ಶ್ರದ್ಧೆ ಮತ್ತು ಅಂಧಶ್ರದ್ಧೆ

ಹಿಂದುಗಳು ಆತ್ಮದ ಅಸ್ತಿತ್ವದಲ್ಲಿ ನಂಬಿಕೆಯುಳ್ಳವರಾಗಿದ್ದಾರೆ. ಆತ್ಮವು ಪರಮಾತ್ಮನೊಂದಿಗೆ ಒಂದಾಗುವ ಮೂಲಕ ಜನನ ಮರಣಗಳ ಚಕ್ರದಿಂದ ಮುಕ್ತಗೊಳ್ಳತ್ತದೆ ಎಂದು ನಂಬಲಾಗಿದೆ. ಬೌದ್ಧರು ಆತ್ಮದ ಪರಿಕಲ್ಪನೆಯನ್ನೇ ಅಲ್ಲಗಳೆಯುತ್ತಾರೆ. ಜೈನರು ಸೂರ್ಯಾಸ್ತಕ್ಕೂ ಮುಂಚೆಯೆ ರಾತ್ರಿ ಊಟ ಮಾಡಬೇಕೆಂದು ಒತ್ತಿ ಹೇಳುತ್ತಾರೆ. ರಂಜಾನ ತಿಂಗಳಿನಲ್ಲಿ ಚಂದ್ರೋದಯಕ್ಕಿಂತಲೂ ಮುಂಚೆ ಮುಸ್ಲಿಂರು ಒಂದು ಹನಿ ನೀರನ್ನೂ ಕುಡಿಯುವುದಿಲ್ಲ. ಈ ಎಲ್ಲ ಧಾರ್ಮಿಕ ಗುಂಪಿನವರು ತಮ್ಮ ಆಚರಣೆಯ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ ಮತ್ತು ಅನ್ಯರ ಆಚರಣೆಯ ನಿಲುವುಗಳನ್ನು ಅಂಧಶ್ರದ್ಧೆಗಳೆಂದು ದೂಷಿಸುತ್ತಾರೆ. ಕೆಲವರಂತೂ ತಮ್ಮ ಶ್ರದ್ಧೆಯನ್ನು ಸಮರ್ಥಿಸಿಕೊಳ್ಳುವಲ್ಲಿ ತಮ್ಮ ಜೀವವನ್ನೇ ಅರ್ಪಿಸಲು ಸಿದ್ಧರಿರುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ ಅಂಧಶ್ರದ್ಧೆಯನ್ನು ನಿರ್ಮೂಲನ ಮಾಡುವುದು ಬಹು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.

ಮೂಲ: ನರೇಂದ್ರ ದಾಭೋಳ್ಕರ್

ಕನ್ನಡಕ್ಕೆ: ಚನ್ನಪ್ಪ ಕಟ್ಟಿ

ಶ್ರದ್ಧೆ ಮತ್ತು ಅಂಧಶ್ರದ್ಧೆ

ನರೇಂದ್ರ ದಾಭೋಳ್ಕರ್ ಅವರ ‘ದ ಕೇಸ್ ಫಾರ್ ರೀಸನ್’ ಕೃತಿಯ ಎರಡನೇ ಸಂಪುಟದಿಂದ ಆಯ್ದ ‘ಫೇಥ್ ಅಂಡ್ ಸುಪರ್‍ಸ್ಟೀಷನ್’ ಲೇಖನದ ಅನುವಾದವಿದು. ಲೇಖಕರ ಪ್ರಖರ ಚಿಂತನೆಗಳು ಈ ಸಂಚಿಕೆಯ ಮುಖ್ಯಚರ್ಚೆಗೆ ಪೂರಕವಾಗಿ ಓದುಗರನ್ನು ತಲುಪಲಿ ಎಂಬುದು ನಮ್ಮ ಆಶಯ.

ಇಲ್ಲಿನ ಕೆಲವು ಹೇಳಿಕೆಗಳನ್ನು ಒಂದಿಷ್ಟು ಗಮನಿಸಿರಿ:

ನನಗೆ ದೇವರಲ್ಲಿ ನಂಬಿಕೆ ಇದೆ.’

ದೇವರು ಅವತರಿಸುತ್ತಾನೆ.’

ದೇವರು ಜನರ ಪ್ರಾರ್ಥನೆಗಳಿಗೆ ಉತ್ತರಿಸುತ್ತಾನೆ.’

ದೇವರು ದುಷ್ಟರನ್ನು ಶಿಕ್ಷಿಸುತ್ತಾನೆ ಮತ್ತು ಶಿಷ್ಟರನ್ನು ರಕ್ಷಿಸುತ್ತಾನೆ.’

ದೇವರು ಸರ್ವಜ್ಞನಾಗಿದ್ದಾನೆ ಮತ್ತು ಸರ್ವಶಕ್ತನಾಗಿದ್ದಾನೆ.’

ದೇವರ ಇಷ್ಟದ ವಿರುದ್ಧ ಏನೂ ಸಂಭವಿಸಲಾರದು.’

ದೇವರು ಪವಾಡಗಳು ಸಂಭವಿಸುವಂತೆ ಮಾಡುತ್ತಾನೆ.’

ದೇವರು ಸ್ವಪ್ನದಲ್ಲಿ ದರ್ಶನ ನೀಡುತ್ತಾನೆ.’

ದೇವರು ಎಂದರೆ ಸನ್ನಡತೆ.’

ಮೇಲಿನ ಹೇಳಿಕೆಗಳೆಲ್ಲ ಶ್ರದ್ಧೆಯ ಮಾತುಗಳ ಹಾಗೆ ತೋರುತ್ತವೆ. ಆದರೆ, ಅವುಗಳಲ್ಲಿ ಒಂದೊಂದನ್ನೇ ತೆಗೆದುಕೊಂಡು ಪರಿಶೀಲಿಸಿದರೆ ಇವುಗಳಲ್ಲಿ ಕೆಲವು ಅಂಧಶ್ರದ್ಧೆಯನ್ನು ಸೂಚಿಸುವಂಥವಾಗಿವೆ. ಶ್ರದ್ಧೆ ಹಾಗೂ ಅಂಧಶ್ರದ್ಧೆ ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಹೇಗೆ? ಶ್ರದ್ಧೆ ಎಂದರೆ ಏನು ಎನ್ನುವುದನ್ನು ಒಂದು ಉದಾಹರಣೆಯಿಂದ ಪರಿಶೀಲಿಸೋಣ. ನೀವು ನಿಮ್ಮ ತಾಯಿಯ ಬಗೆಗೆ ಶ್ರದ್ಧೆ ಹೊಂದಿದ್ದೀರೆಂದರೆ ಅದು ನಿಮ್ಮ ತಾಯಿಯ ಬಗೆಗೆ ನೀವು ತೋರಿಸುವ ಗೌರವದ ಮತ್ತು ಕೃತಜ್ಞತೆಯ ದ್ಯೋತಕವಾಗಿದೆ ಎಂದರ್ಥ. ಅದು ಅತ್ಯಂತ ಸಹಜವಾದ ಹಾಗೂ ಸೂಕ್ತವಾದ ಭಾವನೆಯಾಗಿದೆ. ಹಾಗೆಂದು ನಿಮ್ಮ ತಾಯಿಯು ಹೊಂದಿರುವ ಅತಾರ್ಕಿಕವಾದ ನಿಲುವುಗಳನ್ನು ಒಪ್ಪಿಕೊಳ್ಳುತ್ತೀರಿ ಎಂದರ್ಥವಲ್ಲ. ಆದರೆ ಇದರರ್ಥ ನೀವು ನಿಮ್ಮ ಪಾಲಕರ ಬಗೆಗೆ ಹೊಂದಿರುವ ಪ್ರೀತಿ ವಾತ್ಸಲ್ಯಗಳು ಕುಂದಿವೆ ಎಂದಲ್ಲ. ಆದರೆ ಇದೇ ತರ್ಕವನ್ನು ಪವಿತ್ರ ಗ್ರಂಥಗಳಿಗೆ ಅನ್ವಯಿಸಿ ಹೇಳಲು ಹೋದರೆ ಅದನ್ನು ಗ್ರಂಥಗಳ ಅವಹೇಳನ ಎಂದು ಪರಿಭಾವಿಸಲಾಗುತ್ತದೆ. ಹಿಂದುಗಳು ಆತ್ಮದ ಅಸ್ತಿತ್ವದಲ್ಲಿ ನಂಬಿಕೆಯುಳ್ಳವರಾಗಿದ್ದಾರೆ. ಆತ್ಮವು ಪರಮಾತ್ಮನೊಂದಿಗೆ ಒಂದಾಗುವ ಮೂಲಕ ಜನನ ಮರಣಗಳ ಚಕ್ರದಿಂದ ಮುಕ್ತಗೊಳ್ಳತ್ತದೆ ಎಂದು ನಂಬಲಾಗಿದೆ. ಬೌದ್ಧರು ಆತ್ಮದ ಪರಿಕಲ್ಪನೆಯನ್ನೇ ಅಲ್ಲಗಳೆಯುತ್ತಾರೆ. ಜೈನರು ಸೂರ್ಯಾಸ್ತಕ್ಕೂ ಮುಂಚೆಯೆ ರಾತ್ರಿ ಊಟ ಮಾಡಬೇಕೆಂದು ಒತ್ತಿ ಹೇಳುತ್ತಾರೆ. ರಂಜಾನ ತಿಂಗಳಿನಲ್ಲಿ ಚಂದ್ರೋದಯಕ್ಕಿಂತಲೂ ಮುಂಚೆ ಮುಸ್ಲಿಂರು ಒಂದು ಹನಿ ನೀರನ್ನೂ ಕುಡಿಯುವುದಿಲ್ಲ. ಎಲ್ಲ ಧಾರ್ಮಿಕ ಗುಂಪಿನವರು ತಮ್ಮ ಆಚರಣೆಯ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ ಮತ್ತು ಅನ್ಯರ ಆಚರಣೆಯ ನಿಲುವುಗಳನ್ನು ಅಂಧಶ್ರದ್ಧೆಗಳೆಂದು ದೂಷಿಸುತ್ತಾರೆ. ಕೆಲವರಂತೂ ತಮ್ಮ ಶ್ರದ್ಧೆಯನ್ನು ಸಮರ್ಥಿಸಿಕೊಳ್ಳುವಲ್ಲಿ ತಮ್ಮ ಜೀವವನ್ನೇ ಅರ್ಪಿಸಲು ಸಿದ್ಧರಿರುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ ಅಂಧಶ್ರದ್ಧೆಯನ್ನು ನಿರ್ಮೂಲನ ಮಾಡುವುದು ಬಹು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.

ಶ್ರದ್ಧೆಯ ತಾತ್ಕಾಲಿಕ ಮತ್ತು ವ್ಯಕ್ತಿಗತ ಸ್ವಭಾವ

ಹಲವಾರು ಶತಮಾನಗಳ ಹಿಂದೆ ವಿಧವೆಯಾದವಳನ್ನು ಅವಳ ಮೃತ ಗಂಡನ ಚಿತೆಯಲ್ಲಿ ಜೀವಂತವಾಗಿ ಸುಡಲಾಗುತ್ತಿತ್ತು. ಗವರ್ನರ್ ಜನರಲ್ ಲಾರ್ಡ್ ವಿಲಿಯಮ್ ಬೆಂಟಿಂಕ್ ತನ್ನ ಪೊಲಿಸ್ ಸಿಬ್ಬಂದಿಯ ಮೂಲಕ ಹಾಗೆ ಸಾಯುವವಳನ್ನು ರಕ್ಷಿಸಲು ಮುಂದಾದಾಗ ಶ್ರದ್ಧಾವಂತರ ಪಂಗಡವೊಂದು ಸತಿ ಎನ್ನುವುದು ಒಂದು ಧಾರ್ಮಿಕ ಶ್ರದ್ಧೆಯಾಗಿದ್ದು ಅನ್ಯರ ಮಧ್ಯ ಪ್ರವೇಶ ಸ್ವೀಕಾರಾರ್ಹವಾದುದಲ್ಲ ಎಂದು ವಾದಿಸಿತು. 1829ರಲ್ಲಿ ಸತಿ ನಿಷೇಧ ಕಾನೂನು ಬಂದಿತು. ಹಲವಾರು ಪ್ರತಿಭಟನೆಗಳ ಮಧ್ಯದಲ್ಲಿಯೂ ಸತಿ ಪದ್ಧತಿಯನ್ನು ನಿಷೇಧಿಸಲಾಯಿತು. 1987ರಲ್ಲಿ ರಾಜಸ್ಥಾನದ ದೆವರಾಲಾ ಎನ್ನುವಲ್ಲಿ ಮಹಿಳೆಯೊಬ್ಬಳು ಸತಿ ಹೋದಾಗ ಮಹಿಳಾ ಕಲ್ಯಾಣ ಸಂಘಗಳು ಮತ್ತು ಅನೇಕ ಸಾಮಾಜಿಕ ಸಂಘಟನೆಗಳು ಪ್ರತಿಭಟನೆಯನ್ನು ನಡೆಯಿಸಿ ಸತಿ ನಿಷೇಧ ಕಾನೂನನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಒತ್ತಾಯಿಸಿದವು. ಹೀಗೆ ಹತ್ತೊಂಬತ್ತನೆಯ ಶತಮಾನದವರೆಗೆ ಧಾರ್ಮಿಕ ಶ್ರದ್ಧೆಯಾಗಿ ಉಳಿದುಕೊಂಡು ಬಂದಿದ್ದ ಪದ್ಧತಿಯನ್ನು ಇಪ್ಪತ್ತನೆಯ ಶತಮಾನದಲ್ಲಿ ನಿಸ್ಸಂಶಯವಾಗಿ ಅಂಧಶ್ರದ್ಧೆಯೆಂದು ನಿರ್ಣಯಿಸಲಾಯಿತು. ಇದು ಅಂಧಶ್ರದ್ಧೆಯ ತಾತ್ಕಾಲಿಕ ಸ್ವಭಾವದ ಉದಾಹರಣೆಯಾಗಿದೆ.

ಮುಚ್ಚಿದ ಮುಷ್ಟಿಯಿಂದ ಕೈಚಳಕದಿಂದ ಸತ್ಯಸಾಯಿಬಾಬಾ ಅವರು ಸಭೆಯಲ್ಲಿ ನೆರೆದ ಗಣ್ಯರಿಗೆ ಬಂಗಾರದ ಆಭರಣಗಳನ್ನು ಅಂದಿನ ಪ್ರಧಾನಮಂತ್ರಿ ಪಿ.ವ್ಹಿ.ನರಸಿಂಹರಾವ, ಗ್ರಹಮಂತ್ರಿ ಶಂಕರರಾವ ಚವ್ಹಾನ ಮತ್ತು ಲೋಕಸಭಾ ಸ್ಪೀಕರ್ ಶಿವರಾಜ ಪಾಟೀಲ ಮುಂತಾದವರಿಗೆ ಕೊಟ್ಟ ಪವಾಡಸದೃಶ್ಯ ಘಟನೆ ಜರುಗಿದಾಗ ಕುರಿತು ಅಂದಿನ ಗ್ರಹ ಮಂತ್ರಿಗಳಾಗಿದ್ದ ಶಂಕರರಾವ ಚವ್ಹಾನ ಅವರನ್ನು ಪ್ರಶ್ನಿಸಿದಾಗಇದು ನನ್ನ ವೈಯಕ್ತಿಕ ಶ್ರದ್ಧೆಯ ವಿಷಯ. ನಾನು ಇದನ್ನು ಟೀಕಿಸಲೂ ಹೋಗಲಾರೆ ಮತ್ತು ಇಂಥದರ ಕುರಿತು ಬೇರೆಯವರು ಟೀಕಿಸಲೂ ಬಿಡಲಾರೆ.’ ಎಂದು ಹೇಳಿದರು. ಇದು ಶ್ರದ್ಧೆಯ ವ್ಯಕ್ತಿಗತ ಸ್ವಭಾವದ ಉದಾಹರಣೆ. ಹೀಗಾಗಿ ಶ್ರದ್ಧೆ, ನಂಬಿಕೆ ಮತ್ತು ಅಂಧಶ್ರದ್ಧೆ ಎನ್ನುವವು ಮೂರು ಭಿನ್ನವಾದ ವಿಚಾರಗಳಾಗಿವೆ. ಯಾರಾದರೂ ನನಗೆ ಕೈಗಡಿಯಾರದಲ್ಲಿ, ವಿದ್ಯೂದ್ದೀಪಗಳಲ್ಲಿ ಮತ್ತು ನಾನು ಬರೆಯುವ ಪೆನ್ನಿನಲ್ಲಿ ಶ್ರದ್ಧೆಯಿದೆ ಆದ್ದರಿಂದ ಕೈಗಡಿಯಾರ ಸರಿಯಾದ ಸಮಯವನ್ನು ತೋರಿಸುತ್ತದೆ, ವಿದ್ಯೂದ್ದೀಪಗಳು ಬೆಳಕನ್ನು ನೀಡುತ್ತವೆ, ನನ್ನ ಪೆನ್ನು ಸರಿಯಾಗಿ ಬರೆಯುತ್ತದೆ ಎಂದು ಯಾರಾದರೂ ಹೇಳಿದರೆ ಅದನ್ನು ಶದ್ಧೆ ಎಂದು ಭಾವಿಸುವುದಕ್ಕಿಂತ ನಂಬಿಕೆ ಎಂದು ಕರೆಯುವುದು ಸೂಕ್ತ. ಯಾಕೆಂದರೆ ನಂಬಿಕೆ ಎನ್ನುವುದು ಕಾರ್ಯ ಕಾರಣ ಸಂಬಂಧವನ್ನು ಒಪ್ಪಿಕೊಳ್ಳುತ್ತದೆ. ಆದರೆ ಶ್ರದ್ಧೆ ಹಾಗಲ್ಲ. ಪೆನ್ನಿನಲ್ಲಿ ಮಸಿ ಇದ್ದರೆ ಬರೆಯುತ್ತದೆ ಎನ್ನುವುದು ನಂಬಿಕೆ. ಮಸಿಯಿಲ್ಲದಿದ್ದರೂ ಬರೆಯುತ್ತದೆ ಎನ್ನುವುದು ಶ್ರದ್ಧೆ. ಕಳ್ಳತನ ಮಾಡಿದಳೆಂಬ ಆರೋಪದ ಮಹಿಳೆಯೊಬ್ಬಳಿಗೆ ಕುದಿಯುವ ಎಣ್ಣೆಯಲ್ಲಿನ ನಾಣ್ಯವನ್ನು ತೆಗೆಯಲು ಹೇಳಿ ಅವಳು ಕಳ್ಳಿ ಹೌದೋ ಅಲ್ಲವೋ ಎನ್ನುವುದು ನಿರ್ಣಯಿಸುವುದು ಅಂಧಶ್ರದ್ಧೆಯಾಗಿದೆ.

ವಿಜ್ಞಾನ ತಂತ್ರಜ್ಞಾನದಲ್ಲಿ ಏನೆಲ್ಲ ಪ್ರಗತಿ ಸಾಧನೆಯಾಗಿದ್ದರೂ ವೈಜ್ಞಾನಿಕ ಮನೋಭಾವ ಇನ್ನೂ ಆಳಮಟ್ಟಕ್ಕೆ ಇಳಿದಿಲ್ಲವೆನ್ನಿಸುತ್ತದೆ. ಯಾಕೆಂದರೆ ಅಂಧಶ್ರದ್ಧೆ ಎನ್ನುವುದು ತುಂಬಾ ಸಂಕೀರ್ಣವಾದ ಪ್ರಕ್ರಿಯೆಯಾಗಿದೆ. ಹೀಗಾಗಿ ಅದು ಟೀಕೆಯನ್ನು ಸ್ವಾಗತಿಸುವುದಿಲ್ಲ. ಋತುಮತಿಯಾದ ಮಹಿಳೆ ಅಶುದ್ಧಳು ಎನ್ನುವುದು ಅಂಥದ್ದೊಂದು ಅಂಧಶ್ರದ್ಧೆ. ವಿನೋಬಾ ಭಾವೆ ಅವರು ಮನುಷ್ಯರೆಂದರೆ ಮಲ ಮೂತ್ರದ ಗಟಾರ್ ಎಂದು ಕರೆದಿದ್ದಾರೆ. ನಾವೆಲ್ಲ ನಮ್ಮ ಮಲದ ಚೀಲವನ್ನು ಮತ್ತು ಮೂತ್ರದ ಚೀಲವನ್ನು ಖಾಲಿ ಮಾಡುತ್ತಲೇ ಇರಬೇಕು. ಹಾಗೆಯೇ ಮಹಿಳೆಯ ದೇಹದಲ್ಲಿನ ಒಂದಿಷ್ಟು ಕಲ್ಮಶವು ತಿಂಗಳಲ್ಲಿ ಮೂದ್ನಾಲ್ಕು ದಿವಸಗಳ ಮಟ್ಟಿಗೆ ಋತುಶ್ರಾವದ ರೂಪದಲ್ಲಿ ಹೊರಹಾಕಲ್ಪಡುತ್ತದೆ. ಮಲ ಮೂತ್ರಗಳು ಹೊರಗೆ ಹೋದ ನಂತರ ನಾವು ಹೇಗೆ ಸ್ವಚ್ಛವಾಗುತ್ತೇವೆಯೋ ಹಾಗೆಯೇ ಮಹಿಳೆಯೂ ಸ್ವಚ್ಛಳಾಗುತ್ತಾಳೆಯೇ ಹೊರತು ಅಶುದ್ಧಳೆನಿಸಿಕೊಳ್ಳಲಾರಳು. ಇದೆಲ್ಲ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆ ರೂಪಿಸಿಕೊಂಡ ಸಂಗತಿ ಮಾತ್ರವಾಗಿದೆ.

ನಂಬಿಕೆಯನ್ನು ಊರ್ಜಿತಗೊಳಿಸುವ ಮೂರು ಮಾನದಂಡಗಳಿವೆ. ಸಾಕ್ಷಿ ಎನ್ನುವುದು ಮೊದಲನೆಯ ಮಾನದಂಡ. ಬೆಂಕಿ ಸುಡಲಾರದು ಎಂದರೆ ಅದನ್ನು ಯಾರೂ ನಂಬಲಾರರು. ಸಾಕ್ಷಿ ಆಧಾರದ ಮೇಲೆ ತೀಮಾನಕ್ಕೆ ಬರುವುದು ಎರಡನೆಯ ಮಾನದಂಡ. ದಾರಿಗಳೆ ಗೋಚರಿಸದ ಕಾಡಿನಲ್ಲಿ ಸಿಲುಕಿ ಹಾಕಿಕೊಂಡಿರುವ ನಾವು ದೂರದಲ್ಲೆಲ್ಲೋ ಹೊಗೆ ಹಾಯುವುದನ್ನು ನೋಡಿ ಅಲ್ಲಿ ಜನವಸತಿ ಇದೆ ಎಂದು ನಿರ್ಣಯಿಸುತ್ತೇವೆ. ಪ್ರಮಾಣಿಸಿ ನೋಡುವುದು ಮೂರನೆಯ ಮಾನದಂಡ. ಕಾರ್ಯಕಾರಣ ಸಂಬಂಧದ ಮಾತು ಬಂದಾಗ ಶ್ರದ್ಧೆಯು ರಂಗದಿಂದ ಹಿಂದಕ್ಕೆ ಸರಿಯುತ್ತದೆ. ಮಗುವಿಗೆ ಪೊಲಿಯೋ ಲಸಿಕೆ ಹಾಕಿಸುವ ವಿಷಯ ಬಂದಾಗದೇವರು ನಮ್ಮನ್ನು ರಕ್ಷಿಸಲಿದ್ದಾನೆಎನ್ನುವ ಮಾತಿನ ನಂಬಿಕೆಯ ಆಧಾರದ ಮೇಲೆ ತಮ್ಮ ಮಕ್ಕಳಿಗೆ ಯಾರೂ ಲಸಿಕೆ ಹಾಕಿಸುವುದನ್ನು ನಿರಾಕರಿಸಲಾರರು. ರಾಜನಲ್ಲಿ ದೈವೀ ಅಂಶವಿದೆ ಎನ್ನುವ ಶ್ರದ್ಧೆಯ ಆಧಾರದ ಮೇಲೆ ಇಂದಿನ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲಕ ಜನ ಪ್ರತಿನಿಧಿಯಾಗುವುದನ್ನು ನಿರಾಕರಿಸುವಂತಿಲ್ಲ.

ಅಂಧಶ್ರದ್ಧೆಯ ರಕ್ಷಾಕವಚ

ಅಂಧಶ್ರದ್ಧೆ ಎನ್ನುವುದು ಅಜ್ಞಾನವೆನ್ನುವುದರ ಪಳೆಯುಳಿಕೆ. ಭಾವಾತಿರೇಕವೆನ್ನುವುದು ಅಜ್ಞಾನದ ರಕ್ಷಾಕವಚವಾಗಿದೆ. ಶ್ರದ್ಧೆಯ ವಿಷಯವು ಒಂದಿಷ್ಟು ಭಿನ್ನವಾಗಿರುತ್ತದೆ. ಅದರ ರಕ್ಷಾ ಕವಚವು ಅಜ್ಞಾನವನ್ನು ರಕ್ಷಿಸುವ ಬದಲಿಗೆ ಜ್ಞಾನವನ್ನು ರಕ್ಷಿಸುತ್ತದೆ. ಶ್ರದ್ಧೆಯು ರಕ್ಷಾಕವಚವು ತನ್ನನ್ನು ರಕ್ಷಿಸಬಲ್ಲುದೆ? ಎನ್ನುವುದನ್ನು ಪರೀಕ್ಷೆಗೆ ಒಡ್ಡಲು ಸಿದ್ಧವಿರುತ್ತದೆ. ಆದರೆ ಅಂಥ ಸಾಹಸವನ್ನು ಅಂಧಶ್ರದ್ಧೆಯು ಮಾಡಲಾರದು. ಹುಟ್ಟುಮೂಲದ ಮೂಲಕ ತರತಮವನ್ನು ಸೃಷ್ಟಿಕೊಂಡಿರುವ ಮನಸ್ಸುಗಳು ಅಂತರ್ಜಾತಿಯ ವಿವಾಹಗಳನ್ನು ವಿರೋಧಿಸುತ್ತಲೆ ಬಂದಿವೆ. ಭೂಮಿಯ ಮೇಲಿನ ಸರ್ವಜನಾಂಗದರೆಲ್ಲರೂ ನಾಲ್ಕೇ ನಾಲ್ಕು ರಕ್ತದ ಗುಂಪಿನಲ್ಲಿ ಹಂಚಿಹೋಗಿದ್ದಾರೆ ಎನ್ನುವ ವಿಜ್ಞಾನದ ಸತ್ಯವನ್ನು ಅರ್ಥೈಸಿಕೊಳ್ಳಬೇಕು. ವಿಶ್ವದ ಪ್ರತಿಶತ 99.97ರಷ್ಟು ಜನರ ಜೀನ್ಸ್ ಮಾದರಿ ಒಂದೆ ತೆರನಾಗಿಯೆ ಇದೆ. ಹೀಗಾಗಿ ಹುಟ್ಟುಮೂಲದ ತರತಮ ಕಲ್ಪನೆಯು ನಿಸ್ಸಂಶಯವಾಗಿ ಅಂಧಶ್ರದ್ಧೆ ಅನ್ನಿಸಿಕೊಳ್ಳುತ್ತದೆ.

ಪ್ರಾರಂಭಿಕ ಹೆಜ್ಜೆಗಳು

ಕೆಲವು ಅಂಧಶ್ರದ್ಧೆಗಳು ಸಹಜವಾದ ಸಾಮಾಜಿಕ ಮತ್ತು ಮಾನಸಿಕ ಪ್ರಕ್ರಿಯೆಯ ಮೂಲಕ ನಿಧಾನವಾಗಿ ಮರೆಯಾಗುತ್ತ ಹೋಗುತ್ತವೆ. ಇವೆಲ್ಲ ಅಜ್ಞಾನದಲ್ಲಿ ಬೇರೂರಿರುವಂಥವಾಗಿವೆ. ಅವು ಅಮಾನಿವೀಯವಾಗಿತ್ತವೆ ಮತ್ತು ಜೀವ ವಿರೋಧಿಯಾಗಿರುತ್ತವೆ. ಸಮಾಜ ಸುಧಾರಕರು ಕಾಲ ಕಾಲಕ್ಕೆ ಅವುಗಳನ್ನು ವಿರೋಧಿಸುತ್ತಲೇ ಬಂದಿರುತ್ತಾರೆ. ಮತ್ತು ಕೆಲವೊಂದು ಅಂಧಶ್ರದ್ಧೆಗಳು ನಮ್ಮ ಇಂದಿನ ಅವಸರ ಜೀವನದಲ್ಲಿ ಅನುಸರಿಸಲು ಸಾಧ್ಯವಾಗದೇ ಹೋಗುವಂಥವುಗಳಾಗಿರುತ್ತವೆ. ದೇವದಾಸಿ ಪದ್ಧತಿಯು ಅಮಾನವೀಯವಾದುದಾಗಿದೆ. ಜಿಡ್ಡುಗಟ್ಟಿದ ಮಹಿಳೆಯ ಕೂದಲನ್ನು ನೋಡಿ ಅದೆಲ್ಲ ಅವಳು ದಾಸಿಯಾಗಲು ಅರ್ಹಳಾದಳು ಎಂದು ಸೂಚಿಸುವ ಪೂರ್ವನಿಧರಿತ ಲಕ್ಷಣ ಎನ್ನುವುದು, ಅದನ್ನು ರೇಣುಕಾ ಯಲ್ಲಮ್ಮಳು ಕಳುಹಿಸಿದ ಆಂತ್ರಣವೆಂದು ಭಾವಿಸುವುದು, ದೇವದಾಸಿಯಾದ ಕಾರಣದಿಂದ ಅವಳು ದೇವರೊಂದಿಗೆ ಮದುವೆಯಾದಳು ಮತ್ತು ನರ ಮನುಷ್ಯರೊಂದಿಗೆ ಮದುವೆಯಾಗುವಂತಿಲ್ಲ ಎಂದು ತೀರ್ಮಾನಿಸುವುದುಇವೆಲ್ಲ ಅಂಧಶ್ರದ್ಧೆಯ ಮಾತಾಗುತ್ತವೆ. 1934ರಿಂದಲೇ ಅಂಧಶ್ರದ್ಧೆಯ ವಿರುದ್ಧ ಕಾನೂನಾತ್ಮಕ ಹೋರಾಟಗಳು ನಡೆಯುತ್ತ ಬಂದಿವೆ. ಯಾವುದೇ ಅಂಧಶ್ರದ್ಧೆಯು ಅಮಾನವೀಯವಾಗಿದ್ದರೆ ಅದನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ನಿರ್ಮೂಲನ ಮಾಡಲು ಪ್ರಯತ್ನಿಸಬೇಕು. ಸಂಪೂರ್ಣ ನಿರ್ಮೂಲನ ಮಾಡಲು ಸಾಧ್ಯಾವಗದಿದ್ದರೆ ಅದರ ತೀವ್ರತೆಯನ್ನಾದರೂ ಕಡಿಮೆಗೊಳಿಸಬೇಕು.

ಅಜ್ಞಾನ ಮೂಲದಿಂದ ಹುಟ್ಟಿಕೊಂಡ ಕೆಲವೊಂದು ಅಂಧಶ್ರದ್ಧೆಗಳು ವೈಜ್ಞಾನಿಕ ತಿಳಿವಳಿಕೆಯ ಬೆಳಕಿನಲ್ಲಿ ಕರಗಿಹೋಗುತ್ತವೆ. ಕೆಲವು ದಶಕಗಳ ಹಿಂದೆ ಸಿಡುಬು ರೋಗವನ್ನು ದೇವರ ಕೋಪದ ಸಂಕೇತವೆಂದು ಭಾವಿಸಲಾಗಿತ್ತು. ರೋಗನಿರೋಧಕ ಮದ್ದುಗಳಿಗೆ ನಾವು ಕೃತಜ್ಞತೆ ಸಲ್ಲಿಸಲೇಬೇಕು. ಇಂದು ಸಿಡುಬುರೋಗ ಸಂಪೂರ್ಣವಾಗಿ ನಿರ್ಮೂಲನವಾಗಿದೆ.

ಅದೇ ತೆರನಾಗಿ ಇಂದಿನ ಗಡಿಬಿಡಿಯ ಜೀವನದಲ್ಲಿ ಅಸ್ಪøಶ್ಯತೆಯನ್ನು ಪಾಲಿಸಿಕೊಂಡು ಹೋಗುವುದಕ್ಕೆ ಅಂಟಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ನಾವು ಹೊಟೆಲ್ ಒಂದರಲ್ಲಿ ಹೋಗಿ ಆಹಾರ ಸೇವಿಸುವಾಗ ನಾವು ಬಳಸುವ ತಟ್ಟೆಗಳನ್ನು ಹಿಂದೆ ಯಾರು ಬಳಸಿದ್ದಾರೋ ಯಾರು ಬಲ್ಲರು? ಹೀಗಾಗಿ ವರೆಗೆ ಚಲಾವಣೆಯಲ್ಲಿದ್ದರೋಟಿಬಂದಿಪದ್ಧತಿ ಸಹಜವಾಗಿ ಮರೆಯಾಗಿ ಹೋಗುತ್ತಿದೆ. ಮುಟ್ಟಿನ ಕಾರಣದಿಂದ ಇಂದಿನ ದಿನಮಾನದಲ್ಲಿ ಮಹಿಳೆಯೊಬ್ಬಳು ತನ್ನ ದಿನಗೂಲಿ ಕೆಲಸವನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದೇ ಕಾಲಕ್ಕೆ ಅವಳಿಗೆ ಉದ್ಯೋಗ ಕೊಟ್ಟವನು ಕೂಡಾ ಅವಳಿಗೆ ನಾಲ್ಕು ದಿವಸಗಳ ವರೆಗೆ ಕೆಲಸಕ್ಕೆ ಬರಬೇಡ ಎಂದು ಹೇಳಲು ಸಾಧ್ಯವಿಲ್ಲ.

ಸಿಟ್ಟಿನಿಂದಲ್ಲ ಸಹಾನೂಭೂತಿಯಿಂದ

ಭಾವನೆಗಳು ಮತ್ತು ವಿಚಾರಗಳು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತವೆ. ಪ್ರಸಿದ್ಧ ಸಾಹಿತಿ ವಿಜಯ ತೆಂಡೂ¯ಕರ್ಮನುಷ್ಯ ಅಂಧಶ್ರದ್ಧೆಯುಳ್ಳವನಾಗಿದ್ದಾನೆ, ಯಾಕೆಂದರೆ ಅದು ಅವನಿಗೆ ಆವಶ್ಯಕವಾದುದಾಗಿದೆಎಂದು ಹಿನ್ನೆಲೆಯಲ್ಲಿಯೇ ಹೇಳಿದ್ದಾನೆ. ಅವನ ನಡತೆಯನ್ನು ವೈಚಾರಿಕತೆಯೊಂದೇ ರೂಪಿಸಲಾರದು. ಹಾಗೆ ರೂಪಿಸುವ ಪ್ರಕ್ರಿಯೆಯಲ್ಲಿ ಭಾವನೆಗೂ ಒಂದಿಷ್ಟು ಸ್ಥಾನವಿದೆ. ಅರ್ಥದಲ್ಲಿ ಮನುಷ್ಯನ ನಡವಳಿಕೆ ಪೂರ್ಣಪ್ರಮಾಣದಲ್ಲಿ ತಾರ್ಕಿಕವಾದುದಾಗಿಲ್ಲ. ಇದೆಲ್ಲ ಮನುಷ್ಯನ ಮಿತಿಯನ್ನು ಸೂಚಿಸುವಂಥದ್ದಾಗಿದೆ. ಹುಣ್ಣಿಮೆಯ ರಾತ್ರಿಯಂದು ಸ್ಮಶಾನ ಭೂಮಿಯಲ್ಲಿ ಸಂಚರಿಸುವಾಗರಾಮ, ರಾಮಎಂದು ಮಂತ್ರಪಠಿಸಲು ನಿಮಗೆ ನಿಮ್ಮ ಪಾಲಕರು ಹೇಳಿದ್ದಾರೆ. ಅದರಂತೆ ನೀವು ನಡೆದುಕೊಳ್ಳುತ್ತೀರಿ. ನಿಮ್ಮ ನಡೆ ನಿಸ್ಸಂಶಯವಾಗಿ ಅಂಧಶ್ರದ್ಧೆಯಿಂದ ಕೂಡಿದುದಾಗಿದೆ. ಆದರೆ ಇದು ಕ್ಷಮ್ಯವಾದುದಾಗಿದೆ. ಅಂಧಶ್ರದ್ಧಾ ನಿರ್ಮೂಲನ ಸಮಿತಿಯವರು ಅಂಧಶ್ರದ್ಧೆಯನ್ನು ನಿರ್ಮೂಲನ ಮಾಡುವ ಸಂದರ್ಭದಲ್ಲಿ ಸಿಟ್ಟಿನಿಂದ ಪ್ರತಿಕ್ರಿಯೆ ಮಾಡದೆ ಸಹಾನೂಭೂತಿಯಿಂದ ನಡೆದುಕೊಳ್ಳಬೇಕು ಎಂದು ಒತ್ತಾಯಿಸುತ್ತದೆ. ಮನುಷ್ಯನ ಅಂಧಶ್ರದ್ಧೆಗಳು ವೈವಿಧ್ಯಮಯವಾಗಿರುತ್ತವೆ. ಹೀಗಾಗಿ ಅವುಗಳ ನಿರ್ಮೂಲನೆಯ ಪ್ರಯತ್ನಗಳೂ ಹಲವು ಬಗೆಯವಾಗಿರಬೇಕು. ಒಂದು ಗಟ್ಟಿಮುಟ್ಟಾದ ಕಾರಿಗೆ ದಾರಿ ಮಧ್ಯದ ತಗ್ಗು ದಿನ್ನೆಗಳನ್ನು ದಾಟಲು ಶಾಕ್ ಅಬ್ಸಾರ್ಬರ್ಗಳು ಬೆಂಬಲಿಸುವಂತೆ ಅತ್ಯಂತ ಆರೋಗ್ಯಪೂರ್ಣನಾದ ಮನುಷ್ಯನ ಬದುಕಿನಲ್ಲೂ ಕೆಲ ಆಘಾತಗಳನ್ನು ಸಹಿಸಿಕೊಳ್ಳಲು ಕೆಲ ಅಂಧಶ್ರದ್ಧೆಯ ಶಾಕ್ ಅಬ್ಸಾರ್ಬರ್ಗಳು ಬೇಕಾಗುತ್ತವೆ. ಬದುಕಿನಲ್ಲಿ ಬಂದೊದಗುವ ನಿರಾಸೆಗಳು, ದುಃಖ ದುಮ್ಮಾನಗಳು ಮತ್ತು ಆಶಾರಾಹಿತ್ಯದ ಸಂದರ್ಭದಲ್ಲಿ ಬ್ರೆಕ್ ಡೌನ್ ಆಗುವುದರಿಂದ ತಪ್ಪಿಸಿಕೊಳ್ಳಲು ಮನುಷ್ಯನಿಗೂ ಒಂದಿಷ್ಟು ಶಾಕ್ ಅಬ್ಸಾರ್ಬರ್ಗಳು ಬೇಕಾಗುತ್ತವೆ. ಹೀಗೆ ಕಾರಿಗೂ ಹಾಗೂ ಕಾರಿನೊಳಗೆ ಕುಳಿತ ಪಯಣಿಗರಿಗೂ ಒಂದು ರೀತಿಯ ಸುರಕ್ಷಾಭಾವವನ್ನು ಒದಗಿಸುವ ಕೆಲಸವನ್ನು ಶಾಕ್ ಅಬ್ಸಾರ್ಬರ್ಗಳು ಮಾಡುತ್ತವೆ. ಅದೇ ತೆರನಾಗಿ ನಮ್ಮ ಸಮಾಜವು ನಾವು ಬಾಲಕರಿದ್ದಾಗಿನಿಂದಲೂ ಕೆಲವು ನಂಬಿಕೆ ಶ್ರದ್ಧೆಗಳನ್ನು ಪ್ರೇರೇಪಿಸಿರುತ್ತದೆ. ಸುಡುಗಾಡಿನಲ್ಲಿ ನಾವು ಸಂಚರಿಸುವಾಗ ಪಠಿಸುವರಾಮ ರಾಮಮಂತ್ರವು ನಾವು ಭೂತಗಳ ಭೀತಿಯ ಎದುರಿಗೆ ಬ್ರೆಕ್ ಡೌನ್ ಆಗದ ಹಾಗೆ ಬೆಂಬಲಿಸುತ್ತದೆ. ಆದರೆ ಅಂಧಶ್ರದ್ಧೆಯ ಬೆಂಬಲ ಪಡೆಯುವುದಕ್ಕೂ ಅಂಧಶ್ರದ್ಧೆಯ ಹಿಡಿತದಲ್ಲಿ ಸಿಲುಕಿಕೊಳ್ಳುವುದಕ್ಕೂ ಇರುವ ವ್ಯತ್ಯಾಸವನ್ನು ನಾವು ಸರಿಯಾಗಿ ತಿಳಿದುಕೊಂಡಿರಬೇಕು. ಕಚೇರಿಯ ನಮ್ಮ ಬಾಸ್ ಕ್ಯಾಬಿನ್ ಪ್ರವೇಶಿಸುವಾಗ ಅಥವಾ ರಸ್ತೆಯನ್ನು ದಾಟುವಾಗ ನಾವುರಾಮ ರಾಮಮಂತ್ರವನ್ನು ಪಠಿಸುವುದೆಂದರೆ ನಾವು ಅಂಧಶ್ರದ್ಧೆಯ ಕಳ್ಳ ಹುದುಲಿನಲ್ಲಿ ಸಿಲುಕಿಕೊಂಡಿದ್ದೇವೆ ಎಂದು ಅರ್ಥ.

ಅಂಧಶ್ರದ್ಧೆಯ ಬಿಕ್ಕಟ್ಟು

ಅಂಧಶ್ರದ್ಧೆಯನ್ನು ಆಚರಿಸುವುದು ನಮ್ಮ ಹಕ್ಕು ಎಂದು ಜನ ವಾದಿಸಬಹುದು. ಶುಭವನ್ನು ತರುತ್ತದೆ ಎಂದು ಅವರು ಬೆರಳಿಗೆ ಉಂಗುರ ಧರಿಸಬಹುದು, ತಮ್ಮ ಇಷ್ಟದ ದೇವರ ಹೆಸರನ್ನು ಪಠಿಸಬಹುದು, ಮಂತ್ರಿಸಿದ ದಾರವನ್ನು ಮುಂಗೈಗೆ ಕಟ್ಟಿಕೊಳ್ಳಬಹುದು, ತಾವು ಆರಾಧಿಸುವ ಗುರುಗಳ ಫೊಟೊವನ್ನು ಪದಕದಲ್ಲಿ ಕೆತ್ತಿಸಿ ಕೊರಳಲ್ಲಿ ಹಾಕಿಕೊಳ್ಳಬಹುದು. ಇವೆಲ್ಲ ನಮ್ಮ ವೈಯಕ್ತಿಕ ನಂಬಿಕೆಗಳು. ಇವುಗಳನ್ನು ಅನ್ಯರು ಯಾಕೆ ಟೀಕಿಸಬೇಕು ಎಂದು ಕೇಳಬಹುದು. ಮೊದ ಮೊದಲು ತೆರನಾದ ವಾದವು ತಾರ್ಕಿಕ ಅನ್ನಿಸುತ್ತದೆ. ನಾವು ಆಳವಾಗಿ ಯೋಚಿಸಿದಾಗ ಇದರ ದೋಷಗಳು ಗೋಚರಿಸುತ್ತವೆ. ತೆರನಾದ ಅಂಧಶ್ರದ್ಧೆಗಳು ಶೋಷಣೆಗೆ ದಾರಿ ಮಾಡಿಕೊಡುತ್ತವೆ ಎನ್ನುವ ಕಾರಣಕ್ಕೆ ಅಂಧಶ್ರದ್ಧಾ ನಿರ್ಮೂಲನ ಸಮಿತಿ ಇದನ್ನು ವಿರೋಧಿಸುತ್ತದೆ. ಇದು ಒಂದು ಕಾರಣವಾದರೆ ಇಂದಿನ ದಿನಮಾನದಲ್ಲಿ ನಮ್ಮ ನಡವಳಿಕೆಗಳ ಹಿಂದಿರುವ ಕಾರ್ಯಕಾರಣ ಸಂಬಂಧವನ್ನು ಒದಗಿಸಬೇಕಾಗುತ್ತದೆ. ನಾವು ಮನೆಯೊಂದನ್ನು ಕೊಂಡರೆ ಕುರಿತು ಮುನ್ಸಿಪಾಲಿಟಿ ಕಚೇರಿಯಲ್ಲಿ ನಾವು ನೋಂದಾಯಿಸಬೇಕಾಗುತ್ತದೆ. ನಾವು ಭೂಮಿಯನ್ನು ಹೊಂದಿದ್ದರೆ ಕುರಿತು ಒಂದು ದಾಖಲೆಯನ್ನು ನೀಡಬೇಕಾಗುತ್ತದೆ. ನೀವು ಒಂದು ವಾಹನವನ್ನು ಚಲಾಯಿಸಬೇಕಾದರೆ ವಾಹನವನ್ನು ಕಚೇರಿಯಲ್ಲಿ ನೋಂದಾಯಿಸಬೇಕು ಮತ್ತು ವಾಹನ ಚಲಾಯಿಸುವ ನೀವು ಡ್ರೈವಿಂಗ್ ಲೈಸೆನ್ಸ್ನ್ನು ಹೊಂದಿರಬೇಕಾಗುತ್ತದೆ. ನೀವು ವಿದೇಶಕ್ಕೆ ಹೋಗಬೇಕಾದರೆ ಪಾಸ್ ಪೋಟ್ನ್ನು ಹೊಂದಿರಬೇಕು. ಇವೆಲ್ಲ ಶುದ್ಧವಾದ ಪುರಾವೆಗಳು. ಮನುಷ್ಯನು ತಾನು ಮನುಷ್ಯ ಎನ್ನುವುದಕ್ಕೆ ಏನಾದರೂ ಪುರಾವೆ ಒದಗಿಸಬೇಕೆ? ಅವನು ಒದಗಿಸಬೇಕಾದ ಒಂದೇ ಒಂದು ಪುರಾವೆ ಅಂದರೆ ತಾನು ಕಾಲಾಂತರದಲ್ಲಿ ಸಂಪಾದಿಸ ಬೌದ್ಧಿಕತೆಯಾಗಿದೆ. ಅವನ ಬುದ್ಧಿಮತ್ತೆ ಎನ್ನುವುದು ದೈವೀಕೃಪೆಯಲ್ಲ. ಅವನು ಲಕ್ಷಾಂತರ ವರ್ಷಗಳ ವರೆಗೆ ಅನ್ಯ ಪ್ರಾಣಿಗಳ ಹಾಗೆ ಪ್ರಾಣಿಯೇ ಆಗಿದ್ದ. ಉತ್ಕ್ರಾಂತಿಯ ಪಥದಲ್ಲಿ ಅವನು ಹೆಬ್ಬೆರಳು ಮತ್ತು ಪ್ರತ್ಯೇಕ ಬೆರಳುಗಳನ್ನು ಪಡೆದ. ಅವನು ತನ್ನ ಎರಡು ಕೈಗಳನ್ನು ಬಳಸಿ ತನ್ನ ಸುತ್ತಲಿನ ಪರಿಸರದಲ್ಲಿ ಕಾರ್ಯಪ್ರವೃತ್ತನಾದ. ಇದರಿಂದ ಅವನ ಮೆದುಳು ಪ್ರಗತಿಹೊಂದಲು ಪ್ರಾರಂಭವಾಯಿತು. ಅವನು ನಿಧಾನವಾಗಿ ಧ್ವನಿ ಪೆಟ್ಟಿಗೆಯನ್ನು ಹೊಂದಿದ. ಧ್ವನಿ ಪೆಟ್ಟಿಗೆ ಅನೇಕ ಧ್ವನಿ ಕಂಪನಗಳನ್ನು ಉಂಟು ಮಾಡುವಲ್ಲಿ ಅನ್ಯ ಪ್ರಾಣಿಗಳ ಧ್ವನಿ ಪೆಟ್ಟಿಗೆಗಿಂತ ಭಿನ್ನವಾಗಿತ್ತು. ಅದರ ಸಹಾಯದಿಂದ ಅವನು ಭಾಷೆಯನ್ನು ರೂಪಿಸಿಕೊಂಡ. ಅದು ಸಂವಹನದ ದಾರಿಯನ್ನು ನಿರ್ಮಿಸಿತು. ಅವನು ದುಡಿಯಲು ಪ್ರಾರಂಭಿಸಿದ. ಬೇರೆ ಬೇರೆ ಉಪಕರಣಗಳನ್ನು ಬಳಸಿ ಹೆಚ್ಚು ಹೆಚ್ಚು ಉತ್ತಮವಾದ ಫಲವನ್ನು ಪಡೆದ. ಅವನು ತನ್ನ ಬುದ್ಧಿಮತ್ತೆಗೆ ಚಾಣ ಹಿಡಿದು ವಿಕಸಿತವಾದ ಮೆದುಳನ್ನು ಹೊಂದಿದ ಏಕೈಕ ಪ್ರಾಣಿ ಎನ್ನಿಸಿಕೊಂಡ. ಮಿಲಿಯಗಟ್ಟಲೆ ವರ್ಷಗಳ ತೆರನಾದ ವಿಕಾಸದ ಪ್ರಕ್ರಿಯೆಯಲ್ಲಿ ಸಾವಿರಾರು ತಲೆಮಾರುಗಳು ಪರಿಶ್ರಮಪಟ್ಟು ಅಷ್ಟಷ್ಟೆ ಜ್ಞಾನವನ್ನು ಸಂಗ್ರಹಿಸಿವೆ. ಹಾಗೆ ಸಂಗ್ರಹಿಸಿಟ್ಟ ಠೇವಣಿ ಇಂದು ನಮಗೆ ಲಭ್ಯವಿದೆ. ಹೀಗಿರುವಾಗ, ಯಾವುದೇ ಒಬ್ಬ ವ್ಯಕ್ತಿಯು ಅಂಧಶ್ರದ್ಧೆಗೆ ಬಲಿಯಾಗಿ ಅದು ತನ್ನ ವೈಯಕ್ತಿಕ ನಂಬಿಕೆ ಎಂದು ಹೇಳಿದರೆ ಅವನು ಮಾನವ ಜನಾಂಗವು ನಮಗಾಗಿ ಸಂಗ್ರಹಿಸಿ ಇಟ್ಟ ಮೌಲಿಕವಾದ ಪಾರಂಪರಿಕ ಜ್ಞಾನ ಸಂಪತ್ತನ್ನು ಕಡೆಗಣಿಸಿದಂತಾಗುತ್ತದೆ. ಇದು ನಿಜವಾಗಿಯೂ ಗಂಭೀರವಾದ ಸಮಸ್ಯೆ ಅಲ್ಲವೆ?

ಸುಶಿಕ್ಷಿತರು ಯಾಕೆ ಮುಕ್ತರಾಗುತ್ತಿಲ್ಲ?

ವಿಜ್ಞಾನವು ತನ್ನ ಉತ್ತುಂಗವನ್ನು ತಲುಪಿರುವಾಗ, ಅದರ ಬೆಳಕು ಇಡೀ ವಿಶ್ವವನ್ನೆ ಬೆಳಗುತ್ತಿರುವಾಗ ಕೆಲವು ಜನರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಕುರುಡರಂತೆ ತಡಕಾಡುತ್ತಿರುವುದು ವಿಚಿತ್ರವಲ್ಲವೆ? ವಿಜ್ಞಾನಿಗಳೂ ಕೆಲವು ಜನರಲ್ಲಿ ಇರುವುದು ತಬ್ಬಿಬ್ಬುಗೊಳಿಸುವ ವಿಷಯವಾಗಿದೆ. ಜನರು ವಿಜ್ಞಾನ ಜಗತ್ತನ್ನು ಸ್ವೀಕರಿಸುತ್ತಿದ್ದಾರೆ. ವೈಜ್ಞಾನಿಕ ಮನೋಭಾವವವನ್ನು ಅಪ್ಪಿಕೊಳ್ಳುತ್ತಿಲ್ಲ. ಯುರೋಪ್ ಖಂಡದಲ್ಲಿ ರಿನೈಜಾನ್ಸ್ ಪ್ರಭಾವ ಬೀರಿದ ಹಾಗೆ ಪುನರುಜ್ಜೀವನದ ಬೆಳವಣಿಗೆ ಭಾರತದಲ್ಲಿ ಸಂಭವಿಸಲಿಲ್ಲ. ಮಧ್ಯಯುಗದಲ್ಲಿ ಭಾರತೀಯ ಸಂದರ್ಭದಲ್ಲಿ ಯಾವುದೇ ವೈಜ್ಞಾನಿಕ ಸಂಶೋಧನೆಗಳು ಜರುಗಲಿಲ್ಲ. ಸಮುದ್ರ ದಾಟುವುದನ್ನು ನಿಷೇಧಿಸಿದ ಭಾರತವು ಹೊರ ದೇಶಗಳೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ತದನಂತರವಾದರೂ ಬ್ರಿಟಿಶ್ ರಾಜ್ ಸಂದರ್ಭದಲ್ಲೂ ತಂತ್ರಜ್ಞಾನವನ್ನು ತಮ್ಮ ರಾಜ್ಯಾಡಳಿಕ್ಕೆ ಅನುಕೂಲವಾಗುವಂತೆ ಬಳಸಿಕೊಂಡರು. ಹೀಗಾಗಿ ಯುರೋಪ್ ಮನಸ್ಸುಗಳ ಹಾಗೆ ಭಾರತೀಯ ಮನಸ್ಸುಗಳು ತಲ್ಲಣಗೊಳ್ಳಲಿಲ್ಲ. ಚಾರ್ವಾಕ, ಲೋಕಾಯತ ಮತ್ತು ಬುದ್ಧರ ನಾಡಾದ ಭಾರತವು ಎಷ್ಟೋ ಶತಮಾನಗಳ ವರೆಗೂ ಪ್ರಶ್ನಿಸುವುದನ್ನೇ ಮರೆತು ಬಿಟ್ಟಿತ್ತು. ನಮ್ಮಲ್ಲಿ ವಿಜ್ಞಾನವು ಕೇವಲ ತಂತ್ರಜ್ಞಾನದ ಬೆಳವಣಿಗೆಗೆ ಮಾತ್ರ ಎನ್ನುವಂತಾಯಿತು. ವ್ಯಾಪಾರ ಮಳಿಗೆ ಪ್ರಾರಂಭಿಸಲು ಅಥವಾ ಸತ್ಯನಾರಾಯಣ ಪೂಜೆ ಮಾಡಲು ಮುಹೂರ್ತವನ್ನು ಕೇಳಲು ಹೋಗುವುದು ಅಸಂಗತವೆಂದು ನಮಗೆ ಅನ್ನಿಸುವುದಿಲ್ಲ. ನಮ್ಮೊಳಗಿನ ಅಪ್ರಜ್ಞಾಪೂರ್ವಕವಾದ ಮನಸ್ಸು ಟೀಕಾ ನಿರೋಧಕ ಶಕ್ತಿಯನ್ನು ಹೊಂದಿದೆ. ನಮಗೆ ವೈಜ್ಞಾನಿಕ ಮನೋಭಾವವೆಂದರೆ ಏನು ಎಂದು ಗೊತ್ತು. ಆದರೆ ಅದು ನಮ್ಮಲ್ಲಿ ಆಳವಾಗಿ ಬೇರೂರಿರುವ ಅಂಧಶ್ರದ್ಧೆಯನ್ನು ಅಲುಗಾಡಿಸಲು ಬಳಕೆಯಾಗುತ್ತಿಲ್ಲ. ಹೀಗಾಗಿ ಜೀವಕ್ಕೆ ಅಪಾಯ ತಂದೊಡ್ಡುವ ಅಂಧಶ್ರದ್ಧೆಗಳು ಮಾತ್ರ ಇಲ್ಲಿ ಟೀಕೆಗೆ ಗುರಿಯಾಗುತ್ತವೆ. ಅವುಗಳನ್ನು ಕಿತ್ತಯೊಗೆಯುವ ಕ್ರಿಯಾಶಕ್ತಿ ನಮ್ಮಲ್ಲಿ ಇನ್ನೂ ಬಂದಿಲ್ಲ. ಅಂಧಶ್ರದ್ಧೆ ಅನ್ನುವುದು ಸಾಮಾಜಿಕ ಮನಸ್ಥಿತಿಗೂ ಅಂಟಿಕೊಂಡುಬಿಟ್ಟರೆ ವ್ಯಕ್ತಿ ನೆಲೆಯ ಅಂಧಶ್ರದ್ಧೆಗೆ ಬಹುದೊಡ್ಡ ಬೆಂಬಲ ಸಿಕ್ಕಂತಾಗುತ್ತದೆ.

ನಿಗೂಢವಾದ ಸಂಗತಿಯ ಬಗೆಗಿನ ಭೀತಿ ಮತ್ತು ಈಡೇರದೆ ಉಳಿದ ಬಯಕೆಗಳ ಈಡೇರಿಸುವ ಭರವಸೆ ಎರಡೂ ಅಂಶಗಳು ಅಂಧಶ್ರದ್ಧೆಯನ್ನು ಬೆಂಬಲಿಸುವ ಎರಡು ಪ್ರಮುಖ ಸಂಗತಿಗಳಾಗಿವೆ. ಇವುಗಳಿಂದ ಮುಕ್ತಿ ದೊರೆಯಬೇಕಾದರೆ ಕೇವಲ ವೈಜ್ಞಾನಿಕ ಮನೋಭಾವ ಬೆಳೆಯಿಸಿಕೊಂಡರೆ ಸಾಲದು. ಅಂಧಶ್ರದ್ಧೆಯ ಆಚರಣೆಯಿಂದ ನಿಗೂಢತೆಯ ಬಗೆಗಿನ ಭೀತಿ ಹೋಗಲಾರದೆಂದು ಮತ್ತು ಯಾವುದೇ ದೈವೀಶಕ್ತಿಯು ಎಟುಕಲಾರದ ವಸ್ತುಗಳನ್ನು ದೊರಕಿಸಿಕೊಡಲಾರದು ಎನ್ನುವುದನ್ನು ಮಕ್ಕಳಲ್ಲಿ ಬಾಲ್ಯವಸ್ಥೆಯಿಂದಲೇ ನಾವು ಬಿಂಬಿಸಬೇಕು. ಶುಚಿತ್ವವು ದೇವತ್ವಕ್ಕೆ ಸಮಾನವಾದುದು ಎಂದು ಮಕ್ಕಳಿಗೆ ಹೇಳಿಬಿಟ್ಟರೆ ಸಾಲದು. ಶುಚಿತ್ವದ ಕುರಿತಾದ ಹೇಳಿಕೆಯು ಎಷ್ಟು ಮಹತ್ವದ್ದು ಎಂದು ಮಕ್ಕಳಿಗೆ ಗೊತ್ತಾಗಬೇಕಾದರೆ ಅವರನ್ನು ಅಂಥ ಪರಿಸರದಲ್ಲಿ ಬೆಳೆಯಿಸಬೇಕು. ಹಾಗಾದಾಗ ಮಾತ್ರ ಅವರು ಶುಚಿತ್ವವನ್ನು ಪಾಲಿಸುವ ರೂಢಿಯನ್ನು ಜೀವಮಾನದುದ್ದಕ್ಕೂ ಪಾಲಿಸಿಕೊಂಡು ಬರುತ್ತಾರೆ.

ಇದೇ ಮಾತನ್ನು ಅಂಧಶ್ರದ್ಧೆಯ ನಿರ್ಮೂಲನೆಯ ವಿಷಯಕ್ಕೂ ಅನ್ವಯಿಸಿ ಹೇಳಬಹುದು. ಪವಾಡಗಳನ್ನು, ಭವಿಷ್ಯ ನುಡಿಯುವುದನ್ನು ಮತ್ತು ಮಾಟಮಂತ್ರಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಿ ನೋಡಲು ಮಕ್ಕಳಿಗೆ ಅವಕಾಶ ಕೊಡಬೇಕು. ಆದರೆ ಅಂಥದ್ದು ನಮ್ಮಲ್ಲಿ ನಡೆಯುತ್ತಲೇ ಇಲ್ಲ. ಮಕ್ಕಳನ್ನು ಹಾಗೆ ಮುಕ್ತವಾಗಿ ಬಿಡಬೇಕಾದರೆ ದೊಡ್ಡ ಪ್ರಮಾಣದ ಧೈರ್ಯ ಬೇಕಾಗುತ್ತದೆ. ಮಕ್ಕಳಿಗೆ ಬೋಧಿಸಬೇಕಾದ ಶಿಕ್ಷರಲ್ಲಿಯೇ ಅಂತಹ ಧೈರ್ಯವಿಲ್ಲ. ಅಂಧಶ್ರದ್ಧೆಯನ್ನು ಪ್ರಶ್ನಿಸಲು ಹೋಗುವವರಿಗೆ ಮೊಟ್ಟ ಮೊದಲು ಎದಿರಾಗುವ ಪ್ರಶ್ನೆನಿಮ್ಮ ವಿಜ್ಞಾನವು ಎಲ್ಲ ಸಿಕ್ಕುಗಳನ್ನು ಬಿಡಿಸಿ ಹೇಳುತ್ತದೆಯೇ?’ ಎನ್ನುವುದು.

ಹೀಗಾಗಿ ವ್ಯಕ್ತಿಗಳು ದ್ವಂದ್ವದ ಬದುಕನ್ನು ನಡೆಯಿಸುತ್ತಿದ್ದಾರೆ. ಅವರು ತಮ್ಮ ವೃತ್ತಿಯಲ್ಲಿ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಂಡರೆ ವೈಯಕ್ತಿಕ ಬದುಕಿನಲ್ಲಿ ಜಪಮಾಲೆ ಎಣಿಸುತ್ತ, ಸುಖ ಸಮೃದ್ಧಿಯನ್ನು ನೀಡುತ್ತದೆ ಎನ್ನುವ ಕಾರಣಕ್ಕೆ ಮೋಡಿ ಮಾಟ ಮಂತ್ರಗಳಲ್ಲಿ ನಂಬಿಕೆ ಇಡುತ್ತಇಬ್ಬಂದಿತನದ ವ್ಯಕ್ತಿತ್ವವನ್ನು ಅನುಸರಿಸುತ್ತಿದ್ದಾರೆ. ಎಲ್ಲದರಲ್ಲೂ ಪರಮಾತ್ಮನ ಅಂಶವಿದೆ ಎಂದು ಸಾರುವ ಅದ್ವೈತವನ್ನು ಒಪ್ಪಿಕೊಳ್ಳುತ್ತಲೆ ಸಾಮಾಜಿಕವಾಗಿ 60ಸಾವಿರ ಜಾತಿಗಳ ತರತಮ ಲೋಕದಲ್ಲಿ ಬದುಕುವವರನ್ನು ಹೋಲುವ ಸ್ಥಿತಿ ಇದಾಗಿದೆ.

ಮನುಷ್ಯ ಎನ್ನಿಸಿಕೊಂಡವನು ವಿಚಾರಗಳ ಅನುಜ್ಞೆಯ ಮೇರೆಗೆ ನಡೆದುಕೊಳ್ಳಬೇಕು. ಆದರೆ ಬಹುಪಾಲು ಸಂದರ್ಭದಲ್ಲಿ ಅವನು ಭಾವನೆಗಳ ಪ್ರಚೋದನೆಗೆ ಒಳಗಾಗಿ ನಡೆದುಕೊಳ್ಳುತ್ತಾನೆ. ವಿಚಾರಗಳಿಂದ ಪ್ರೇರಿತವಾದ ನಮ್ಮ ಕ್ರಿಯೆಗಳು ಅವಸರ ಸ್ವಭಾವದ್ದವಾಗಿರುವುದಿಲ್ಲ. ಬದಲಾಗಿ ವಿವೇಚನಾಯುಕ್ತವಾಗಿರುತ್ತವೆ. ಅವು ತರ್ಕ ಆಧಾರಿತವಾಗಿರುವುದರಿಂದ ಅವು ಅಚಲವಾಗಿರುತ್ತವೆ, ಮನದಟ್ಟು ಮಾಡುವಂತಾಗಿರುತ್ತವೆ ಮತ್ತು ಬಹುಪಾಲು ಸಂದರ್ಭದಲ್ಲಿ ಉದ್ವೇಗವನ್ನು ಸೃಷ್ಟಿಸುವುದಿಲ್ಲ. ಇದಕ್ಕೆ ವಿರುದ್ಧವೆನ್ನುವಂತೆ ಭಾವನೆಗಳ ಪ್ರಭಾವದಲ್ಲಿ ಕಾರ್ಯಪ್ರವೃತ್ತರಾದವರಲ್ಲಿ ವೈಜ್ಞಾನಿಕ ಮನೋಭಾವವು ದೃಷ್ಟಿದೂರವಾಗಿರುತ್ತದೆ. ಇಂಥ ಕ್ರಿಯೆಗಳೆಲ್ಲ ವಿಚ್ಛಿದ್ರಕಾರಕವಾಗಿರುತ್ತವೆ.

ತರ್ಕವು ಭಾವೋದ್ವೇಗಕ್ಕೆ ಒಳಗಾದಾಗ ಕ್ರಿಯೆ ಎನ್ನುವ ಪ್ರಚೋದನೆಗೆ ಒಳಗಾಗುವುದೇ ಶ್ರದ್ಧೆಎಂದು ಜಸ್ಟಿಸ್ ರಾನಡೆ ಹೇಳುತ್ತಾರೆ. ಶ್ರದ್ಧೆಗೂ ಭಾವುಕತೆಗೂ ನೇರಾನೇರ ಸಂಬಂಧವಿರುತ್ತದೆ. ನಾವು ಮಾಡುವ ಕ್ರಿಯೆಗೆ ಸ್ಫೋಟಕ ಗುಣ ಬರುವುದು ಶ್ರದ್ಧೆಯಿಂದ. ಅಂಧಶ್ರದ್ಧೆಯಿಂದಲೂ ನಮ್ಮ ಕ್ರಿಯೆಗೆ ಸ್ಫೋಟಕ ಗುಣ ಬರುತ್ತದೆ. ಈಗಿರುವ ಪ್ರಶ್ನೆ ಎಂದರೆ ಯಾವ ತೆರನಾದ ಸ್ಫೋಟಕ ಗುಣದಿಂದ ನಮ್ಮ ಒಳಿತಿನ ಕುರಿತಾಗಿ ನಮ್ಮ ಒಳನೋಟ ಉನ್ನತೀಕರಣಗೊಳ್ಳುತ್ತದೆ ಎನ್ನುವುದು. ಶ್ರದ್ಧೆ ಅದನ್ನು ಉನ್ನತೀಕರನಗೊಳಿಸುತ್ತದೆ. ಅಂಧಶ್ರದ್ಧೆ ಅದನ್ನು ಪತನದ ಕಡೆಗೆ ಒಯ್ಯುತ್ತದೆ.

ಮಾತನ್ನು ಭಕ್ತರು ಪಂಢರಪುಕ್ಕೆ ಅಪಾರ ಸಂಖ್ಯೆಯ ಭಕ್ತರು ದಿಂಡಿ ಹೋಗುವ ಸಂಗತಿಯನ್ನು ಮುಂದಿಟ್ಟುಕೊಂಡು ವಿಶ್ಲೇಷಿಸಬಹುದು. ದಿಂಡಿ ಹೋಗುವುದು ಶ್ರದ್ಧೆಯೋ ಅಂಧಶ್ರದ್ಧೆಯೋ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳಬಹುದು. ದಿಂಡಿ ಯಾತ್ರೆಯು ದೇವರ ಕುರಿತಾಗಿ ಭಕ್ತರಲ್ಲಿ ಇರುವ ಭಾವತೀವ್ರತೆಯ ಸ್ಪಷ್ಟವಾದ ಸೂಚನೆಯಾಗಿದೆ. ಹೀಗಾಗಿ ಕೋಟ್ಯಂತರ ಜನರು ಪಂಢರಪುರದ ಕಡೆಗೆ ಕಾಲ್ನಡಿಗೆಯಲ್ಲಿ ಹರಿದು ಬರುತ್ತಾರೆ. ಇದು ರಾನಡೆ ಅವರು ಹೇಳಿದ ಶ್ರದ್ಧೆಯ ವ್ಯಾಖ್ಯಾನದ ಒಂದಂಶವಾದಭಾವೋದ್ವೇಗಕ್ಕೆ ಸರಿಹೊಂದುತ್ತದೆ. ಅವರು ಹೇಳಿದಕ್ರಿಯಾಪ್ರಚೋದನೆಎನ್ನುವ ಎರಡನೆಯ ಮಾನದಂಡದ ವಿಷಯಕ್ಕೆ ಬರೋಣ. ಅಬ್ಬರದ ಮಳೆ, ಕಲ್ಲು ಮಣ್ಣಿನ ದಾರಿ, ಕೊರೆವ ಚಳಿ, ಅಸಮರ್ಪಕ ಆಹಾರ ಹಾಗೂ ಸೌಲಭ್ಯಗಳುಇಂಥೆಲ್ಲ ಅಸಂಖ್ಯವಾದ ವಿಪತ್ತುಗಳನ್ನು ಅವರು ಅತ್ಯಂತ ಶಾಂತವಾಗಿ ಎದುರಿಸುತ್ತಾರೆ. ‘ತರ್ಕಎನ್ನುವ ಮೂರನೆಯ ಮಾನದಂಡಕ್ಕೆ ಬರೋಣ. ದಂಡಿ ಯಾತ್ರೆಯನ್ನು ಭಕ್ತರು ಯಾವದೇ ತೆರನಾದ ಇಷ್ಟಾರ್ಥ ಸಿದ್ಧಿಗಾಗಿ ಕೈಕೊಂಡಿರುವುದಿಲ್ಲ. ಕೋಟ್ಯಂತರ ಭಕ್ತರ ಮಧ್ಯದಲ್ಲಿ ವಿಠೋಬಾ ದೇವರ ಮೂರ್ತಿಯ ನೇರ ದರ್ಶನ ಸಿಗದೇ ಹೋದರೂ ಅವರು ಚಿಂತಿಸುವುದಿಲ್ಲ. ದೂರದಿಂದ ಗುಡಿಯ ಗೋಪುರ ಕಂಡರೂ ಸಾಕು ಎಂದು ತೃಪ್ತಿಪಡುತ್ತಾರೆ. ಇವೆಲ್ಲ ದೇವರನ್ನು ಪರಿಭಾವಿಸುವ ತಾರ್ಕಿಕ ಬುದ್ಧಿಗೆ ಸರಿಹೊಂದುತ್ತವೆ. ಇಂಥದ್ದೊಂದು ತರ್ಕಕ್ಕೆ ಬಂದು ನಿಲ್ಲುವಾಗ ಭಕ್ತನಾದವನು ಕ್ರಮಿಸಿಬಂದ ದೀರ್ಘವಾದ ದಾರಿಯನ್ನು ನಾವು ಪರಿಗಣಿಸಬೇಕು. ಈಗ ದಿಂಡಿಯಾತ್ರೆ ಶ್ರದ್ಧೆಯೋ ಅಂಧಶ್ರದ್ಧೆಯೋ ಎಂದು ತೀರ್ಮಾನಿಸಬಹುದು. ಪ್ರತಿವರ್ಷ ಲಕ್ಷಾಂತರ ಭಕ್ತರು ದಿಂಡಿಯಲ್ಲಿ ಪಾಲ್ಗೊಳ್ಳುತ್ತಾರೆ. ದಾರಿ ಮಧ್ಯದಲ್ಲಿ ಸಾವಿರಾರು ಜನರು ಯಾವುದಾದರೂ ಒಂದು ಹಳ್ಳಿಯಲ್ಲಿ ರಾತ್ರಿ ವಸತಿ ಮಾಡಬೇಕಾಗುತ್ತದೆ. ಚಿಕ್ಕ ಚಿಕ್ಕ ಹಳ್ಳಿಗಳಲ್ಲಿ ರಾತ್ರಿ ವಸತಿ ಮಾಡುವ ಲಕ್ಷಾಂತರ ಜನರು ಬೆಳಗಿನ ವೇಳೆಯಲ್ಲಿ ಹಳ್ಳಿಯ ಸುತ್ತಮುತ್ತ ಮಲವಿಸರ್ಜನೆ ಮಾಡುತ್ತಾರೆ. ಅದರ ಪರಿಣಾಮ ಏನಾಗುತ್ತದೆ ಎಂದು ಕಲ್ಪಿಸಲೂ ಸಾಧ್ಯವಾಗುವುದಿಲ್ಲ. ವೈಜ್ಞಾನಿಕ ಹಾಗೂ ತಾಂತ್ರಿಕ ಜ್ಞಾನ ಪರಿಣಾಮವನ್ನು ಒಂದಿಷ್ಟು ತಗ್ಗಿಸಬಹುದಾದರೂ ಪರಿಣಾಮದ ಭೀಕರತೆ ಹಾಗೆಯೇ ಉಳಿಯುತ್ತದೆ. ಇಲ್ಲಿ ಶ್ರದ್ಧೆಯಲ್ಲಿ ಕಾಣಿಸಿಕೊಳ್ಳುವತರ್ಕಮಾಡುವಶಕ್ತಿ ಮರೆಯಾಗಿರುವುದರಿಂದ ಇದು ಅಂಧಶ್ರದ್ಧೆ ಅನ್ನಿಸಿಕೊಳ್ಳುತ್ತದೆ.

ವಾರಕರಿ ಸಂಪ್ರದಾಯವು ಸಮಾನತೆಯನ್ನು ಸಾರುತ್ತದೆಯೇ ಎನ್ನುವ ಇನ್ನೊಂದು ಮಾನದಂಡವನ್ನು ಗಮನದಲ್ಲಿಟ್ಟುಕೊಂಡು ವಿಚಾರಿಸಬೇಕು. ಮಧ್ಯಯುಗದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆಯು ಅತಿರೇಕವನ್ನು ತಲುಪಿತ್ತು. ಜನರು ಧರಿಸುವ ಉಡುಗೆ ತೊಡುಗೆ, ಅವರು ಬಳಸುವ ಆಹಾರ ಮತ್ತು ಅವರ ಪೂಜಾವಿಧಾನಗಳು ಆಯಾ ಜನರ ಜಾತಿ ಉಪಜಾತಿಗಳನ್ನು ಬಿಂಬಿಸುವಂಥವಾಗಿದ್ದವು. ಇಂಥ ಸಂದಂರ್ಭದಲ್ಲಿ ವಾರಕರಿ ಸಂಪ್ರದಾಯ ಅಸ್ತಿತ್ವಕ್ಕೆ ಬಂದಿತು. ಯಾರು ಬೇಕಾದರೂ ವಾರಕರಿ ಆಗಬಹುದು. ಅವರು ತಮ್ಮ ಕೊರಳಲ್ಲಿ ಒಂದು ತುಳಸಿಮಾಲೆ ಧರಿಸಿದರೆ ಸಾಕು ಮತ್ತು ಹಣೆಯ ಮೇಲೆ ಗಂಧದ ಮುದ್ರೆಯನ್ನು ಹಾಕಿಕೊಂಡರೆ ಆಯಿತು. ಇದರ ಜೊತೆಗೆ ಅವರುವಿಠಲ, ವಿಠಲಎಂದು ಜಪಮಾಡಬೇಕು, ಮಂಡಕ್ಕಿ ಮತ್ತು ಒಂದಿಷ್ಟು ಸಿಹಿ ಪ್ರಸಾದವನ್ನು ಸ್ವೀಕರಿಸಬೇಕು, ಸಹ ವಾರಕರಿಗಳೊಂದಿಗೆ ಪಂಢರಪುರದ ವರೆಗೆ ಪಾದಯಾತ್ರೆ ಕೈಕೊಳ್ಳಬೇಕು. ಹೀಗೆ ಹೊರಟವರೆಲ್ಲರನ್ನು ಜಾತಿ ಧರ್ಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಸಮಾನವಾಗಿ ನೋಡಿಕೊಳ್ಳಲಾಗುತ್ತದೆ. ‘ಇಡೀ ಜಗತ್ತು ವೈಷ್ಣವಮಯ, ವೈಷ್ಣವವೆನ್ನುವುದೊಂದೇ ಧರ್ಮ, ತರತಮವೆನ್ನುವುದು ಕೇವಲ ಭ್ರಾಂತಿ ಮತ್ತು ಅಸಹ್ಯಕರವಾದುದುಎನ್ನುವುದು ವಾರಕರಿಗಳ ಸಿದ್ಧಾಂತ. ಆದರೆ ನೋವಿನ ವಿಷಯವೆಂದರೆ ವಿಶ್ವಾತ್ಮಕ ಭ್ರಾತೃತ್ವವು ಚಂದ್ರಭಾಗಾ ನದಿಯ ಉಸುಕಿನ ದಂಡೆಗಳಿಗೆ ಮಾತ್ರ ಸೀಮಿತವಾಗಿದೆ. ಮತ್ತು ವಾರಿ ಕಾಲಕ್ಕೆ ಮಾತ್ರ ಸೀಮಿತವಾಗಿದೆ. ವಾರಕರಿ ತತ್ವವು ಪ್ರತಿಪಾದಿಸುವ ಭ್ರಾತೃತ್ವವು ಜಾತಿ ತರತಮದ ಬುಡವನ್ನು ಅಲುಗಾಡಿಸದೆ ಹೋಗುತ್ತದೆ. ಯಥಾ ರೀತಿಯಲ್ಲಿ ತಾರತಮ್ಯವು ಹಳ್ಳಿ ಪಟ್ಟಣಗಳಲ್ಲಿ ಬೇರೂರಿದ್ದು ಬೇರೂರಿದ ಹಾಗೆಯೇ ಉಳಿಯುತ್ತದೆ. ನಿಮ್ನ ಸಮುದಾಯಕ್ಕೆ ಸೇರಿದವರು ಹಳ್ಳಿಗಳ ಹೊರ ವಲಯದಲ್ಲಿಯೇ ಉಳಿದುಕೊಳ್ಳುತ್ತಾರೆ. ಹಳ್ಳಿಯ ಸಮಾಜದ ಆಂತರಿಕ ರಚನೆಯಲ್ಲಿ ಅವರಿಗೆ ಪ್ರವೇಶವು ನಿಷಿದ್ಧವಾಗಿಯೇ ಉಳಿಯುತ್ತದೆ. ‘ಒಂದು ಹಳ್ಳಿ, ಒಂದು ಜಲಮೂಲಎನ್ನುವುದು ಕೇವಲ ಘೋಷಣೆಯಾಗಿಯೇ ಉಳಿಯುತ್ತದೆ. ನಿಮ್ನ ಜಾತಿಯ ಜನರಿಗೆ ಊರ ಭಾವಿಗಳಿಂದ ನೀರು ಸೇದಿಕೊಳ್ಳಲು ಪರವಾನಿಗೆ ಇಲ್ಲವಾಗಿದೆ. ವಾರಕರಿ ಸಂಪ್ರದಾಯವು ಚಲಾವಣೆಗೆ ಬಂದ ಕೆಲ ಶತಮಾನಗಳ ನಂತರ ಮಹಾತ್ಮಾ ಫುಲೆ ಮತ್ತು ಡಾ.ಅಂಬೇಡಕರ್ ಅವರು ಜನಿಸಿದ್ದಾರೆ. ಅವರಿರ್ವರು ನಿಮ್ನ ಜಾತಿಗೆ ಸೇರಿದವರು ಎನ್ನುವ ಕಾರಣಕ್ಕೆ ಅನುಭವಿಸಿದ ದುಗಡಗಳು ನಮಗೆಲ್ಲ ತಿಳಿದಿರುವಂಥವಾಗಿವೆ. ಅಂದರೆ ವಾರಕರಿ ಸಂಪ್ರದಾಯವು ಕುರಿತು ಏನೂ ಸಾಧನೆ ಮಾಡಲಿಲ್ಲ ಅನ್ನಿಸುತ್ತದೆ. ಮೌಲ್ಯನಿರ್ಣಯದ ಶಕ್ತಿಯನ್ನು ಶ್ರದ್ಧೆಯು ಉನ್ನತೀಕರಿಸುತ್ತದೆ ಎನ್ನುವುದು ಅದರ ಇನ್ನೊಂದು ಮಾನದಂಡವಾಗಿದೆ. ಸಮಾನತೆ ಸಾಧನೆಯ ಗುರಿಯನ್ನು ತಲುಪಬೇಕಾದರೆ ವಾರಕರಿ ಸಂಪ್ರದಾಯ ಇನ್ನೂ ಬಹುದೂರ ಕ್ರಮಿಸಬೇಕಾಗಿದೆ.

ಶ್ರದ್ಧೆ: ಭೀತಿ, ಸೆಳೆತ, ಟೀಕೆ, ಮೌಲ್ಯ ನಿರ್ಣಯ

ಭಾಗವು ಶ್ರದ್ಧೆಯ ಕುರಿತಾಗಿ ಇನ್ನಷ್ಟು ವಿವರಣೆಯನ್ನು ಬಯಸುತ್ತದೆ. ಭೀತಿ ಮತ್ತು ಸೆಳೆತಗಳು ಮನುಷ್ಯನನ್ನು ದಾರಿ ತಪ್ಪುವಂತೆ ಮಾಡುವ ಎರಡು ಪ್ರಚೋದನಕಾರಿ ಅಂಶಗಳಾಗಿವೆ. ಶ್ರದ್ಧೆ ಅನ್ನುವುದು ಎರಡರಿಂದ ಮುಕ್ತಗೊಳ್ಳುವ ಹಾದಿಯನ್ನು ತೋರಿಸುತ್ತದೆ. ಅದೆಷ್ಟೋ ಜನರು ಹೇಳುತ್ತಾರೆ: ‘ನನ್ನ ಧರ್ಮದಲ್ಲಿನ ನನ್ನ ನಂಬಿಕೆ ಅಚಲವಾದುದು.’ ಆದರೆ ಒಂದು ಕೋಟಿ ಹಣದ ಆಮಿಷವೋ ಅಥವಾ ಬಂದೂಕಿನೊಳಗಿನ ಗುಂಡಿನ ಭೀತಿಯೋ ಅವನನ್ನು ವಿಚಲಿತನನ್ನಾಗಿ ಮಾಡುತ್ತದೆ. ಧರ್ಮದೊಳಗೆ ನನಗೆ ಶ್ರದ್ಧೆ ಇದೆ ಎನ್ನುವವರು ಪ್ರಾಮಾಣಿಕವಾಗಿ ಪ್ರಶ್ನಗೆ ಉತ್ತರ ಕೊಡಬೇಕು.

ಶ್ರದ್ದೆಯು ಸತ್ಯದ ತಳಹದಿಯ ಮೇಲೆ ಕೇಳುವ ಪ್ರಶ್ನೆಗಳನ್ನು ಎದುರಿಸಲು ನಿರಾಕರಿಸುವುದಿಲ್ಲ. ಮಾತಿನ ತಾತ್ಪರ್ಯವನ್ನು ತಿಳಿಸಲೋಸುಗ ಡಾ.ಅಂಬೇಡ್ಕರ್ ಅವರು ಒಂದು ದೃಷ್ಟಾಂತವನ್ನು ಕೊಡುತ್ತಾರೆ. ದಾರಿಯಲ್ಲಿ ಹೋಗುವಾಗ ಹಳದಿ ಲೋಹದ ತುಂಡೊಂದು ಯಾರಿಗಾದರೂ ಸಿಕ್ಕರೆ ಅವರು ಏನು ಮಾಡುತ್ತಾರೆ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಸ್ಪಷ್ಟವಾದ ಉತ್ತರವೆಂದರೆ ಅವರು ಅದನ್ನು ತೆಗೆದುಕೊಂಡು ಅಕ್ಕಸಾಲಿಗನಲ್ಲಿಗೆ ಹೋಗಿ ತನಗೆ ದೊರೆತಿರುವುದು ಚಿನ್ನ ಹೌದೋ ಅಲ್ಲವೋ ಎಂದು ತಿಳಿಯಲು ಬೆಂಕಿಯಲ್ಲಿ ಸುಟ್ಟು ಪರೀಕ್ಷಿಸಿರಿ ಎಂದು ಹೇಳುತ್ತಾರೆ. ಹಳದಿ ಲೋಹ ಸಿಕ್ಕ ಯಾವುದೇ ವ್ಯಕ್ತಿ ಪರೀಕ್ಷೆ ಮಾಡಿಸಲು ತಕರಾರು ತೆಗೆಯಲಾರ. ಹಾಗೆ ದೊರೆತದ್ದು ಚಿನ್ನವೇ ಆಗಿದ್ದರೆ ಬೆಂಕಿಯಲ್ಲಿ ಸುಡುವ ಪರೀಕ್ಷೆ ಮುಗಿದ ನಂತರ ಅದು ಇನ್ನಷ್ಟು ಹೊಳೆಯುತ್ತದೆ. ಇದೇ ತೆರನಾಗಿ ನಮ್ಮ ಯಾವುದೇ ಶ್ರದ್ಧೆಯು ಇದೇ ತೆರನಾದ ಪರೀಕ್ಷೆಗೆ ಒಳಗಾಗಗಲೇಬೇಕು. ಶ್ರದ್ಧೆಯು ಸತ್ಯದ ಪರೀಕ್ಷೆ ಎದುರಿಸಲು ಹಿಂಜರಿಯಬಾರದು. ಮಹಾತ್ಮಾ ಗಾಂಧೀಜಿ ಅವರು ಒಂದು ಸಾರಿ ಅಂತರ್ ಜಾತಿಯ ವಿವಾಹವೊಂದನ್ನು ನೆರವೇರಿಸಲು ಹೋಗಿದ್ದರು. ವಿವಾಹವಾಗಲಿರುವ ಜೋಡಿಯು ದೇವರ ಅಸ್ತಿತ್ವದಲ್ಲಿ ನಂಬಿಕೆ ಉಳ್ಳವರಾಗಿರಲಿಲ್ಲ. ಹೀಗಾಗಿ ಮದುವೆಯನ್ನು ದೇವರು ಬಂದು ಸಾಕ್ಷೀಕರಿಸಲಿ ಎಂದು ಮಹಾತ್ಮಾ ಗಾಂಧೀಜಿ ಹೇಳುವುದಾದರೆ ತಾವು ಮಹಾತ್ಮರ ಮಧ್ಯಸ್ಥಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಗಂಆಧಿಜಿ ಅವರಿಗೆ ತಿಳಿದು ಬಂದಿತು. ಆಗ ಗಾಂಧೀಜಿ ಅವರುಸತ್ಯ ಸಾಕ್ಷಿಯಾಗಿ ಮದುವೆಯನ್ನು ನೆರವೇರಿಸಿದರು. ‘ದೇವರು ಸತ್ಯಎನ್ನುವ ತಳಹದಿಯ ಮೇಲೆ ಪ್ರಾರಂಭವಾದ ಮಹಾತ್ಮಾ ಗಾಂಧೀಜಿ ಅವರ ಶ್ರದ್ಧೆಯ ಪಯಣಸತ್ಯವೇ ದೇವರುಎನ್ನುವ ಪರಾಕಾಷ್ಠೆಗೆ ಹೋಗಿ ತಲುಪಿತು.

ಸತ್ಯದ ಹಾಗೆ ಅಹಿಂಸೆ ಕೂಡ ಶ್ರದ್ಧೆಯ ಸತ್ವವನ್ನು ಒರೆಗೆ ಹಚ್ಚುವ ಇನ್ನೊಂದು ಮೂಲಭೂತವಾದ ಪರೀಕ್ಷೆಯಾಗಿದೆ. ಹಿಂಸೆ ಮತ್ತು ಮನುಷ್ಯತ್ವ ಒಂದಕ್ಕೊಂದು ವಿರೋಧಿ ಸಂಗತಿಗಳು. ಅನ್ಯರ ಶ್ರದ್ಧೆಯ ವಿರುದ್ಧ ಯಾರಾದರೂ ಹೇಯ ಕೃತ್ಯಗಳನ್ನು ಅನುಮೋದಿಸುತ್ತಿದ್ದರೆ ಅಥವಾ ಉತ್ತೇಜಿಸುತ್ತಿದ್ದರೆ ಅವರು ಅಂಧಶ್ರದ್ಧೆಯುಳ್ಳವರು ಎಂದು ಭಾವಿಸಬೇಕು.

ಕೋಟ್ಯಂತರ ಜನರಿಗೆ ಶ್ರೀರಾಮನು ಶ್ರದ್ಧೆಯ ಸಂಕೇತವಾಗಿದ್ದಾನೆ. ಆದರೆ ಶ್ರೀರಾಮನು ಸತ್ಯ ಹಾಗೂ ಏಕಪತ್ನಿವ್ರತವನ್ನು ಪ್ರತಿನಿಧಿಸುವವನಾಗಿದ್ದಾನೆ. ಆದರೆ ಇಂದಿನ ದಿನಮಾನವನ್ನು ನೋಡಿದರೆ ನಮ್ಮ ಸಮಾಜ ಸತ್ಯನಿಷ್ಠಾ ರಹಿತವಾದುದಾಗಿದೆ. ಅತ್ತ ರಾಮ ಜನ್ಮಭೂಮಿ ಚಳವಳಿ ನಡೆದಿರುವಂತೆ ಮಹಾರಾಷ್ಟ್ರವೊಂದರಲ್ಲಿಯೇ ಆರು ಲಕ್ಷದಷ್ಟು ಗಂಡಂದಿರು ತಮ್ಮ ಮಡದಿಯರನ್ನು ತೊರೆದು ಮರು ಮದುವೆಯಾಗಿದ್ದಾರೆ. ಶ್ರೀರಾಮನು ಪ್ರತಿಪಾದಿಸಿದ ಮೌಲ್ಯಕ್ಕೆ ತದ್ವಿರುದ್ಧವಾದ ಸಂಗತಿ ಇದಾಗಿದೆ.

ಯಾವುದೇ ವ್ಯಕ್ತಿಯು ತನ್ನ ಶ್ರದ್ಧೆಯನ್ನು ಗೀಳಾಗಿಸಿಕೊಂಡು ಅನ್ಯರು ತಮ್ಮ ತಮ್ಮ ಶ್ರದ್ಧೆಯನ್ನು ಅನುಸರಿಸಲು ಅಡಚಣಿ ಉಂಟು ಮಾಡಬಾರದು. ಯಾರಾದರೂ ಹಾಗೆ ಮಾಡಿದರೆ ಅದು ಶ್ರದ್ಧೆ ಅನ್ನಿಸಿಕೊಳ್ಳುವುದಿಲ್ಲ. ದೇಶದಲ್ಲಿ ತಮ್ಮ ತಮ್ಮದೇ ಧರ್ಮಹಿಂದು ಅಥವಾ ಇಸ್ಲಾಮ್ ಧರ್ಮಶ್ರೇಷ್ಠವೆಂದು ಯೋಚಿಸುವವರಿದ್ದಾರೆ. ತಮ್ಮದೇ ಶ್ರದ್ಧೆಯು ನೈತಿಕವಾದುದು ಎಂದು ಅವರು ನಂಬಿದ್ದಾರೆ. ಸಂವಿಧಾನವು ಹಾಗೆ ನಂಬುವ ಹಕ್ಕನ್ನು ಅವರಿಗೆ ಕೊಟ್ಟಿದೆ. ಹಿನ್ನೆಲೆಯಲ್ಲಿ ಜೈನ ಧರ್ಮದ ಮಹಿಳೆಯೊಬ್ಬಳು ಬೌದ್ಧ ಧರ್ಮದ ಪುರುಷನನ್ನು ಮದುವೆಯಾಗಲು ಒಪ್ಪಿದಳಾದರೆ ಅವರ ಪಾಲಕರು ಮತ್ತು ಆಯಾ ಧರ್ಮದವರು ಅದನ್ನು ಗಂಭೀರವಾಗಿ ವಿರೋಧಿಸಬಹುದು. ಕೆಲ ಸಂದರ್ಭದಲ್ಲಿ ಅವರಿಬ್ಬರ ಜೀವಕ್ಕೆ ಅಪಾಯವೂ ಉಂಟಾಗಬಹುದು. ಹಾಗಾದಾಗ ಇಲ್ಲಿ ಕೆಲಸ ಮಾಡಿರುವುದು ಶ್ರದ್ಧೆಯಲ್ಲ ಅಂಧಶ್ರದ್ಧೆ ಎಂದು ನಿರ್ಣಯಿಸಬೇಕು.

ಕಾರ್ಯಕಾರಣ ಸಂಬಂಧವನ್ನು ತಿಳಿದುಕೊಂಡೇ ನಮ್ಮ ನಂಬಿಕೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ದರೋಢೆಕೋರರ ಗುಂಪೊಂದು ಹಳ್ಳಿಯೊಂದರ ಜನರಿಗೆ ಅನ್ಯಾಯವಾಗಿ ತೊಂದರೆ ಕೊಡುತ್ತಿರುತ್ತಾರೆ ಎಂದು ಭಾವಿಸೋಣ. ಆಗ ಹಳ್ಳಿಯ ಸಣಕಲು ವ್ಯಕ್ತಿಯೊಬ್ಬ ಸತ್ಯಕ್ಕೆ ಮತ್ತು ನ್ಯಾಯಕ್ಕೆ ಯಾವಾಗಲೂ ಜಯ ಸಿಕ್ಕೆ ಸಿಗುತ್ತದೆ ಎನ್ನುವ ನಂಬಿಕೆ ಇಟ್ಟುಕೊಂಡು ಅವರೊಂದಿಗೆ ಕಾದಾಡಲು ಹೊರಟರೆ ಏನಾಗಬಹುದು? ನೀವೇ ಊಹಿಸಿ. ದರೋಡೆಕೋರರು ಪೊಲಿಸ್ ಮೇಲೆ, ಮಾಧ್ಯಮದವರ ಮೇಲೆ, ರಾಜಕಾರಣಿಗಳ ಮೇಲೆ ಮತ್ತು ಇನ್ನಾವುದೇ ಶಕ್ತಿಯುತ ವ್ಯಕ್ತಿಯ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಯಿದೆ. ಇದೆಲ್ಲವನ್ನು ಗಮನಿಸಿದರೆ ಹೋರಾಟಕ್ಕೆ ಹೊರಟ ಸಣಕಲು ವ್ಯಕ್ತಿ ಸ್ವನಾಶವನ್ನು ಮಾಡಿಕೊಳ್ಳಲು ಹೊರಟಂತೆಯೇ ಸರಿ. ಇಷ್ಟಾಗಿಯೂ ವ್ಯಕ್ತಿ ಹೋರಾಡಲು ಮುಂದಾದರೆ ಅವನು ಭಾವನಾತ್ಮಕ ಅಂಶದಿಂದ ಪ್ರೇರೇಪಿತನಾಗಿದ್ದಾನೆ ಎಂದು ಅರ್ಥ. ಅವನ ಕ್ರಿಯೆಯು ಕಾರ್ಯಕಾರಣ ಸಂಬಂಧವನ್ನು ಸರಿಯಾಗಿ ಗಮನಿಸಿಲ್ಲ ಎಂದು ಅರ್ಥ. ದೇವರು ಶಿಷ್ಟರನ್ನು ರಕ್ಷಿಸುತ್ತಾನೆ ಮತ್ತು ದುಷ್ಟರನ್ನು ಶಿಕ್ಷಿಸುತ್ತಾನೆ ಎನ್ನುವ ಕಾರ್ಯಕಾರಣ ಸಂಬಂಧವನ್ನು ಗಮನಿಸದ ನಂಬಿಕೆ ಮಾತ್ರ ಅವನದಾಗಿರುತ್ತದೆ.

ಇನ್ನೊಂದು ಉದಾಹರಣೆ ನೋಡಬಹುದು. ಬ್ರಿಟಿಶ್ರನ್ನು ಭಾರತದಿಂದ ಹೊರಗೆ ಅಟ್ಟುವುದು ಮತ್ತು ಅವರ ಆಡಳಿತದಿಂದ ಭಾರತವನ್ನು ಮುಕ್ತಗೊಳಿಸುವುದು ಅಂದಿನ ಸಂದರ್ಭದಲ್ಲಿ ಹೋರಾಟಕ್ಕಿಳಿದಿದ್ದ ಕ್ರಾಂತಿಕಾರಿಗಳ ಶ್ರದ್ಧೆಯಾಗಿತ್ತು. ನಾವು ನಮ್ಮ ಮಾತೃಭೂಮಿಯನ್ನು ಬ್ರಿಟಿಶ್ ಗುಲಾಮಗಿರಿಯಿಂದ ಮುಕ್ತಗೊಳಿಸಲಿದ್ದೇವೆ ಎನ್ನುವ ಸಂಗತಿ ಅವರ ಹೃದಯಕ್ಕೆ ತಟ್ಟಿತ್ತು. ಶ್ರದ್ಧೆಯ ಪ್ರಥಮ ಮಾನದಂಡವಾದಭಾವನೆಯ ತೀವ್ರತೆಯು ಇಲ್ಲಿ ಇತ್ತು ಎಂದಾಯಿತು. ತೀವ್ರತರವಾದ ಭಾವನೆಯನ್ನು ಕ್ರಿಯೆಯಾಗಿ ಪರಿವರ್ತಿಸುವುದು ಎರಡನೆಯ ಮಾನದಂಡ. ಚರಿತ್ರೆಯನ್ನು ಗಮನಿಸಿದಾಗ ಬಂಡುಕೋರರು ಬ್ರಿಟಿಶ್ರಿಂದ ತೀವ್ರತರವಾದ ದೌಜ್ರ್ಯನ್ಯವನ್ನು ಅನುಭವಿಸಿದರು ಎಂದು ತಿಳಿದು ಬರುತ್ತದೆ. ಆದರೆ ಅವರು ಸುಖದ ಜೀವನದ ಸೆಳೆತಕ್ಕೆ ಬಲಿಯಾಗಿ ತಮ್ಮ ಹೋರಾಟದಿಂದ ಹಿಂದೆ ಸರಿಯಲಿಲ್ಲ. ಇನ್ನು ಮೂರನೆಯ ಮಾನದಂಡವೆಂದರೆ ಬ್ರಿಟಿಶ್ರನ್ನು ಹೊರಗಟ್ಟುವ ಸಂದರ್ಭದಲ್ಲಿ ಅವರು ಹೊಂದಿದ್ದ ಗುರಿ ಹಾಗೂ ಅದನ್ನು ಈಡೇರಿಸಿಕೊಳ್ಳುವಲ್ಲಿ ಅವರು ಮಾಡಿದ ಕ್ರಿಯೆಇವುಗಳ ಹಿಂದೆ ಇರುವ ತಾರ್ಕಿಕತೆ ಎಂಥದ್ದು ಎನ್ನುವುದಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ತರ್ಕವೆಂದರೆ ಭಾರತದಲ್ಲಿನ ಬಿಳಿಯ ಅಧಿಕಾರಿಗಳನ್ನು ತೆಗೆದುಹಾಕುವುದು ಮತ್ತು ಭಾರತದಲ್ಲಿ ಬ್ರಿಟಿಶ್ ಸರಕಾರ ಇಲ್ಲದಂತೆ ಮಾಡುವುದು. ಪ್ರಕ್ರಿಯೆಯಲ್ಲಿ ಅವರ ನಿಲುವು ತಾರ್ಕಿಕವಾದುದಾಗಿತ್ತು. ಅವರ ಹೋರಾಟ ಏನಿದ್ದರೂ ಬ್ರಿಟಿಶ್ ಸಾಮ್ರಾಜ್ಯಶಾಹಿಗಳ ವಿರುದ್ಧವಾಗಿತ್ತೇ ಹೊರತು ಬಿಳಿಯರ ವಿರುದ್ಧ ಇರಲಿಲ್ಲ. ಬಿಳಿಯರನ್ನು ಅವರು ತಮ್ಮ ಗೆಳೆಯರೆಂದೇ ಭಾವಿಸಿದ್ದರು. ವಸಾಹತುಶಾಹಿ ಆಡಳಿತದಲ್ಲಿ ಭಾರತೀಯ ಸಾಮಾನ್ಯ ಮನುಷ್ಯನ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದು ಅವರ ನಿಲುವಾಗಿತ್ತು. ಅದೇ ಕಾಲಕ್ಕೆ ಭಾರತದಲ್ಲಿ ಚಾಲ್ತಿಯಲ್ಲಿದ್ದ ಪ್ರಭುಶಾಹಿ ಹಾಗೂ ಜಾತಿ ವ್ಯವಸ್ಥೆಯನ್ನು ಮರುಸ್ಥಾಪಿಸುವಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ. ಹಿನ್ನೆಲೆಯಲ್ಲಿ ನೋಡಿದಾಗ ಸ್ವಾತಂತ್ರ್ಯ ಹೋರಾಟದ ಹಿಂದೆ ಇದನ್ನು ತಾರ್ಕಿಕವಾದ ಮೌಲ್ಯಾಧಾರಿತವಾದ ಶ್ರದ್ಧೆ ಇತ್ತು ಎನ್ನುವುದು ಗೋಚರಿಸುತ್ತದೆ.

ಮೌಲ್ಯಗಳು ತಾರ್ಕಿಕ ಚಿಂತನೆಯಲ್ಲಿ ರೂಪಗೊಳ್ಳಬೇಕು, ಧಾರ್ಮಿಕ ಚಿಂತನೆಯ ಮೂಲಕ ಅಲ್ಲ ಎನ್ನುವುದು ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಅಭಿಪ್ರಾಯವಾಗಿದೆ. ತಾರ್ಕಿಕತೆ ಎನ್ನುವುದು ವೈಜ್ಞಾನಿಕ ದೃಷ್ಟಿಕೋನದ ಮೌಲ್ಯಾಧಾರಿತ ಅಭಿವ್ಯಕ್ತಿಯಾಗಿದೆ. ತಾರ್ಕಿಕತೆ ಎನ್ನುವುದು ದೇವರ ಮಾತೂ ಅಲ್ಲ, ಧರ್ಮದ ಆಜ್ಞೆಯೂ ಅಲ್ಲ. ಅದು ತರ್ಕಪ್ರಕ್ರಿಯೆಯ ಅನುಸರಣೆಯ ಒಟ್ಟು ಫಲಶ್ರತಿಯಾಗಿದೆ. ಇಂಥ ತಾರ್ಕಿಕತೆಯಿಂದ ರೂಪಗೊಂಡ ಮೌಲ್ಯಗಳನ್ನು ರಕ್ಷಿಸಲು ಮನುಷ್ಯರು ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿಕೊಳ್ಳಲು ಸಿದ್ಧರಿರುತ್ತಾರೆ.

ಅಧ್ಯಾಯದ ಮುಖ್ಯ ಗುರಿ ಶ್ರದ್ಧೆ ಆಧಾರಿತ ಕ್ರಿಯೆ ಹಾಗೂ ಅಂಧಶ್ರದ್ಧೆ ಆಧಾರಿತ ಕ್ರಿಯೆಗಳ ನಡುವೆ ಇರುವ ಅಂತರವನ್ನು ಚರ್ಚಿಸುವುದಾಗಿತ್ತು. ಶ್ರದ್ಧೆ, ನಿಷ್ಠೆ ಅಥವಾ ಜಾಗರೂಕ ಶ್ರದ್ಧೆಇವೆಲ್ಲ ಕೆಳಗೆ ನಮೂದಿಸಿದ ಮೂರು ಮನದಂಡಗಳ ಪರೀಕ್ಷೆಯನ್ನು ಎದುರಿಸಬೇಕು:

1. ಶ್ರದ್ಧೆಯು ಸತ್ಯದ ಒರೆಗಲ್ಲಿನ ಪರೀಕ್ಷೆಗೆ ಒಳಗಾಗಿದೆಯೆ? ಶ್ರದ್ಧೆಯಲ್ಲಿ ನಂಬಿಕೆ ಇಟ್ಟುಕೊಂಡವನು ಅನ್ಯ ಶ್ರದ್ಧೆಗಳ ಬಗೆಗೆ ಹಿಂಸಾಭಾವನೆಯನ್ನು ಹೊಂದಿದ್ದಾನೋ ಅಥವಾ ಸಹಿಷ್ಣುತೆಯ ಭಾವವನ್ನು ಹೊಂದಿದ್ದಾನೋ?

2. ಶ್ರದ್ಧೆಯು ಭೀತಿ ಮತ್ತು ಸೆಳೆತಗಳನ್ನು ಮೀರಿ ಹೊರಬರಲು ಸಹಕರಿಸುತ್ತದೆಯೋ ಮತ್ತು ಕ್ರಿಯೆಯಲ್ಲಿ ತೊಡಗಿಕೊಳ್ಳಲು ಪ್ರಚೋದಿಸುತ್ತದೆಯೋ?

3. ಶ್ರದ್ಧೆಯು ಮಾನವೀಯತೆಯನ್ನು ಉನ್ನತೀಕರಿಸುತ್ತದೆಯೋ, ಕುಗ್ಗಿಸುತ್ತದೆಯೋ?

ಮೂರೂ ಮಾನದಂಡಗಳ ಪರೀಕ್ಷೆಗಳನ್ನು ಯಾವುದೇ ತೆರನಾದ ಶ್ರದ್ಧೆಯು ಒಳಪಡಬೇಕೆಂಬುದು ಅಂಧಶ್ರದ್ಧಾ ನಿರ್ಮೂಲನ ಸಮಿತಿಯು ಬಯಸುತ್ತದೆ. ಯಾಕೆಂದರೆ ಪರೀಕ್ಷೆಯನ್ನು ದಾಟಿ ಬಂದಾಗ ಮನುಷ್ಯರ ಜೀವನ ಮತ್ತು ಸಂಸ್ಕøತಿ ಪ್ರಗತಿಪಥದಲ್ಲಿ ಸಾಗಲು ಸಾಧ್ಯ. ಹೀಗಾಗಿ ಸಮಿತಿಯು ಶ್ರದ್ಧೆ ಮತ್ತು ಅಂಧಶ್ರದ್ಧೆ ಎನ್ನುವ ವಿಷಯಗಳನ್ನು ನಿರಂತರವಾಗಿ ಚರ್ಚಿಸುತ್ತಲೇ ಇರುತ್ತದೆ.

ನರೇಂದ್ರ ದಾಭೋಳ್ಕರ್

ನರೇಂದ್ರ ದಾಭೋಳ್ಕರ್ (1945-2013) ಮಹಾರಾಷ್ಟ್ರದ ಬಹುಮುಖ್ಯ ವಿಚಾರವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಲ್ಲಿ ಒಬ್ಬರು. ವೃತ್ತಿಯಿಂದ ವೈದ್ಯರಾಗಿದ್ದ, ದಾಭೋಳ್ಕರ್ 1989ರಲ್ಲಿ ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನ ಸಮಿತಿಯನ್ನು ಸ್ಥಾಪಿಸಿದರು ಮತ್ತು ಪ್ರಗತಿಪರ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು. 2013ರಲ್ಲಿ ಅವರ ಹತ್ಯೆಯಿಂದ ಪ್ರಾರಂಭವಾದ ಸರಣಿಯು ಸಿಪಿಐ ನಾಯಕ ಗೋವಿಂದ ಪನ್ಸಾರೆ (1933-2015), ಸಂಶೋಧಕ ಎಂ.ಎಂ. ಕಲಬುರ್ಗಿ (1938-2015) ಹಾಗೂ ಪತ್ರಕರ್ತೆ ಗೌರಿ ಲಂಕೇಶ್ (1962-2017) ಇವರ ಕಗ್ಗೊಲೆಗಳನ್ನು ಕಂಡಿತು. ತಮ್ಮ ಜೀವಿತ ಕಾಲದಲ್ಲಿ ಮಹಾರಾಷ್ಟ್ರಕ್ಕೆ ಸೀಮಿತರಾಗಿದ್ದ ದಾಭೋಳ್ಕರ್, ಅವರ ಹತ್ಯೆಯ ಕಾರಣದಿಂದ ರಾಷ್ಟ್ರೀಯ ಪ್ರಜ್ಞೆಯನ್ನು ಪ್ರವೇಶಿಸಿದರು. ನಾಲ್ಕೂ ಹತ್ಯೆಗಳ ಸಂದರ್ಭ ಮತ್ತು ಅವುಗಳ ಹಿಂದಿನ ವೈಚಾರಿಕ ಸಂಘರ್ಷಗಳನ್ನು ಪ್ರಖ್ಯಾತ ಸಾಕ್ಷ್ಯಚಿತ್ರ ನಿರ್ದೇಶಕ ಆನಂದ ಪಟವರ್ಧನ್ ತಮ್ಮ ವಿವೇಕ (2018) ಎಂಬ ಚಿತ್ರದಲ್ಲಿ ವಿಶ್ಲೇಷಿಸಿದ್ದಾರೆ.

ದಾಬೋಲ್ಕರ್ ನಮಗೆ ಮುಖ್ಯರಾಗುವುದು ಎರಡು ಕಾರಣಗಳಿಗೆ. ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನ ಸಮಿತಿಯ ಸಂಘಟಕರಾಗಿ ಅವರು ಮೂಢನಂಬಿಕೆಗಳು, ಮಾಟಮಂತ್ರ, ಜ್ಯೋತಿಷ್ಯ ಮತ್ತು ದೈವಮಾನವರ ಚಟುವಟಿಕೆಗಳ ವಿರುದ್ಧ ಮೂರು ದಶಕಗಳಿಗೂ ಹೆಚ್ಚು ಕಾಲ ಸಂಘಟಿತ ಪ್ರಯತ್ನಗಳನ್ನು ನಡೆಸಿದರು. ಇದರ ಉದ್ದೇಶ ಸಾಮಾಜಿಕ ಪ್ರಜ್ಞೆಯನ್ನು ಎತ್ತರಿಸುವುದು ಆಗಿತ್ತು. ಅದಕ್ಕಾಗಿ ಬಾನಾಮತಿ, ಜ್ಯೋತಿಷ್ಯ ಇವುಗಳ ವಿರುದ್ಧ ಸಾವಿರಾರು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿ, ಪ್ರಚಾರ ಮಾಡಿದರು. ಅಲ್ಲದೆ ಅವುಗಳ ಹಿಂದಿನ ಮೂಢನಂಬಿಕೆಯನ್ನು ಎಲ್ಲರಿಗೂ ಅರ್ಥವಾಗುವಂತೆ ತೆರೆದಿಡುವ ಪ್ರಯತ್ನವನ್ನು ಮಾಡಿದರು. ಸ್ವಘೋಷಿತ ದೈವಮಾನವರಿಗೆ ಸಾರ್ವಜನಿಕವಾಗಿ ತಮ್ಮ ಪವಾಡಗಳನ್ನು ಮಾಡುವಂತೆ ಸತತವಾಗಿ ಸವಾಲು ಹಾಕಿದರು. ಲಕ್ಷಾಂತರ ರೂಪಾಯಿಗಳ ಪಣವನ್ನು ತೊಟ್ಟರು. ಹೋರಾಟಗಳ ಅಧ್ಯಯನವನ್ನು ಮಹಾರಾಷ್ಟ್ರದ ಇತಿಹಾಸಕಾರ ನೀರಜ್ ಅಣ್ಣಾಸಾಹೇಬ್ ಸಾಲುಂಕೆ ಮತ್ತು ಜರ್ಮನ್ ವಿದ್ವಾಂಸ ಜೊಹಾನ್ನೆಸ್ ಕ್ವಾಕ್ ಇವರ ಕೃತಿಗಳಲ್ಲಿ ಕಾಣಬಹುದು.

ಎಲ್ಲ ಪ್ರಯತ್ನಗಳು ತಮ್ಮ ತಾರ್ಕಿಕ ಅಂತ್ಯವನ್ನು ಕಂಡದ್ದು ಮೂಢನಂಬಿಕೆ ವಿರೋಧಿ ಕಾನೂನನ್ನು ಮಹಾರಾಷ್ಟ್ರದಲ್ಲಿ ಜಾರಿಗೊಳಿಸಲು ಮಾಡಿದ ಪ್ರಯತ್ನಗಳ ಮೂಲಕ. ದಾಭೋಳ್ಕರ್ ಮತ್ತು ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನ ಸಮಿತಿಯು ಇದಕ್ಕೆ ಅಗತ್ಯವಿದ್ದ ಮಸೂದೆಯ ಕರಡು ಪಠ್ಯವನ್ನು 2003ರಲ್ಲಿಯೆ ಸಿದ್ಧಪಡಿಸಿದ್ದರು. ಮುಂದಿನ ಹತ್ತು ವರ್ಷಗಳಲ್ಲಿ ಮಸೂದೆಯು ಹಲವಾರು ಬಾರಿ ವಿಧಾನಸಭೆಯಲ್ಲಿ ಮಂಡಿಸಲ್ಪಟ್ಟರೂ ಅದನ್ನು ಕಾನೂನನ್ನಾಗಿಸಲು ಸಾಧ್ಯವಾಗಿರಲಿಲ್ಲ. ಬಿಜೆಪಿ, ಶಿವಸೇನಾ ಮತ್ತಿತರರು ಮಸೂದೆಯು ಧಾರ್ಮಿಕ ಆಚರಣೆಗಳ ವಿರುದ್ಧವಾಗಿಯೂ ಇದೆ ಎಂದು ವಾದಿಸಿದರು. ಚರ್ಚೆಯು ತೀವ್ರವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿಯೆ ದಾಭೋಳ್ಕರರ ಹತ್ಯೆಯಾಯಿತು. ಅದರ ಮರುದಿನವೆ, ಅಂದರೆ 2013 ಆಗಸ್ಟ್ 21ರಂದು, ಮಹಾರಾಷ್ಟ್ರ ಸಚಿವಸಂಪುಟವು ಮೂಢನಂಬಿಕೆ ವಿರೋಧಿ ಸುಗ್ರೀವಾಜ್ಞೆಗೆ ಅಂಗೀಕಾರ ನೀಡಿತು ಮತ್ತು 2013 ಡಿಸೆಂಬರಿನಲ್ಲಿ ರಾಜ್ಯ ವಿಧಾನಸಭೆಯಲ್ಲಿಯೂ ಅಂಗೀಕಾರ ಪಡೆಯಿತು.

ದಾಭೋಳ್ಕರ್ ಕೇವಲ ಕಾರ್ಯಕರ್ತರಾಗಿ ಸೀಮಿತರಾಗಿರಲಿಲ್ಲ. ಮೂಢನಂಬಿಕೆ, ಧಾರ್ಮಿಕತೆ, ದೈವಮಾನವರು, ವೈಚಾರಿಕತೆ ಇತ್ಯಾದಿ ಹಲವಾರು ವಿಷಯಗಳ ಬಗ್ಗೆ ತಮ್ಮ ಜೀವನದುದ್ದಕ್ಕೂ ಬರೆಯುತ್ತ ಬಂದರು. ಒಂದು ಆಯಾಮವು ಅವರನ್ನು ಪನ್ಸಾರೆ, ಕಲಬುರ್ಗಿ ಮತ್ತು ಗೌರಿ ಲಂಕೇಶರಿಂದ ಭಿನ್ನವಾಗಿಸುತ್ತದೆ. ಮೂವರೂ ಸಹ ಗಂಭೀರ ಚಿಂತನೆ ಮತ್ತು ಬರವಣಿಗೆಗಳಲ್ಲಿ ತೊಡಗಿಸಿಕೊಂಡವರು ಎನ್ನುವುದೂ ನಿಜವೆ. ಆದರೆ ದಾಬೋಲ್ಕರ್ ತಮ್ಮ ಕೃತಿಗಳಲ್ಲಿ ಒಬ್ಬ ತತ್ವಶಾಸ್ತ್ರಜ್ಞನ ಮಾದರಿಯಲ್ಲಿ ಮೂಢನಂಬಿಕೆಗಳ ವಿಶ್ಲೇಷಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಸ್ವತಃ ನಾಸ್ತಿಕನಾದರೂ, ಧರ್ಮ ಮತ್ತು ಆಧ್ಯಾತ್ಮಿಕತೆಗಳ ಬಗ್ಗೆ ಗಂಭೀರವಾಗಿ ಮತ್ತು ಗೌರವದಿಂದ ಬರೆಯುತ್ತಾರೆ. ಮೂಢನಂಬಿಕೆಗಳ ವಿರುದ್ಧದ ಹೋರಾಟಗಳ ಪುನಾರಚನೆಯನ್ನು ನುರಿತ ಇತಿಹಾಸಕಾರನಂತೆ ಮಾಡುತ್ತಾರೆ. ಒಂದು ಆಯಾಮವು ದಾಬೋಲ್ಕರ್ ಅವರನ್ನು ವಿಶಿಷ್ಟವಾಗಿಸುತ್ತದೆ.

ಅವರ ಮುಖ್ಯ ಕೃತಿಗಳು ಹೀಗಿವೆ:ದ್ ಕೇಸ್ ರ್ ರೀಸನ್ಎಂಬ ಕೃತಿಯು 2018 ಮತ್ತು 2019ರಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟವಾಯಿತು. ‘ಪ್ಲೀಸ್ ಥಿಂಕ್ ಪ್ರಾಕ್ಟಿಕಲ್: ಲೆಸನ್ಸ್ ಇನ್ ಡೆವಲಪಿಂಗ್ ಸೈಂಟಿಫಿûಕ್ ಟೆಂಪರ್ಕೃತಿಯು 2019ರಲ್ಲಿ ಹೊರಬಂದಿದೆ. ಕೃತಿಗಳಿಗೆ ಆಕರವಾಗಿರುವ ಹತ್ತಾರು ಮರಾಠಿ ಬರಹಗಳು ದಾಭೋಳ್ಕರ್ ಅವರ ಜೀವಿತಾವಧಿಯಲ್ಲಿಯೆ ಪ್ರಕಟವಾಗಿದ್ದವು.

ಪೃಥ್ವಿದತ್ತ ಚಂದ್ರಶೋಭಿ

Leave a Reply

Your email address will not be published.