ವೈದ್ಯರ ಸಂದರ್ಶನ

ಡಾ.ಮಧುಸೂದನ ಕಾರಿಗನೂರು

ಡಾ.ಮಧುಸೂದನ ಕಾರಿಗನೂರು ಅವರು ಖ್ಯಾತ ಶಸ್ತ್ರಚಿಕಿತ್ಸಕರು; ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಳ್ಳಾರಿ ಜಿಲ್ಲೆ ಶಿರುಗುಪ್ಪದಲ್ಲಿ ವೃತ್ತಿನಿರತರು. ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ (ಎಎಸ್‌ಐ) ಕಾರ್ಯಕಾರಿ ಸಮಿತಿ ಸದಸ್ಯರು. ಸೃಜನ ಸೊಸೈಟಿ ಮೂಲಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

 

ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ

ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು ಕರ್ನಾಟಕದ ಪ್ರಥಮ ಮಹಿಳಾ ಹೃದ್ರೋಗ ತಜ್ಞರು. ಮೊದಲಬಾರಿಗೆ ಮಕ್ಕಳ ಹೃದ್ರೋಗ ವಿಭಾಗ ಸ್ಥಾಪಿಸಿದ ಹೆಗ್ಗಳಿಕೆ ಇವರದು. ಭಾರತ ರತ್ನ ಅಬ್ದುಲ್ ಕಲಾಂ ಮತ್ತು ಪ್ರತಿಭಾತಾಯಿ ಪಾಟೀಲರಿಂದ ಜೀವಮಾನ ಸಾಧನೆಗೆ ಪ್ರಶಸ್ತಿ ಪಡೆದಿದ್ದಾರೆ. 46 ವರ್ಷ ಸರಕಾರಿ ಸೇವೆ ಸಲ್ಲಿಸಿದ್ದಾರೆ, ಜನಪ್ರಿಯ ಅಂಕಣಕಾರರು.

 

  1. ಕೋವಿಡ್-19 ರೋಗದ ತಿಳಿವಳಿಕೆ ಮತ್ತು ತೀವ್ರತೆಯ ಬಗ್ಗೆ ಇದುವರೆಗೆ ಭಾರತದಲ್ಲಿ ಲಭ್ಯವಿರುವ ಮಾಹಿತಿ ಸಮಾಧಾನಕರವಾಗಿದೆಯೇ.? ಇಲ್ಲವಾದಲ್ಲಿ ಈ ರೋಗಲಕ್ಷಣದ ಬಗ್ಗೆ ನಮ್ಮ ಅರಿವಿನಲ್ಲಿರುವ ಕೊರತೆಗಳಾವುವು?

ಡಾ.ಮಧುಸೂದನ: ಕೋವಿಡ್ -19 ರೋಗದ ತಿಳಿವಳಿಕೆ, ತೀವ್ರತೆ ಬಗ್ಗೆ ಇದುವರೆಗೆ ಭಾರತದಲ್ಲಿ ದೊರೆತ ಮಾಹಿತಿ ಸಮಾಧಾನಕರವಾಗಿದೆ. ಆದರೆ ಪೂರ್ಣ ಮಾಹಿತಿ ಯಾರಿಗೂ ಇಲ್ಲ. ಕೊರತೆಗಳು- ಯಾರಲ್ಲಿ ಹೇಗೆ ಈ ರೋಗ ತನ್ನ ಕಬಂಧ ಬಾಹುಗಳನ್ನು ಚಾಚುತ್ತದೆ ಅನ್ನುವುದು ಅರಿವಿಲ್ಲದ ವಿಷಯ. Natural history ಅಂದರೆ ರೋಗ ನಡೆದುಕೊಳ್ಳುವ ರೀತಿ ಇವತ್ತಿನವರೆಗೂ ಅಪೂರ್ಣ ಜ್ಞಾನದ್ದಾಗಿದೆ.

ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ: ಭಾರತದ ವೈದ್ಯರಿಗೆ, ICMR ಮತ್ತು ಕೇಂದ್ರ ಸರ್ಕಾರಕ್ಕೆ ಕೊರೋನಾ ಕುರಿತು ಸಮಗ್ರ ತಿಳಿವಳಿಕೆ ಇದೆ. ಆದರೆ, ಜನಸಾಮಾನ್ಯರಿಗೆ ಇದರ ತಿಳಿವಳಿಕೆ ಕಡಿಮೆ. ಇದು genetically engineered most virulent ವೈರಾಣು ಆಗಿರುವುದರಿಂದ ಅದರ ಹರಡುವಿಕೆ ಮತ್ತು ಪರಿಣಾಮ ಭಯಂಕರ ಅಂತ ಭಾರತೀಯ ಜನರು ಸರಿಯಾಗಿ ಅರಿತಿಲ್ಲ. ಆದ್ದರಿಂದ ಅಸಡ್ಡೆ ಉಡಾಫೆಯಿಂದ ವರ್ತಿಸುತ್ತಿರುವುದು ದುರಂತ.

  1. ಕೋವಿಡ್-19 ರೋಗಕ್ಕೆ ನಮ್ಮ ಸರ್ಕಾರಗಳು 2020ರ ಮಾರ್ಚ್ ನಿಂದ ಜೂನ್ ವರೆಗೆ ಪ್ರತಿಕ್ರಿಯಿಸಿದ ರೀತಿಯ ಬಗ್ಗೆ ನಿಮ್ಮ ಅನಿಸಿಕೆಯೇನು..?

ಡಾ.ಮಧುಸೂದನ: ಕೋವಿಡ್-19 ರೋಗಕ್ಕೆ ಸರಕಾರದ ಮೊದಲ ಪ್ರತಿಕ್ರಿಯೆ ಸರಿಯಾದದ್ದೇ. ಲಾಕ್‌ಡೌನ್‌ನಿಂದ ಕೊರೋನಾ ಹೊಡೆದೋಡಿಸಬಲ್ಲೆವೆಂಬ ತಪ್ಪು ತಿಳಿವಳಿಕೆ ಮನೆ ಮಾಡಿತ್ತು. ಈ ಕ್ರಮ ಯಾವುದೇ ಒಂದು ಪ್ಯಾಂಡಮಿಕ್ ಮುಂದೂಡಲು ಹಾಗೂ ಅದನ್ನು ಎದುರಿಸಲು ಸಿದ್ಧತೆಗೆ ಮಾತ್ರ ಎಂದು ಸಾರ್ವಜನಿಕರಲ್ಲಿ ತಿಳಿವಳಿಕೆ ತರುವಲ್ಲಿ ಸೋತೆವು ಎಂದೆನಿಸುತ್ತೆ. ಏಪ್ರಿಲ್ ಕೊನೆಯವಾರದಲ್ಲಿ ರೋಗ, ರಾಜಕೀಯವಾದಾಗ, ಸಂಖ್ಯಾ ಆಟವಾದಾಗ, ಬಹಳಷ್ಟು ಕಡೆ ನಾವು ಸೋತೆವು. ಆದರೆ ಇದು ದಿನವೂ ಬದಲಾಗುತ್ತಿರುವ ಕಾಯಿಲೆ. ಇದರಲ್ಲಿ ಹೀಗೆ ಮಾಡಿದರೆ ಸರಿಯಾಗುತ್ತದೆ ಎಂಬ ನಂಬಿಕೆ ಸಲ್ಲ. ನಾವು ಸಾಧಾರವಾಗಿ ಬೇರೆ ದೇಶಕ್ಕಿಂತ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ್ದೆವು. ಈಗಲೂ ಕೊರೋನಾ ಸಾವಿನ ಸಂಖ್ಯೆ ಅಂತರರಾಷ್ಟ್ರೀಯ  ಮಿತಿಯನ್ನು ಮೀರಿಲ್ಲ.

ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ: ಕೇಂದ್ರ ಮತ್ತು ಹಲವು ರಾಜ್ಯ ಸರ್ಕಾರಗಳು ಹಣ ಹೋದರೂ ಪರವಾಗಿಲ್ಲ ಹೆಣ ಬೀಳಬಾರದೆಂದು ಕಟ್ಟುನಿಟ್ಟಿನಿಂದ ಮೂರು ಸಲ ಲಾಕ್‌ಡೌನ್ ಮಾಡಿ ಜನರಲ್ಲಿ ಶಿಸ್ತು ತರಲು ಹರಸಾಹಸ ಮಾಡಿದ್ದು ಶ್ಲಾಘನೀಯ. ಕೇವಲ ಒಂದು ವೈರಾಣು ಪರೀಕ್ಷಾ ಕೇಂದ್ರದಿಂದ 1500 ಕೇಂದ್ರ ಸ್ಥಾಪಿಸಿ, ಮುಖದ ಕವಚ, ವೈದ್ಯರ ಶರೀರ ಕವಚ, ಔಷಧಿಗಳನ್ನು ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿ ಜನರ ಜೀವ ಉಳಿಸಲು ಆದ್ಯತೆ ಕೊಟ್ಟಿದ್ದು ಅನುಕರಣೀಯ ಅಭಿನಂದನೀಯ.

  1. ಕಳೆದ ನಾಲ್ಕು ತಿಂಗಳಲ್ಲಿ ಭಾರತದಲ್ಲಿ ರೋಗದ ಪ್ರಸರಣ ಹೆಚ್ಚಿದ್ದರೂ ರೋಗದ ತೀವ್ರತೆ ಕಡಿಮೆಯಾಗಿದೆಯೇ..?

ಡಾ.ಮಧುಸೂದನ: ಖಂಡಿತ, ಪ್ರಸರಣ ಹೆಚ್ಚಿದೆ. ತೀವ್ರತೆ ಯಾವತ್ತೂ ನಮ್ಮ ದೇಶದಲ್ಲಿ ಹೆಚ್ಚಿಲ್ಲ.

ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ: ಕಳೆದ ನಾಲ್ಕು ತಿಂಗಳಲ್ಲಿ ಭಾರತ ಮೂರನೇ ಹಂತಕ್ಕೆ ತಲುಪಿ ಸಮುದಾಯ ಹರಡುವಿಕೆಯ ಸ್ಥಿತಿಗೆ ಬಂದಿದ್ದರಿಂದ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿದೆ. ಆದರೆ ಮಾಧ್ಯಮ, ರೇಡಿಯೋ, ಮೊಬೈಲ್‌ನಲ್ಲಿಯ ಕೊರೋನಾದ ಜಾಗೃತಿಯ ಸಂದೇಶಗಳ ಫಲವಾಗಿ ಬೇಗ ಆಸ್ಪತ್ರೆಗೆ ಹೋದವರ ಜೀವ ಉಳಿದಿದೆ. ಇದರ ಅರ್ಥ ತೀವ್ರತೆ ಕಡಿಮೆ ಆಗಿದೆ ಅಂತ ಅಲ್ಲ, ವೈರಾಣು ಶರೀರ ಸೇರಿದ ಮೇಲೆ ಸಂಖ್ಯೆ ಬೆಳೆಯದಂತೆ ವೈದ್ಯರು ಕೊಡುತ್ತಿರುವ ಚಿಕಿತ್ಸೆ ಕಾರಣ. ಆದ್ದರಿಂದ ಸೋಂಕಿತರು ಭಯದಿಂದ ಬಚ್ಚಿಟ್ಟುಕೊಳ್ಳದೇ ಆಸ್ಪತ್ರೆಗೆ ತ್ವರಿತವಾಗಿ ಹೋದರೆ ಸಾವಿನ ಸಂಖ್ಯೆ ಕಡಿಮೆ ಆಗುವುದು.

  1. ಈ ರೋಗದ ಚಿಕಿತ್ಸೆಯಲ್ಲಿ ಇದುವರೆಗೆ ನಾವು ಮಾಡಿರುವ ತಪ್ಪುಗಳು ಹಾಗೂ ಸರಿಗಳೇನು..?

ಡಾ.ಮಧುಸೂದನ: ಚಿಕಿತ್ಸೆ ತಪ್ಪಾಗಿದೆ ಅಂತ ಅನ್ನಿಸುತ್ತಿಲ್ಲ. Its evolving. ಅದು ಬದಲಾಗುತ್ತಲೇ ಇರುತ್ತದೆ. ರೋಗದ ದಾರಿ ನಮಗೆ ಸರಿಯಾಗಿ ತಿಳಿಯದಿದ್ದರೆ ಅದು ಹಾಗೇ ನಡೆದುಹೋಗುವುದು.

ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ: ಕಳೆದ ಒಂದು ತಿಂಗಳಲ್ಲಿ ಜ್ವರ-ಕೆಮ್ಮು ಬಂದ ಒಂದು ಲಕ್ಷ ಜನ ತಾವೇ ಅಂಗಡಿಯಿಂದ ಔಷಧಿ ಪಡೆದು ಸೇವಿಸಿದ್ದು ದೊಡ್ಡ ತಪ್ಪು. ಇವರಲ್ಲಿ ಎಷ್ಟೋ ಜನರಿಗೆ ಕೊರೋನಾ ಇತ್ತು ಎಂದು ಗೊತ್ತಾಗದೇ ಅವರು ಸಮುದಾಯ ಹರಡುವಿಕೆಗೆ ನೇರ ಹೊಣೆಯಾಗಿದ್ದಾರೆ. ಆದರೆ, ಹಲವು ಪ್ರಜ್ಞಾವಂತ ನಾಗರಿಕರು ತಕ್ಷಣ ಪರೀಕ್ಷಿಸಿಕೊಂಡು ಮನೆಯಲ್ಲಿಯೇ quarantine ಮಾಡಿಕೊಂಡು ಸೋಂಕು ಹರಡುವಿಕೆ ತಡೆಗಟ್ಟಲು ಮುಂದಾದದ್ದು ಉತ್ತಮ ವಿಚಾರ.

  1. ಮುಂದಿನ ಕೆಲವು ತಿಂಗಳುಗಳಲ್ಲಿ ಸಿಗುವ ಲಸಿಕೆಗಳು ಎಷ್ಟುಮಟ್ಟಿಗೆ ಪರಿಣಾಮಕಾರಿಯಾಗಬಲ್ಲುವು..? ಲಸಿಕೆಯು ರೋಗವನ್ನು ಅಂತ್ಯಗೊಳಿಸುವುದೇ..?

ಡಾ.ಮಧುಸೂದನ: ಲಸಿಕೆಯ ವಿಷಯ ಮಾತನಾಡಲು ಈಗ ಸರಿಯಾದ ಸಮಯವಲ್ಲ. ಸಂಶೋಧನೆಯೇ ಅದಕ್ಕೆ ಉತ್ತರ. ವಿಜ್ಞಾನಿಗಳೇ ಅದರ ಪರಿಣಾಮಕಾರಿತನದ ಬಗ್ಗೆ ಹೇಳಬಲ್ಲರು.

ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ: ಖಂಡಿತ ಇಲ್ಲ. ಲಸಿಕೆ ಇನ್ನೂ ಮೂರನೇ ಹಂತದ ಪರೀಕ್ಷೆ ದಾಟಿಲ್ಲ. ಹಾಗಾಗಿ ಲಸಿಕೆ ಬಿಸಿಲುಗುದುರೆ ಆಗಿದೆ. ಭಾರತದಲ್ಲಿ ಈ ವೈರಾಣು ಹನ್ನೊಂದು ಸಲ ರೂಪಾಂತರಗೊಂಡಿದ್ದರಿಂದ ಸದ್ಯದಲ್ಲಿ ಲಸಿಕೆ ಸಿಗುವುದು ಕಷ್ಟ ಸಾಧ್ಯ. ಭಾರತದ 133 ಕೋಟಿ ಜನರಿಗೆ ಲಸಿಕೆ ಕೊಡಲು ಮೂರು ವರ್ಷಗಳು ಬೇಕು. ಈ ಲಸಿಕೆ ಜೀವನ ಪರ್ಯಂತ ರೋಗ ನಿರೋಧಕ ಶಕ್ತಿ ಕೊಡುವುದಿಲ್ಲ. ಹಾಗಾಗಿ ಲಸಿಕೆಗೆ ಕಾಯದೇ ಜನರು ತಮ್ಮ ಜೀವನಶೈಲಿ ಬದಲಿಸಲೇಬೇಕಾದ ಅನಿವಾರ್ಯವಿದೆ.

  1. ಕಳೆದ ನಾಲ್ಕು ತಿಂಗಳಲ್ಲಿ ರೋಗನಿರೋಧಕ ಪ್ರತಿಕ್ರಿಯೆ (ಇಮ್ಯೂನ್ ರೆಸ್ಪಾನ್ಸ್) ವೃದ್ಧಿಸುವ ಹಳೇ ಚಿಕಿತ್ಸೆ/ಲಸಿಕೆಗಳನ್ನು (ಹೆಚ್ಸಿಕ್ಯು, ಬಿಸಿಜಿ, ಎಂಎಂಆರ್ ಇತ್ಯಾದಿ) ಬಳಸಿದ್ದರೆ ರೋಗದಿಂದ ಜನಜೀವನಕ್ಕೆ ಆಗಿರುವ ಹಾನಿಯನ್ನು ತಡೆಯಬಹುದಿತ್ತೇ..?

ಡಾ.ಮಧುಸೂದನ: ಇಲ್ಲ. ಹಾಗೆ ಖಂಡಿತಾ ಹೇಳಲಾಗುವುದಿಲ್ಲ. ಇವೆಲ್ಲಾ ಒಂದಷ್ಟು ಮಾಹಿತಿಗಳಷ್ಟೇ. ಒಂದಷ್ಟು ಥಿಯರಿಗಳು. ಅವೇ ಸತ್ಯ ಅನ್ನಲು ಸಂಶೋಧನಾರೀತಿಯಲ್ಲಿ ಖಡಾಖಂಡಿತ ಉತ್ತರಗಳಿಲ್ಲ.

ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ: ಆಗಲೇ ನಮ್ಮ ದೇಶದಲ್ಲಿ BCG ಮತ್ತು MMR ಕಡ್ಡಾಯವಾಗಿ ಪುಕ್ಕಟೆಯಾಗಿ ನೀಡಿದ್ದರಿಂದ ನಮ್ಮ ದೇಶದ ಮಕ್ಕಳಲ್ಲಿ ಈ ಸೋಂಕು ಹೆಚ್ಚಾಗಿ ಕಂಡಿಲ್ಲ. ಇದು ಉತ್ತಮ ವಿಚಾರ. ಆದರೆ ಕೊರೋನಾ ವೈರಾಣು ಕಣ್ಣಿಗೆ ಕಾಣದ ವೈರಿ. ಇದರ ವಿರುದ್ಧ ಯಾವುದೇ ರೋಗ ನಿರೋಧಕ ಮದ್ದು ಪ್ರಯೋಜನವಿಲ್ಲ. ಕಾರಣ ಕೊರೋನಾ ವೈರಾಣುವಿನ ಮೇಲಿರುವ ಸಕ್ಕರೆ (carbohydrate molecule) ಅದನ್ನು ನಮ್ಮ ಜೀವಕಣದ ರೀತಿಯಲ್ಲಿ ಕಾಣುವಂತೆ ಮಾಡಿರುತ್ತದೆ. ಹಾಗಾಗಿ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಆದರೆ ದೇವಪ್ರಯಾಗದ ಜೆನೆಟಿಕ್ ವಿಜ್ಞಾನಿಯ ಪ್ರಕಾರ ಭಾರತೀಯರು ಅನುವಂಶಿಕವಾಗಿ ಈ ವೈರಾಣುವನ್ನು ಎದುರಿಸಲು ಪಾಶ್ಚಾತ್ಯರಿಗಿಂತ ಹೆಚ್ಚು ಸಕ್ಷಮರು!

  1. ಚಿಕಿತ್ಸೆ ಮತ್ತು ಲಸಿಕೆಯ ಮೊದಲೇ ನಮ್ಮ ನಗರಗಳಲ್ಲಿ ಸಮೂಹ ರೋಗನಿರೋಧಕ ಶಕ್ತಿ (ಹರ್ಡ್ ಇಮ್ಯುನಿಟಿ) ವ್ಯಾಪಕವಾಗಿ ಬೆಳೆದು ರೋಗ ನಿಯಂತ್ರಣಕ್ಕೆ ಬರಬಹುದೇ..? ಇದಕ್ಕೆ ಇರುವ ಅಡೆತಡೆಗಳೇನು..?

ಡಾ.ಮಧುಸೂದನ: ಬರಬಹುದು. ಅದು ಭಾರತದಲ್ಲಿ ಖಂಡಿತ ಸಾಧ್ಯವಾಗಬಹುದು. ಅಡೆತಡೆ ಅನ್ನಲಾಗದು, ಆದರೆ ಅದು ಬರಲಿ ಎಂದು ರಸ್ತೆಗೆ ಹೊಕ್ಕು ಕೋವಿಡ್ ರೋಗವನ್ನು ಸ್ವಾಗತಿಸಲಾಗದು. ಹಾಗಾದರೆ ನಮ್ಮ ಸಾವು ನೋವು ಹೆಚ್ಚಾಗುವ ಸಂಭವ ಇದೆ.

ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ: Herd immunity ನಮ್ಮ ದೇಶದಲ್ಲಿ ಅಸಾಧ್ಯ. ಕಾರಣ ಈ ತರಹ ಸಮೂಹದಲ್ಲಿ ರೋಗನಿರೋಧಕ ಶಕ್ತಿ ಬೆಳೆಯಬೇಕೆಂದರೆ ಶೇ.50 ಜನಸಂಖ್ಯೆಗೆ ಸೋಂಕು ತಗುಲಬೇಕು. ಹಾಗೆ ಆಗಬೇಕೆಂದರೆ 67 ಕೋಟಿ ಜನರಿಗೆ ಸೋಂಕು ಆಗಬೇಕು. ಅದರಲ್ಲಿ ಶೇ.2 ಸಾವು ಸಂಭವಿಸಿದರೂ 66 ಲಕ್ಷ ಜನ ಸಾಯಬೇಕಾಗುತ್ತದೆ. ಇದನ್ನು ಯಾವ ಮುಂದುವರಿದ ಸಮಾಜ ಒಪ್ಪಲು ಸಾಧ್ಯವಿಲ್ಲ. ಇಂಥ ಮೂರ್ಖತನದ ಮಾತು ಬಿಟ್ಟು ಸೋಂಕು ತಡೆಗಟ್ಟುವ ವಿಧಾನಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವುದು ಬಹಳ ಮುಖ್ಯ.

  1. ಈ ಕೋವಿಡ್-19ಕ್ಕೆ ಅಂತ್ಯ ಹೇಗೆ..? ಚಿಕಿತ್ಸೆಯೇ, ಲಸಿಕೆಯೇ ಅಥವಾ ಸಮೂಹ ರೋಗನಿರೋಧಕ ಶಕ್ತಿಯೇ..?

ಡಾ.ಮಧುಸೂದನ: ಮೇಲೆ ಹೇಳಿದ ಎಲ್ಲವೂ ಅದಕ್ಕೆ ಉತ್ತರ. ಅದರದರ ರೀತಿಯಲ್ಲಿ ಪ್ರತಿಯೊಂದೂ ತಮ್ಮ ತಮ್ಮ ರೀತಿಯಲ್ಲಿ ಈ ರೋಗದ ಅಂತ್ಯಕ್ಕೆ ಉತ್ತರ ಕೊಡುತ್ತವೆ.

ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ: ಕೊರೋನಾ ಅಂತ್ಯ ಹೇಳಲು ಕೇವಲ ನಮ್ಮ ಜೀವನ ಶೈಲಿ ಬದಲಾಯಿಸಿ ‘ಶುಚಿತ್ವವೇ ದೈವತ್ವ’ ಅಂತ ನಂಬಿ ಪಂಚಸೂತ್ರಗಳನ್ನು ಪಾಲಿಸಬೇಕು. 1. ಮುಖಕವಚ. 2. ಪದೇಪದೆ ಸೋಪಿನೊಂದಿಗೆ ಕೈ ತೊಳೆದುಕೊಳ್ಳುವುದು. 3. ಸಾಮಾಜಿಕ ದೂರ ಕಾಯ್ದುಕೊಳ್ಳುವುದು. 4. ಶೌಚಾಲಯದ ಶುಚಿತ್ವ ಕಾಪಾಡುವುದು. 5. ವಿನಾಕಾರಣ ಓಡಾಡುವುದನ್ನು ಬಿಟ್ಟು ನಿಯಮಿತ ಸಮತೋಲನ ಆಹಾರ ಸೇವಿಸಿ ಧ್ಯಾನ, ಯೋಗ, ವ್ಯಾಯಾಮ ಮಾಡಿ ಸಕಾರಾತ್ಮಕ ಜೀವನ ನಡೆಸುವುದು.                                          

Leave a Reply

Your email address will not be published.