ಸಮಾಜದಲ್ಲಿ ಬೇರುಬಿಟ್ಟ ಮೌಢ್ಯಗಳು

ಮನುಷ್ಯನ ಬದುಕು ಅವನ ಹಸ್ತರೇಖೆಗಳಂತೆ ನಡೆಯುವುದಿಲ್ಲ, ಅಥವಾ ಜ್ಯೋತಿಷಿಗಳು ಉರುಳಿಸುವ ದಾಳಗಳಂತೆ ನಡೆಯುವುದಿಲ್ಲ. ಜೀವನವನ್ನು ಆತ್ಮವಿಶ್ವಾಸದಿಂದ, ಸ್ವಸಾಮಥ್ರ್ಯದಿಂದ ವೈಚಾರಿಕ ನೆಲೆಗಟ್ಟಿನಲ್ಲಿ ರೂಪಿಸಿಕೊಳ್ಳಬೇಕೇ ಹೊರತು ನಂಬಿಕೆ ಹಾಗು ಅದೃಷ್ಟ ಬಲದಿಂದಲ್ಲ.

ಎಲ್.ಚಿನ್ನಪ್ಪ, ಬೆಂಗಳೂರು

ಇಂದಿನ ಮುಂದುವರೆದ ಆಧುನಿಕ ಯುಗದಲ್ಲೂ ಕೆಲವೊಂದು ಅವೈಜ್ಞಾನಿಕ ಆಚರಣೆಗಳು ಅಸ್ತಿತ್ವದಲ್ಲಿದ್ದು, ಮೌಢ್ಯದ ರಾಢಿಯಲ್ಲಿ ಇಂದು ವೈಚಾರಿಕತೆ ಮುದುಡಿದೆ. ಸಂಕೀರ್ಣವಾದ ಸಮಾಜದಲ್ಲಿ ಮೌಢ್ಯದ ಬೇರುಗಳು ಆಳವಾಗಿವೆ. ಜನರಲ್ಲಿ ಮೌಢ್ಯದ ಬಗ್ಗೆ ಸಾಕಷ್ಟು ಅರಿವು ಇದ್ದರೂ ಕೆಲವೊಂದು ಅವೈಜ್ಞಾನಿಕ ನಂಬಿಕೆಗಳಿಗೆ ವಧಾ ಪ್ರಾಣಿಗಳಂತೆ ಜೋತು ಬೀಳುವವರೇ ಹೆಚ್ಚು. ತಾವು ಹಿಂದಿನಿಂದಲೂ ನಂಬಿದಂತೆ ನಡೆದುಕೊಳ್ಳುವ ಪದ್ಧತಿಗೆ ಬದ್ಧರಾಗಿಯೇ ಅಂಟಿಕೊಂಡಿದ್ದಾರೆ. ಇದರಲ್ಲಿ ತಿಳಿದವರು, ತಿಳಿಯದವರು ಎಂಬ ಭೇದವಿಲ್ಲ, ಎಲ್ಲರೂ ಒಂದೇ ದೊಣಿಯಲ್ಲಿ ಸಾಗುವವರೇ.

ಕಾಯಿಲೆ ಕಸಾಲೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ವಾಮಾಚಾರಗಳ ಮೊರೆ ಹೋಗುವುದು, ಅವುಗಳ ನಿವಾರಣೆಗಾಗಿ ಕೊರಳಲ್ಲಿ, ತೋಳುಗಳಲ್ಲಿ ತಾಯಿತಗಳನ್ನು ಕಟ್ಟಿಸಿಕೊಳ್ಳುವುದು, ಕಣ್ಣಿಗೆ ಕಾಣದ ನಿಧಿ ನಿಕ್ಷೇಪಗಳಿಗೆ ಆಕರ್ಷಿತರಾಗಿ ಆಮಿಷಕ್ಕೆ ಒಳಗಾಗಿ ವಾಮಾಚಾರಗಳನ್ನು ಮಾಡಿಸುವುದು, ಮುಂತಾದ ಅವೈಜ್ಞಾನಿಕ ಪದ್ಧತಿಗಳು ಇನ್ನೂ ರೂಢಿಯಲ್ಲಿವೆ. ದೇವರ ಹೆಸರಿನಲ್ಲಿ ಪೊಳ್ಳು ಭರವಸೆ ನೀಡಿ ಜನರನ್ನು ವಂಚಿಸುವುದು, ವಾಮಾಚಾರಗಳನ್ನು ಮಾಡಿಸಲು ಹೋಗಿ ಮೋಸಕ್ಕೊಳಗಾಗುವುದು. ಹೀಗೆ ಯಾವುದನ್ನೋ ನಂಬಿ ಹಣ ಕಳೆದುಕೊಂಡ ಅಮಾಯಕರ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಆಗಾಗ್ಗೆ ಓದುತ್ತಿದ್ದೇವೆ. ಅಷ್ಟಾಗಿಯೂ ಜನರಲ್ಲಿ ಇನ್ನೂ ಅವುಗಳ ಬಗ್ಗೆ ಅರಿವು ಮೂಡದಿರುವುದು ವಿಪರ್ಯಾಸವೇ ಹೌದು.

ಇದರಿಂದ ಮುಗ್ಧರು ಶೋಷಿತರಾದರೆ ಜಾಣರು ಜಾಗೃತರಾಗುತ್ತಿದ್ದಾರೆ. ಸಮಾಜದ ಎಲ್ಲಾ ಧರ್ಮದವರ ಸಾಂಸ್ಕøತಿಕ ಆಚರಣೆಗಳ ಜೊತೆಗೆ ಮೌಢ್ಯವೂ ಸಾಂಗೋಪಾಂಗವಾಗಿ ಥಳಕುಹಾಕಿಕೊಂಡಿದೆ. ಜನರು ಒಂದಲ್ಲ ಒಂದು ವಿಧದಲ್ಲಿ ಪರೋಕ್ಷವಾಗಿ ಮೌಢ್ಯಗಳ ಆರಾಧಕರೇ. ಅವೈಜ್ಞಾನಿಕ ಮೂಢ ನಂಬಿಕೆಗಳಲ್ಲಿ ಭರವಸೆ ಇಟ್ಟವರೇ.

ಜ್ಯೋತಿಷಿಗಳ ಸಲಹೆಯನ್ನು ಪಡೆದು ಅವರ ಮಾರ್ಗದರ್ಶನದಲ್ಲೇ ಶುಭಕಾರ್ಯಗಳನ್ನು ನಡೆಸುವುದು, ಶಾಸ್ತ್ರ ಶಕುನಗಳನ್ನು ಕೇಳುವುದು, ಭವಿಷ್ಯ ತಿಳಿದುಕೊಂಡು ಅದರಂತೆ ನಡೆದುಕೊಳ್ಳುವುದು, ರಾಶಿ, ರಾಹುಕಾಲ, ಗುಳಿಕಕಾಲ, ತಿಥಿ ವಾರ ನಕ್ಷತ್ರ, ಗ್ರಹಗತಿಗಳು, ಗ್ರಹಣಗಳು, ಅಮಾವಾಸ್ಯೆ, ಪೌರ್ಣಮಿ ದಿನಗಳನ್ನು ಕಟ್ಟು ನಿಟ್ಟಿನಿಂದ, ಮಡಿ ವ್ರತಾಚಣೆಗಳಿಂದ ಪಾಲಿಸುವುದು, ದೇವರು ದೆವ್ವಗಳಿಗೆ ಹರಕೆಹೊತ್ತು ಅವುಗಳನ್ನು ತೀರಿಸುವುದು, ಮೂಕ ಪ್ರಾಣಿಗಳನ್ನು ಬಲಿಕೊಡುವುದು, ಬರಿ ಮೈಯಲ್ಲಿ ಉರುಳು ಸೇವೆ, ಮಡೆ ಸ್ನಾನ, ಮಹಿಳೆಯರಿಂದ ಬೆತ್ತಲೆ ಸೇವೆ, ಬೆಂಕಿಯ ಮೇಲೆ ನಡೆಯುವುದು, ಹರಕೆ ಹೊತ್ತು ಉಪವಾಸ ವ್ರತ ಕೈಗೊಂಡು ದೇಹವನ್ನು ನಾನಾ ರೀತಿಯಲ್ಲಿ ದಂಡಿಸಿಕೊಳ್ಳುವುದು, ಬೇಕೆಂದಾಗ ಆವೇಶಭರಿತರಾಗಿ ತಮಗೆ ಬೇಕಾದ ದೇವರು ದೆವ್ವಗಳನ್ನು ಮೈ ಮೇಲೆ ಬರ ಮಾಡಿಕೊಳ್ಳುವುದು, ನಾಲಗೆಯನ್ನು ಬ್ಲೇಡ್‍ನಿಂದ ಗೀರಿಕೊಂಡು ದುಷ್ಟಶಕ್ತಿಗಳಿಗೆ ರಕ್ತದ ಶಾಂತಿ ಮಾಡಿಸುವುದು, ಮಳೆ ಬರದಿದ್ದರೆ ಕತ್ತೆಗಳಿಗೆ ಮದುವೆ ಮಾಡಿಸುವುದು, ಅಂಟು ಜಾಢ್ಯ ಹರಡದಂತೆ ಗ್ರಾಮ ದೇವತೆಯ ಮೆರವಣಿಗೆ ಮಾಡಿ ಪ್ರಾಣಿಗಳನ್ನು ಬಲಿಕೊಡುವುದು, ಇನ್ನೊಬ್ಬರಿಗೆ ಕೆಡುಕಾಗುವಂತೆ ತಮಗೆ ಒಳ್ಳೆಯದಾಗುವಂತೆ ಬಯಸಿ ಯಥೇಚ್ಛವಾಗಿ ಹಣ ಖರ್ಚುಮಾಡಿ ವಾಮಾಚಾರಗಳನ್ನು ಮಾಡಿಸುವುದು, ಕಣ್ಣಿಗೆ ಕಾಣದ ನಿಧಿ ನಿಕ್ಷೇಪಗಳನ್ನು ತಮ್ಮದಾಗಿಸಿಕೊಳ್ಳಲು ಪ್ರಾಣಿ, ನರಬಲಿಗಳನ್ನು ಕೊಡುವುದು ಮುಂತಾದ ಲೆಕ್ಕವಲ್ಲದಷ್ಟು ಮೌಢ್ಯಾಚರಣೆಗಳು ಸಮಾಜದಲ್ಲಿ ಎಗ್ಗಿಲ್ಲದೆ ಜರುಗುತ್ತಲೇ ಇವೆ.

ಅವೈಜ್ಞಾನಿಕ ಮೌಢ್ಯಾಚರಣೆಗಳಿಂದ ಸಮಾಜವನ್ನು ಮುಕ್ತಗೊಳಿಸಬೇಕು, ವೈಚಾರಿಕ ಅರಿವು ಮೂಡಬೇಕು, ಅವುಗಳನ್ನು ನಿಷೇಧಿಸಲು ಅಗತ್ಯ ಕಾನೂನು ಕಟ್ಟಳೆಗಳನ್ನು ಜಾರಿಗೆ ತರಬೇಕು ಎಂಬ ಸಾಮಾಜಿಕ ಕಾಳಜಿ ಹಾಗೂ ಅರಿವಿಲ್ಲದ ರಾಜಕಾರಣಿಗಳ ಕೊರತೆಯಿಂದಲೇ ಮೌಢ್ಯಗಳು ಉಳಿದಿವೆ ಮತ್ತು ಮುಂದುವರೆದಿವೆ. ಅವುಗಳ ಅಸ್ತಿತ್ವಕ್ಕೆ ನಮ್ಮನ್ನಾಳುವ ರಾಜಕಾರಣಿಗಳೇ ಕಾರಣ ಎಂದರೆ ತಪ್ಪಾಗದು. ‘ನಾಡಿನ ಜನಸೇವೆಗೆ ಶ್ರಮಿಸುತ್ತೇನೆ, ಅವರ ಹಿತ ಕಾಪಾಡುತ್ತೇನೆ’ ಎಂದು ವಾಗ್ದಾನ ಮಾಡಿದ ರಾಜಕಾರಣಿಗಳು ಜನರ ಆಶಯಗಳಿಗೆ ಸ್ಪಂದಿಸುವುದನ್ನೇ ಮರೆತಿದ್ದಾರೆ. ದೇವರು ಧರ್ಮ, ಎಂಬ ಅಂಧಶ್ರದ್ಧೆಯನ್ನು ಸಾರ್ವತ್ರೀಕರಣಗೊಳಿಸುತ್ತಿದ್ದಾರೆ.

ಸರಕಾರದ ಖಜಾನೆಯಿಂದ ಮಠಗಳಿಗೆ ಕೋಟಿಗಟ್ಟಲೆ ಹಣ ಹರಿದು ಮಠಾಧಿಪತಿಗಳಿಂದ ಜನಸೇವೆ ಮಾಡಿಸುವುದಾದರೆ ಇನ್ನು ರಾಜಕಾರಣಿಗಳ ಪಾಲಿನ ಕರ್ತವ್ಯವೇನು? ಮಠಗಳ ಖಜಾನೆ ತುಂಬಿಸಿ ಮಠಾಧಿಪತಿಗಳ ಕಾಲುಗಳಿಗೆ ಬೀಳುವುದು ರಾಜಕಾರಣಿಗಳ ಸಂಸ್ಕøತಿ ಎಂದರೆ ಅತಿಶಯವೇನಲ್ಲ. ‘ಸಕಲವನ್ನೂ ಕರುಣಿಸುವವನು ಭಗವಂತನೆ’ ಎಂದು ಕೆಲವು ರಾಜಕಾರಣಿಗಳು ದೇವಸ್ಥಾನಗಳಲ್ಲಿ ಸಾರ್ವತ್ರಿಕವಾಗಿ ಯಜ್ಞ ಪೂಜೆಗಳನ್ನು ಸಲ್ಲಿಸುತ್ತ ಮೌಢ್ಯವನ್ನು ಮೆರೆಸುತ್ತ ಭಕ್ತರನ್ನು ಮೌಢ್ಯದ ಕಂದಕಕ್ಕೆ ನೂಕುತ್ತಿದ್ದಾರೆ. ‘ನಾಡಿನ ಸಮಸ್ತ ಜನರೇ ದೇವರು, ಜನ ಸೇವೆಯೇ ಪೂಜೆ, ಜನರ ಕಷ್ಟಗಳಿಗೆ ಸ್ಪಂದಿಸುವುದೇ ಭಕ್ತಿ, ಜನರೆಲ್ಲರೂ ನೆಮ್ಮದಿಯಿಂದ ಬದುಕುವುದೇ ಪ್ರತಿಫಲ’ ಎಂಬ ಬದ್ಧತೆಗೆ ಬದಲಾಗಿ ಮನಸ್ಸಿನಲ್ಲಿ ಮೌಢ್ಯ ತುಂಬಿಕೊಂಡು ಬಾಯಲ್ಲಿ ಅಭಿವೃದ್ಧಿ ಮಂತ್ರ ಪಠಿಸಿದರೆ ಜನರ ಕಲ್ಯಾಣ ಹೇಗಾದೀತು?

ಈ ಹಿಂದೆ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿದ್ದಾಗ ಕೆಲವೊಂದು ಮೌಢ್ಯಾಚರಣೆಗಳನ್ನು ನಿಷೇಧಿಸುವ ಚಿಂತನೆ ನಡೆಸಿದ್ದು ಅದಕ್ಕೆ ಸಮರ್ಪಕವಾದ ಶಾಸನಗಳನ್ನು ರೂಪಿಸಲು ಸೂಕ್ತ ಮಸೂದೆಯನ್ನು ಮಂಡಿಸಿ ಸದನದಲ್ಲಿ ಒಪ್ಪಿಗೆ ಪಡೆದು ಜಾರಿಗೆ ತರುವ ಆಶಯ ಹೊಂದಿತ್ತು. ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಮೌಢ್ಯಾಚರಣೆಗಳ ನಿಷೇಧವನ್ನು ಕುರಿತ ಸಾಧಕ ಬಾಧಕಗಳನ್ನು ಪರಿಶೀಲಿಸಲು ನಾಡಿನ ಹಿರಿಯ ತಜ್ಞರಿಂದ, ವಿಚಾರವಂತರಿಂದ ಸಲಹೆ, ವರದಿಗಳನ್ನು ಸಹ ಆಹ್ವಾನಿಸಿತ್ತು. ಆದರೆ ತೆರೆಮರೆಯ ಹಿಂದೆ ಎಚ್ಚೆತ್ತುಕೊಂಡ ಅಗೋಚರ ಶಕ್ತಿಗಳು ಸರಕಾರದ ಮೇಲೆ ಹೇರಿದ ಒತ್ತಡದ ಪ್ರಭಾವದಿಂದಲೋ ಏನೋ ಸದನದಲ್ಲಿ ಮೌಢ್ಯಾಚರಣೆಗಳ ನಿಷೇಧಕ್ಕೆ ಸೂಕ್ತ ಮಸೂದೆ ಮಂಡನೆಯಾಗದೆ ಅದು ನೆನೆಗುದಿಯಲ್ಲೇ ಬಿದ್ದಿತು.

ಸಮಾಜದಲ್ಲಿ ಪ್ರಸ್ತುತ ಆಚರಣೆಯಲ್ಲಿರುವ ಕೆಲವೊಂದು ಪಾರಂಪರ್ಯ ಸಂಸ್ಕøತಿಗಳಿಗೆ ಧಕ್ಕೆ ಬರುವುದೆಂಬ ಕಾಲ್ಪನಿಕ ವಾದವು ಕೆಲವರದಾದರೆ ಮತ್ತೆ ಕೆಲವರಿಗೆ ಅದನ್ನೇ ವೃತ್ತಿ ಪ್ರವೃತ್ತಿಯನ್ನಾಗಿ ಮಾಡಿಕೊಂಡು ಜೀವಿಸುತ್ತಿರುವವರ ಮೇಲೆ ತೀವ್ರ ಪರಿಣಾಮ ಉಂಟಾಗುವುದೆಂಬ ಆತಂಕ. ನಂತರ ಸರಕಾರ ಬದಲಾಗಿ ಕೇಸರಿವರ್ಣದವರಿಗೆ ಹಸ್ತಾಂತರಗೊಂಡು ಮೌಢ್ಯಗಳನ್ನು ನಿಷೇಧಿಸುವ ಕಾನೂನು ಅಂಗೀಕಾರವಾದರೂ ಕಟ್ಟುನಿಟ್ಟಾಗಿ ಜಾರಿಯಾಗಿದ್ದನ್ನು ಕಾಣೆ.

ಸಮಾಜದಲ್ಲಿ ಇಂದು ಹಲವಾರು ಮೌಢ್ಯಾಚರಣೆಗಳು ಭದ್ರವಾಗಿ ಬೇರೂರಿವೆ. ಅವುಗಳಲ್ಲಿ ತೀರಾ ಅವೈಜ್ಞಾನಿಕ ಆಚರಣೆಗಳನ್ನು ಗುರುತಿಸಿ, ಹಂತ ಹಂತವಾಗಿ ಕೈ ಬಿಡುವ ಕೆಲಸವಾಗಬೇಕಿದೆ. ಅಂಥವುಗಳ ಬಗ್ಗೆ ರಾಜಕಾರಣಿಗಳಿಗೆ ಸ್ಪಷ್ಟ ಅರಿವಿದ್ದರೂ ಅಗತ್ಯ ನಿಯಮಗಳನ್ನು ರೂಪಿಸಿ ಅವುಗಳನ್ನು ನಿಷೇಧ ಮಾಡುವಂತ ಮನಸ್ಸು ಅವರಿಗಿಲ್ಲ. ಕಾಲಕ್ಕೆ ತಕ್ಕಂತೆ ಸುಧಾರಿತ ಕ್ರಮಗಳನ್ನು ಜಾರಿಗೆ ತರಲು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ನಾಡಿನ ಪ್ರಜೆಗಳ ಒಳತಿಗಾಗಿ ಅವರ ಸರ್ವತೋಮುಖ ಹಿತಕ್ಕಾಗಿ ದುಡಿಯುತ್ತೇವೆಂದು ವಾಗ್ದಾನ ಮಾಡಿ ಅಧಿಕಾರ ಹಿಡಿದ ರಾಜಕಾರಣಿಗಳು ಈ ವಿಚಾರದಲ್ಲಿ ಮಾತಾಡದ ಜಡ್ಡುಗಟ್ಟಿದ ಮೌನಿಗಳೇ.

ಸಮಾಜದಲ್ಲಿ ಆವರಿಸಿರುವ ಮೂಢ ನಂಬಿಕೆಗಳ ಪೊರೆಯನ್ನು ಕಳಚಿ ವೈಚಾರಿಕ ಚಿಂತನೆಗಳತ್ತ ಸಮಾಜವನ್ನು ಕೊಂಡೊಯ್ಯುವ ಹಾಗು ವೈಚಾರಿಕ ಪ್ರಜ್ಞೆಗಳ ಬುನಾದಿಯ ಮೇಲೆ ನಿಂತು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡುವ ಕೆಲಸವಾಗಬೇಕಾದುದು ಅಗತ್ಯ. ಮನುಷ್ಯನ ಬದುಕು ಅವನ ಹಸ್ತರೇಖೆಗಳಂತೆ ನಡೆಯುವುದಿಲ್ಲ, ಅಥವಾ ಜ್ಯೋತಿಷಿಗಳು ಉರುಳಿಸುವ ದಾಳಗಳಂತೆ ನಡೆಯುವುದಿಲ್ಲ. ಜೀವನವನ್ನು ಆತ್ಮ ವಿಶ್ವಾಸದಿಂದ, ಸ್ವಸಾಮಥ್ರ್ಯದಿಂದ ವೈಚಾರಿಕ ನೆಲೆಗಟ್ಟಿನಲ್ಲಿ ರೂಪಿಸಿಕೊಳ್ಳಬೇಕೇ ಹೊರತು ನಂಬಿಕೆ ಹಾಗು ಅದೃಷ್ಟ ಬಲದಿಂದಲ್ಲ.

Leave a Reply

Your email address will not be published.