ಶವಸಂಸ್ಕಾರದ ಬಹು ಆಯಾಮಗಳು

ಸತ್ತವನು ಎಷ್ಟು ಐಭೋಗದಿಂದ ತಿಥಿ ಮಾಡಿಸಿಕೊಂಡ ಎಂಬುದಕ್ಕಿಂತ ಸತ್ತೂಬದುಕಿದ ಎಂಬುದೇ ಆದರ್ಶ ಆಗಬೇಕು. ಕೋಟಿ ಕೊಟ್ಟರೂ ಸಿಗಲಾರದ ಕಣ್ಣು ಮಣ್ಣಾಗುವ ಬದಲು ಇನ್ನೊಬ್ಬರಿಗೆ ಕಣ್ಣಾಗುವುದು ಒಳ್ಳೆಯದು. ‘ಅಪ್ಪು’ ಕಣ್ಣುಗಳಿಂದ ನಾಲ್ವರ ಕತ್ತಲೆಗೆ ಬೆಳಕು ಬಂದಿದೆ.

ಡಾ.ಟಿ.ಗೋವಿಂದರಾಜು

ಜನಪ್ರಿಯ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನರಾದಾಗ ಜಾತಿಸಂಬಂಧ ಮೀರಿದ ಜೀವಗಳು ಮನೆಗಳಿಂದಲೇ ಬಹುಬಗೆಯ ‘ಎಡೆ’ಗಳನ್ನು ತಂದು, ಮೃತರಿಗೆ ‘ಉಣ್ಣಿಸಿ’ ತಾವೂ ಪ್ರಸಾದದಂತೆ ಕಣ್ಣಿಗೆ ಒತ್ತಿಕೊಂಡು ಹೋದದ್ದರಲ್ಲಿ ಯಾವ ಪ್ರಚಾರ ಆಕರ್ಷಣೆಯಾಗಲೀ, ರಾಜಕಾರಣವಾಗಲೀ ಇರಲಿಲ್ಲ. ಇದ್ದದ್ದು ಗೌರವ; ಮಹಾ ಚೇತನವನ್ನು ತಮ್ಮೊಳಗೆ ಒಂದುಗೂಡಿಸಿಕೊಳ್ಳುವ ಶೂದ್ರಾಪಿತನ.

ಕಾರಣಾಂತರಗಳಿಂದ ಮೂರನೇ ದಿನಕ್ಕೆ ‘ಶವ ಮಣ್ಣಿಗಿಕ್ಕುವ’ ಹಾಗೂ ಐದನೇ ದಿನಕ್ಕೆ ‘ಹಾಲುತುಪ್ಪ’ (ಕೂಳು) ವಿಧಿಗಳು ಜರುಗಿದ್ದು ಟಿವಿಗಳಲ್ಲಿ ಪ್ರಸಾರವಾದಾಗ ಕೆಲವು ನಿರೂಪಕರು ಆಡಿದ ಮಾತು ಸಾಮಾಜಿಕ ಮಾಧ್ಯಮಗಲ್ಲಿ ಚರ್ಚೆಗೆ ಪಕ್ಕಾಗಿದೆ: ಸಂಸ್ಕಾರ ವಿಧಿಗಳಲ್ಲಿ ‘ವೈದಿಕ ಪುರೋಹಿತರು’ ಕಾಣದ್ದು ಅವರಿಗೆ ದೊಡ್ಡ ಸೋಜಿಗವೆನಿಸಿದೆ. ಪುರೋಹಿತರಿಲ್ಲದೆ ಪ್ರೇತಾತ್ಮ ‘ವೈಕುಂಠ’ದ ದಾರಿ ಕಾಣಲು ಸಾಧ್ಯವಿಲ್ಲ ಎಂಬ ನಂಬಿಕೆ ಇದಕ್ಕೆ ಕಾರಣವಿದ್ದಂತಿದೆ. ವಾಸ್ತವದಲ್ಲಿ ಸ್ವತಃ ವೈದಿಕರೆಲ್ಲರೂ ಒಂದೇ ಬಗೆಯವರಲ್ಲ; ತ್ರಿಮತಸ್ಥರಲ್ಲಿಯೂ ಪ್ರದೇಶದಿಂದ ಪ್ರದೇಶಕ್ಕೆ ಬದಲಾವಣೆಗಳಿವೆ. ಅನೇಕರು ಯಾಜ್ಞವಲ್ಕರನ್ನು ಒಪ್ಪಿದರೆ ಹಲವರಿಗೆ ಅವರು ಒಗ್ಗಲಾರರು.

ಇನ್ನು ನೂರೆಂಟು ಒಳಪಂಗಡಗಳಾಗಿ ವಿಭಜನೆಯಾಗಿರುವ, ದ್ರಾವಿಡಶಾಸ್ತ್ರಸಂಪ್ರದಾಯಗಳೆಲ್ಲಾ ಒಂದೇ ಬಗೆಯಾಗಿರುವುದು ಹೇಗೆ ಸಾಧ್ಯ? ನೆಲಮಂಗಲ ಸುತ್ತಲಿನ ಒಕ್ಕಲಿಗರ ಆಚಾರಸಂಸ್ಕøತಿಯಲ್ಲಿ ವೈಷ್ಣವ ಪ್ರಭಾವ ಇರುವಂತೆ ಶೈವ ಪದ್ಧತಿಗಳೂ ಕಂಡುಬರುತ್ತವೆ; ಮಂಡ್ಯ ಒಕ್ಕಲಿಗರಲ್ಲಿ ನಾಥಪಂಥದ ಆಚರಣೆಗಳೂ ಇವೆ. ರಾಮನಗರ ಜಿಲ್ಲೆಯ ಒಬ್ಬರ ತಿಥಿ ಸಂಸ್ಕಾರದಲ್ಲಿ ದಾಸಪ್ಪ ಹಾಗೂ ನಾಥಪಂಥದ ಜೋಗಪ್ಪ ಇಬ್ಬರೂ ತಮ್ಮ ತಮ್ಮ ಕ್ರಿಯಾವಿಧಿಗಳನ್ನು ನೆರವೇರಿಸಿದರು. ಬಹುಶಃ ಅವರಿಬ್ಬರೂ ತಮ್ಮ ಕೈಲಾದಮಟ್ಟಿಗೆ ಮೃತನನ್ನು ‘ವೈಕುಂಠ’ಕ್ಕೂ, ‘ಕೈಲಾಸ’ಕ್ಕೂ ಸೇರಿಸುವ ಪ್ರಯತ್ನ ಮಾಡಿರಬಹುದು. ಸತ್ತವನ ಹೆಂಡತಿಯ ತಂದೆತಾಯಿ ತಿರುಪತಿ ಒಕ್ಕಲಿನವರಾದರೆ, ಗಂಡ ಚುಂಚನಗಿರಿ ಭೈರವನ ಒಕ್ಕಲಿನವರು.

ನಂಬಿಕೆಗಳು ಬಹುಮಟ್ಟಿಗೆ ಶುಭಕಾರಕ, ಅಶುಭಕಾರಕ ಆಶಯದ ಹಿನ್ನೆಲೆಯಲ್ಲಿಯೇ ಹುಟ್ಟಿಕೊಂಡಿವೆ. ಹಾಗೇ, ವೈದಿಕ ವಿಧಿಗಳು ‘ತರ್ಪಣ’ ಪದ್ಧತಿ ಹಾಗೂ ಶೂದ್ರಾಪಿಗಳದು ‘ಅರ್ಪಣ’ ಪದ್ಧತಿಗಳಾಗಿವೆ ಎನ್ನಬಹುದು. ವೈದಿಕರಲ್ಲಿ ವ್ಯಕ್ತಿ ಸತ್ತ ತಕ್ಷಣ ‘ಅದನ್ನು’ ಆದಷ್ಟೂ ಬೇಗ ವಿಧಿಗಳಂತೆ ಮನೆಯಾಚೆ ಸಾಗಿಸಿ ಬೆಂಕಿಗಿಡುವ ಆತುರವಿರುತ್ತದೆ; ಮೃತನು ಎಷ್ಟೇ ಆತ್ಮೀಯನಾಗಿದ್ದರೂ ಮಹಿಳೆಯರು ಸ್ಮಶಾನಕ್ಕೆ ಹೋಗಬಾರದೆಂಬ ನಿಬಂಧನೆಗಳಿರುತ್ತವೆ. ಆದರೆ ಇತರರಲ್ಲಿ ಮಹಿಳೆಯರೂ ಶವಕ್ಕೆ ಹೆಗಲು ಕೊಡಬಹುದಾಗಿದೆ. ವ್ಯಕ್ತಿಯು ‘ಜೀವಿಸು’ವ (ಉಸಿರು ನಿಲ್ಲಿಸುವ) ಸೂಚನೆ ಸಿಗುತ್ತಿದ್ದಂತೆಯೇ ಆ ವ್ಯಕ್ತಿಯನ್ನು ಮನೆಯ ಹೊರಭಾಗಕ್ಕೆ ಸಾಗಿಸುವುದು ಸಾಮಾನ್ಯವಾಗಿದೆ. ಉಸಿರು (ಆತ್ಮ) ಆಚೆ ಹೋಗದೆ ಮನೆಯಲ್ಲೇ ಠಿಕಾಣಿ ಹೂಡಿದರೆ ಮನೆಯವರಿಗೆ ‘ಲತ್ತೆ’ (ಕೇಡು) ಎಂಬ ನಂಬಿಕೆ ಬಲವಾಗಿದೆ. ಅಚಾನಕ್ಕಾಗಿ ಮನೆಯೊಳಗೇ ವ್ಯಕ್ತಿ ಸತ್ತರೆ ಶವವನ್ನು ತಲೆಬಾಗಿಲ ಮೂಲಕ ಆಚೆ ಸಾಗಿಸದೆ, ಗೋಡೆಯಲ್ಲಿ ಕಂಡಿ ಮಾಡಿ ಸಾಗಿಸುತ್ತಾರೆ. ಬಾಗಿಲಲ್ಲಿ ಶವ ಹೋದರೆ, ಪ್ರೇತಾತ್ಮ ಅದೇ ಬಾಗಿಲಲ್ಲಿ ಮನೆಯೊಳಗೆ ಬಂದು ಪೀಡಿಸಬಹುದು; ಕಿಂಡಿಯಲ್ಲಿ ಸಾಗಿಸಿದ ಬಳಿಕ ಕಿಂಡಿಯನ್ನು ಮುಚ್ಚಿಬಿಡುವುದರಿಂದ ಪ್ರೇತಾತ್ಮಕ್ಕೆ ದಾರಿ ಬಂದ್ ಆಗಿಬಿಡುತ್ತದೆ! ಕರಾವಳಿಯ ಹಲವೆಡೆ ಮರಣೋಣ್ಮುಖ ವ್ಯಕ್ತಿಯ ತಲೆಯ ಮೇಲಿನ ಚಾವಣಿಯಲ್ಲಿ ಕಿಂಡಿ ಮಾಡಿ, ಉಸಿರು ನೇರವಾಗಿ ಆಕಾಶ ಸೇರುವಂತೆ ಮಾಡುವ ಉಪಾಯವಿದೆ!

ಬುಡಕಟ್ಟಿನವರದು ಮತ್ತೊಂದು ಬಗೆ. ಸಾವನದುರ್ಗದ ಕಾಡಿನ ಪರಿಸರದ ಇರುಳಿಗರು ಶವವನ್ನು ಕಾಡಿನೊಳಗಿನ ಕಲ್ಲಬಂಡೆಗಳ ನಡುವಿನ ಕಿಂಡಿಯಲ್ಲಿ ಇರಿಸಿ ಮರಳುತ್ತಾರೆ. ಯಾರೇ ಸತ್ತರೂ ಹಳೆಯ ಮೂಳೆಗಳನ್ನು ಪಕ್ಕಕ್ಕೆ ಸರಿಸಿ ಹೊಸದನ್ನೂ ಅಲ್ಲಿಯೇ ಇರಿಸುತ್ತಾರೆ. ಹೀಗಾಗಿ ಅವರಿಗೆ ಸ್ಮಶಾನದ ತಲೆನೋವಿಲ್ಲ. ಒಂದೆಡೆ ನಿಲ್ಲಲಾಗದೇ ಊರೂರು ಸುತ್ತುವ ಅಲೆಮಾರಿಗಳು ತಮ್ಮವರು ಎಲ್ಲಿ ಸತ್ತರೆ ಅಲ್ಲಿನ ಹಳ್ಳದ ಬದಿಯೇ ಮಣ್ಣು ಮಾಡಿ ಮುಂದೆ ಹೊರಟುಬಿಡುತ್ತಾರೆ. ಊರವರು ಅನ್ಯ ಶವಗಳಿಗೆ ಅವಕಾಶ ಕೊಡದೆ, ಜಗಳ ಮಾಡಿ, ಹೂತ ಶವವನ್ನು ಕಿತ್ತು ಹಾಕಿದ್ದೂ ಕೆಲವೆಡೆ ನಡೆದಿದೆಯಂತೆ. ಮೃತರ ಸಮಾಧಿಗೆ ಪ್ರತೀ ವರ್ಷ ಹೋಗಿ ಪೂಜಿಸುವ ಪದ್ಧತಿಯೂ ಅವರÀಲ್ಲಿ ಇಲ್ಲ. ಮೃತನ ಹೆಸರಲ್ಲಿ ಬೆಳ್ಳಿಯಂತಹ ಲೋಹದ ಮುಖಬಿಲ್ಲೆ ಮಾಡಿಸಿ, ಮನೆಯಲ್ಲಿಟ್ಟುಕೊಂಡು ಹಬ್ಬದಲ್ಲಿ ಪೂಜಿಸುತ್ತಾರೆ. ಅದೇ ಅವರ ಪಿತೃ ಪೂಜೆ.

ಸಾಮಾನ್ಯವಾಗಿ ಶವವನ್ನು ಹೂಳುವವರೇ ಹೆಚ್ಚು. ವೈದಿಕ ಸಮುದಾಯದವರು ಚಿತೆಯಲ್ಲಿ ಸುಟ್ಟು, ಬೂದಿಯನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ. ಮಲೆನಾಡು ಭಾಗದ ಒಕ್ಕಲಿಗರೂ ಸೇರಿದಂತೆ ಕೆಲವರು ವೈದಿಕ ಪ್ರಭಾವದಿಂದ ಸುಡುತ್ತಾರೆ. ಶವದ ಹೊಟ್ಟೆಯ ಮಗು ಹೊರ ತೆಗೆದು ಬಸುರಿಯನ್ನು ನಿರ್ಜನ ಜಾಗದಲ್ಲಿ ಪ್ರಾಣಿಗಳಿಗೆ ಆಹಾರವಾಗಲಿ ಎಂದು ಕೂರಿಸಿ ಬರುತ್ತಿದ್ದ ಪದ್ಧತಿ ಹಿಂದೆ ಬೆಂಗಳೂರು ಸುತ್ತಿನವರಲ್ಲಿ ಇದ್ದಿತು. ತೊನ್ನು, ಕುಷ್ಠರೋಗಿ ಶವ ಹೂತರೆ ಮಳೆ ಬರುವುದನ್ನು ತಡೆಯುತ್ತವೆ ಎಂಬ ಭಯದಿಂದ, ನಿರ್ಜನ ಜಾಗದಲ್ಲಿ ಕೂರಿಸಿ, ಹೋದವರೆಲ್ಲಾ ಒಂದೊಂದು ಕಲ್ಲುಗಳನ್ನು ಎಸೆದು ಬರುವ ಪದ್ಧತಿಯೂ ವ್ಯಾಪಕವಾಗಿತ್ತು; ಇದನ್ನು “ಕಲ್ಲುಸೇವೆ” ಮಾಡೋದು ಎನ್ನುತ್ತಿದ್ದರು. ಇದು ಶಿಲಾಯುಗದ ‘ಕಲ್ಲುಗೋರಿ’ ಪದ್ಧತಿಯ ಪಳೆಯುಳಿಕೆ ಇದ್ದಂತಿದೆ.

ಶವಕ್ಕೆ ಮಾಡುವ ‘ಮನೆ’ಯ (ಗುಂಡಿ) ಒಳಗೊಂದು ಗೂಡು ಮಾಡಿ ತಲೆಯನ್ನು ಅದರಲ್ಲಿ ಇರಿಸಿ, ಉಪ್ಪು ಸುರಿದು, ಮಣ್ಣು ತುಂಬುವುದೂ ‘ಪಿರಮಿಡ್’ ಕಾಲದ ಪಳೆಯುಳಿಕೆಯೇ ಇದ್ದಂತಿದೆ. ಪಾರ್ಸಿಗಳಂತೂ ಪರಿಸರ ಮಾಲಿನ್ಯವಾಗದಿರಲೆಂದು ಶವವನ್ನು ಎತ್ತರದ ಗೋಪುರದ ಮೇಲೆ ಇಟ್ಟುಬರುತ್ತಾರೆ, ಪಕ್ಷಿಗಳಿಗೆ ಆಹಾರವಾಗಲೆಂದು. ಉತ್ತರ ಭಾರತದ ಪವಿತ್ರ ಕ್ಷೇತ್ರಗಳಲ್ಲಿ ಮೃತನು ನೇರವಾಗಿ ‘ಸ್ವಾಮಿ ಪಾದ’ಸೇರಲೆಂದು ಶವವನ್ನು ಗಂಗೆಯಲ್ಲಿ ಬಿಡುತ್ತಾರೆ!

ಕೈವಲ್ಯ ದೀಕ್ಷೆ’ ಪಡೆದವರನ್ನು ಗುಂಡಿಯಲ್ಲಿ ಕುಳ್ಳಿರಿಸಿ ಸಮಾಧಿ ಮಾಡುತ್ತಾರೆ. ಹಿರಿಯ ಸಾಧು ಈ ಶಾಸ್ತ್ರಗಳನ್ನು ಮಾಡುತ್ತಾನೆ. ‘ಹಿಜಡಾ’ಗಳಲ್ಲಿಯೂ ಗುಂಪಿನ ಹಿರಿಯಾಕೆಯ ಮಾರ್ಗದರ್ಶನದಲ್ಲಿಯೇ ನಡೆಯಬೇಕಾಗುತ್ತದೆ. ‘ಕಾಯಬೆರಸೆ ಕೈಲಾಸಕ್ಕೆ ಹೋಗುವ’ ಆಶಯದಲ್ಲಿ ಕೆಲವರು ಸಶರೀರವಾಗಿ ಸಮಾಧಿ ಮಾಡಿಸಿಕೊಳ್ಳುತ್ತಿದ್ದ ನಡವಳಿಕೆಯನ್ನು ‘ಆತ್ಮಹತ್ಯೆಗೆ ಸಮ’ನೆಂದು ಸರ್ಕಾರ ನಿಷೇಧಿಸಿದೆ. ಲಿಂಗಾಯತರಲ್ಲಿ ಜಂಗಮಯ್ಯನು ಶವದ ತಲೆಯ ಮೇಲೆ ಪಾದ ಊರಿ ‘ಇವನನ್ನು ಕೈಲಾಸಕ್ಕೆ ಕರೆದೊಯ್ಯುತ್ತೇನೆ’ ಎಂದು ಘೋಷಿಸುತ್ತಾನೆ. ಒಕ್ಕಲಿಗರಂತಹ ಇತರರಲ್ಲಿಯೂ ಮೃತನ ಆತ್ಮವನ್ನು ‘ವೈಕುಂಠಕ್ಕೆ ಕರೆದೊಯ್ಯುವ’ ಜಾತಿಪುರೋಹಿತ ಹೊಸ ಚಪ್ಪಲಿ, ಕೊಡೆಗಳನ್ನು ಕಾಣಿಕೆಯಾಗಿ ಪಡೆಯುತ್ತಾನೆ.

ಮೃತನ ಉಸಿರು ಏನಾಗುತ್ತೋ ಗೊತ್ತಿಲ್ಲ. ಪ್ರಯೋಗಗಳಿಂದ ಸಾಧಿಸಿತೋರುವುದೂ ಸಾಧ್ಯವಾಗಿಲ್ಲ. ಆದರೂ ಎಲ್ಲಾ ಧರ್ಮದವರಲ್ಲಿ ತಮ್ಮವೇ ಆದ ನಂಬಿಕೆ, ವಿವರಣೆಗಳನ್ನು ಹುಟ್ಟು ಹಾಕಲಾಗಿದೆ. ಆತ್ಮಗಳನ್ನು ತೃಪ್ತಗೊಳಿಸಿ ಅವನ್ನು ಮುಂದಿನ ‘ಲೋಕ’ಕ್ಕೆ ಸಾಗಹಾಕುವುದಕ್ಕೆಂದೇ ಅನೇಕ ಆಚರಣೆಗಳು ಹುಟ್ಟಿಕೊಂಡಿವೆ.

ಸುಡುಗಾಡು ಸಿದ್ಧರಂತಹ ಸಮುದಾಯದವರು ಜೋಲಿಗೆಯಲ್ಲಿಟ್ಟು ಒಂಟಿ ಬಡಿಗೆಯಲ್ಲಿ ಇಬ್ಬರು ಹೊತ್ತು ಸಾಗಿಸುತ್ತಿದ್ದುದು ಹಲವೆಡೆ ಪದ್ಧತಿಯಾಗಿತ್ತು. ಅವಿವಾಹಿತರನ್ನೂ ಹೀಗೇ ಸಾಗಿಸುವುದು ಒಕ್ಕಲಿಗರ ನಡವಳಿಕೆಯಾಗಿತ್ತು. ಜೀವನಾಧಾರವಾದ ಬಿದಿರು ಶ್ರೇಷ್ಠವೆಂಬ ಕಾರಣಕ್ಕೋ ಏನೋ ‘ನಮ್ಮಲ್ಲಿ ಹಿಂದೆ ಚಟ್ಟ ಕಟ್ಟದೆ ನಾಲ್ವರು ಕೈನಲ್ಲೇ ಶವ ಸಾಗಿಸುತ್ತಿದ್ದರೆಂದು’ ನಮ್ಮೂರಿನ ಕೊರಮರ ದಾಸಪ್ಪ ಹೇಳಿದ್ದರು. ವೈದಿಕ ಸಮುದಾಯಗಳಲ್ಲಿ ಶವದ ಅಲಂಕಾರಕ್ಕೆ ಆದ್ಯತೆ ನೀಡಲಾರರು. ಇತರರು ಹೂವಿನ ಅಲಂಕಾರದ ‘ಚಟ್ಟ’ದಲ್ಲಿ ಸಾಗಿಸುತ್ತಾರೆ. ‘ಶವಕ್ಕೆ ಮಾಡುವ ಶೃಂಗಾರ’ ಎಂಬುದನ್ನು ಅರ್ಥ ಮಾಡಿಕೊಂಡವರು ಕಡಿಮೆ.

ಕೊನೇ ಬಾರಿಗಾದರೂ ಮುಖ ನೋಡದಿದ್ದರೆ ಏಳೇಳು ಜನ್ಮಕ್ಕೂ ನೋಡಲು ಸಿಗುವುದಿಲ್ಲ ಎಂಬ ನಂಬಿಕೆ ಪ್ರಬಲವಾಗಿರುವುದರಿಂದ ವೈರತ್ವವನ್ನು ಅದುಮಿಟ್ಟುಕೊಂಡಾದರೂ ಒಡಹುಟ್ಟುಗಳು ಹಿಡಿ ಮಣ್ಣಾಕಲು ಬರುತ್ತಾರೆ. ಇಲ್ಲವಾದರೆ ಬಂಧುಗಳಲ್ಲಿ ‘ನಿರ್ದಯಿ’ ಎಂದು ತೀವ್ರ ನಿಷ್ಠುರಕ್ಕೆ ಒಳಗಾಗಬೇಕಾಗುತ್ತದೆ.

ಶವಯಾತ್ರೆಯ ಸಂದರ್ಭದಲ್ಲಿ ಹಾಡುತ್ತಾ ಕುಣಿತ ಮಾಡುವ ಪದ್ಧತಿ ತಮಿಳು ಸಮುದಾಯಗಳಲ್ಲಿದೆ. ‘ದೇವರು ಕರೆಸಿಕೊಂಡವನನ್ನು ಸಂತೋಷವಾಗಿ ಕಳಿಸಿಕೊಡದಿದ್ದರೆ ಕಣ್ಣೀರು ನದಿಯಾಗಿ ಸ್ವರ್ಗಕ್ಕೆ ಹೋಗುವವನಿಗೆ ಅಡ್ಡಿಯಾಗುತ್ತೆಂಬ’ ನಂಬಿಕೆ ಬೆಂಗಳೂರು ಸುತ್ತಿನ ಒಕ್ಕಲಿಗರಲ್ಲೂ ಇದೆ. ಮೃತರ ಬಗ್ಗೆ ತಳಸಮುದಾಯಗಳು, ಗ್ರಾಮೀಣರು ತೋರುವಷ್ಟು ಶೋಕ, ಆರ್ತತೆಯನ್ನು ನಗರ ಪರಿಸರದ ಶಿಕ್ಷಿತರು, ನಾಜೂಕಿನ ಮೇಲುವರ್ಗದವರು ಬಾಹ್ಯವಾಗಿ ತೋರಲಾರರು. ಮೃತರ ಗುಣಗಾನ ಮಾಡಿ, ಶೋಕ ಗೀತೆಗಳನ್ನು ಹಾಡುವ ಸಂಪ್ರದಾಯ ಕೆಲವು ಹಿಂದುಳಿದವರಲ್ಲಿ ಇದೆ. ಅಳುವುದಕ್ಕಾಗಿಯೇ ವೃತ್ತಿನಿರತ ಮಹಿಳೆಯರನ್ನು ಕರೆಸಿಕೊಳ್ಳುವ ನಡವಳಿಕೆ ಇಸ್ರೇಲಿನಲ್ಲಿಯೂ ಇದ್ದ ಉಲ್ಲೇಖಗಳಿವೆ.

ಮೃತನು ಮುಕ್ತನಾದನೋ, ಪ್ರೇತವಾದನೋ ಎಂಬುದನ್ನು ತಿಳಿವ ನಂಬಿಕೆಗಳೂ ಸಮುದಾಯಗಳಲ್ಲಿವೆ. ಕುಟುಂಬದ ಪಿತೃಗಳೊಂದಿಗೆ ಆತ್ಮವನ್ನು ಸೇರಿಸುವ ‘ಕುಲೆಗಿಡುವ’ ಪರಿಕಲ್ಪನೆ ದಕ ಜಿಲ್ಲೆಯ ಗೌಡರಲ್ಲಿದೆ. ಇದೇ ಆಶಯದ ಸಂಪ್ರದಾಯ “ಹಿಂಡುಗೂಡಿಸುವುದು” ಹೆಸರಲ್ಲಿ ಬೆಂಗಳೂರು ಸುತ್ತಿನ ಒಕ್ಕಲಿಗರಲ್ಲಿಯೂ ಇದೆ. ಅರೆಭಾಷೆ ಒಕ್ಕಲಿಗರಲ್ಲಿ ದೂಪೆಬಳಿ ಹೇಳುವ ಮಾತುಗಳಲ್ಲಿ ‘ಮುಂದಿನ ಜನ್ಮದಲ್ಲಿ ಬ್ರಾಹ್ಮಣನ ಆಳಾಗಿ ಹುಟ್ಟದೆ ಸ್ವರ್ಗಕ್ಕೆ ಹೋಗು’ ಎಂದೂ ಬರುತ್ತದೆ (ಬ್ರಾಹ್ಮಣನಾಗಿ ಹುಟ್ಟುವುದನ್ನು ಯಾವ ಶೂದ್ರಾಪಿಯೂ ಒಪ್ಪಲಾರರೆಂಬ ಸಾಂಪ್ರದಾಯಿಕ ಮನೋಭಾವಕ್ಕೆ ದೊಂಬಿದಾಸರ ‘ಗಂಗೆಗೌರಿ’ ಕಾವ್ಯದಲ್ಲಿ ‘ಬ್ರಾಹ್ಮಣರ ಮನೆಗೆ ಮಾತ್ರ ನನ್ನ ಕೊಡಬೇಡ’ ಎಂದು ಗೌರಿಯು ಗೋಗರೆವ ಮಾತುಗಳಿವೆ). ಅರಣ್ಯವಾಸಿ ಜೇನುಕುರುಬರಂತಹ ಬುಡಕಟ್ಟುಗಳಲ್ಲಿ ತಿಥಿಯಂದು (‘ಬುಂಡೆ ಕರೆಯುವುದು’) ಆತ್ಮ ಯಾರ ಮೇಲಾದರೂ ಮೈದುಂಬಿ ತನ್ನ ಸಾವಿನ ಬಗ್ಗೆ ತಿಳಿಸುವುದು ನಡೆಯುತ್ತದೆ. ಆ ಆತ್ಮವು ಇಹದ ಬಂಧುಗಳಿಗೆ ವಿದಾಯ ಹೇಳುವ ನಾಟಕೀಯ ಸನ್ನಿವೇಶ ‘ಮಹಾಪ್ರಸ್ಥಾನ’ದಂತೆಯೇ ಇರುತ್ತದೆ. ಬೆಂಗಳೂರು ಭಾಗದ ದಲಿತರಲ್ಲಿಯೂ ಇದನ್ನು ಹೋಲುವ ವಿಧಿಗಳಿವೆ.

ಕೋವಿಡ್-19 ಪಿಡುಗಿನ ಅನಾಥ ಶವರಾಶಿಗೆ (ವಾರಸುದಾರರೇ ಹತ್ತಿರಬರದಾಗ) ಅನ್ಯ ಧರ್ಮೀಯರೇ ಬೆಂಕಿ ಹಚ್ಚಿದ್ದಾರೆ. ದಿಕ್ಕಿಲ್ಲದ ಜೀವಗಳನ್ನು ಮೋಕ್ಷಕ್ಕೆ ಕಳಿಸಲೆಂದು ಸರಕಾರ ಮಾಡಿಸಿದ ಸಾಮೂಹಿಕ ತಿಥಿ ಸಹ ಸಾಂಪ್ರದಾಯಿಕವಾಗಿ ಒಪ್ಪಿತವಾಗಲಾರದು. ಏಕೆಂದರೆ ಆ ಶವಗಳ ಜಾತಿ, ಧರ್ಮಕ್ಕೆ ತಕ್ಕಂತೆ ತಿಥಿ ಕಾರ್ಯ ಆಗದೆ, ‘ತಲೆಗೆಲ್ಲಾ ಒಂದೇ ಮಂತ್ರ’ ಎಂಬಂತಾಗಿತ್ತು!

*ಲೇಖಕರು ಸಮುದಾಯಗಳ ಸಂಪ್ರದಾಯಗಳ ಅಧ್ಯಯನಕಾರರು.

Leave a Reply

Your email address will not be published.