ಮೂಢನಂಬಿಕೆ ಮತ್ತು ಕಾನೂನು: ಸಾಂದರ್ಭಿಕ ಸಂಘರ್ಷ

ಅರಿವಿನ ಜಾಗೃತಿಯು ಮೂಢನಂಬಿಕೆ ನಿವಾರಣೆಗೆ ಸಹಕಾರಿ. ಅರಿವಿನ ಆಂದೋಲನದ ಅಗತ್ಯ.

ಡಾ.ಶಿವಮೂರ್ತಿ ಮುರುಘಾ ಶರಣರು

ಸಮಾಜವು ಸಂಪ್ರದಾಯಬದ್ಧವಾಗಿದೆ. ಸಂಪ್ರದಾಯಬದ್ಧ ಸಮಾಜವು ನಿಂತ ನೀರಿನಂತೆ. ಅದರಲ್ಲಿ ಎಲ್ಲ ರೀತಿಯ ಮಾಲಿನ್ಯ, ಕಶ್ಮಲ. ನಿಂತ ನೀರಿನ ಕಶ್ಮಲ ನಿವಾರಣೆ ಆಗಬೇಕೆಂದರೆ, ಅದಕ್ಕೆ ಹರಿಯುವ ನೀರು ಸೇರಬೇಕು; ಇಲ್ಲವೆ ಹಳೆಯ ನೀರು ಹೊರ ಹೋಗುವಂತೆ ಮಾಡಬೇಕು. ಏನೆಲ್ಲ ಕೊಳೆ, ಕಸ, ದುರ್ವಾಸನೆ. ನಿಂತ ನೀರಲ್ಲಿ ಸೊಳ್ಳೆಗಳು ವಾಸಿಸುತ್ತವೆ, ಅಲ್ಲೆ ಸಂಸಾರ ಹೂಡುತ್ತವೆ.

ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳಿಂದಾಗಿ ಮಲೇರಿಯ, ಡೆಂಗ್ಯು, ಟೈಫಾಯಿಡ್, ಮೆದುಳು ಜ್ವರ. ನಿಂತ ನೀರಿನಂತೆ ಸಮಾಜದ ಸ್ಥಿತಿಯು. ಅದರೊಳಗೆ ಅಸಮಾನತೆ, ಮತಾಂಧತೆ, ಅಸ್ಪøಶ್ಯತೆ, ಅಪ್ರಬುದ್ಧತೆ, ಅಪಕ್ವತೆ, ಅವೈಚಾರಿಕತೆ ವಾಮಾಚಾರ ಮತ್ತು ಶೋಷಣೆ ಇತ್ಯಾದಿ ಮಾಲಿನ್ಯ ಸದೃಶ ಅಂಶಗಳು. ಎಷ್ಟೋ ವೇಳೆ ಸಂಪ್ರದಾಯಗಳು ಸಮಾಜವನ್ನು ಆಳುತ್ತವೆ. ಇದಕ್ಕೆ ಸ್ವತಂತ್ರ ಆಲೋಚನಾ ಶಕ್ತಿಯ ಕೊರತೆ. ಅದರಿಂದಾಗಿ ಎಲ್ಲ ರೀತಿಯ ಅನಾರೋಗ್ಯಕರ ಸಂಗತಿಗಳು. ಹಸಿವುಮುಕ್ತ, ಶೋಷಣೆಮುಕ್ತ ಸಮಾಜ ರಚನೆಯಂತೆ ಮೌಢ್ಯಮುಕ್ತ ಸಮಾಜ ರಚನೆಯು ನಿರೀಕ್ಷಿತ. ಅನಕ್ಷರತೆಯಿಂದಾಗಿ ಕೆಲವರು ಮೂಢನಂಬಿಕೆಗಳನ್ನು ಆಚರಿಸುತ್ತಾರೆ. ಅನಕ್ಷರತೆಯು ಅಜ್ಞಾನಕ್ಕೆ ಅವಕಾಶ ಮಾಡಿಕೊಡುತ್ತದೆ. ಇನ್ನು ಕೆಲವರು ಸಂಪ್ರದಾಯದ ಹೆಸರಿನಲ್ಲಿ ಮೂಢ ಆಚರಣೆಗಳನ್ನು ಪಾಲಿಸುತ್ತಾರೆ. ಕೆಲ ವಿದ್ಯಾವಂತರು (ಅಕ್ಷರಸ್ತರು) ತಿಳಿದೂ ಮೌಢ್ಯತೆಗೆ ಒಳಗಾಗುತ್ತಾರೆ.

ಸಮೂಹ ಸನ್ನಿಯಿಂದಾಗಿ ಬಹಳ ಜನರು ಮೌಢ್ಯದ ಬಲೆಗೆ ತಳ್ಳಲ್ಪಡುತ್ತಾರೆ. ಗ್ರಾಮ್ಯ ಭಾಷೆಯಲ್ಲಿ ಜನ ಮರುಳೊ, ಜಾತ್ರೆ ಮರುಳೊ ಎಂಬ ಗಾದೆಯಂತೆ, ಒಬ್ಬರನ್ನು ನೋಡಿ ಮತ್ತೊಬ್ಬರು, ಅವರನ್ನು ನೋಡಿ ಇನ್ನೊಬ್ಬರು. ವಿವೇಚನಾರಹಿತ ಅನುಕರಣೆಯನ್ನು ಅಂಧಾನುಕರಣೆ ಎಂದು ಕರೆಯಬಹುದು. ಅಂಧಾನುಕರಣೆಯು ವಿಚಾರಶೂನ್ಯ. ಅಲ್ಲಿ ಅನುಕರಣೆ ಪ್ರಧಾನವಾಗಿರುತ್ತದೆ; ವಿಚಾರಶೂನ್ಯ ಆಗಿರುತ್ತದೆ. ಅಂಧಾನುಕರಣೆ ವಿರುದ್ಧ ಸಾಕಷ್ಟು ಜಾಗೃತಿ ನಡೆದಿದೆ. ಹೊಸ ಹೊಸ ಅಂಧಾನುಕರಣೆ ಹುಟ್ಟಿಕೊಳ್ಳುತ್ತವೆ. ಜಾಗೃತಿ ಮತ್ತು ಪರಿವರ್ತನೆಯಿಂದಾಗಿ ಹಳೆಯ ಮೌಢ್ಯಗಳು ತಗ್ಗುತ್ತ ಹೋದಂತೆ ಹೊಸ ಮೌಢ್ಯಗಳು ಹುಟ್ಟಿಕೊಳ್ಳುತ್ತವೆ.

ಕೊನೆಪಕ್ಷ ಸಂಪ್ರದಾಯಗಳು ಜೀವಪರವಾಗಿರಬೇಕು. ಜೀವಪರ ಕಾಳಜಿಯ ಸ್ಪರ್ಶದಿಂದಾಗಿ ಸಂಪ್ರದಾಯಗಳು ಸತ್ಸಂಪ್ರದಾಯಗಳಾಗುತ್ತವೆ. ಮೌಢ್ಯಗಳು ಅಮಾನವೀಯ ನೆಲೆಯಲ್ಲಿ ನಡೆಯುತ್ತಿದ್ದರೆ, ಅವುಗಳನ್ನು ವಿರೋಧಿಸಬೇಕಾಗುತ್ತದೆ. ಜೀವವಿರೋಧಿ ಮೌಢ್ಯಗಳು ಆಚರಣೆಗೆ ಯೋಗ್ಯವಲ್ಲ, ಅಂಥವುಗಳನ್ನು ಖಂಡಿಸದೆ ಗತ್ಯಂತರವಿಲ್ಲ. ಜಾಗೃತಿ ಮೂಡಿಸುವ ಕಾರ್ಯ ನಡೆದರು, ಮೌಢ್ಯವನ್ನು ತೊರೆಯದಿರುವ ಸಂದರ್ಭ ಸಾಮಾನ್ಯ. ಅಂಥ ವೇಳೆಯಲ್ಲಿ ಕಾನೂನು ಅನಿವಾರ್ಯ. ಎಲ್ಲವನ್ನು ಕಾನೂನು ಮುಖಾಂತರ ಜಯಿಸಲು ಸಾಧ್ಯವಿಲ್ಲ. ಅದಕ್ಕೆ ಸೂಕ್ತ ಅರಿವು ಬೇಕು.

ಅರಿವಿನ ಜಾಗೃತಿಯು ಮೂಢನಂಬಿಕೆ ನಿವಾರಣೆಗೆ ಸಹಕಾರಿ. ಅರಿವಿನ ಆಂದೋಲನದ ಅಗತ್ಯ. ಕಾನೂನು ತರಲಾರದೆ ಇರುವ ಸುಧಾರಣೆಯನ್ನು ಪರಿವರ್ತನೆ ತರುತ್ತದೆ. ಪರಿವರ್ತನೆಯ ಪ್ರಕ್ರಿಯೆಗೆ ಸಮಾಜ ಒಳಗಾಗಬೇಕು. ಪರಿವರ್ತನೆ ಅಷ್ಟು ಸುಲಭವಲ್ಲ. ಆಧುನಿಕ ಮಾನವ ವೈಜ್ಞಾನಿಕ ಹಾಗು ತಾಂತ್ರಿಕ ಆವಿಷ್ಕಾರಗಳಿಂದ ಉಂಟಾದ ಸಾಧನಸಲಕರಣೆಗಳನ್ನು ಉಪಯೋಗಿಸುತ್ತಾನೆ. ಅವನ ಕೆಲವೊಂದು ಆಚಾರಗಳು ಆಧುನಿಕ ಮಾನವನನ್ನು ಹೋಲುವಂತಿವೆ. ಸಂಪ್ರದಾಯಗಳ ಅನುಕರಣೆಯಲ್ಲಿ ಆದಿಮಾನವ; ಆವಿಷ್ಕಾರಗಳ ಬಳಕೆಯಲ್ಲಿ ಆಧುನಿಕ ಮಾನವ.

ಜೀವವಿರೋಧಿ ಮೌಢ್ಯಗಳ ವಿರುದ್ಧ ಜಾಗೃತಿ ಮೂಡಿಸಿದಾಗಲು, ಅವುಗಳ ಆಚರಣೆಗೆ ಮುಂದಾದಲ್ಲಿ, ಅದರ ವಿರುದ್ಧ ಕಾನೂನು ಕ್ರಮ ಅನಿವಾರ್ಯ ಆಗುತ್ತದೆ.

ಮೂಢನಂಬಿಕೆ ನಿಷಿದ್ಧ ಕಾನೂನು ರಚನೆಯಾಗುವ ಹಿನ್ನೆಲೆಯಲ್ಲಿ ಪ್ರಬಲವಾದ ಇಚ್ಛಾಶಕ್ತಿ ಬೇಕಾಗುತ್ತದೆ. ಆಳುವವರು ಮಾತ್ರವಲ್ಲ; ವಿರೋಧ ಪಕ್ಷಗಳ ಸಹಮತ ಅವಶ್ಯ. ಸರ್ವಾನುಮತ ಅಪೇಕ್ಷಣೀಯ. ಇದರ ಬಗೆಗೆ ಒಲವು ಇರುವವರೆಲ್ಲ ಮೊದಲು ಒಗ್ಗೂಡಬೇಕು. ಈ ವಿಚಾರದಿಂದ ದೂರ ಇರುವವರನ್ನು ಒಲಿಸುವ ಪ್ರಯತ್ನ ನಡೆಯಬೇಕು. ಸ್ಪಷ್ಟ ಅಭಿಪ್ರಾಯದ ಜತೆಯಲ್ಲಿ ಸರ್ವಾನುಮತದ ತೀರ್ಮಾನ ಅತ್ಯಗತ್ಯ.

ಹಾರ್ದಿಕ ಸಮಾಜ ರಚನೆ ಆಗಬೇಕೆನ್ನುವ ಬೇಡಿಕೆ ಇಂದು ಮೊನ್ನೆಯದಲ್ಲ, ಪ್ರಾಚೀನ ಕಾಲದಿಂದಲು ಈ ಸಂಬಂಧ ಪ್ರಯತ್ನಗಳು ಮುಂದುವರಿಯುತ್ತ ಬಂದಿವೆ. ಮಾನವ ಪ್ರಯತ್ನಗಳು ವಿಫಲವಾದಲ್ಲಿ, ಕಾಲಧರ್ಮವು ಆ ಕಾರ್ಯವನ್ನು ನೆರವೇರಿಸುತ್ತದೆ. ಕೊರೋನಾದಂತಹ ಭೀಕರ ಕಾಯಿಲೆಯು ಬರುತ್ತದೆಂದು ಯಾವ ದೇವರು, ದೇವಮಾನವರು ಮತ್ತು ಜ್ಯೋತಿಷ್ಯ ಪಂಚಾಂಗ ವಾಚಕರು ಹೇಳಲಿಲ್ಲ. ಆಶ್ಚರ್ಯಕರ ವಿದ್ಯಮಾನವೆಂದರೆ, ಸರ್ವಧರ್ಮ ಧಾರ್ಮಿಕ ಕೇಂದ್ರಗಳು ಮುಚ್ಚಿಕೊಂಡವು. ಪೂಜೆ, ಪ್ರಾರ್ಥನೆ, ನಮಾಜು ಇತ್ಯಾದಿ ಆಚರಣೆಗಳು ಸ್ತಬ್ಧಗೊಂಡವು. ಸರ್ವರು ಗೃಹಬಂಧನದಲ್ಲಿರಬೇಕಾಯಿತು. ಕೊರೋನಾ ಮುಂದೆ ಯಾವ ಮಂತ್ರ, ತಂತ್ರ, ಮಾಟ, ಮದ್ದು ನಡೆಯಲಿಲ್ಲ. ಕಾಲಧರ್ಮ ರೂಪಿಸುವ ಕಾನೂನು ಕಠಿಣವಾಗಿರುತ್ತದೆ. ಅದಕ್ಕಿಂತ ಮುನ್ನ ಎಚ್ಚರವಾಗುವುದು ಒಳ್ಳೆಯದು.

ಬೇರೆ ರಾಜ್ಯಗಳಲ್ಲಿ ಮೂಢನಂಬಿಕೆ ತಡೆ ಮಾದರಿಗಳಿದ್ದಲ್ಲಿ, ಅದನ್ನು ಕುರಿತು ಅಧ್ಯಯನ ಮಾಡಬೇಕಾಗುತ್ತದೆ; ಸೂಕ್ತವಾಗಿದ್ದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕಾಗುತ್ತದೆ. ಅದರಂತೆ ಬೇರೆ ರಾಷ್ಟ್ರಗಳಲ್ಲಿ ಅಂಥ ಮಾದರಿಗಳಿದ್ದಲ್ಲಿ ಅದನ್ನು ಅನುಸರಿಸುವುದು ತಪ್ಪಲ್ಲ. ಭಾರತ ಸಂವಿಧಾನದಲ್ಲಿ ಸಾಕಷ್ಟು ನಿಯಮಗಳ ಉಲ್ಲೇಖವಿದೆ. ಅವು ಪುಸ್ತಕ ರೂಪದಲ್ಲಿವೆ. ದೈನಂದಿನ ಜೀವನದಲ್ಲಿ ಅಳವಡಿಸುವ ಮತ್ತು ಅಳವಡಿಸಿಕೊಳ್ಳುವಂತೆ ಮಾಡುವ ವಿಧಾನಗಳು ಮುಖ್ಯ.

*ಲೇಖಕರು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶರಣರು, ಪ್ರಗತಿಪರ ಚಿಂತಕರು.

Leave a Reply

Your email address will not be published.