಥ ಕಂದಾಚಾರಗಳು ಕಡಿಮೆ ಆಗಿವೆಯೇ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಇಲ್ಲ! ಇನ್ನೂ ಹೆಚ್ಚಾಗಿವೆ. ಸಾಕ್ಷರತೆಯ ಪ್ರಮಾಣ ಇದ್ದಾಗಲೂ ಮೂಢ ನಂಬಿಕೆಗಳಿಗೆ ಇನ್ನೂ ಜಾಗ ದೊರಕುತ್ತಲೇ ಇದೆ.

ಸಿಡಿ ಏರುವುದು, ಕೆಂಡ ಹಾಯುವುದು, ಜಡೆ ಬಿಡುವುದು, ಮಡೆ ಸ್ನಾನ, ಬೆತ್ತಲು ಸೇವೆ, ಉಂಡ ಎಂಜಲೆಲೆಯ ಮೇಲೆ ಉರುಳಾಡುವುದು, ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಕೊಡುವುದು, ಮಹಿಳೆ ಮುಟ್ಟಾದ ದಿನ ಮನೆಯಲ್ಲಿ ಪ್ರತ್ಯೇಕ ಇರುವುದು, ಮೈಮೇಲೆ ದೇವರು ಬರುವುದು, ದೆವ್ವ ಬರುವುದು ಇತ್ಯಾದಿ `ಮೌಢ್ಯಆಚರಣೆಗಳು ಈಗಲೂ ಪ್ರಚಲಿತದಲ್ಲಿವೆ. ಇದು ಅಸಹ್ಯ ಮತ್ತು ಮನುಷ್ಯ ಸಮಾಜದ ಮೂರ್ಖತನ ಎಂಬುದು ಸರ್ವ ವಿಧಿತ. ಅಸ್ಪೃಶ್ಯತೆ ಆಚರಣೆ ಕೂಡ ಮೌಢ್ಯಾಚರಣೆಯ ಭಾಗವೇ ಆಗಿದೆ.

ಇಂಥ ಹೀನಾಯ ಆಚರಣೆಗೆ ತಡೆ ಹಾಕಲು ಕರ್ನಾಟಕ ಸರಕಾರ 2017ರಲ್ಲಿ `ಮೌಢ್ಯ ನಿಷೇಧಕಾಯ್ದೆಯನ್ನು ರೂಪಿಸಿತು. 2020ರಲ್ಲಿ ಇದನ್ನು ಆಚರಣೆಗೆ ತರಲಾಯಿತು. ಕಾನೂನು ರೂಪುಗೊಂಡಿದ್ದು ಅಷ್ಟೇ ಅಲ್ಲ ಆಚರಣೆಗೆ ತರಲು ಸರಕಾರ ಕೆಲವು ರೂಪುರೇಶೆಗಳನ್ನು ಮಾಡಿತು.

ಯಾವ ಯಾವ ಆಚರಣೆಗಳು ಮೌಢ್ಯಕ್ಕೆ ಒಳಪಡುತ್ತವೆ ಎಂಬುದನ್ನು ಪಟ್ಟಿ ಮಾಡಿ ಜನರ ಅವಗಾಹನೆಗೆ ತರಲಾಯಿತು. ಆದರೂ ಮೌಢ್ಯಾಚರಣೆ ನಿಲ್ಲದೇ ಈಗಲೂ ವಿಜೃಂಭಿಸುತ್ತಿದೆ. ಕಾಗೆ ಮುಟ್ಟಿದರೂ ಕಂಟಕ, ಸಲಿಕೆಗುದ್ದಲಿ ಎದುರಾದರೂ ಸಂಕಟ, ವಿಧವೆಯರು ಕಣ್ಣಿಗೆ ಬಿದ್ದರೂ ಒಂದು ರೀತಿಯ ತಳಮಳ. ಏನಿದು ವಿಚಿತ್ರ? ಕಾಯ್ದೆ ರೂಪಿಸಿದವರೇ ಅದನ್ನು ಪರಿಪಾಲಿಸುವುದು ಆಗದ ಮಾತು. ಅಂಥಾದ್ದರಲ್ಲಿ ಕಾನೂನಿನ ಮೂಲಕ ಮೌಢ್ಯ ತಡೆಗಟ್ಟುತ್ತೇವೆಂದರೆ ಸಾಧ್ಯವಾಗದ ಮಾತು. ನಮ್ಮ ಮನಸ್ಥಿತಿ ಬದಲಾಯಿಸುವುದು ಕಾನೂನು ಅಲ್ಲ. ನಮ್ಮೊಳಗಿನ ಅರಿವು ಎಚ್ಚರಗೊಳ್ಳಬೇಕು. ನಾನು ಬದಲಾಗದೇ ನನ್ನ ಮನೆ ಬದಲಾಗದು. ಅರಿವು ಅಂತರಂಗದಲ್ಲಿ ಚಿಗುರೊಡೆಯಬೇಕು. ಚಿಗುರು ಹೂವಾಗಬೇಕು ಆಗಲೇ ಹಣ್ಣಾಗಲು ಅಡಿಪಾಯ ಸಿಕ್ಕೀತು.

ಶಿ.ಕಾ.ಬಡಿಗೇರ, ಭಾಗ್ಯನಗರಕೊಪ್ಪಳ


ಮೌಢ್ಯ ನಿವಾರಣೆಗೆ ಈ ರೀತಿಯೂ ಪ್ರಯತ್ನಿಸಬಹುದು

ಡಿಸೆಂಬರ್ ತಿಂಗಳ ‘ಸಮಾಜಮಖಿ’ ತುಂಬ ಚೆನ್ನಾಗಿದೆ. ಅಭಿನಂದನೆಗಳು. ಮೂಢನಂಬಿಕೆಗಳ ನಿವಾರಣೆಗೆ ಈ ರೀತಿಯೂ ಪ್ರಯತ್ನಿಸಬಹುದೆಂದು ನನ್ನ ಕೆಲವು ಸೂಚನೆಗಳು.

  • ನಮ್ಮ ವಿಶ್ವವಿದ್ಯಾಲಯಗಳಲ್ಲಿ ಪ್ರಸಾರಂಗ ವಿಭಾಗದಿಂದ ಒಂದು ಹಳ್ಳಿಗೆ ಒಬ್ಬ ಕಾಲೇಜುವಿಶ್ವವಿದ್ಯಾಲಯಗಳ ಅಧ್ಯಾಪಕರನ್ನು ಕಳಿಸಿ, ಅವರು ಅಲ್ಲಿ ಒಂದು ಉಪನ್ಯಾಸ ನೀಡಿ ನಂತರ ಆ ಉಪನ್ಯಾಸವನ್ನು ಬರೆದುಕೊಟ್ಟರೆ ಅದನ್ನು ಒಂದು ಕಿರುಹೊತ್ತಿಗೆಯಾಗಿ ಪ್ರಕಟಿಸುವ ಜನಪ್ರಿಯ ಕಾರ್ಯಕ್ರಮ ಈ ಹಿಂದೆ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಇತ್ತು. ಈ ಕಿರುಹೊತ್ತಿಗೆಗಳು ಮೊದಲೆಲ್ಲ ಕೇವಲ ಇಪ್ಪತ್ತೈದು ಪೈಸೆಗೆ ಓದುಗರಿಗೆ ಸಿಗುತ್ತಿದ್ದವು. ಉಪನ್ಯಾಸ ಗ್ರಂಥಮಾಲೆ, ಪ್ರಚಾರೋಪನ್ಯಾಸ ಗ್ರಂಥಮಾಲೆ ಎಂಬ ಹೆಸರಿನಿಂದ ಈ ಮಾಲೆಯ ಪುಸ್ತಕಗಳು ತುಂಬ ಜನಪ್ರಿಯವಾಗಿವೆ. ‘ಪ್ಲಾಸ್ಟಿಕ್ ಸರ್ಜರಿ’, ‘ಅಂತರ್ಜಲ’, ‘ಪ್ರಾಣಿಗಳ ರಚನಾಕೌಶಲ’ ಹೀಗೆ ತುಂಬ ವೈಚಾರಿಕ ವೈಜ್ಞಾನಿಕ ಮನೋಭಾವ ಬಿತ್ತುವಿಕೆ ಇಂಥ ಪುಸ್ತಕಗಳಿಂದ ಆಗುತ್ತಿದೆ. ಆದರೆ ಈಚೆಗೆ ಈ ಯೋಜನೆ ಸಂಪೂರ್ಣ ನಿಂತು ಹೋಗಿದೆಯೇನೋ ಎಂಬಷ್ಟರ ಮಟ್ಟಿಗೆ ನಿಷ್ಕ್ರಿಯವಾಗಿದೆ. ಆದ್ದರಿಂದ ಈ ಯೋಜನೆ ಪುನಃ ಪ್ರಾರಂಭವಾಗಿ ನಾಡಿನ ಎಲ್ಲ ಹಳ್ಳಿಗಳನ್ನೂ ತಲುಪುವಂತಾದರೆ ಮೂಢನಂಬಿಕೆಗಳು ನಿವಾರಣೆಯಾಗುವಲ್ಲಿ ಸಂಶಯವಿಲ್ಲ.

  • ಜಾತಿಯೂ ಒಂದು ಮೂಢನಂಬಿಕೆಯಾಗಿರುವುದರಿಂದ ಆಕಾಶವಾಣಿ ಮತ್ತು ಟೀವಿಗಳು ಜಾತಿಯನ್ನೂ ಒಳಗೊಂಡಂತೆ ಇನ್ನಿತರ ಮೂಢನಂಬಿಕೆಗಳನ್ನು ನಿವಾರಿಸುವಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು. ಟೀವಿಯೇ ಇಂದು ಮೂಢನಂಬಿಕೆಗಳನ್ನು ಪೋಷಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವುದು ದೊಡ್ಡ ದುರಂತವಾಗಿದೆ. ಸರ್ಕಾರ ಟೀವಿಯ ಮೇಲೆ ಹತೋಟಿ ಸಾಧಿಸಿ ಮೂಢನಂಬಿಕೆಗಳನ್ನು ನಿವಾರಿಸಬೇಕಿದೆ. ಏಕೆಂದರೆ ಸಾರ್ವಜನಿಕರಲ್ಲಿ ವೈಜ್ಞಾನಿಕ, ವೈಚಾರಿಕ ಮನೋಭಾವ ಬೆಳೆಸಬೇಕೆಂದು ನಮ್ಮ ದೇಶದ ಸಂವಿಧಾನವೇ ಹೇಳುತ್ತಿದೆ.

  • ಅನಕ್ಷರಸ್ಥ ಮೂಢನಂಬಿಕಸ್ಥನಿಗಿಂತ ಅಕ್ಷರಸ್ಥ ಮೂಢನಂಬಿಕಸ್ಥನೇ ಹೆಚ್ಚು ಅಪಾಯಕಾರಿ. ಮಠಗಳೂ ಕೂಡ ಮೂಢನಂಬಿಕೆಗಳ ಕಾರ್ಖಾನೆಯಂತೆಯೇ ವರ್ತಿಸುತ್ತಿವೆ. ಹೀಗಾಗಿ ‘ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು’ ಮತ್ತು ‘ಭಾರತ ಜ್ಞಾನ ವಿಜ್ಞಾನ ಸಮಿತಿ’ಯಂಥ ಸಂಸ್ಥೆಗಳು ಬೀದಿ ನಾಟಕ, ಹಾಡು, ಪುಸ್ತಕ, ಭಾಷಣಗಳ ಮೂಲಕ ಸಾರ್ವಜನಿಕರಿಗೆ ಕಾರ್ಯಕ್ರಮ ರೂಪಿಸಬೇಕು.

ಹೀಗೆ ಅನೇಕ ಬಗೆಯ ಚಟುವಟಿಕೆಗಳ ಮೂಲಕ ಮೂಢನಂಬಿಕೆ ನಿವಾರಣೆ ಸಾಧ್ಯವಿದೆ. ಆದ್ದರಿಂದ ವಿಶ್ವವಿದ್ಯಾಲಯಗಳಿಂದ ಹಿಡಿದು ಪ್ರಾಥಮಿಕ ಶಾಲೆಗಳವರೆಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ರೂಪಿಸಬೇಕಿದೆ. ಹಾಗೆ ಮಾಡಿದಾಗ ಸರ್ಕಾರಿ ಕಾನೂನಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮೂಢ ನಂಬಿಕೆಗಳ ನಿವಾರಣೆ ಸಾಧ್ಯವಾಗುತ್ತದೆ.

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ.

ಕಾಯಾ’ಕಾದಂಬರಿ ಓದಲು ಪ್ರೇರೇಪಿಸಿದ ವಿಮರ್ಶೆ

ಗುರುಪ್ರಸಾದ ಕಾಗಿನೆಲೆ ಅವರ ‘ಕಾಯಾ’ ಕಾದಂಬರಿ ಕುರಿತು ಸುಭಾಷ್ ರಾಜಮಾನೆ ಅವರು ಪುಸ್ತಕ ಪ್ರಪಂಚ ವಿಭಾಗದಲ್ಲಿ ಬರೆದ ವಿಮರ್ಶೆ ಓದಿದೆ.

ವೈದ್ಯಕೀಯ ಜಗತ್ತಿಗೂ ಹೆಣ್ಣಿನ ಸೌಂದರ್ಯಕ್ಕೂ ಇರುವ ಸಂಬಂಧವನ್ನು ಗಂಡು ನಿರೂಪಕ ನೋಡಿದ್ದರಿಂದ ಗಂಡು ಮೌಲ್ಯಗಳೇ ನಿರೂಪಿತವಾಗಿರಲು ಕಾರಣವಾಗಿದೆಯೇ? ಒಂದುವೇಳೆ ಹೆಣ್ಣು ನಿರೂಪಕರಾಗಿದ್ದರೆ ಬೇರೆ ತರಹ ಅರ್ಥಾತ್ ಹೆಣ್ಣು ಮೌಲ್ಯಗಳು ಸ್ಥಾಪಿತವಾಗುತ್ತಿದ್ದವೇ? ಅಥವಾ ಗಂಡಿನ ಮೌಲ್ಯ ಜಗತ್ತಿನ ಜೊತೆ ಸಂಘರ್ಷವನ್ನು ಕಾಣಬಹುದಿತ್ತೇ ಎಂಬ ಪ್ರಶ್ನೆಗಳು ಈ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಏಳುತ್ತವೆ. ನಾನು ಕೃತಿ ಓದಿಲ್ಲ. ಆದರೆ, ರಾಜಮಾನೆಯವರ ವಿಶ್ಲೇಷಣೆ ಚೆನ್ನಾಗಿದೆ ಎನಿಸುತ್ತದೆ. ಈ ಬರಹ ಕಾದಂಬರಿ ಓದಲು ಪ್ರೇರೇಪಿಸಿತು. ಅದಕ್ಕಾಗಿ ತ್ಯಾಂಕ್ಯು.

ಡಾ.ಎಂ.ಬಿ.ಶೇಖರ, ಮದ್ದೂರು.

Leave a Reply

Your email address will not be published.