ಹುಬ್ಬಳ್ಳಿಯ ಬಿಆರ್ಟಿಎಸ್, ಮಂಗಳೂರು, ದಾವಣಗೆರೆ, ತುಮಕೂರು, ಮೈಸೂರುಗಳ ಸ್ಮಾರ್ಟ್ಸಿಟಿ ಯೋಜನೆಗಳು ಅಯಾಯ ಊರಿನ ಚಂದವನ್ನು ಹಾಳು ಮಾಡಿದ್ದಲ್ಲದೇ, ಜನರಿಗಿಂತ ಹೆಚ್ಚಾಗಿ ಗುತ್ತಿಗೆದಾರರಿಗೆ/ರಾಜಕಾರಣಿಗಳಿಗೆ ಉಪಯೋಗಕಾರಿಯಾದ ಯೋಜನೆಗಳಾಗಿವೆ. ಬೆಂಗಳೂರಿನಲ್ಲಿ ಕಾಮಗಾರಿಗಳ ಗುತ್ತಿಗೆ ಎಂದರೆ ಹಳೇ ಕಲ್ಲು– ಹೊಸ ಬಿಲ್ಲು ಎನ್ನುವ ಪರಿಸ್ಥಿತಿ ಇದೆ.
–ದರ್ಶನ್ ಜೈನ್
ಕರ್ನಾಟಕವು ಕರ್ನಾಟಕ ರಾಜ್ಯವಾಗುವ ಮೊದಲೇ, 1951 ರಲ್ಲೇ ಪ್ರಭಾವಿ ಗುತ್ತಿಗೆದಾರರ ಮರ್ಜಿಗೆ ಸಿಲುಕಿ ದುಂದುವೆಚ್ಚ ಮಾಡಿರುವ ಆರೋಪಕ್ಕೆ ಗುರಿಯಾಗಿತ್ತು. ರೂ. 33 ಲಕ್ಷಗಳಿಗೆ ಅನುಮೋದನೆ ಪಡೆದುಕೊಂಡ ಯೋಜನೆಯೊಂದು ಕುಂಟುತ್ತಾ ಸಾಗಿ 180 ಲಕ್ಷಗಳಿಗೆ ಪೂರ್ಣಗೊಂಡಿತು. ಈ ಯೋಜನೆಯ ಕುರಿತಾದ ಆರೋಪಗಳು ಪ್ರಾಮಾಣಿಕ ಮಂತ್ರಿಯೊಬ್ಬರ (ಕಡಿದಾಳ್ ಮಂಜಪ್ಪ) ರಾಜೀನಾಮೆಗೂ, ತದನಂತರ ಅಂದಿನ ಮುಖ್ಯಮಂತ್ರಿಯವರ (ಕೆಂಗಲ್ ಹನುಮಂತಯ್ಯ) ಮೇಲೆ ನ್ಯಾಯಾಂಗ ತನಿಖೆಗೂ ಕಾರಣವಾಗಿತ್ತು. ಆ ಯೋಜನೆಯ ಹೆಸರು ವಿಧಾನಸೌಧದ ನಿರ್ಮಾಣ!
ಇವತ್ತು ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕಾಮಗಾರಿಗಳ ಗುತ್ತಿಗೆ ಎಂದರೆ ಹಳೇ ಕಲ್ಲು– ಹೊಸ ಬಿಲ್ಲು ಎನ್ನುವ ಪರಿಸ್ಥಿತಿ ಇದೆ. ವಿಧಾನಸೌಧಕ್ಕೆ ಮೆತ್ತಿಕೊಂಡ ಮಸಿ ಇವತ್ತಿನವರೆಗೂ ಬಹುತೇಕ ಎಲ್ಲಾ ಯೋಜನೆಗಳಿಗೂ ಅಂಟಿಕೊಂಡೇ ಬಂದಿದೆ. ನಮ್ಮ ರಾಜ್ಯದ ಹಲವಾರು ಬೃಹತ್ ಯೋಜನೆಗಳು ಭ್ರಷ್ಟಾಚಾರದ ಸ್ಮಾರಕಗಳಾಗಿ ನಿಂತಿವೆ. ಬೆಂಗಳೂರಂತೂ ಇಂತಹ ಭ್ರಷ್ಟಾಚಾರದ ಸ್ಮಾರಕಗಳ ಮ್ಯೂಸಿಯಂ ಆಗಿ ಪರಿವರ್ತನೆಗೊಂಡಿದೆ. ಹುಬ್ಬಳ್ಳಿಯ ಬಿಆರ್ಟಿಎಸ್, ಮಂಗಳೂರು, ದಾವಣಗೆರೆ, ತುಮಕೂರು, ಮೈಸೂರುಗಳ ಸ್ಮಾರ್ಟ್ಸಿಟಿ ಯೋಜನೆಗಳು ಅಯಾಯ ಊರಿನ ಚಂದವನ್ನು ಹಾಳು ಮಾಡಿದ್ದಲ್ಲದೇ, ಜನರಿಗಿಂತ ಹೆಚ್ಚಾಗಿ ಗುತ್ತಿಗೆದಾರರಿಗೆ/ರಾಜಕಾರಣಿಗಳಿಗೆ ಉಪಯೋಗಕಾರಿಯಾದ ಯೋಜನೆಗಳಾಗಿವೆ.
ಕಳೆದ ಕೆಲವೇ ತಿಂಗಳುಗಳಲ್ಲಿ ಕಳಪೆ ಮತ್ತು ಗುಂಡಿ ತುಂಬಿದ ರಸ್ತೆಗಳಿಂದಾಗಿ ಬರೀ ಬೆಂಗಳೂರು ಒಂದರಲ್ಲೇ ಪ್ರಾಣ ತೆತ್ತವರು 9 ಮಂದಿ. ಮಾಧ್ಯಮಗಳಲ್ಲಿ ಸುದ್ದಿಯಾಗದೇ ಬಲಿಯಾದವರು ಇನ್ನೆಷ್ಟೋ! ಐದು ವರ್ಷಗಳಲ್ಲಿ ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಿದ ನಂತರವೂ (ಸರಿಸುಮಾರು ದಿನವೊಂದಕ್ಕೆ ಹನ್ನೊಂದು ಕೋಟಿ ರೂಪಾಯಿಗಳ ಅಂದಾಜು ವೆಚ್ಚ) ರಾಜ್ಯದ ರಾಜಧಾನಿ, ಜಗತ್ತಿನ ಐಟಿ ಪ್ರಪಂಚದ ತವರುಮನೆ ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಲ್ಲದ ಒಂದೇ ಒಂದು ಕಿಮೀ ರಸ್ತೆ ಇಲ್ಲವೆಂದರೆ, ನಮ್ಮ ರಾಜ್ಯ ತಲುಪಿರುವ ಕೆಟ್ಟ ಸ್ಥಿತಿಯ ಬಗ್ಗೆ ಯೋಚನೆ ಮಾಡಲೇಬೇಕಿದೆ.
ಎಸ್.ಎಂ.ಕೃಷ್ಣರವರ ನೇತೃತ್ವದ ಸರ್ಕಾರ ಬಂದ ಹೊಸತರಲ್ಲಿ, ಟೆಂಡರ್ ಅವ್ಯವಹಾರಗಳನ್ನು ತಡೆಯಲು ಮತ್ತು ಪಾರದರ್ಶಕತೆ ಮೂಡಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ 1999 (ಕೆಟಿಪಿಪಿ) ಜಾರಿಗೆ ತಂದಿತ್ತು. ಆ ಕಾಯ್ದೆಯನ್ನು ಜಾರಿಗೆ ತಂದ ಎಸ್.ಎಂ.ಕೃಷ್ಣರವರ ಸರ್ಕಾರವೇ ಈ ಕಾಯ್ದೆಗೆ ಎರಡು ಬಾರಿ ತಿದ್ದುಪಡಿ ಮಾಡಿತ್ತು. ಇಂದಿನವರೆಗೆ ಒಟ್ಟು ಆರು ಬಾರಿ ತಿದ್ದುಪಡಿಗೊಂಡಿರುವ ಈ ಕಾಯ್ದೆ ಈಗ ಬೀಜವಿಲ್ಲದ ಕಡಲೇಕಾಯಿಯಂತಾಗಿದೆ.
ಗುತ್ತಿಗೆದಾರರು ಎಂದರೆ ಸಾರ್ವಜನಿಕ ವಲಯದಲ್ಲಿ ಅಂತಹ ಒಳ್ಳೆಯ ಅಭಿಪ್ರಾಯವೇನೂ ಇಲ್ಲ. ಆದರೆ ಯಾವುದೇ ಪ್ರಾಮಾಣಿಕ ಗುತ್ತಿಗೆದಾರ ಕಳಪೆ ಕಾಮಗಾರಿಯನ್ನು ಮಾಡಿ ತನ್ನ ಹೆಸರು ಹಾಳುಮಾಡಿಕೊಂಡು ತನ್ನ ಅನ್ನಕ್ಕೆ ತಾನೇ ಕಲ್ಲು ಹಾಕಿಕೊಳ್ಳಲಾರ.
ಇವತ್ತು ಹಣ ಮಾಡುವುದಕ್ಕಾಗಿಯೇ ರಾಜಕೀಯಕ್ಕೆ ಬಂದವರಿಗೆ ಲೂಟಿಯ ಹೊರತಾಗಿ ಬೇರೇನೂ ಉದ್ದೇಶವಿರುವುದಿಲ್ಲ. ದೂರದೃಷ್ಟಿ, ಜನಪರ ಯೋಜನೆಗಳ ಬಗ್ಗೆ ಇಂತಹ ರಾಜಕಾರಣಿಗಳಿಂದ ಯಾವುದೇ ನಿರೀಕ್ಷೆಯೂ ಇರುವುದಿಲ್ಲ. ಕೋಟ್ಯಂತರ ರೂಪಾಯಿಗಳ ಪಾರ್ಟಿ ಫಂಡ್ ಕೊಟ್ಟು, ಹತ್ತಾರು ಕೋಟಿ ಚೆಲ್ಲಿ ಚುನಾವಣೆ ಗೆಲ್ಲುವ ರಾಜಕಾರಣಿ ತಾನು ಮಾಡಿದ ಖರ್ಚನ್ನು ಹಿಂದೆಗೆಯುವುದನ್ನೇ ಯೋಚಿಸುತ್ತಾನೆ. ಈ ಉದ್ದೇಶಕ್ಕೆ ನೆರವಾಗುವ ಗುತ್ತಿಗೆದಾರರಿಗೆ ತನ್ನ ಕ್ಷೇತ್ರದ ಕಾಮಗಾರಿಗಳ ಗುತ್ತಿಗೆ ದೊರೆಯುವಂತೆ ಮಾಡುತ್ತಾನೆ. ರಾಜಕಾರಣಿಗಳ ಸಖ್ಯವೊಂದೇ ಅರ್ಹತೆಯಾಗಿರುವ ಇಂತಹ ಕೆಲವು ಗುತ್ತಿಗೆದಾರರಿಂದಾಗಿ ಪ್ರಾಮಾಣಿಕ ಗುತ್ತಿಗೆದಾರರೂ ಕುಖ್ಯಾತಿಯ ಮಸಿ ಹೊತ್ತುಕೊಂಡು ತಿರುಗಾಡುವಂತಾಗಿದೆ. ಈ ಕಾರಣಗಳಿಂದಾಗಿಯೇ ಮೊನ್ನೆಯಷ್ಟೇ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ನೇರವಾಗಿ ಶಾಸಕರು ಮತ್ತು ಸಂಸದರ ಮೇಲೆ 40% ಕಮೀಷನ್ ಆರೋಪ ಮಾಡಿತ್ತು.
ಕರ್ನಾಟಕ ರಾಜ್ಯ ಕೆಲವೇ ಕೆಲವು ಗುತ್ತಿಗೆದಾರರ ಹಿಡಿತದಲ್ಲಿದೆಯೇ ಎಂಬುದನ್ನು ಅರಿಯಲು ಹೆಚ್ಚು ಕಷ್ಟಪಡಬೇಕಿಲ್ಲ; ಕೇವಲ ದಿನಪತ್ರಿಕೆಗಳನ್ನು ಓದುವ ಹವ್ಯಾಸವಿದ್ದರಷ್ಟೇ ಸಾಕು! ಇತ್ತೀಚಿನ ಇಪ್ಪತ್ತು ವರ್ಷಗಳಲ್ಲಿ ಬೃಹತ್ ಯೋಜನೆಗಳು ಯಾರಯಾರ ಪಾಲಾಗಿವೆ; ಇಂತಹ ಯೋಜನೆಗಳ ಸರ್ಕಾರಿ ಟೆಂಡರ್ಗಳಲ್ಲಿ ಬಿಡ್ ಮಾಡುವವರು ಯಾರುಯಾರು ಎಂಬುದನ್ನು ಗಮನಿಸಿದರಷ್ಟೇ ಸಾಕು!
ಸರ್ಕಾರ ಮತ್ತು ಕೆಲವೊಂದು ಗುತ್ತಿಗೆ ಸಂಸ್ಥೆಗಳ ಮಾಫಿಯಾದ ಗುಪ್ತ ಒಪ್ಪಂದಗಳಿಂದಾಗಿ ಜನ ಹೈರಾಣಾಗುತ್ತಿದ್ದಾರೆ. ಕೆಟಿಪಿಪಿ ಕಾಯ್ದೆ ಇರುವುದೇ ಉಲ್ಲಂಘಿಸುವುದಕ್ಕಾಗಿ ಎಂದು ನಂಬಿಕೊಂಡಿರುವ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಗುತ್ತಿಗೆ ಪಡೆದು ಸರಿಯಾದ ರೀತಿಯಲ್ಲಿ ಕೆಲಸ ಮಾಡುವ ಗುತ್ತಿಗೆದಾರರನ್ನು, ತಮ್ಮ ಮರ್ಜಿಗೆ ಕುಣಿಯದ ಗುತ್ತಿಗೆದಾರರನ್ನು ಶೋಷಿಸುವ ಅಭ್ಯಾಸವಿಟ್ಟುಕೊಂಡಿದ್ದಾರೆ. ಸುಮಾರು 175 ವರ್ಷಗಳ ಇತಿಹಾಸ ಹೊಂದಿರುವ, ಗುಣಮಟ್ಟದ ಕಾಮಗಾರಿಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಭಾರತೀಯ ನಿರ್ಮಾಣ ಸಂಸ್ಥೆಯೊಂದು ಪಿಪಿಪಿ ಮಾದರಿಯಲ್ಲಿ ಬೆಂಗಳೂರಿನ ರಸ್ತೆದೀಪಗಳ ಅಭಿವೃದ್ಧಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿತ್ತು. ಆದರೆ ಜನಪ್ರತಿನಿಧಿಗಳ ತಾಳಕ್ಕೆ ತಕ್ಕನಾಗಿ ಕುಣಿಯದ ಕಾರಣಕ್ಕಾಗಿ ಈಗ ಯೋಜನೆಯನ್ನೇ ಕೈ ಬಿಡುವ ಹಂತಕ್ಕೆ ತಲುಪಿದೆ.
ಇದು ಕೇವಲ ಒಂದು ಉದಾಹರಣೆಯಷ್ಟೇ. ಇಂತಹ ಉದಾಹರಣೆಗಳು ಸಾವಿರಾರಿವೆ.
ಕರ್ನಾಟಕದ ಇಂತಹ ಸ್ಥಿತಿಗೆ ವ್ಯತಿರಿಕ್ತವಾಗಿ ದೆಹಲಿಯಲ್ಲಿ, ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ರಾಜ್ಯ ಸರ್ಕಾರವು ಅನುಮೋದನೆಗೊಂಡಿದ್ದ ಮೊತ್ತಕ್ಕಿಂತಲೂ ಕಮ್ಮಿ ಮೊತ್ತಕ್ಕೆ ಹಾಗೂ ನಿಗದಿತ ಸಮಯಕ್ಕಿಂತಲೂ ಬೇಗ ಯೋಜನೆಗಳನ್ನು ಪೂರ್ಣಗೊಳಿಸಿ ಒಳ್ಳೆಯ ರಾಜಕಾರಣಕ್ಕೆ, ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವುದಕ್ಕೆ ಮೇಲ್ಪಂಕ್ತಿ ಹಾಕಿದೆ.
ಉದಾಹರಣೆಗೆ ಹೇಳುವುದಾದಲ್ಲಿ, ದೆಹಲಿಯ ಆಜಾದ್ಪುರ ಮತ್ತು ಪ್ರೇಮ್ಬರಿ ಪುಲ್ ನಡುವಿನ ಆರು ಪಥಗಳ ಎಲಿವೇಟೆಡ್ ಕಾರಿಡಾರ್ ರೂ.245 ಕೋಟಿಗಳಿಗೆ ಅನುಮೋದನೆಗೊಂಡಿತ್ತು. ಆದರೆ ದೆಹಲಿಯ ಲೋಕೋಪಯೋಗಿ ಇಲಾಖೆ ಈ ಯೋಜನೆಯನ್ನು ಕೇವಲ ರೂ.147 ಕೋಟಿಗಳ ವೆಚ್ಚದಲ್ಲಿ ನಿಗದಿತ ಅವಧಿಗಿಂತ ಆರೂವರೆ ತಿಂಗಳುಗಳ ಮೊದಲೇ ಮುಗಿಸಿ ಸುಮಾರು ರೂ.100 ಕೋಟಿಗಳಷ್ಟು ಹಣವನ್ನು ಉಳಿಸಿತ್ತು.
ಇದು ದೆಹಲಿಯಲ್ಲಿ ಸಾಧ್ಯವಾಗುವುದಾದರೆ ಕರ್ನಾಟಕದಲ್ಲೂ ಸಾಧ್ಯವಾಗಬೇಕಲ್ಲ?
ಇಲ್ಲಿ ಸರ್ಕಾರಗಳು ಬದಲಾದರೂ ಪರಿಸ್ಥಿತಿ ಬದಲಾಗದು; ಕಾರಣ ಇಲ್ಲಿ ಮೂರೂ ಪ್ರಮುಖ ಪಕ್ಷಗಳ ಝಂಡಾ ಬೇರೆ; ಅಜೆಂಡಾ ಒಂದೇ. ಯಾವುದೇ ಸರ್ಕಾರಿ ಯೋಜನೆಗೆ ಬಳಸಲ್ಪಡುವುದು ರಾಜ್ಯದ ಜನರು ಬೆವರು ಸುರಿಸಿ ಪಾವತಿಸಿದ ತೆರಿಗೆ ಹಣ. ಈ ಹಣದ ಮೇಲೆ ಸರ್ಕಾರಕ್ಕೆ ಇರುವಷ್ಟೇ ಜವಾಬ್ದಾರಿ ಜನರ ಮೇಲೆಯೂ ಇದೆ. ತನ್ನ ತೆರಿಗೆಯ ಹಣ ಪೆೀಲಾಗದಂತೆ ನೋಡಿಕೊಳ್ಳುವುದು, ತಪ್ಪನ್ನು ಪ್ರಶ್ನಿಸಬೇಕಿರುವುದು ನಾಗರಿಕನ ಜವಾಬ್ದಾರಿ. ನಾಗರಿಕರು ಜಾಗೃತರಾಗದ ಹೊರತು, ಈ ಲೂಟಿ ನಿಲ್ಲಲಾರದು.
*ಲೇಖಕರು ಮೂಲತಃ ಬೆಳ್ತಂಗಡಿಯವರು; 12 ವರ್ಷ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಸೇವೆ, ಪ್ರಸ್ತುತ ಬೆಂಗಳೂರಿನಲ್ಲಿ ಗೃಹಾಲಂಕಾರ ವಸ್ತುಗಳ ಸ್ವಂತ ಉದ್ಯಮ, ಜೊತೆಗೆ ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಜಂಟಿ ಕಾರ್ಯದರ್ಶಿ.