ಮೂಢನಂಬಿಕೆ ಎಂಬ ರೋಗಕ್ಕೆ ಅಪನಂಬಿಕೆಯ ಔಷಧಿ!

ಜಗತ್ತು ನಂಬಿಕೆ ಮೇಲೆ ನಿಂತಿದೆ ಎಂದು ಹೇಳಲಾಗುತ್ತದೆ. ಈ ಮಾತಿಗೆ ವಿಶಾಲ ಅರ್ಥ, ಅನುಭವದ ತಳಹದಿ, ಅವಲಂಬನೆಯ ಗುಣ ಇರುವುದನ್ನು ಗಣಿಸಬೇಕು, ನಿಜ. ಇದು ಮನುಷ್ಯ ಸಂಬಂಧಗಳನ್ನು ಉದ್ದೇಶಿಸಿದ, ಪರಸ್ಪರ ‘ನಂಬಿಕೆ’ ಕುರಿತ ವ್ಯಾಖ್ಯಾನಕ್ಕೆ ಸೀಮಿತ ಹೇಳಿಕೆಯಾಗಿ ಸ್ವಾಗತಾರ್ಹ ಕೂಡಾ. ಹಾಗಂತ ಈ ಜಗದಲ್ಲಿ ಅಪನಂಬಿಕೆಗೆ ಜಾಗವೇ ಇಲ್ಲ, ಇರಕೂಡದು ಅಂತ ಹೇಳಲಾಗದು. ನಂಬಿಕೆ ತನ್ನೊಳಗೆ ಪ್ರಶ್ನೆಗಳನ್ನು ಬಿಟ್ಟುಕೊಳ್ಳುವುದಿಲ್ಲ; ಇನ್ನೊಂದೆಡೆ ಅಪನಂಬಿಕೆ ಹುಟ್ಟು ಪಡೆಯುವುದೇ ಶಂಕೆ ಮೂಲಕ, ಶಂಕೆಯೊಳಗೆ ಪ್ರಶ್ನೆ ಕಾವು ಕುಳಿತಿರುತ್ತದೆ. ಅಂತೆಯೇ ಅಪನಂಬಿಕೆಗೆ ವೈಚಾರಿಕ ಜಗತ್ತನ್ನು ಮತ್ತಷ್ಟು ಎತ್ತರಕ್ಕೆ ಏರಿಸುವ ಸಾಮಥ್ರ್ಯ, ಅಂತರ್ಗತ ಆಶಯ ಇರುವುದನ್ನು

ಗಮನಿಸಬೇಕು.

ನಂಬಿಕೆ ಮತ್ತು ಅಪನಂಬಿಕೆ ಹೊರನೋಟಕ್ಕೆ, ಅಕ್ಷರಶಃ ತದ್ವಿರುದ್ಧ ಶಬ್ದಗಳಂತೆ ತೋರುತ್ತವೆ. ಆದರೆ ವಾಸ್ತವದಲ್ಲಿ ಅವುಗಳ ನಡುವೆ ಪರಸ್ಪರ ಮೂಗುತೂರಿಸುವಿಕೆ ಇದ್ದೇ ಇರುತ್ತದೆ. ಈ ಕ್ರಿಯೆಯು ಸಮಯ, ಸಂದರ್ಭ, ಔಚಿತ್ಯ ಅವಲಂಬಿಸಿರುತ್ತದೆ. ಅಪನಂಬಿಕೆ ತನ್ನೊಳಗೇ ಅಡಕ ಮಾಡಿಕೊಂಡಿರುವ ನಂಬಿಕೆ ಪದಕ್ಕೆ ವಿಶೇಷ ಅರ್ಥ ಮತ್ತು ಮಹತ್ವ ಇರುವುದನ್ನು ಪರಿಗಣಿಸಬೇಕು. ನಂಬಿಕೆ ಎಂಬ ಶುದ್ಧಾಂಗ ಮೌಲ್ಯ ಪ್ರಶ್ನೆಗಳನ್ನು ತ್ಯಜಿಸಿ ಕುರುಡಾಗುವುದರಿಂದ ಅದಕ್ಕೆ ಮೌಢ್ಯ ತಗುಲಿಕೊಳ್ಳುತ್ತದೆ.

ನಂಬಿಕೆಗೆ ಮೌಢ್ಯ ಮೆತ್ತಿಕೊಂಡಾಗ ಅದು ಎರಡು ಬಗೆಯಲ್ಲಿ ಮನುಷ್ಯನನ್ನು ಹಿಂಡುತ್ತದೆ; ಬೌದ್ಧಿಕವಾಗಿ ಮತ್ತು ಭೌತಿಕವಾಗಿ. ಆಚರಣೆಯ ಮೂಲಕ ಶೋಷಣೆಗೆ ಅವಕಾಶ ಕಲ್ಪಿಸುವ, ಅಪಾಯಕ್ಕೆ ಆಸ್ಪದ ಒಡ್ಡುವ, ಸಹವರ್ತಿಗಳಿಗೆ ಸಂಕಷ್ಟ ತರುವ ಮೂಢನಂಬಿಕೆ ಭೌತಿಕವಾದುದು. ಇದನ್ನು ಬಾಹ್ಯ ಕಾನೂನು, ಕಟ್ಟಳೆಗಳಿಂದ ತಕ್ಕಮಟ್ಟಿಗೆ ನಿರ್ಬಂಧಿಸಲು ಸಾಧ್ಯ. ಇನ್ನು, ವಿವಿಧ ಸನ್ನಿವೇಶಗಳಲ್ಲಿ ಮನುಷ್ಯನನ್ನು ಮಾನಸಿಕ ದಾಸ್ಯಕ್ಕೆ ತಳ್ಳಿ ಏಳಿಗೆ ತಡೆಯುವ ಮೌಢ್ಯದ ಅಮೂರ್ತ ವರ್ತನೆ ಹೆಚ್ಚು ಅಪಾಯಕಾರಿ. ಇದರ ನಿಯಂತ್ರಣಕ್ಕೆ ವೈಯಕ್ತಿಕ, ಸಾಮಾಜಿಕ, ಧಾರ್ಮಿಕ ವಲಯದ ತಲೆಯೊಳಗೆ ಸೂಕ್ತ ಅಪನಂಬಿಕೆಯ ಔಷಧಿ ಸಿಂಪಡಿಸಬೇಕಾಗುತ್ತದೆ. ಆದರೆ ಇದು ಹೇಗೆ ಕಾರ್ಯಸಾಧ್ಯ ಎಂಬ ಪ್ರಶ್ನೆಗೆ ಸರಳ ಉತ್ತರ ಇರಲಾರದು.

ಮಹಾರಾಷ್ಟ್ರದಲ್ಲಿ ಇಂತಹ ಪ್ರಯತ್ನಕ್ಕೆ ಅಭಿಯಾನದ ರೂಪ ನೀಡಿದ ನರೇಂದ್ರ ದಾಭೋಳ್ಕರ್ ಅವರ ಹೋರಾಟಬರವಣಿಗೆಗಳು ಗಮನಾರ್ಹ. ಕರ್ನಾಟಕದಲ್ಲೂ ಇಂತಹ ಹಲವು ಕ್ಷೀಣ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿರುವುದು ಆಶಾಕಿರಣವಾಗಿ ಕಾಣಿಸುತ್ತಿವೆ: ಸತೀಶ ಜಾರಕಿಹೊಳಿ ಅವರು ಮಾನವ ಬಂಧುತ್ವ ವೇದಿಕೆ ಮೂಲಕ ಬೆಳಗಾವಿಯ ಸ್ಮಶಾನದಲ್ಲಿ ಅಹೋರಾತ್ರಿ ನಡೆಸುವ ಮೂಢನಂಬಿಕೆ ವಿರೋಧಿ ಕಾರ್ಯಕ್ರಮ, ಗದಗಿನ ತೋಂಟದಾರ್ಯ ಸ್ವಾಮೀಜಿ ಹಾಕಿಕೊಟ್ಟ ಜಾಗೃತಿ ಮಾರ್ಗ, ಚಿತ್ರದುರ್ಗದ ಮುರುಘಾ ಶರಣರು ಪ್ರತಿ ತಿಂಗಳು ಮುಹೂರ್ತ ಧಿಕ್ಕರಿಸಿ ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮ, ಮಂಗಳೂರಿನ ನರೇಂದ್ರ ನಾಯಕರ ವಿಚಾರವಾದದ ಪ್ರಚಾರ, ಹುಲಿಕಲ್ ನಟರಾಜರ ಪವಾಡ ಬಯಲು ಪ್ರದರ್ಶನ ಮುಂತಾದವನ್ನು ನಾವು ಹೆಚ್ಚಿನ ಆಸಕ್ತಿ ಮತ್ತು ಗಾಂಭೀರ್ಯದಿಂದ ಬೆಂಬಲಿಸಬೇಕಿದೆ.

ಬಹುಪಾಲು ಮೂಢನಂಬಿಕೆಗಳು ಧಾರ್ಮಿಕ ಆಚರಣೆಗಳೊಂದಿಗೆ ತಳಕು ಹಾಕಿಕೊಂಡಿರುವುದರಿಂದ ಅವುಗಳಿಗೆ ಒಂದು ರೀತಿಯ ಮಾನ್ಯತೆ, ರಕ್ಷಣೆ ಸಿಕ್ಕಿರುತ್ತದೆ. ಹಾಗೆ ನೋಡಿದರೆ ಯಾವ ಧರ್ಮವೂ ಪರಿಪೂರ್ಣವಾಗಿ ಮೂಢನಂಬಿಕೆಗಳಿಗೆ ಹೊರತಾಗಿಲ್ಲ ಎಂಬುದು ಎದ್ದು ಕಾಣುವ ಸತ್ಯ. ಆದ್ದರಿಂದ ಆಯಾ ಧರ್ಮದ ಅನುಯಾಯಿಗಳು, ಧಾರ್ಮಿಕ ಮುಖಂಡರು, ಧರ್ಮಗುರುಗಳು ತಮ್ಮ ಧರ್ಮದೊಳಗಿನ ಮೌಢ್ಯಗಳನ್ನು ತೊಡೆಯಲು ಮುಂದಾದರೆ ಅಗಾಧ ಫಲಿತಾಂಶ ನಿರೀಕ್ಷಿಸಬಹುದು.

ಈ ಸಂಚಿಕೆಯ ಮುಖ್ಯಚರ್ಚೆಯಲ್ಲಿ ಉಲ್ಲೇಖಿತ ಅಂಶಗಳು ಅಂಧಾಚರಣೆಗಳ ಅನರ್ಥ ಕುರಿತು ಓದುಗರ ಒಳಗಣ್ಣು ತೆರೆಸಲು ಸಾಧ್ಯವಾದರೆ ನಮ್ಮ ಶ್ರಮ ಅಷ್ಟರಮಟ್ಟಿಗೆ ಸಾರ್ಥಕ.

ಸಂಪಾದಕ

Leave a Reply

Your email address will not be published.