ಮೌಢ್ಯಾಚಾರಣೆ: ಶೋಷಣೆಯ ಪ್ರಬಲ ಅಸ್ತ್ರ

ವೈಚಾರಿಕತೆ ಆಮೆಯ ವೇಗದಲ್ಲಿ ಸಾಗಿದರೆ ಮೌಢ್ಯ ಮಿಥ್ಯಾಚಾರಗಳು ಆನ್‍ಲೈನ್ ವೇಗದಲ್ಲಿ ಅಷ್ಟೇ ಅಮಿತ ಪ್ರಮಾಣದಲ್ಲಿ ಧಾವಿಸುತ್ತಿವೆ.

ಡಾ.ವೆಂಕಟಯ್ಯ ಅಪ್ಪಗೆರೆ

ದೇವರುಧರ್ಮದೆವ್ವ’ ಈ ಮೂರರ ಹೆಸರಿನಲ್ಲಿ ಎಸಗುವ ಶೋಷಣೆ ಅತ್ಯಂತ ಪ್ರಬಲವಾಗಿದೆ. ಅದರಲ್ಲೂ ದೇವರು, ದೆವ್ವದ ಭಯಹುಟ್ಟಿಸಿ ಮಾಡುವ ಶೋಷಣೆ ಭೀಕರವಾದುದು. ಇದಕ್ಕೆ ಪಾಪಕರ್ಮ, ನರಕಸ್ವರ್ಗ ಪರಿಕಲ್ಪನೆಗಳು ಪೂರಕ ಅಸ್ತ್ರಗಳು. ಇವುಗಳ ಪೋಷಣೆಗೆ ಧಾರ್ಮಿಕಮಿಥ್ಯೆ ಮೌಢ್ಯಗಳು ಅಂಗರಕ್ಷಕರು. ಇವುಗಳ ಆಚರಣೆ ಅನಾದಿಕಾಲದಿಂದಲೂ ಅಮಾಯಕರನ್ನು ಸದಾ ಕಾಡುತ್ತಿವೆ. ಸಾಮಾಜಿಕ, ಆರ್ಥಿಕ ಮತ್ತು ಯುದ್ಧ ಭೀತಿಗಳಿಗಿಂತಲೂ ದೈವೀಭೀತಿ ಮಾನವನನ್ನು ಅವ್ಯಾಹತವಾಗಿ ಶೋಷಿಸುತ್ತಿದೆ.

ಹುಸಿ ಕಲ್ಪನೆಗಳನ್ನು ಮತ್ತಷ್ಟು ಬಿತ್ತುತ್ತಾ ತಮ್ಮ ಸ್ವಾರ್ಥಸಾಧನೆಗೆ ಅವುಗಳನ್ನು ಬಳಸಿಕೊಳ್ಳುತ್ತಾ ಅಮಾಯಕರನ್ನು ಶೋಷಿಸುವ ಪಟ್ಟಭದ್ರರ ಹುನ್ನಾರಗಳನ್ನು ತಡೆಗಟ್ಟಲೆಂದೇ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳಸಿ ಜನಜಾಗೃತಿ ಮಾಡಬೇಕಾಗಿದೆ. ಇದುವೇ ಭಾರತೀಯ ಸಂವಿಧಾನದ ಪರಿಚ್ಛೇದ 51-ಎಚ್ ಆಶಯ. ಇದರ ಅನ್ವಯ ರಾಜ್ಯಗಳ ಮಟ್ಟದಲ್ಲಿ ಮೌಢ್ಯ/ಮೌಢ್ಯಾಚಾರಣೆ ನಿಷೇಧ ಕಾಯ್ದೆಯ ಜಾರಿಗೆ ಸುದೀರ್ಘ ಆಂದೋಲನ ಜರುಗಿದೆ. ಮಹಾರಾಷ್ಟ್ರದಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಅವಿರತ ಹೋರಾಟದ ಫಲವಾಗಿ ಈ ಕಾಯ್ದೆಯು ಡಿಸೆಂಬರ್-2013ರಲ್ಲಿ ಮೊದಲು ಜಾರಿಗೆ ಬಂದಿತು. ನಂತರ ಇದನ್ನು ಕರ್ನಾಟಕದಲ್ಲಿ 04.01.2020ರಿಂದ ಜಾರಿಗೆ ತರಲಾಗಿದೆ. ಇಂಥ ಪ್ರಯತ್ನಕ್ಕೆ ಕೇರಳ, ತಮಿಳುನಾಡು, ಒಡಿಸ್ಸಾ ಮುಂತಾದ ರಾಜ್ಯಗಳಲ್ಲಿ ಚಾಲನೆ ದೊರೆತಿದೆ.

ಕರ್ನಾಟಕದ ಮಟ್ಟಿಗೆ ಒಲ್ಲದ ಮನಸ್ಥಿತಿಯಲ್ಲಿ ಅರೆಬರೆ ಜಾರಿಗೆ ತರಲಾಗಿದೆ. ಈಗಾಗಲೆ ಅಸ್ತಿತ್ವದಲ್ಲಿದ್ದ ಅಪರಾಧ ಸಂಹಿತೆ ಮುಂತಾದ ಇತರೆ ಕಾನೂನು ನಿಯಮಗಳನ್ನೇ ಬಿಡಿ ಬಿಡಿಯಾಗಿರುವುದನ್ನೇ ಹೆಕ್ಕಿ ತೆಗೆದು ಇಡಿಯಾಗಿ ಪ್ರತ್ಯೇಕ ‘ನಿಷೇಧ ಕಾಯ್ದೆ’ ಎಂದು ತಾತ್ಪೂರ್ತಿಕವಾಗಿ ಜಾರಿಗೊಳಿಸಲಾಗಿದೆ. ಅದರಲ್ಲಿ ಕಂಬಳ, ಮಡೆಸ್ನಾನ ಮುಂತಾದವುಗಳ ನಿಷೇಧವನ್ನು ಕೆಲವು ಧಾರ್ಮಿಕ ಮುಖಂಡರ ಒತ್ತಾಯಕ್ಕೆ ಒಳಗಾಗಿ ಕೈಬಿಡಲಾಯಿತು.

ಜೊತೆಗೆ ಸಾರ್ವಜನಿಕ ಸ್ಥಳ, ರಸ್ತೆ ಮಧ್ಯೆ, ಉದ್ಯಾನ ಕ್ರೀಡಾಂಗಣ, ಶಾಲೆ ಆವರಣಗಳಲ್ಲಿ ರಾತ್ರೋರಾತ್ರಿ ಅಕ್ರಮವಾಗಿ ಕಟ್ಟಿರುವ ದೇವಸ್ಥಾನಗಳು, ಮಸೀದಿ, ಚರ್ಚುಗಳು ಮುಂತಾದ ಪೂಜಾ ಕಟ್ಟಡಗಳಿಗೆ ಅನಧಿಕೃತ ಪರವಾನಗಿ ಕುತ್ಸಿತಕುಟಿಲ ಮಾರ್ಗದಲ್ಲಿ ದೊರೆತಿದೆ. ಅನಿರ್ಬಂಧಿತವಾಗಿ ಎಗ್ಗಿಲ್ಲದೆ ಅವು ಸಾಗಿ ಸಾರ್ವಜನಿಕ/ಸರ್ಕಾರಿ ಜಾಗಗಳನ್ನು ಕಬಳಿಸಿವೆ. ಸೋಮಾರಿ ವರ್ಗದ ಪುರೋಹಿತಶಾಹಿಗಳ ಉದರಗಳನ್ನು ಉಬ್ಬಿಸಿವೆ. ನನಗೆ ಗೊತ್ತಿದ್ದಂತೆ ಹಿಂದೆ ಬೀದರ್‍ನ ದಿಟ್ಟ ಜಿಲ್ಲಾಧಿಕಾರಿಗಳು ನಗರಾದ್ಯಂತ ತಲೆಯೆತ್ತಿದ್ದ ಅನಧಿಕೃತ ಪೂಜಾ ಸ್ಥಳಗಳನ್ನು ಧ್ವಂಸಗೊಳಿಸಿ ರಸ್ತೆಗಳ ವಿಸ್ತರಣಾ ಕಾರ್ಯ ಕೈಗೊಂಡರು. ನಂತರ ತೊಂಬತ್ತರ ದಶಕದಲ್ಲಿ ರಾಯಚೂರಿನ ಸದರ್ ಬಜಾರಿನ ರಸ್ತೆ ಅಗಲೀಕರಣದಲ್ಲಿ ನಿಷ್ಪಕ್ಷಪಾತವಾಗಿ ಅಂಥ ಅನಧಿಕೃತ ಕಟ್ಟಡಗಳನ್ನು ನಿರ್ನಾಮಗೊಳಿಸಲಾಯಿತು.

ಮುಂದೆ ಅಂತಹ ಕಠಿಣ ಕ್ರಮಗಳನ್ನು ಅಧಿಕಾಶಾಹಿ ಜಾಣಕುರುಡರಂತೆ ಜಾರಿಗೊಳಿಸದೆ ಜಾರಿಕೊಂಡರು. ಈಗಲೂ ಬೆಂಗಳೂರಿನಲ್ಲಿ ಮುಖ್ಯ ರಸ್ತೆಗಳ ಮಧ್ಯ ಭಾಗದಲ್ಲಿಯೇ ಧುತ್ತನೆ ಎದ್ದಿರುವ ಅನೇಕ ಪೂಜಾಸ್ಥಳಗಳು ಸುಗಮಸಂಚಾರಕ್ಕೆ ಅಡ್ಡಿಯಾಗಿದ್ದರೂ ಅಚಲವಾಗಿ ನಿಂತಿವೆ. ಇನ್ನು ರಾಜ್ಯದ ಇತರ ಸ್ಥಳಗಳಲ್ಲಿ ಜಿಲ್ಲೆಗೆ ಕನಿಷ್ಠ ಇನ್ನೂರು ಮುನ್ನೂರು ಅಂಥ ಪ್ರಕರಣಗಳು ಜೀವಂತವಾಗಿವೆ. ಇತ್ತೀಚೆಗೆ ಸಾರ್ವಜನಿಕರಿಂದ ಅಕ್ರಮ ಪೂಜಾ/ಧಾರ್ಮಿಕ ಕಟ್ಟಡಗಳ ಮಾಹಿತಿಯನ್ನು ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಸಂಗ್ರಹಿಸಿದರು. ಒಂದೆರಡು ಜಿಲ್ಲೆಗಳಲ್ಲಿ ಒಂದೆರಡು ಅಕ್ರಮ ಕಟ್ಟಡಗಳನ್ನು ಒಕ್ಕಲೆಬ್ಬಿಸುವ ಪ್ರಾರಂಭದ ಪ್ರಕ್ರಿಯೆ ಹಂತದಲ್ಲೇ ರಾಜಕೀಯ ಕೆಸರೆರೆಚಾಟದಲ್ಲಿ ಸ್ಥಗಿತಗೊಳಿಸಲಾಯಿತು. ಅಂತಹ ಸಂವಿಧಾನರಹಿತ ಮನಸ್ಥಿತಿಯಿರುವ ಜನಪ್ರತಿನಿಧಿಗಳನ್ನು ನಾವು ಚುನಾಯಿಸಿ ಕಳಿಸಿಕೊಡುತ್ತಿದ್ದೇವೆ.

ಇಂಥವರ ನೇತೃತ್ವದಲ್ಲೆ ಬಲಿ ಕೊಡುವ, ಬಾಗೀನ ನೀಡುವ, ಮಾಟಮಂತ್ರ, ಹೋಮಹವನ ಮುಂತಾದ ಮೌಢ್ಯಾಚರಣೆಗಳು ಎಗ್ಗಿಲ್ಲದೆ ನಡೆಯುತ್ತವೆ. ನಿಷೇಧ ಕಾಯ್ದೆಗಳನ್ನು ನಿಃಶಬ್ದಗೊಳಿಸಲಾಗುತ್ತಿದೆ. ಇನ್ನು ಜ್ಯೋತಿಷ್ಯ ವಾಸ್ತು ದೇವದಾಸಿ ಪದ್ಧತಿಗಳು (ಈಗ ಇದು ಕಡಿಮೆಯಾಗುತ್ತಿದೆ ಎಂಬುದೊಂದು ಸಮಾಧಾನ) ಅವೈಜ್ಞಾನಿಕವಾಗಿ ಸರ್ಕಾರಿ ಕೃಪಾ ಕಟಾಕ್ಷದಲ್ಲಿಯೆ ಜರುಗುತ್ತಲೇ ಇವೆ. ಇದನ್ನು ಪ್ರಶ್ನಿಸುವ ನಿಯಂತ್ರಿಸುವ ದಕ್ಷ ದಿಟ್ಟ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಂಗಡಿ ಮಾಡಿಸಲಾಗುತ್ತಿದೆ.

ಒಟ್ಟಿನಲ್ಲಿ ವೈಚಾರಿಕತೆ ಆಮೆಯ ವೇಗದಲ್ಲಿ ಸಾಗಿದರೆ ಮೌಢ್ಯ ಮಿಥ್ಯಾಚಾರಗಳು ಆನ್‍ಲೈನ್ ವೇಗದಲ್ಲಿ ಅಷ್ಟೇ ಅಮಿತ ಪ್ರಮಾಣದಲ್ಲಿ ಧಾವಿಸುತ್ತಿವೆ. ದಶ ದಿಕ್ಕುಗಳಲ್ಲಿ ದಾಂಗುಡಿಯಿಟ್ಟು ದಾಳಿ ಮಾಡುತ್ತಿವೆ. ಇವನ್ನು ಮಟ್ಟಹಾಕಲು ವಿದ್ಯಾರ್ಥಿ ಯುವ ಸಂಘಟನೆಗಳು, ವಿಚಾರವಂತ ಸಂಘಸಂಸ್ಥೆಗಳು ಕ್ರಾಂತಿಕಾರಕ ಧೋರಣೆಯಲ್ಲಿ ಹೋರಾಟಕ್ಕಿಳಿಯಬೇಕು. ಅವರಿಗೆ ಸಕ್ರಿಯವಾಗಿರುವ ಸರ್ಕಾರೇತರ ಸೇವಾಸಂಸ್ಥೆಗಳು, ಶೈಕ್ಷಣಿಕ ತಾಂತ್ರಿಕ ವೈಜ್ಞಾನಿಕ ಗುಂಪುಗಳು ಒಂದುಗೂಡಬೇಕು. ವಿಚಾರಕ್ರಾಂತಿಯ ಒಲಿಂಪಿಕ್ ಜ್ಯೋತಿಯನ್ನು ದೇಶಾದ್ಯಂತ ಬೆಳಗಬೇಕು. ಸಮಷ್ಟಿಯಲ್ಲಿ ಜನಜಾಗೃತಿಯ ಅಭಿಯಾನಗಳು ಪರಿಣಾಮಕಾರಿಯಾಗಿ ನಡೆಯಬೇಕು. ಆಗ ಮಾತ್ರ ನಮ್ಮ ದೇಶ ಬುದ್ಧ ಬಸವರ ವೈಚಾರಿಕ ನಾಡಾಗುತ್ತದೆ. ಪ್ರಬುದ್ಧಭಾರತದ ಪುನರುತ್ಥಾನಗೊಳ್ಳುತ್ತದೆ. ಶೋಷಣೆ ಮುಕ್ತ ಸಮಾಜ ಉದಯಿಸುತ್ತದೆ. ಇಲ್ಲವಾದರೆ ಅಂಧಶ್ರದ್ಧೆ, ಮೌಢ್ಯಾಚರಣೆಗಳ ಪೊಳ್ಳು ನಂಬಿಕೆಯ ಟೊಳ್ಳು ದೇಶವಾಗಿ ಉಳಿದು, ಬಡತನ ಅಸ್ಪøಶ್ಯತೆ ದಬ್ಬಾಳಿಕೆ ಮೇಳೈಸಿ ಬಡವಬಲ್ಲಿದರ ಅಂತರ ವಿಜೃಂಭಿಸುತ್ತದೆ.

*ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಬಳ್ಳಾರಿ.

Leave a Reply

Your email address will not be published.