ಶಿಕ್ಷಣ ವ್ಯವಸ್ಥೆ ಬದಲಾಗಬೇಕು

Images converted to PDF format.

ಮೂಢ ನಂಬಿಕೆಗಳನ್ನು ಬೇರು ಸಹಿತ ಕಿತ್ತೆಸೆಯಲು ಕಾನೂನು ಬಲ ಬಹುಮುಖ್ಯ. ಜೊತೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕ ಅರಿವು ಮೂಡಿಸುವಂತಹ ಪಠ್ಯ ಸದೃಢವಾಗಿರಬೇಕು.

ನಟೇಶ್ ಬಿ. ದೊಡ್ಡಹಟ್ಟಿ

ನಮ್ಮ ಸಮಾಜದಲ್ಲಿರುವ ಮೂಢನಂಬಿಕೆಗಳು ಅವೈಜ್ಞಾನಿಕ ಆಚರಣೆಗಳಿಂದ ಆಗುತ್ತಿರುವ ದುಷ್ಪರಿಣಾಮಗಳು ಅನಾಹುತಗಳು, ಅವಘಡಗಳು, ಅನ್ಯಾಯ, ಮೋಸ, ವಂಚನೆ, ಶೋಷಣೆ ಇತ್ಯಾದಿಗಳ ಬಗ್ಗೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಅರಿವು ಮೂಡಿಸಬೇಕು. ಅಂತಹ ಪಠ್ಯ ನಮ್ಮ ಮಕ್ಕಳಿಗೆ ಇರಬೇಕು. ಇಂತಹ ವೈಜ್ಞಾನಿಕ, ವೈಚಾರಿಕ ವಿಚಾರಗಳನ್ನು ಪಠ್ಯಗಳಲ್ಲಿ ಅಳವಡಿಸಲು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಮನಸ್ಥಿತಿಯ ವಿಚಾರವಂತ ಶಿಕ್ಷಣ ತಜ್ಞರಿರಬೇಕು. ಇಂತಹ ಪಾಠಗಳನ್ನು, ವಿಚಾರಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡಲು ನಮ್ಮ ಪೆೀಷಕರು ಮೊದಲು ಬದಲಾಗಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹ ಆಮೂಲಾಗ್ರ ಬದಲಾವಣೆ ಆಗಬೇಕು. ಇದು ನಮ್ಮಲ್ಲಿ ಬಹುದೊಡ್ಡ ಆಂದೋಲನ ಆಗಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಜೊತೆಗೆ ಕಟ್ಟು ನಿಟ್ಟಿನ ಕಾನೂನು ಜಾರಿಯಾಗಬೇಕು.

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಪರಿ, ಮನೆಯಲ್ಲಿ ತಂದೆ ತಾಯಿಯರಿಂದಲೇ ಆರಂಭವಾಗಬೇಕು. ಮಗುವಿಗೆ ವರ್ಷ ತುಂಬುತ್ತಲೇ ದೇವರಿಗೆ ತಲೆ ಬೋಳಿಸುವುದರಿಂದ ಹಿಡಿದು, ಕಿವಿ ಚುಚ್ಚುವುದರಿಂದ, ಚೀಟುತಾಟು ಬರೆಸುವುದು, ಮುಂಜಿ ಮಾಡಿಸುವುದು ಸೇರಿದಂತೆ ಅಕ್ಷರಾಭ್ಯಾಸ ಮಾಡಿಸಲು ಮಠ ಮಾನ್ಯಗಳಿಗೆ ಮಕ್ಕಳನ್ನು ಕರೆದೊಯ್ಯುವಂತ ಆಚಾರ ವಿಚಾರ ಪದ್ಧತಿಗಳು ಇತ್ಯಾದಿ ಮೂಢನಂಬಿಕೆಗಳನ್ನು, ಕಂದಾಚಾರಗಳನ್ನು ಎತ್ತಿತೋರಿಸುವ ಇಂತವೆಲ್ಲಾ ನಮ್ಮ ಎಳೆಯ ಮಕ್ಕಳ ಮನಸ್ಸಿನ ಮೇಲೆ ಎಂತಹ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ನಮ್ಮ ಪೆೀಷಕರು ಯೋಚಿಸಬೇಕು. ಇಂತಹ ಅವೈಜ್ಞಾನಿಕ ಆಚರಣೆಗಳನ್ನು ನಮ್ಮ ಜನ ಬಿಡಬೇಕು. ರಾಹುಕಾಲ, ಗುಳಿಕಕಾಲ, ಯಮಗಂಡಕಾಲ, ಶಕುನ, ಅಪಶಕುನ ಇತ್ಯಾದಿ ಮನುಷ್ಯಧರ್ಮ ವಿರೋಧಿ ಸುಳ್ಳು ಕಥೆ ಕಂತೆಗಳನ್ನು ಹೇಳುವ ಸಾಹಿತ್ಯಗಳನ್ನು ಸರ್ಕಾರ ಬ್ಯಾನ್ ಮಾಡಬೇಕು.

ನಂಬಿದರೆ ದೇವರು ಇಲ್ಲಾ ಎಂದರೆ ಏನೂ ಇಲ್ಲ ಅನ್ನುವ ಮನಸ್ಥಿತಿಯವನು ನಾನು. ‘ಮನುಷ್ಯ ಜಾತಿ ತಾನೊಂದೇ ವಲಂ’ ಎನ್ನುವ ಸತ್ಯಕ್ಕೆ ಕಟ್ಟುಬದ್ಧನಾಗಿ ಬದುಕು ಕಟ್ಟಿಕೊಂಡವನು ನಾನು. ಧರ್ಮ ಎಂದರೆ ಮನುಷ್ಯ ಧರ್ಮ ಮಾತ್ರ ಇರಬೇಕು. ಕುವೆಂಪು ಅವರು ಸಾರಿರುವ ‘ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ’, ‘ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ’, ‘ನೂರು ದೇವರುಗಳ ನೂಕಾಚೆ ದೂರ’ ಎಂಬಂತ ಸತ್ಯ ಮಾರ್ಗದಲ್ಲಿ ಸಮಾಜ ನಡೆಯಬೇಕು. ಅವರು ಹೇಳಿಕೊಟ್ಟಿರುವ ವೈಚಾರಿಕ ಪ್ರಜ್ಞೆಯನ್ನು ತಮ್ಮ ಜೀವನದಲ್ಲಿ ನಮ್ಮ ಯುವಜನರು ಅಳವಡಿಸಿಕೊಂಡು ನಮ್ಮ ಮುಂದಿನ ಪೀಳಿಗೆಯನ್ನು ಪ್ರೇರೇಪಿಸಬೇಕಾಗಿದೆ.

ಬುದ್ಧಿ ಬಂದಾಗಿನಿಂದ ನಾನು ಯಾವುದೇ ಮೌಢ್ಯಾಚರಣೆ ಮಾಡಿಲ್ಲ. ದೇವಸ್ಥಾನ ಕಟ್ಟುತ್ತೇವೆಂದು ಬಂದವರಿಗೆ ದುಡ್ಡು ಕೊಟ್ಟಿಲ್ಲ. ಓದುವ ಮಕ್ಕಳಿಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಪೂಜೆ ಎಂಬುದು ಮೋಸ, ವಂಚನೆ ಸ್ವಾರ್ಥಸಾಧನೆಯ ಅಡಿಪಾಯ ಎಂಬುದನ್ನು ನಾನು ಯಾವಾಗಲೂ ಪ್ರತಿಪಾದಿಸುತ್ತೇನೆ. ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ಸಾಹಿತ್ಯ ಕೃತಿಗಳಿಂದ ಪ್ರೇರಿತರಾಗಿ ನಾನು ಮತ್ತು ನನ್ನ ಕೆಲವು ಮಿತ್ರರು ಸರಳ ಮದುವೆ ಮಾಡಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದೇವೆ ಮತ್ತು ಯಾವುದೇ ರೀತಿಯ ಮೌಢ್ಯಾಚರಣೆಗಳನ್ನು ನಮ್ಮ ಮನೆಗಳಲ್ಲಿ ಆಚರಿಸುವುದಿಲ್ಲ. ಅಪ್ಪ ಅಮ್ಮ ಮೊದಲು ಬದಲಾಗಬೇಕು. ಆಗ ಮಕ್ಕಳು ಬದಲಾಗುತ್ತಾರೆ. ಸಮಾಜ ತಂತಾನೇ ಬದಲಾಗುತ್ತದೆ.

ಮಠಮಾನ್ಯಗಳಲ್ಲಿ ದೇವಸ್ಥಾನಗಳಲ್ಲಿ ಹರಕೆ ಹೊತ್ತ ಜನ ತಲೆ ಬೋಳಿಸಿಕೊಳ್ಳುವುದು ಕುರಿ, ಕೋಳಿ, ಹಂದಿ, ಕೋಣಗಳನ್ನು ಬಲಿ ಕೊಡುವಂಥ ಅನಾಗರಿಕರ ನೀಚ ಪದ್ಧತಿಗಳಿಗೆ ಮೊದಲು ಕಡಿವಾಣ ಹಾಕಬೇಕು. ಇಂತಹ ಆಚರಣೆಗಳನ್ನು ಸಾರ್ವಜನಿಕವಾಗಿ ಆಚರಣೆ ಮಾಡದಂತೆ ಕಠಿಣ ಕಾನೂನು ಜಾರಿಮಾಡಬೇಕು. ಆ ಕಾನೂನನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಅಂತಹ ಕಡೆ ಪೆÇಲೀಸ್ ಸರ್ಪಗಾವಲು ಇರುವಂತೆ ಬಿಗಿ ಬಂದೋಬಸ್ತು ಮಾಡಬೇಕು. ಮಾಟ, ಮಂತ್ರ, ತಂತ್ರ, ಶಾಸ್ತ್ರ, ಭವಿಷ್ಯ ಹೇಳುವುದು ಇತ್ಯಾದಿ ಗೊಡ್ಡು ಸಂಪ್ರದಾಯ ಪದ್ಧತಿ ಸುಳ್ಳು ಕಾಯಕ ಮಾಡಿ, ಆಚರಿಸಿ ಮುಗ್ಧ ಜನತೆಗೆ ಆಸೆ ಆಮಿಷ ಒಡ್ಡಿ ಮೂಢನಂಬಿಕೆಯ ಕೂಪಕ್ಕೆ ತಳ್ಳುವ ಕಪಟ ವ್ಯಕ್ತಿಗಳನ್ನು ಬಂಧಿಸಿ ಜೈಲಿಗೆ ಅಟ್ಟಬೇಕು. ಜ್ಯೋತಿಷ್ಯ, ವಾಸ್ತು, ಮಡೆಸ್ನಾನ, ದೇವದಾಸಿ ಪದ್ಧತಿ, ಸಿಡಿ ಏರಿಸುವುದು ಇತ್ಯಾದಿ ಅವೈಜ್ಞಾನಿಕ ಪೈಶಾಚಿಕ ಪದ್ಧತಿಗಳನ್ನು ಎಸಗುವ, ಆ ಮೂಲಕ ಮುಗ್ಧ ಜನರನ್ನು ಮೂಢರನ್ನಾಗಿ, ಮೂರ್ಖರನ್ನಾಗಿ, ಮುಠ್ಠಾಳರನ್ನಾಗಿ ಮಾಡುತ್ತಿರುವ ವ್ಯಕ್ತಿಗಳನ್ನು ನಿಯಂತ್ರಿಸಬೇಕು. ಇಂತಹ ಕ್ರಾಂತಿಕಾರಕ ಕಾನೂನುಗಳನ್ನು ತರಲು ಸರ್ಕಾರ ನಡೆಸುತ್ತಿರುವ ನಮ್ಮ ಜನ ಪ್ರತಿನಿಧಿಗಳಿಗೆ ಧೀಶಕ್ತಿ, ಇಚ್ಛಾಶಕ್ತಿ, ಆತ್ಮಸ್ಥೆರ್ಯ, ಛಲ, ಹಠ ಮತ್ತು ಅಂತಹ ಕಮಿಟ್‍ಮೆಂಟ್ ಇರಬೇಕಾಗುತ್ತದೆ.

ಇಂತಹ ಕ್ರಾಂತಿಕಾರಕ ಕಾನೂನುಗಳನ್ನು, ಬದಲಾವಣೆಗಳನ್ನು ತರುವಂತಹ ಶಕ್ತಿ ಹಾಗೂ ವೈಚಾರಿಕ ನೆಲೆಗಟ್ಟನ್ನು ರೂಢಿಸಿಕೊಂಡಿರುವ ರಾಜಕಾರಣಿಗಳು ನಮ್ಮ ರಾಜಕಾರಣದಲ್ಲಿದ್ದರೂ ಅಂಥವರನ್ನೂ ಈ ಕೊಳಕು ವ್ಯವಸ್ಥೆ ಅಪೆೀಷನ ಮಾಡಿಕೊಂಡಿದೆ ಎಂಬ ಸತ್ಯ ನಮ್ಮ ಮುಂದಿದೆ.

*ಲೇಖಕರು ಮೂಲತಃ ಹಾಸನ ಜಿಲ್ಲೆಯವರು, ಎಂ.., ಬಿ.ಇಡಿ. ಪದವೀಧರರು, ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ. ಎರಡು ಪುಸ್ತಕಗಳು ಪ್ರಕಟಗೊಂಡಿವೆ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ. ಸದ್ಯ ಮೈಸೂರು ತಾಲ್ಲೂಕು, ಗುರೂರು ಗ್ರಾಮದಲ್ಲಿ ಕೃಷಿಯಲ್ಲಿ ನಿರತರು.

Leave a Reply

Your email address will not be published.