ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ

ಭಜರಂಗಿ-2 ಬಿಡುಗಡೆಯಾಗಿ ಕನ್ನಡ ಚಿತ್ರರಂಗದ ಸ್ಥಿತಿ ಸುಧಾರಿಸಿ ಎಲ್ಲವೂ ಮೊದಲಿನಂತಾಗುತ್ತದೆ ಎನ್ನುವಷ್ಟರಲ್ಲಿ, ಕನ್ನಡ ಚಿತ್ರರಂಗದ ಆಧಾರಸ್ತಂಭಗಳಲ್ಲೊಂದಾದ ಪುನೀತ್ ರಾಜ್‍ಕುಮಾರ್ ಅವರನ್ನು ಜವರಾಯ ಕರೆದೊಯ್ದ!

ಮುರಳೀಧರ ಖಜಾನೆ

ಕಳೆದ ಇಪ್ಪತ್ತೊಂದು ತಿಂಗಳಿಂದ ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಮಹಾಮಾರಿಯ ಭೀತಿ ಚಿತ್ರರಂಗಕ್ಕೇನೂ ವಿನಾಯತಿ ನೀಡಲಿಲ್ಲ. ಎಲ್ಲ ಭಾಷೆಯ ಚಿತ್ರರಂಗಗಳಂತೆ, ಕನ್ನಡ ಚಿತ್ರರಂಗ ಕೂಡ ಸ್ತಬ್ಧವಾಗಿತ್ತು. ಸಿನಿಮಾ ಚಿತ್ರೀಕರಣವಿಲ್ಲದೆ, ಪ್ರದರ್ಶನವಿಲ್ಲದೆ ಚಿತ್ರರಂಗ ಕಂಗಾಲಾದ ಸ್ಥಿತಿಯಲ್ಲಿತ್ತು. ಖಾಲಿ ಕುಳಿತ ಕಲಾವಿದರೂ ಸೇರಿದಂತೆ ಪ್ರತ್ಯಕ್ಷವಾಗಿಪರೋಕ್ಷವಾಗಿ ಚಿತ್ರರಂಗದೊಂದಿಗೆ ಬದುಕು ಬೆಸೆದುಕೊಂಡಿದ್ದ ಸಾವಿರಾರು ಮಂದಿಯನ್ನು ಈ ಕೋವಿಡ್-19 ಎಂಬ ವೈರಸ್ ಕಾಡಿರುವ ರೀತಿ ಹಿರಿಕಿರಿ ತೆರೆಗೆ ಒಂದು ದುಃಸ್ವಪ್ನ.

ಈ ನಡುವೆ, ಕನ್ನಡ ಚಿತ್ರರಂಗದ ಕುಸಿದ ಆರ್ಥಿಕತೆಗೆ ಯಾವುದಾದರೂ ರೀತಿಯಲ್ಲಿ ನೆರವಾಗುವುದಿರಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲು ಕರ್ನಾಟಕ ಸರ್ಕಾರ ಮೀನಮೇಷ ಏಣಿಸಿದ್ದು, ಕನ್ನಡ ಚಿತ್ರರಂಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲು ಕಾರಣವಾಯಿತು. 2020ರ ಮಾರ್ಚಿ ತಿಂಗಳಲ್ಲಿ ಮುಚ್ಚಿದ ಚಿತ್ರರಂಗ, ಮತ್ತೆ ತೆರೆದು ಒಂದೆರಡು ಚಿತ್ರಗಳು ತೆರೆಕಂಡು ಇನ್ನೇನು ಸಿನಿಮಾರಂಗ ಚೇತರಿಸಿಕೊಳ್ಳುತ್ತದೆ ಎಂದುಕೊಳ್ಳುವಾಗಲೇ ಮತ್ತೊಮ್ಮೆ ಕೊರೋನಾ ತನ್ನ ಅಟ್ಟಹಾಸ ಮೆರೆಯಿತು. ಚಿತ್ರರಂಗದ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಯಿತು.

ಚಿತ್ರರಂಗದ ಆಧಾರಸ್ತಂಭಗಳೆಂದೇ ಭಾವಿಸಲಾಗಿರುವ ಸ್ಟಾರ್ ನಟರು ಗೂಡು ಸೇರಿಕೊಂಡರು. ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳಲಿಲ್ಲ. ಸ್ಟಾರ್ ನಟರು ಹೀಗೆ ಖಾಲಿ ಕೂತಿರುವುದೂ ಸೇರಿದರೆ, ಕಳೆದ ಒಂದೂವರೆ ವರ್ಷದಲ್ಲಿ ಕನ್ನಡ ಚಿತ್ರರಂಗ ಸುಮಾರು 1000 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿದೆ ಎನ್ನುವುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಲೆಕ್ಕಾಚಾರ. ಒಂದು ವರ್ಷಕ್ಕೆ 200ಕ್ಕಿಂತ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡುವ ಕನ್ನಡ ಚಿತ್ರರಂಗದಲ್ಲಿ ಚಿತ್ರವೊಂದರ ಸರಾಸರಿ ವೆಚ್ಚ ರೂ.4 ಕೋಟಿ ಎಂದು ಭಾವಿಸಿದರೂ, ಚಿಕ್ಕ ಹಾಗೂ ದೊಡ್ಡ ಬಜೆಟ್‍ನ ಚಿತ್ರಗಳೂ ಸೇರಿದಂತೆ ಅನುಭವಿಸಿದ ಒಟ್ಟು ವಹಿವಾಟಿನ ನಷ್ಟ ಸಾವಿರ ಕೋಟಿ ಎನ್ನುವುದು ವಾಣಿಜ್ಯ ಮಂಡಳಿಯ ಅನಿಸಿಕೆ.

ಈ ಪ್ರಮಾಣದ ನಷ್ಟದಿಂದ ಕನ್ನಡ ಚಿತ್ರರಂಗ ಹತ್ತು ವರ್ಷ ಹಿಂದಕ್ಕೆ ಚಲಿಸಿದೆ. ಮತ್ತೆ ಕನ್ನಡ ಚಿತ್ರರಂಗ ಮೊದಲಿನಂತಾಗಲು ತುಂಬಾ ಕಾಲಾವಕಾಶದ ಅಗತ್ಯವಿದೆ” ಎನ್ನುವುದು ಪ್ರದರ್ಶಕ ವಲಯದ ಪ್ರತಿನಿಧಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಚಂದ್ರಶೇಖರ್ ಅವರ ಭಾವನೆ.

ಚಿತ್ರರಂಗದ ಸಂಕಷ್ಟ ಕಾಲದಲ್ಲಿ ದೇಶದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಸರ್ಕಾರಗಳು ನೆರವಿಗೆ ಬಂದ ರೀತಿ, ಕರ್ನಾಟಕ ಸರ್ಕಾರ ಕನ್ನಡ ಚಿತ್ರರಂಗದ ನೆರವಿಗೆ ಬರಲಿಲ್ಲ” ಎಂಬುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಕೊರಗು. ಚಿತ್ರರಂಗದ ನಾಯಕತ್ವ ವಹಿಸಿಕೊಂಡ ಜನಪ್ರಿಯ ನಟ ಡಾ.ಶಿವರಾಜ್‍ಕುಮಾರ್ ನೇತೃತ್ವದ ನಿಯೋಗದ ಮನವಿಗಾಗಲಿ, ಪಕ್ಷದ ನಾಯಕರು ಚಿತ್ರರಂಗದ ಪ್ರಮುಖರೂ ಆದ ತಾರಾ ಅನುರಾಧ, ಶ್ರುತಿ, ಜಗ್ಗೇಶ್, ಮುನಿರತ್ನ ಅವರ ಪ್ರಯತ್ನಕ್ಕಾಗಲಿ ಕರ್ನಾಟಕ ಸರ್ಕಾರ ಸೊಪ್ಪು ಹಾಕದಿರುವುದು ಕನ್ನಡ ಚಿತ್ರರಂಗಕ್ಕೆ ನಿರಾಸೆಯನ್ನುಂಟು ಮಾಡಿದೆ.

ಕೊನೆಗೆ ಸರ್ಕಾರ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದಾಗ ಕೋವಿಡ್ ಸಂಕಷ್ಟ ಕರಗಿ, ಸ್ಟಾರ್ ಚಿತ್ರಗಳ ಬಿಡುಗಡೆಯಿಂದ ಕನ್ನಡ ಚಿತ್ರರಂಗ ಚೇತರಿಸಿಕೊಳ್ಳುತ್ತದೆ ಎನ್ನುತ್ತಿರುವಾಗಲೇ ಮೂರನೇ ಕೋವಿಡ್ ಅಲೆಯ ಭೀತಿ ಸಿನಿಮಾರಂಗವನ್ನೂ ಕಾಡತೊಡಗಿತು. ಸ್ಟಾರ್ ನಟರು ತಾವು ಆರಂಭಿಸಿದ ಚಿತ್ರಗಳ ಚಿತ್ರೀಕರಣವನ್ನು ಚುರುಕುಗೊಳಿಸಿದರು. ಆದರೆ ಅದೃಷ್ಟವಶಾತ್ ಹಾಗೇನೂ ಆಗಲಿಲ್ಲ. ‘ಕೋಟಿಗೊಬ್ಬ-3’, ‘ಸಲಗ’ ಬಿಡುಗಡೆಯಾಗಿ ‘ಚಿತ್ರಮಂದಿರ ತುಂಬಿದೆ’ ಎಂಬ ಫಲಕ ಚಿತ್ರಮಂದಿರದ ಮುಂದೆ ತೂಗಾಡಿದಾಗ ಚಿತ್ರರಂಗ ನಿಟ್ಟುಸಿರು ಬಿಟ್ಟಿತು. ಆದರೆ, ವಾರಾಂತ್ಯದ ಲಾಕ್ ಡೌನ್ ಹಾಗೂ ಸರ್ಕಾರ ರಾತ್ರಿ ಕಫ್ರ್ಯೂ ತೆರವು ಮಾಡಲು ತಡವಾದ ಕಾರಣ, ಗಲ್ಲಾ ಪೆಟ್ಟಿಗೆ ಸಂಗ್ರಹಿಸಬೇಕಾದಷ್ಟು ಹಣ ಸಂಗ್ರಹಿಸಲಿಲ್ಲ ಎನ್ನುವುದು ಸಿನಿಮಾ ಆರ್ಥಿಕ ತಜ್ಞರ ಲೆಕ್ಕಾಚಾರ.

ಆದರೆ ಚಿತ್ರ ನಿರ್ಮಾಣ ಮಾಡಿ, ಹಣ ಹೂಡಿ ಬಡ್ಡಿ ಕಟ್ಟುವುದಕ್ಕಿಂತ ಚಿತ್ರ ಬಿಡುಗಡೆ ಮಾಡುವ ರಿಸ್ಕ್ ತೆಗೆದುಕೊಳ್ಳುವುದು ಕ್ಷೇಮ. ‘ಇತ್ತ ದರಿ ಅತ್ತ ಪುಲಿ’ ಎಂದು ಲೆಕ್ಕಾಚಾರ ಹಾಕಿದರೆ, ಬೀದಿಗೆ ಬೀಳುವುದು ಖಂಡಿತ ಎಂದು ನಿರ್ಧರಿಸಿದ ನಿರ್ಮಾಪಕರು ಸಿದ್ಧಪಡಿಸಿದ ಚಿತ್ರಗಳನ್ನು ಬಿಡುಗಡೆ ಮಾಡುವ ‘ಅಪಾಯ’ವನ್ನೇ ಅನಿವಾರ್ಯವಾಗಿ ಆಯ್ಕೆ ಮಾಡಿಕೊಂಡರು. ಈ ಕಾರಣದಿಂದಾಗಿ ನವೆಂಬರ್ 26ರ ತನಕ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 17ನ್ನು ದಾಟಿದೆ.

ಈಗಾಗಲೇ ಬಿಡುಗಡೆಯಾಗಿರುವ, ಬಿಡುಗಡೆಯಾಗಲಿರುವ ಚಿತ್ರಗಳಲ್ಲಿ ಕನಿಷ್ಠ ಮೂರ್ನಾಲ್ಕು ಚಿತ್ರಗಳು 50 ದಿನ ಪ್ರದರ್ಶನದ ಗಡಿ ದಾಟಿದರೆ, ಜನವರಿಯಿಂದ ಚಿತ್ರೋದ್ಯಮ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುವುದು ಚಿತ್ರ ಪ್ರದರ್ಶಕ ವಲಯದ ಅನಿಸಿಕೆ.

ಈ ನಡುವೆ ಪ್ರದರ್ಶಕ ವಲಯ ಕೂಡ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದಲ್ಲಿರುವ ಒಟ್ಟು 630 ಏಕ ತೆರೆಯ ಚಿತ್ರಮಂದಿರಗಳ ಪೈಕಿ, 150 ಚಿತ್ರಮಂದಿರಗಳು, ವಾಣಿಜ್ಯ ತೆರಿಗೆ, ಜಿಎಸ್‍ಟಿ ಮನರಂಜನಾ ತೆರಿಗೆ, ವಿದ್ಯುತ್ ಬಿಲ್, ಕೆಲಸಗಾರರ ವೇತನ ಶೇಕಡವಾರು ಕಲೆಕ್ಷನ್ ಹಂಚಿಕೆ ಸಮಸ್ಯೆಗಳಿಂದ ಬಾಗಿಲು ಮುಚ್ಚುವ ಸ್ಥಿತಿ ತಲುಪಿವೆ. ಉಳಿದಂತೆ ಇನ್ನೂ 75 ಚಿತ್ರಮಂದಿರಗಳು ಬಾಗಿಲು ತೆರದೇ ಇಲ್ಲ. ಪ್ರತಿ ಚಿತ್ರಮಂದಿರದ ವಾರ್ಷಿಕ ವಹಿವಾಟು ಎರಡು ಕೋಟಿ ರೂಪಾಯಿಗಳು. ರಾಜ್ಯದಲ್ಲಿರುವ 260 ಮಲ್ಟಿಪ್ಲೆಕ್ಸ್ ತೆರೆಗಳ ಪೈಕಿ 150ರಲ್ಲಿ ಮಾತ್ರ ಚಿತ್ರ ಪ್ರದರ್ಶನ ಕಾಣುತ್ತಿದೆ. ಪ್ರದರ್ಶನ ಕ್ಷೇತ್ರದ ವಹಿವಾಟು ಲೆಕ್ಕ ಹಾಕಿದರೆ ಅದೇ 1200 ಕೋಟಿ ರೂ. ದಾಟುತ್ತದೆ. ಸರ್ಕಾರಕ್ಕೆ ಈ ಬಾಬ್ತಿನಿಂದ ರೂ. 216 ಕೋಟಿ ಸರಾಸರಿ ಜಿಎಸ್‍ಟಿ ಪಾವತಿಯಾಗುತ್ತದೆ.

ಈ ಚಿತ್ರಮಂದಿರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಂಖ್ಯೆಯೇ 12,000ವೆಂದರೆ ಕನ್ನಡ ಚಿತ್ರರಂಗದ ಮೇಲೆ ಅವಲಂಬಿತವಾಗಿರುವ ಕಾರ್ಮಿಕರ ಸಂಖ್ಯೆ ಪ್ರತ್ಯೇಕವಾಗಿಪರೋಕ್ಷವಾಗಿ ಹತ್ತು ಸಾವಿರ ದಾಟುತ್ತದೆ ಎಂಬುದು ಉದ್ಯಮದ ಲೆಕ್ಕಾಚಾರ. ಅಂದರೆ ಕನ್ನಡ ಚಿತ್ರರಂಗಕ್ಕೆ ಬಡಿದ ಕೋವಿಡ್ ಅಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು ಈ 10,000 ಕುಟುಂಬಗಳೆನ್ನುವುದು ಗಮನಾರ್ಹ ಸಂಗತಿ. ಕೋವಿಡ್ ಪೀಡಿತ ಎಲ್ಲ ಕ್ಷೇತ್ರಗಳ ನೊಂದವರ ಸಹಾಯಕ್ಕೆ ಧಾವಿಸಿದ ನಾಟಕವಾಡಿದ ಕರ್ನಾಟಕ ಸರ್ಕಾರ ಸಿನಿಮಾ ಕ್ಷೇತ್ರವನ್ನು ನಿರ್ಲಕ್ಷಿಸಿದ್ದು ದುರ್ದೈವ. ಆದರೆ ಇಂಥ ಸ್ಥಿತಿಯಲ್ಲಿ ಕೊಂಚ ಸ್ಥಿತಿವಂತರಾದ ಚಿತ್ರರಂಗದ ಗಣ್ಯರು ಅಲ್ಪಸ್ವಲ್ಪ ನೆರವು ಚಾಚಿದ್ದೆತುಸು ನೆಮ್ಮದಿಯ ಸಂಗತಿ.

ಭಜರಂಗಿ-2 ಬಿಡುಗಡೆಯಾಗಿಕನ್ನಡ ಚಿತ್ರರಂಗದ ಸ್ಥಿತಿ ಸುಧಾರಿಸಿ ಎಲ್ಲವೂ ಮೊದಲಿನಂತಾಗುತ್ತದೆ ಎನ್ನುವಷ್ಟರಲ್ಲಿ, ಕನ್ನಡ ಚಿತ್ರರಂಗದ ಆಧಾರಸ್ತಂಭಗಳಲ್ಲೊಂದಾದ ಪುನೀತ್ ರಾಜ್‍ಕುಮಾರ್ ಎಂಬ ಆಳಕ್ಕೆ ಬೇರುಬಿಟ್ಟ ಒಳ್ಳೆ ಮರವನ್ನು ಜವರಾಯ ಕಡಿದೊಯ್ದ. ಹುಟ್ಟಿದ ಆರು ತಿಂಗಳಿಗೇ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡ ಪುನೀತ್ (ಅಂದಿನ ಲೋಹಿತ್ ರಾಜ್‍ಕುಮಾರ್), ಉಳಿದ ನಲವತ್ತೈದು ವರ್ಷವೂನಟನಾಗಿ, ನಿರ್ಮಾಪಕನಾಗಿ, ಹಿನ್ನೆಲೆ ಗಾಯಕನಾಗಿ, ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕಾರಣರಾದರು. ಪುನೀತ್ ರಾಜ್‍ಕುಮಾರ್ ಸಾವಿನ ಸುದ್ದಿ, ಅಣ್ಣ ಶಿವರಾಜ್‍ಕುಮಾರ್‍ಗೆ ತಲುಪಿದ್ದು, ಭಜರಂಗಿ-2 ಮೊದಲ ದಿನದ ಮೊದಲ ಪ್ರದರ್ಶನದ ಸಂದರ್ಭದಲ್ಲಿ.

ಚೇತರಿಕೆಯ ಹಾದಿಯಲ್ಲಿದ್ದ ಕನ್ನಡ ಚಿತ್ರರಂಗ, ಈ ಆಘಾತದಿಂದ ಚೇತರಿಸಿಕೊಳ್ಳುವುದು ಸುಲಭದ ಮಾತಲ್ಲ. ತಮ್ಮ 42ನೇ ವಯಸ್ಸಿನಲ್ಲಿ ಪುನೀತ್ ಅಭಿನಯದಿಂದ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟರು. ಪಿಆರ್‍ಕೆ (ಪಾರ್ವತಮ್ಮ ರಾಜ್‍ಕುಮಾರ್) ಪ್ರೊಡಕ್ಷನ್ ಹುಟ್ಟು ಹಾಕಿದರು. ಹೊಸತೇನಾದರೂ ಮಾಡಬೇಕೆಂಬ ಕನಸಿನ ತಹತಹದ ಒಂದು ಮುಖವಷ್ಟೇ ಇದು. ಪುನೀತ್‍ಗೆ ಹೊಸ ಪ್ರದರ್ಶನ ಮಾಧ್ಯಮ ಒಟಿಟಿ (ಒವರ್ ದಿ ಟಾಪ್)ಯನ್ನು ಸಮರ್ಥವಾಗಿ ಬಳಸಿಕೊಳ್ಳುವ ದೂರದೃಷ್ಟಿ ಇತ್ತು. ಅವರ ಪಿಆರ್‍ಕೆ ಸಂಸ್ಥೆಯಡಿಯಲ್ಲಿ ಇದುವರೆಗೆ ಬಿಡುಗಡೆಯಾದ ಮೂರು ಚಿತ್ರಗಳಲ್ಲಿ, ಎರಡು ಅಮೆಜಾನ್ ಪ್ರೈಮ್‍ನಲ್ಲಿ ನೇರವಾಗಿ ಬಿಡುಗಡೆಯಾಗಿವೆ. ಕನ್ನಡದ ಉಳಿದ ನಿರ್ಮಾಣ ಸಂಸ್ಥೆಗಳಿಗೆ ಹೋಲಿಸಿದರೆ ಪಿಆರ್‍ಕೆ ನಿರ್ಮಾಣ ಸಂಸ್ಥೆಯ ಮೇಲೆ ಒಟಿಟಿ ವೇದಿಕೆಗಳಿಗೆ ನಂಬಿಕೆ ಭರವಸೆ ಇತ್ತು. ಪುನೀತ್ ಗೈರು ಹಾಜರಿಯಲ್ಲಿ, ಮಾರುಕಟ್ಟೆ ಸಾಧ್ಯತೆ, ಗುಣಮಟ್ಟದ ಕಥೆ ಎರಡನ್ನೂ ಆ ಸಂಸ್ಥೆ ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

*

ಇಗೋ ಹೀಗಿದೆ ಕನ್ನಡ ಚಿತ್ರರಂಗ!

ಎಂಬತ್ತಾರು ವರ್ಷದ ಕನ್ನಡ ಚಿತ್ರರಂಗ ಆರಂಭದಿಂದಲೂ ತನ್ನತನವನ್ನು ಕಂಡುಕೊಳ್ಳಲು ಹೆಣಗಾಡುತ್ತಿದೆ. ಅಂದಿನ ದಕ್ಷಿಣ ಭಾರತದ ಒಂದರ್ಥದ ಚಿತ್ರನಗರಿ ಮದ್ರಾಸ್‍ನ್ನು ಅವಲಂಬಿಸಿದ ಕನ್ನಡ ಚಿತ್ರರಂಗ ಕರ್ನಾಟಕಕ್ಕೆ ಸ್ಥಳಾಂತರಗೊಂಡಾಗಿನಿಂದಲೂ ಈ ಪ್ರಕ್ರಿಯೆ ನಡೆದುಕೊಂಡೇ ಬಂದಿದೆ.

ಒಂದು ರೀತಿಯ ರಕ್ಷಣೆಯ ಕವಚ ಹೊದ್ದುಕೊಂಡೇ ನಡೆದು ಬಂದಿರುವ ಕನ್ನಡ ಚಿತ್ರರಂಗ, ಅಂದಿನ ಕರ್ನಾಟಕ ಸರ್ಕಾರಗಳ ಉದಾರ ನೀತಿ, ಅಲಿಖಿತ ಡಬ್ಬಿಂಗ್ ಹಾಗೂ ಚಿತ್ರ ಬಿಡುಗಡೆಯ ಮೇಲಿನ ಮಿತಿಗಳಿಂದಾಗಿ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿತ್ತು. ಆದರೆ, ಭಾರತದ ಪೈಪೋಟಿ ಆಯೋಗ (omಠಿಣಚಿಣಟಿ ಟಿ oಜಿ ಟಿಜಚಿ) ಎದುರು ಕಾನೂನು ಹೋರಾಟದಲ್ಲಿ ಸೋತ ನಂತರ ಸಂಪೂರ್ಣವಾಗಿ ಪರಭಾಷೆಯಷ್ಟೇ ಅಲ್ಲ. ಪರದೇಶದ ಚಿತ್ರಗಳೊಂದಿಗೆ ಪೈಪೋಟಿ ನಡೆಸಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಎಪ್ಪತ್ತರ ದಶಕದಲ್ಲಿ ಹೊಸ ಅಲೆಯ ಚಿತ್ರಗಳ ಮೂಲಕ, ರಾಷ್ಟ್ರಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನತನವನ್ನು ಸಾಬೀತುಪಡಿಸಿದ ಕನ್ನಡ ಚಿತ್ರಗಳು 90ರ ದಶಕದ ತನಕವೂ ಹೊಸ ಅಲೆಸಮಾನಾಂತರ ಚಿತ್ರಗಳ ಬೆಳೆ ತೆಗೆದದ್ದು ಕನ್ನಡ ಚಿತ್ರರಂಗದ ಚರಿತ್ರೆಯ ಸುವರ್ಣಯುಗವೆನ್ನಬಹುದು.

ಪರಭಾಷೆ ಚಿತ್ರಗಳಿಂದ ಯಶಸ್ಸಿನಿಂದ ಉತ್ತೇಜಿತವಾಗಿ, ಅದರ ಲಾಭದ ಸಾಧ್ಯತೆಯನ್ನರಿತ ಕನ್ನಡ ಚಿತ್ರರಂಗ ಅದಕ್ಕೊಲಿದದ್ದು ಆಶ್ಚರ್ಯದ ಸಂಗತಿ ಏನಲ್ಲ. ಕನ್ನಡ ಚಿತ್ರರಂಗದ ಅಳಿವುಉಳಿವಿಗಾಗಿ ಈ ಹಾದಿ ಎಂಬೆಲ್ಲ ವಾದಗಳು ಆಗ ಚರ್ಚೆಗೆ ಬಂದುಗುಣಮಟ್ಟದ ಕುಸಿತ ಅಮುಖ್ಯವಾಯಿತು. ಇಂದು ತನ್ನ ಚರಿತ್ರೆಯನ್ನು ತಾನೇ ಮರೆತಂತೆ ಕನ್ನಡ ಚಿತ್ರರಂಗ ‘ಸ್ಟಾರ್’ ಚಿತ್ರಗಳನ್ನು ನಿರ್ಮಿಸುವದರಲ್ಲಿ ಮಗ್ನವಾಗಿದೆ. ಹೊಸ ಶತಮಾನದಲ್ಲಿ ‘ಮುಂಗಾರು ಮಳೆ’ ಯಶಸ್ಸಿನ ನಂತರ ಹೊಸ ಹಾದಿ ಕಂಡುಕೊಳ್ಳುವ ಭರವಸೆ ಮೂಡಿಸಿದರೂ, ಅವೆಲ್ಲವೂ ಚಿತ್ರರಂಗದ ವ್ಯಾಕರಣವನ್ನು ತಂತ್ರಜ್ಞಾನದ ಬೆಂಬಲದಿಂದ ಒಡೆದು ‘ನವ’ ಸಮಾನಾಂತರ ಚಿತ್ರಗಳೆಂಬ ಅಥವ ಕಲಾತ್ಮಕವಾಣಿಜ್ಯಾತ್ಮಕ ಚಿತ್ರಗಳ ಸಮಪಾಕದ ಸೇತುಚಕ್ರ (ಃಖIಆಉಇ ಈIಐಒ) ಎಂಬ ಹೆಸರು ಪಡೆದುಕೊಂಡು ನಿಂತ ನೀರಾಗಿದೆಯೇ? ಎಂಬ ಅನುಮಾನಕ್ಕೆ ಕಾರಣವಾಗಿದೆ.

ಕಳೆದೆರಡು ವರ್ಷಗಳಲ್ಲಿ ಭಾರತೀಯ ಚಿತ್ರರಂಗವೆಂದರೆ ಬಾಲಿವುಡ್ ಚಿತ್ರರಂಗವೆಂಬ ನಂಬಿಕೆಯನ್ನು ಸುಳ್ಳು ಮಾಡಿ, ವಿವಿಧ ಭಾಷೆಯ ಚಿತ್ರಗಳು ತಮ್ಮ ಭಾಷೆ, ಸಂಸ್ಕøತಿಯನ್ನು ಮೆರೆಸುತ್ತಿವೆ. ಆದರೆ ಕನ್ನಡ ಚಿತ್ರರಂಗ ಮಾತ್ರ ತನ್ನ ಹಳೆಯ ಜಾಡಿನಿಂದ ಹೊರಬಂದಿಲ್ಲ. ವರ್ಷಕ್ಕೆ ಹೆಚ್ಚೆಂದರೆ ಇಪ್ಪತ್ತು ಚಿತ್ರಗಳನ್ನು ನಿರ್ಮಾಣ ಮಾಡುವ ಆಸ್ಸಾಮಿ ಚಿತ್ರರಂಗ ಕೂಡ ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿದೆ. ಬಂಗಾಳಿ, ಮರಾಠಿ, ತಮಿಳು, ತೆಲುಗು, ಮಲೆಯಾಳಂ ಚಿತ್ರಗಳು ತಮ್ಮ ಮಣ್ಣಿನ ವಾಸನೆಯ, ನೆಲದ ಕಥೆಗಳನ್ನು, ಹೊಸ ಶೈಲಿಯಲ್ಲಿ ಹೊಸ ಮಾಧ್ಯಮಕ್ಕೆ ಅನುಕೂಲವಾಗುವಂತೆ ಚಿತ್ರ ಮಾಡುತ್ತಿರುವಾಗ, ಕನ್ನಡ ಚಿತ್ರರಂಗ ಮಾತ್ರ ‘ತನ್ನತನ’ವನ್ನು ಕಂಡುಕೊಳ್ಳಲು ಹೆಣಗಾಡುತ್ತಿದೆ. ತಮಿಳು, ಮಲೆಯಾಳಂ, ಆಸ್ಸಾಮಿ, ಬಂಗಾಳಿ ಚಿತ್ರಗಳನ್ನು ಮೀರಿಸುವ ಕಥಾ ಜಗತ್ತು ಕನ್ನಡದ್ದು. ಹಾಗೆ ನೋಡಿದರೆ ಬಂಡವಾಳದ ಕೊರತೆಯೂ ಇಲ್ಲ. ಕನ್ನಡಿಗರು ಕನ್ನಡ ಸಿನಿಮಾ ನೋಡುವುದಿಲ್ಲ ಎಂದು ಕೊರಗುವಂತೆಯೂ ಇಲ್ಲ. ಏಕೆಂದರೆ ಈಗ ಒಟಿಟಿ ನೆರವಿದೆ. ಇಲ್ಲಿಯೂ ಭಾಷೆಯ ಗಡಿಯನ್ನು ದಾಟುವ ಅಗಾಧ ಸಾಧ್ಯತೆಗಳಿವೆ.

ದೇಶದ ಬೇರೆ ಬೇರೆ ಕೇಂದ್ರಗಳಲ್ಲಿ ಕನ್ನಡ ಚಿತ್ರ ಬಿಡುಗಡೆಯಾಗುವುದಿಲ್ಲ ಎಂದು ಕೊರಗುವುದೂ ಬೇಕಿಲ್ಲ. ಮಾರುಕಟ್ಟೆ ದೃಷ್ಟಿಯ ಅಂದಿನ ನೆವವನ್ನು ಇಂದು ನೀಡಲು ಸಾಧ್ಯವಿಲ್ಲ. ಈಗ ಇರುವುದು ಒಂದೇ ದಾರಿ ಗುಣಮಟ್ಟ ಹಾಗೂ ಬದುಕಿಗೆ ಕನಿಷ್ಠ ಹತ್ತಿರವಾದರೂ ಇರುವ ಕಥೆಯೊಂದಿಗೆ ಪೈಪೋಟಿಗಿಳಿಯುವುದು. ಪ್ರೇಕ್ಷಕ ಈಗ ವಿಶ್ವ ಮಾನವ. ವಿಶ್ವ ಮಾರುಕಟ್ಟೆ. ಉಪ ಶೀರ್ಷಿಕೆಯಲ್ಲಿ ಸಿನಿಮಾ ನೋಡುವುದು ಅವರಿಗೀಗ ಸಾಧ್ಯ.

ಆದರೆ ಒಟಿಟಿ ಲೋಕದೊಳಕ್ಕೆ ಪ್ರವೇಶಿಸಿದರೆ ನೇರವಾಗಿ ಈ ವೇದಿಕೆಯಲ್ಲಿ ಬಿಡುಗಡೆಯಾಗಿರುವ ಕನ್ನಡ ಚಿತ್ರಗಳ ಸಂಖ್ಯೆ ಬೆರಳೆಣಿಕೆಯಷ್ಟು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೇಲೆ ಒಟಿಟಿ ಪ್ರವೇಶಿಸಿದ ಸಂಖ್ಯೆ ನೂರನ್ನು ದಾಟಬಹುದಷ್ಟೆ. ನೆರೆಹೊರೆ ಭಾಷೆಯ ಚಿತ್ರರಂಗಕ್ಕೆ ಹೋಲಿಸಿದರೆ ಈ ಸಂಖ್ಯೆ ತೀರಾ ಕಡಿಮೆ. ಮಲೆಯಾಳಂ ಭಾಷೆ ಗೊತ್ತಿಲ್ಲದವರೂ ಕೂಡ, ಮಲೆಯಾಳಂ ಚಿತ್ರಗಳನ್ನು ಒಂದರ ಹಿಂದೆ ಒಂದರಂತೆ ನೋಡುತ್ತಿರುವುದು ಬದಲಾದ ಪ್ರೇಕ್ಷಕ ಪ್ರಭುಗಳಿಗೊಂದು ನಿದರ್ಶನ. ಇದು ಹೊಸ ಕಾಲಘಟ್ಟದಲ್ಲಿ ಪ್ರಾದೇಶಿಕ ಭಾಷೆಗಳಿಗೆ ದಕ್ಕಿದ ಶಕ್ತಿಯೆಂದರೆ ಅತಿಶಯೋಕ್ತಿ ಅಲ್ಲ. ಬದುಕಿಗೆ ಹತ್ತಿರವಾದ ಸಂಗತಿಯಗಳನ್ನು ತುಳಿತಕ್ಕೊಳಗಾದ ಸಮುದಾಯದ ಅಸಮಾನತೆ, ಅವಮಾನಗಳನ್ನು ಮುಖ್ಯವಾಹಿನಿಗೆ ತಂದು, ಆ ಕ್ಷೇತ್ರದ ಪ್ರೇಕ್ಷಕನನ್ನು ಸೆಳೆದದ್ದು ಈ ಒಟಿಟಿಯಿಂದ ಸಾಧ್ಯವಾಗಿದೆ

ಎನ್ನುವುದು ನಿರ್ವಿವಾದ.

ಬಹುರಾಷ್ಟ್ರೀಯ ಕಂಪನಿಗಳ ಒಟಿಟಿ ವೇದಿಕೆಗಳಲ್ಲಿ ದೇಸಿ ಭಾಷೆಗೆ ಸಿಕ್ಕುವ ಅವಕಾಶದಲ್ಲಿ ಕನ್ನಡಕ್ಕೆ ಸಿಕ್ಕಿರುವುದು ಕೇವಲ ಶೇ. 5ರಷ್ಟು ಮಾತ್ರ. ಅದೂ ಕೂಡ ದೊಡ್ಡ ಬ್ಯಾನರ್, ಸ್ಟಾರ್, ಬಜೆಟ್‍ಗಳ ಚಿತ್ರಗಳಿಗೆ ಮಾತ್ರ ಅವಕಾಶ ಸಿಕ್ಕಿದೆ. ಒಟಿಟಿ ವೇದಿಕೆಯಲ್ಲಿನ ಈ ಬೆಳವಣಿಗೆಕನ್ನಡದ ಸ್ಥಾನಮಾನವನ್ನು ಸೂಚಿಸುತ್ತದೆ.
ಒಂದಂತೂ ನಿಜ. ಕನ್ನಡದ ಪ್ರಸ್ತುತ ನಿರ್ಮಾಣವಾಗುತ್ತಿರುವ ಚಿತ್ರಗಳಲ್ಲಿ ಕನ್ನಡತನ ಕಾಣುವುದಿಲ್ಲ. ಕಥಾ ವಸ್ತುಗಳು ಕನ್ನಡ ನೆಲದಿಂದ ಹುಟ್ಟುತ್ತಿಲ್ಲ. ಕನ್ನಡದ ಅಸ್ಮಿತೆಯನ್ನು ನಿರ್ದೇಶಕರು ಕೈಗೆತ್ತಿಕೊಂಡಂತೆ ಕಾಣುತ್ತಿಲ್ಲ. ಹಾಗೆ ಎತ್ತಿಕೊಂಡಿದ್ದರೆ ದಲಿತ, ರೈತ, ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧದ ಐತಿಹಾಸಿಕ ಹೋರಾಟಗಳು ಏಕೆ ಕಥಾ ವಸ್ತುಗಳಾಗುತ್ತಿಲ್ಲ. ಮರಾಠಿ, ಆಸ್ಸಾಮಿ, ಬಂಗಾಳಿ, ಹಿಂದಿ ಚಿತ್ರಗಳು ಹಿಂದೆ ಸ್ಫೂರ್ತಿಯಾದಂತೆ, ಇಂದೂ ಆಗಬಹುದು. ಆದರೆ ಆಗುತ್ತಿಲ್ಲ ಎನ್ನುವುದಂತೂ ಸ್ಪಷ್ಟ. ರೀಮೇಕ್, ಡಬ್ಬಿಂಗ್ಸ್ಫೂರ್ತಿಯಾಧಾರಿತ ಚಿತ್ರಗಳಿಗೆ ಶರಣಾಗಿರುವ ಕನ್ನಡ ಚಿತ್ರರಂಗ ಈ ರೀತಿಯ ಹುಡುಕಾಟವನ್ನು ಕೈ ಬಿಟ್ಟಂತೆ ಕಾಣುತ್ತಿದೆ. ಒಟ್ಟಾರೆಯಾಗಿ ಕನ್ನಡ ಚಿತ್ರರಂಗಕ್ಕೆ ಸಂಕ್ರಮಣದ ಸ್ಥಿತಿ ಇದು.

Leave a Reply

Your email address will not be published.