ಮೌಢ್ಯ ಹರಡಲು ಮಹಿಳೆಯರೇ ಟಾರ್ಗೆಟ್!

ಒಮ್ಮೆ ಗಂಡಂದಿರಿಗೆ ಆಪತ್ತಿದೆ, ಐದು ಪ್ರಕಾರದ ಎಣ್ಣೆ ಸೇರಿಸಿ ದೇವಿಯ ಗುಡಿಯಲ್ಲಿ ದೀಪದ ಆರತಿ ಮಾಡಿ ಎಂಬ ಸುದ್ದಿ ಮಿಂಚಿನಂತೆ ಹಬ್ಬಿತ್ತು. ಮಹಿಳೆಯರೆಲ್ಲ ದೇವಾಲಯಗಳಿಗೆ ದೌಡಾಯಿಸಿದರು. ಸೋಜಿಗವೆಂದರೆ ಆಪತ್ತು ಗಂಡನಿಗೆ, ಮಗನಿಗೆ ಬರುತ್ತದೆ. ಮಗಳಿಗೋ, ಹೆಂಡತಿಗೋ ಏಕೆ ಬರುವುದೇ ಇಲ್ಲ!

ನೂತನ ದೋಶೆಟ್ಟಿ

ಅವಳು ಸ್ನಾತಕೋತ್ತರ ಪದವೀಧರೆ. ಒಮ್ಮೆ ಅವರ ಮನೆಗೆ ಹೋದಾಗ ಕುತೂಹಲ ಎನ್ನಿಸಿದ್ದು ಕುಡಿಯುವ ನೀರಿನ ಫಿಲ್ಟರ್ ಮೇಲೆ ಅದರ ಮುಚ್ಚಳಕ್ಕೆ ಸರಿ ಹೊಂದುವ ಗಾತ್ರದ ಪಿರಾಮಿಡ್ ಆಕೃತಿಯನ್ನು ಇಟ್ಟಿದ್ದು. ಅದೇಕೆ ಎಂದು ಕೇಳಿದಾಗ ವಾಸ್ತು ಪ್ರಕಾರ ಅದರಿಂದ ನಾವು ಕುಡಿಯುವ ನೀರಿಗೆ ಶಕ್ತಿ ಬರುತ್ತದೆ ಎಂದಳು. ಅಂಥ ಪಿರಮಿಡ್‍ಗಳ ಪುಟ್ಟ ಪ್ರತಿಕೃತಿಗಳು ಕೀಚೇನಿನಿಂದ ಹಿಡಿದು ಅನೇಕವು ಅವರು ಮನೆಯಲ್ಲಿ ಇದ್ದವು.

ಇದೆಲ್ಲ ವಾಸ್ತು, ಪೆÇಸಿಟಿವ್ ಎನರ್ಜಿಗಾಗಿ ಎಂದು ಅವಳು ಹೇಳಿದಾಗ ನನಗೆ ಬಾಯಿ ಕಟ್ಟಿಹೋಯಿತು. ಸ್ವತಃ ಅವಳೇ ಸ್ನಾತಕೋತ್ತರ ಪದವೀಧರೆ. ಮನೆಯಲ್ಲಿ ಶೈಕ್ಷಣಿಕ ವಾತಾವರಣ. ಹಾಗಿದ್ದರೂ ಅವಳ ಈ ಕುರುಡು ನಂಬಿಕೆಗೆ ಏನು ಹೇಳುವುದು? ಅವಳ ಶಿಕ್ಷಿತ ಪತಿ ಅವಳ ಇಂಥ ನಂಬಿಕೆಗಳ ಬಗ್ಗೆ ಅವಳಿಗೆ ಬುದ್ಧಿ ಹೇಳಿ ಪ್ರಯೋಜನವಾಗದೆ ಬಿಟ್ಟುಬಿಟ್ಟಿದ್ದರು. ಒಂದು ದಶಕದ ಹಿಂದೆ ಇಂಥ ಮೂಢನಂಬಿಕೆಗಳು ಭಾರತದಲ್ಲಿ ದಂಡಿಯಾಗಿ ಹುಟ್ಟಿಕೊಂಡು ವಾಸ್ತು, ಮಾನಸಿಕ ಶಾಂತಿ, ಆರ್ಥಿಕ ಅಭಿವೃದ್ಧಿ ಮುಂತಾದವುಗಳ ಹೆಸರಿನಲ್ಲಿ ಜ್ಯೋತಿಷಿಗಳು, ಅವರ ಮೂಲಕ ಟಿವಿ ಚಾನಲ್ಲುಗಳು, ವ್ಯಾಪಾರ ವಹಿವಾಟಿನ ಅಂಗಡಿಗಳು ಸಾಕಷ್ಟು ಆದಾಯ ಸಂಪನ್ನರಾದರು. ಅಷ್ಟೇ ಏಕೆ ಚೀನಾ ನಮ್ಮ ದೇವರುಗಳನ್ನೇ ಎರಕ ಹೊಯ್ದು ನಮ್ಮ ಅಂಗಡಿಗಳಲ್ಲೇ ಇಟ್ಟು, ನಮಗೇ ಮಾರಿ ತನ್ನ ಬೊಕ್ಕಸ ತುಂಬಿಸಿಕೊಂಡಿತು.

ಈ ಮೇಲಿನ ಅಂಶಗಳಲ್ಲಿ ಎರಡನ್ನು ಪ್ರಮುಖವಾಗಿ ಗಮನಿಸಬೇಕು. ಒಂದು ಮನೆಯ ಮುಖ್ಯ ಜವಾಬ್ದಾರಿಗಳನ್ನೆಲ್ಲ ನಿಭಾಯಿಸುವ ಮಹಿಳೆಯರು ಇಂಥ ಮೂಢನಂಬಿಕೆಗಳಿಗೆ ಬಹುಬೇಗ ಹಾಗೂ ಸುಲಭವಾಗಿ ಬಲಿಯಾಗುವುದು; ಇನ್ನೊಂದು ದೇವರ ಹೆಸರಿನಲ್ಲಿ ಸುಲಭವಾಗಿ ಮೌಢ್ಯವನ್ನು ಬಿತ್ತುವುದು. ಈ ಎರಡೂ ಅಂಶಗಳು ನಿರ್ಣಾಯಕ ಸ್ಥಾನದಲ್ಲಿ ಇರುವುದರಿಂದ ಸಮಾಜದಲ್ಲಿ ಮೂಢನಂಬಿಕೆಯನ್ನು ಪೂರ್ಣವಾಗಿ ನಿವಾರಿಸುವ ಪ್ರಯತ್ನಗಳು ವಿಫಲವಾಗಿವೆ.

ಈ ಮೂಢನಂಬಿಕೆಗಳಾದರೂ ಎಂಥೆಂಥವು!

ಒಂದು ದಿನ ಬೆಳಿಗ್ಗೆ ಸಂಬಂಧಿ ಮಹಿಳೆಯೊಬ್ಬರು ಕರೆ ಮಾಡಿ ನಿಮಗೆ ಒಬ್ಬನೇ ಗಂಡುಮಗನಿದ್ದರೆ ಮೊದಲ ದೋಸೆ ಮಾಡಿ ಅವನಿಗೆ ಕೊಡಬೇಡಿ ಎಂದರು. ಸಹಜವಾದ ತಕ್ಷಣದ ಪ್ರಶ್ನೆ ಏಕೆ ಎಂಬುದು. ಅದಕ್ಕೆ ಅವರ ಬಳಿ ಉತ್ತರವಿಲ್ಲ. ಎಲ್ಲರೂ ಹೇಳಿದರು, ಅದಕ್ಕೇ ಹೇಳಿದೆ ಅಂದರು. ಎಲ್ಲ ತಾಯಂದಿರಿಗೂ ಇದನ್ನು ಅಲ್ಲಗಳೆಯುವ ಧೈರ್ಯವಿರುವುದಿಲ್ಲ. ತನ್ನ ಜೀವನವನ್ನೇ ಮನೆ, ಮಕ್ಕಳಿಗಾಗಿ ಮುಡಿಪಾಗಿಡುವ ತಾಯಿಯನ್ನು ಇಂಥ ಮಾತುಗಳು ಕಂಗೆಡಿಸಿ ಅವುಗಳನ್ನು ಶಿರಸಾವಹಿಸಿ ಪಾಲಿಸುವಂತೆ ಮಾಡಿಬಿಡುತ್ತವೆ.

ಇನ್ನೊಮ್ಮೆ, ಗಂಡಂದಿರಿಗೆ ಆಪತ್ತಿದೆ. ಹಾಗಾಗಿ ಐದು ಪ್ರಕಾರದ ಎಣ್ಣೆ ಸೇರಿಸಿ ದೇವಿಯ ಗುಡಿಯಲ್ಲಿ ದೀಪದ ಆರತಿ ಮಾಡಿ ಎಂಬ ಸುದ್ದಿ ಮಿಂಚಿನಂತೆ ಹಬ್ಬಿತ್ತು. ಮಹಿಳೆಯರೆಲ್ಲ ದೇವಾಲಯಗಳಿಗೆ ದೌಡಾಯಿಸಿದರೆ ಅಂಗಡಿಗಳು ಎಣ್ಣೆ ಅಳೆದು ಅಳೆದು ಹಣ ಎಣಿಸಿದವು. ಸೋಜಿಗವೆಂದರೆ ಆಪತ್ತು ಗಂಡನಿಗೆ, ಮಗನಿಗೆ ಬರುತ್ತದೆ. ಮಗಳಿಗೋ, ಹೆಂಡತಿಗೋ ಏಕೆ ಬರುವುದೇ ಇಲ್ಲ! ಇದರಿಂದಲೇ ಇಂಥ ಮೂಢನಂಬಿಕೆಗಳ ಹುಟ್ಟು ಹಾಗೂ ಪ್ರಚಾರದ ಬಗ್ಗೆಯೇ ಗುಮಾನಿ. ಇದಕ್ಕೆ ಜ್ವಲಂತ ಸಾಕ್ಷಿ `ಅಕ್ಷಯ ತೃತೀಯ ಎಂಬ ಬಂಗಾರ ಕೊಳ್ಳುವ ಹಬ್ಬ‘. ಕಳೆದ ಎರಡು ದಶಕಗಳಿಂದ ಈಚೆಗೆ ಈ ಹಬ್ಬದಲ್ಲಿ ಬಂಗಾರದ ವಹಿವಾಟು ಆಕ್ರಮಿಸಿಕೊಂಡಿರುವ ಮಾರುಕಟ್ಟೆ ಅಗಾಧ.

ಇಂಥ ಹತ್ತಾರು ಉದಾಹರಣೆಗಳನ್ನು ಕೊಡುತ್ತ ಹೋಗಬಹುದು. ವರ್ಷದಿಂದ ವರ್ಷಕ್ಕೆ ಶಿಕ್ಷಿತರ ಸಂಖ್ಯೆ ಹೆಚ್ಚುತ್ತಿದ್ದರೂ, ಉದ್ಯೋಗಸ್ಥರ ಸಂಖ್ಯೆ ಹೆಚ್ಚುತ್ತಿದ್ದರೂ ಶಿಕ್ಷಣದ ಪ್ರಭಾವ ಈ ಮೂಢನಂಬಿಕೆಗಳ ಮೇಲೆ ಆಗದೇ ಇರುವುದು ಸ್ಪಷ್ಟ. ಇದಕ್ಕೆ ಈ ಮೇಲಿನ ಉದಾಹರಣೆಗಳೊಂದಿಗೆ ಬಾಲ್ಯ ವಿವಾಹ, ದೇವದಾಸಿ ಪದ್ಧತಿಯಂಥ ಸಾಮಾಜಿಕ ಪಿಡುಗುಗಳನ್ನೂ ಸೇರಿಸಬಹುದು. ಇವುಗಳಂತೂ ಕಾನೂನು ರೀತ್ಯಾ ಅಪರಾಧಗಳು. ಅಪರಾಧಿಗಳಿಗೆ ಇದರಲ್ಲಿ ಕಠಿಣ ಶಿಕ್ಷೆ, ದಂಡ, ಕಾರಾಗೃಹ ವಾಸ ಎಲ್ಲವೂ ಇವೆ. ಆದರೂ ಇವು ಕಡಿಮೆಯಾಗಿಲ್ಲ. ಅಂದರೆ ಕಾನೂನಿನ ಭಯ ಇಂಥ ಅಪರಾಧಗಳನ್ನು ಕಟ್ಟಿಹಾಕಲಾಗಿಲ್ಲ.

ಸಹಸ್ರಾರು ಸಂಖ್ಯೆಯಲ್ಲಿ ಇರುವ ನಂಬಿಕೆಗಳನ್ನು, ಆಚರಣೆಗಳನ್ನು ಕಾನೂನಿನ ಅಡಿಯಲ್ಲಿ ತರುವುದು ಕಷ್ಟಸಾಧ್ಯ. ತಂದರೂ ಅದು ಧಾರ್ಮಿಕ ಹಕ್ಕಿನ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದು ಎಂದು ಹುಯಿಲೆಬ್ಬಿಸುವ ಅವಕಾಶಗಳು ಎಲ್ಲ ಧರ್ಮ ಪಂಗಡಗಳಲ್ಲೂ ಇಂದು ನಿಚ್ಚಳವಾಗಿದೆ. ಕಾನೂನು ಉತ್ತಮ ಪರಿಹಾರವಾದರೂ ಫಲಿತಾಂಶ ಬಹಳ ಮಂದಗತಿಯ ಅಥವಾ ಅತ್ಯಲ್ಪವಾಗಿರಬಹುದು. ಅದಕ್ಕಾಗಿ ಜಾಗೃತಿ ಅಥವಾ ತಿಳಿವಳಿಕೆಯೇ ನನಗೆ ಉತ್ತಮ ಮಾರ್ಗವಾಗಿ ಕಾಣುತ್ತದೆ. 1980 ರಿಂದ 2000 ಇಸವಿಯ ನಂತರದ ಒಂದು ದಶಕದ ಕಾಲ ಇಂಥ ಜನಜಾಗೃತಿ ಅವ್ಯಾಹತವಾಗಿ ಸರ್ಕಾರ, ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಯಿತು. ಆನಂತರ ದುರದೃಷ್ಟವಶಾತ್ ಜಾಗೃತಿ ಮೂಡಿಸಬೇಕಾದ ಮಾಧ್ಯಮಗಳ ಮೂಲಕವೇ ತಮ್ಮ ಟಿಆರ್‍ಪಿ ಗಾಗಿ ಮೌಢ್ಯ ಬಿತ್ತನೆ ಆರಂಭವಾಗಿ ಇಂದು ಅದು ಒಂದು ಸೋಂಕಾಗಿ ಬೆಳೆದು ನಿಂತಿದೆ. ಆದ್ದರಿಂದ ಜಾಗೃತಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.

*ಲೇಖಕರು ಹಾಸನ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು.

Leave a Reply

Your email address will not be published.