ವಾಸ್ತುಪಂಡಿತರಿಗೆ ಭಯ ಮತ್ತು ಆಸೆಗಳೇ ಬಂಡವಾಳ!

ಒಂದು ದಿನ ಆ ಸಾಹಿತಿಯ ಮನೆಯೊಳಗಿನ ತಗ್ಗನ್ನು ಸಂಪೂರ್ಣ ಮುಚ್ಚಿಸಿ, ಎತ್ತರಿಸಿ ಸಮತಟ್ಟು ಮಾಡಿಸಿದ ಜಾಗದಲ್ಲಿಯೇ ಅವರ ಶವಕ್ಕೆ ಗೌರವ ಸಲ್ಲಿಸಿದೆ. ಕ್ಯಾನ್ಸರ್ ಗೆದ್ದಿತ್ತು, ವಾಸ್ತುದೋಷವನ್ನು ಸರಿಪಡಿಸಿದ್ದು ಅಲ್ಲಿ ಏನೂ ಫಲಿಸಲಿಲ್ಲ!

ಯೋಗೇಶ್ ಮಾಸ್ಟರ್

ಮನುಷ್ಯನ ಮನಸ್ಸು ಕನಲುವುದು ಭಯ ಮತ್ತು ಆಸೆಗಳಿಂದಾಗಿ. ಉಳಿಯುವ, ಗಳಿಸುವ, ಉಳಿಸುವ, ಬೆಳೆಯುವುದೇ ಮೊದಲಾದ ಲಾಭದಾಯಕ ಮತ್ತು ಹಿತಕಾರಕ ವಿಷಯಗಳ ಆಸೆಗಳು ಹಾಗೂ ಅಳಿಯುವ, ಕಳೆಯುವ, ಬೆಳೆಯದ, ನಷ್ಟವೇ ಮೊದಲಾದ ಭಯಗಳು ಶರಣು ಹೋಗುವ ಅನೇಕ ವಿಷಯಗಳಲ್ಲಿ ಈ ವಾಸ್ತುವು ಕೂಡಾ ಒಂದಿದೆ.

ಮಾಡಿದ ಕೆಲಸಗಳು ಫಲ ನೀಡುತ್ತಿಲ್ಲ, ಆರೋಗ್ಯದಲ್ಲಿ ಏರುಪೇರು, ಯಾವಾಗಲೂ ನಷ್ಟವೇ ಆಗುತ್ತಿರುವಾಗ ವ್ಯಕ್ತಿಗಳ ಮನಸ್ಸು ದುರ್ಬಲಗೊಳ್ಳುವುದು ಮಾತ್ರವಲ್ಲದೇ ಯಾರು ಏನು ಹೇಳಿದರೂ “ಅದೂ ಒಂದು ಒಮ್ಮೆ ನೋಡಿಯೇ ಬಿಡೋಣ” ಎಂಬ ಮುಳುಗುವವನಿಗೆ ಹುಲುಕಡ್ಡಿ ಆಸರೆ ಎಂಬಂತಹ ಒಂದು ಆಶಾಭಾವ, ನಿರೀಕ್ಷೆ.

ಆಗಲೇ ಅದನ್ನಿಟ್ಟರೆ ಒಳ್ಳೆಯದು, ಆ ಬಣ್ಣ ಬಳಿದರೆ ಶ್ರೇಯಸ್ಸು, ಹೀಗೆ ಕಟ್ಟಿದರೆ ಉತ್ಥಾನ, ಈ ದಿಕ್ಕಿನಲ್ಲಿದ್ದರೆ ಉದ್ದಾರ ಎಂಬುವುದನ್ನೆಲ್ಲಾ ಪ್ರಯೋಗಿಸಲು ಹೋಗುವುದು. ಇನ್ನೂ ಕೆಲವರು ‘ಪ್ರಿಕಾಶನ್ ಈಸ್ ಬೆಟರ್ ದ್ಯಾನ್ ಕ್ಯೂರ್’ ಎಂಬ ರೀತಿಯನ್ನು ಅನುಸರಿಸಿ ಯಾವ ಯಾವ ಮೂಲೆಗಳಲ್ಲಿ ಬೆಂಕಿ ಹಚ್ಚಬಹುದು, ಭಾರ ಇಡಬಾರದು, ಕಕ್ಕಸ್ಸು ಕಟ್ಟಬಹುದು, ಮಲಗುವ ಮನೆ ಮಾಡಬಾರದು ಎಂಬುದನ್ನೇ ನೋಡಿಕೊಂಡು ಬಿಡುವುದು.

ನಮ್ಮಲ್ಲಿ ಓರ್ವ ಸಾಹಿತಿ ಮತ್ತು ಅಂಕಣಕಾರರು ಅತ್ಯಂತ ಸುಂದರವಾದ ಮನೆಯನ್ನು ಕಟ್ಟಿಸಿಕೊಂಡರು. ಅದೋ ಅವರ ಅಭಿರುಚಿ, ಆಸಕ್ತಿ, ಅಗತ್ಯ, ಆಸೆಗಳಿಗೆ ತಕ್ಕಂತೆ ನಿರ್ಮಾಣವಾಯಿತು. ಅತ್ಯಂತ ದೊಡ್ಡ ಮನೆಯೂ ಹೌದು ಮತ್ತು ವಾಸ್ತುಶಿಲ್ಪದ ನೆಲೆಯಲ್ಲಿ ಗಮನಿಸುವುದಾದರೆ ವಿಶಿಷ್ಟವೂ ಹೌದು.

ಮನೆಯನ್ನು ಕಟ್ಟಿಸುವಾಗಲೇ ಅವರಿವರು ವಾಸ್ತುಪಂಡಿತರು ಹೀಗೆ ಕಟ್ಟಿಸಬಾರದು, ಅಲ್ಲಿ ಹಳ್ಳ ಇರಬಾರದು, ಇಲ್ಲಿ ಭಾರವಿರಬಾರದು ಎಂಬಂತಹ ವಿಷಯಗಳನ್ನು ತಿಳಿಸಿದರು. ವ್ಯಕ್ತಿಗತವಾಗಿ ನಾಸ್ತಿಕರೂ, ಪ್ರಗತಿಪರರೂ, ಮೌಢ್ಯಾಚರಣೆಗಳ ವಿರುದ್ಧ ಧ್ವನಿ ಎತ್ತುವವರೂ ಆಗಿದ್ದ ಅವರು ನಿರಾಕರಿಸಿದ್ದು ಮಾತ್ರವಲ್ಲದೇ ತಾವು ಅಂದುಕೊಂಡಂತೆಯೇ ಮನೆಯನ್ನು ನಿರ್ಮಿಸಿದರು. ಮನೆ ಕಟ್ಟಿಸಿದ ಕೆಲವೇ ಕಾಲದಲ್ಲಿ ಅವರಿಗೆ ಕ್ಯಾನ್ಸರ್ ಬಂದಿತು. ಹಿಂದೆ ಮನೆ ಕಟ್ಟುವಾಗ ವಾಸ್ತುದೋಷಗಳನ್ನು ಹೇಳಿದ್ದವರ ಧ್ವನಿಗಳಿಗೆ ಬಲ ಬಂದಿತು. ನರಳಿಕೆ ಮತ್ತು ಆಸ್ಪತ್ರೆಗೆ ಎಡತಾಕುವುದರಿಂದ ಬಳಲಿದ ಅವರು ತಮ್ಮ “ಮನೆಯವರ ಸಮಾಧಾನಕ್ಕೆ” ಮನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಮುಂದಾದರು ಮತ್ತು ಮಾಡಿದರು. ನಾನು ಹೇಳಿದೆ, “ಗಟ್ಟಿಯಾಗಿರಿ. ಇವೆಲ್ಲಾ ನಿಮ್ಮನ್ನು ಪ್ರಭಾವಿಸಬಾರದು.”

ಅವರು ಹೇಳಿದರು, “ಯೋಗೇಶ್, ನನಗೆ ಇವೆಲ್ಲಾ ಏನೂ ಇಲ್ಲ ಎಂದು ಗೊತ್ತು. ಆದರೆ, ಈಗ ನನ್ನ ನರಳಿಕೆ ಮತ್ತು ಬಳಲಿಕೆಯಿಂದಾಗಿ ಬಹುತೇಕ ವಿಷಯದಲ್ಲಿ ಅವರನ್ನು ಅವಲಂಬಿಸಿದ್ದೇನೆ. ನನ್ನ ಹಟಮಾರಿತನದಿಂದಲೇ ಸಮಸ್ಯೆಗಳು ಆಗುತ್ತಿರುವುದು ಎಂದು ಅವರು ಪದೇ ಪದೇ ಹೇಳುವುದು ಅಥವಾ ಆ ದೃಷ್ಟಿಯಲ್ಲಿ ನನ್ನ ನೋಡುವುದು ನನಗೆ ಕಷ್ಟವಾಗುತ್ತದೆ. ಅವರ ಮಾತನ್ನು ಗೌರವಿಸುವುದು ಒಂದು ನನ್ನ ವಿನಯ ಅಂತಿಟ್ಟುಕೊಳ್ಳಿ.” ಒಟ್ಟಾರೆ ವಾಸ್ತುದೋಷದ ಥಿಯರಿಗೆ ಅವರು ಬಾಗುವಂತಾಯಿತು. ಅವರ ಅಸಹಾಯಕತೆಯ ನಿಟ್ಟುಸುರಿನಲ್ಲಿ “ಬೇರೆ ದಾರಿ ಏನಿದೆ ಹೇಳಿ?” ಎಂಬ ಪ್ರಶ್ನೆ ಇತ್ತು. ಅವರ ವೈಜ್ಞಾನಿಕ ಮನೋಭಾವ ಮತ್ತು ಮೌಢ್ಯದ ವಿರುದ್ಧ ಅವರು ಎತ್ತುತ್ತಿದ್ದ ಧ್ವನಿಯೆಲ್ಲಾ ಬಳಲಿತ್ತು. ಆ ಬಳಲಿಕೆ ಅನಿವಾರ್ಯತೆಯಿಂದ ಬಯಸುವ ಬೆಂಬಲದ ನಿರ್ದೇಶನಗಳಿಗೆ ಇಷ್ಟವಿಲ್ಲದಿದ್ದರೂ ಸಮ್ಮತಿಸಬೇಕಾಗಿತ್ತು.

ಮುಂದೆ ಒಂದು ದಿನ ಮನೆಯೊಳಗಿನ ತಗ್ಗನ್ನು ಸಂಪೂರ್ಣ ಮುಚ್ಚಿಸಿ, ಎತ್ತರಿಸಿ ಸಮತಟ್ಟು ಮಾಡಿಸಿದ ಜಾಗದಲ್ಲಿಯೇ ಅವರ ಶವಕ್ಕೆ ಗೌರವ ಸಲ್ಲಿಸಿದೆ. ಕ್ಯಾನ್ಸರ್ ಗೆದ್ದಿತ್ತು, ವಾಸ್ತುದೋಷವನ್ನು ಸರಿಪಡಿಸಿದ್ದು ಅಲ್ಲಿ ಏನೂ ಫಲಿಸಲಿಲ್ಲ.

ಇದೇ ಆಗುವುದು. ಯಾವುದೇ ಕಾರಣದಿಂದ ಯಾವುದೇ ಸಮಸ್ಯೆಯು ಎದುರಾದಾಗ ಸಂಘಜೀವಿಯಾದ ಮನುಷ್ಯನ ಸಂಗದಲ್ಲಿರುವವರು ಸತತವಾಗಿ, ಗಟ್ಟಿಯಾಗಿ ಹೇಳುವಂತಹ ಮಾತುಗಳು ಭಯ ಪಡಿಸುತ್ತವೆ ಅಥವಾ ಭರವಸೆ ಹುಟ್ಟಿಸುತ್ತವೆ. ಸಮಸ್ಯೆ, ನೋವು, ನಷ್ಟಗಳಿಂದ ಕುಗ್ಗಿರುವ ಮನಸ್ಸಿಗೆ ಭಾವನಾತ್ಮಕವಾದ ಆಸರೆ ಬೇಕಾಗಿರುತ್ತದೆ. ಆಗ ಇಂತವೆಲ್ಲಾ ಕೆಲಸ ಮಾಡುತ್ತವೆ.

ಕೆಲವರಿಗೆ ಅದೆಷ್ಟು ರೂಢಿ ಎಂದರೆ ಮನೆಗೆ ಬಂದ ಕೂಡಲೇ ತಮ್ಮ ವಾಸ್ತುಪಾಂಡಿತ್ಯದ ಕಡತ ಬಿಚ್ಚುತ್ತಾರೆ. “ನೋಡಿ, ಆ ಬಾಗಿಲಿನ ಮೇಲೆ ಗಡಿಯಾರ ಹಾಕಬಾರದು. ಅದರ ಕೆಳಗೆ ನೀವು ಓಡಾಡಬಾರದು” ಎಂಬ ಸಣ್ಣಪುಟ್ಟ ತಿದ್ದುಪಡಿಗಳಿಂದ ಹಿಡಿದು, “ಇಷ್ಟು ಸಂಖ್ಯೆಯ ಬಾಗಿಲುಗಳು ಮನೆಗೆ ಇರಬಾರದು. ಆ ಬಾಗಿಲನ್ನು ಕಿತ್ತಿಸಿ ಗೋಡೆ ಕಟ್ಟಿಸಿಬಿಡಿ” ಎನ್ನುವಷ್ಟು ದುಬಾರಿ ರಿಪೇರಿಗಳ ಸಲಹೆಗಳನ್ನು ಕೊಡುತ್ತಾರೆ. ಹಾಗಂತ ಒಂದು ನಿರ್ದಿಷ್ಟವಾಗಿ ಎಲ್ಲಾ ವಾಸ್ತುಪಂಡಿತರು ನಿಸ್ಸಂಶಯದಿಂದ ಒಪ್ಪಿಕೊಂಡಿರುವುದರಿಂದ, ಹಾಗಂತ ಇರುವುದನ್ನೇ ಅನುಸರಿಸುತ್ತಿರುವುದರಿಂದ ಇವರು ಯಾರ ಬಳಿಯೇ ಕೇಳಿದರೂ ಅದನ್ನೇ ಹೇಳುತ್ತಿರುತ್ತಾರೆ. ಆಗ ಎಲ್ಲರಿಗೂ ಒಂದು ದಾರಿಯಾದಾಗ ಎಡವಟ್ಟನಿಗೇ ಒಂದು ದಾರೀಂತ ನಾನ್ಯಾಕೆ ಆಪತ್ತು ವಿಪತ್ತುಗಳನ್ನು ಎದುರಿಸಬೇಕು ಎಂದು ಅವರ ತತ್ವಕ್ಕೆ ತುತ್ತಾಗುತ್ತಾನೆ.

ಮನೆ ಎಂದರೆ ಮಕ್ಕಳು, ಅಭಿವೃದ್ಧಿ, ಶ್ರೇಯಸ್ಸು, ಮನೆಯಲ್ಲಿ ವಾಸ ಮಾಡುವವರ ಆರೋಗ್ಯ; ಇಂತವೆಲ್ಲಾ ಆದ್ಯತೆಯ ವಿಷಯಗಳೇ ಆಗಿದ್ದು, ಅವಕ್ಕೆ ತೊಡಕಾಗುವುದು ಎಂದು ಹೆದರಿಸಲು ಪ್ರಾರಂಭಿಸಿದಾಗ ‘ರಿಸ್ಕ್’ ತೆಗೆದುಕೊಳ್ಳುವುದು ಬೇಡ ಎನ್ನುವುದು ಶ್ರೇಯೋಭಿಲಾಷಿ ಮನಸ್ಸು.

ವಾಸ್ತುವಿಷಯದಲ್ಲಿ ಸಮಸ್ಯೆ ಇವೆ ಎಂಬ ಕಾರಣದಿಂದಲೇ ಸಿಗುವ ದೊಡ್ಡ ಮತ್ತು ಕಡಿಮೆ ಬಾಡಿಗೆಯ ಮನೆಗಳಲ್ಲಿ ಬಾಳಿ ಬದುಕಿರುವ ನನ್ನ ಮತ್ತು ಮನೆಯವರ ಬಗ್ಗೆ ನಮ್ಮ ಬಂಧು ಬಳಗದವರೆಲ್ಲಾ “ಅವರು ಅವನ್ನೆಲ್ಲಾ ನಂಬುವುದಿಲ್ಲ. ನಾವೇನು ಹೇಳಿದರೂ ಅವರು ಕೇಳುವುದಿಲ್ಲ” ಎಂಬ ದಿವ್ಯ ಜ್ಞಾನೋದಯ ಆಗಿರುವುದರಿಂದ ಅದನಿದನು ಹೇಳಲು ಬರುವುದಿಲ್ಲ. ಹೊಸದಾಗಿದ್ದ ಮತ್ತು ದೊಡ್ಡದಾಗಿದ್ದ ಮನೆ ಪಶ್ಚಿಮಕ್ಕೆ ತಲೆಬಾಗಿಲಿದ್ದು ಸ್ಮಶಾನಕ್ಕೆ ಅಭಿಮುಖವಾಗಿ ಇದೆ ಎಂದೇ ಸುಮಾರು ಮೂರ್ನಾಲ್ಕು ವರ್ಷಗಳಿಂದ ಖಾಲಿಯಿದ್ದು ನಾವು ಗೃಹಪ್ರವೇಶ ಮಾಡಿದೆವು. ನಾವು ಯಾವುದೇ ಮನೆಯಲ್ಲಿದ್ದರೆ ಸಾಧಾರಣವಾಗಿ ಯಾವ ಬಗೆಯ ಬದುಕು ಬವಣೆಗಳನ್ನು ಎದುರಿಸುತ್ತಿದ್ದೆವೋ ಅದನ್ನೇ ಎದುರಿಸುತ್ತಿದ್ದೇವೆ.

ನಮ್ಮ ಮಕ್ಕಳು ದೆವ್ವ ಅಥವಾ ಭೂತ ಬಾಧಿತವಾಗಿರುವ ಕ್ಯಾಸಲ್ಲುಗಳಂತಹ ಮನೆ ಏನಾದರೂ ಸಿಗುತ್ತಾ ಎಂದು ನೋಡುತ್ತಿರುತ್ತಾರೆ. ಭೂತದ ಭೀತಿಯಿಂದ ಬೇರೆಯವರು ಹೋಗದೇ ಇರುವ ಕಾರಣದಿಂದ ನಮಗೆ ಕಡಿಮೆ ಬೆಲೆಗೆ ಸಿಗುವುದೇನೋ ಎಂಬ ಆಶಾಭಾವನೆ ಅವರದು. ಈ ಬಗೆಯ ಮನಸ್ಥಿತಿಯು ರೂಪುಗೊಳ್ಳಲು ಅವರನ್ನು ಪ್ರಭಾವಿಸುವ ಕೌಟುಂಬಿಕ ಪರಿಸರ, ಜನ ಸಂಪರ್ಕ, ತಮ್ಮ ನಡುವೆ ಆಗುವಂತಹ ಚರ್ಚೆ, ಮಾತುಕತೆಗಳೆಲ್ಲಾ ಕಾರಣವಾಗಿರುತ್ತದೆ. ಅದೇ ಜ್ಯೋತಿಷ್ಯ, ವಾಸ್ತುವಿಚಾರ, ದೈವಿಕ ಪ್ರಭಾವ, ಭೂತಬಾಧೆಗಳೇ ಮೊದಲಾದ ವಿಷಯಗಳು ತಮ್ಮ ಸುತ್ತಮುತ್ತ ಚರ್ಚೆಯಾಗುತ್ತಿದ್ದರೆ ವ್ಯಕ್ತಿಗಳ ಮನಸ್ಥಿತಿಯೂ ಕೂಡಾ ಅವರಿಗೆ ತಿಳಿಯದಂತೆಯೇ ವಿಚಾರಗಳನ್ನು ಸ್ವೀಕರಿಸಿದ್ದೇ ಅಲ್ಲದೇ ಅವರ ಸುಪ್ತಚೇತನದಲ್ಲಿ ಬೇರೂರಿಬಿಟ್ಟಿರುತ್ತದೆ.

ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವವನ್ನು ಹೊಂದುವುದು ಸಾಂಪ್ರದಾಯಿಕ ಸಮಾಜದಲ್ಲಿ ಅಷ್ಟೇನೂ ಸುಲಭವಲ್ಲ. ಒಂದೋ ವ್ಯಕ್ತಿ ಬೆಳೆಯುವ ಪರಿಸರವೇ ಹಾಗಿದ್ದು ಪ್ರಭಾವಿಸಬೇಕು ಅಥವಾ ತನಗಾಗಿರುವ ಜ್ಞಾನೋದಯಕ್ಕೆ ಬದ್ಧನಾಗಿ ಸಾಂಪ್ರದಾಯಿಕ ದೃಷ್ಟಿಕೋನದ ಸಮಾಜವನ್ನು ಎದುರಿಸುವುದಿರಲಿ, ತನ್ನ ಮನೆಯವರನ್ನೇ ಎದುರಿಸಲು ಶತಾಯಗತಾಯ ಹೆಣಗಾಡಬೇಕಾಗುತ್ತದೆ.

ಈಗಂತೂ ಭೂಮಿಯ ಕಾಂತಕ್ಷೇತ್ರ, ಮನುಷ್ಯನ ಸಬ್ ಕಾನ್ಶಸ್ ಮೈಂಡಿನ ಬಗ್ಗೆ ಮಾತಾಡುತ್ತಾ, ತರಂಗಗಳ ಮತ್ತು ವಿಕಿರಣ ಪಾಠಗಳಿಂದ ಹೆಕ್ಕಿರುವ ವಿಷಯಗಳನ್ನೆಲ್ಲಾ ಮುಂದಿಡುತ್ತಾ ಈ ವಾಸ್ತು ಎಂಬುದು ಎಷ್ಟು ವೈಜ್ಞಾನಿಕ ಪದ್ಧತಿ ಎಂದೂ ಕೂಡಾ ಸಮರ್ಥಿಸುವ ಸುಶಿಕ್ಷಿತರು ಇದ್ದಾರೆ. ಆದರೆ ಅವರು ಮನಸ್ಸಿನ ದೌರ್ಬಲ್ಯ ಮತ್ತು ಸಾಮರ್ಥ್ಯವನ್ನು ಹಾಗೂ ಅವುಗಳು ರೂಪುಗೊಳ್ಳುವ ಬಗೆಯನ್ನು ಮರೆತುಬಿಡುವುದೇ ಸೋಜಿಗ. ಮನುಷ್ಯನ ಆಸೆ ಮತ್ತು ಭಯವನ್ನೇ ಬಂಡವಾಳವಾಗಿರಿಸಿಕೊಂಡಿರುವ ವಾಸ್ತುಪಂಡಿತರು ತಮ್ಮ ವ್ಯಾಪಾರ ವ್ಯವಹಾರ ಮತ್ತು ಲಾಭಕ್ಕೆ ಈ ವಿಷಯವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರೆ, ಸಾಮಾನ್ಯ ಜನರು ತಮ್ಮ ಭಯಭರಿತ ಜ್ಞಾನವನ್ನು ಕಾಳಜಿಭರಿತವಾಗಿ ಪುಕ್ಕಟೆಯಾಗಿ ಹಂಚಿಕೊಂಡು ಬರುತ್ತಿರುತ್ತಾರೆ. ಬಹಳಷ್ಟು ಜನರು ವಾಸ್ತುವಿಗೆ ಈ ಪಾಟಿ ಶರಣಾಗಿರುವುದೇ ಹೀಗೆ.

ಗಾಳಿ, ಬೆಳಕು ಚೆನ್ನಾಗಿರಬೇಕು, ಹವಾಮಾನದ ವೈಪರೀತ್ಯಗಳನ್ನು ತಾಂತ್ರಿಕವಾಗಿ ಎದುರಿಸುವಂತಿರಬೇಕು, ಮನೆಯೊಳಗೆ ಆಗುವಂತಹ ಕೆಲಸಗಳಿಗೆ ಪೂರಕವಾಗಿ ಸ್ಥಳಾವಕಾಶ ಮತ್ತು ಸ್ಥಳಾಂತರಗಳಿರಬೇಕು, ಗೋಡೆಗೆ ಹಚ್ಚಿರುವ ಬಣ್ಣ ಬೆಳಕನ್ನು ಪ್ರತಿಫಲಿಸುತ್ತದೆ ಅಥವಾ ಇಲ್ಲ, ಕಾಣುವ ಬಣ್ಣ ಕಣ್ಣುಗಳಿಗೆ ತಂಪು ಕೊಡುವುದೋ ಇಲ್ಲವೋ; ಈ ರೀತಿಯಾಗೆಲ್ಲಾ ನೋಡುವ ಬದಲು ವಾಸ್ತು ಪಂಡಿತರ ನಿರ್ದೇಶನಗಳಿಗೆ ತಮ್ಮನ್ನು ಒಗ್ಗಿಸಿಕೊಳ್ಳಲು ಯತ್ನಿಸುವ ಮನಸುಗಳಿಗೆ ಬಲ ಬೇಕಿದೆ.

ನಾನು ಸಣ್ಣವನಿದ್ದಾಗ ಕೆಲಸ ಮಾಡದಿದ್ದ ವಾಸ್ತುದೋಷಗಳೆಲ್ಲಾ ಈಗ ಲವಲವಿಕೆಯಿಂದ ಚುರುಕಾಗಿರುವುದನ್ನು ಕಾಣುತ್ತಿದ್ದೇನೆ. ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೊಂಡು ಅಂತರ್ಜಾಲದಲ್ಲಿ ಬಹಳ ಸುಲಭವಾಗಿ ಪ್ರಚಾರ ಪಡೆಯುತ್ತಿರುವ ವ್ಯವಹಾರಗಳು ಮನುಷ್ಯನ ಆಸೆ ಮತ್ತು ಭಯಗಳನ್ನು ಸರಿಯಾಗಿ ದುಡಿಸಿಕೊಳ್ಳುತ್ತಿವೆ. ಮನಸ್ಸುಗಳಿಗೆ ಬಲ ನೀಡುವುದು ಅಷ್ಟೇನೂ ಸುಲಭವಲ್ಲ. ವಾಸ್ತವದಲ್ಲಿ ದೌರ್ಬಲ್ಯವೇ ಅತ್ಯಂತ ಬಲವಾಗಿರುವುದು.

*ಲೇಖಕರು ರಂಗ ನಿರ್ದೇಶಕರಾಗಿ, ಕಥೆಗಾರರಾಗಿ, ನಾಟಕಕಾರರಾಗಿ, ಸಂಗೀತಗಾರರಾಗಿ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published.