ಸೌಂದರ್ಯ ಸ್ಪರ್ಧೆಗಳ ಗುರಿ ಮಹಿಳಾ ಸಬಲೀಕರಣವೇ?

ಈ ಸೌಂದರ್ಯ ಸ್ಪರ್ಧೆಗಳನ್ನು ಏರ್ಪಡಿಸುವುದರ ಹಿಂದಿನ ಹುನ್ನಾರವೇನು? ನಿಜಕ್ಕೂ ನಮಗೆ ಈ ಸ್ಪರ್ಧೆಗಳ ಅಗತ್ಯವಿದೆಯೇ? ಇವುಗಳಿಂದ ಸಮಾಜಕ್ಕಾಗುವ ಮಹದುಪಕಾರವೇನು? ಮಹಿಳಾ ಸಬಲೀಕರಣದ ಹೆಸರಿನಲ್ಲಿ ನಡೆಯುವ ಈ ಸ್ಪರ್ಧೆಗಳು ಮಾಡುತ್ತಿರುವುದಾದರೂ ಏನನ್ನು?

ಡಾ.ಕಾವ್ಯಶ್ರೀ ಎಚ್.

ಭಾರತ ಇಪ್ಪತ್ತೊಂದು ವರ್ಷಗಳ ನಂತರ ಮತ್ತೆ ಭುವನ ಸುಂದರಿ ಸ್ಪರ್ಧೆಯಲ್ಲಿ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡ ಸಂಭ್ರಮದಲ್ಲಿದೆ. ಡಿಸೆಂಬರ್ 12ರಂದು ಇಸ್ರೇಲ್‍ನ ದಕ್ಷಿಣ ಈಲಿಯಟ್‍ನಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯ 70ನೇ ಆವೃತ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪಂಜಾಬ್ ಮೂಲದ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ 2021 ಆಗಿ ಆಯ್ಕೆಯಾಗಿದ್ದಾರೆ. ಸುಶ್ಮಿತಾ ಸೇನ್ ಮತ್ತು ಲಾರಾ ದತ್ತ ನಂತರ ಹರ್ನಾಜ್ ಸಂಧು ಈ ಪಟ್ಟಕ್ಕೇರಿದ ಮೂರನೆಯ ಭಾರತೀಯರಾಗಿದ್ದಾರೆ. ಹಿಂದಿನ 69ನೇ ಆವೃತ್ತಿಯಲ್ಲಿ ಭಾರತ ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಆ ಬಾರಿ ಭಾರತದ ಸ್ಪರ್ಧಿಯಾಗಿದ್ದ ಉಡುಪಿ ಮೂಲದ ಆಡ್ಲೈನ್ ಕ್ವಾಡ್ರೋಸ್ ಮೂರನೇ ರನ್ನರ್ ಅಪ್ ಸ್ಥಾನದವರೆಗೆ ತಲುಪಿದ್ದರು.

ಈ ಬಾರಿ ಸ್ಪರ್ಧೆಗೆ ಆಯ್ಕೆಯಾಗಿದ್ದ ಸ್ಥಳವೂ ಅನೇಕ ವಿವಾದಗಳಿಗೆ ಎಡೆಮಾಡಿಕೊಟ್ಟಿತ್ತು. ಇಸ್ರೇಲ್‍ನಲ್ಲಿ ಸ್ಪರ್ಧೆ ನಡೆಯುವ ವಿಚಾರ ತಿಳಿಯುತ್ತಿದ್ದಂತೆಯೇ ಕೆಲವು ದೇಶಗಳು ಸ್ಪರ್ಧೆಯಿಂದ ಹೊರಹೋಗಲು ತೀರ್ಮಾನಿಸಿದವು. ಕೆಲವರು ಕೋವಿಡ್ ಮುಂತಾದ ನೆಪವನ್ನು ಒಡ್ಡಿದ್ದರೆ, ಇನ್ನು ಕೆಲವರು ಇಸ್ರೇಲ್ ಪಾಲೆಸ್ತೇನಿಯರ ಮೇಲೆ ನಡೆಸಿದ ದಬ್ಬಾಳಿಕೆ, ಹಿಂಸಾಚಾರದ ಕಾರಣಕ್ಕಾಗಿ ಬಹಿರಂಗವಾಗಿ ವಿರೋಧಿಸಿ ತಮ್ಮ ದೇಶದ ಪ್ರತಿನಿಧಿಗಳು ಪಾಲ್ಗೊಳ್ಳದಂತೆ ನೋಡಿಕೊಂಡವು. ದಕ್ಷಿಣ ಆಫ್ರಿಕಾ ಸರ್ಕಾರ ಸ್ಪರ್ಧೆಯಿಂದ ಹೊರನಡೆಯಬೇಕೆಂದು ನಿರ್ಧರಿಸಿದರೂ ಕೂಡ ಆ ಸ್ಪರ್ಧಿ ಸ್ಪರ್ಧೆಯನ್ನು ಬಹಿಷ್ಕರಿಸಲು ನಿರಾಕರಿಸಿ ಭಾಗವಹಿಸಿದ್ದರು. ತನ್ನ ದೇಶದ ಪ್ರತಿನಿಧಿಯನ್ನು ಸ್ಪರ್ಧೆಯಿಂದ ಹೊರಬರುವಂತೆ ಮನವೊಲಿಸಲು ಸಾಧ್ಯವಾಗದ ನಂತರ ದಕ್ಷಿಣ ಆಫ್ರಿಕಾ ಆಕೆಗೆ ತನ್ನ ಬೆಂಬಲ ಇಲ್ಲವೆಂದು ಘೋಷಿಸಿತು. ನಂತರ ದಕ್ಷಿಣ ಆಫ್ರಿಕಾದ ಪ್ರತಿನಿಧಿ ಲಲೆಲಾ ಮಸ್ವಾನೆಯವರನ್ನು ಸೆಕೆಂಡ್ ರನ್ನರ್ ಆಪ್ ಆಗಿ ಆಯ್ಕೆಮಾಡಲಾಗಿದೆ.

ಸ್ಥಳೀಯ ಸಮುದಾಯಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಸಾಧನವಾಗಿ 19ನೇ ಶತಮಾನದಿಂದಲೂ ಸೌಂದರ್ಯ ಸ್ಪರ್ಧೆಗಳು ಚಾಲ್ತಿಯಲ್ಲಿದ್ದವು. ಯುನೈಟೆಡ್ ಸ್ಟೇಟ್ಸ್ ಪ್ರಾಂತ್ಯದಲ್ಲಿ ಮಿಸ್ ಯೂನಿವರ್ಸ್ಎಂಬ ಬಿರುದಾಂಕಿತ ಸ್ಪರ್ಧೆ 1926ರಲ್ಲಿ ಆರಂಭವಾಗಿತ್ತಾದರೂ, ಈಗಿನ ಮಿಸ್ ಯೂನಿವರ್ಸ್ ಸಂಸ್ಥೆ ನಡೆಸುತ್ತಿರುವ ಮಿಸ್ ಯೂನಿವರ್ಸ್ ಸ್ಪರ್ಧೆ ಆರಂಭವಾಗಿದ್ದು 1952ರಲ್ಲಿ. ಇದೊಂದು ವಾರ್ಷಿಕ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಾಗಿದ್ದು, ಅಂದಾಜು 500 ಮಿಲಿಯನ್ ಪ್ರೇಕ್ಷಕರನ್ನು ಹೊಂದಿರುವ ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಸ್ಪರ್ಧೆಗಳಲ್ಲಿ ಒಂದಾಗಿದೆ. ಇದರೊಂದಿಗೆ ಮಿಸ್ ವಲ್ರ್ಡ್, ಮಿಸ್ ಇಂಟರ್ ನ್ಯಾಷನಲ್, ಮಿಸ್ ಅರ್ಥ್ ಮುಂತಾದ ಸೌಂದರ್ಯ ಸ್ಪರ್ಧೆಗಳು ಅಂತರಾಷ್ಟ್ರೀಯ ಮನ್ನಣೆ ಪಡೆದಿವೆ.

ಸೌಂದರ್ಯ ಸ್ಪರ್ಧೆಗಳು ಹುಟ್ಟಿಕೊಂಡಿದ್ದು ಪುರುಷರ ದೃಷ್ಟಿಯಲ್ಲಿ ಒಬ್ಬ ಹೆಣ್ಣು ಎಂದರೆ ಹೇಗಿರಬೇಕು ಎಂಬುದರ ಆಧಾರದ ಮೇಲೆ. ಹೆಣ್ಣಿನ ಉಡುಗೆತೊಡುಗೆ ಹಾವಭಾವ ಮುಂತಾದ ಸಣ್ಣ ಸಣ್ಣ ವಿವರಗಳ ಮೂಲಕ ಪಿತೃಪ್ರಧಾನ ಮನಸ್ಥಿತಿಯ ತೀರ್ಪುಗಾರರನ್ನು ಮೆಚ್ಚಿಸುವುದು, ಪ್ರೇಕ್ಷಕರ ಮನರಂಜಿಸುವುದು ಈ ಸೌಂದರ್ಯ ಸ್ಪರ್ಧೆಗಳ ಉದ್ದೇಶವಾಗಿತ್ತು.

ಮಹಿಳೆಯರ ಮೇಲೆ ಹೇರಲಾಗುವ ಸೌಂದರ್ಯ ಮತ್ತು ಹಾವಭಾವದ ರೀತಿರಿವಾಜುಗಳು ಮಾನದಂಡಗಳು ಅವರು ತಮ್ಮ ರೂಪದ ಬಗ್ಗೆ ಸದಾಕಾಲ ಜಾಗೃತರಾಗಿರುವಂತೆ ಮಾಡುತ್ತವೆ. ಕೇವಲ ಸೌಂದರ್ಯ ಸ್ಪರ್ಧೆಗಳಲ್ಲಿ ಅμ್ಟೀ ಅಲ್ಲ, ಆಧುನಿಕ ಸಾಮಾಜಿಕ ಸಂದರ್ಭದಲ್ಲಿ ಸದಾಕಾಲ ಸುಂದರವಾಗಿ ಕಾಣುತ್ತಿರಲೇಬೇಕೆಂಬ ಸಂಸ್ಕøತಿ ತಲೆಯೆತ್ತಿದೆ. ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳಬೇಕಾಗಿರುವ ಈ ಸೌಂದರ್ಯದ ಅಳತೆಗೋಲುಗಳು ಮಹಿಳೆಯರ ಆತ್ಮವಿಶ್ವಾಸವನ್ನು ಅಲುಗಿಸುವಷ್ಟು ಶಕ್ತಿಯುತವಾಗಿವೆ.

ಮಹಿಳೆಯರು ಹೇಗೆ ನಡೆಯಬೇಕು ಹೇಗೆ ಕುಳಿತುಕೊಳ್ಳಬೇಕು, ಹೇಗೆ ನಗಬೇಕು ಹೇಗೆ ವರ್ತಿಸಬೇಕು, ಸಾರ್ವಜನಿಕವಾಗಿ ತಮ್ಮನ್ನು ತಾವು ಹೇಗೆ ಪ್ರಸ್ತುತಪಡಿಸಬೇಕು ಎಂಬುದನ್ನು ಪುರುಷಪ್ರಧಾನ ಮನಸ್ಥಿತಿಯ ತೀರ್ಪುಗಾರರು ಮತ್ತು ಪ್ರೇಕ್ಷಕರು ನಿರ್ಧರಿಸುತ್ತಿರುತ್ತಾರೆ, ನಿರಂತರವಾಗಿ ಫರ್ಮಾನು ಹೊರಡಿಸುತ್ತಿರುತ್ತಾರೆ. ಅವಳನ್ನು ಒಬ್ಬ ವ್ಯಕ್ತಿಯನ್ನಾಗಿ ನೋಡದೇ ತಮಗೆ ಬೇಕಾದಂತೆ ರೂಪಿಸಿಕೊಳ್ಳುವ ವಸ್ತುವನ್ನಾಗಿ ನೋಡಲಾಗುತ್ತದೆ.

ಹೆಣ್ಣಿನ ವ್ಯಕ್ತಿತ್ವವನ್ನು ಸಂಕುಚಿತಗೊಳಿಸುವ ಸೌಂದರ್ಯ ಸ್ಪರ್ಧೆಗಳು, ಇಂದು ಅಲಂಕಾರವಿಲ್ಲದ ಅಂದಚಂದ ಇಲ್ಲದ ಹೆಣ್ಣು ಯಾವುದಕ್ಕೂ ಪ್ರಯೋಜನ ಇಲ್ಲ ಎಂಬ ಅನಗತ್ಯ ಕೀಳರಿಮೆಯನ್ನು ಹುಟ್ಟುಹಾಕುತ್ತಿವೆ. ವಯಸ್ಸಿನ ಭೇದವಿಲ್ಲದೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಸೌಂದರ್ಯವರ್ಧಕಗಳ ಮೊರೆ ಹೋಗುವ ಅನಿವಾರ್ಯತೆಯನ್ನು ಸೃಷ್ಟಿಸಲಾಗುತ್ತಿದೆ. ಅದರಲ್ಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಲಿಪಶುಗಳಾಗುತ್ತಿರುವವರು ಯುವಜನಾಂಗ. ಮನುಷ್ಯ ಸೌಂದರ್ಯಪ್ರಿಯ, ನಾಗರಿಕತೆ ವಿಕಾಸವಾದಂತೆಲ್ಲ ಅವನ ಸೌಂದರ್ಯಪ್ರಜ್ಞೆಯೂ ಉತ್ತುಂಗಕ್ಕೇರುತ್ತಾ ಹೋಯಿತು. ಅವನ ಮನೆಮಠ, ಉಡುಗೆತೊಡುಗೆ ಬಳಸುವ ವಸ್ತುಗಳು ಹೀಗೆ ಪ್ರತಿಯೊಂದರಲ್ಲೂ ಸೌಂದರ್ಯವನ್ನೂ ಕಲಾತ್ಮಕತೆಯನ್ನೂ ಅರಸುತ್ತಾ, ಇಲ್ಲದಿರುವುದನ್ನು ಅಲಂಕರಣಗೊಳಿಸುತ್ತಾ ವಾಸ್ತುಶಿಲ್ಪ, ವಸ್ತ್ರವಿನ್ಯಾಸ, ಆಭರಣಗಳ ವಿನ್ಯಾಸ ಹೀಗೆ ಎಲ್ಲದರಲ್ಲೂ ಕುಸುರಿಕಲೆಯ ಕೌಶಲ್ಯ ಅತ್ಯಗತ್ಯ ಎನ್ನುವಂತಹ ಸಂದರ್ಭ ಸೃಷ್ಟಿಯಾಯಿತು. ಕಲೆಯ ಅವಿಭಾಜ್ಯ ಅಂಗವಾಗಿ, ತತ್ವಶಾಸ್ತ್ರದ ಭಾಗವಾಗಿ ಸೌಂದರ್ಯಶಾಸ್ತ್ರ ಬೆಳೆಯಿತು.

ಇದನ್ನು ಒಂದು ಹಂತದವರೆಗೆ ಆರೋಗ್ಯಕರ ಬೆಳವಣಿಗೆ ಎಂದು ಪರಿಗಣಿಸಬಹುದು. ಆದರೆ ಕಾಲಕ್ರಮೇಣ ಸೌಂದರ್ಯಪ್ರಜ್ಞೆ ಎನ್ನುವುದು ಮಿತಿಮೀರಿ, ಗೀಳಾಗಿ ಶ್ರೇಷ್ಠತೆಯ ವ್ಯಸನದಂತೆ ಸುಂದರವಾಗಿ ಕಾಣುವುದು ಎಲ್ಲದರಲ್ಲೂ ಸೌಂದರ್ಯವನ್ನು ಅರಸುವುದು ಒಂದು ವ್ಯಸನದಂತೆ, ಮದ್ದಿಲ್ಲದ ರೋಗದಂತೆ ನಮ್ಮ ಸಮಾಜವನ್ನು ಬಾಧಿಸುತ್ತಿದೆ. ಪ್ರಕೃತಿಯ ಸೌಂದರ್ಯವನ್ನು ಆರಾಧಿಸುತ್ತಿದ್ದ ಮನುಷ್ಯ ಇಂದು ತನ್ನ ಸುತ್ತಲಿನ ಪರಿಸರ ಎಂಬುದು ಹೀಗೇ ಇರಬೇಕೆಂದು ತಾನೇ ಸ್ವತಃ ವ್ಯಾಖ್ಯಾನಿಸಿ ಅದಕ್ಕೊಂದು ಮಾನದಂಡವನ್ನು ಅಳತೆಗೋಲನ್ನು ತಾನೇ ರಚಿಸಿ ಎಲ್ಲದರಲ್ಲಿಯೂ ತನ್ನಿಚ್ಛೆಗೆ ತಕ್ಕಂತೆ ಬದಲಾವಣೆಗಳನ್ನು ನಿಯಮಗಳನ್ನು ಮಾಡಿಕೊಳ್ಳುತ್ತಾ ಬಂದ. ಕಲೆಗಾಗಿ ಬದುಕೋ ಬದುಕಿಗಾಗಿ ಕಲೆಯೋ ಎಂಬ ಪ್ರಶ್ನೆಗೆ ಆತ ಇನ್ನೂ ಉತ್ತರವನ್ನು ಕಂಡುಕೊಂಡಂತಿಲ್ಲ. ಅಂತಿಮವಾಗಿ ತನ್ನ ದೈಹಿಕ ರಚನೆ ಹಾವಭಾವ ಅಂಗಾಂಗಗಳಲ್ಲಿಯೂ ಇದನ್ನೇ ನಿರೀಕ್ಷಿಸಿ ಸುಂದರವಾದ ಹೆಣ್ಣನ್ನು ಮದುವೆಯಾದರೆ ಹುಟ್ಟುವ ಮಕ್ಕಳೂ ಸುಂದರವಾಗಿರುತ್ತಾರೆ ಎಂಬ ನಂಬಿಕೆ ಬೇರೂರಿತು. ಸೌಂದರ್ಯದ ಬಗೆಗಿನ ಮಾನವ ಕುಲದ ಈ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡ ಆಧುನಿಕ ಮಾರುಕಟ್ಟೆ ಸೌಂದರ್ಯವನ್ನು ಮಾರುವ ಸರಕಾಗಿ ಮಾರ್ಪಡಿಸಿಕೊಂಡವು.

ಸೌಂದರ್ಯ ಸ್ಪರ್ಧೆಗಳನ್ನು ನಿμÉೀಧಿಸಬೇಕು ಎನ್ನುವ ವಾದ ಒಂದೆಡೆಯಾದರೆ ಮಹಿಳಾ ಸಬಲೀಕರಣಕ್ಕೆ ಅದೂ ಒಂದು ದಾರಿ ಎಂಬ ಮತ್ತೊಂದು ವಾದವೂ ಪ್ರಚಲಿತವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸೌಂದರ್ಯ ಪ್ರಸಾಧನಗಳ ಪ್ರಚಾರ ಮಾಡಲು ಅವುಗಳ ವ್ಯಾಪಾರವನ್ನು ಹೆಚ್ಚಿಸಲು ಬಹುಸಂಖ್ಯಾತ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಸೌಂದರ್ಯ ಸ್ಪರ್ಧೆಗಳು ಅತಿ ಪ್ರಭಾವಶಾಲಿ ಮಾಧ್ಯಮವಾಗಿದೆ. ಇನ್ನು ಈ ಸ್ಪರ್ಧೆಗಳಲ್ಲಿ ಯಾವ ದೇಶದವರು ಗೆಲ್ಲಬೇಕು ಯಾವ ದೇಶದವರು ಗೆಲ್ಲಬಾರದು ಎಂಬುದನ್ನು ಕೇವಲ ತೀರ್ಪುಗಾರರು ಸ್ಪರ್ಧಿಗಳ ಅಂದಚಂದದ ಆಧಾರದ ಮೇಲೆ ನಿರ್ಧರಿಸುವುದಿಲ್ಲ. ಗೆಲುವಿನ ಕಿರೀಟ ಯಾವ ದೇಶದ ಸ್ಪರ್ಧಿಯ ಮುಡಿಗೆ ಏರಬೇಕು ಎಂಬುದನ್ನು ತೀರ್ಮಾನಿಸುವುದರ ಹಿಂದೆ ರಾಜಕೀಯ ಹಿತಾಸಕ್ತಿಯೂ ಸೇರಿದಂತೆ ಅನೇಕ ಕಾಣದ ಕೈಗಳ ಕೈವಾಡವಿರುತ್ತದೆ. ಸ್ಪರ್ಧೆ ಯಾವ ದೇಶದಲ್ಲಿ ನಡೆಯಬೇಕು ಎನ್ನುವ ತೀರ್ಮಾನದ ಹಿಂದೆಯೂ ಈ ಕಾಣದ ಕೈಗಳು ಕೆಲಸ ಮಾಡುತ್ತಿರುತ್ತವೆ.

ಈ ಸೌಂದರ್ಯ ಸ್ಪರ್ಧೆಗಳನ್ನು ಏರ್ಪಡಿಸುವುದರ ಹಿಂದಿನ ಹುನ್ನಾರವೇನು? ನಿಜಕ್ಕೂ ನಮಗೆ ಈ ಸ್ಪರ್ಧೆಗಳ ಅಗತ್ಯವಿದೆಯೇ? ಇವುಗಳಿಂದ ಸಮಾಜಕ್ಕಾಗುವ ಮಹದುಪಕಾರವೇನು? ಮಹಿಳಾ ಸಬಲೀಕರಣದ ಹೆಸರಿನಲ್ಲಿ ನಡೆಯುವ ಈ ಸ್ಪರ್ಧೆಗಳು ಮಾಡುತ್ತಿರುವುದಾದರೂ ಏನನ್ನು? ಎಂಬ ಪ್ರಶ್ನೆಗಳು ಬಹುಕಾಲದಿಂದ ಕೇಳಿಬರುತ್ತಲೇ ಇದೆ.

ಈ ಸೌಂದರ್ಯ ಸ್ಪರ್ಧೆಗಳ ಹಿಂದಿನ ದೊಡ್ಡ ಶಕ್ತಿ ಎಂದರೆ ಸೌಂದರ್ಯವರ್ಧಕಗಳನ್ನು ಉತ್ಪಾದಿಸುವ ಕಂಪೆನಿಗಳು. ಆಧುನಿಕೋತ್ತರ ಸಂದರ್ಭದಲ್ಲಿ ಸೌಂದರ್ಯವರ್ಧಕ ಬ್ರಾಂಡ್‍ಗಳು ಸ್ತ್ರೀವಾದವನ್ನು ತಮ್ಮ ಮಾರ್ಕೆಟಿಂಗ್ ತಂತ್ರವಾಗಿ ಬಳಸುತ್ತಿವೆ. ಅಲ್ಲದೇ ಹೆಣ್ಣಿನ ಆತ್ಮವಿಶ್ವಾಸವನ್ನು ಆಕೆಯ ಸೌಂದರ್ಯದೊಂದಿಗೆ ತಳುಕು ಹಾಕಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸೌಂದರ್ಯವರ್ಧಕಗಳು ಸಹಾಯಕಾರಿ ಮತ್ತು ಅತ್ಯಗತ್ಯವೆಂದು ಬಿಂಬಿಸುವುದರಲ್ಲಿ ಸಫಲವಾಗಿವೆ.

ಹೆಣ್ಣಿನ ಸಾಮಥ್ರ್ಯವನ್ನು ಅಳೆಯಲು ದೈಹಿಕ ಬಲವನ್ನು ಮಾನದಂಡವಾಗಿಸಿ ಅವಳನ್ನು ಅಬಲೆ ಎನ್ನುತ್ತಿದ್ದ ಕಾಲವನ್ನು ದಾಟಿ ಶಿಕ್ಷಣ, ಉದ್ಯೋಗ, ಸಂಪಾದನೆಗಳ ಮೂಲಕ ಅಳೆಯುವಂತಾಗಿ ಈಗ ಮತ್ತೆ ಕೇವಲ ಸೌಂದರ್ಯವನ್ನೇ ಅಳತೆಗೋಲನ್ನಾಗಿ ಮಾಡಿಕೊಳ್ಳುವ ಯುಗಕ್ಕೆ ಕಾಲಿಡುತ್ತಿದ್ದೇವೆಯೇ ಎನಿಸುತ್ತದೆ.

ಕೋವಿಡ್‍ನಿಂದಾಗಿ ಲಾಕ್‍ಡೌನ್ ಕಾಲ ಆರಂಭವಾದ ಮೇಲೆ ಜನತೆ ಇನ್ನಷ್ಟು ಟಿಕ್‍ಟಾಕ್, ವೀಡಿಯೋ, ರೀಲ್ಸ್‍ಗಳನ್ನು ಮಾಡುವತ್ತ ಗಮನ ಹರಿಸಿದ್ದು ತಿಳಿದಿರುವಂತದ್ದೇ. ಇಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳ ವೀಡಿಯೋಗಳು ಕೇಂದ್ರೀಕೃತವಾಗಿದದ್ದು ಅಲಂಕಾರ ಮತ್ತು ಪ್ರಸಾಧನ ಸಾಮಗ್ರಿಗಳ ಪರಿಚಯ ಅವುಗಳ ಬಳಕೆಯ ಸುತ್ತಲೇ ಎನ್ನುವ ವಿಚಾರ ಆಘಾತಕಾರಿಯಾಗಿದೆ. ಇನ್ನು ಸೆಲ್ಫಿ ತೆಗೆದುಕೊಳ್ಳುವ ಹುಚ್ಚು

ಮಿತಿಮೀರಿದೆ.

ಮಹಿಳೆಯರಲ್ಲಿ ಅಭದ್ರತೆಯನ್ನು ಸೃಷ್ಟಿಸಿ ಅದನ್ನೇ ಹಣಗಳಿಕೆಯ ಮಾರ್ಗ ಮಾಡಿಕೊಳ್ಳುವ ಸೌಂದರ್ಯವರ್ಧಕ ಕಂಪೆನಿಗಳು ತಮ್ಮ ಬ್ರ್ಯಾಂಡಿಂಗ್‍ಅನ್ನು ಸೃಷ್ಟಿಸಿಕೊಳ್ಳುತ್ತಿರುವುದು ಈ ನಿಟ್ಟಿನಲ್ಲಿಯೇ. ಮೊದಲಿಗೆ ಚರ್ಮದ ಬಣ್ಣವನ್ನು ಬಿಳಿಯಾಗಿಸುವುದನ್ನೇ ಧ್ಯೇಯವಾಕ್ಯ ಮಾಡಿಕೊಂಡಿದ್ದ ಈ ಕಂಪನಿಗಳು ಅದಕ್ಕೆದುರಾದ ವಿರೋಧಗಳ ನಂತರ ಚರ್ಮದ ಬಣ್ಣವನ್ನು ಬದಿಗರಿಸಿ ‘ಮೃದು ತ್ವಚೆ’, ‘ಎಳೆಯ ತ್ವಚೆ’ಯ ಕಡೆಗೆ ಗಮನವನ್ನು ಕೇಂದ್ರೀಕರಿಸಿದವು.

ಹಿಂದಿನ ಕಾಲದ ನಂಬಿಕೆಗಳಾದ ಹಣೆಗೆ ಕುಂಕುಮವಿರಲೇ ಬೇಕು, ಕೈಗಳಿಗೆ ಬಳೆ ತೊಟ್ಟಿರಬೇಕು ಎಂಬವುಗಳ ಸ್ಥಾನದಲ್ಲಿ ಇಂದು ತುಟಿಗೆ ಲಿಪ್‍ಸ್ಟಿಕ್ ಹಚ್ಚಿರಲೇಬೇಕು, ಸೊಂಟದ ಸುತ್ತಳತೆ ಇμÉ್ಟೀ ಇರಬೇಕು, ಹೈಹೀಲ್ಡ್ ಚಪ್ಪಲಿಗಳನ್ನೇ ಧರಿಸಿರಬೇಕು ಎಂಬ ಹೊಸ ಸಂಪ್ರದಾಯಗಳನ್ನು ಹುಟ್ಟುಹಾಕಿವೆ. ಆದರೆ ಇವೆಲ್ಲಕ್ಕಿಂತ ಹೆಣ್ಣಿನ ಗುಣಸ್ವಭಾವ ಮುಂತಾದ ಆಂತರಿಕ ಸೌಂದರ್ಯವೇ ಅವಳ ನಿಜವಾದ ಅಸ್ಮಿತೆ ಎಂಬುದನ್ನು ಮರೆಮಾಚಲಾಗುತ್ತಿದೆ.

ಬ್ರ್ಯಾಂಡ್‍ಗಳು ಮಹಿಳೆಯರ ಅಭದ್ರತೆಗಳನ್ನು ಬೇಟೆಯಾಡುವ ಮೂಲಕ ಲಕ್ಷಾಂತರ ಕೋಟಿಗಳನ್ನು ಗಳಿಸಿವೆ ಮತ್ತು ಸೌಂದರ್ಯದ ಸಾಮಾಜಿಕ ಮಾನದಂಡಗಳನ್ನು ಪೂರೈಸಲು ಉತ್ಪನ್ನಗಳನ್ನು ಖರೀದಿಸುವ ಅಗತ್ಯವಿದೆ ಎಂದು ಅವರನ್ನು ನಂಬಿಸಲಾಗುತ್ತಿದೆ. ನೀವು ಹೇಗಿರುವಿರೋ ಹಾಗೆಯೇ ಸುಂದರವಾಗಿದ್ದೀರಿ, ಆದರೆ ನಮ್ಮ ಉತ್ಪನ್ನಗಳನ್ನು ಬಳಸಿ ನೀವು ಇನ್ನಷ್ಟು ಸುಂದರವಾಗಿ ಕಾಣಿಸುತ್ತೀರಿ ಎಂಬ ಭ್ರಮೆಯನ್ನು ಈಗ ಬಿತ್ತುತ್ತಿವೆ. “ಸಹಜ ಸೌಂದರ್ಯದ ಹೆಸರಿನಲ್ಲಿ ಮತ್ತು ಸಕಾರಾತ್ಮಕತೆಯ ಸೋಗಿನಲ್ಲಿ ಉತ್ಪನ್ನಗಳನ್ನು ಜಾಣ್ಮೆಯಿಂದ ಮಾರಾಟ ಮಾಡುತ್ತವೆ ಮತ್ತು ವಾಸ್ತವವಾಗಿ ಮಹಿಳೆಯ ಮೌಲ್ಯವು ಅವಳು ಇತರರಿಗೆ ತೋರುವಕಾಣುವ ರೀತಿಯ ಮೇಲೆ ಆಧರಿಸಿದೆ ಎಂಬ ಕಲ್ಪನೆಯನ್ನು ಬಲಪಡಿಸುತ್ತಿವೆ.

ಈ ಬ್ರ್ಯಾಂಡ್‍ಗಳು ಮಹಿಳಾ ಸಬಲೀಕರಣ, ಸ್ತ್ರೀವಾದ ಮುಂತಾದ ಮೌಲ್ಯಗಳನ್ನು ತಮ್ಮ ಜಾಹೀರಾತುಗಳಲ್ಲಿ ಬಳಸುತ್ತಿವೆ. ಸೌಂದರ್ಯದ ಬಗೆಗಿನ ಸಾಂಪ್ರದಾಯಿಕ ಮಾನದಂಡಗಳನ್ನು ನಿರ್ಲಕ್ಷಿಸುವ, ನಿರಾಕರಿಸುವ ಬದಲು ದೇಹದ ಬಗೆಗೆ ಸಕಾರಾತ್ಮಕತೆಯನ್ನು ಅಳವಡಿಸಿಕೊಳ್ಳಬೇಕು ಎನ್ನುವ ಹೊಸ ವಾದವನ್ನು ಮುಂದಿಡುತ್ತಿವೆ. ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಇದು ಈ ಕಂಪನಿಗಳ ಒಂದು ಬುದ್ಧಿವಂತ ಮಾರ್ಗವಾಗಿದೆ. ನಿಜವಾಗಿಯೂ ಇವುಗಳ ಜಾಹೀರಾತುಗಳಲ್ಲಿರುವುದು ಏನೆಂದು ಗುರುತಿಸಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಮಹಿಳೆಯರಿಂದ ಹಣ ಕೀಳುವುದೇ ಇವರ ಮುಖ್ಯ ಉದ್ದೇಶವಾಗಿದೆಯೇ ಹೊರತು ಅದರಲ್ಲಿ ಸ್ತ್ರೀವಾದ ಎಂಬುದು ಏನೂ ಇಲ್ಲ. ಮಹಿಳಾ ಸಬಲೀಕರಣವೂ ಇಲ್ಲ. ಇಂತಹ ಕಂಪೆನಿಗಳು, ಅವುಗಳು ನಡೆಸುವ ಸೌಂದರ್ಯ ಸ್ಪರ್ಧೆಗಳ ಔಚಿತ್ಯವಾದರೂ ಏನು?

ಕೇವಲ ಅನಾಥಾಶ್ರಮಗಳಿಗೆ ಭೇಟಿ ನೀಡುವುದು ಅಥವಾ ತಮಗೆ ಬಂದ ಲಾಭದಲ್ಲಿ ವಿದ್ಯಾರ್ಥಿವೇತನ, ಸಹಾಯಧನಗಳನ್ನು ಒದಗಿಸುವುದು ಈ ಸ್ಪರ್ಧೆಗಳನ್ನಾಗಲೀ ಆಯೋಜಕರನ್ನಾಗಲೀ ಸಮಾಜ ಸೇವಕರನ್ನಾಗಿಸುವುದಿಲ್ಲ. ದಾನಧರ್ಮ, ನಿಸ್ವಾರ್ಥ ಸೇವೆ, ಲೋಕಕಲ್ಯಾಣ ಕಾರ್ಯಗಳನ್ನು ಮಾಡುವುದಾಗಿ ಸ್ಪರ್ಧಿಗಳು ಪ್ರಶ್ನೋತ್ತರ ಸುತ್ತಿನಲ್ಲಿ ಹಾಗೂ ಗೆಲುವಿನ ಸಮಯದಲ್ಲಿ ಹೇಳಿಕೆ ಕೊಟ್ಟರೂ ಸಹ ಎಷ್ಟು ಜನ ತಮ್ಮ ಮಾತಿಗೆ ಬದ್ಧರಾಗಿದ್ದಾರೆ, ಹೇಳಿದ್ದನ್ನು ಪಾಲಿಸುತ್ತಿದ್ದಾರೆ ಎಂಬುದನ್ನು ಕಳೆದ ವರ್ಷಗಳಲ್ಲಿ ಕಾಣುತ್ತಾ ಬಂದಿದ್ದೇವೆ. ಪರಿಸರ ಸಂರಕ್ಷಣೆಯ ಕುರಿತು ಮಾತನಾಡುವ ಸ್ಪರ್ಧಿಗಳು ಮತ್ತು ಆಯೋಜಕರು ತಮ್ಮನ್ನು ಪ್ರಾಯೋಜಿಸುತ್ತಿರುವ ಕಂಪೆನಿಗಳು ಅವುಗಳ ಉತ್ಪನ್ನಗಳು ಬಳಸುವ ವಿಷಕಾರಿ ರಾಸಾಯನಿಕಗಳು ಅವುಗಳಿಂದ ಮನುಷ್ಯರ ಮೇಲೆ ಪ್ರಕೃತಿಯ ಮೇಲೆ ಉಂಟಾಗುತ್ತಿರುವ ಹಾನಿಯ ಬಗ್ಗೆ ಮೌನವಾಗಿರುವುದು ಬಹುದೊಡ್ಡ ವ್ಯಂಗ್ಯ.

ಇಂದು ಮಹಿಳಾ ಸಬಲೀಕರಣ ಎನ್ನುವುದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯದ ಸರಕಾಗಿದೆ. ಈ ಕಂಪೆನಿಗಳು ಹೆಣ್ಣನ್ನು ಕೂಡ, ತನಗೆ ಬೇಕಾದ ಉತ್ಪನ್ನಗಳನ್ನು ರೂಪಿಸಿ ಮಾರುಕಟ್ಟೆಗೆ ಬಿಡುವಂತೆ ಹೆಣ್ಣಿನ ಮಾದರಿಯೊಂದನ್ನು ಈ ಸೌಂದರ್ಯ ಸ್ಪರ್ಧೆಗಳ ಮೂಲಕ ರೂಪಿಸುತ್ತಿವೆ. μÉ್ಟೀ ಅಲ್ಲ, ಆ ಮಾದರಿಗೆ ಸಾಮಾಜಿಕ ಮನ್ನಣೆಯನ್ನೂ ದೊರಕಿಸಿಕೊಳ್ಳಲು ಇನ್ನಿಲ್ಲದ ಸಾಹಸಗಳನ್ನು ಮಾಡುತ್ತಿವೆ. ಯಾವ ಮಹಿಳೆಯಾದರೂ ಆ ಮಾದರಿಯ ಹೆಣ್ಣಾಗಬಹುದು. ಮತ್ತು ಆಗಲೇಬೇಕು ಎಂಬ ಒತ್ತಡವನ್ನು ಹೇರುತ್ತಿವೆ. ಹಾಗೂ ಆ ಮಾದರಿಯ ಮಹಿಳೆಯಾಗಲು ತಮ್ಮ ಉತ್ಪನ್ನಗಳು ಸಹಕಾರಿ ಎಂಬುದನ್ನು ಸಾರಿಹೇಳುವುದೇ ಅವರ ಮುಖ್ಯಗುರಿ. ಸೌಂದರ್ಯ ಸ್ಪರ್ಧೆಗಳು ಜಾಹೀರಾತುಗಳು ಮುಂತಾದವು ಅವರ ಗಮ್ಯವನ್ನು ತಲುಪಲು ಮಾಡಿಕೊಂಡ ದಾರಿಗಳಾಗಿವೆ ಅμÉ್ಟೀ.

*ಲೇಖಕರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು.

Leave a Reply

Your email address will not be published.