ಶಿಕ್ಷಣ ಮತ್ತು ಮೂಢನಂಬಿಕೆ

ಇಂದು ಬೋಧಕ ವರ್ಗದಲ್ಲಿ ಶೇ. 50 ಕ್ಕಿಂತ ಹೆಚ್ಚು ಶಿಕ್ಷಕಿಯರೇ ಇದ್ದಾರೆ. ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸಿಲೆಬಸ್‍ಗೂ ಮಿಗಿಲಾದ ಹೊಣೆಗಾರಿಕೆ ಇದೆ. ಯುವ ಮನಸ್ಸುಗಳನ್ನು ಅವರು ಪರಿವರ್ತಿಸಬಲ್ಲರು. ಕೇವಲ ಮೂಢನಂಬಿಕೆಗಳ ಕುರಿತು ಅಲ್ಲ, ಒಟ್ಟಾರೆ ಒಂದು ನೈತಿಕ ಶಕ್ತಿಯಾಗಿ, ಮಾತೃ ಹೃದಯದಿಂದ ಅವರು ಶಿಷ್ಯ ವೃಂದವನ್ನು ತಟ್ಟಬಲ್ಲರು.

ವೆಂಕಟೇಶ ಮಾಚಕನೂರ

ಯಾವುದೇ ಮೂಢನಂಬಿಕೆಗಳ ವಿರುದ್ಧ ಶಿಕ್ಷಣದ ಮೂಲಕ ಬದಲಾವಣೆ ತರಬಹುದಾಗಿದೆ. ಶಿಕ್ಷಣವೆಂದರೆ ಕೇವಲ ಔಪಚಾರಿಕ ಶಿಕ್ಷಣವಲ್ಲ, ಜನಸಾಮಾನ್ಯರಿಗೆ ತಿಳಿವಳಿಕೆ ನೀಡುವ ಯಾವುದೇ ಬಗೆಯ ಅನೌಪಚಾರಿಕ ಮಾಹಿತಿ ಕೂಡ ಶಿಕ್ಷಣವಾಗುತ್ತದೆ. ಇದು ವಿವಿಧ ಮಾಧ್ಯಮಗಳ ಮೂಲಕ ಆಗಬೇಕು. ಅದರಲ್ಲೂ ದೃಶ್ಯ ಶ್ರಾವ್ಯ ಮಾಧ್ಯಮದ ಮೂಲಕ ಬಹಳ ಪರಿಣಾಮಕಾರಿಯಾಗಿ ಎಲ್ಲ ಸಾಮಾಜಿಕ ಅನಿಷ್ಟಗಳ ಬಗ್ಗೆ ತಿಳಿವಳಿಕೆ ಕೊಡಬಹುದು. ಆದರೆ ಮಾಧ್ಯಮಗಳೇ ಮೂಢನಂಬಿಕೆಗಳ ವಾಹಕಗಳಾದರೆ ಜನರನ್ನು ಕಾಪಾಡುವವರಾರು.

ಕನ್ನಡ ದೃಶ್ಯ ವಾಹಿನಿಗಳಿಗೆ ಸಂಬಂಧಿಸಿದಂತೆ ಆಗುತ್ತಿರುವುದು ಅದೇ. ಕರ್ನಾಟಕದ ಮೌಢ್ಯನಿಷೇಧ ಕಾಯ್ದೆ ಅಡಿ ಬಾರದ ವಾಸ್ತು, ಜೋತಿಷ್ಯ ವಿಷಯಗಳ ತಜ್ಞರೆನಿಸಿಕೊಳ್ಳುವವರು ವಾಹಿನಿಗಳನ್ನೇ ಗುತ್ತಿಗೆ ಹಿಡಿದು ಅಮಾಯಕ ಜನರನ್ನು ಅತಾರ್ಕಿಕ ವಿಷಯಗಳತ್ತ ಸೆಳೆದು ಕುಬೇರರಾಗಿ ಮೆರೆಯುತ್ತಾರೆ. ಸದಾ ಒಂದಿಲ್ಲೋಂದು ಕಷ್ಟಕಾರ್ಪಣ್ಯಗಳಿಂದ ಬಳಲುವ ಮನುಷ್ಯ ಪರಿಹಾರವೆಂಬ ಮರೀಚಿಕೆಯ ಬೆನ್ನುಹತ್ತಿ ಬಳಲಿ ಬೆಂಡಾಗುತ್ತಾನೆ. ಒಬ್ಬೊಬ್ಬರು ಒಂದೊಂದು ರೀತಿಯ ಮೌಢ್ಯವನ್ನು ಜನರ ಮನದಲ್ಲಿ ಬಿತ್ತಿ ಹುಲುಸಾದ ಬೆಳೆ ತೆಗೆಯುತ್ತಾರೆ. ಜನರಿಗೆ ಈ ಕುರಿತು ತಿಳಿವಳಿಕೆ, ಉದಾಹರಣೆಗಳನ್ನು ನೀಡುವ ಮೂಲಕ ಅವರನ್ನು ಮೌಢ್ಯದಿಂದ ದೂರ ಸರಿಸಬೇಕು. ಆದರೆ ಅದು ಎಲ್ಲಿ, ಹೇಗೆ ಎಂಬುದೇ ಪ್ರಶ್ನೆ.

ಕಾನೂನು ಮೂಲಕ ಅನೇಕ ಮೌಢ್ಯಗಳಿಗೆ ಇತಿಶ್ರಿ ಹಾಡಲಾಗಿದೆ. ನಮ್ಮಲ್ಲಿ ತುಂಬ ಪ್ರಚಲಿತವಿದ್ದ ಸತಿಪದ್ಧತಿ, ವಿಧವಾವಿವಾಹ ನಿಷೇಧ ಪದ್ಧತಿ, ದೇವದಾಸಿ ಪದ್ಧತಿ, ವೈಶ್ಯಾವಾಟಿಕೆ, ನರಬಲಿ, ಪ್ರಾಣಿಬಲಿ, ವಾಮಾಚಾರದಂತಹ ಆಚರಣೆಗಳನ್ನು ಕಾನೂನುಗಳ ಮೂಲಕ ತಹಬಂದಿಗೆ ತರಲಾಗಿದೆ. ಕಾನೂನು ಒಂದು ಅಸ್ತ್ರ. ಅದರ ವಿವೇಕಯುತ ಬಳಕೆ ಅನೇಕ ಸಾಮಾಜಿಕ ಪಿಡುಗುಗಳಿಗೆ ಕೊನೆ ಹಾಡಬಲ್ಲುದು. ಜನರಲ್ಲಿ ಅಂಥ ಅನಾಚಾರಗಳ ಕುರಿತು ಭಯ ಹುಟ್ಟಿಸಬಲ್ಲುದು. ಮೊದಮೊದಲು ಕಾನೂನಿಗೆ ಪ್ರತಿರೋಧ ಎದುರಾದರೂ ಮೌಢ್ಯಗಳಿಗೆ ಕೊನೆಹಾಡಲು ಅದು ಬೇಕೇಬೇಕು. ನಮ್ಮಲ್ಲಿ ಬೆತ್ತಲೆ ಸೇವೆಯನ್ನು ಮೊದಲು ನಿರ್ಬಂಧಿಸಿದಾಗ ಪೆÇಲೀಸ್ ಸಿಬ್ಬಂದಿ ಎದುರಿಸಿದ ಸಂಕಟಗಳು ನಮಗೆ ಗೊತ್ತು.

ಮೌಢ್ಯಗಳ ವಿರುದ್ಧ ಕಾನೂನುಗಳು ಬಂದಾಗ ಅದಕ್ಕೆ ವಿರೋಧ ಇನ್ನೂ ಹೆಚ್ಚು. ಅಲ್ಲಿ ಮೂಢನಂಬಿಕೆಯಷ್ಟೇ ಆಸಕ್ತ ಹಿತಾಶಕ್ತಿಗಳೂ ಕೆಲಸ ಮಾಡುತ್ತಿರುತ್ತವೆ. ಜೋತಿಷ್ಯ, ವಾಸ್ತು ವಿಷಯಗಳ ಹಿಂದೆ ಪ್ರಬಲವಾದ ಪಟ್ಟಭದ್ರ ಹಿತಾಶಕ್ತಿಗಳೇ ಇರುತ್ತವೆ. ಮನುಷ್ಯ ಜೀವನದಲ್ಲಿ ಒಮ್ಮೆಯಾದರೂ ಅವುಗಳಿಗೆ ಬಲಿಬೀಳದಿರುವುದಿಲ್ಲ. ಒಬ್ಬೊಬ್ಬರು ಒಮ್ಮೆ ಅವರಿಗೆ ಬಲಿಬಿದ್ದರೂ ಸಾಕು ಅದರ ಪ್ರವರ್ತಕರು ಉದ್ದಾರವಾದಂತೆ. ಅವರಿಂದ ಆದ ಹಾನಿ, ಘಾಸಿಗೊಳಗಾದವರು ಆ ಕುರಿತು ಬಾಯಿಬಿಡುವುದಿಲ್ಲ.

ನಾವು ಶಿಕ್ಷಣದ ಮೂಲಕ ಎಳೆ ವಯಸ್ಸಿನಿಂದಲೆ ಮೂಢ ನಂಬಿಕೆಗಳು, ಅನಿಷ್ಟ ಸಂಪ್ರದಾಯಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿದರೆ ಕಾನೂನಿಗಿಂತಲೂ ಸಮರ್ಥವಾಗಿ ಅವುಗಳನ್ನು ಎದುರಿಸಬಹುದು. ನಮ್ಮ ಶಿಕ್ಷಣದ ಪಠ್ಯಕ್ರಮದಲ್ಲಿ ಇಂಥವುಗಳ ಕುರಿತು ಪಾಠ ಪ್ರವಚನಗಳಿವೆ. ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಸರಕಾರದ ಸಹಯೋಗದೊಂದಿಗೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು, ಎಲ್ಲ ಸ್ತರದ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕುರಿತು ಅರಿವು ಮೂಡಿಸಲು ಯತ್ನಿಸುತ್ತಿವೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಭಾರತ ವಿಜ್ಞಾನ ಸಮೀತಿ ಮುಂತಾದ ಸ್ವಯಂ ಸೇವಾ ಸಂಸ್ಥೆಗಳು ಈ ದೆಶೆಯಲ್ಲಿ ಸ್ತುತ್ಯ ಕಾರ್ಯವನ್ನೇ ಮಾಡುತ್ತಿವೆ. ಅನೇಕ ಶಿಕ್ಷಕರೂ ಇವುಗಳ ಭಾಗವಾಗಿದ್ದಾರೆ.

ವಿಜ್ಞಾನ ಕುರಿತು ರಸಪ್ರಶ್ನೆ ಕಾರ್ಯಕ್ರಮಗಳು, ವಿವಿಧ ಮಟ್ಟದಲ್ಲಿ ಸ್ಪರ್ಧಾತ್ಮಕ ಕಾರ್ಯಕ್ರಮಗಳು, ವಿಜ್ಞಾನವನ್ನು ಎಲ್ಲ ಶಿಸ್ತುಗಳ ವಿದ್ಯಾರ್ಥಿಗಳ ಮಧ್ಯ ಜನಪ್ರಿಯಗೊಳಿಸುವ ಮೂಲಕ ಈ ಸಂಸ್ಥೆಗಳು ಪರಿಣಾಮಕಾರಿ ಕೆಲಸ ಮಾಡುತ್ತಿವೆ. ಪವಾಡ ಬಯಲು, ಜನಪ್ರಿಯ ವಿಜ್ಞಾನದಂತಹ ಕಾರ್ಯಕ್ರಮಗಳ ಮೂಲಕ ಎಳೆಯ ಮಕ್ಕಳಲ್ಲಿ ವಿಜ್ಞಾನ ಕುರಿತು ಆಸಕ್ತಿ ಹೆಚ್ಚಿಸುತ್ತಿವೆ. ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಉಪಯಕ್ತವಾಗುವ ಮತ್ತು ಪಾಠಪ್ರವಚನಗಳಿಗೆ ಪೂರಕವಾದ ಪತ್ರಿಕೆಗಳನ್ನು ನಿಯಮಿತವಾಗಿ ಹೊರತರುವ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಯಲು ಸಹಾಯಕವಾಗುತ್ತಿವೆ. ತಾಲೂಕು ಮತ್ತು ಜಿಲ್ಲಾಮಟ್ಟಗಳಲ್ಲಿ ನಡೆವ ಶಿಕ್ಷಣ ಇಲಾಖೆಯ ವಿಜ್ಞಾನ ಮೇಳಗಳಲ್ಲಿ ಹದಿಹರೆಯದ ವಿದ್ಯಾರ್ಥಿ/ನಿಯರು ಅನೇಕ ಬಗೆಯ ವೈಜ್ಞಾನಿಕ ಪ್ರಯೋಗಗಳನ್ನು ಪ್ರದರ್ಶಿಸುತ್ತ, ಆ ಕುರಿತು ವಿವರಿಸುತ್ತ ಮಿಂಚುವುದನ್ನು ನಾನು ಗಮನಿಸಿದ್ದೇನೆ.

ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಬರುವ ಮಕ್ಕಳು ವಿವಿಧ ಧಾರ್ಮಿಕ, ಸಾಂಸ್ಕøತಿಕ, ಕೌಟುಂಬಿಕ ಹಿನ್ನೆಲೆಯಿಂದ ಬರುತ್ತಾರೆ. ಅವರ ಮನೆಗಳಲ್ಲಿ, ಗ್ರಾಮಗಳಲ್ಲಿ ಹಲವು ಬಗೆಯ ಸಂಪ್ರದಾಯಗಳು, ನಂಬಿಕೆಗಳು ಪ್ರಚಲಿತ ಇರುತ್ತವೆ. ಅವುಗಳಲ್ಲಿ ಕೆಲವು ಮೂಢ ನಂಬಿಕೆಗಳೂ ಇರಬಹದು. ಸಂಪ್ರದಾಯಗಳು, ನಂಬಿಕೆ, ಮೂಢನಂಬಿಕೆಗಳನ್ನು ಪ್ರತ್ಯೇಕಿಸಿ ವಿದ್ಯಾರ್ಥಿಗಳನ್ನು ತಿದ್ದುವ, ಸರಿಯಾದುದನ್ನು ಪರಿಚಯಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿರುತ್ತದೆ. ಅದು ಪ್ರಾಥಮಿಕ ಹಂತದಲ್ಲಿ ಆರಂಭಗೊಂಡು, ಮಾಧ್ಯಮಿಕ ಹಂತದಲ್ಲಿ ಬೆಳೆದು, ಉಚ್ಚ ಶಿಕ್ಷಣದ ಹಂತದಲ್ಲಿ ಹರಳುಗಟ್ಟಬೇಕು. ಪಾಠಗಳ ಭಾಗವಾಗಿ, ಪೂರಕವಾಗಿ, ಹೆಚ್ಚುವರಿಯಾಗಿ ವಿಧ್ಯಾರ್ಥಿಗಳನ್ನು ರೂಪಿಸುವ, ಅವರಿಗೆ ಹೊಸ ಸಂಸ್ಕಾರ ನೀಡುವ ಗುರುತರ ಹೊಣೆ ಶಿಕ್ಷಕರದ್ದಾಗಿರುತ್ತದೆ. ಅದು ಎಲ್ಲ ಶಿಕ್ಷಕರ ಹೊಣೆಯಾಗಿರುತ್ತದೆ.

ಓರ್ವ ಕ್ರಿಯಾಶೀಲ ಮುಖ್ಯಾಧ್ಯಾಪಕ ತನ್ನ ಶಾಲೆಯ ಇಡೀ ಶಿಕ್ಷಕ ವೃಂದವನ್ನು, ವಿದ್ಯಾರ್ಥಿ ಸಮೂಹವನ್ನು ಪ್ರಭಾವಿಸಿ ಶಾಲೆಗೆ ಹೊಸ ರೂಪ ಕೊಡಬಲ್ಲ, ಹೊಸ ಪೀಳಿಗೆಯನ್ನು ರೂಪಿಸಬಲ್ಲರು ಎಂಬುದನ್ನು ನಾನು ಹಲವು ಶಾಲೆಗಳಲ್ಲಿ ಕಣ್ಣಾರೆ ನೋಡಿದ್ದೇನೆ. ಅಂಥ ಕರ್ತೃತ್ವ ಶಕ್ತಿಯುಳ್ಳ ಶಿಕ್ಷಕರು ಬೇಕು. ಅವರು ಎಲ್ಲ ಹಂತಗಳಲ್ಲಿ ಪರಿವರ್ತನೆ ತರಬಲ್ಲರು. ತಮ್ಮ ನಡೆನುಡಿಯಿಂದ ವಿದ್ಯಾರ್ಥಿ ಸಮೂಹವನ್ನು ಪ್ರೇರೇಪಿಸಬಲ್ಲರು, ಪ್ರಭಾವಿಸಬಲ್ಲರು. ನನ್ನ ಕೆಲವು ಶಿಕ್ಷಕ ಮಿತ್ರರು ಮಾಧ್ಯಮಿಕ ಶಾಲೆಯ ತಮ್ಮ ವಿದ್ಯಾರ್ಥಿಗಳಿಗೆ ಕಾಡುಮೇಡು ಸುತ್ತುವ, ಪ್ರಾಣಿಪಕ್ಷಿಗಳನ್ನು ವೀಕ್ಷಿಸುವ, ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸುವಂಥ ಸಾಹಸಮಯ ಕೆಲವು ಹುಚ್ಚು ಹವ್ಯಾಸಗಳನ್ನು ಹಚ್ಚಿ, ಅವರ ವಿದ್ಯಾರ್ಥಿಗಳು ಇಂದಿಗೂ ಅವರನ್ನು ನೆನೆಯುವಂತೆ ಮಾಡಿದ್ದಾರೆ. ನೇರವಾಗಿ ಮೂಢ ನಂಬಿಕೆಗಳ ಕುರಿತು ಪಾಠ ಪ್ರವಚನಕ್ಕಿಳಿಯದೇ, ನೈಸರ್ಗಿಕ ವಿದ್ಯಮಾನಗಳ ಕುರಿತು ಸಹಜ ಪರಿಸರದಲ್ಲಿ ಸಹಜವೆನ್ನುವಂತೆ ಎಲ್ಲವನ್ನು ಬೋಧಿಸಿದರೆ ಎಳೆಯ ಮನಗಳ ಮೇಲೆ ಅಪಾರ ಪರಿಣಾಮ ಉಂಟಾಗುತ್ತದೆ.

ಇಂದು ಬೋಧಕ ವರ್ಗದಲ್ಲಿ ಶೇ. 50 ಕ್ಕಿಂತ ಹೆಚ್ಚು ಮಹಿಳಾ ಶಿಕ್ಷಕಿಯರೇ ಇದ್ದಾರೆ. ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸಿಲೆಬಸ್‍ಗೂ ಮಿಗಿಲಾದ ಹೊಣೆಗಾರಿಕೆ ಇದೆ. ಯುವ ಮನಸ್ಸುಗಳನ್ನು ಅವರು ಪರಿವರ್ತಿಸಬಲ್ಲರು. ಕೇವಲ ಮೂಢನಂಬಿಕೆಗಳ ಕುರಿತು ಅಲ್ಲ, ಒಟ್ಟಾರೆ ಒಂದು ನೈತಿಕ ಶಕ್ತಿಯಾಗಿ, ಮಾತೃ ಹೃದಯದಿಂದ ಅವರು ಶಿಷ್ಯ ವೃಂದವನ್ನು ತಟ್ಟಬಲ್ಲರು. ಆದರೆ ಅವರೇ ಮೂಢ ಆಚರಣೆಗಳ ಅನುಯಾಯಿ ಆಗಿದ್ದರೆ ಅವರ ವಿದ್ಯಾರ್ಥಿ ಸಮೂಹವನ್ನು ದೇವರೇ ಕಾಪಾಡಬೇಕು.

ಬಹಳಷ್ಟು ಮೂಢನಂಬಿಕೆಗಳು ದೇವರು, ದೈವ, ಅಗೋಚರ ಶಕ್ತಿ, ಮತೀಯ ಸಂಬಂಧಿ ಆಚರಣೆಗಳಾಗಿರುತ್ತವೆ. ಕೆಲವು ಭೂತ ಸಂಬಂಧಿ ಆಗಿರಲೂಬಹುದು. ಮೂಲವಾಗಿ ಇವೆಲ್ಲ ಅವ್ಯಕ್ತ ಹೆದರಿಕೆಜನ್ಯ ಉತ್ಪನ್ನಗಳು. ವಾಮಾಚಾರ, ಬಾಣಾಮತಿ, ಮಾಯಮಂತ್ರ, ಮಾಟ ಅಂತಹುಗಳು ಅಜ್ಞಾನ ಮೂಲದವುಗಳು. ಮೂಢನಂಬಿಕೆ ಹಿಂದಿರುವ ನಿಜಾಂಶಗಳು ಬಯಲಾದರೆ ಆ ಕುರಿತು ಇರುವ ಅಂಜಿಕೆಗಳೂ ದೂರಾಗುತ್ತವೆ. ಮನಸ್ಸು ನಿರಾಳವಾಗುತ್ತದೆ. ಮನುಷ್ಯನಿಗೆ ಹಾನಿಕಾರಕವಾದ, ಮತ್ತು ಮನುಷ್ಯನ ಘನತೆಯನ್ನು ಕುಗ್ಗಿಸುವ ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಶಿಕ್ಷಕರು ಮೊದಲು ಯತ್ನಿಸಬೇಕು. ನಿಧಾನವಾಗಿ ವೈಚಾರಿಕ ವಿಚಾರಗಳನ್ನು ಪಾಠ ಪ್ರವಚನಗಳೊಂದಿಗೆ ಬಿತ್ತಬೇಕು.

ದೇವರು ಕುರಿತು ಒಂದು ಸ್ಪಷ್ಟ ಕಲ್ಪನೆ ಪ್ರತಿ ಶಿಕ್ಷಕರಿಗೂ ಇರಬೇಕು. ದೇವರು ಕುರಿತು ನಂಬಿಕೆ ಎಷ್ಟು, ಏನು ಎಂಬ ಚಿಂತನೆ ಇರಬೇಕು. ದೈವಬಲಕ್ಕಿಂತ ವಿದ್ಯಾರ್ಥಿಗಳಲ್ಲಿ ಆತ್ಮಬಲ, ಶ್ರಮಬಲ, ಸ್ವಾಭಿಮಾನ ಉದ್ದೀಪಿಸುವ ಕೆಲಸ ಶಿಕ್ಷಕರದ್ದಾಗಬೇಕು. ಎಲ್ಲ ಬಗೆಯ ಮೂಢನಂಬಿಕೆಗಳ ಕುರಿತು ಒಂದು ವಸ್ತುನಿಷ್ಟ ಗ್ರಹಿಕೆ, ದೃಷ್ಟಿಕೋನ, ವಿವೇಚನಾ ಶಕ್ತಿ ವಿದ್ಯಾರ್ಥಿಗಳಲ್ಲಿ ಮೂಡುವಂತೆ ಶಿಕ್ಷಕರು ಮಾಡಬಲ್ಲರು. ಇಂಥ ಒಂದು ಮನೋಭೂಮಿಕೆ ಎಳೆಯ ಮನಗಳ ಮೂಲೆಯಲ್ಲಿ ನೆಲೆಗೊಂಡರೆ ಎಲ್ಲ ಬಗೆಯ ಮೂಢ ನಂಬಿಕೆಗಳಿಗೆ ಇತಿಶ್ರೀ ಹಾಡಿದಂತೆಯೇ. ಇದಕ್ಕೆ ನಮ್ಮ ಶಿಕ್ಷಕರ ಜ್ಞಾನದ ಹರವು, ಓದಿನ ಹರವು, ತಿಳಿವಳಿಕೆ ಮಟ್ಟ ಎಷ್ಟಿದೆ ಎಂಬುದು ಮುಖ್ಯವಾಗುತ್ತದೆ. ನಮ್ಮ ಆಸ್ತಿಕ ಪರಿಸರದಲ್ಲಿ ನಾನು ಹೇಳುವಷ್ಟು ಇದು ಸುಲಬವಲ್ಲ ಅನ್ನುವುದು ನನಗೆ ಗೊತ್ತು, ಆದರೆ ನಮ್ಮ ಗುರಿ ಸ್ಪಷ್ಟವಾಗಿದ್ದರೆ ಯಾವ ಗೊಂದಲಗಳೂ ಇರುವದಿಲ್ಲ.

ಎಚ್.ನರಸಿಂಹಯ್ಯನವರಂತಹ ಮಾರ್ಗದರ್ಶಕರು, ಮಾರ್ಗ ಪ್ರವರ್ತಕರು ಮತ್ತೇ ಶಿಕ್ಷಣ ಕ್ಷೇತ್ರದಲ್ಲಿ ಕಂಡುಬರುತ್ತಿಲ್ಲ. ಮೂಢನಂಬಿಕೆ ಸ್ವರೂಪದ ಹಲವಾರು ಬೆಳವಣಿಗೆಗಳನ್ನು ಮತ್ತೇ ಇಂದು ನಾವು ಕಾಣುತ್ತಿದ್ದೇವೆ. ಸರಕಾರ ಕೃಪಾ ಪೆೀಷಿತ ಕೆಲವು ಬೆಳವಣಿಗೆಗಳೂ ಆಗುತ್ತಿವೆ. ಸರಕಾರದ ಕಾನೂನು ಕ್ರಮಗಳು, ನಡೆನುಡಿಗಳು ಮತಾವಲಂಬಿಗಳಾಗಿರುತ್ತವೆ. ಸರಕಾರಗಳ ಅಂಥ ನಡೆಗಳ ವಿರುದ್ಧ ಧ್ವನಿಗಳು ಕೇಳಿಬರುತ್ತಿಲ್ಲ. ಯುವ ಪೀಳಿಗೆಗಳಲ್ಲಿ ವೈಚಾರಿಕ, ವಸ್ತುನಿಷ್ಠ ದೃಷ್ಟಿಕೋನವನ್ನು ಬೆಳೆಸುವುದರ ಮೂಲಕ ನಾವು ಮೂಢನಂಬಿಕೆಗಳು, ಮೂಢಮತಿಗಳ ವಿರುದ್ಧ ಸ್ವಲ್ಪ ನಿಧಾನವಾಗಿಯಾದರೂ ಯಶ ಸಾಧಿಸಬಲ್ಲೆವು.

*ಲೇಖಕರು ನಿವೃತ್ತ ಕೆಎಎಸ್ ಅಧಿಕಾರಿ. ಸರಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕೆಲವು ವರ್ಷ ಶಿಕ್ಷಣ ಇಲಾಖೆಯಲ್ಲಿ ಅಪರ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ, ಸೃಜನಶೀಲ ಬರಹಗಾರರೂ ಹೌದು.

Leave a Reply

Your email address will not be published.