ಶ್ರವಣ ಸಮಸ್ಯೆಗೆ ಡಿಜಿಟಲ್ ಪರಿಹಾರ

ಇಸ್ರೇಲ್ ದೇಶದ ವಿಜ್ಞಾನಿಗಳು, ತಂತ್ರಜ್ಞರು ಮತ್ತು ನವೋದ್ಯಮಿಗಳು ಅಧುನಿಕ ತಂತ್ರಜ್ಞಾನಗಳನ್ನು ಶ್ರವಣ ಸಮಸ್ಯೆ ಇರುವವರ ನೆರವಿಗಾಗಿ ಹೇಗೆ ಬಳಸುತ್ತಿದ್ದಾರೆ?

ಡಾ.ಉದಯ ಶಂಕರ ಪುರಾಣಿಕ

ವಿಶ್ವಾದಂತ್ಯ 40 ಕೋಟಿಗೂ ಹೆಚ್ಚು ಜನ ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ. ಮನೆಗೆ ಬಂದವರು ಬಳಸುವ ಡೋರ್‍ಬೆಲ್ ಇರಬಹುದು, ಅಡುಗೆಮನೆಯಲ್ಲಿ ಕುಕ್ಕರಿನ ಸೀಟಿಯಿರಬಹುದು, ಮಗು ಅಳುತ್ತಿರುವುದಾಗಿರಬಹುದು, ರಸ್ತೆಯಲ್ಲಿ ವಾಹನಗಳ ಹಾರ್ನ್ ಇರಬಹುದು, ಕಾರ್ಖಾನೆಯ ಸೈರೆನ್ ಇರಬಹುದು, ಹೀಗೆ ಹಲವು ಕಡೆ ತಮಗಿರುವ ಶ್ರವಣ ಸಮಸ್ಯೆಯಿಂದಾಗಿ ಈ ಜನರಿಗೆ ತೊಂದರೆಯಾಗುತ್ತಿದೆ. ಇವರಿಗೆ ನೆರವಾಗಲು ಹಿಯರಿಂಗ್ ಏಡ್‍ಗಳು ಲಭ್ಯವಿದ್ದರೂ, ಅಧುನಿಕ ತಂತ್ರಜ್ಞಾನಗಳನ್ನು ಸೂಕ್ತವಾಗಿ ಬಳಸುವುದರಿಂದ ಶ್ರವಣ ಸಮಸ್ಯೆ ಎದುರಿಸುವವರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಇಸ್ರೇಲಿನ ವಿಜ್ಞಾನಿಗಳು ಮತ್ತು ತಂತ್ರಜ್ಞರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಇಸ್ರೇಲ್ ದೇಶದ ವಿಜ್ಞಾನಿಗಳು, ತಂತ್ರಜ್ಞರು ಮತ್ತು ನವೋದ್ಯಮಿಗಳು ಅಧುನಿಕ ತಂತ್ರಜ್ಞಾನಗಳನ್ನು ಶ್ರವಣ ಸಮಸ್ಯೆ ಇರುವವರ ನೆರವಿಗಾಗಿ ಹೇಗೆ ಬಳಸುತ್ತಿದ್ದಾರೆ ಎಂದು ಕೆಲವು ಉದಾಹರಣೆಗಳ ಮೂಲಕ ತಿಳಿದುಕೊಳ್ಳೋಣ.

ಅಭಿಲೆಸನ್ಸ್ ಎನ್ನುವ ಹೆಸರಿನ ನವೋದ್ಯಮವೊಂದು ಇಸ್ರೇಲ್‍ನ ವಿಜ್ಞಾನಿಗಳು ಮತ್ತು ತಂತ್ರಜ್ಞರ ನೆರವಿನಿಂದ, ಶ್ರವಣ ಸಮಸ್ಯೆ ಇರುವ ದಂಪತಿಗೆ ಮಗುವಿನ ಆರೈಕೆಗೆ ಸಹಾಯಕವಾಗಲು, ಶ್ರವಣ ಸಮಸ್ಯೆ ಇರುವ ವೃದ್ಧರು ಮನೆಯಲ್ಲಿದ್ದರೆ ಅವರ ಆರೈಕೆಗೆ ಸಹಾಯಕವಾಗಲು, ಶ್ರವಣ ಸಮಸ್ಯೆ ಇರುವವರು ಟ್ರಾಫಿಕ್ ದಟ್ಟಣೆಯಿರುವ ರಸ್ತೆ, ಸಾರ್ವಜನಿಕ ಸ್ಥಳಗಳು, ಮಾಲ್‍ಗಳು ಮೊದಲಾದ ಕಡೆ ಇರುವಾಗ ಸಹಾಯಕವಾಗಲು ಮತ್ತು ಶ್ರವಣ ಸಮಸ್ಯೆ ಇರುವವರ ಮನೆಗೆ ಕಿಟಕಿ, ಬಾಗಿಲು ಮುರಿದು ಪ್ರವೇಶಿಸಲು ಯತ್ನಿಸುವ ಕಳ್ಳರು, ಅಗ್ನಿಅವಘಡ ಮೊದಲಾದ ಘಟನೆಗಳಲ್ಲಿ ಸಹಾಯಕವಾಗಲು, ಹೀಗೆ ಬಹುಪಯೋಗಿ ತಂತ್ರಜ್ಞಾನ ಮತ್ತು ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿದೆ.

ಉದಾಹರಣೆಗೆ, ರಾತ್ರಿಯ ನಿಶ್ಶಬ್ದದಂತಹ ವಾತಾವರಣದಲ್ಲಿರಲಿ ಅಥವಾ ಸಾರ್ವಜನಿಕ ಸ್ಥಳಗಳ ಗದ್ದಲದ ವಾತಾವರಣವಿರಲಿ, ಮಗು ಅಳುತ್ತಿರುವುದನ್ನು ಗುರುತಿಸಿ, ಶ್ರವಣ ಸಮಸ್ಯೆ ಇರುವ ಪಾಲಕರಿಗೆ ತಕ್ಷಣ ತಿಳಿಸಲು ಈ ಸಂಸ್ಥೆ ಅಭಿವೃದ್ಧಿಪಡಿಸಿರುವ ವಿಶೇಷವಾದ ಶಬ್ದ ಗ್ರಹಣ ತಂತ್ರಜ್ಞಾನ ಸಹಾಯ ಮಾಡುತ್ತದೆ. ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿರುವ ಮೈಕ್ರೋಫೋನ್‍ಗಳನ್ನು ಬಳಸಿ ಶಬ್ದವನ್ನು ಗ್ರಹಿಸಿ, ಅರೆಕ್ಷಣದಲ್ಲಿ ವಿವಿಧ ತಂತ್ರಾಂಶಗಳ ಸಹಾಯದಿಂದ ಈ ಶಬ್ದದ ವಿಶ್ಲೇಷಣೆ ಮಾಡಲಾಗುತ್ತದೆ. ಈ ಶಬ್ದ ಕುರಿತು ಎಚ್ಚರಿಕೆ ನೀಡುವ ಅಗತ್ಯವಿದ್ದರೆ, ಶ್ರವಣ ಸಮಸ್ಯೆ ಇರುವವರು ಧರಿಸಿರುವ ಸ್ಮಾರ್ಟ ವಾಚ್ ಅಥವಾ ಸ್ಮಾರ್ಟ ಬಳೆ, ಸ್ಮಾರ್ಟ್ ಫೋನ್‍ಗೆ ಚಿತ್ರ ಅಥವಾ ವೈಬ್ರೇಷನ್ ಮೂಲಕ ಮಾಹಿತಿಯನ್ನು ಕಳುಹಿಸಲಾಗುತ್ತದೆ.

ಅದೇ ರೀತಿ ಮನೆಯಲ್ಲಿರುವ ವೃದ್ಧರ ಆರೈಕೆಯನ್ನು ಶ್ರವಣ ಸಮಸ್ಯೆ ಇರುವವರು ಮಾಡಲು ಕೂಡಾ ಈ ತಂತ್ರಜ್ಞಾನ ಸಹಾಯ ಮಾಡುತ್ತದೆ. ಯಾರಾದರೂ ಮನೆಯಲ್ಲಿ ಕಳ್ಳತನ, ವಾಹನ ಕಳವು ಮಾಡಲು ಪ್ರಯತ್ನಿಸಿದಾಗ ಅಥವಾ ಬೆಂಕಿ ಅವಘಡಗಳಂತಹ ಘಟನೆಗಳು ಸಂಭವಿಸಿದಾಗ, ವಿಶೇಷವಾದ ಕ್ಯಾಮರಾ ಮತ್ತು ಈ ವಿಶೇಷ ಮೈಕ್ರೋಫೋನ್ ಬಳಸಿ ಮಾಹಿತಿ ಸಂಗ್ರಹಿಸಿ, ಅರೆಕ್ಷಣಗಳಲ್ಲಿ ಮಾಹಿತಿ ವಿಶ್ಲೇಷಣೆ ಮಾಡಿ, ಶ್ರವಣ ಸಮಸ್ಯೆ ಇರುವವರಿಗೆ ತಲುಪಿಸಲಾಗುತ್ತದೆ.

ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನಗಳು ಲಭ್ಯವಿರುವಾಗ, ಶ್ರವಣ ಸಮಸ್ಯೆ ಇರುವವರಿಗೆ ಸಹಾಯಕವಾಗುವಂತೆ ಮತ್ತು ಅವರಿಗೆ ಸುಲಭ ದರದಲ್ಲಿ ಈ ಸೌಲಭ್ಯಗಳು ದೊರೆಯುವಂತೆ, ಸೂಕ್ತವಾಗಿ ಈ ತಂತ್ರಜ್ಞಾನಗಳನ್ನು ಬಳಸುವುದು ನಮ್ಮ ಉದ್ದೇಶವೆಂದು ಅಭಿಲೆಸನ್ಸ್ ಸಂಸ್ಥೆಯ ವಿಜ್ಞಾನಿಗಳು ಹೇಳುತ್ತಾರೆ.

ಇತರರಂತೆ, ಶ್ರವಣ ಸಮಸ್ಯೆ ಇದ್ದವರು ಕೂಡಾ ಸಂಗೀತ ಆಸ್ವಾದಿಸಲು, ಚಲನಚಿತ್ರ ನೋಡಲು, ಆಡಿಯೋ ಬುಕ್ ಓದಲು, ದೂರವಾಣಿ ಕರೆ ಕೇಳಲು, ಆಧುನಿಕ ತಂತ್ರಜ್ಞಾನದಿಂದ ಸಾಧ್ಯವಿದೆ ಎಂದು ಟ್ಯೂನ್‍ಫೋರ್ಕ ಸಂಸ್ಥೆಯ ಸಂಸ್ಥಾಪಕರಾದ ಟೋಮರ್ ಶೋರ್ ಮತ್ತು ಯಾವ್ ಬ್ಲಾರವರು ಹೇಳುತ್ತಾರೆ. ಅತ್ಯಂತ ತೀವ್ರ ಶ್ರವಣ ಸಮಸ್ಯೆಯನ್ನು ಬ್ಲಾರವರ ಪತ್ನಿ ಹಾಗೂ ಶೋರ್‍ರವರ ತಂದೆ ಎದುರಿಸುತ್ತಿದ್ದು, ಅವರು ಪಡುತ್ತಿರುವ ಕಷ್ಟದಿಂದ ಮನನೊಂದು, ಈ ಇಬ್ಬರು ವಿಜ್ಞಾನಿಗಳು ಟ್ಯೂನ್‍ಫೋರ್ಕ ಸಂಸ್ಥೆಯನ್ನು ಸ್ಥಾಪಿಸಿ ಎರಡು ವರ್ಷಗಳಾಗಿವೆ.

ಪ್ರತಿಯೊಬ್ಬರಿಗೂ ಫಿಂಗರ್‍ಪ್ರಿಂಟ್ ಇರುವಂತೆ ಶ್ರವಣ ಶಕ್ತಿಯಲ್ಲಿ ಅತ್ಯಂತ ಸೂಕ್ಷ್ಮ ವ್ಯತ್ಯಾಸಗಳಿರುತ್ತವೆ. ಮೊದಲು ಶ್ರವಣ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಯಲ್ಲಿರುವ ಇಂತಹ ಅತ್ಯಂತ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿಯಲು ಸ್ಮಾರ್ಟ್‍ಫೋನ್ ಆಧಾರಿತ ಹಿಯರಿಂಗ್ ಟೆಸ್ಟ್ ಮಾಡಲಾಗುತ್ತದೆ. ನಂತರ ಆ ವ್ಯಕ್ತಿಗೆ ಆದಷ್ಟು ಸಹಜವಾಗಿ ಸಂಗೀತ, ಆಡಿಯೋ ಬುಕ್, ಫೋನ್ ಕರೆ ಇತ್ಯಾದಿಗಳು ಕೇಳಿಸಲು ಸಾಧ್ಯವಾಗುವಂತೆ ಈ ಸಂಸ್ಥೆ ಅಭಿವೃದ್ಧಿ ಪಡಿಸಿರುವ ತಂತ್ರಾಂಶದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತದೆ. ಶ್ರವಣ ಸಮಸ್ಯೆಯ ತೀವ್ರತೆಯ ಆಧಾರದ ಮೇಲೆ ಹಿಯರಿಂಗ್ ಏಡ್ ಜೊತೆಯಲ್ಲಿ ಈ ತಂತ್ರಜ್ಞಾನವನ್ನು ಬಳಸಬಹುದು. ತೀವ್ರ ಶ್ರವಣ ಸಮಸ್ಯೆ ಇಲ್ಲದವರು, ಹಿಯರಿಂಗ್ ಏಡ್ ಬಳಸದಿದ್ದರೂ ಈ ತಂತ್ರಜ್ಞಾನದಿಂದ ಲಾಭ ಪಡೆಯುತ್ತಿದ್ದಾರೆ.

ಇದುವರೆಗೂ ಇಸ್ರೇಲ್ ಮತ್ತು ಅಮೆರಿಕಾದಲ್ಲಿ ಶ್ರವಣ ಸಮಸ್ಯೆಯಿರುವ 10,000 ಜನ, ತಮಗೆ ಇಷ್ಟವಾದ ಸಂಗೀತ ಕೇಳಿ ಆಸ್ವಾದಿಸಲು ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿದ್ದಾರೆ. ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಈ ಸಂಸ್ಥೆ ಪಡೆದುಕೊಂಡಿದೆ. ವಿಶ್ವದಾದ್ಯಂತ ಇರುವ ಶ್ರವಣ ಸಮಸ್ಯೆ ಹೊಂದಿರುವವರಿಗೆ ಸೂಕ್ತವಾಗುವಂತೆ ಮತ್ತು ಸುಲಭದರಲ್ಲಿ ದೊರೆಯುವಂತೆ, ಈ ತಂತ್ರಜ್ಞಾನದ ಅಭಿವೃದ್ಧಿಯನ್ನು ಮುಂದುವರೆಸುತ್ತಿದ್ದೇವೆ ಎಂದು ಟ್ಯೂನ್‍ಫೋರ್ಕ್ ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ.

ಯಾವುದೇ ದೇಶದಲ್ಲಿರಬಹುದು ಅಥವಾ ಭಾಷೆಯಲ್ಲಿರಬಹುದು, ಚಲನಚಿತ್ರ, ಸಂಗೀತ ಕಛೇರಿ, ವಸ್ತು ಪ್ರದರ್ಶನ, ವಸ್ತು ಸಂಗ್ರಹಾಲಯ, ಹೀಗೆ ಹಲವು ಕಡೆಯಲ್ಲಿ ಶ್ರವಣ ಸಮಸ್ಯೆ ಹೊಂದಿರುವವರಿಗೆ ನಮ್ಮ ತಂತ್ರಜ್ಞಾನ ಸಹಾಯ ಮಾಡುತ್ತದೆ ಎಂದು ಗ್ಯಾಲಾಪ್ರೋ ಸಂಸ್ಥೆಯ ವಿಜ್ಞಾನಿಗಳು ಹೇಳುತ್ತಾರೆ.

ಐಫೋನ್ ಮತ್ತು ಆಂಡ್ರಿಯಾಡ್ ಫೋನ್‍ಗಳಲ್ಲಿ ಬಳಸಬಹುದಾದ ಆಪ್ ತಂತ್ರಾಂಶವನ್ನು ಈ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ಆಪ್ ಬಳಸಿದರೆ ಸಾಕು, ಸಂಗೀತ, ಮಾತುಕತೆ ಒಂದು ವೇಳೆ ಬೇರೆ ಭಾಷೆಯಲ್ಲಿದ್ದರೂ, ಗ್ರಾಹಕನಿಗೆ ಅರ್ಥವಾಗುವ ಭಾಷೆಗೆ ಭಾಷಾಂತರವಾಗಿ ಅವರ ಸ್ಮಾರ್ಟ್‍ಫೋನ್‍ನಲ್ಲಿ ಮೂಡಿಬರುತ್ತದೆ. ಪಕ್ಕದಲ್ಲಿರುವ ವ್ಯಕ್ತಿಗೆ ಯಾವುದೇ ತೊಂದರೆಯಾಗದಂತೆ, ಶ್ರವಣ ಸಮಸ್ಯೆಯಿರುವ ವ್ಯಕ್ತಿ ಈ ಆಪ್ ಬಳಸಬಹುದು ಎಂದು ಈ ಸಂಸ್ಥೆಯ ವಿಜ್ಞಾನಿಗಳು ವಿವರಿಸುತ್ತಾರೆ. ಈ ಆಪ್‍ನ್ನು ಈಗ ಇಸ್ರೇಲ್ ಮತ್ತು ಅಮೆರಿಕಾದಲ್ಲಿ ಪ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ವಿವಿಧ ದೇಶಗಳಲ್ಲಿ ಮತ್ತು ಭಾಷೆಗಳಲ್ಲಿ ಈ ಆಪ್ ದೊರೆಯುವಂತೆ ಮಾಡುವ ಉದ್ದೇಶವನ್ನು ಗ್ಯಾಲಾಪ್ರೋ ಸಂಸ್ಥೆ ಹೊಂದಿದೆ.

ಶ್ರವಣ ಸಮಸ್ಯೆಯಿರುವವರಿಗೆ ಬೇರೆಯವರು ಏನು ಹೇಳುತ್ತಿದ್ದಾರೆ ಎಂದು ತಿಳಿಯಲು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಆಧಾರಿತ ಆನ್‍ಲೈನ್ ತುಟಿ ಚಲನೆ ಓದುವ ತಂತ್ರಜ್ಞಾನವನ್ನು ಇಸ್ರೇಲಿನ ಜ್ಯೂಲಿ ಮತ್ತು ವಾಸೀಂರವರು ಅಭಿವೃದ್ಧಿಪಡಿಸಿದ್ದಾರೆ. ಸ್ಮಾರ್ಟ್‍ಫೋನ್‍ನಲ್ಲಿರುವ ಮೈಕ್ರೋಫೋನ್‍ನಿಂದ ಎದುರಿನಲ್ಲಿರುವ ವ್ಯಕ್ತಿ ಏನು ಹೇಳುತ್ತಿದ್ದಾನೆ ಎಂದು ಧ್ವನಿ ಗ್ರಹಿಸಿದರೆ, ಅದೇ ವೇಳೆಗೆ ಸ್ಮಾರ್ಟಫೋನ್‍ನಲ್ಲಿರುವ ಕ್ಯಾಮರಾವು ಆ ವ್ಯಕ್ತಿಯ ತುಟಿಚಲನೆಯನ್ನು ಗ್ರಹಿಸುತ್ತದೆ. ಗದ್ದಲವಿರುವ ವಾತಾವರಣದಲ್ಲಿ ಎದುರಿಗಿರುವ ವ್ಯಕ್ತಿಯ ತುಟಿಚಲನೆಯ ಮಾಹಿತಿಯನ್ನು ಸ್ಮಾರ್ಟ್‍ಫೋನ್ ಕ್ಯಾಮರಾದಿಂದ ಗ್ರಹಿಸಲಾಗುತ್ತದೆ. ಹೀಗೆ ಪಡೆಯುವ ಮಾಹಿತಿಯನ್ನು ಕೆಲಕ್ಷಣಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ ವಿಶ್ಲೇಷಣೆ ಮಾಡಿ, ಸ್ಮಾರ್ಟ್‍ಫೋನ್ ಪರದೆಯಲ್ಲಿ ಅಕ್ಷರ ರೂಪದಲ್ಲಿ ನೀಡಲಾಗುತ್ತದ. ಇದನ್ನು ಓದುವುದರಿಂದ, ಶ್ರವಣ ಸಮಸ್ಯೆ ಇರುವವರಿಗೆ ತಮ್ಮ ಎದುರಿನ ವ್ಯಕ್ತಿ ಏನು ಹೇಳಿದರು ಎಂದು ತಿಳಿಯುತ್ತದೆ.

ಪುಟ್ಟ ದೇಶ ಇಸ್ರೇಲಿನಲ್ಲಿ ಶ್ರವಣ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಸಹಾಯಕವಾಗುವಂತೆ ತಂತ್ರಜ್ಞಾನ, ತಂತ್ರಾಂಶಗಳ ಅಭಿವೃದ್ಧಿ ನಡೆದಿದೆ. ಜಗತ್ತಿಗೆ ಮಾಹಿತಿ ತಂತ್ರಜ್ಞಾನ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಕೂಡಾ ದೃಷ್ಟಿ ಮತ್ತು ಶ್ರವಣ ಸಮಸ್ಯೆ ಇರುವವರ ಅನುಕೂಲಕ್ಕಾಗಿ ಇಂತಹ ಕೆಲಸ ನಡೆಯಬೇಕಾಗಿದೆ.

*ಲೇಖಕರು ಇಂಜಿನಿಯರಿಂಗ್‍ನಲ್ಲಿ ಮೂರು ಡಾಕ್ಟರೇಟ್ ಪದವಿ ಪಡೆದಿದ್ದಾರೆ; ವೃತ್ತಿಯಿಂದ ಮಾಹಿತಿ ತಂತ್ರಜ್ಞಾನ ಪರಿಣತರು, ಕನ್ನಡದ ಖ್ಯಾತ ವಿಜ್ಞಾನತಂತ್ರಜ್ಞಾನ ಬರಹಗಾರರು.

Leave a Reply

Your email address will not be published.