ಸರ್ವಭಾಷಾ ಸರಸ್ವತಿಯ ವಿಶ್ವರೂಪ ಪ್ರೊ .ಹಂಪನಾ ಅವರ `ಚಾರುವಸಂತ’

ಎಂಟು ವರ್ಷಗಳ ಅವಧಿಯಲ್ಲಿ ಹನ್ನೆರಡು ಭಾರತೀಯ ಭಾಷೆಗಳಿಗೆ ಅನುವಾದಗೊಂಡ ಏಕೈಕ ದೇಸಿಕಾವ್ಯ ಎಂಬ ಹೆಗ್ಗಳಿಕೆಗೆ `ಚಾರುವಸಂತ’ ಪಾತ್ರವಾಗಿದೆ.

ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ

ಚಾರುವಸಂತ

ಹಂಪ ನಾಗರಾಜಯ್ಯ

ಪುಟ: 334

ದರ: ರೂ.250

ಪ್ರಕಟಣೆ: 2012

ಸಪ್ನ ಬುಕ್ ಹೌಸ್

ಸಂಪರ್ಕ: 080 40114455

ಆದಿಕವಿ ಪಂಪ ಎರಡು ಮಹಾಕಾವ್ಯಗಳನ್ನು ರಚಿಸಿ ಕನ್ನಡ ಸರಸ್ವತಿಯ ಮಣಿಹಾರನಾದ. ಒಂದು ಲೌಕಿಕವೆಂದೂ ಮತ್ತೊಂದು ಆಗಮಿಕವೆಂದೂ ಅವೆರಡು ಕಾವ್ಯಲೋಕದಲ್ಲಿ ಪ್ರಥಿತವಾಯಿತು. ಇವು ಜೈನಕಾವ್ಯ ಸಂಪ್ರದಾಯಕ್ಕೆ ತಲೆವಣಿ ಆದುವು. ಮುಂದೆ ರತ್ನಾಕರವರ್ಣಿ `ಭರತೇಶ ವೈಭವ’ ಬರೆದು ಯೋಗಭೋಗಗಳ ಕಾವ್ಯೋತ್ಥಾನವನ್ನು ಉದ್ಘಾಟಿಸಿದ. ಈ ಪರಂಪರೆಯನ್ನು ಆಧುನಿಕ ಕಾಲದಲ್ಲಿ ಮುಂದುವರೆಸಿದ ಕೀರ್ತಿ ಪ್ರೊ.ಹಂಪನಾ ಅವರಿಗೆ ಸಲ್ಲುತ್ತದೆ.

`ಚಾರುವಸಂತ’ ಅಪ್ಪಟ ದೇಸಿಕಾವ್ಯ, ಆಕೃತಿ ಮತ್ತು ಆಶಯದ ದೃಷ್ಟಿಯಿಂದ `ಭರತೇಶ ವೈಭವ’ದ ಸಮೀಪಕ್ಕೆ ಇದು ಬರುತ್ತದೆ. ರತ್ನಾಕರವರ್ಣಿಗೆ `ಭರತನೇ ಕಾವ್ಯ ನಾಯಕ. ಅವನು ಲೋಕವ್ಯಾಪಾರದಲ್ಲೂ ಇರಬಲ್ಲ; ಯೋಗವ್ಯಾಪಾರದಲ್ಲೂ ಇರಬಲ್ಲ. ಕವಿ ಹಂಪನಾ ಅವರ ಕಾವ್ಯನಾಯಕ `ಚಾರುದತ್ತ’ ಶುದ್ಧಲೋಕವ್ಯಾಪಾರಿ! ಈತ ಪ್ರಸಿದ್ಧ ವಣಿಕ್ ಶ್ರೇಷ್ಠ! ವಸಂತತಿಲಕೆಯ ಪ್ರೇಮಬಂಧನದಲ್ಲಿ ಸೇರಿಕೊಂಡವನು. ಅನಂತರ ತನ್ನೆಲ್ಲಾ ಸಂಪತ್ತನ್ನು ಕಳೆದುಕೊಳ್ಳುತ್ತಾನೆ. ಆಮೇಲೆ ಸಂಪತ್ತನ್ನು ಪ್ರಾಮಾಣಿಕತೆಯಿಂದಲೂ ಶ್ರಮದಿಂದಲೂ ಗಳಿಸುತ್ತಾನೆ. ಸಾಧ್ವಿಮಡದಿಯ ಉದಾರತೆಯಿಂದ ವಸಂತತಿಲಕೆಯನ್ನು ಸ್ವೀಕರಿಸುತ್ತಾನೆ! ಇದು ಚಾರುವಸಂತ ಕಾವ್ಯದ ಸೂಕ್ಷ್ಮ ಕಥಾಹಂದರ.

`ಚಾರುವಸಂತ’ ಎಂಬ ಕಾವ್ಯದ ಶೀರ್ಷಿಕೆಯಲ್ಲಿ `ಚಾರುದತ್ತ’ ಮತ್ತು `ವಸಂತತಿಲಕೆ’ ಇಬ್ಬರೂ ಅವಿಗಲಿತ ಸಂಬಂಧದಂತೆ ಸೇರಿಕೊಂಡಿದ್ದಾರೆ. `ಚಾರುದತ್ತ’ ಎಂಬ ಹೆಸರಿನ ಪೂರ್ವಾರ್ಧ ಪದದಲ್ಲಿರುವ `ಚಾರು’ ಎಂದರೆ ಸುಂದರ ಎಂದೇ ಅರ್ಥ. ಈ ಕಾವ್ಯವು `ಚಾರುಕವಿತೆ’ ಎಂಬ ಧ್ವನಿಯನ್ನು ತನ್ನಲ್ಲಿ ಸೇರಿಸಿಕೊಂಡಿದೆ. `ವಸಂತ’ ಎಂಬ ಮಾತಿನಲ್ಲಿ ವಸಂತಮಾಸದ ಸೂಚನೆಯೂ ಉಂಟು! ಚಾರುದತ್ತನ ಬಾಳಿನಲ್ಲಿ ವಸಂತತಿಲಕೆಯು ವಸಂತಮಾಸದಂತೆ ಬಂದು ಸೇರಿಕೊಳ್ಳುತ್ತಾಳೆ. ಪ್ರೇಮದ ಪರಿಗಳು ಹೀಗೆಂದು ಹೇಳಲು ಎಂದಿಗೂ ಅಸಾಧ್ಯ!

ಹಂಪನಾ ಕಾವ್ಯರಸಿಕರಷ್ಟೆ. ಅವರು ಪಂಪನನ್ನು ಎದೆಯಲ್ಲಿ ಅಪ್ಪಿಕೊಂಡವರು; ಇಷ್ಟು ಮಾತ್ರವಲ್ಲ ರತ್ನಾಕರವರ್ಣಿಯ ಕಾವ್ಯದ ಲಾಲಿತ್ಯಕ್ಕೂ ಸೌಂದರ್ಯಕ್ಕೂ ಮನಸೋತವರು. ಪಂಪನ ಕಾವ್ಯ `ವಸ್ತುಕ’ ರತ್ನಾಕರವರ್ಣಿಯ ಕಾವ್ಯ ವರ್ಣಕ! ಈ ಎರಡೂ ಕಾವ್ಯಮಾರ್ಗಗಳ ಮರ್ಮವನ್ನು ಹಂಪನಾ ಚೆನ್ನಾಗಿ ಅರಿತಿದ್ದಾರೆ. ಹೀಗಾಗಿ, `ಚಾರುವಸಂತ’ ಕಾವ್ಯದಲ್ಲಿ ‘ವಸ್ತುಕ’ ಮತ್ತು `ವರ್ಣಕ’ದ ಎರಡೂ ಮಾರ್ಗಗಳನ್ನು ಏಕತ್ರಗೊಳಿಸಿದ್ದಾರೆ. ಅವೆರಡನ್ನೂ `ಸಂಯೋಗಸೃಷ್ಟಿ’ಯ ಕುಸುರಿಗೆಲಸದಲ್ಲಿ ಹಂಪನಾ ನೇಯ್ದಿದ್ದಾರೆ! `ವಸ್ತುಕ’ಕ್ಕೆ ಕಥಾಂಶವೇ ಪ್ರಧಾನ. ಹತ್ತಾರು ಘಟನೆ ಮತ್ತು ಪ್ರಸಂಗಗಳ ಮೂಲಕ ಕಾವ್ಯವು ರಸಸಿದ್ಧಿಯ ಶಿಖರಕ್ಕೆ ಲಗ್ಗೆ ಹಾಕುತ್ತದೆ. `ವರ್ಣಕ’ವು ಕಥಾಂಶಕ್ಕಿಂತ ವರ್ಣನೆಯೇ ಪ್ರಧಾನವಾಗಿರುತ್ತದೆ. ವರ್ಣಕದಲ್ಲಿ `ಕಥನ’ದ ವೈವಿಧ್ಯಕ್ಕೆ ಅವಕಾಶ ಹೆಚ್ಚಿಲ್ಲ. ಬಣ್ಣನೆಯ ಅತಿಶಯತೆ ಇಲ್ಲಿ ರಂಗಿಲಾ.

ಪ್ರೊ.ಹಂಪನಾ ಇವೆರಡೂ ಕಾವ್ಯಮಾರ್ಗಗಳನ್ನು ಒಂದೆಡೆಯಲ್ಲಿ ಏಕತ್ರಗೊಳಿಸಿದ್ದಾರಷ್ಟೆ. ಇದು ಚಾರುವೂ ಹೌದು; ವಸಂತವೂ ಹೌದು! `ಚಾರುವಸಂತ’ ಕಾವ್ಯದ ಇತ್ತಿವೃತ್ತಕ್ಕೆ ಸಹಸ್ರಾರು ವರ್ಷಗಳ ಇತಿಹಾಸ ಉಂಟು! ಗುಣಾಢ್ಯನೆಂಬುವನು ಪೈಶಾಚಿ ಭಾಷೆಯಲ್ಲಿ `ಬೃಹತ್ಕಥಾ’ ಬರೆದ. ಈ ಕಥನದಲ್ಲಿ ಚಾರುದತ್ತನ ಬೇರು ಇರಬೇಕೆಂದು ವಿದ್ವಾಂಸರು ತರ್ಕಿಸಿದ್ದಾರೆ. ಅನಂತರ ಕ್ರಿ.. ಎಂಟನೆಯ ಶತಮಾನದಲ್ಲಿದ್ದ ಜಿನಸೇನಾಚಾರ್ಯರು `ಹರಿವಂಶ’ ಎಂಬ ಕಾವ್ಯವನ್ನು ರಚಿಸಿದರು. ಇದು ಸಂಸ್ಕøತಕಾವ್ಯ. ಈ ಕಾವ್ಯದಲ್ಲಿ ಚಾರುದತ್ತನ `ಆಖ್ಯಾನ’ವು ಸ್ಪಷ್ಟರೂಪ ಪಡೆದಂತೆ ಕಾಣುತ್ತದೆ! ಇಂಥ ಸುರಮ್ಯ ಕಥಾನಕವನ್ನು ಕನ್ನಡದಲ್ಲಿ ಆದಿಗುಣವರ್ಮ, ಕರ್ಣಪಾರ್ಯ, ಬಂಧುವರ್ಮ, ನಾಗರಾಜ, ಮಹಾಬಲ, ಸಾಳ್ವ, ಮಂಗರಸ ಮೊದಲಾದ ಜೈನಕವಿಗಳ ಮೂಲಕ ದಾಂಗುಡಿಯಿಟ್ಟು ಪಲ್ಲವಿಸಿತು. ಇದು ಬೇರೊಂದು ಅಧ್ಯಯನವನ್ನು ಬೇಡುತ್ತದೆ!

ಪ್ರೊ.ಹಂಪನಾ ಅವರ `ಚಾರುವಸಂತ’ ಮೊದಲು ಪ್ರಕಟವಾದದ್ದು 2002ರಲ್ಲಿ. ಅನಂತರ ಪರಿಷ್ಕøತ ಹಾಗೂ ಹೊಸರೂಪ ತಾಳಿ 2012ರಲ್ಲಿ `ಸಪ್ನ ಬುಕ್‍ಹೌಸ್’ ಚಾರುತರವಾಗಿ ಹೊರತಂದಿತು. ಆಮೇಲೆ 2013ರಲ್ಲಿ ಎಚ್.ವಿ.ರಾಮಚಂದ್ರರಾವ್ ಅವರಿಂದ ಇದು ಹಿಂದಿಭಾಷೆಗೆ ಅನುವಾದಗೊಂಡಿತು. ಇದಾದ ಮೇಲೆ 2016ರಲ್ಲಿ ಸಂಸ್ಕøತ ಮತ್ತು ಬಂಜಾರ ಭಾಷೆಯಲ್ಲಿ ಇದು ಅನುವಾದಗೊಂಡಿತು. ಡಾ.ಎಚ್.ವಿ.ನಾಗರಾಜ ರಾವ್ ಸಂಸ್ಕøತದಲ್ಲೂ ರಮೇಶ್ ಆರ್ಯ ಅವರು ಬಂಜಾರ ಭಾಷೆಯಲ್ಲೂ ಅನುವಾದಿಸಿದರು. 2017ರಲ್ಲಿ ದೇವ್‍ಕೊಠಾರಿ ರಾಜಸ್ಥಾನೀ ಭಾಷೆಗೂ ಉದಯಚಂದ್ರ ಅವರು ಪ್ರಾಕೃತಕ್ಕೂ ಅನುವಾದಗೊಂಡು ಆಯಾ ಭಾಷಿಕರ ಹಾಗೂ ವಿದ್ವಾಂಸರ ಹಿರಿಮೆಗರಿಮೆಗೆ ಒಳಗಾಯಿತು.

ಕಳೆದ 2018ರಲ್ಲಿ ಗುಜರಾತಿ, ಉರ್ದು ಮತ್ತು ಬೆಂಗಾಲಿ ಭಾಷೆಗಳಿಗೆ ಅನುವಾದಗೊಂಡು ಸರ್ವಭಾಷಾ ಸರಸ್ವತಿಯ ಮಣಿಹಾರವಾಗಿ ಶೋಭಿಸುತ್ತಿರುವುದು ಕನ್ನಡದ ಭಾಗ್ಯ! ಇಷ್ಟು ಮಾತ್ರವಲ್ಲ ಇನ್ನು ಕೆಲವೇ ತಿಂಗಳಲ್ಲಿ ಅಸ್ಸಾಮಿ ಮತ್ತು ಪಂಜಾಬಿ ಭಾಷೆಗಳಲ್ಲಿ `ಚಾರುವಸಂತ’ ಅನುವಾದಗೊಂಡು ಹೊರಬರಲಿದೆ. ನನಗೆ ತಿಳಿದಂತೆ ಎಂಟು ವರ್ಷಗಳ ಅವಧಿಯಲ್ಲಿ ಭಾರತೀಯ ಹನ್ನೆರಡು ಭಾಷೆಗಳಿಗೆ ಅನುವಾದಗೊಂಡ ಏಕೈಕ ದೇಸಿಕಾವ್ಯ `ಚಾರುವಸಂತ’ ಎಂಬ ಹೆಗ್ಗಳಿಕೆಗೆ ಇದು ಕಾರಣವಾಗಿದೆ.

ಕವಿ ಹಂಪನಾ ಅವರ `ಚಾರುವಸಂತ’ ಒಂದು ಸುಭಗ ಕವಿತೆ. ಇದು ಸಮಕಾಲೀನ ಮಾನವೀಯ ನೆಲೆಗಳನ್ನೂ ದಾಂಪತ್ಯದ ಸವಿರುಚಿಯನ್ನೂ ಪ್ರೇಮೋನ್ಮಾದದ ರಸಕ್ಷಣಗಳನ್ನೂ ಏಕತ್ರ ಸಮ್ಮಿಲಿತಗೊಳಿಸಿಕೊಂಡಿರುವ ಕಾವ್ಯ. ಈ ಕಾವ್ಯದ ಮೂಲಕ ಹಂಪನಾ ಕನ್ನಡಕಾವ್ಯಕ್ಕೆ ವಿಸ್ತಾರತೆಯನ್ನು ತಂದುಕೊಟ್ಟಿದ್ದಾರೆ. ಪ್ರಾಕೃತಭಾಷೆಗೆ ಅನುವಾದಗೊಂಡ ಕನ್ನಡದ ಪ್ರಪಥಮ ಕಾವ್ಯ ಇದಾಗಿದೆಯೆಂಬುದು ಚಾರಿತ್ರಿಕ ಸಂಗತಿ. ಭಾರತೀಯ ಭಾಷೆಗಳಲ್ಲಿ ಸಂಸ್ಕø, ಪ್ರಾಕೃತ ಮತ್ತು ಪಾಲಿ ಸೋದರಭಾಷೆಗಳನಿಸಿಕೊಂಡಿವೆಯಷ್ಟೆ. ಚಾರುವಸಂತವು ಸಂಸ್ಕøತಕ್ಕೆ ಅನುವಾದಗೊಂಡು, ಸಂಸ್ಕøತಕಾವ್ಯ ವಲಯದವರ ಪ್ರೀತ್ಯಾದರಕ್ಕೆ ಇದು ಪಾತ್ರವಾಗಿದೆ.

ಇನ್ನೂ ಅಚ್ಚರಿಯ ಸಂಗತಿಯೆಂದರೆ ಮೂರುಸಾವಿರ ವರ್ಷಗಳಿಂದ ಯಾವುದೇ ಕನ್ನಡಕೃತಿ ಪ್ರಾಕೃತಕ್ಕೆ ಅನುವಾದಗೊಂಡಿರಲಿಲ್ಲ. ಹೀಗಾಗಿ, ಕವಿ ಹಂಪನಾ ಪ್ರಾಕೃತಕ್ಕೆ ನೆಲೆಗೊಂಡು ಕನ್ನಡ ಕಾವ್ಯಪ್ರಕಾರವು ವಿಶ್ವಮಾನ್ಯವಾಗಲು ಇದರಿಂದ ಸಾಧ್ಯವಾಗಿದೆ. ಕನ್ನಡ ಭಾಷಿಕ ಜಗತ್ತು ಇದನ್ನು ಗಮನಿಸಬೇಕಾಗಿದೆ. ಇವುಗಳೊಂದಿಗೆ ಉರ್ದುಕಾವ್ಯ ಲೋಕಕ್ಕೆ ಚಾರುವಸಂತ ಪದಾರ್ಪಣೆ ಮಾಡಿದ್ದು ಸಂಭ್ರಮ ಪಡುವ ಸಂಗತಿಯೇ ಸರಿ.

ಪ್ರೊ. ಹಂಪನಾ ಅವರದ್ದು ಬಹುಮುಖ ಪ್ರತಿಭೆ. ಕಾವ್ಯ, ಕಾದಂಬರಿ, ವಿಮರ್ಶೆ, ಸಂಪಾದನೆ, ಭಾಷೆ, ಸಂಸ್ಕøತಿ, ಕೋಶ, ಜಾನಪದ ಹೀಗೆ ಒಂದೇ ಎರಡೇ ಹಲವು ಪ್ರಕಾರಗಳಲ್ಲಿ ಅವರು ಮಾಡಿರುವ ಸಾಧನೆ ಮಾತ್ರವಲ್ಲ; ಏರಿರುವ ಎತ್ತರ ಅವಿಸ್ಮರಣೀಯ, ಪ್ರಶಂಸಾರ್ಹವಾದುದೇ ಸೈ. ಅವರದ್ದು ಸಹಜಪ್ರತಿಭೆ. ಇದಕ್ಕೆ ಸಮದಂಡಿಯಾದ ವಿದ್ವತ್ತು ಅವರಲ್ಲಿದೆ. `ಚಾರುವಸಂತ’ ಕಾವ್ಯದಲ್ಲಿ ಇವೆಲ್ಲವೂ ಹೊಯ್‍ಕಯ್ಯಾಗಿ ಪರಿಣಮಿಸಿದೆ. ಛಂದಸ್ಸು, ಅಲಂಕಾರ, ಕಾವ್ಯಭಾಷೆಈ ವಿಷಯಗಳಲ್ಲಿ ಹಂಪನಾ ಅವರದ್ದು ತಲಸ್ಪರ್ಶಿಯ ಅಧ್ಯಯನ. ಇದು `ಚಾರುವಸಂತ’ ಕಾವ್ಯಕ್ಕೆ ಮೇಲಾದ ಪ್ರತಿಭಾಸ್ಥಾನ ನೀಡಲು ಕಾರಣವಾಗಿದೆ. ದೇಶವಿದೇಶದ ಅನ್ಯಾನ್ಯ ಹಿರಿಯ ವಿದ್ವಾಂಸರು ಇದನ್ನು ಕಂಡು ಕೈವಾರಿಸಿದ್ದಾರೆ. ಭಾರತೀಯ ಮತ್ತು ಪಾಶ್ಚಾತ್ಯ ವಿದ್ವಾಂಸರು ಹಂಪನಾ ಅವರ ಬಹುಶ್ರುತತೆ ಮತ್ತು ಪಾಂಡಿತ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. `ಚಾರುವಸಂತ’ ಕಾವ್ಯವು ಭಾರತೀಯ ಎಲ್ಲಾ ಭಾಷೆಗಳ ಜತೆ ತನ್ನ ಸಖ್ಯವನ್ನು ಪಡೆಯುತ್ತಿದೆ. ಇಂದು ಭಾಷೆಭಾಷೆಗಳ ಜತೆ ವಿವಿಧ ಕಾರಣಗಳಿಂದ ವೈಷಮ್ಯಗಳು ಬೆಳೆಯುತ್ತಿವೆ. ಅಂಥ ವೈಷಮ್ಯಗಳ ಆಚೆಗೆ ಹೋಗಲು ಹಂಪನಾ ಕಾವ್ಯ ಸಮನ್ವಯದ ಮೀಟುಗೋಲು ಆಗುತ್ತಿರುವುದು ಸಂತಸದ ಸಂಗತಿ.

ಚಾರುವಸಂತ ಕಾವ್ಯವು ಐದು ಕಾಂಡಗಳನ್ನು ಹೊಂದಿದೆ. ಅದು ಅರ್ಥಪೂರ್ಣ ಶೀರ್ಷಿಕೆಗಳನ್ನು ಪಡೆದಿದೆ. ಕಥಾಮುಖಕಾಂಡ, ಸುಂದರಕಾಂಡ, ಉನ್ಮುಖಕಾಂಡ, ಉದ್ಯೋಗಕಾಂಡ ಮತ್ತು ದ್ಯಾವಾಪೃಥಿವೀಕಾಂಡ! ಈ ಶೀರ್ಷಿಕೆಗಳಿಗೆ ಅನುಗುಣವಾಗಿ ಕಥನ ಮತ್ತು ವರ್ಣನ ಒಂದರೊಡನೊಂದು ಹೊಯ್‍ಕಯ್ಯಾಗಿ ಬೆರೆತುಕೊಂಡು ಬೆಳೆಯುತ್ತದೆ. ಹಂಪನಾ ಅವರು ಕಾವ್ಯದ ಪ್ರಾರಂಭಕ್ಕೆ ಹೇಳುವ ಮಾತುಗಳಿವು:

ವಿಷಯವಿದು ಹೊಸದಲ್ಲ, ಹೊಸೆದು ಮಸೆದ ರೀತಿನವೀನ

ಸನಾತನವು ವಿನೂತನ ಅಕಾರ ಪಡೆದು ನನ್ನೊಳಗೆ

ಮೈತಳೆದು ಬೆಳೆದ ಬಗೆ ಗಿಡಬಿಟ್ಟ ಮೊಗ್ಗು ಹೂವಾಗೆ

ಒಪ್ಪಿಸಿದೆ ಕನ್ನಡದ ಗುಡಿಗೆ ವಾಗ್ದೇವಿಯ ಅಡಿಗೆ

ತೃಪ್ತಿಯಾದರೆ ಧನ್ಯ ಕಾವ್ಯಪ್ರೇಮಿಗಳ ಎದೆಗೆ

ಹೀಗೆಂದು ವಿನಮ್ರವಾಗಿ ಸಹೃದಯರಿಗೆ ನಿವೇದನೆ ಮಾಡಿಕೊಂಡಿದ್ದಾರೆ. ಅವರು ತಮ್ಮ ಕಾವ್ಯದ ಆವಿರ್ಭಾವ ಕುರಿತು ಹೇಳುವಾಗ:

ಎಪ್ಪತ್ತಾರು ವಯದಲ್ಲಿ ಹಂಪನಿಗೇಕೆ ಕಾವ್ಯಚೋದ್ಯ

ಒಪ್ಪೊ ಬೆಪ್ಪೊ ಒಲಿದು ಬಂದಿದೆ ತೊಡದಿರಿ ಕುಚೋದ್ಯ

ಆದಿಕವಿ ಪಂಪನ ಸೌಭಾಗ್ಯ ಏಳು ಜನ್ಮಕೂ ಅಸಾಧ್ಯ

ಅವನ ಕಾವ್ಯಗಳೆ ಭಾಗ್ಯ ಹಂಪನಾ ಬಾಳಿಗೆ ಹೃದ್ಯ

ಎಂದು ತಮ್ಮ ಮನದಾಳದ ಮಾತನ್ನು ಆಡಿಬಿಟ್ಟಿದ್ದಾರೆ. ಇದು ಕವಿಯೊಬ್ಬನ ನಿತಾಂತ ನಿವೇದನೆ! ಚಾರುವಸಂತ ಕಾವ್ಯದ ಛಂದಸ್ಸು, ಕಾವ್ಯಭಾಷೆ, ರಸಪ್ರಸಂಗ, ನಾಟ್ಯಮಯತೆ, ಕಾವ್ಯದೀಪ್ತಿ, ತತ್ತ್ವಚಿಂತನೆ, ದೇಸಿದರ್ಶನಹೀಗೆ ಹತ್ತು ಹಲವು ಮುಖಗಳಿಂದ ಅಧ್ಯಯನಿಸಲು ಅವಕಾಶಗಳಿವೆ. ಇದು ಒಂದು ಮುಖದ ಅಧ್ಯಯನ. ಇನ್ನೊಂದು ಮುಖದಲ್ಲಿ ಈಗಾಗಲೇ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿರುವ ಹಿನ್ನೆಲೆಯಲ್ಲಿ ಸ್ಪಂದನಪ್ರತಿಸ್ಪಂದನಗಳಿಗೂ ಅವಕಾಶಗಳಿವೆ. ಇದು ಕನ್ನಡಕಾವ್ಯದ ವಿಸ್ತಾರತೆಯನ್ನೂ ಅನ್ಯಾನ್ಯ ಭಾಷೆಗಳ ಪರಿಣಾಮ ರಮಣೀಯತೆಯನ್ನೂ ಒಟ್ಟೊಟ್ಟಿಗೆ ನೋಡಲು ಅವಕಾಶ ಮಾಡಿಕೊಟ್ಟಂತಾಗಿದೆ. ಕನ್ನಡದ ಕೃತಿಯೊಂದು ವಿವಿಧ ಭಾಷೆಗಳಿಗೆ ಅನುವಾದಗೊಳ್ಳುವ ಪರಿ ವಿಶೇಷವಾದುದೇ ಸರಿ. ಆಯಾ ಭಾಷಿಕ ಸೌಷ್ಠವಗಳನ್ನು ಸ್ವೀಕರಿಸಿರುವುದು ಅಚ್ಚರಿಯ ಸಂಗತಿ. ಭಾರತದ ಹನ್ನೆರಡು ಭಾಷೆಗಳಲ್ಲಿ ಅನುವಾದಗೊಳ್ಳುವ ಸುಕೃತಕ್ಕೆ ಇದು ದಾರಿಮಾಡಿಕೊಟ್ಟಿದೆ. ಸರ್ವಭಾಷಾ ಸರಸ್ವತಿಯು ಕವಿ ಹಂಪನಾ ಅವರನ್ನು ಆಹ್ವಾನಿಸಿದ್ದಾಳೆ.

ಪ್ರೊ.ಹಂಪನಾ ಮತ್ತು ಕವಿ ಹಂಪನಾ `ಚಾರುವಸಂತ’ದಲ್ಲಿ ಬೇರೆಬೇರೆಯಾಗಿಲ್ಲ. ಅವರಿಬ್ಬರೂ ಪರಸ್ಪರ ಕೈಹಿಡಿದು ನಡೆದಿದ್ದಾರೆ. ವಿದ್ವತ್ತು ಮತ್ತು ಪ್ರತಿಭೆಗಳು ಒಂದೆಡೆ ಸೇರಿವೆ. ಇದು ಪ್ರಾಚೀನಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಕನ್ನಡಕ್ಕೂ ಈ ಮಾತು ಅನ್ವಯ. ಕನ್ನಡದ ಸರಸ್ವತಿಯು ಸರ್ವಭಾಷಾ ಸರಸ್ವತಿಯ ಮಹಾರೂಪಕವಾಗಿ ಮೈವೆತ್ತಿ ನಲಿದಿರುವುದು ಕನ್ನಡಭಾಗ್ಯವೆಂದು ಹೇಳಲು ಸಂತೋಷವಾಗುತ್ತದೆ. ಚಾರುವಸಂತ ಕಾವ್ಯದ ಮೂಲಕ ಕನ್ನಡವು ವಿಶ್ವವಾಣಿಗೆ ಮುಡಿಯ ಮಣಿಯಾಗಿ ವಿರಾಜಿಸಿದೆ. ಇದು ಕನ್ನಡದ ಸೌಭಾಗ್ಯವಲ್ಲದೆ ಮತ್ತೇನು?

Leave a Reply

Your email address will not be published.