ಮೂಢನಂಬಿಕೆ ವಿರೋಧಿ ಕರಡು ವಿಧೇಯಕ ಬರಗೂರು ವಿಶ್ಲೇಷಣೆ

2013ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ತಜ್ಞರ ತಂಡ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಮೂಢನಂಬಿಕೆ ನಿಷೇಧ ಕಾಯ್ದೆ ರೂಪಿಸಲು ಕರಡು ಮಾದರಿ ಸಲ್ಲಿಸಿತ್ತು. ಆಗ ಸಾರ್ವಜನಿಕ ಚರ್ಚೆ ಏರ್ಪಟ್ಟು ಪರವಿರೋಧ ಬಹಳ ಜೋರಾಗಿಯೇ ಮಂಡನೆಯಾಗಿ ಕಾಯ್ದೆ ನೆನೆಗುದಿಗೆ ಬೀಳುವಂತಾಯಿತು. ಆ ಸಂದರ್ಭದಲ್ಲಿ ಬರಗೂರು ರಾಮಚಂದ್ರಪ್ಪ ದಾಖಲಿಸಿದ ವಿಶ್ಲೇಷಣೆ ಇಲ್ಲಿವೆ.

ಬರಗೂರು ರಾಮಚಂದ್ರಪ್ಪ

ರಾಷ್ಟ್ರೀಯ ಕಾನೂನು ಶಾಲೆಯ ವತಿಯಿಂದ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವ ಅಧ್ಯಯನ ಕೇಂದ್ರದವರು ಆಯ್ದ ತಜ್ಞರ ತಂಡದ ಜೊತೆ ಚರ್ಚಿಸಿ ರೂಪಿಸಿದಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ ಮಾದರಿ ಕರಡನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮೇಲೆ ಪರವಿರೋಧದ ಅಲೆ ಎದ್ದಿದೆ. ನಾನು ತಜ್ಞರ ತಂಡದಲ್ಲಿ ಇರಲಿಲ್ಲವಾದರೂ ಮೂಢನಂಬಿಕೆ ಆಚರಣೆಗಳನ್ನು ವಿರೋಧಿಸುತ್ತ ಬಂದವನಾದ್ದರಿಂದ ಮಾದರಿ ಕರಡನ್ನು ಕೆಲವು ತಿದ್ದುಪಡಿ ಸಮೇತ ಸಮರ್ಥಿಸುತ್ತೇನೆ.

ಮೂಢನಂಬಿಕೆಯ ವಿರೋಧವನ್ನು ನಾಸ್ತಿಕವಾದದ ನೆಲೆಯಲ್ಲಿ ಮಾತ್ರ ನೋಡಬೇಕಾಗಿಲ್ಲ. ದೇವರುಧರ್ಮಗಳಲ್ಲಿ ನಂಬಿಕೆಯುಳ್ಳವರೆಲ್ಲರೂ ದುಷ್ಟರೆಂದು ಭಾವಿಸಬೇಕಾಗಿಲ್ಲ. ನಂಬಿಕೆ ಇರುವವರಲ್ಲಿ ಪ್ರಾಮಾಣಿಕತೆಯಿದ್ದರೆ, ಜನವಿರೋಧಿಯಾಗಿಲ್ಲದಿದ್ದರೆ ನೆಲೆಯಲ್ಲಿ ಗೌರವಿಸುತ್ತಲೇ ದೇವರುಧರ್ಮದ ದುರುಪಯೋಗದ ವಿರುದ್ಧ ಅವರನ್ನು ಬಳಸುವ ಅನಿವಾರ್ಯ ಚಾರಿತ್ರಿಕ ಸನ್ನಿವೇಶದಲ್ಲಿ ನಾವಿದ್ದೇವೆ. ಜಾತಿವಾದ ಮತ್ತು ಕೋಮುವಾದಗಳನ್ನು ವಿರೋಧಿಸುವ ಹೋರಾಟಗಳಲ್ಲಿ ಅನೇಕ ಆಸ್ತಿಕ ಜನರೂ ಮಠಾಧೀಶರೂ ಭಾಗವಹಿಸುತ್ತಿರುವುದು ನನ್ನ ಮಾತಿಗೆ ಸಮರ್ಥನೆಯಾಗಿದೆ.

ನನ್ನ ತಿಳಿವಳಿಕೆಯ ಪ್ರಕಾರ, ಸಂಪೂರ್ಣ ನಾಸ್ತಿಕವಾಗಿರುವ ಯಾವುದೇ ದೇಶ ನಮ್ಮ ಪ್ರಪಂಚದಲ್ಲಿ ಇಲ್ಲ. ರಷ್ಯಾದಲ್ಲಿ ಕಮ್ಯುನಿಸ್ಟ್ ಆಳ್ವಿಕೆಯಿದ್ದಾಗ ಜನರು ಚರ್ಚುಗಳಿಗೆ ಹೋಗುವ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ಆದರೆ ಸರ್ಕಾರವು ದೇವರು ಧರ್ಮದ ಪೋಷಕ ಪಾತ್ರ ವಹಿಸುತ್ತಿರಲಿಲ್ಲ. ದೇವರು ಧರ್ಮಗಳ ಬಗ್ಗೆ ಬದ್ಧತೆಯಿಲ್ಲದ ನನ್ನಂಥವರೂ ವಸ್ತುಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕವು ಆಸ್ತಿಕವಾದವನ್ನು ಸಂಪೂರ್ಣವಾಗಿ ಪ್ರತಿಬಂಧಿಸುವ ಸಾಧನವೆಂದು ಭಾವಿಸಬೇಕಾಗಿಲ್ಲ. ನಮ್ಮ ಸಂದರ್ಭದಲ್ಲಿ ಅದು ಹಾಗೆ ಆಗಬೇಕಾಗಿಯೂ ಇಲ್ಲ. ವಿಧೇಯಕದ ಪ್ರಸ್ತುತಮಾದರಿ ಕರಡನ್ನುಅವಲೋಕಿಸಿದಾಗಲೂ ಅಂಶ ಸ್ಪಷ್ಟ. ದೇವರನ್ನು ನಂಬಬೇಡಿ, ಧರ್ಮವನ್ನು ಬಿಟ್ಟುಬಿಡಿ ಎಂದೇನೂ ಕರಡು ಫರ್ಮಾನು ಹೊರಡಿಸುವುದಿಲ್ಲ. ಬದಲಾಗಿ ಧರ್ಮದೇವರುಗಳ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಜನರ ಮುಗ್ಧಭಾವನೆಗಳನ್ನು ಬಂಡವಾಳ ಮಾಡಿಕೊಳ್ಳುವ ಶಕ್ತಿಗಳಿಗೆ ಪ್ರಹಾರ ಮಾಡುತ್ತದೆ.

ಪ್ರಸ್ತುತ ಕರಡಿನಲ್ಲಿ ಪ್ರಧಾನವಾಗಿ ಎರಡು ಭಾಗಗಳಿವೆ. ಒಂದರಲ್ಲಿ ವಿಧೇಯಕದ ಮಾದರಿ ಅಂಶಗಳು ಇವೆ. ಇನ್ನೊಂದರಲ್ಲಿ ವಿಧೇಯಕಕ್ಕೆ ತಾತ್ವಿಕ ಸಮರ್ಥನೆಯ ರೂಪದಲ್ಲಿರುವ ವಿವರವಾದ ಟಿಪ್ಪಣಿಯಿದ್ದು ವಿಧೇಯಕದ ಆಶಯಗಳನ್ನು ಸ್ಪಷ್ಟಪಡಿಸಲಾಗಿದೆ. ಕರಡು ಹಿಂದೂ ಧರ್ಮದ ವಿರುದ್ಧ ಮಾತ್ರ ಇದೆ ಎಂಬ ಕೆಲವರ ಆರೋಪವನ್ನು ಟಿಪ್ಪಣಿಯ ಪ್ರಸ್ತಾವಗಳು ಅಲ್ಲಗಳೆಯುತ್ತವೆ. ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕವು ಎಲ್ಲ ಧರ್ಮಗಳನ್ನೂ ಒಳಗೊಳ್ಳಬೇಕೆಂಬುದು ಒಟ್ಟಾರೆ ಉದ್ದೇಶವಾಗಿದೆ. ‘ಮೂಢನಂಬಿಕೆಗಳನ್ನು ಎಲ್ಲಾ ಧರ್ಮಗಳು ಒಂದಲ್ಲಾ ಒಂದು ರೀತಿಯಲ್ಲಿ ಆಚರಣೆಯಲ್ಲಿಟ್ಟಿರುವುದರಿಂದ ವಿಧೇಯಕವು ಎಲ್ಲ ಧರ್ಮಗಳಲ್ಲಿರುವ ಮೌಢ್ಯಗಳಿಗೆ ಅನ್ವಯಿಸುವಂತಿರಬೇಕು(ಪುಟ-74) ಎಂದು ಖಚಿತವಾಗಿ ಹೇಳಲಾಗಿದೆ. ಅಷ್ಟೇ ಅಲ್ಲಇವು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಧಾರ್ಮಿಕ ನಂಬಿಕೆಯ ಸ್ವಾತಂತ್ರ್ಯ, ಜನಪದ ಪರಂಪರೆ, ಸಂಸ್ಕøತಿಗಳ ಅನನ್ಯತೆ ಮುಂತಾದ ಪರಿಕಲ್ಪನೆಗಳನ್ನು ಗಣನೆಗೆ ತೆಗೆದುಕೊಂಡೇ ಅವುಗಳಲ್ಲಿರುವ ಜನವಿರೋಧಿ ಆಚರಣೆಗಳ ವಿರುದ್ಧ ಕಾನೂನನ್ನು ರೂಪಿಸುವ ಅಗತ್ಯವಿದೆ(ಪುಟ-71) ಎಂಬ ಅರಿವು ಕರಡು ರಚನೆ ಮಾಡಿದವರಿಗಿದೆ. ಆದರೆ ಕರಡಿಗೆ ಕೊಟ್ಟಿರುವ ಪೂರಕ ಟಿಪ್ಪಣಿಯಲ್ಲಿ ಕೆಲವು ಅನಗತ್ಯ ಅಂಶಗಳನ್ನೂ ಪ್ರಸ್ತಾಪಿಸಿ ಗೊಂದಲ ಮತ್ತು ವಿವಾದಗಳಿಗೂ ಪ್ರೇರಣೆ ನೀಡಿದೆ. ಟಿಪ್ಪಣಿಯೂ ಕಾಯಿದೆಯ ಭಾಗವೆಂಬ ಭಾವನೆ ಕೆಲವರಲ್ಲಿದೆ. ಜಪಮಾಲೆ ರುದ್ರಾಕ್ಷಿ ಮಣಿಸರ ಹರಳು ಶಕುನಗೊಂಬೆ ಇತ್ಯಾದಿಗಳನ್ನು ನಿಷೇಧಿಸಬೇಕೆಂದು ಕರಡಿ ಒತ್ತಾಯಿಸುತ್ತದೆಯೆಂಬುದು ಕೆಲವರ ಆರೋಪ. ಆದರೆ ಅಂಶ ಕರಡುವಿನ ಭಾಗವಾಗಿಲ್ಲ. ಟಿಪ್ಪಣಿಯ ಭಾಗವಾಗಿದೆ. ‘ಮೌಢ್ಯದ ವ್ಯಾಪಾರ ದೊಡ್ಡ ದಂಧೆಯಾಗಿ ಬೆಳೆದಿದೆಯೆಂದು ವಿಶ್ಲೇಷಿಸುವ ಸಂದರ್ಭದಲ್ಲಿ ಪರಿಕರಗಳನ್ನು ಪ್ರಸ್ತಾಪಿಸಲಾಗಿದೆ. ಪ್ರಸ್ತಾಪದ ಆಶಯನಂಬಿಕೆಗಳನ್ನು ಮೌಢ್ಯವಾಗಿ ಪರಿವರ್ತಿಸಿ, ವಂಚಿಸಿ, ವ್ಯಾಪಾರದ ಮಟ್ಟಕ್ಕೆ ಇಳಿಸಬಾರದುಎಂಬುದಾಗಿದೆ. ಹೀಗಾಗಿ ವಿಜ್ಞಾನದ ತಳಹದಿಯೆಂದು ಹೇಳುವ ಮೂಲಕ ಜನರನ್ನು ತಪ್ಪುದಾರಿಗೆಳೆಯುವ ಫಲಜ್ಯೋತಿಷ್ಯ, ವಾಸ್ತುಶಾಸ್ತ್ರ, ಯಕ್ಷಿಣಿ ವಿದ್ಯೆ, ವಶೀಕರಣ ಮುಂತಾದವುಗಳ ದುರ್ಬಳಕೆಯನ್ನು ಸದರಿ ಕಾಯ್ದೆಯ ವ್ಯಾಪ್ತಿಯೊಳಕ್ಕೆ ತರುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ(ಪುಟ-71) ಎಂದು ಅಭಿಪ್ರಾಯಪಡಲಾಗಿದೆ. ಅಭಿಪ್ರಾಯದಲ್ಲಿರುವಜನರನ್ನು ತಪ್ಪುದಾರಿಗೆಳೆಯುವ’ ‘ದುರ್ಬಳಕೆ’ ‘ಗಂಭೀರವಾಗಿ ಯೋಚಿಸಬೇಕಾದ ಅಗತ್ಯಎಂಬ ಪದ ಸಮೂಹವನ್ನು ಅರ್ಥಮಾಡಿಕೊಳ್ಳಬೇಕು. ದುರ್ಬಳಕೆಯ ವಿರುದ್ಧ ವಿಧೇಯಕ ಇರಬೇಕೆಂಬುದು ಇಲ್ಲಿ ಸ್ಪಷ್ಟ. ಆದರೆ ಚರ್ಚೆ, ಚಿಂತನೆಗಳ ಮೂಲಕ ದುರ್ಬಳಕೆ, ತಪ್ಪು ದಾರಿ ಮುಂತಾದವುಗಳನ್ನು ಖಚಿತವಾಗಿ ನಿರ್ವಚಿಸಿ ಆನಂತರ ಅದಕ್ಕನುಗುಣವಾಗಿ ವಿಧೇಯಕದಲ್ಲಿ ಸೇರಿಸಲು ಮುಂದಾಗಬೇಕಾಗಿದೆ. ಇದು ಸರಳವಾದುದಲ್ಲ. ‘ಧಾರ್ಮಿಕ ಸ್ವರೂಪದಲ್ಲಿರುವ ಆಚರಣೆ ಸಂಪ್ರದಾಯಗಳೆಲ್ಲವೂ ಅಪಾಯಕಾರಿಯಲ್ಲ(ಪುಟ-70) ಎಂದು ಕರಡು ರಚನಕಾರರೇ ತಮ್ಮ ಟಿಪ್ಪಣಿಯಲ್ಲಿ ಸ್ಪಷ್ಟಪಡಿಸಿರುವುದನ್ನು ಗಮನಿಸಿದರೆಸರಳವಲ್ಲಎಂಬ ಮಾತು ಮತ್ತಷ್ಟು ಸ್ಪಷ್ಟವಾಗುತ್ತದೆ.

ಯಾವ ಮೂಢನಂಬಿಕೆಯ ಆಚರಣೆಗಳು ದೈಹಿಕ ಮತ್ತು ಮಾನಸಿಕಹಿಂಸೆಗೆ ಕಾರಣವಾಗುತ್ತವೆಯೊ, ಮಾನವನ ಸಾಮಾಜಿಕ ಘನತೆಗೌರವಕ್ಕೆ ಧಕ್ಕೆಯುಂಟುಮಾಡುತ್ತವೆಯೊ ಹಾಗೂ ಆರ್ಥಿಕವಾಗಿ ಸಹ ಮಾನವರನ್ನು ಶೋಷಿಸಲು ವಂಚಕ ಶಕ್ತಿಗಳಿಂದ ಬಳಕೆಯಾಗುತ್ತವೆಯೋ, ಅವುಗಳನ್ನು ವಿಧೇಯಕದ ವ್ಯಾಪ್ತಿಯೊಳಗೆ ತರಬಹುದು(ಪುಟ-72) ಎಂಬ ಅಭಿಮತವನ್ನು ಕರಡು ರಚನಕಾರರು ದಾಖಲಿಸಿದ್ದು ಇದು ಸರಿಯಾದ ನಿಲುವಾಗಿದೆ. ಆದರೆ ಅಂತಹ ಆಚರಣೆಗಳನ್ನು ಖಚಿತವಾಗಿ ಗುರುತಿಸುವ ಅಗತ್ಯವಿದೆ. ಇಲ್ಲದಿದ್ದರೆ ಕಾಯಿದೆಯನ್ನು ಅನುಷ್ಠಾನಗೊಳಿಸುವವರ ವ್ಯಾಖ್ಯಾನವೇ ಅಂತಿಮವಾಗಿ ದುರುಪಯೋಗದ ಸಾಧ್ಯತೆಯೂ ಇರುತ್ತದೆ.

ಹಾಗಾದರೆ ವಿಧೇಯಕದ ಕರಡಿನಲ್ಲಿ ಯಾವ್ಯಾವ ಆಚರಣೆಗಳು ಸೇರಿವೆಯೆಂಬ ಪ್ರಶ್ನೆ ಎದುರಾಗುವುದು ಸಹಜ. ಆಶಯದ ಟಿಪ್ಪಣಿಗೆ ಅನುಗುಣವಾಗಿ ಮೌಢ್ಯಾಚರಣೆಗಳನ್ನು ಕರಡು ಒಳಗೊಂಡಿದೆಯೆ ಎಂಬ ಅಂಶವೂ ಮುಖ್ಯ. ಕರಡಿನ 36 ಮತ್ತು 37ನೇ ಪುಟದಲ್ಲಿ ವಿಧೇಯಕವು ಒಳಗೊಳ್ಳಬೇಕಾದ ಸಂಜ್ಞೇಯ ಹಾಗೂ ಸಂಜ್ಞೇಯವಲ್ಲದ ಅಪರಾಧಗಳನ್ನು ಪಟ್ಟಿ ಮಾಡಲಾಗಿದೆ. ಮನುಷ್ಯ ಬಲಿ, ಅಘೋರಿ, ಸಿದ್ಧು ಭುಕ್ತಿ ಮುಂತಾದ ಸದೃಶ ಆಚರಣೆಗಳು, ಇಂಥ ಆಚರಣೆಗಳ ಮೂಲಕ ಆರ್ಥಿಕಲೈಂಗಿಕ ಶೋಷಣೆ, ದೈವಿಕಅಧ್ಯಾತ್ಮಿಕ ಶಕ್ತಿ ಸ್ವಾಧೀನವಾಗಿದೆಯೆಂದು ಘೋಷಿಸಿಕೊಂಡು ವೈಯಕ್ತಿಕ ಲಾಭಕ್ಕಾಗಿ ಜನರಲ್ಲಿ ಭಯ ಹುಟ್ಟಿಸುವುದು, ಹಣಕ್ಕಾಗಿ ವಾಮಾಚಾರ, ಮಾಟಮಂತ್ರಗಳ ಮೂಲಕ ಭಯವುಂಟುಮಾಡುವುದು, ಸಿಡಿಯಂತಹ ಸ್ವದಂಡನೆಯ ಮತಾಚರಣೆ, ಮಕ್ಕಳ ಖಾಯಿಲೆ ವಾಸಿ ಮಾಡುತ್ತೇವೆಂದು ಮುಳ್ಳುಗಳ ಮೇಲೆ ಅಥವಾ ಎತ್ತರದಿಂದ ಎಸೆಯುವುದು, ಋತುಮತಿ ಅಥವಾ ಯಾವುದೇ ಹೆಸರಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿಸುವುದು, ಅತಿಮಾನುಷ ಶಕ್ತಿಯ ಹೆಸರಿನಲ್ಲಿ ಲೈಂಗಿಕ ಶೋಷಣೆ ಮಾಡುವುದು, ಮಡೆಸ್ನಾನ ಮತ್ತು ಸದೃಶ ಆಚರಣೆಗಳನ್ನು ನೆರವೇರಿಸುವುದು, ಮೂಢನಂಬಿಕೆ ಹೆಸರಲ್ಲಿ ಜಾತಿ ಹಾಗೂ ಲಿಂಗ ತಾರತಮ್ಯ ಮಾಡುವುದು, ತಲೆ ಮೇಲೆ ಪಾದರಕ್ಷೆ ಇಡುವ ಆಚರಣೆ ಮಾಡುವುದು, ಜಾತಿಯ ಆಧಾರದ ಮೇಲೆ ಪಂಕ್ತಿ ಭೇದ ಆಚರಿಸುವುದು ಅಪರಾಧಗಳಲ್ಲದೆ ಕಾಯಿಲೆ ಗುಣಪಡಿಸಲು ಪ್ರಯತ್ನಿಸುವುದು ಅಥವಾ ಹಿಂಸಾತ್ಮಕ ಭೂತೋಚ್ಚಾಟನೆ, ಮಹಿಳೆಯರ ಮೇಲೆ ಬಣ್ಣದ ನೀರು ಎರಚುವ ಆಚರಣೆಗಳನ್ನು ಸಂಜ್ಞೇಯ ಅಪರಾಧಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಚರ್ಚೆ ಚಿಂತನೆಗಳಿಂದ, ಅಗತ್ಯವಿದ್ದರೆ ಇನ್ನಷ್ಟು ಆಚರಣೆಗಳನ್ನು ಸೇರಿಸಬಹುದು. ಒಂದಷ್ಟು ಆಚರಣೆಗಳನ್ನು ಬಿಡಬಹುದು. ಸಂಜ್ಞೇಯವಲ್ಲದ ಅಪರಾಧಗಳ ಪಟ್ಟಿಯಲ್ಲಿ ಜನನದ ಸಮಯ, ಸ್ಥಳದ ಆಧಾರದ ಮೇಲೆ ಕಳಂಕ ಹಚ್ಚುವುದು, ಭವಿಷ್ಯವಾಣಿ ನಿಜವಾಗುತ್ತದೆಯೆಂದು ನಂಬಿಸಿ ಅವಮಾನಕರ ಆಚರಣೆಗಳನ್ನು ಮಾಡಿಸುವುದು, ವ್ಯಕ್ತಿಗಳಿಗೆ ತೀವ್ರ ಹಣಕಾಸು ನಷ್ಟ ಉಂಟಾಗುವುದಕ್ಕೆ ಕಾರಣವಾಗುವ ಹಾನಿಕರ ಭವಿಷ್ಯ ನುಡಿಯುವುದು, ಮುಂತಾದ ಅಂಶಗಳು ಸೇರಿವೆ. ಇಲ್ಲಿ ಭವಿಷ್ಯ ಹೇಳುವುದನ್ನೇ ನಿಷೇಧಿಸಬೇಕೆಂದು ಹೇಳಿಲ್ಲವೆಂಬುದನ್ನೂ ಗಮನಿಸಬೇಕು. ಅವಮಾನಕರ ಆಚರಣೆಗೆ ಅನುವು ಮಾಡುವ ಮತ್ತು ತೀವ್ರ ಹಣಕಾಸು ನಷ್ಟಕ್ಕೆ ಕಾರಣವಾಗುವಭವಿಷ್ಯವಾಣಿ ದುಷ್ಪರಿಣಾಮಗಳನ್ನು ನಮೂದಿಸಲಾಗಿದೆಯಷ್ಟೆ. ಅಂಶಗಳ ಚರ್ಚೆಯನ್ನು ಮುಂದುವರಿಸಿ ಅವಮಾನಕರ ಆಚರಣೆ ಯಾವುವು, ಹಣಕಾಸು ನಷ್ಟ ಉಂಟಾದಾಗ ಪರಿಹಾರ ಏನು ಎಂಬಿತ್ಯಾದಿ ಅಂಶಗಳನ್ನು ಖಚಿತಪಡಿಸುವ ಅಗತ್ಯವಿದೆ. ಇದು ಸುಲಭದ ಕೆಲಸವೆಂದು ನನಗನ್ನಿಸುವುದಿಲ್ಲ. ಕಾನೂನು ಯಾವಾಗಲೂ ಖಚಿತವಾಗಿರಬೇಕು. ಇಲ್ಲದಿದ್ದರೆ ನಂಬಿಕೆಗಳ ದುರುಪಯೋಗದ ಪಟ್ಟಿಯಲ್ಲಿ ಕಾನೂನಿನ ದುರುಪಯೋಗವೂ ಸೇರಿಬಿಡುತ್ತದೆ! ಅಂಶವನ್ನು ಕರಡು ರಚನೆಯಲ್ಲಿ ಗಮನಿಸಬೇಕಿತ್ತು.

ಕರಡಿನಲ್ಲಿ ಪ್ರಸ್ತಾಪಿತವಾದಮೂಢನಂಬಿಕೆಗಳೇ ಅಂತಿಮವಲ್ಲ ಎಂಬ ಅರಿವು ರಚನಕಾರರಿಗೆ ಇದೆ. ಆದ್ದರಿಂದಲೇ ವಿಧೇಯಕದಲ್ಲಿಕರ್ನಾಟಕ ಮೂಢನಂಬಿಕೆ ಪ್ರಾಧಿಕಾರಮತ್ತು ಜಿಲ್ಲೆ ಜಾಗೃತ ಸಮಿತಿಗಳ ರಚನೆಯಾಗಬೇಕೆಂದು ಸಲಹೆ ನೀಡಿದ್ದು, ಪ್ರಾಧಿಕಾರ ಮತ್ತು ಸಮಿತಿಗಳು ಮೂಢನಂಬಿಕೆಗಳ ಸಮೀಕ್ಷೆ ನಡೆಸಬೇಕೆಂದೂ (ಪುಟ-31) ಮೂಢನಂಬಿಕೆ ಆಚರಣೆಗಳ ಪರಿಣಾಮಗಳ ಬಗ್ಗೆ ಸಂಶೋಧನೆಗೆ ಅವಕಾಶ ಕಲ್ಪಿಸಬೇಕೆಂದೂ ತಿಳಿಸಲಾಗಿದೆ (ಪುಟ-29). ಕೇವಲ ಕಾನೂನಿನಿಂದ ಮೂಢನಂಬಿಕೆಗಳ ಸಂಪೂರ್ಣ ನಿವಾರಣೆ ಸಾಧ್ಯವೆಂಬ ಅತಿ ನಂಬಿಕೆಯೂ ಸಾಧುವಲ್ಲವೆಂಬ ತಿಳಿವಳಿಕೆಯಿಂದ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹೇಳಲಾಗಿದೆ.

ಸಾಮಾಜಿಕವಾಗಿ ಆರೋಗ್ಯಕರವಾದ ಹಾಗೂ ಸಂವಿಧಾನಾತ್ಮಕ ಆಶಯದಂತೆ ವೈಜ್ಞಾನಿಕ ಮನೋಧರ್ಮವನ್ನು ನೆಲೆಗೊಳಿಸುವ ಕರಡು ವಿಧೇಯಕವು ಒಟ್ಟಾರೆ ಆಶಯದಲ್ಲಿ ಸ್ವಾಗತಾರ್ಹವಾಗಿದೆ. ಆದರೂ ಕರಡುವಿನಲ್ಲಿ ಇಲ್ಲದಿರುವ ಅಂಶಗಳನ್ನು ಕಲ್ಪಿಸಿಕೊಂಡು, ಇರುವ ಅಂಶಗಳನ್ನು ಅಪವ್ಯಾಖ್ಯಾನಿಸಿಕೊಂಡು, ಕೆಲವರುಅತಿಮಾನುಷಟೀಕೆಗಳಲ್ಲಿ ತೊಡಗೊದ್ದಾರೆ. ಗಂಭೀರವಾದ ಟೀಕೆ, ವಿಮರ್ಶೆ, ಚರ್ಚೆ, ವಾಗ್ವಾದಗಳು ಯಾವತ್ತೂ ಬೇಕು. ಆರೋಗ್ಯಕರ ನೆಲೆಯಲ್ಲಿ ಇವು ನಡೆಯಬೇಕು. ಅದನ್ನು ಬಿಟ್ಟು ದೇವಾಲಯಕ್ಕೆ ಹೋಗುವುದನ್ನು, ಪೂಜೆ ಮಾಡುವುದನ್ನು, ರುದ್ರಾಕ್ಷಿ ಧರಿಸುವುದನ್ನು ನಿಷೇಧಿಸಲಾಗುತ್ತದೆಯೆಂಬ ಗುಲ್ಲು ಎಬ್ಬಿಸುವುದು ಒಮ್ಮೊಮ್ಮೆ ಉದ್ದೇಶಪೂರ್ವಕ ಎನ್ನಿಸಿಬಿಡುತ್ತದೆ. ವ್ಯಕ್ತಿನಿಂದೆಗೆ ತೊಡಗುವ ಯಾವುದೆ ಟೀಕೆಗಳಿಗೆ ತರ್ಕ ಮತ್ತು ತತ್ವಗಳ ಹಂಗಿಲ್ಲ ಎಂದು ಹೇಳಬೇಕಾಗುತ್ತದೆ. ಬುದ್ಧ, ಬಸವಣ್ಣ, ಅಲ್ಲಮಪ್ರಭು, ಕನಕದಾಸ, ಒಟ್ಟು ವಚನಕಾರರು, ಹರಿದಾಸರು, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾಫುಲೆ, ಅಂಬೇಡ್ಕರ್, ರಾಜಾರಾಂ ಮೋಹನರಾಯ್, ಗಾಂಧಿ, ಲೋಹಿಯಾ ಮುಂತಾದ ಅನೇಕರು ವಿವಿಧ ಪ್ರಮಾಣದಲ್ಲಿ ವಿವಿಧ ನೆಲೆಗಳಲ್ಲಿ ಮೌಢ್ಯಾಚರಣೆಗಳನ್ನು ವಿರೋಧಿಸಿದ ಇತಿಹಾಸವನ್ನು ನೆನೆಪಿಸಬೇಕಾಗುತ್ತದೆ. ಅವರವರ ಚಾರಿತ್ರಿಕ ಸಂದರ್ಭದಲ್ಲಿ ತೋರಿದ ಪ್ರತಿರೋಧದ ಚರಿತ್ರೆಯನ್ನು ಗೌರವಿಸುತ್ತ ನಾವು ಮುನ್ನಡೆಯಬೇಕಾಗಿದೆ.

ಇಷ್ಟಾಗಿಯೂ ಕರಡು ವಿಧೇಯಕ ಮತ್ತು ಆಶಯದ ಟಿಪ್ಪಣಿ ಬಗ್ಗೆ ನನ್ನ ಚಿಕ್ಕ ಪುಟ್ಟ ಆಕ್ಷೇಪಗಳನ್ನು ಹೇಳಬಯಸುತ್ತೇನೆ. ‘ಹಾನಿಕರ, ಶೋಷಣಾತ್ಮಕ ಹಾಗೂ ಮಾನವನ ಘನತೆಗೆ ಕುಂದುಂಟುಮಾಡುವ ಮೂಢನಂಬಿಕೆ ಆಚರಣೆಗಳನ್ನು ನಿರ್ಮೂಲನ ಮಾಡುವ ದೃಷ್ಟಿಯಿಂದ ಅವುಗಳ ನಿವಾರಣೆಗೆವಿಧೇಯಕವನ್ನು ತರಲಾಗುತ್ತಿದೆಯೆಂಬ ಆರಂಭದ ವಾಕ್ಯಗಳು ಸೂಕ್ತವಾಗಿದ್ದರೂಮೂಢನಂಬಿಕೆ ಆಚರಣೆಯನ್ನು ನಿರ್ವಚಿಸುವ ವಿವರ ಮತ್ತಷ್ಟು ನಿಖರವಾಗಿರಬೇಕಿತ್ತು. ಅದರ ಬದಲು ಕಾಯಿಲೆ ಅಥವಾ ಸಂಕಟವನ್ನು ಪರಿಹರಿಸುವ ಭರವಸೆ ನೀಡಿ ಹೆದರಿಸುವ ಅಂಶವನ್ನೇ ಮುಖ್ಯವಾಗಿಸಲಾಗಿದೆ (ಪುಟ 24). ಇದೊಂದು ಅನಗತ್ಯ ಆದತ್ಯೆಯ ಅಂಶವಾಗಿದೆ. ‘ಮೂಢನಂಬಿಕೆ ಆಚರಣೆಎಂಬುದನ್ನು ನಿರ್ವಚಿಸಲು ಇದು ಮುಖ್ಯ ಮಾನದಂಡವಾಗುವುದಿಲ್ಲ. ಜೊತೆಗೆ, ಅಪರಾಧ ಮಾಡಿದವರಿಗೂ ಪ್ರೇರಣೆ ನೀಡಿದವರಿಗೂ ಒಂದೇ ರೀತಿಯ ಶಿಕ್ಷೆ ಎಂದು ಹೇಳಿರುವುದು, ಜಾಮೀನು ಕೊಡಬಾರದೆನ್ನುವುದು, ಕಾನೂನು ಪ್ರಕಾರ ಮಾನ್ಯವಾಗುತ್ತವೆಯೆ ಎಂಬ ಪ್ರಶ್ನೆಗೆ ಕಾನೂನು ತಜ್ಞರು ಉತ್ತರಿಸಬೇಕು; ವಿಮರ್ಶಿಸಬೇಕು. ಇದು ಸಾಧ್ಯವೆ ಎಂಬ ಪ್ರಶ್ನೆಯ ಜೊತೆಗೆ ಸಾಧುವೆ ಎಂಬ ಪ್ರಶ್ನೆಯೂ ಇಲ್ಲಿ ಚರ್ಚಾರ್ಹ. ಉತ್ಸಾಹದಲ್ಲಿ ವಿವೇಕವನ್ನು ಕಳೆದುಕೊಳ್ಳುವ ಮೌಢ್ಯವನ್ನು ಮೂಢನಂಬಿಕೆ ವಿರೋಧ ಒಳಗೊಳ್ಳಬಾರದು.

ಇನ್ನು ಆಶಯದ ಟಿಪ್ಪಣಿಯಲ್ಲಿಯಾವುದೇ ಮತಧರ್ಮಕ್ಕೆ ಸಂಬಂಧಿಸಿದ ಮೌಢ್ಯ ಪ್ರೇರಕ ಜ್ಯೋತಿಷ್ಕರ್ಮ, ಮಾಟ ಮಂತ್ರ, ಮೋಡಿರಣಮೋಡಿ, ಬಾನಾಮತಿ, ವಶೀಕರಣ, ವಾಮಾಚಾರ, ಯಕ್ಷಿಣಿವಿದ್ಯೆ, ಮಂದಿರಗಳಲ್ಲಿ ದೈವೀಪ್ರಶ್ನೆ ಕೇಳುವುದು ನುಡಿಯುವುದು, ಪಾದಪೂಜೆಅಡ್ಡಪಲ್ಲಕ್ಕಿ ಸೇವೆ ಮುಂತಾದ ವ್ಯಾಪಾರಗಳನ್ನು ನಿಷೇಧಿಸಬೇಕುಎಂದು ಹೇಳುತ್ತಾ ಪಟ್ಟಿಗೆ ಪಶುಬಲಿನರಬಲಿಯೇ ಮುಂತಾದ ಇನ್ನೂ ಅನೇಕ ಆಚರಣೆಗಳನ್ನು ಸೇರಿಸಲಾಗಿದೆ (ಪುಟ-73). ಆದರೆ ಮುಂದಿನ ಪುಟದಲ್ಲಿವಾಸ್ತು, ಫಲಜ್ಯೋತಿಷ್ಯ, ಜಾತಕ, ಕುಂಡಲಿನಿ, ಗಾವು, ಹಸ್ತಸಾಮುದ್ರಿಕೆ, ಕಣಿಶಕುನಮುಂತದವುಗಳನ್ನು ವಿಧೇಯಕದ ವ್ಯಾಪ್ತಿಗೆ ಸೇರಿಸಬೇಕೆಂದು ಹೇಳುತ್ತಲೇ ಇಂತಹ ವ್ಯಾಪಾರನಿರತ ವ್ಯಕ್ತಿಗಳುಸಕ್ಷಮ ನೋಂದಣಿ ಪ್ರಾಧಿಕಾರದಲ್ಲಿ ನಿಯಮಾನುಸಾರ ನೋಂದಣಿ ಮಾಡಿಕೊಳ್ಳುವಂತಾಗಬೇಕುಎಂದು ಸೂಚಿಸಲಾಗಿದೆ. ಮುಂದುವರೆದು ಇವುಗಳನ್ನು ಗ್ರಾಹಕರ ಕಾಯ್ದೆಯಡಿ ತರಬೇಕೆಂದು ಹೇಳಲಾಗಿದೆ. ನಿಷೇಧಿಸಬೇಕು ಎಂದು ಹೇಳಿದ ಮೇಲೆ ನೋಂದಣಿ ಮಾಡಿಕೊಳ್ಳುವ ಪ್ರಶ್ನೆ ಬರುತ್ತದೆಯೆ? ನಿಷೇಧಕ್ಕೊಳಗಾದ ಮೇಲೆ ಗ್ರಾಹಕರ ಕಾಯ್ದೆ ಅನ್ವಯವಾಗುತ್ತದೆಯೆ? ನಿಷೇಧ, ನೋಂದಣಿ ಪರಸ್ಪರ ವೈರುಧ್ಯದ ಅಂಶಗಳಲ್ಲವೆ? ಆಚರಣೆಗೆ ಅವಕಾಶಕೊಟ್ಟು, ವಂಚನೆ ಮಾಡಿದಾಗ ಶಿಕ್ಷಾರ್ಹವಾಗಬೇಕು ಎನ್ನುವುದಾದರೆ ಮಾತ್ರ ನೋಂದಣಿ ಯಾಕೆ? ಗ್ರಾಹಕರ ಕಾಯ್ದೆಯ ವ್ಯಾಪ್ತಿ ಯಾಕೆ? ಮನವರಿಕೆ ಮಾಡಿಕೊಡಬೇಕು. ಇನ್ನೊಂದು ಅಂಶವೂ ಇಲ್ಲಿ ಗಮನಾರ್ಹ. ಎಲ್ಲ ಮತಧರ್ಮಗಳ ಮೌಢ್ಯಾಚರಣೆಗಳನ್ನು ವಿರೋಧಿಸುವುದಾಗಿ ಕರಡುವಿನಲ್ಲಿ ಹೇಳಿದ್ದರೂ ಮೌಢ್ಯ ಪ್ರೇರಕ ಪಟ್ಟಿಯಲ್ಲಿ ಒಂದೇ ಧರ್ಮಕ್ಕೆ ಸೇರಿದ ಆಚರಣೆಗಳು ಹೆಚ್ಚು ಇರುವುದು ಅನೇಕರ ಅನುಮಾನಗಳಿಗೆ ಪ್ರೇರಕವಾಗಿರಲು ಸಾಧ್ಯ.

ನನ್ನ ಅಭಿಪ್ರಾಯದಲ್ಲಿ, ಬಹುಮುಖ್ಯವಾಗಿ ವಿಧೇಯಕದ ವ್ಯಾಪ್ತಿಗೆ ಸರ್ಕಾರ ಮತ್ತು ಸರ್ಕಾರದಲ್ಲಿರುವವರ ಮೌಢ್ಯಾಚರಣೆಯನ್ನು ಸೇರಿಸಬೇಕು. ಸಚಿವರು, ಶಾಸಕರು, ಅಧಿಕಾರಿಗಳು ವೈಯಕ್ತಿಕವಾಗಿ ನಂಬಿಕೊಂಡ ಆಚರಣೆಗಳನ್ನು ತಮ್ಮ ಮನೆಯಲ್ಲಿ ಮಾಡಿಕೊಳ್ಳುವುದು ಬೇರೆ, ವಿಧಾನಸೌಧ ಮತ್ತು ಕಚೇರಿಗಳಲ್ಲಿ ಮಾಡುವುದು ಬೇರೆ. ಆದ್ದರಿಂದ ವಿಧಾನಸೌಧದಲ್ಲಿ ಕುರ್ಚಿ ಪೂಜೆ ಮಾಡುವುದು, ವಾಸ್ತುವಿಗನುಗುಣವಾಗಿ ಪುನರ್ನವೀಕರಣ, ಹೋಮ, ಇತ್ಯಾದಿಗಳಲ್ಲಿ ತೊಡಗುವುದನ್ನೂ ಸರ್ಕಾರಿ ಸಮಾರಂಭಗಳಲ್ಲಿನ ಮೌಢ್ಯಾಚರಣೆ ರಾಹುಕಾಲಾದಿಗಳನ್ನು ಮೀರಿದ ವೈಜ್ಞಾನಿಕ ಮನೋಧರ್ಮದಿಂದಲೂ ನಡೆಯಬೇಕು. ಮೂಢನಂಬಿಕೆ ಪ್ರತಿಬಂಧಕಕ್ಕೆ ಸರ್ಕಾರವೇ ಮೊದಲ ಮಾದರಿಯಾಗಬೇಕು. ಇದಕ್ಕನುಗುಣವಾಗಿ ವಿಧೇಯಕದಲ್ಲಿ ಸ್ಪಷ್ಟ ಉಲ್ಲೇಖವಿರಬೇಕು.

ಕೊನೆಯದಾಗಿ ಇನ್ನೊಂದು ಅಂಶವನ್ನಿಲ್ಲಿ ಹೇಳಬೇಕು. ಮೂಢನಂಬಿಕೆ ಮತ್ತು ನಂಬಿಕೆಗಳನ್ನು ನಿರ್ವಚಿಸುವಲ್ಲಿನ ಗೊಂದಲ ನಿವಾರಣೆಗಾಗಿ ವಿಧೇಯಕವನ್ನುಕಂದಾಚಾರ ಪ್ರತಿಬಂಧಕ ವಿಧೇಯಕಎಂದು ಕರೆಯಬಹುದು. ಆಗ ಕಂದಾಚಾರಗಳನ್ನು ಪಟ್ಟಿ ಮಾಡುವುದು ಸುಲಭವಾಗಬಹುದು. ಇಲ್ಲದಿದ್ದರೆ ಅನಗತ್ಯ ಪ್ರಶ್ನೆಗಳು ಮುಂದುವರಿಯುತ್ತಲೇ ಹೋಗಬಹುದು. ಆದ್ದರಿಂದ ಸ್ಪಷ್ಟ ಉಲ್ಲೇಖಗಳೊಂದಿಗೆ ವಿಧೇಯಕ ಜಾರಿಯಾಗಲಿ ಎಂಬುದು ನನ್ನ ಆಶಯ.

Leave a Reply

Your email address will not be published.