ಮೌಢ್ಯಮಾಪನ: ನಿಲುವು ಸ್ಪಷ್ಟವಾಗಿರಲಿ

ಭಾರತ ಬಹುಸಂಸ್ಕೃತಿಯ ದೇಶ. ಇಲ್ಲಿ ಹತ್ತಾರು ಮತ ಪಂಥಗಳು, ಸಂಪ್ರದಾಯಗಳು, ರೀತಿ ರಿವಾಜುಗಳು ಇವೆ. ಮೂಢನಂಬಿಕೆ ನಿಷೇಧ ಕಾನೂನು ಈ ಎಲ್ಲ ಮತ ಸಂಪ್ರದಾಯಗಳಲ್ಲಿನ ಮೌಢ್ಯವನ್ನು ಚರ್ಚಿಸಬೇಕಾಗುತ್ತದೆ. ಏಕರೂಪದ ಕಾನೂನಿಗೆ ಮನ್ನಣೆ ಹೆಚ್ಚು. ಕೇವಲ ಒಂದು ಮತ ಅಥವಾ ಪಂಥದ ಆಚರಣೆಗಳನ್ನಷ್ಟೇ ನಿಕಷಕ್ಕೆ ಒಡ್ಡಿದರೆ, ಆ ಪ್ರಕ್ರಿಯೆಯನ್ನು ರಾಜಕೀಯ ಪಕ್ಷಗಳು ಸ್ವಹಿತಾಸಕ್ತಿಗೆ, ಮತಬ್ಯಾಂಕಿನ ಧ್ರುವೀಕರಣಕ್ಕೆ ಬಳಸಿಕೊಳ್ಳುತ್ತವೆ.

ಸುಧೀಂದ್ರ ಬುಧ್ಯ

ಇದು ಕೇವಲ ಭಾರತಕ್ಕಷ್ಟೇ ಸೀಮಿತವಾದ ಸಂಗತಿಯಲ್ಲ. ಜಗತ್ತಿನ ಎಲ್ಲ ದೇಶಗಳಲ್ಲೂ, ಎಲ್ಲ ಬಗೆಯ ಜನರಲ್ಲೂ ಅವರವರ ನಂಬಿಕೆಗಳ ಜೊತೆ ಒಂದಿಷ್ಟು ಮೌಢ್ಯ ಬೆರೆತುಹೋಗಿದೆ. ವಿಜ್ಞಾನದ ಪರಿಧಿಯಲ್ಲಿ ವ್ಯಾಖ್ಯಾನಿಸಲಾಗದ ಆಚರಣೆಗಳು ಸೇರಿಹೋಗಿವೆ. ನಂಬಿಕೆ ಮತ್ತು ಮೂಢನಂಬಿಕೆ ಎಂದು ಈ ಆಚರಣೆಗಳನ್ನು ವಿಂಗಡಿಸುವ ಕೆಲಸವೇ ಕಷ್ಟದ್ದು. ವಿಜ್ಞಾನ ಎಂಬ ಅಳತೆಗೋಲು ಹಿಡಿದು ಮೂಢನಂಬಿಕೆಗಳನ್ನು ಪಟ್ಟಿ ಮಾಡಲು ಹೊರಟರೆ ಅಲ್ಲೂ ಸಮಸ್ಯೆ ಎದುರಾಗುತ್ತದೆ.

ವಿಜ್ಞಾನ ವಲಯದಲ್ಲಿ ಉನ್ನತ ಸಾಧನೆಗಳನ್ನು ಮಾಡಿದ ಹಲವು ವಿಜ್ಞಾನಿಗಳು ಒಂದಿಲ್ಲೊಂದು ನಂಬಿಕೆಗೆ ಬದ್ಧರಾಗಿ ನಡೆದುಕೊಂಡ ಹಲವು ಉದಾಹರಣೆಗಳು ಸಿಗುತ್ತವೆ. ಉಪಗ್ರಹದ ಪ್ರತಿರೂಪಗಳನ್ನು ದೇವರ ಎದುರಿಟ್ಟು ವಿಜ್ಞಾನಿಯೇ ಕೂತು ಪೂಜಿಸಿದ್ದು, ಅದೃಷ್ಟದ ಸಂಖ್ಯೆಯೊಂದನ್ನು ಉಡ್ಡಯನ ನೌಕೆಗೆ ಬಳಸಿದ್ದು, ಇಂತಹದೇ ವಾರ, ಇಷ್ಟು ಗಂಟೆಗೇ ಪ್ರಯೋಗ ನಡೆಯಬೇಕು ಎಂದು ಹಟಹಿಡಿದದ್ದು, ಉಡ್ಡಯನದ ಸಮಯದಲ್ಲಿ ಕೈಗಳಿಗೆ ಕಂಕಣ ಕಟ್ಟಿಕೊಂಡದ್ದು ಶತಮಾನಗಳಷ್ಟು ಹಿಂದೆಯೇನು ಅಲ್ಲ. ಈ ಎಲ್ಲ ಸುದ್ದಿಗಳನ್ನು ನಾವು ಓದಿದ್ದೇವೆ, ಅಚ್ಚರಿ ಪಟ್ಟಿದ್ದೇವೆ ಮತ್ತು ನಂಬಿಕೆ ದೊಡ್ಡದು ಎಂದು ಸುಮ್ಮನಾಗಿದ್ದೇವೆ.

ರಷ್ಯಾ, ಚೀನಾ ಮತ್ತು ಅಮೆರಿಕದ ವಿಜ್ಞಾನಿಗಳಲ್ಲಿ ಇಂತಹ ನಂಬಿಕೆಗಳಿಲ್ಲ ಎನ್ನುವಂತಿಲ್ಲ. ಅಲ್ಲೂ ವಿಚಿತ್ರ ನಡವಳಿಕೆಗಳು, ಆಚರಣೆಗಳು ವಿಜ್ಞಾನವಲಯದಲ್ಲಿದೆ. ಈ ಯಾವುದೂ ವೈಜ್ಞಾನಿಕ ವಿಶ್ಲೇಷಣೆಗೆ ದಕ್ಕುವುದಿಲ್ಲ ಮತ್ತು ಅರ್ಥಹೀನ ಎಂದೇ ಅನಿಸುತ್ತವೆ. ಹಾಗಾದರೆ ಇದನ್ನು ಮೌಢ್ಯ ಎಂದು ಕರೆದು ಕಾನೂನಿನ ಮೂಲಕ ನಿಷೇಧಿಸಬಹುದೇ? ಭಾಗಿಯಾದವರನ್ನು ಮತ್ತು ಪೆÇ್ರೀತ್ಸಾಹಿಸುವವರನ್ನು ಶಿಕ್ಷಿಸಬಹುದೇ? ವಿಷಯ ಅಷ್ಟು ಸುಲಭದ್ದಲ್ಲ.

ಪ್ರಗತಿಯತ್ತ ಹೆಜ್ಜೆಯಿಡುವ ಯಾವುದೇ ಸಮಾಜಕ್ಕೆ ವೈಜ್ಞಾನಿಕ ದೃಷ್ಟಿ ಅತ್ಯಗತ್ಯ. ಅದು ಕಾಲಕಾಲಕ್ಕೆ ತನ್ನ ಅಂಧಶ್ರದ್ಧೆಯನ್ನು ಬಿಟ್ಟುಕೊಡಬೇಕಾಗುತ್ತದೆ. ಜೊಳ್ಳನ್ನು ತೂರಿ ಕಾಳನ್ನು ಹಿಡಿದುಕೊಳ್ಳಬೇಕಾಗುತ್ತದೆ. ಅಪಾಯಕಾರಿ ಮತ್ತು ಅಮಾನವೀಯ ಆಚರಣೆಗಳನ್ನು, ಶೋಷಣೆಯ ರೀತಿ ರಿವಾಜುಗಳನ್ನು ತ್ಯಜಿಸಬೇಕಾಗುತ್ತದೆ. ನಂಬಿಕೆಯ ಹೆಸರಿನಲ್ಲಿ ಆಗುವ ಮಾನವ ಹಕ್ಕು ಉಲ್ಲಂಘನೆ, ನಿರ್ದಿಷ್ಟ ವರ್ಗದ ಜನರ ಮೇಲಿನ ದೌರ್ಜನ್ಯ ಅಕ್ಷಮ್ಯ ಎಂಬುದನ್ನು ಅರಿಯಬೇಕಾಗುತ್ತದೆ. ಸಮಾಜಕ್ಕೆ ಅರಿವು ಉಂಟಾಗದಿದ್ದಾಗ, ಪಟ್ಟಭದ್ರರ ಸ್ವಹಿತಾಸಕ್ತಿಯ ಕಾರಣಕ್ಕೆ ಇಂತಹ ಆಚರಣೆಗಳು ಮುಂದುವರಿದಾಗ ಕಾನೂನಾತ್ಮಕ ಕ್ರಮಗಳು ಅನಿವಾರ್ಯವಾಗುತ್ತವೆ. ಆದರೆ ಇಂತಹ ವಿಷಯದಲ್ಲಿ ಕಾನೂನು ತರಲು ಹೊರಟಾಗ ಎಚ್ಚರಿಕೆಯ ಹೆಜ್ಜೆ ಇಡಬೇಕು. ಕಾನೂನು ರೂಪಿಸುವ ಕೆಲಸ ಪಾರದರ್ಶಕವಾಗಿ ನಡೆಯಬೇಕು.

ತಜ್ಞರ, ವಿಷಯ ಪರಿಣತರ, ಸಾಮಾಜಿಕ ಕಾರ್ಯಕರ್ತರ, ಮತೀಯ ಮುಖಂಡರ ಅಭಿಪ್ರಾಯಗಳನ್ನು ಆಲಿಸಿ, ತರ್ಕಿಸಿ ಯಾವೆಲ್ಲಾ ಆಚರಣೆಗಳು ನಿಷೇಧಕ್ಕೆ ಅರ್ಹ ಎಂಬುದನ್ನು ನಿರ್ಣಯಿಸಬೇಕು. ಒಳಗೊಳ್ಳುವಿಕೆ ಇಲ್ಲದ ಯಾವುದೇ ಪ್ರಕ್ರಿಯೆ ಹೇರಲ್ಪಟ್ಟದ್ದು ಎನಿಸಿಕೊಳ್ಳುತ್ತದೆ. ಸೈದ್ಧಾಂತಿಕ ನಿಲುವುಗಳಿಗೆ ಪ್ರಾಧಾನ್ಯ ನೀಡಿ ಏಕದೃಷ್ಟಿಯಿಂದ ಮಂಡಿಸಲಾಗುವ ಯಾವುದೇ ಪ್ರಸ್ತಾವನೆ, ಸಂಶಯ ಮತ್ತು ಅಪಪ್ರಚಾರಕ್ಕೆ ಎಡೆಮಾಡಿಕೊಡುತ್ತದೆ. ಮೂಲ ಆಶಯ ಕುಸಿದು ಬೀಳುತ್ತದೆ.

ಹಾಗೆ ನೋಡಿದರೆ ಭಾರತ ಬಹುಸಂಸ್ಕೃತಿಯ ದೇಶ. ಇಲ್ಲಿ ಹತ್ತಾರು ಮತ ಪಂಥಗಳು, ಸಂಪ್ರದಾಯಗಳು, ರೀತಿ ರಿವಾಜುಗಳು ಇವೆ. ಮೂಢನಂಬಿಕೆ ನಿಷೇಧ ಕಾನೂನು ಈ ಎಲ್ಲ ಮತ ಸಂಪ್ರದಾಯಗಳಲ್ಲಿನ ಮೌಢ್ಯವನ್ನು ಚರ್ಚಿಸಬೇಕಾಗುತ್ತದೆ. ಏಕರೂಪದ ಕಾನೂನಿಗೆ ಮನ್ನಣೆ ಹೆಚ್ಚು. ಕೇವಲ ಒಂದು ಮತ ಅಥವಾ ಪಂಥದ ಆಚರಣೆಗಳನ್ನಷ್ಟೇ ನಿಕಷಕ್ಕೆ ಒಡ್ಡಿದರೆ, ಆ ಪ್ರಕ್ರಿಯೆಯನ್ನು ರಾಜಕೀಯ ಪಕ್ಷಗಳು ಸ್ವಹಿತಾಸಕ್ತಿಗೆ, ಮತಬ್ಯಾಂಕಿನ ಧ್ರುವೀಕರಣಕ್ಕೆ ಬಳಸಿಕೊಳ್ಳುತ್ತವೆ. ಈ ಹಿಂದೆ ಕರ್ನಾಟಕದಲ್ಲಿ ಆದದ್ದು ಅದೆ.

ನಿಮಗೆ ನೆನಪಿರಬಹುದು, 2013ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವ ಅಧ್ಯಯನ ಕೇಂದ್ರದ ಒಂದು ಸಮಿತಿ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕದ ಕರಡನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತ್ತು ಮತ್ತು ಅದರ ಬೆನ್ನಲ್ಲೇ ವಿವಾದವೊಂದು ಎದ್ದಿತು. ಪರ ವಿರೋಧದ ಚರ್ಚೆಗಳು ನಡೆದವು. ತಲತಲಾಂತರಗಳಿಂದ ಬಂದ ಕೆಲವು ನಡವಳಿಕೆಗಳ ಬಗ್ಗೆ ಪ್ರಶ್ನೆಗಳೆದ್ದಾಗ ಮೊದಲಿಗೆ ಪ್ರತಿರೋಧ ಸಾಮಾನ್ಯವಾದರೂ ಆಗ ಎದ್ದ ವಿವಾದಕ್ಕೆ ರಾಜಕೀಯ ಆಯಾಮ ಇತ್ತು.

ಮೊದಲಿಗೆ ಆ ಸಮಿತಿಯ ಸಿಂಧುತ್ವ ಕುರಿತ ಪ್ರಶ್ನೆ ಎದ್ದಿತು. ಕರಡು ಸಲ್ಲಿಕೆಯಾಗಿ ವಿವಾದ ಉಂಟಾಗುತ್ತಿದ್ದಂತೆಯೇ ಸರ್ಕಾರದ ವಕ್ತಾರರು ಇದು ಸರ್ಕಾರ ನೇಮಿಸಿದ ಸಮಿತಿ ಅಲ್ಲವೆಂದೂ, ಕಾನೂನು ಶಾಲೆ ಸ್ವಯಂಸ್ಫೂರ್ತಿಯಿಂದ ಒಂದಷ್ಟು ವಿಷಯ ಪಟ್ಟಿಮಾಡಿ ಕೊಟ್ಟಿದೆಯೆಂದು ಹೇಳಿದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅಂದಿನ ಮುಖ್ಯಮಂತ್ರಿ ಅವರು ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ, ಮೌಢ್ಯ ನಿಷೇಧ ಕಾನೂನು ತರುವ ಬಯಕೆ ಇದೆ ಮತ್ತು ಕಾನೂನು ಶಾಲೆಗೆ ಕರಡು ಸಿದ್ಧಪಡಿಸಿಕೊಡಲು ಹೇಳಿದ್ದೇವೆ ಎಂದರು. ಹಾಗಾದರೆ ಈ ಕರಡು ಸಲ್ಲಿಕೆ ಸರ್ಕಾರದ ಮೌಖಿಕ ಆದೇಶದಂತೆ ನಡೆಯಿತೇ ಎಂಬ ಪ್ರಶ್ನೆ ಎದ್ದಿತು. ಜೊತೆಗೆ ಆ ವಿಧೇಯಕದ ಕರಡು ಕೇವಲ ಹಿಂದೂಗಳ ಧಾರ್ಮಿಕ ಆಚರಣೆಯಲ್ಲಿನ ಮೌಢ್ಯಗಳನ್ನಷ್ಟೇ ಎತ್ತಿ ಹೇಳಿದ್ದರಿಂದ ಅದರ ಉದ್ದೇಶ ಶುದ್ಧಿಯ ಕುರಿತ ಪ್ರಶ್ನೆಗಳು ಎದ್ದವು.

ಆ ಪ್ರಸ್ತಾವನೆ ನರಬಲಿ, ಹಿಂಸಾತ್ಮಕ ಭೂತೋಚ್ಚಾಟನೆ, ಭಾನಾಮತಿ, ಮಾಟಮಂತ್ರ, ದೇವದಾಸಿ ಪದ್ಧತಿ ಇತ್ಯಾದಿ ಮಾನವ ಘನತೆಯನ್ನು ಕುಂದಿಸುವ, ಪ್ರಾಣಹಾನಿಗೆ ಕಾರಣವಾಗುವ, ಅಮಾನವೀಯ ಆಚರಣೆಗಳು ಶಿಕ್ಷಾರ್ಹ ಅಪರಾಧವಾಗಬೇಕು ಎಂದಷ್ಟೇ ಹೇಳಿದ್ದರೆ ಆ ಬಗ್ಗೆ ಯಾರ ಅಪಸ್ವರವೂ ಇರುತ್ತಿರಲಿಲ್ಲ. ಪ್ರಾಣಿಬಲಿ, ಮಡೆಸ್ನಾನ, ಪಂಕ್ತಿಭೇದವನ್ನು ಪಟ್ಟಿಗೆ ಸೇರಿಸಿದ್ದರೂ ಸಣ್ಣಪುಟ್ಟ ಚರ್ಚೆಯಾಗಿ ದೊಡ್ಡ ಮಟ್ಟದ ಪ್ರತಿರೋಧ ಬರುತ್ತಿರಲಿಲ್ಲ. ಆ ವಿಧೇಯಕದ ತಿರುಳಿನಲ್ಲಿ ಈ ಮುಖ್ಯ ಅಂಶಗಳೇ ಇತ್ತಾದರೂ, ಅದಕ್ಕೆ ಪೂರಕವಾಗಿ ನೀಡಲಾಗಿದ್ದ ಪರಿಕಲ್ಪನಾತ್ಮಕ ಟಿಪ್ಪಣಿ ಚರ್ಚೆಯ ಹಾದಿಯನ್ನು ತಪ್ಪಿಸಿತ್ತು. ಈ ಟಿಪ್ಪಣಿಗಳು ಕೇವಲ ಚರ್ಚೆಯ ವೇಳೆ ಉಲ್ಲೇಖವಾದವು ಮತ್ತು ಕಾನೂನಿನ ಭಾಗವಾಗುವಂತಹದ್ದಲ್ಲ ಎಂಬುದನ್ನು ಹೇಳಿದ ಮೇಲೂ ಆ ಟಿಪ್ಪಣಿಯ ಕುರಿತೇ ಹೆಚ್ಚು ಚರ್ಚೆ ನಡೆಯಿತು.

ಆ ವಿಧೇಯಕದ ತಾತ್ವಿಕ ಆಶಯ ಮತ್ತು ವ್ಯಾಪ್ತಿಯನ್ನು ವಿವರಿಸುತ್ತಾ ಹೀಗೆ ಹೇಳಲಾಗಿತ್ತು. `ಸುಶಿಕ್ಷಿತರೆನ್ನಿಸಿಕೊಂಡವರಲ್ಲಿ ಕಂದಾಚಾರ ಕಡಿಮೆಯಾಗಿ ವೈಜ್ಞಾನಿಕ ಮನೋಭಾವ ಹೆಚ್ಚಾಗುವ ಬದಲು ಮೌಢ್ಯವೇ ಮನೆ ಮಾಡಿದೆ. ಸರ್ಕಾರಿ ಕಚೇರಿಗಳಲ್ಲಿ ಪೂಜೆ ಪುನಸ್ಕಾರ ನಡೆಸುವ, ಸರ್ಕಾರಿ ಕಟ್ಟಡಗಳನ್ನು ಕಟ್ಟಲು ಗುದ್ದಲಿ ಪೂಜೆ ಮಾಡಿಸುವ, ವಿಧಾನಸೌಧ, ವಿಕಾಸಸೌಧಗಳಂತಹ ಸಾರ್ವಜನಿಕ ಕಟ್ಟಡಗಳಲ್ಲಿರುವ ಕೊಠಡಿಗಳನ್ನು ವಾಸ್ತುದೋಷ ನಿವಾರಣೆಯ ಹೆಸರಿನಲ್ಲಿ ಮನಬಂದಂತೆ ಬದಲಿಸಿ ಕಟ್ಟುವ ಮೂಢಮತಿಗಳಿದ್ದಾರೆ‘. ಇಲ್ಲಿ ವಿಧಾನಸೌಧದಂತಹ ಸರ್ಕಾರಿ ಕಟ್ಟಡಗಳನ್ನು ವಾಸ್ತುವಿನ ಹೆಸರಿನಲ್ಲಿ ಮನಬಂದಂತೆ ಒಡೆಯುವ, ಮಾರ್ಪಾಡು ಮಾಡುವ ಅಂಶಗಳು ಆಕ್ಷೇಪಾರ್ಹವೇ ಆದರೂ ಅದನ್ನು ಆಡಳಿತಾತ್ಮಕ ಆದೇಶದ ಮೂಲಕವೂ, ವಿಧಾನಸಭೆಯಲ್ಲಿ ಒಮ್ಮತದ ನಿರ್ಣಯ ಅಂಗೀಕರಿಸುವ ಮೂಲಕವೂ ಮಾಡಬಹುದಾಗಿತ್ತು. ಪೂಜೆ ಪುನಸ್ಕಾರಗಳ ವಿಷಯವನ್ನು ಮೂಢನಂಬಿಕೆಯ ಪ್ರತಿಬಂಧ ವಿಧೇಯಕದ ತಾತ್ವಿಕ ಆಶಯದಲ್ಲಿ ತಂದಿದ್ದು ಮೂಲವಿಷಯದ ಗಾಂಭಿರ್ಯವನ್ನು ಕೆಡಿಸಿತು.

ಅಷ್ಟಕ್ಕೂ ಸರ್ಕಾರಿ ಕಚೇರಿಗಳಲ್ಲಿ ಹಬ್ಬ ಮತ್ತು ಪೂಜೆ ಮಾಡಬಾರದು, ಸರ್ಕಾರಿ ಕಟ್ಟಡದ ನಿರ್ಮಾಣಕ್ಕೆ ಚಾಲನೆ ಕೊಡುವಾಗ ಗುದ್ದಲಿ ಪೂಜೆ ಮಾಡಬಾರದು ಅದು ಮೌಢ್ಯ ಎಂದು ವಿಚಾರ ಮಂಡಿಸಿದರೆ ಏನು ಹೇಳುವುದು? ಮನುಷ್ಯನ ಆಂತರ್ಯದಲ್ಲಿ ನಂಬಿಕೆಗಳಿರುತ್ತವೆ. ಯಾವುದೇ ವ್ಯಕ್ತಿ ಸರ್ಕಾರಿ ಕಚೇರಿಯಲ್ಲಿ ದುಡಿಯಲು ಬಂದಾಕ್ಷಣ ಯಂತ್ರವಾಗುವುದಿಲ್ಲ. ಸಹಜವಾಗಿ ಹೆಚ್ಚು ಜನರ ಭಾವನೆ, ಆಚರಣೆಗಳು ಸಾರ್ವತ್ರಿಕವಾಗುತ್ತವೆ. ಹಾಗಾಗಿ ಬದುಕಿನ ಸಂಭ್ರಮಗಳಾದ ಹಬ್ಬ, ಹರಿದಿನ, ಪೂಜೆಗಳು ಕಚೇರಿಯ ಆವರಣದಲ್ಲೂ ಪ್ರಕಟವಾಗುತ್ತವೆ.

ನಮ್ಮದು ಜಾತ್ಯಾತೀತ ರಾಷ್ಟ್ರ ಎನ್ನುವುದು ಇದನ್ನು ವಿರೋಧಿಸುವವರ ವಾದವಿರಬಹುದು. ಆದರೆ ಇಂತಹ ಆಚರಣೆಗಳು ಕೇವಲ ಭಾರತದಲ್ಲಿ ಮಾತ್ರವಲ್ಲ, ಎಲ್ಲ ದೇಶಗಳಲ್ಲೂ ಇದೆ. ಮುಸ್ಲಿಂ ರಾಷ್ಟ್ರಗಳಲ್ಲಿ ಅವರ ಆಚರಣೆಗಳು, ಕ್ರೈಸ್ಥರು ಬಹುಸಂಖ್ಯೆಯಲ್ಲಿರುವ ದೇಶದಲ್ಲಿ ಅವರ ಆಚರಣೆ ಮನೆ, ಕಚೇರಿಯೆನ್ನದೆ ಸಾರ್ವತ್ರಿಕವಾಗಿ ಪ್ರಕಟವಾಗುತ್ತದೆ. ಅಮೆರಿಕದಂತಹ ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ, ಎಲ್ಲ ಮತ ಪಂಥಗಳನ್ನು ಸಮಾನವಾಗಿ ಕಾಣುತ್ತೇವೆ ಎಂಬ ಆಶಯ ಹೊಂದಿರುವ ರಾಷ್ಟ್ರದಲ್ಲೂ ನವೆಂಬರ್ ತಿಂಗಳಿನಲ್ಲಿ ಬರುವ ಥ್ಯಾಂಕ್ಸ್ ಗೀವಿಂಗ್ ಡೇನಿಂದ ಡಿಸೆಂಬರ್ ಕೊನೆಯ ಕ್ರಿಸ್ಮಸ್ ವರೆಗೆ ಎಲ್ಲ ಸರ್ಕಾರಿ ಕಚೇರಿ, ಮಳಿಗೆ, ಸಾರ್ವಜನಿಕ ಸ್ಥಳ, ವಸತಿ ಸಮುಚ್ಛಯಗಳಲ್ಲಿ ಕ್ರಿಸ್ಮಸ್ ಟ್ರೀ ನಿಲ್ಲಿಸಿ, ದೀಪಾಲಂಕಾರ ಮಾಡಿ ಇಡೀ ತಿಂಗಳು ಸಂಭ್ರಮಿಸುತ್ತಾರೆ. ಇತರ ಮತೀಯರೂ ಆ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಆ ಮಾತ್ರಕ್ಕೆ ಅಮೆರಿಕ ಜಾತ್ಯಾತೀತ ತತ್ವವನ್ನು ಬಿಟ್ಟುಕೊಟ್ಟಿದೆ ಎನ್ನಲು ಸಾಧ್ಯವೇ? ಸಾರ್ವತ್ರಿಕ ಆಚರಣೆ ಮತ್ತು ಆಡಳಿತಾತ್ಮಕ ನಿಲುವನ್ನು ಬೇರೆಬೇರೆಯಾಗಿಯೇ ನೋಡಬೇಕು.

ಅದೇ ಪರಿಕಲ್ಪನಾತ್ಮಕ ಟಿಪ್ಪಣಿಯಲ್ಲಿ ಇನ್ನೂ ಕೆಲವು ಅಂಶಗಳಿದ್ದವು. `ಜಪಮಾಲೆ, ರುದ್ರಾಕ್ಷಿ, ಮಣಿಸರ, ಹರಳುಗಳು, ಶಕುನ ಗೊಂಬೆಗಳು ಮುಂತಾದವನ್ನು ಮಾರುವುದು, ಹಸ್ತಸಾಮುದ್ರಿಕೆ, ಜಾತಕ ಬರಹ, ಕುಂಡಲಿ, ಗೃಹಪುಣ್ಯವದನ ಮುಂತಾದ ಸೇವೆ ಒದಗಿಸುವವರು ಕೂಡ ಈ ಕಾನೂನಿನ ವ್ಯಾಪ್ತಿಗೆ ಬರುವಂತಾಗಬೇಕು. ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಯೋಜಿಸಲಾಗುವ ಪ್ರವಾಸಗಳನ್ನು ಮತಮೌಢ್ಯಗಳನ್ನು ಬಿತ್ತುವ ಧಾರ್ಮಿಕ ಕೇಂದ್ರಗಳನ್ನು ಹೊರತುಪಡಿಸಿದ ಐತಿಹಾಸಿಕ ಮಹತ್ವವುಳ್ಳ ಸ್ಥಳಗಳು, ನಿಸರ್ಗ ರಮಣೀಯ ತಾಣಗಳು ಮುಂತಾದ ಸ್ಥಳಗಳಿಗೆ ಮಾತ್ರ ಆಯೋಜಿಸುವಂತೆ ಶೈಕ್ಷಣಿಕ ಸುತ್ತೋಲೆಗಳನ್ನು ಹೊರಡಿಸಬೇಕುಎನ್ನಲಾಗಿತ್ತು.

ಆ ಕರಡು ಮುಖ್ಯ ಮಾನದಂಡವೆಂದು ಪರಿಗಣಿಸಿದ್ದ ಹಾನಿಕಾರಕ, ಶೋಷಣಾತ್ಮಕ, ಮಾನವನ ಘನತೆಗೆ ಕುಂದು ತರುವ ಎಂಬ ಯಾವ ಮಾಪನಕ್ಕೂ ಈ ಸಂಗತಿಗಳು ಸಲ್ಲುತ್ತಿರಲಿಲ್ಲ. ಹೀಗೆ ಪರಿಕಲ್ಪನಾತ್ಮಕ ಟಿಪ್ಪಣಿಯುದ್ದಕ್ಕೂ ಇದ್ದ ಇಂತಹ ಹಾದಿ ತಪ್ಪಿಸುವ ಸಂಗತಿಗಳು ವಿಧೇಯಕದ ಕರಡು ರೂಪಿಸುವ ಸಮಿತಿಯಲ್ಲಿದ್ದವರ ಸೈದ್ಧಾಂತಿಕ ನಿಲುವುಗಳನ್ನು, ಏಕಮುಖ ಚಿಂತನೆಯನ್ನು ಪ್ರಚುರ ಪಡಿಸುತ್ತಿತ್ತು. ಆ ಕಾರಣದಿಂದಲೇ ಅದು ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿತು.

ಮುಖ್ಯವಾಗಿ, ಯಾವುದೇ ಕೃತ್ಯ/ಆಚರಣೆ/ಸಂಗತಿಯನ್ನು ಕಾನೂನಿನ ಮೂಲಕ ನಿಗ್ರಹಿಸಬೇಕು ಎಂದಾದರೆ, ಮೊದಲಿಗೆ ಆ ಸಂಗತಿಯನ್ನು ಸ್ಪಷ್ಟವಾಗಿ ಗುರುತಿಸಬೇಕು. ಉದಾಹರಣೆಗೆ ಕಳ್ಳತನ, ಕೊಲೆ, ಹಲ್ಲೆ, ಮಾನಭಂಗ ಈ ಎಲ್ಲಕ್ಕೂ ಸ್ಪಷ್ಟ ವ್ಯಾಖ್ಯಾನವಿದೆ ಮತ್ತು ಏಕರೂಪತೆಯಿದೆ. ಆದರೆ ಮೂಢನಂಬಿಕೆ ಎನ್ನುವುದನ್ನು ಹಾಗೆ ವ್ಯಾಖ್ಯಾನಿಸಬಹುದೇ?

ವಿಜ್ಞಾನ ವಿವರಿಸುವ ಸಂಗತಿಗಳೂ ಅಂತಿಮ ಸತ್ಯವೇನಲ್ಲ ಎಂದು ವಿಜ್ಞಾನಿಗಳೇ ಒಪ್ಪಿಕೊಳ್ಳುತ್ತಾರೆ. ಅನೇಕ ವಿಜ್ಞಾನದ ಥಿಯರಿಗಳು ಕಾಲಾನುಕಾಲಕ್ಕೆ ಪ್ರಶ್ನಿಸಲ್ಪಟ್ಟು ಬದಲಾವಣೆಗೆ ಒಳಗಾಗಿದೆ. ಬೆಳಕು ಕಣಗಳ ರೂಪದಲ್ಲಿ ಪ್ರವಹಿಸುತ್ತದೆ ಎಂದು ಒಬ್ಬ ವಿಜ್ಞಾನಿಯೆಂದರೆ, ಮತ್ತೊಬ್ಬ ಬೆಳಕು ಅಲೆಗಳ ರೂಪದಲ್ಲಿ ಪ್ರವಹಿಸುತ್ತದೆ ಎನ್ನುತ್ತಾನೆ. ನೀನು ಯಾವ ತರ್ಕವಿಟ್ಟುಕೊಂಡು ಸಂಶೋಧಿಸಲು ಹೊರಡುತ್ತೀಯೋ ಫಲಿತಾಂಶವು ಹಾಗೇ ಸಿದ್ಧವಾಗುತ್ತದೆ ಎನ್ನುತ್ತಾನೆ ಮತ್ತೊಬ್ಬ. ಐನ್ ಸ್ಟೈನ್ ಥಿಯರಿಯನ್ನು ಪ್ರಶ್ನಿಸಿ, ಪುರಸ್ಕೃತರಾದ ಭಾರತದ ಪ್ರಖ್ಯಾತ ವಿಜ್ಞಾನಿ ಜಯಂತ್ ವಿಷ್ಣು ನಾರ್ಳೀಕರ್ `ವಿಜ್ಞಾನ ನಿಂತಿರುವುದೇ ಊಹೆಯ ಮೇಲೆ, ಅದು ಯಾವ ಕ್ಷಣದಲ್ಲಾದರೂ ಕುಸಿಯಬಹುದುಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಾಗಾಗಿ ವೈಜ್ಞಾನಿಕವಾಗಿ ಸಾಬೀತಾಗಬೇಕು ಎಂಬುದಷ್ಟೇ ಆಚರಣೆಗಳನ್ನು ನಿಷೇಧಿಸುವುದಕ್ಕೆ ಸಮರ್ಪಕ ಮಾನದಂಡವಲ್ಲ.

ವಿಜ್ಞಾನದ ಅಳತೆಗೋಲು ಹಿಡಿದಾಗ ನಂಬಿಕೆಗಳ ತಳಪಾಯವೇ ಕುಸಿಯುತ್ತದೆ. ದೇವರು ಪ್ರಶ್ನಾರ್ತಕ ಚಿಹ್ನೆಯಾಗುತ್ತಾನೆ. ಗ್ರಾಮಗಳಲ್ಲಿ ನಡೆಯುವ ಊರ ಹಬ್ಬ, ಕೊಂಡ, ಸಿಡಿ, ರಥೋತ್ಸವಗಳು, ದಕ್ಷಿಣ ಕನ್ನಡದ ಸಾಂಸ್ಕೃತಿಕ ಸೊಗಡೆನಿಸಿರುವ ಭೂತದ ಕೋಲ, ದೈವಾರಾಧನೆ, ನಾಗಾರಾಧನೆಯಂತಹ ಆಚರಣೆಗಳು, ಗ್ರಾಮೀಣ ಸೊಗಡಿನ ಕಣಿ ಹೇಳುವುದು, ಗುಂಜಪ್ಪ, ಬುಡುಬುಡಿಕೆ ಸಿದ್ಧರ ಮಾತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರದ ಉಪಾಸನೆಗಳು, ಸಾಧು ಸಂತರ ಉತ್ಸವ, ಜೈನ ಮುನಿಗಳ ಭಿಕ್ಷೆ, ಕಠೋರ ವ್ರತಗಳು, ಧರ್ಮಸ್ಥಳದಂತಹ ಕ್ಷೇತ್ರಗಳಲ್ಲಿ ನಡೆಯುವ ನ್ಯಾಯನಿರ್ಣಯ ಎಲ್ಲವೂ ನಿಷ್ಕರ್ಷೆಗೆ ಒಳಪಡಬೇಕಾಗುತ್ತದೆ.

ಮುಸಲ್ಮಾನರ ಹಬ್ಬಗಳಲ್ಲಿ ನಡೆಯುವ ಪ್ರಾಣಿಹತ್ಯೆ, ಮೊಹರಂನ ಹಿಂಸಾತ್ಮಕ ಆಚರಣೆಗಳು ಚರ್ಚೆಯ ವಿಷಯವಾಗಬೇಕಾಗುತ್ತದೆ. ಬಹುಪಾಲು ಕ್ರೈಸ್ತ ಮತಾಂತರಗಳ ಹಿಂದೆ ಮೌಢ್ಯಭಿತ್ತುವ ಕಾರ್ಯ ನಡೆಯುತ್ತದೆ. ಪ್ರತಿ ಪ್ರಾರ್ಥನಾ ಸಭೆಯಲ್ಲೂ ಒಂದಿಷ್ಟು ಜನ ತಾವು ಕ್ರೈಸ್ತ್ ಧರ್ಮಕ್ಕೆ ಬಂದ ಮೇಲೆ ರೋಗವಾಸಿಯಾಯಿತು, ಕಷ್ಟ ನಿವಾರಣೆಯಾಯಿತು, ಮಕ್ಕಳಾಯಿತು, ಕುಡಿತ ಬಿಡಲು ಸಾಧ್ಯವಾಯಿತು ಇತ್ಯಾದಿಯಾಗಿ ಹೇಳಿ ಇತರರ ಮೇಲೆ ಪ್ರಭಾವ ಬೀರುತ್ತಾರೆ. ಮೌಢ್ಯನಿಷೇಧ ಕಾನೂನಿನ ಭಾಗವಾಗಿ ಇದನ್ನು ನೋಡಿದರೆ ಮತಾಂತರವನ್ನೇ ನಿಷೇಧಿಸಬೇಕಾಗುತ್ತದೆ. ಹೀಗೆ ಒಂದಕ್ಕೊಂದು ಜೋಡಣೆಯಾಗಿರುವ ಸಂಗತಿಗಳನ್ನು ಕಾನೂನಿನ ಮೂಲಕ ನಿಗ್ರಹಿಸುವುದು ಸುಲಭವೇನೂ ಅಲ್ಲ. ಹಾಗಂತ ಕೇವಲ ಒಂದು ಧರ್ಮದ ಆಚರಣೆಗಳನ್ನು ಚರ್ಚಿಸಿ ಕಾನೂನು ರೂಪಿಸಿದರೆ ಅದು ಆ ಧರ್ಮದ ಮೇಲಿನ ಸವಾರಿ ಎನಿಸುತ್ತದೆ ಮತ್ತು ವಿವಾದಕ್ಕೆ ದಾರಿಯಾಗುತ್ತದೆ. ಹಗ್ಗ ಜಗ್ಗಾಟದಲ್ಲೇ ಸಮಯ ವ್ಯರ್ಥವಾಗುತ್ತದೆ.

ಹಾಗಾದರೆ ಸರ್ಕಾರ ಕಣ್ಮುಚ್ಚಿ ಕೂರಬೇಕೆ? ಖಂಡಿತ ಇಲ್ಲ. ಮತೀಯ ಭಾವನೆಗಳನ್ನು, ಮಾನಸಿಕ ದೌರ್ಬಲ್ಯವನ್ನು ಬಳಸಿಕೊಂಡು ಜನರನ್ನು ವಂಚಿಸುವ, ಅಮಾನವೀಯ ಕೃತ್ಯ ಎಸಗುವ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆಗೆ ಈಡುಮಾಡುವ ಸುದ್ದಿಯನ್ನು ಆಗಾಗ ಓದುತ್ತಲೇ ಇರುತ್ತೇವೆ. ಅದು ಅಂತ್ಯಗೊಳ್ಳಬೇಕು ಎಂಬುದರಲ್ಲಿ ಎರಡನೆಯ ಮಾತಿಲ್ಲ. ಯಾವುದೇ ಆಚರಣೆ ಒತ್ತಾಯ ಪೂರ್ವಕವಾದದ್ದಾದರೆ, ಮನುಷ್ಯನ ಮಾನ, ಪ್ರಾಣಕ್ಕೆ ಕುತ್ತು ತರುವಂತಹದ್ದಾದರೆ, ಹಣ ಸುಲಿಗೆ ಅದರ ಮುಖ್ಯ ಉದ್ದೇಶವಾದರೆ, ಯಾವುದೇ ವರ್ಗವನ್ನು ಶೋಷಣೆಗೆ ಒಳಪಡಿಸುವ ಹುನ್ನಾರ ಅದರಲ್ಲಿದ್ದರೆ ಅದು ಅಪರಾಧವೇ. ಅದನ್ನು ಜಾತಿ, ಮತ, ಪಂಗಡ, ಸಂಪ್ರದಾಯ, ರಾಜಕೀಯ ಹಿತಾಸಕ್ತಿ ಎಂಬ ಎಲ್ಲ ವೃತ್ತಗಳನ್ನು ಮೀರಿ ಏಕರೂಪವಾಗಿ ಅಪರಾಧವೆಂದು ಪರಿಗಣಿಸಬೇಕು ಮತ್ತು ಕಠಿಣ ಕ್ರಮ ಜರುಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಅಂತಹದೊಂದು ಕಾನೂನನ್ನು ಸರ್ಕಾರ ಅಗತ್ಯವಾಗಿ ತರಬೇಕು.

ಪ್ರಗತಿಯೆಡೆಗೆ ಮುಖಮಾಡಿರುವ ನಾಗರಿಕ ಸಮಾಜವಾಗಿ ನಾವು ಸರ್ಕಾರವನ್ನು ಆ ನಿಟ್ಟಿನಲ್ಲಿ ಒತ್ತಾಯಿಸಬೇಕು ಮತ್ತು ಸರ್ಕಾರ ಮುಂದಡಿಯಿಟ್ಟಾಗ ಬೆಂಬಲಿಸಬೇಕು. ಆದರೆ `ಮೌಢ್ಯಮಾಪನಕ್ಕೆ ಅಳತೆಗೋಲು ಸಿದ್ಧಪಡಿಸುವಾಗ ಮೂಲ ಆಶಯ ಏನು, ಯಾವುದರ ಜೊತೆಗೆ ಯಾವುದನ್ನು ಸೇರಿಸಿದರೆ ಆಶಯ ಸೋಲುತ್ತದೆ ಎಂಬ ಎಚ್ಚರಿಕೆಯಂತೂ ಸರ್ಕಾರಕ್ಕೆ ಇರಬೇಕು.

*ಲೇಖಕರು ಮೂಲತಃ ಮಂಡ್ಯ ಜಿಲ್ಲೆ ಮದ್ದೂರಿನವರು; ಸಾಫ್ಟ್ ವೇರ್ ಇಂಜಿನಿಯರ್, ಪ್ರವೃತ್ತಿಯಿಂದ ಅಂಕಣಕಾರ, ಸಮಕಾಲೀನ ವಿದ್ಯಮಾನಗಳ ವಿಶ್ಲೇಷಕರು.

Leave a Reply

Your email address will not be published.